

ವಿಭಜನೆಯ ನಂತರದ ದಿನಗಳಲ್ಲಿ ಹೇಗೆ ಕಾಂಗ್ರೆಸ್ಸಿನ ಅನೇಕ ಹಿಂದೂ ನಾಯಕರು ಅಪಮಾನಿತರಾಗಿ ಪಾಕಿಸ್ತಾನದಿಂದ ಭಾರತಕ್ಕೆ ವಲಸೆ ಬಂದರು ಎನ್ನುವುದನ್ನು ಸಂಸತ್ತಿನ ಮುಂದಿಡುತ್ತ ಪ್ರಧಾನಮಂತ್ರಿ ನರೇಂದ್ರ ಮೋದಿ ಪುನಃ ಪೌರತ್ವ ತಿದ್ದುಪಡಿ ಕಾನೂನಿನ ಹಿನ್ನೆಲೆ ಕುರಿತು ಸಾದ್ಯಂತವಾಗಿ ವಿವರಿಸಿದ್ದಾರೆ.
ಲಕ್ಷಾಂತರ ಜನರ ಪಲಾಯನ, ವಲಸೆ, ಕೊಲೆ, ಸುಲಿಗೆ, ಅತ್ಯಾಚಾರಗಳಿಂದ ಭೀಕರ ಹಿಂಸಾಚಾರಕ್ಕೆ ಕಾರಣವಾಗಿದ್ದ ದೇಶ ವಿಭಜನೆಯ ಕಹಿನೆನಪು ದಶಕಗಳ ನಂತರವೂ ಗಡಿಯಾಚೆ ಈಚೆಗಿನ ಕೋಟ್ಯಂತರ ಜನರ ಮನಸ್ಸನ್ನು ಕಾಡುತ್ತಲೇ ಇದೆ. ಘಟನೆಯನ್ನು ಪ್ರತ್ಯಕ್ಷ ಕಂಡುಂಡ ಹಿರಿಯರ ಮಾನಸಿಕ ಆಘಾತಕ್ಕೆ ಸಾಕ್ಷಿಗಳಾದ ಇಂದಿನ ಪೀಳಿಗೆಯೂ ಆ ಬರ್ಬರ ಘಟನಾವಳಿಗಳನ್ನು ಒಂದು ದುಸ್ವಪ್ನವೆಂಬಂತೆ ಸ್ಮರಿಸುತ್ತಾರೆ. ಮಾಧ್ಯಮ ಕ್ರಾಂತಿಯ ಇಂದಿನ ಯುಗದಲ್ಲೂ ನೋಟು ರದ್ದತಿಯಂತಹ ಕ್ಷಿಪ್ರ ರಾಜಕೀಯ ನಿರ್ಣಯಗಳು ಅನುಭವಕ್ಕೆ ಬರಲು ಅನೇಕರಿಗೆ ಅದೆಷ್ಟೋ ಸಮಯ ಬೇಕಾಯಿತೆಂದಾದರೆ ಅನಕ್ಷರಸ್ಥ ಭಾರತದ ಅಂದಿನ ವಿಭಜನೆಯ ರಾಜಕೀಯ ನಿರ್ಣಯ ಅದೆಷ್ಟು ಜನರಿಗೆ ತಲುಪಿರಬಹುದು?
ರಾತ್ರೋರಾತ್ರಿ ಒಂದೇ ದೇಶದ ನಡುವೆ ಎದ್ದ ಗಡಿರೇಖೆ ಹುಟ್ಟು ಹಾಕಿದ ಕೋಮುದ್ವೇಷದ ದಳ್ಳುರಿ ಬೆಚ್ಚಗೆ ಮಲಗಿದ್ದವರನ್ನು ಉಟ್ಟ ಬಟ್ಟೆಯಲ್ಲಿ ಪಲಾಯನಗೈಯ್ಯಲು ಬಾಧ್ಯವಾಗಿಸಿದ್ದರೆ ಅದು ಯಾರ ತಪ್ಪು? ಎಲ್ಲವನ್ನೂ ಬಿಟ್ಟು ಹೋಗಲಾಗದ ಅಸಹಾಯಕತೆಯಲ್ಲಿ ಆಗಿದ್ದಾಗಲಿ ಇಲ್ಲೇ ಇದ್ದುಬಿಡೋಣ ಎನ್ನುವ ನಿರ್ಣಯ ತೆಗೆದುಕೊಂಡವರಿಗೆ ಪುನರ್ವಿಚಾರದ ಒಂದು ಅವಕಾಶವೂ ಇರದೇ ಹೋಯ್ತಲ್ಲಾ! ವಿಭಜನೆಯ ರಾಜಕೀಯ ನಿರ್ಣಯದ ಸಾಧಕ-ಬಾಧಕಗಳ ಅರಿವಿಲ್ಲದ ಮುಗ್ಧರು ನಿರ್ಣಯ ತೆಗೆದುಕೊಳ್ಳುವಲ್ಲಿ ಎಡವಿದ್ದಕ್ಕೆ ಕ್ಷಮೆಯಿಲ್ಲವೇ?
ಹೌದು. ಹಠಾತ್ತನೆ ಹುಟ್ಟಿಕೊಂಡ ಗಡಿಯ ಆಚೆಗಿದ್ದವರು ಆಕ್ಷಣ ತಮ್ಮ ನೆಲ ಯಾವುದಾಗಬೇಕು? ಆಚೆಯೋ ಈಚೆಯೋ ಎನ್ನುವ ನಿರ್ಣಯ ಕೈಗೊಳ್ಳಬೇಕಾಗಿತ್ತು. ಶತಶತಮಾನಗಳಿಂದ, ತಲೆ-ತಲಾಂತರಗಳಿಂದ ಬಾಳಿ ಬದುಕಿದ್ದ ಮಣ್ಣಿನ ಬಾಂಧವ್ಯವನ್ನು ಕಡಿದುಕೊಳ್ಳಲಾಗದೇ ಭಾವನೆಗಳ ಪ್ರವಾಹದಲ್ಲಿ ತೇಲಿದ ಕೆಲವರು ಎಡವಿದರು. ಭವಿಷ್ಯದ ಕಾಲಗರ್ಭದಲ್ಲಿ ಏನಿದೆಯೆಂದು ಊಹಿಸುವುದು ಸಾಧ್ಯವೇ? ಪಾಕಿಸ್ತಾನದಲ್ಲೇ ಉಳಿಯಬಯಸಿದ ಹಿರಿಯರ ನಿರ್ಣಯ ಅಲ್ಲಿನ ಅಲ್ಪಸಂಖ್ಯಾತರ ಇಂದಿನ ಪೀಳಿಗೆಯನ್ನು ಎಪ್ಪತ್ತು ವರ್ಷಗಳ ನಂತರವೂ ಕಾಡುತ್ತಿದೆ ಎಂದರೆ ತಪ್ಪಾಗದು.
ಮತಾಂತರ, ಅಪಮಾನ, ಅಪಹರಣ, ನಿರಂತರ ದಬ್ಬಾಳಿಕೆಯಿಂದ ಪ್ರಾಣ ಉಳಿಸಿಕೊಳ್ಳಲು ಗಡಿಯಾಚೆಯಿಂದ ಬಂದವರಿಗೆ ಆಶ್ರಯ ನೀಡುವ ಮಾನವೀಯ ಕ್ರಮ ರಾಜಕೀಯ-ಧಾರ್ವಿುಕ ಸ್ವರೂಪ ಪಡೆದುಕೊಂಡಿರುವುದು ವಿಷಾದಕರ. ಪಾಕಿಸ್ತಾನವನ್ನು ಆಯ್ಕೆ ಮಾಡಿಕೊಳ್ಳದೆ ಭಾರತದಲ್ಲೇ ಇರುವ ನಿರ್ಣಯ ಭಾರತೀಯ ಅಲ್ಪಸಂಖ್ಯಾತರಿಗೇನೋ ಸಂವಿಧಾನಾತ್ಮಕ ಹಕ್ಕುಗಳ ಜತೆಯಲ್ಲಿ ನೆಮ್ಮದಿಯ ಬದುಕು ಕೊಟ್ಟಿತು. ಪಾಕಿಸ್ತಾನದಲ್ಲೇ ಉಳಿಯುವ ಮುಸಲ್ಮಾನೇತರರು ಭಾರತದ ಅಲ್ಪಸಂಖ್ಯಾತರಷ್ಟು ಭಾಗ್ಯಶಾಲಿಗಳಾಗಿರಲಿಲ್ಲ ಎನ್ನುವುದು ಜಗತ್ತಿಗೇ ವೇದ್ಯವಾದ ಸಂಗತಿ.
ನಿಜ. ರಾಜಕೀಯ ದಾಳಗಳನ್ನರಿಯದ ಸಾಮಾನ್ಯ ಮುಸಲ್ಮಾನನೋರ್ವನಿಗೆ ತನ್ನ ಸಮುದಾಯವನ್ನು ಹೊರತುಪಡಿಸಿ ಇತರರಿಗೆ ಪೌರತ್ವ ಕೊಡುವ ಕಾನೂನು ಪಕ್ಷಪಾತಪೂರ್ಣವಾಗಿ ಕಂಡಿದ್ದರೆ ಆಶ್ಚರ್ಯವಿಲ್ಲ. ಉಪಟಳ ತಾಳಲಾಗದೇ ಇಲ್ಲಿಗೆ ಬಂದು ನೆಲೆಸಿದ ನಿರಾಶ್ರಿತರಿಗೆ ಆಶ್ರಯ ನೀಡುವ ಕ್ರಮವನ್ನು ವಿಭಜನೆ ಬಿಟ್ಟುಹೋದ ನೋವಿನ ಹಿನ್ನೆಲೆಯಲ್ಲಿ ನೋಡುವ ಅಗತ್ಯವಿದೆ ಎನ್ನುವುದನ್ನು ಅವರಿಗೆ ತಿಳಿಯಪಡಿಸುವ ಪ್ರಾಮಾಣಿಕ ಪ್ರಯತ್ನವನ್ನು ಯಾರೂ ಮಾಡಲಿಲ್ಲ.
ಉರಿವ ಬೆಂಕಿಯಲ್ಲಿ ಮೈ ಕಾಯಿಸಿಕೊಳ್ಳುವ ಯತ್ನವೇ ನಡೆಯಿತು! ದಶಕಗಳಿಂದ ಇಲ್ಲಿಯೇ ವಾಸವಾಗಿರುವ, ನಾಗರಿಕ ಸೌಲಭ್ಯಗಳಿಂದ ವಂಚಿತರಾಗಿರುವವರಿಗೆ ನೀಡುವ ಪೌರತ್ವದ ಯತಾರ್ಥತೆಯನ್ನು ತಿಳಿದರೆ ಪ್ರಾಯಶಃ ಯಾರೂ ವಿರೋಧಿಸಲಾರರು. ವಾಸ್ತವತೆಗಿಂತ ಅಪಪ್ರಚಾರವೇ ಹೆಚ್ಚಾಗಿ ಮಾನವೀಯತೆ ಕಳೆದುಹೋಗುತ್ತಿರುವುದು ದೇಶದ ದೌರ್ಭಾಗ್ಯ. ಬೆಚ್ಚಗಿನ ಬದುಕನ್ನು ಕಟ್ಟಿಕೊಂಡವರ ಈಗಿನ ಪೀಳಿಗೆ ನಮಗೇಕೆ ಅವರ ಉಸಾಬರಿ ಎನ್ನುವುದಂತೂ ಮಾನವೀಯತೆಗೆ ಅಪಚಾರವೇ ಸರಿ.
ಮರಣದಂಡನೆಗೆ ಗುರಿಯಾದ ವ್ಯಕ್ತಿ ಕೊನೆ ಗಳಿಗೆಯವರೆಗೆ ಮೇಲ್ಮನವಿಯ ಮೇಲೆ ಮೇಲ್ಮನವಿ ಸಲ್ಲಿಸಲು ಅವಕಾಶ ನೀಡುವ, ಒಮ್ಮೆ ಪೆನ್ಷನ್ ಬೇಡ ಎಂದ ನೌಕರನಿಗೆ ಪುನಃ ಮತ್ತೊಮ್ಮೆ ಯೋಚಿಸಿ ನಿರ್ಣಯಕ್ಕೆ ಬರಲು ಅವಕಾಶ ಕೊಡುವ ಮಾನವೀಯ ದೃಷ್ಟಿಕೋನದ ವ್ಯವಸ್ಥೆಯಿರುವ ನಮ್ಮಲ್ಲಿ, ಪಾಕಿಸ್ತಾನದಲ್ಲೇ ಉಳಿಯುವ ನಿರ್ಣಯ ಕೈಗೊಂಡು, ನೊಂದು-ಬೆಂದು ಬಂದವರಿಗೆ ಇನ್ನೊಂದು ಅವಕಾಶ ನೀಡುವುದು ಹೇಗೆ ತಪ್ಪಾದೀತು? ವಿಭಜನೆಯ ಪರಿಪ್ರೇಕ್ಷೆಯಲ್ಲಿ ಪೌರತ್ವ ತಿದ್ದುಪಡಿ ಕಾನೂನನ್ನಿಟ್ಟು ಶಾಂತಚಿತ್ತರಾಗಿ ನೋಡಿದರೆ ಸಮಸ್ಯೆಗೆ ಸಮಾಧಾನ ಸಿಗಲಾರದೇ ಇರದು. ಪ್ರಾಯಶಃ ಶಾಂತಿ ನೆಲೆಸಬಹುದು.
(ಲೇಖಕರು ಮಾಜಿ ಸೈನಿಕರು, ಹವ್ಯಾಸಿ ಬರಹಗಾರರು)