ಅನಿಸಿಕೆ: ಒಕ್ಕೂಟ ಕಾಯ್ದೆಗಳನ್ನು ರಾಜ್ಯಗಳು ಧಿಕ್ಕರಿಸಬಹುದೇ?

Parliment
Published on
‘ಸಿಎಎ ಮತ್ತು ಎನ್​ಆರ್​ಸಿಯನ್ನು ನಾವು ಜಾರಿ ಮಾಡುವುದಿಲ್ಲ’ ಎಂದು ಬಿಜೆಪಿಯೇತರ 11 ರಾಜ್ಯಗಳು ಹೋರಾಟ ಮಾಡುತ್ತಿರುವ ಸಂದರ್ಭದಲ್ಲಿಯೇ ಮತ್ತೊಂದು ಹೆಜ್ಜೆ ಮುಂದೆ ಹೋಗಿ ಕೇರಳ ಸರ್ಕಾರ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಪ್ರಶ್ನಿಸಿ ಸವೋಚ್ಚ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದೆ. ಛತ್ತೀಸ್​ಗಢ ಮತ್ತು ರಾಜಸ್ಥಾನ ಸರ್ಕಾರಗಳು ಇದೇ ಹಾದಿ ಹಿಡಿದಿವೆ.

ಸಂವಿಧಾನ ಕಲಂ 131ರ ಪ್ರಕಾರ ರಾಜ್ಯ-ರಾಜ್ಯಗಳ, ಕೇಂದ್ರ-ರಾಜ್ಯಗಳ ನಡುವೆ ಉದ್ಭವಿಸುವ ತಂಟೆ ತಕರಾರುಗಳನ್ನು ಬಗೆಹರಿಸುವ ಅಧಿಕಾರ ಸವೋಚ್ಚ ನ್ಯಾಯಾಲಯಕ್ಕೆ ಇದೆ. ತನ್ನ ‘ಕಾನೂನುಬದ್ಧ ಹಕ್ಕಿನ’ ಉಲ್ಲಂಘನೆಯಾಗಿದೆ ಎಂಬುದನ್ನು ಆ ರಾಜ್ಯ ಸಾಬೀತುಪಡಿಸಬೇಕಾಗುತ್ತದೆ. ರಾಜ್ಯ ಪಟ್ಟಿಯಲ್ಲಿ ಇರುವ ವಿಷಯಗಳ ಕುರಿತು ಕಾನೂನು ಮಾಡುವ (ತುರ್ತಪರಿಸ್ಥಿತಿ ಹೊರತುಪಡಿಸಿ) ಅಧಿಕಾರ ರಾಜ್ಯ ಸರ್ಕಾರಕ್ಕೆ ಇರುತ್ತದೆ.

ರಾಜ್ಯ ಸರ್ಕಾರ ಮಾಡಿದ ಕಾಯ್ದೆ ಉಲ್ಲಂಘನೆಯಾದರೆ, ರಾಜ್ಯ ಪಟ್ಟಿಯ ವಿಷಯಗಳಲ್ಲಿ ರಾಜ್ಯ-ರಾಜ್ಯ ಮತ್ತು ಕೇಂದ್ರ-ರಾಜ್ಯಗಳ ನಡುವೆ ಹಿತಾಸಕ್ತಿ ಸಂಘರ್ಷ ಏರ್ಪಟ್ಟರೆ, ನೆಲ, ಜಲ ಹಂಚಿಕೆ ವ್ಯಾಪಾರ ವಹಿವಾಟು ಸ್ವಾತಂತ್ರ್ಯಕ್ಕೆ ಧಕ್ಕೆಯಾದರೆ ರಾಜ್ಯಗಳು ನ್ಯಾಯಾಲಯದ ಮೆಟ್ಟಿಲು ಹತ್ತಬಹುದಾಗಿದೆ.

ಈಗ ವಿವಾದದ ಕಿಡಿ ಹೊತ್ತಿಸಿರುವ ಪೌರತ್ವ ತಿದ್ದುಪಡಿ ವಿಷಯವು ಒಕ್ಕೂಟ ಪಟ್ಟಿಯ ವಿಷಯವಾಗಿದೆ. ಈ ವಿಷಯದ ಕುರಿತು ಕಾಯ್ದೆ ಮಾಡುವ ಅಧಿಕಾರ ಒಕ್ಕೂಟ ಸರ್ಕಾರಕ್ಕಿದೆ. ಸಂವಿಧಾನ ಕಲಂ 246 ಏಳನೇ ಅನುಸೂಚಿಯಲ್ಲಿ ಯಾವ ಯಾವ ವಿಷಯಗಳ ಬಗ್ಗೆ ಒಕ್ಕೂಟ ಮತ್ತು ರಾಜ್ಯಗಳು ಕಾಯ್ದೆ ಮಾಡಬಹುದು ಎಂಬುದನ್ನು ಹೇಳಲಾಗಿದೆ. ಪೌರತ್ವ ಎಂಬುದು ರಾಷ್ಟ್ರೀಯ ಹಿತಾಸಕ್ತಿಯ ವಿಷಯವಾಗಿದ್ದು ಅಂತಹ ವಿಷಯದಲ್ಲಿ ಸಂಸತ್ತೇ ಅಂತಿಮ ಅಧಿಕಾರವನ್ನು ಹೊಂದಿದೆ. ಇಲ್ಲಿ ಕೇರಳ ರಾಜ್ಯ ಯಾವ ರೀತಿಯ ತನ್ನ ಹಕ್ಕುಗಳು ಈ ಕಾಯ್ದೆಯಿಂದ ಉಲ್ಲಂಘನೆಯಾಗುತ್ತವೆ ಎಂಬುದನ್ನು ಮನಗಾಣಿಸಬೇಕಾಗಿದೆ.

ಸಂಸತ್ತಿನ ಭಾಗವಾಗಿರುವ ‘ರಾಜ್ಯಗಳು ಸಂಸತ್ತು ಮಾಡಿದ ಕಾಯ್ದೆಯನ್ನು ಅನುಷ್ಠಾನಕ್ಕೆ ತರಬೇಕು’ ಎಂದು ಸಂವಿಧಾನ ಕಲಂ 256 ಹೇಳುತ್ತದೆ. ‘ಒಕ್ಕೂಟದ ಕಾಯ್ದೆಗಳ ಜಾರಿಗೆ ರಾಜ್ಯ ಸರ್ಕಾರ ಅಡಚಣೆ ಉಂಟು ಮಾಡಬಾರದು’ ಎಂದು ಕಲಂ 257 ಹೇಳುತ್ತದೆ. ‘ಒಕ್ಕೂಟದ ಕಾಯ್ದೆಗಳನ್ನು ರಾಜ್ಯಗಳು ಜಾರಿ ಮಾಡುತ್ತಿಲ್ಲವೆಂದು ಅಸಹಾಯಕತೆಯಿಂದ ಕೇಂದ್ರ ಸರ್ಕಾರ ಇರುವಂತಿಲ್ಲ’ ಎಂದು ಸ್ವರಾಜ್ ಅಭಿಯಾನ್(ವಿ)/ ಯೂನಿಯನ್ ಆಫ್ ಇಂಡಿಯಾ ಪ್ರಕರಣ, 2017ರಲ್ಲಿ ಸುಪ್ರೀಂ ಕೋರ್ಟ್ ಹೇಳಿದೆ. ‘ಹಣಕಾಸಿನ ಕೊರತೆ ಅಥವಾ ಮತ್ತಿತರ ಕಾರಣಗಳನ್ನು ನೀಡಿ ರಾಜ್ಯ ಸರ್ಕಾರಗಳು ಸಂಸತ್ತು ಪಾಸುಮಾಡಿದ ಶಾಸನಗಳನ್ನು ಜಾರಿಗೆ ತರದೆ ಇರುವಂತಿಲ್ಲ’ ಎಂದು 2016ರಲ್ಲಿ ಸೆಂಟರ್ ಫಾರ್ ಪಬ್ಲಿಕ್ ಇಂಟ್ರಸ್ಟ್ ಲಿಟಿಗೇಶನ್ ವಿರುದ್ಧ ಒಕ್ಕೂಟ ಸರ್ಕಾರ ಪ್ರಕರಣದಲ್ಲಿ ತೀರ್ಪು ನೀಡಿದೆ.

ಈ ವಿಷಯ ಕುರಿತು ಹಲವಾರು ತೀರ್ಪಗಳಲ್ಲಿ ಸಂಸತ್ತಿನ ಪರಮಾಧಿಕಾರವನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿದೆ. ಒಕ್ಕೂಟ ನಿರ್ದೇಶನಗಳನ್ನು ಧಿಕ್ಕರಿಸಿ ರಾಜ್ಯಗಳು ನಡೆದುಕೊಂಡರೆ ತೀವ್ರವಾದ ಪರಿಣಾಮವನ್ನು ಎದುರಿಸಬೇಕಾಗುತ್ತದೆ ಎಂದು ಸುಪ್ರೀಂ ಕೋರ್ಟ್ 1976ರಲ್ಲಿ ಎಡಿಷನಲ್ ಡಿಸ್ಟ್ರಿಕ್ಟ್ ಮ್ಯಾಜಿಸ್ಟ್ರೇಟ್ ಜಬಲ್​ಪುರ ಮತ್ತು ಶಿವಕಾಂತ್ ಶುಕ್ಲಾ ಪ್ರಕರಣದಲ್ಲಿ ತೀರ್ಪು ನೀಡಿದೆ. ರಾಜ್ಯಾಂಗದ ನಿಯಮಗಳಿಗೆ ವಿರುದ್ಧವಾಗಿ ವರ್ತಿಸಿದ ಕಾರಣಕ್ಕೆ ಅಂತಹ ರಾಜ್ಯ ಸರ್ಕಾರವನ್ನು ವಜಾ ಮಾಡಬಹುದಾಗಿದೆ. ದೇಶದ ಯಾವುದೇ ಭಾಗದಲ್ಲಿ ದಂಗೆ, ಶಾಂತಿಭಂಗ, ಹಿಂಸೆ, ಆಸ್ತಿನಾಶ ಮತ್ತು ಕಾನೂನಾತ್ಮಕ ಆಡಳಿತಕ್ಕೆ ಧಕ್ಕೆ ತಂದರೆ ಒಕ್ಕೂಟವು ಬಿಎಸ್​ಎಫ್, ಸಿಆರ್​ಪಿಎಫ್ ಪಡೆಗಳನ್ನು ಬಳಸಿ ಶಾಂತಿ ಕಾಪಾಡುವ ಅಧಿಕಾರವನ್ನು ಹೊಂದಿದೆ.

ಒಂದು ರಾಜ್ಯ ಸರ್ಕಾರ ರಾಜಕೀಯ ಹಿತಾಸಕ್ತಿಯಿಂದ ಒಕ್ಕೂಟ ಸರ್ಕಾರದೊಂದಿಗೆ ಸಂಘರ್ಷಕ್ಕಿಳಿದರೆ ಅದು ಹಲವಾರು ತೊಂದರೆಗಳನ್ನು ಅನುಭವಿಸಬೇಕಾಗುತ್ತದೆ. ಒಕ್ಕೂಟ ಸರ್ಕಾರದ ಪ್ರತಿನಿಧಿಯಾದ ರಾಜ್ಯಪಾಲರು ರಾಜ್ಯದ ಮುಖ್ಯಸ್ಥರಾಗಿರುತ್ತಾರೆ. ರಾಜ್ಯ ಶಾಸಕಾಂಗ ಪಾಸು ಮಾಡಿದ ಮಸೂದೆಗಳಿಗೆ ರಾಜ್ಯಪಾಲರ ಸಮ್ಮತಿ ಬೇಕಾಗುತ್ತದೆ.

ಅಗತ್ಯವೆನ್ನಿಸಿದರೆ ಅಂತಹ ಮಸೂದೆಗಳನ್ನು ರಾಷ್ಟ್ರಪತಿಗಳ ಸಮ್ಮತಿಗೆ(ಕಲಂ 201ರ ಪ್ರಕಾರ) ಕಳುಹಿಸಿಕೊಡಬಹುದು. ರಾಷ್ಟ್ರಪತಿ ಈ ಮಸೂದೆಗೆ ಸಮ್ಮತಿ ಕೊಡಲೇಬೇಕೆಂದೇನಿಲ್ಲ. ಹೀಗಾಗಿ ಒಕ್ಕೂಟ ಸರ್ಕಾರದ ಇಚ್ಛೆಯಂತೆ ಆ ಮಸೂದೆ ‘ಡೆಡ್ಡ್ ಲೆಟರ್’ ಆಗಬಹುದು.

ಒಕ್ಕೂಟ ಸರ್ಕಾರ ಹಲವಾರು ತೆರಿಗೆಗಳನ್ನು ವಿಧಿಸಿ, ವಸೂಲಿ ಮಾಡಿ ರಾಜ್ಯಗಳೊಂದಿಗೆ ಹಂಚಿಕೊಳ್ಳುತ್ತದೆ. ಸಾಮಾನ್ಯವಾಗಿ ಒಟ್ಟು ಸಂಗ್ರಹದಲ್ಲಿ ಶೇಕಡ 33ರಷ್ಟನ್ನು ರಾಜ್ಯಗಳಿಗೆ ನೀಡುತ್ತದೆ. ಶೇ.67ರಷ್ಟು ರಾಜಸ್ವವನ್ನು ತಾನೇ ಇಟ್ಟುಕೊಳ್ಳುತ್ತದೆ. ರಾಜ್ಯಗಳಿಗೆ ಶೇ.30ರಷ್ಟು ಅನುದಾನವನ್ನು ಮತ್ತು ಶೇ.70ರಷ್ಟು ಸಾಲವನ್ನು ನೀಡುತ್ತದೆ. ರಾಜ್ಯಗಳು ಎದುರಿಸುವ ನೆರೆ, ಬರ, ಪ್ರಕೃತಿ ವಿಕೋಪ ಮುಂತಾದ ಸಂದರ್ಭದಲ್ಲಿ ಒಕ್ಕೂಟವು ರಾಜ್ಯಗಳಿಗೆ ಅನುದಾನ ನೀಡುತ್ತದೆ.

ಒಂದು ವೇಳೆ ರಾಜ್ಯವು ಒಕ್ಕೂಟದೊಂದಿಗೆ ಸಂಘರ್ಷಕ್ಕೆ ಇಳಿದರೆ ಅನುದಾನ ಸಿಗದೆ ಹಾನಿಯನ್ನು ಅನುಭವಿಸಬೇಕಾಗುತ್ತದೆ. ರಾಜ್ಯಗಳು ವಿದೇಶಗಳೊಂದಿಗೆ ವ್ಯಾಪಾರ ವಾಣಿಜ್ಯ ವ್ಯವಹಾರ ಮಾಡಬಹುದು. ಆದರೆ ಅಂತಹ ವ್ಯಾಪಾರ ಒಪ್ಪಂದಗಳು ಕೇಂದ್ರ ಸರ್ಕಾರದ ನೀತಿಗಳಿಗೆ ತದ್ವಿರುದ್ಧವಾಗಿರಬಾರದು.

ಮೇಲಿನ ಕೆಲವೇ ಅಂಶಗಳನ್ನು ಗಮನಿಸಿದರೂ ಸಾಕು; ರಾಜ್ಯಗಳು ಒಕ್ಕೂಟ ವ್ಯವಸ್ಥೆಯ ಶಾಸನಗಳನ್ನು ಧಿಕ್ಕರಿಸಿ ಆಳ್ವಿಕೆ ನಡೆಸಲಾಗದು ಎಂದು.

ಕೇಂದ್ರೀಕರಣದ ನೀತಿಯ ವಿರುದ್ಧ ತಮಿಳುನಾಡುವಿನ ಡಿಎಮ್ೆ ಸರ್ಕಾರ 1969ರಲ್ಲಿ ರಾಜಮನ್ನಾರ್ ಸಮಿತಿಯನ್ನು ನೇಮಿಸಿ, ಅದರ ವರದಿ ಪ್ರಕಾರ ಹೆಚ್ಚು ಸ್ವಾಯತ್ತ ಅಧಿಕಾರಗಳು ಬೇಕು ಎಂದು ಕೇಳಿತು. 1977ರಲ್ಲಿ ಪಶ್ಚಿಮ ಬಂಗಾಳದ ಜ್ಯೋತಿ ಬಸು ಸರ್ಕಾರವೂ ಒಂದು ಕೈಪಿಡಿಯನ್ನು ಬಿಡುಗಡೆ ಮಾಡಿ ತನಗೆ ‘ರೆಸಿಡ್ಯುಯರಿ ಅಧಿಕಾರ’ ಬೇಕು ಎಂದು ಒತ್ತಾಯಿಸಿತು. ಒಕ್ಕೂಟ ಮತ್ತು ರಾಜ್ಯಗಳ ನಡುವೆ ಅಧಿಕಾರ ಹಂಚಿಕೆ ವಿಷಯ ಕುರಿತು ವರದಿ ನೀಡಲು ರಾಜ್ಯ ಪುನರಚನೆ ಸಮಿತಿ, ಧರ್, ಜೆ.ವ್ಹಿ.ಪಿ., ಸರ್ಕಾರಿಯಾ ಕಮಿಷನ್ ಹೀಗೆ ಹಲವು ಸಮಿತಿಗಳು ತಮ್ಮ ವರದಿಯಲ್ಲಿ ಪ್ರಬಲ ಒಕ್ಕೂಟ ವ್ಯವಸ್ಥೆಯನ್ನು ಪ್ರತಿಪಾದಿಸಿವೆ.

ಪಶ್ಚಿಮ ಬಂಗಾಳ ಮತ್ತು ಯುನಿಯನ್ ಆಫ್ ಇಂಡಿಯಾ(1963) ಪ್ರಕರಣ ಸೇರಿ ಹಲವಾರು ಸಂದರ್ಭಗಳಲ್ಲಿ ಸುಪ್ರೀಂ ಕೋರ್ಟ್, ‘ಒಕ್ಕೂಟವೇ ಸಾರ್ವಭೌಮ’ ಎಂದು ತೀರ್ಪು ನೀಡಿದೆ. ಅದೇನೆ ಇದ್ದರೂ, ರಾಜ್ಯಗಳು ಒಕ್ಕೂಟದ ಅಂಗಗಳು. ಅವು ಬಲಿಷ್ಠವಾಗಿದ್ದಷ್ಟು ಒಕ್ಕೂಟ ಪ್ರಬಲವಾಗಿರುತ್ತದೆ ಎಂಬ ಕೋಆಪ್ರೇಟಿವ್ ಫೆಡರಲಿಸಂನ ತತ್ತ್ವವನ್ನು ಎಲ್ಲರೂ ಪಾಲಿಸಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net