

ಇಂದಿನ ಕಾಸರಗೋಡು ಜಿಲ್ಲೆಯ ಕುದ್ಮಲ್ ಎಂಬಲ್ಲಿ ದೇವಪ್ಪಯ್ಯ ಎಂಬ ಗುಮಾಸ್ತ ಮತ್ತು ಗೌರಿ ದಂಪತಿಯ ಮಗನಾಗಿ ಜನಿಸಿದ ರಂಗರಾವ್ ಮುಂದೆ ಅಧ್ಯಾಪಕನಾಗಿ ತಮಗಿಂತಲೂ ಕೆಳಹಂತದಲ್ಲಿ ಬದುಕುವ ಕೆಳಜಾತಿಯ ಬಡವರು ಮತ್ತು ಅಸ್ಪಶ್ಯ ದಲಿತ ವರ್ಗವನ್ನು ತಲುಪಿ ಅವರ ಬದುಕಿಗೆ ಸಾಮಾಜಿಕ ನ್ಯಾಯ, ಬಲ ಕೊಡುತ್ತಾರೆ ಎಂದು ನಂಬುವುದೇ ಅಂದಿನ ಕಾಲದಲ್ಲಿ ಕಷ್ಟವಾಗಿತ್ತು. 1859ರ ಜೂನ್ 29 ರಂದು ಜನಿಸಿದ ರಂಗರಾವ್, ಶಿಕ್ಷಕ ವೃತ್ತಿಯಿಂದ ವಕೀಲ ವೃತ್ತಿ ಆಯ್ದುಕೊಂಡವರು. ಬಡವರ ವಕೀಲರೆಂಬ ಖ್ಯಾತಿಯನ್ನು ಪಡೆದುಕೊಂಡವರು. ದೀನದಲಿತರಿಗಾಗುವ ಅನ್ಯಾಯ, ವಂಚನೆಯ ವಿರುದ್ಧ ಉಚಿತವಾದ ವಕಾಲತ್ತು ವಹಿಸಿದ್ದು ಅಂದಿನ ಆಂಗ್ಲ ನ್ಯಾಯಾಧೀಶರನ್ನೇ ಆಕರ್ಷಿಸಿತ್ತಂತೆ. ರಂಗರಾವ್ ಹೋರಾಟದ ಫಲವಾಗಿ ಆಂಗ್ಲ ಸರ್ಕಾರವು ಕೆಳಜಾತಿಯ ಬಡವರು ಬದುಕುತ್ತಿರುವ ಪ್ರದೇಶಗಳಲ್ಲಿ ಶಾಲೆಗಳನ್ನು ತೆರೆಯಿತು. ಸಾರ್ವಜನಿಕ ಬಾವಿಗಳನ್ನು ತೋಡಿಸಿತು.
ರಂಗರಾವ್ ಹೋರಾಟ ಕೆಲವೊಮ್ಮೆ ನ್ಯಾಯಾಂಗಕ್ಕೂ ಇರುಸುಮುರುಸು ಉಂಟು ಮಾಡಿತ್ತು. ಮಂಗಳೂರಿನ ನಂದಿಗುಡ್ಡೆ ಮಟ್ಟಿಕಲ್ ಎಂಬಲ್ಲಿ ದಲಿತರಿಗಾಗಿ ತೆರೆದ ಶಾಲೆಯಲ್ಲಿ ಬೆಂದೂರು ಬಾಬು ಎಂಬಾತ 4ನೇ ತರಗತಿಯವರೆಗೂ ಕಲಿತಿದ್ದ. ಆತ ಜಿಲ್ಲಾ ನ್ಯಾಯಾಲಯದಲ್ಲಿ ಪೇದೆ ಕೆಲಸಕ್ಕೆ ಅರ್ಜಿ ಹಾಕಿದ್ದ. ಬ್ರಿಟಿಷ್ ನ್ಯಾಯಮೂರ್ತಿಗಳು ಪೇದೆ ಕೆಲಸಕ್ಕೆ ನೇಮಕ ಮಾಡಿಕೊಂಡರು. ವಿಷಯ ತಿಳಿದ ಮೇಲ್ಜಾತಿಯವರು ಪ್ರತಿಭಟಿಸಿ, ಕಲಾಪ ಬಹಿಷ್ಕರಿಸಿದರು. ಸ್ವತಃ ನ್ಯಾಯಾಧೀಶರಿಗೆ ಕೊಲೆ ಬೆದರಿಕೆ ಬಂತಂತೆ. ವಿವಾದ ಪರಾ ಕಾಷ್ಠೆ ತಲುಪಿ ಆಂಗ್ಲ ಸರ್ಕಾರವು ನ್ಯಾಯಾಧೀಶರ ವರ್ಗಾವಣೆಯನ್ನೂ ಮಾಡಿತ್ತು.
ಅಸ್ಪಶ್ಯನೊಬ್ಬನಿಗೆ ಪೇದೆ ಕೆಲಸ ಕೊಟ್ಟ ಕಾರಣಕ್ಕೆ ವರ್ಗವಾಗಿ ಹೋದ ಬ್ರಿಟಿಷ್ ನ್ಯಾಯಮೂರ್ತಿಗಳು ರಂಗರಾವ್ ಹಾಗೂ ಬಾಬು ಅವರನ್ನು ತಮ್ಮ ಕಚೇರಿಗೆ ಕರೆಸಿ, ‘ನಿಮ್ಮ ಬಾಬು ಕೋರ್ಟ್ನಲ್ಲಿ ಪೇದೆಯಾಗಿ ಮುಂದುವರಿಸಲು ಸುತ್ತಲ ಸಮಾಜ ಬಿಡುತ್ತಿಲ್ಲ. ಬಾಬು ನೆಮ್ಮದಿಯಿಂದ ಬದುಕಬೇಕೆಂಬ ಕಾರಣಕ್ಕೆ ಈ ನೇಮಕ ರದ್ದುಪಡಿಸುತ್ತಿದ್ದೇನೆ. ಪೇದೆ ಕೆಲಸ ಸಿಗುವುದರಿಂದ ದಲಿತರ ಉದ್ಧಾರವಾಗುತ್ತದೆ ಎಂಬ ಭ್ರಮೆ ಬಿಡಿ. ಬದಲಾಗಿ ಸಮಾಜದ ಮುಖ್ಯವಾಹಿನಿಗೆ ದಲಿತರನ್ನು ತರಲು, ಅವರಿಗೆ ಉನ್ನತ ಶಿಕ್ಷಣ ಕೊಡಲು ಏನಾದರೂ ಮಾಡಿ’ ಎಂದು ಹೇಳಿದರಂತೆ. ಬಾಬು ನೇಮಕಕ್ಕೆ ಮೇಲ್ಜಾತಿಯವರ ವಿರೋಧದಿಂದ ವ್ಯಾಕುಲತೆಗೆ ಒಳಗಾದ ರಂಗರಾವ್ ಅವರಿಗೆ ನ್ಯಾಯಾಧೀಶರ ನೋವಿನ ನುಡಿ ಹೃದಯಕ್ಕೆ ತಟ್ಟಿತು. ನಂತರ ವಕೀಲ ವೃತ್ತಿಯನ್ನು ತ್ಯಜಿಸಿ ದಲಿತರ ಜೀವನ ಶೈಲಿಯಲ್ಲಿ ಅನಾವರಣಗೊಂಡ ಮೌಢ್ಯಾಚರಣೆ, ಅಂಧಾನುಕರಣೆ, ಕುರುಡು ನಂಬಿಕೆಗಳನ್ನು ಬದಲಿಸಲು ಬದುಕು ಮುಡಿಪಾಗಿಟ್ಟರು. ಅಸ್ಪಶ್ಯರನ್ನು ಮೇಲೆತ್ತಲು ಶಿಕ್ಷಣ ಒಂದೇ ಪರಿಹಾರ ಎಂದು ಅರಿತುಕೊಂಡ ರಂಗರಾವ್ ಮತ್ತು ಅವರ ತಂಡ 1892ರಲ್ಲಿ ಅಂದರೆ ತಮ್ಮ 33ನೇ ವಯಸ್ಸಿನಲ್ಲಿ ಊರ್ವ ಚಿಲಿಂಬೆಯಲ್ಲಿ ದಲಿತರ ಮಕ್ಕಳಿಗೆ ಶಾಲೆ ತೆರೆಯಿತು. ಇದನ್ನು ಸಹಿಸದ ಜನಾಂಗದವರು ಮಕ್ಕಳಿಗೆ ಕಿರುಕುಳ ಕೊಟ್ಟರು. ಅನಿವಾರ್ಯವಾಗಿ ರಂಗರಾವ್ ಆ ಶಾಲೆಯನ್ನೇ ಮುಚ್ಚಿದರು. ಪುನಃ ಕಂಕನಾಡಿ ಬೋಳೂರಿನಲ್ಲಿ ದಲಿತರ ಮತ್ತು ಅಸ್ಪಶ್ಯರ ಶಾಲೆ ತೆರೆಯಲು ನಿರ್ಧಾರ ಮಾಡಿದರು. ಅಲ್ಲಿಯೂ ಅಸಹಕಾರ ಕಾಲಿಟ್ಟಿತ್ತು. ಇಂತಹ ಸಂದರ್ಭದಲ್ಲಿ ತಮ್ಮಂತೆ ಯೋಚಿಸುವ ಶಿಕ್ಷಕರನ್ನು ನೇಮಿಸಿಕೊಂಡರು.
ಕರಾವಳಿ ಜಿಲ್ಲೆಯ ಮೂಲ ನಿವಾಸಿಗಳಾದ ಕೊರಗರು ಶೇಡಿಗುಡ್ಡೆಯಲ್ಲೇ ಬದುಕು ಕಟ್ಟಿಕೊಳ್ಳಲು ನಿವೇಶನ ಹಂಚಿಬಿಟ್ಟರು. ಅದೇ ಸ್ಥಳದಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದ ಹೆಣ್ಣುಮಕ್ಕಳಿಗಾಗಿ ವಸತಿ ನಿಲಯ ಸ್ಥಾಪನೆ ಮಾಡಿದರು. ತಾವು ಮೊದಲು ಸ್ಥಾಪಿಸಿದ ಶಾಲೆಗಳಲ್ಲಿ ನಾಲ್ಕನೇ ತರಗತಿ ಅಭ್ಯಾಸ ಮಾಡಿದವರನ್ನು ಅಧ್ಯಾಪಕರಾಗಿ ನೇಮಿಸಿಕೊಂಡರು. ಬಾಬುಗುಡ್ಡೆ ದೊಡ್ಡಲಕಾಡು, ಉಳ್ಳಾಲ, ಉಡುಪಿಯ ಬನ್ನಂಜೆಯಲ್ಲೂ ದಲಿತರಿಗಾಗಿ ಶಾಲೆ ತೆರೆದರು. ಕೋರ್ಟಿನಲ್ಲಿ ಕೆಲಸ ಕಳೆದುಕೊಂಡ ಬಾಬು ಮಾಸ್ತರ್ ಕೂಡ ಇಲ್ಲಿ ಶಿಕ್ಷಕರಾಗಿ ಪಾಠ ಮಾಡತೊಡಗಿದರು.
ರಂಗರಾವ್ ಅವರು ಪಂಚಮರ ಶಾಲೆಗೆ ಮಕ್ಕಳನ್ನು ಸೇರಿಸುವಂತೆ ಮನೆಮನೆಗೆ ತಿರುಗಿ ಉತ್ತೇಜಿಸುತ್ತಿದ್ದರು. ತಮ್ಮ ಸ್ವಂತ ದುಡಿಮೆ ಮತ್ತು ಅವರಂತೆ ಯೋಚಿಸುವ ಗೆಳೆಯರ ನೆರವಿನಿಂದ ಮಂಗಳೂರು ಕೊಡಿಯಾಲ್ಬೈಲ್ನಲ್ಲಿ ಡಿಪ್ರೆಸ್ಸಡ್ ಕ್ಲಾಸಸ್ ಮಿಷನ್ (ಡಿಸಿಎಂ) ಎಂಬ ಸಂಘಟನೆ ಹುಟ್ಟುಹಾಕಿದರು.
ದಲಿತರಿಗೆ ಭೂಮಿಯ ಒಡೆತನ ಬಂದಾಗ ಉಟ್ಟುಣ್ಣಲು ಅವಕಾಶ ಸಿಗುತ್ತದೆ ಎಂದು ನಂಬಿದ್ದ ರಂಗರಾವ್ ಸಮಾನ ಮನಸ್ಕರಿಂದ ವಂತಿಗೆ ಪಡೆದು ಶ್ರೀಮಂತರಿಂದ ಜಮೀನನ್ನು ಕ್ರಯಕ್ಕೆ ಅಥವಾ ಮೂಲಗೇಣಿಗೆ ಪಡೆದು ದಲಿತರಿಗೆ ಕೃಷಿ ಮಾಡಲು ಅವಕಾಶ ಕಲ್ಪಿಸಿದರು. ದಲಿತರಿಗೆ ಕೊಟ್ಟ ಭೂಮಿ ಪುಡಿಗಾಸಿಗೆ ಪುನರ್ ಕ್ರಯ ಆಗುವುದನ್ನು ಗಮನಿಸಿದ ರಂಗರಾವ್ ದಲಿತರ ಭೂಮಿ ಪರಭಾರೆಯನ್ನು ಅಂದೇ ನಿಷೇಧಿಸಿದ್ದರು. ದಲಿತೋದ್ಧಾರಕ ಮಾಂತ್ರಿಕನ ಶ್ರಮದ ಸಾರ್ಥಕತೆ ಒಂದೊಂದೇ ಹೆಜ್ಜೆ ಮುಂದೆ ಹೋಗಿ ಶೇಡಿಗುಡ್ಡೆಯ ಕೋರ್ಟ್ ಹಿಲ್ನಲ್ಲಿ ಆದಿ ದ್ರಾವಿಡ ಸಹಕಾರ ಸಂಘ ಎಂಬ ಸಂಸ್ಥೆ ಆರಂಭವಾಗಿ, ದೇಶದಲ್ಲಿಯೇ ಪ್ರಥಮ ಬಾರಿಗೆ ದಲಿತರಿಗಾಗಿ ಆರಂಭಗೊಂಡ ಸಹಕಾರಿ ಸಂಘ ಎಂಬ ಕೀರ್ತಿಗೆ ಪಾತ್ರವಾಯಿತು.
ಅಸ್ಪಶ್ಯರನ್ನು ಮುಖ್ಯವಾಹಿನಿಗೆ ತರುವಾಗ ರಂಗರಾವ್ ಸಾಕಷ್ಟು ಸಂಕಷ್ಟ ಎದುರಿಸಿದರು. ‘ಕೆಳಜಾತಿಯವರೊಂದಿಗೆ ಬದುಕಿದ ನೀನು ದೇವಸ್ಥಾನಗಳಿಗೆ ಬರಬೇಡ’ ಎಂದು ಮೇಲ್ವರ್ಗದವರು ತಾಕೀತು ಮಾಡಿದ್ದರು. ರಂಗರಾವ್ ಮೇಲೆ ಇತರ ಕೆಳ ಜಾತಿಯವರನ್ನು ಎತ್ತಿಕಟ್ಟಿ ಅವರ ಕ್ಷೌರವನ್ನು ಮಾಡಲು ನಿರಾಕರಿಸಲಾಯಿತು. ರಸ್ತೆಯಲ್ಲಿ ನಡೆಯುವಾಗ ಪುಂಡರು ಕಲ್ಲು ಎಸೆದರು. ಆದರೆ, ಈ ಅಪಮಾನ, ಕಿರಕುಳ ಬೆದರಿಕೆಗೆ ಅವರು ಅಳುಕಲಿಲ್ಲ. ಅವರ ಪತ್ನಿ ರುಕ್ಮಿಣಿ ಪತಿಯ ಕೆಲಸಕ್ಕೆ ಒತ್ತಾಸೆಯಾಗಿ ನಿಂತುಬಿಟ್ಟಿದ್ದರು. ಕರ್ನಾಡ್ ಸದಾಶಿವರಾಯರಂತಹ ಆಗರ್ಭ ಶ್ರೀಮಂತರು ರಂಗರಾವ್ ಅವರ ಕಾರ್ಯಕ್ಕೆ ಕೈಜೋಡಿಸಿದ್ದರು. ರಂಗರಾವ್ ಅವರ ಪರಿಶ್ರಮ, ಸೇವಾ ದೃಷ್ಟಿಯನ್ನು ಗಮನಿಸಿದ ಸರ್ಕಾರ ರಾವ್ ಸಾಹೇಬ್ ಎಂಬ ಪ್ರಶಸ್ತಿ ನೀಡಿತು.
ತಮ್ಮ ಮಗಳು ರಾಧಾ ಬಾಯಿಯನ್ನು ಮದ್ರಾಸ್ನ ಸುಬ್ಬಾರಾಯರಿಗೆ ಕೊಟ್ಟು ವಿವಾಹ ಮಾಡುವ ಮೂಲಕ ತಮ್ಮ ಕುಟುಂಬದಲ್ಲೇ ಅಂತರ್ಜಾತಿ ವಿವಾಹವನ್ನು ಕುದ್ಮಲ್ ನೆರವೇರಿಸಿದರು. ಅದರ ಪೌರೋಹಿತ್ಯವನ್ನು ಚಕ್ರವರ್ತಿ ರಾಜಗೋಪಾಲರಾಯರು ನೆರವೇರಿಸಿದ್ದರು. 1924ರಲ್ಲಿ ಸ್ವಾಮಿ ದಯಾನಂದ ಸರಸ್ವತಿಯವರ ಶಿಷ್ಯ ಮಹರ್ಷಿ ಶ್ರದ್ಧಾನಂದ ಸ್ವಾಮೀಜಿ ಮಂಗಳೂರಿಗೆ ಬಂದಾಗ ಕುದ್ಮಲ್ ರಂಗರಾಯರು ತಮ್ಮ 65ನೇ ವಯಸ್ಸಿನಲ್ಲಿ ಸನ್ಯಾಸತ್ವ ಸ್ವೀಕರಿಸಿದರು. ಆ ಸನ್ಯಾಸ ದೀಕ್ಷೆ ಸಮಯದಲ್ಲಿ ಏರ್ಪಡಿಸಿದ ಹೋಮ ಕುಂಡದಲ್ಲಿ ಬ್ರಿಟಿಷ್ ಸರ್ಕಾರ ನೀಡಿದ್ದ ರಾವ್ ಸಾಹೇಬ್ ಪ್ರಶಸ್ತಿಯನ್ನು ಅಗ್ನಿಗೆ ಸಮರ್ಪಣೆ ಮಾಡಿ ನಿಟ್ಟುಸಿರುಬಿಟ್ಟರು. ರಂಗರಾವ್ ತಮ್ಮ ಮಕ್ಕಳಿಗೆ ಮಾಡಿದ್ದ ಆಸ್ತಿಯೆಂದರೆ ಉತ್ತಮ ಶಿಕ್ಷಣ ಬಿಟ್ಟರೆ ಕದ್ರಿಯಲ್ಲಿ ಸಣ್ಣ ಮನೆ ಮತ್ತು ಅಮೂಲ್ಯ ಪುಸ್ತಕಗಳು.
ತಮ್ಮ 69ನೇ ವಯಸ್ಸಿನಲ್ಲಿ 1928ರ ಜನವರಿ 30 ರಂದು ಕುದ್ಮಲ್ ಕೊನೆಯುಸಿರೆಳೆದರು. ರಂಗರಾವ್ ಬರೆದಿಟ್ಟ ಉಯಿಲಿನಂತೆ ದಲಿತ ಸಮುದಾಯದ ಅತಿ ಹಿಂದುಳಿದಿದ್ದ ತೋಟಿ ಪಂಗಡದವರು ಪಾರ್ಥಿವಶರೀರವನ್ನು ಸ್ಮಶಾನಕ್ಕೆ ಒಯ್ದರು. ‘ನನ್ನ ಶಾಲೆಯಲ್ಲಿ ಕಲಿತ ದಲಿತ ಜನಾಂಗದ ಮಕ್ಕಳು ವಿದ್ಯಾವಂತರಾಗಿ, ಬುದ್ಧಿವಂತರಾಗಿ ಸರ್ಕಾರಿ ನೌಕರಿಗೆ ಸೇರಿ ನಮ್ಮೂರ ರಸ್ತೆಯಲ್ಲಿ ಕಾರಿನಲ್ಲಿ ಓಡಾಡಬೇಕು. ಆ ರಸ್ತೆಯಲ್ಲಿ ಏಳುವ ಧೂಳು ನನ್ನ ತಲೆಗೆ ತಾಗಬೇಕು. ಅದು ನನ್ನ ಜನ್ಮದ ಸಾರ್ಥಕ ಕ್ಷಣ’ ಎಂಬುದು ಕುದ್ಮಲ್ ಅವರ ಕೊನೆಯ ಆಸೆಯಾಗಿತ್ತು. ಕುದ್ಮಲ್ ರಂಗರಾವ್ ಎಂಬ ಸಾರ್ಥಕ ಜೀವನ ಕಂಡ ಮಹಾನ್ ವ್ಯಕ್ತಿ ತಮ್ಮ ನಡವಳಿಕೆಯಿಂದಲೇ ಸಮಾಜದಲ್ಲಿ ನಂಬಿಕೆ ಮೂಡಿಸಿದ್ದರು.
(ಲೇಖಕರು ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರು)