

ಕೃಷಿಯನ್ನು ಕೆಳಮಟ್ಟದ ಉದ್ಯೋಗವೆಂದು ಇಂದಿನ ಬಹುಪಾಲು ಜನರು ಪರಿಗಣಿಸಿದ್ದಾರೆ, ಇನ್ನು ಎಷ್ಟೋ ಮಂದಿ ರೈತಾಪಿ ಜನರನ್ನು ಅನಾಗರಿಕರಂತೆಯೇ ನೋಡುತ್ತಾರೆ. ಆದರೆ, ಆದಿಮಾನವನಾಗಿ ಕಾಡಿನಲ್ಲಿ ಅಲೆಯುತ್ತಿದ್ದ ಮಾನವನನ್ನು ನಾಗರಿಕನನ್ನಾಗಿ ಮಾಡಿದ್ದೇ ಈ ಕೃಷಿ. ಸುಮಾರು ಹತ್ತು ಸಾವಿರ ವರ್ಷಗಳಿಗೂ ಹಿಂದೆ ಮಾನವನು ಕಾಡಿನಲ್ಲಿ ಗೆಡ್ಡೆ ಗೆಣಸು, ಹಣ್ಣು ಹಂಪಲುಗಳನ್ನು ತಿಂದುಕೊಂಡು ಅಲೆದಾಡುತ್ತಿದ್ದಾಗ, ಕ್ರಮೇಣ ತಾನು ತಿಂದ ಹಣ್ಣಿನ ರುಚಿ ಕಂಡು ಅದರ ಬೀಜಗಳನ್ನು ಸಂಗ್ರಹಿಸಿ ತಂದು ನೆಟ್ಟು, ಅದು ಫಲಕೊಡುವವರೆಗೆ ಕಾದು, ಮತ್ತು ಆ ಕಾಯುವ ಸಂಧರ್ಭದಲ್ಲಿ ಒಂದೇ ಜಾಗದಲ್ಲಿ ತನ್ನ ಸಂಸಾರವನ್ನು ನೆಲೆ ನಿಲ್ಲಿಸುವ ರೂಢಿ ಬೆಳೆಸಿಕೊಂಡು ನಾಗರಿಕನಾಗುತ್ತ ಬಂದ. ‘ಮನುಷ್ಯನ ಇತರ ಎಲ್ಲ ಅನ್ವೇಷಣೆಗಳಿಗಿಂತ ಕೃಷಿ ತುಂಬ ಉದಾತ್ತವಾದುದು ಮತ್ತು ಅತ್ಯುತ್ತಮವಾದುದು ಮತ್ತು ಇದರ ಸೃಷ್ಟಿಕರ್ತನೇ ರೈತ’ ಎಂದು ಆರ್. ಎಸ್. ಬರ್ನ್ ಹೇಳುತ್ತಾನೆ.
ಸ್ವತಂತ್ರ ಭಾರತ ನಿರ್ವಣದಲ್ಲೂ ರೈತರ ಪಾತ್ರ ಮಹತ್ತರವಾದುದು. ಅದು ಹೇಗೆಂದರೆ, ಭಾರತದಲ್ಲಿ ಮೊದ ಮೊದಲ ಕೈಗಾರಿಕೆಗಳನ್ನು ಸ್ಥಾಪಿಸಿ ಸರ್ಕಾರ ನಡೆಸಲು ಮೊದಲ ಕಂದಾಯ ಕಟ್ಟಿದ್ದು ನಮ್ಮ ರೈತರೇ. ರಸ್ತೆ, ಅಣೆಕಟ್ಟು ಮತ್ತು ಜಲವಿದ್ಯುತ್ ಸ್ಥಾವರಗಳನ್ನು ನಿರ್ವಿುಸುವುದಕ್ಕಾಗಿ ಜಮೀನು ಕಳೆದುಕೊಂಡು ಅದರ ಬದಲಾಗಿ ಸರ್ಕಾರ ಕೊಟ್ಟ ಹೊಸ ಜಾಗಗಳಿಗೆ ಹೋಗಿ ಅಲ್ಲಿ ಬದುಕು ಕಟ್ಟಿಕೊಳ್ಳಲು ಹೆಣಗಾಡಿದವರು ರೈತರು ಮತ್ತು ಸರ್ಕಾರದ ಬೃಹತ್ ಯೋಜನೆಗಳ ನಿರ್ವಣಕ್ಕೆ ಅತ್ಯಂತ ಕಡಿಮೆ ವರಮಾನಕ್ಕೆ ದುಡಿದ ಶ್ರಮಿಕ ವರ್ಗ ರೈತರದು. ಇದಿಷ್ಟೇ ಅಲ್ಲದೆ ತಮ್ಮ ತಮ್ಮ ಊರುಗಳಲ್ಲಿ ದೇವಸ್ಥಾನಗಳು, ಬಾವಿ, ಕೆರೆ ಕಟ್ಟೆಗಳ ನಿರ್ವಣದಲ್ಲೂ ರೈತರ ಕೊಡುಗೆ ಅಪಾರ.
ಕೃಷಿಯನ್ನು ಉದ್ಯಮವಾಗಿಸಿ ಕೊಂಡಿರುವ, ಜಮೀನಿಗೆ ಕಾಲನ್ನೇ ಇಡದಿರುವ ಎಷ್ಟೋ ದಲ್ಲಾಳಿಗಳು ಮತ್ತು ಕಂಪನಿಗಳ ಸ್ಥಿತಿ ಮಾತ್ರ ಲಾಭದಾಯಕವಾಗಿದೆ. ಹೀಗೆ ಕೃಷಿಯನ್ನೇ ಅವಲಂಬಿಸಿರುವ ಕೆಲವು ಉದ್ಯಮಗಳೆಂದರೆ, ಆಹಾರ ಉತ್ಪಾದನಾ ಘಟಕಗಳು, ಸೂಪರ್ ಮಾರ್ಕೆಟ್ಗಳು, ಕೃಷಿ ಯಂತ್ರೋಪಕರಣಗಳ ತಯಾರಿಕಾ ಕಾರ್ಖಾನೆಗಳು, ಕೃಷಿ ಉತ್ಪನ್ನಗಳನ್ನು ಸಾಗಿಸಲು ಬಳಸುವ ಸಾರಿಗೆ (ಸಮುದ್ರದಲ್ಲಿ ಹಡಗುಗಳ ಮೂಲಕ ಕೃಷಿ ಉತ್ಪನ್ನಗಳನ್ನು ಸಾಗಿಸಲಾಗುತ್ತದೆ), ಹಾಲಿನ ಉತ್ಪನ್ನ ತಯಾರಿಕಾ ಘಟಕಗಳು... ಹೀಗೆ ಕೃಷಿ ಕೋಟ್ಯಂತರ ಜನರಿಗೆ ಉದ್ಯೋಗವನ್ನೂ ಒದಗಿಸಿದೆ. ಆದರೆ ರೈತನ ಸ್ಥಿತಿ ಮಾತ್ರ ಶೋಚನೀಯವಾಗಿದೆ. ಯಾಕೆಂದರೆ, ರೈತ ಬೆಳೆದು ಕೊಡುವ ಎಲ್ಲ ಪದಾರ್ಥಗಳ ಬೆಲೆ ಕಡಿಮೆ. ಆದರೆ ಅದನ್ನು ಬೆಳೆಯಲು ರೈತ ಖರೀದಿಸುವ ಪರಿಕರಗಳಾದ- ಯಂತ್ರೋಪಕರಣಗಳು, ಗೊಬ್ಬರ, ಕೀಟನಾಶಕ, ನೀರು, ವಿದ್ಯುಚ್ಛಕ್ತಿ ಎಲ್ಲದರ ಬೆಲೆಯೂ ಅಧಿಕ. ರೈತ ಬೆಳೆದ ನೆಲಗಡಲೆಯ ಬೆಲೆ ಕಡಿಮೆ. ಆದರೆ ಅದರಿಂದ ತಯಾರಾಗುವ ಅಡುಗೆಎಣ್ಣೆಯ ಬೆಲೆ ಹೆಚ್ಚು, ಹತ್ತಿಗೆ ಬೆಲೆ ಕಡಿಮೆ. ಆದರೆ ಅದರಿಂದ ತಯಾರಿಸಿದ ಬಟ್ಟೆಗಳು ದುಬಾರಿ.
ಸ್ವಾತಂತ್ರ್ಯಪೂರ್ವಕ್ಕೂ ಮತ್ತು ನಂತರಕ್ಕೂ ನೋಡುವುದಾದರೆ, 1930ರಲ್ಲಿ ಮೂರನೆಯ ಹಂತದ ಸರ್ಕಾರಿ ನೌಕರನಿಗೆ ಹೋಲಿಸಿದರೆ ರೈತನ ಆದಾಯವೇ ಹೆಚ್ಚಿರುತ್ತಿತ್ತು. ಆದರೆ ಇಂದು 2020ರಲ್ಲಿ ಅದೇ ನೌಕರನಿಗೆ ಹೋಲಿಸಿದರೆ ರೈತನ ಆದಾಯ ತುಂಬ ಕಡಿಮೆ ಮತ್ತು ಉದ್ಯೋಗ ಭದ್ರತೆಯೆಂಬುದೇ ಇಲ್ಲ. ‘ಸಕ್ಕರೆ ಜಿಲ್ಲೆ’ ಮಂಡ್ಯದ ಉದಾಹರಣೆಯನ್ನೇ ನೋಡುವುದಾದರೆ, ಅಲ್ಲಿನ ಕಾರ್ಖಾನೆಗಳಿಗೆ ಕಬ್ಬನ್ನು ಪೂರೈಸುವ ರೈತರ ಮತ್ತು ಕಾರ್ಖಾನೆಗಳ ನೌಕರರ ಆರ್ಥಿಕ ಪರಿಸ್ಥಿತಿ ಹೋಲಿಸಿದರೆ ರೈತನ ಆರ್ಥಿಕ ಪರಿಸ್ಥಿತಿ ಕೆಟ್ಟದಾಗಿದೆ.
ಸ್ವಾತಂತ್ರ್ಯ ಬಂದು ಮೊದಲ ಐದು ಪಂಚವಾರ್ಷಿಕ ಯೋಜನೆಗಳು ಮುಗಿದ ನಂತರ ಅಂದರೆ 1978ರ ಹೊತ್ತಲ್ಲಿ ಕೂಡ ನಮ್ಮ ದೇಶದ ಸಾಮಾಜಿಕ ವ್ಯವಸ್ಥೆಯಲ್ಲಿ ಸಮತೋಲನ ಪ್ರಗತಿ ಕಂಡುಬರಲಿಲ್ಲ. ಐದನೇ ಪಂಚವಾರ್ಷಿಕ ಯೋಜನೆಯ (1974-79) ವರದಿಯ ನಾಲ್ಕನೇ ಪ್ಯಾರಾದಲ್ಲಿ, ಹಿಂದಿನ ನಾಲ್ಕು ಪಂಚವಾರ್ಷಿಕ ಯೋಜನೆಗಳು ವಿಫಲವಾಗಿವೆ ಎಂದು ಯೋಜನಾ ಆಯೋಗ ಒಪ್ಪಿಕೊಂಡಿದೆ. ನಿರುದ್ಯೋಗ, ಕುಂಠಿತ ಬೆಳವಣಿಗೆ ಉಲ್ಲೇಖಿಸಿ, ಸಬಲ ಆರ್ಥಿಕತೆ ಸೃಷ್ಟಿಸುವಲ್ಲಿ ವಿಫಲವಾಗಿದ್ದೇವೆ ಎಂದು ಹೇಳಿಕೊಂಡಿದೆ.
ಮೊದಲ ಪಂಚವಾರ್ಷಿಕ ಯೋಜನೆಯಲ್ಲಿ ಭಾರತದ ಶೇಕಡ 70 ಜನರು ಉದ್ಯೋಗಕ್ಕಾಗಿ ಕೃಷಿಯನ್ನು ಅವಲಂಬಿಸಿದ್ದರೆ, ಇದೇ ಸಂಖ್ಯೆ ನಾಲ್ಕನೇ ಪಂಚವಾರ್ಷಿಕ ಯೋಜನೆಯಲ್ಲೂ ಮುಂದುವರಿದಿದೆ. ಅಂದರೆ ದೇಶದ ಜನರಿಗೆ ಪರ್ಯಾಯ ಉದ್ಯೋಗ ಒದಗಿಸುವುದರಲ್ಲಿ ನಮ್ಮನ್ನಾಳಿದ ಮೊದಮೊದಲ ಸರ್ಕಾರಗಳು ವಿಫಲವಾಗಿವೆ. ಆ ಸಮಯದಲ್ಲಿ ಅಮೆರಿಕದಲ್ಲಿ ಶೇಕಡ 6ರಷ್ಟು ಜನ ಕೃಷಿಯನ್ನು ನಂಬಿ ಜೀವಿಸುತ್ತಿದ್ದರೆ, ಜಪಾನಿನಲ್ಲಿ 1944ರಲ್ಲಿ ಶೇ.43.1 ರಷ್ಟಿದ್ದ ಕೃಷಿಕರು 1970ರ ಹೊತ್ತಿಗೆ ಶೇ.21 ಆಗಿದ್ದರು. 1951ರಲ್ಲಿ 36 ಕೋಟಿಯಷ್ಟಿದ್ದ ನಮ್ಮ ದೇಶದ ಜನಸಂಖ್ಯೆ 1978ರ ಹೊತ್ತಿಗೆ 68 ಕೋಟಿಯಷ್ಟಾಗಿತ್ತು. ಅಂದರೆ ಜನಸಂಖ್ಯೆ ವಿಪರೀತವಾಗಿ ಏರುತ್ತಿದ್ದ ಸಮಯದಲ್ಲೇ ಅವಶ್ಯಕವಾದ ಉದ್ಯೋಗ ಒದಗಿಸುವಲ್ಲಿ ಸರ್ಕಾರಗಳು ವಿಫಲವಾದವು. ಇದರ ಜೊತೆಗೆ ರೈತರ ಹಿಡುವಳಿ ಜಮೀನು ಕೂಡ ಕಡಿಮೆಯಾಗುತ್ತ ಬಂತು. 1950ರ ಸಮಯದಲ್ಲಿ ಒಂದು ಕೃಷಿ ಕುಟುಂಬಕ್ಕೆ 20 ಎಕರೆಯಷ್ಟಿದ್ದ ಸರಾಸರಿ ಜಮೀನು 1970-80ರ ಹೊತ್ತಲ್ಲಿ 10 ಎಕರೆಯಷ್ಟಾಯಿತು. 2010-20ರಲ್ಲಿ ಇದು 2-3 ಎಕರೆಯಷ್ಟಾಗಿದೆ ಮತ್ತು ಇಂದು ನಮ್ಮ ಜನಸಂಖ್ಯೆ 138 ಕೋಟಿಯಷ್ಟಾಗಿದೆ. ಉಳಲು ಹೆಚ್ಚು ಜಮೀನಿಲ್ಲದೆ, ಸರಿಯಾದ ನೀರಾವರಿ, ವಿದ್ಯುಚ್ಛಕ್ತಿ ಸೌಲಭ್ಯಗಳಿಲ್ಲದೆ ಕೃಷಿಕರು ಪರದಾಡುವಂತಾಯಿತು.
ಸರ್ಕಾರಗಳು ಕೃಷಿಯನ್ನು ಉದ್ಯಮಗಳೆಂದು ಪರಿಗಣಿಸಿ ದುಡಿಮೆಗೆ ತಕ್ಕ ಲಾಭ ಕೊಡಿಸುವ ವ್ಯವಸ್ಥೆ ಮಾಡಬೇಕಾಗಿದೆ, ವ್ಯವಸಾಯಗಾರರ ಸ್ಥಿತಿಗತಿ ಉನ್ನತೀಕರಿಸಬೇಕಾಗಿದೆ. ಕೇಂದ್ರ ಸರ್ಕಾರ ಕೃಷಿಗೆ ಸಂಬಂಧಿಸಿದ ಮೂರು ಕಾಯ್ದೆಗಳನ್ನು ಈಚೆಗೆ ಜಾರಿಗೊಳಿಸಿದೆ. ಈ ಕಾಯ್ದೆಗಳ ಸಾಧಕಗಳ ಕಡೆಗೆ ಗಮನಹರಿಸುವುದಾದರೆ, ಹಳೆಯ ಕಾಯ್ದೆ ಪ್ರಕಾರ, ರೈತರು ಬೆಳೆಗಳನ್ನು ನಿರ್ದಿಷ್ಟ ಮಾರುಕಟ್ಟೆಯಲ್ಲೇ ಅಥವಾ ಮಂಡಿಗಳಲ್ಲೇ ಮಾರಾಟ ಮಾಡಬೇಕಿತ್ತು. ಹೊಸ ಕಾಯ್ದೆಯಲ್ಲಿ ಈ ನಿರ್ಬಂಧ ತೆಗೆದುಹಾಕಲಾಗಿದೆ, ಅಂದರೆ ರೈತರು ತಾವು ಬೆಳೆದ ಬೆಳೆಗಳನ್ನು ನೇರವಾಗಿ ರಾಜ್ಯ ಅಥವಾ ಅಂತರ್ ರಾಜ್ಯಗಳಲ್ಲಿ ಮಾರಬಹುದು. ಎರಡನೇ ಕಾಯ್ದೆ ಪ್ರಕಾರ, ರೈತರು ತಮ್ಮ ಉತ್ಪನ್ನಗಳನ್ನು ಕೊಳ್ಳುವವರ ಜೊತೆ ಅಥವಾ ರಫ್ತುದಾರರ ಜೊತೆ ಬೆಳೆ ಬೆಳೆಯುವ ಮೊದಲೆ ಬೆಲೆ ನಿಗದಿಪಡಿಸಿ ಒಪ್ಪಂದ ಮಾಡಿಕೊಂಡು ಮಾರಬಹುದಾಗಿದೆ, ಇದರಿಂದ ಮಧ್ಯವರ್ತಿಗಳ ಉಪಟಳ ತಪ್ಪಿಸಬಹುದು ಮತ್ತು ವ್ಯಾಪಾರೋದ್ಯಮಕ್ಕೆ ತಗಲುವ ವೆಚ್ಚವನ್ನು ಕಡಿತಗೊಳಿಸಬಹುದು. ಮೂರನೇ ಕಾಯ್ದೆ ಪ್ರಕಾರ, ಮೂಲಸೌಕರ್ಯಗಳಾದ ಕೋಲ್ಡ್ಸ್ಟೋರೇಜ್, ಆಹಾರ ಪೂರೈಕೆ ಸರಪಳಿ, ಇಂಥವುಗಳಿಗೆ ಹೂಡಿಕೆದಾರರ ಬಂಡವಾಳ ತರಬಹುದು. ಇನ್ನು ಈ ಕಾಯ್ದೆಗಳ ಬಾಧಕಗಳ ಕಡೆಗೆ ಗಮನ ಹರಿಸುವುದಾದರೆ, ನಮ್ಮ ದೇಶದ ಶೇಕಡ 85 ರೈತರು ಹೊಂದಿರುವುದು ಎರಡು ಎಕರೆಗಿಂತಲೂ ಕಡಿಮೆ ಜಮೀನನ್ನು. ಇಂಥ ರೈತರಿಗೆ ದೊಡ್ಡ ಕಂಪನಿಗಳೊಂದಿಗೆ ಅಥವಾ ರಫ್ತುದಾರರೊಂದಿಗೆ ವ್ಯವಹರಿಸಲು ಕಷ್ಟವಾಗುತ್ತದೆ. ಪರಿಣಾಮವಾಗಿ ಹಣವುಳ್ಳವರು ಖಾಸಗಿ ಮಂಡಿಗಳನ್ನು ತೆರೆದು ರೈತರನ್ನು ನಷ್ಟಕ್ಕೀಡು ಮಾಡುವ ಮತ್ತು ದೊಡ್ಡ ಕಂಪನಿಗಳವರ ಜತೆಗಿನ ವ್ಯವಹಾರದ ಮಾತುಕತೆಯಲ್ಲಿ ರೈತರು ದುರ್ಬಲರಾಗಿ ಮೋಸಹೋಗುವ ಸಂದರ್ಭವೂ ಇದೆ. ಮತ್ತು ಈ ಮೊದಲು ಎಪಿಎಂಸಿ ಮಾರುಕಟ್ಟೆಯಲ್ಲಿ ನೀಡುತ್ತಿದ್ದ ಕನಿಷ್ಠ ಬೆಂಬಲ ಬೆಲೆ ಸಹಿತ ಸಿಗದೆ ಹೋಗುವುದು.
ಯಾವುದೇ ಹೊಸ ಕಾಯ್ದೆ ಜಾರಿಗೊಳಿಸಿದಾಗ ಅದರಲ್ಲಿ ಅನುಕೂಲತೆಗಳು ಸೇರಿರುತ್ತವೆ ಮತ್ತು ಕೆಲ ನ್ಯೂನತೆಗಳೂ ಇರಬಹುದು. ಈ ಕಾಯ್ದೆಗಳ ಜಾರಿಯೇ ಬೇಡವೆಂದು ಹೋರಾಟ ಮಾಡುವುದರ ಬದಲಾಗಿ, ರೈತರ ಅನುಕೂಲತೆಗೆ ತಕ್ಕಂತೆ ಕಾಯ್ದೆ ಇರುವಂತೆ ನೋಡಿಕೊಳ್ಳುವತ್ತ ಸೂಕ್ತ ಹೆಜ್ಜೆ ಇಡಬೇಕಾಗಿದೆ. ನಮ್ಮ ರಾಜ್ಯ ರೈತ ಸಂಘವು ಬಣಗಳಾಗಿ ಕಿತ್ತಾಡುವ ಬದಲು ಯುವ ಮತ್ತು ಅನುಭವಿ ರೈತರ ತಂಡ ರಚಿಸಿ ಸರ್ಕಾರ ಇಡುವ ಹೆಜ್ಜೆಗಳ ಮೇಲೆ ಹದ್ದಿನ ಕಣ್ಣಿಡುತ್ತ ಹೊಸ ಕಾಯ್ದೆಯ ಸೂಕ್ತ ಅಳವಡಿಕೆ ಬಗ್ಗೆ, ಇತರ ಸಣ್ಣ ರೈತರಿಗೆ ಸೂಕ್ತ ತರಬೇತಿ ನೀಡುವ ಕಡೆ ಗಮನ ಹರಿಸಬೇಕಿದೆ.
(ಲೇಖಕರು ಸಹಾಯಕ ಪ್ರಾಧ್ಯಾಪಕರು, ಹವ್ಯಾಸಿ ಬರಹಗಾರರು)