ರಾಷ್ಟ್ರನಿರ್ಮಾಣದಲ್ಲಿ ತೊಡಗಿರುವ ಸಂಘದ ಬಗ್ಗೆ ಟೀಕೆ ಏಕೆ?

Anisike column
Published on
ಸ್ವಾತಂತ್ರ್ಯಾನಂತರದ ಭಾರತಕ್ಕೆ ಈಗ 75 ವರ್ಷವಾಗಿದೆ. ವಿವಿಧ ಆಕ್ರಮಣಕಾರರು, ದಾಳಿಕೋರರು, ಬ್ರಿಟಿಷರ ಆಳ್ವಿಕೆಯ ಸುದೀರ್ಘ ಸಂಕೋಲೆಯನ್ನು ಬಿಡಿಸಿಕೊಂಡು ದೇಶವು 1947ರಲ್ಲಿ ಸ್ವತಂತ್ರವಾಯಿತು. ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಈ ಅಮೃತ ಮಹೋತ್ಸವ ವರ್ಷದಲ್ಲಿ, ಸಾರ್ವಕಾಲಿಕವಾಗಿ ಉಳಿಯುವ ಅನೇಕ ಯೋಜನೆಗಳನ್ನು ಹಾಕಿಕೊಂಡು ಕಾರ್ಯಮಗ್ನವಾಗಿದೆ.

ಈ 75 ವರ್ಷಗಳಲ್ಲಿ ದೇಶ ನಡೆದುಬಂದ ಹಾದಿಯನ್ನೊಮ್ಮೆ ಸಿಂಹಾವಲೋಕನ ಮಾಡಬೇಕು. ಮುಂದಿನ 25 ವರ್ಷಗಳಲ್ಲಿ ದೇಶ ಇಡುವ ಹೆಜ್ಜೆಗಳು, ಶತಮಾನೋತ್ಸವವನ್ನು ಸಂಭ್ರಮಿಸಬೇಕೆ ಅಥವಾ ಪಶ್ಚಾತ್ತಾಪ ಪಡಬೇಕೆ ಎಂಬುದನ್ನು ನಿರ್ಧರಿಸುತ್ತದೆ. ಈ ಜವಾಬ್ದಾರಿ ದೇಶದ ಎಲ್ಲ ನಾಗರಿಕರ ಮೇಲಿದೆ. ಅದರಲ್ಲೂ, ಸಂವಿಧಾನದ ಮುಖ್ಯ ಅಂಗವಾದ ಶಾಸಕಾಂಗದ ಮೇಲಿದೆ. ಆದರೆ ಕರ್ನಾಟಕದಲ್ಲಿ ಇದೇ ವೇಳೆ ವಿಚಿತ್ರ ಬೆಳವಣಿಗೆಯೊಂದು ನಡೆದಿದೆ. ಇಬ್ಬರು ಮಾಜಿ ಮುಖ್ಯಮಂತ್ರಿಗಳು ದೇಶ, ಅಭಿವೃದ್ಧಿ ವಿಚಾರಗಳನ್ನು ಬದಿಗಿಟ್ಟು ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು ತೆಗಳಲು ಪಣ ತೊಟ್ಟು ನಿಂತಿದ್ದಾರೆ.

ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ, ‘ಆರೆಸ್ಸೆಸ್, ಬಿಜೆಪಿಯವರಿಗೆ ಮನುಷ್ಯತ್ವವೇ ಇಲ್ಲ. ತಾಲಿಬಾನಿಗಳಂತೆ ವರ್ತಿಸುತ್ತಾರೆ. ಪ್ರಜಾಪ್ರಭುತ್ವ ಮತ್ತು ಸಂವಿಧಾನದಲ್ಲಿ ಯಾರಿಗೆ ನಂಬಿಕೆ ಇಲ್ಲವೋ ಅವರನ್ನು ತಾಲಿಬಾನಿಗಳೆಂದು ಕರೆಯುತ್ತಾರೆ. ಬಿಜೆಪಿ, ಆರೆಸ್ಸೆಸ್​ನವರಿಗೆ ದೇಶದ ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಇಲ್ಲ. ಹೀಗಾಗಿ ಅವರನ್ನು ತಾಲಿಬಾನಿ ಸಂಸ್ಕೃತಿಯವರೆಂದು ಕರೆಯುತ್ತೇವೆ’ ಎಂದು ಹೇಳಿದರು.ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ‘ಆರೆಸ್ಸೆಸ್ ದೇಶವನ್ನು ಮನುಸ್ಮೃತಿ ಯುಗಕ್ಕೆ ತೆಗೆದುಕೊಂಡು ಹೋಗುವ ಅಜೆಂಡಾ ಹೊಂದಿದೆ. ಐಎಎಸ್, ಐಪಿಎಸ್ ಮೊದಲಾದ ನಾಗರಿಕ ಸೇವೆಗಳಲ್ಲಿ 4 ಸಾವಿರ ಜನ ಆರೆಸ್ಸೆಸ್​ನವರಿದ್ದಾರೆ’ ಎಂದಿದ್ದಾರೆ.

ಇಬ್ಬರ ಹೇಳಿಕೆಗಳನ್ನು ಪಕ್ಕಕ್ಕಿಟ್ಟು, ಆರೆಸ್ಸೆಸ್ ಹಾಗೂ ಅದರಿಂದ ಪ್ರೇರಿತವಾದ ಕಾರ್ಯಕರ್ತರು ಈ ದೇಶಕ್ಕೆ ಏನು ಮಾಡಿದ್ದಾರೆ ಎಂಬುದನ್ನು ನೋಡೋಣ. ರಾಷ್ಟ್ರೀಯ ಸ್ವಯಂಸೇವಕ ಸಂಘದ 60 ಸಾವಿರಕ್ಕೂ ಹೆಚ್ಚು ಶಾಖೆಗಳು, 90 ಲಕ್ಷಕ್ಕೂ ಹೆಚ್ಚು ಸ್ವಯಂಸೇವಕರು, ಕೋಟ್ಯಂತರ ಕಾರ್ಯಕರ್ತರು ದೇಶಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಅದೆಷ್ಟೋ ಜನ ನಿಸ್ವಾರ್ಥಿಗಳು ತಮ್ಮ ಜೀವನವನ್ನೇ ರಾಷ್ಟ್ರಸೇವೆಗೆ ನೀಡಿದ್ದಾರೆ. ಸಂಘಕಾರ್ಯದ ವಿಸ್ತಾರದ ಜತೆಗೆ ಸಮಾಜದ ಎಲ್ಲ ಕ್ಷೇತ್ರಗಳಲ್ಲೂ ಅಭಿವೃದ್ಧಿ-ಏಕತೆ ಸಾಧಿಸುವ ಉದ್ದೇಶದಿಂದ ಪರಿವಾರ ಸಂಘಟನೆಗಳು ಆರಂಭಗೊಂಡವು. 1949ರಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ), 1964ರಲ್ಲಿ ವಿಶ್ವ ಹಿಂದೂ ಪರಿಷತ್, ಭಾರತೀಯ ಮಜ್ದೂರ್ ಸಂಘ, ಭಾರತೀಯ ಕಿಸಾನ್ ಸಂಘ, ವನವಾಸಿ ಕಲ್ಯಾಣ ಆಶ್ರಮ, ಸಂಸ್ಕಾರ ಭಾರತಿ, ಸಹಕಾರ ಭಾರತಿ, ಸಂಸ್ಕೃತ ಭಾರತಿ, ಇತಿಹಾಸ ಸಂಕಲನ ಸಮಿತಿ, ರಾಷ್ಟ್ರೀಯ ಸೇವಾ ಭಾರತಿ, ವಿದ್ಯಾಭಾರತಿ... ಹೀಗೆ ಆರೆಸ್ಸೆಸ್​ನಿಂದ ಪ್ರೇರಣೆ ಪಡೆದು ಸೇವೆಯಿಂದ ಕಾರ್ವಿುಕರವರೆಗೆ, ಧರ್ಮದಿಂದ ಸಾಮರಸ್ಯದವರೆಗೆ ಎಲ್ಲ ಕ್ಷೇತ್ರಗಳಲ್ಲೂ ಕೆಲಸ ನಡೆಯುತ್ತಿದೆ.

ದೇಶಕ್ಕೆ ಆಪತ್ತು ಒದಗಿಬಂದ ಯಾವುದೇ ಸಂದರ್ಭದಲ್ಲಿ ಸ್ವಯಂಸೇವಕರು ಜೀವದ ಹಂಗನ್ನು ತೊರೆದು ಕೆಲಸ ಮಾಡಿದ್ದಾರೆ. ದೇಶದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅವರಿಗೆ ಆರೆಸ್ಸೆಸ್​ನೊಂದಿಗೆ ಸೈದ್ಧಾಂತಿಕ ಭಿನ್ನಾಭಿಪ್ರಾಯವಿತ್ತು. 1962ರಲ್ಲಿ ಭಾರತದ ವಿರುದ್ಧ ಚೀನಾ ದಾಳಿ ನಡೆಸಿತು. ನೆಹರು ಅವರಿಗೆ ಚೀನಾದ ಕುತಂತ್ರ ಅರ್ಥವಾಗದೆ, ಸೇನೆ ನೀಡಿದ್ದ ಎಚ್ಚರಿಕೆಯನ್ನೂ ಕಡೆಗಣಿಸಿದ್ದರಿಂದ ಭಾರಿ ಹಿನ್ನಡೆ ಅನುಭವಿಸುವಂತಾಯಿತು. ಈ ಸಂದರ್ಭದಲ್ಲಿ ದೇಶದ ಸೈನಿಕರಿಗೆ ಅಗತ್ಯ ಅನೇಕ ಸೇವೆಗಳನ್ನು ಮಾಡಿಕೊಟ್ಟವರು ಆರೆಸ್ಸೆಸ್ ಸ್ವಯಂಸೇವಕರು. ಸೈದ್ಧಾಂತಿಕ ಭಿನ್ನಾಭಿಪ್ರಾಯ ಇದ್ದಾಗ್ಯೂ, ಸ್ವಯಂಸೇವಕರ ಸೇವೆಯನ್ನು ನೆಹರು ಗೌರವಿಸಿದರು. 1963ರಲ್ಲಿ ಸಂಘಕ್ಕೆ ಗಣರಾಜ್ಯೋತ್ಸವ ಪಥಸಂಚಲನದಲ್ಲಿ ಭಾಗವಹಿಸಲು ಆಹ್ವಾನ ನೀಡಲಾಯಿತು.

ದೇಶದ ಯಾವುದೇ ಮೂಲೆಯಲ್ಲಿ ಪ್ರಾಕೃತಿಕ ವಿಕೋಪ, ರೈಲು, ವಿಮಾನ ದುರ್ಘಟನೆ ಸಂಭವಿಸಿದಾಗ ಸ್ವಯಂಸೇವಕರು ಮೊದಲು ಆ ಸ್ಥಳಕ್ಕೆ ತೆರಳುತ್ತಾರೆ. ಕಛ್ ಭೂಕಂಪನದಿಂದ ಮಂಗಳೂರು ಬಜ್ಪೆ ವಿಮಾನ ದುರಂತದವರೆಗೆ, ಉತ್ತರಾಖಂಡ ಜಲಪ್ರವಾಹದಿಂದ ಉತ್ತರ ಕರ್ನಾಟಕದ ನೆರೆ ಪರಿಸ್ಥಿತಿ ನಿಭಾಯಿಸುವವರೆಗೆ ಸ್ವಯಂಸೇವಕರದ್ದು ಒಂದೇ ಸೇವಾ ಮನೋಭಾವ. ಯಾವುದೇ ಪ್ರಚಾರ, ಪ್ರಖ್ಯಾತಿ ಬಯಸದೆ, ಧರ್ಮ-ನಂಬಿಕೆಯನ್ನು ಗಣನೆಗೆ ತೆಗೆದುಕೊಳ್ಳದೆ, ಅವಶ್ಯಕತೆ ಇರುವ ಎಲ್ಲರಿಗೂ ನೆರವಾಗಬೇಕು ಎಂಬುದೊಂದೇ ಆ ಧ್ಯೆಯ.

ಸಂಕಷ್ಟ ಬಂದಾಗ ಮಾತ್ರವೇ ಸೇವೆ ಮಾಡುವುದಾದರೆ ಅದನ್ನು ವಿಕೋಪ ನಿರ್ವಹಣೆ ಎನ್ನಲಾಗುತ್ತದೆ. ಉಳಿದಂತೆ ಸಮಾಜದಲ್ಲಿ ಸ್ವಾವಲಂಬನೆ, ಪರಸ್ಪರ ಸಹಕಾರ, ಸಾಮರಸ್ಯ ಮೂಡಿಸಲು ಲಕ್ಷಾಂತರ ಸೇವಾ ಚಟುವಟಿಕೆಗಳನ್ನು ಸಂಘಪ್ರೇರಿತ ಸಂಘಟನೆಗಳು ನಿರಂತರವಾಗಿ ಮಾಡಿಕೊಂಡು ಬರುತ್ತಿವೆ. ವ್ಯಕ್ತಿಗಳಲ್ಲಿ ದೇಶಭಕ್ತಿಯನ್ನು ಜಾಗೃತಗೊಳಿಸುವ ಮೂಲಕ ಸಾಮಾಜಿಕ ಪರಿವರ್ತನೆ ತರಬೇಕು ಎಂಬ ಕಾರಣಕ್ಕೆ 60ರ ದಶಕದಲ್ಲಿ ಬೆಂಗಳೂರಿನಲ್ಲಿ ರಾಷ್ಟ್ರೆೊತ್ಥಾನ ಪರಿಷತ್ ಆರಂಭವಾಯಿತು. ಶಿಕ್ಷಣ, ಆರೋಗ್ಯ, ಗೋಸೇವೆ, ಕೊಳೆಗೇರಿ ಪ್ರದೇಶಗಳ ಜನರ ಉನ್ನತಿ ಸೇರಿ ಇನ್ನೂ ಅನೇಕ ಕ್ಷೇತ್ರಗಳಲ್ಲಿ ರಾಷ್ಟ್ರೆೊತ್ಥಾನ ಪರಿಷತ್ ಕೆಲಸ ಮಾಡುತ್ತಿದೆ. ಕಾರ್ಯಕರ್ತರು ಅಸಂಖ್ಯ ಮಹಿಳೆಯರಿಗೆ ವಿವಿಧ ಸ್ವಾವಲಂಬನೆಯ ತರಬೇತಿ ನೀಡಿದ್ದಾರೆ. ಅಪಘಾತ, ಶಸ್ತ್ರಚಿಕಿತ್ಸೆ ಸಂದರ್ಭದಲ್ಲಿ ಅತ್ಯಾವಶ್ಯಕವಾದ ರಕ್ತಪೂರೈಕೆ ಕಾರ್ಯವನ್ನು ರಕ್ತನಿಧಿ ಮೂಲಕ ಮಾಡಲಾಗುತ್ತಿದೆ.

ಇಲ್ಲಿಯವರೆಗೆ 4,567 ರಕ್ತದಾನ ಕ್ಯಾಂಪ್​ಗಳನ್ನು ಸಂಸ್ಥೆ ನಡೆಸಿದ್ದು, 4.13 ಲಕ್ಷಕ್ಕೂ ಹೆಚ್ಚು ಜನರು ಸ್ವಯಂಪ್ರೇರಿತರಾಗಿ ರಕ್ತ ನೀಡಿದ್ದಾರೆ. 8.3 ಲಕ್ಷ ಯೂನಿಟ್ ರಕ್ತವನ್ನು 3.1 ಲಕ್ಷ ಜನರಿಗೆ ಕಡಿಮೆ ದರದಲ್ಲಿ ವಿತರಣೆ ಮಾಡಲಾಗಿದೆ. ಶಿಕ್ಷಣ ಕ್ಷೇತ್ರದಲ್ಲಿ ಬದಲಾವಣೆ ತರುವ ನಿಟ್ಟಿನಲ್ಲಿ ರಾಜ್ಯ ಪಠ್ಯಕ್ರಮದ 17 ಹಾಗೂ ಸಿಬಿಎಸ್​ಇ ಪಠ್ಯದ 6 ಶಾಲೆಗಳನ್ನು ನಡೆಸುತ್ತಿದೆ. ಅನೇಕ ರಾಷ್ಟ್ರೀಯ ಜಾಗೃತಿ ಸಾಹಿತ್ಯ ಮುದ್ರಣದಲ್ಲಿ ಸಂಸ್ಥೆ ತೊಡಗಿಸಿಕೊಂಡಿದೆ. ಇದೇ ರೀತಿ ದೇಶಾದ್ಯಂತ ವಿವಿಧ ರಾಜ್ಯಗಳಲ್ಲಿ ಸ್ಥಳೀಯ ಅವಶ್ಯಕತೆಗೆ ಅನುಗುಣವಾಗಿ ಸೇವಾ ಕಾರ್ಯಗಳು ನಡೆಯುತ್ತಿವೆ.

ಕುಮಾರಸ್ವಾಮಿ ಹಾಗೂ ಸಿದ್ಧರಾಮಯ್ಯ ಅವರು ಮಾತೆತ್ತಿದರೆ ‘ಪ್ರಜಾಪ್ರಭುತ್ವ’ ಪದವನ್ನು ಬಳಸಿ ಆರೆಸ್ಸೆಸ್​ನ್ನು ನಿಂದಿಸುತ್ತಾರೆ. ಆದರೆ ಇಂದಿರಾ ಗಾಂಧಿ ತುರ್ತಪರಿಸ್ಥಿತಿ ಹೇರಿದಾಗ ದೇಶದಲ್ಲಿ ಪ್ರಜಾಪ್ರಭುತ್ವ ಮರುಸ್ಥಾಪನೆ ಆಗಬೇಕು ಎಂದು ಹೋರಾಡಿದವರು ಆರೆಸ್ಸೆಸ್ ಸ್ವಯಂಸೇವಕರು. ಆರೆಸ್ಸೆಸ್​ನ್ನು ರಾಜಕೀಯ ಕಾರಣಗಳಿಗಾಗಿ ಮೂರು ಬಾರಿ ನಿಷೇಧಿಸಲಾಯಿತು. ಮೊದಲ ಬಾರಿಗೆ 1948ರಲ್ಲಿ. ನಾಥೂರಾಮ್ ಗೋಡ್ಸೆ ಆರೆಸ್ಸೆಸ್ ಜತೆ ಸೇರಿ ಗಾಂಧಿ ಹತ್ಯೆಯ ಕೃತ್ಯ ಎಸಗಿದ್ದಾನೆ ಎಂಬ ಆರೋಪ ಹೊರಿಸಲಾಯಿತು. ಆಗಿನ ಸರಸಂಘಚಾಲಕ ಗೋಳ್ವಲಕರ್ ಗುರೂಜಿ ಮತ್ತು 17 ಸಾವಿರ ಸ್ವಯಂಸೇವಕರನ್ನು ಬಂಧಿಸಲಾಯಿತು. ಸಂಘದ ಮೇಲಿನ ನಿಷೇಧದಲ್ಲಿ ಯಾವುದೇ ಹುರುಳಿಲ್ಲ ಎಂಬುದು ನೆಹರು ಸರ್ಕಾರದ ಅರಿವಿಗೆ ಬಂತು. ಕೊನೆಗೆ 1949ರಲ್ಲಿ ಸಂಘದ ಸಂವಿಧಾನವನ್ನು ರಚಿಸಲಾಯಿತು ಮತ್ತು ಜುಲೈ 12ರಂದು ಸರ್ಕಾರ ಸಂಘದ ಮೇಲಿನ ನಿಷೇಧವನ್ನು ಹಿಂಪಡೆಯಿತು.

ನಂತರದಲ್ಲಿ, ವಿವಿಧ ರಾಜಕೀಯ, ಸಾಮಾಜಿಕ ಸಂಘಟನೆಗಳ ಜತೆಗೆ ತುರ್ತಪರಿಸ್ಥಿತಿ ವೇಳೆ ಆರೆಸ್ಸೆಸ್​ನ್ನೂ ನಿಷೇಧಿಸಲಾಯಿತು. ನಿರಂತರ ಭೂಗತ ಚಟುವಟಿಕೆಗಳ ಮೂಲಕ ಜನಜಾಗೃತಿ ಮುಂದುವರಿಸಿದ ಪರಿಣಾಮ ಈ ಕತ್ತಲೆಯ ಯುಗವೂ ಕಳೆಯಿತು. 1992ರ ಡಿಸೆಂಬರ್ 6ರಂದು ರಾಮ ಜನ್ಮಭೂಮಿಯಾದ ಅಯೋಧ್ಯೆಯಲ್ಲಿನ ವಿವಾದಿತ ಕಟ್ಟಡ ಧ್ವಂಸಗೊಂಡಾಗ ಮೂರನೇ ಬಾರಿ ಸಂಘವನ್ನು ನಿಷೇಧಿಸಲಾಯಿತು. ಈ ನಿಷೇಧಕ್ಕೂ ಯಾವುದೇ ಸಾಕ್ಷಿ ದೊರಕದಿದ್ದಾಗ, ಹಿಂಪಡೆಯಲಾಯಿತು.

ಪ್ರತಿ ಬಾರಿ ಸಂಘವನ್ನು ನಿಷೇಧಿಸಿದಾಗಲೂ ಅದರಿಂದ ಹೊರಬರಲು ಸಂಘ ಅನುಸರಿಸಿದ್ದು ಸಾಂವಿಧಾನಿಕ ಮಾರ್ಗವನ್ನೇ. ಎಂದಿಗೂ ನಕ್ಸಲರ ರೀತಿ ಸರ್ಕಾರದ ವಿರುದ್ಧ ಸಶಸ್ತ್ರ ದಂಗೆಯೋ, ಇಂದಿನ ಅನೇಕ ನಗರ ನಕ್ಸಲರಂತೆ ಅಂತಾರಾಷ್ಟ್ರೀಯ ಪಿತೂರಿಯನ್ನೋ ಮಾಡುವ ಆಲೋಚನೆಯೇ ಬರಲಿಲ್ಲ. ಸಂಘಟನೆಯನ್ನು ತೆಗಳಲು ಪ್ರಜಾಪ್ರಭುತ್ವ, ಸಂವಿಧಾನ, ವಾಕ್ ಸ್ವಾತಂತ್ರ್ಯದ ಶರಣು ಹೋಗುವವರು ಈ ಅಂಶಗಳನ್ನು ತಿಳಿದಿರಬೇಕು. ಇನ್ನು, ಕುಮಾರಸ್ವಾಮಿ ಅವರು ಹೇಳಿದಂತೆ ಅಖಿಲ ಭಾರತೀಯ ಸೇವೆಗಳಿಗೆ ಆರೆಸ್ಸೆಸ್ ಸ್ವಯಂಸೇವಕರನ್ನು ತೂರಿಸುತ್ತಿದೆ ಎಂಬ ವಿಚಾರವನ್ನು ನೋಡೋಣ. ಈ ವಿಚಾರದಲ್ಲಿ ಎಷ್ಟು ಸತ್ಯಾಂಶವಿದೆ ಎಂಬುದನ್ನು ಹುಡುಕಲು ಹೋಗುವುದಕ್ಕಿಂತಲೂ, ಇಂತಹ ಪ್ರಯತ್ನದಿಂದ ಸಮಾಜಕ್ಕೆ ಲಾಭವೇ ಹೊರತು, ನಷ್ಟವಲ್ಲ ಎಂಬುದನ್ನು ಅರಿಯಬೇಕು. ಈ ಮೇಲೆ ತಿಳಿಸಿದಂತೆ ದೇಶದ ವಿವಿಧ ಸಂಕಷ್ಟದಲ್ಲಿ ಸೇವೆಗ ತೆರಳುವ ಸ್ವಯಂಸೇವಕರು, ಸಮಾಜ ಪರಿವರ್ತನೆಯಲ್ಲಿ ಮುಂಚೂಣಿಯಲ್ಲಿರುವವರು ನಾಗರಿಕ ಸೇವೆಗಳಿಗೆ ತೆರಳಿದರೆ ತಪ್ಪೇನು? ಅಷ್ಟಕ್ಕೂ ನಾಗರಿಕ ಸೇವೆಯಲ್ಲಿ ತೊಡಗುವವರಲ್ಲಿ ದೇಶಭಕ್ತಿ ಕಡಿಮೆ ಆಗಿದ್ದರಿಂದ ತಾನೇ ಭ್ರಷ್ಟಾಚಾರ ತಾಂಡವವಾಡುತ್ತಿರುವುದು? ದೇಶಭಕ್ತರನ್ನು ನಾಗರಿಕ ಸೇವೆಗಳಿಗೆ (ಯುಪಿಎಸ್​ಸಿ) ಪ್ರೇರೇಪಿಸುವ ಪ್ರಯತ್ನ ನಡೆಯುತ್ತಿದೆ ಎಂಬುದು ತಿಳಿದರೆ ಸಂತಸ ಪಡುವವರಲ್ಲಿ ಮೊದಲಿಗರಾಗಬೇಕಾದ ಕುಮಾರಸ್ವಾಮಿಯವರು ಅದೇನೋ ಮಹಾಪರಾಧ ಎಂಬಂತೆ ಬಿಂಬಿಸುತ್ತಿರುವುದು ನಗೆಪಾಟಲಿಗೆ ಈಡಾಗಿದೆ. 2025ಕ್ಕೆ ಶತಮಾನೋತ್ಸವ ಆಚರಿಸಿಕೊಳ್ಳುತ್ತಿರುವ ವಿಶ್ವದ ಅತಿ ದೊಡ್ಡ ಸ್ವಯಂ ಸೇವಾ ಸಂಘಟನೆ ಆರೆಸ್ಸೆಸ್ ಬಗ್ಗೆ ಪೂರ್ವಗ್ರಹಪೀಡಿತರಾಗದೇ ಮುಕ್ತ ಮನಸ್ಸಿನಿಂದ ಅವಲೋಕಿಸುವ ಮನಸ್ಥಿತಿ ಬೆಳಸಿಕೊಳ್ಳಬೇಕು.

ಇಷ್ಟೆಲ್ಲ ವಿಚಾರ ಇಬ್ಬರೂ ಮಾಜಿ ಮುಖ್ಯಮಂತ್ರಿಗಳಿಗೆ ತಿಳಿದಿಲ್ಲ ಎಂದಿಲ್ಲ. ಚುನಾವಣೆ ಎಂಬ ಅಲ್ಪಕಾಲದ ಗುರಿಯಲ್ಲಿ ಅಲ್ಪಸಂಖ್ಯಾತರ ವೋಟು ಕಾಂಗ್ರೆಸ್​ಗೆ ಹೋಗುತ್ತದೆಯೇ ಅಥವಾ ಜೆಡಿಎಸ್​ಗೆ ಬೀಳುತ್ತದೆಯೇ ಎಂಬ ಸ್ಪರ್ಧೆ ಅಷ್ಟೆ. ಆರೆಸ್ಸೆಸ್ ವಿರುದ್ಧ ಮಾತನಾಡಿದಷ್ಟೂ ಮುಸ್ಲಿಂ ಸಮುದಾಯ ತಮ್ಮ ಪರ ದೃಢವಾಗಿ ನಿಲ್ಲುತ್ತದೆ ಎಂಬುದು ಸಿದ್ಧರಾಮಯ್ಯ ಲೆಕ್ಕಾಚಾರ. ಕಳೆದ ಚುನಾವಣೆಯಲ್ಲಿ ಸಂಪೂರ್ಣ ಕೈತಪ್ಪಿದ ಮುಸ್ಲಿಂ ಮತಗಳನ್ನು ಮತ್ತೆ ತಮ್ಮತ್ತ ಸೆಳೆದುಕೊಳ್ಳಬೇಕು ಎನ್ನುವುದು ಕುಮಾರಸ್ವಾಮಿಯವರ ಆಲೋಚನೆ. ಮುಸ್ಲಿಂ ಸಮಾಜವನ್ನು ಒಂದು ಮತಬ್ಯಾಂಕಾಗಿ ಬಳಸಿಕೊಳ್ಳುವ ಷಡ್ಯಂತ್ರದ ಭಾಗವನ್ನು ಇಬ್ಬರೂ ಮುನ್ನಡೆಸಿದ್ದಾರೆ. ಆದರೆ ಇಂತಹ ಕ್ಷುಲ್ಲಕ ರಾಜಕಾರಣದಲ್ಲಿ ಆರೆಸ್ಸೆಸ್​ನಂಥ ಸಂಘಟನೆಯನ್ನು ವಿನಾಕಾರಣ ದೂರುವುದು ಭಾರತಕ್ಕೆ ಮಾಡುವ ಅಪಮಾನವಲ್ಲದೇ ಇನ್ನೇನೂ ಅಲ್ಲ.

(ಲೇಖಕರು ಬಿಎಂಟಿಸಿ ಉಪಾಧ್ಯಕ್ಷರು, ಬಿಜೆಪಿ ಮುಖಂಡರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net