ಅನಿಸಿಕೆ |ಚೀನಾದ ನಡು ಬಗ್ಗಿಸಿದ ಪ್ರಧಾನಿ ಮೋದಿ ಸಂಕಲ್ಪ

modi
Published on
ಮ್ಯಾಪ್ (ನಕ್ಷೆ) ಇರಲಿ, ಆಪ್ ಇರಲಿ; ಯಾವುದೇ ಆದರೂ ಹದ್ದು ಮೀರಿದರೆ ಅದಕ್ಕೆ ತಕ್ಕ ಶಾಸ್ತಿ ಮಾಡಲಾಗುವುದೆಂಬ ಪ್ರಬಲ ಸಂದೇಶವನ್ನು ಪ್ರಧಾನಿ ನರೇಂದ್ರ ಮೋದಿ ಚೀನಾಕ್ಕೆ ರವಾನಿಸಿದ್ದಾರೆ. ಯಾಕೆಂದರೆ ಇದು ನವ ಭಾರತ. ರಾಷ್ಟ್ರವಿರೋಧಿಗಳಿಗೆ ಹೇಗೆ ಮರ್ವಘಾತ ನೀಡಬೇಕೆಂಬುದು ಭಾರತ ಸರ್ಕಾರಕ್ಕೆ ಗೊತ್ತು.

ಮೋದಿ ಲಡಾಖ್​ಗೆ ಹಠಾತ್ ಭೇಟಿ ನೀಡಿದಾಗ ಆವಾಕ್ಕಾದ ಚೀನಾ, ಬದಲಾದ ಭಾರತದ ಕುರಿತು ಚಿಂತಿಸತೊಡಗಿತು. ಡೊಕ್ಲಾಮ್ ಇರಲಿ, ಗಲ್ವಾನ್ ಕಣಿವೆಯೇ ಇರಲಿ; ಭಾರತ ಬದಲಾಗಿದೆ ಎಂಬುದನ್ನು ಅದು ಮನವರಿಕೆ ಮಾಡಿಕೊಂಡಿತು. ಗಲ್ವಾನ್ ಕಣಿವೆಯ ಪಾಂಗಾಂಗ್ ಸರೋವರ ಮತ್ತು ಗೊಗ್ರಾ-ಹಾಟ್ ಸ್ಟ್ರಿಂಗ್​ಗಳಲ್ಲಿನ ಎರಡು ತಿಂಗಳ ಬಿಕ್ಕಟ್ಟಿನ ನಂತರ, ಪೂರ್ವ ಲಡಾಖ್​ನ ವಾಸ್ತವ ನಿಯಂತ್ರಣ ರೇಖೆಯ (ಎಲ್​ಎಸಿ) ಬಿಗುವಿನ ಕೇಂದ್ರಗಳಿಂದ ಭಾರತ ಮತ್ತು ಚೀನಾ ಪಡೆಗಳು ಹಿಂದೆ ಸರಿದಿರುವ ಮಹತ್ವದ ವಿದ್ಯಮಾನ ನಡೆದಿದೆ.

ಚೀನಿ ಯೋಧರು ಡೇರೆಗಳನ್ನು ತೆಗೆದು ಪಾಂಗಾಂಗ್ ಸರೋವರದ ಫಿಂಗರ್ 5ನತ್ತ ಸಾಗುತ್ತಿರುವುದು ಕಂಡು ಬಂದಿದೆ. ಗಲ್ವಾನ್ ಕಣಿವೆಯಲ್ಲಿ ಜೂನ್ 15ರಂದು ಭೀಷಣ ಘರ್ಷಣೆ ನಡೆದ ಸ್ಥಳವಾದ ಗಸ್ತು ಪಾಯಿಂಟ್ 14ರಲ್ಲಿ ‘ಬಫರ್ ವಲಯ’ ರಚಿಸಲಾಗಿದೆ. ಗಸ್ತು ಪಾಯಿಂಟ್ 15 ಮತ್ತು 17ಎ ನಲ್ಲಿ ಕೂಡ ಸೈನಿಕರು ಹಿಂದೆ ಸರಿಯುವ ಪ್ರಕ್ರಿಯೆ ಜಾರಿಯಲ್ಲಿದೆ.

ಇದೆಲ್ಲ, ಚೀನಿ ಪಡೆಗಳನ್ನು ಭಾರತೀಯ ಪಡೆಗಳು ಅಷ್ಟೇ ಸಶಕ್ತವಾಗಿ ಎದುರಿಸಬಲ್ಲವು ಎಂಬ ಪ್ರಧಾನಿ ನರೇಂದ್ರ ಮೋದಿಯವರ ಉಕ್ಕಿನ ಸಂಕಲ್ಪಕ್ಕೆ ಪ್ರತಿಫಲ ಸಿಕ್ಕಿರುವುದರ ಪ್ರತೀಕವಾಗಿದೆ. ಕಳೆದ ಎರಡು ತಿಂಗಳಿಂದ ತಂಟೆ, ತಕರಾರು ತೋರುತ್ತಿದ್ದ ಚೀನಾ ಈಗ ತಣ್ಣಗಾಗಿದೆ. ಅತಿಕ್ರಮಣದ ಮೂಲಕ ವಿವಾದ ಎಬ್ಬಿಸಿದ್ದ ಚೀನಾದ ಕ್ರಮಕ್ಕೆ ಭಾರತ ಪೂರ್ಣವಿರಾಮ ಹಾಕಿದೆ ಎನ್ನುವುದು ಸ್ಪಷ್ಟವಾಗಿದೆ.

ಆರು ದಶಕಗಳಲ್ಲಿ ಗಟ್ಟಿ ಎದಿರೇಟು: ಚೀನಾದ ಸೇನೆ ಕಳೆದ ಆರು ದಶಕಗಳಲ್ಲಿ ಭಾರತದಿಂದ ಇಷ್ಟು ಬಲವಾದ ಎದಿರೇಟನ್ನು ಎಂದೂ ಅನುಭವಿಸಿರಲಿಲ್ಲ. ‘ಭಾರತ ಶಾಂತಿ ಬಯಸುತ್ತದೆ. ಆದರೆ ಪ್ರಾದೇಶಿಕ ಸಮಗ್ರತೆ ಮತ್ತು ಸಾರ್ವಭೌಮತ್ವಕ್ಕೆ ಧಕ್ಕೆಯಾದರೆ ಸುಮ್ಮನಿರುವುದಿಲ್ಲ. ತಕ್ಕ ಪ್ರತ್ಯುತ್ತರ ನೀಡುತ್ತದೆ’ ಎಂಬ ಮೋದಿ ಸಂದೇಶ ಸರಿಯಾಗಿಯೇ ಕೆಲಸ ಮಾಡಿದೆ.

ವೈರಿ ರಾಷ್ಟ್ರ ಶಾಂತಿಯನ್ನು ಒಪ್ಪಿಕೊಳ್ಳುವಂತೆ ಮಾಡಲು ಭಾರತ ತನ್ನ ವ್ಯೂಹಾತ್ಮಕ, ರಾಜತಾಂತ್ರಿಕ ಮತ್ತು ಆರ್ಥಿಕ ಶಕ್ತಿಯನ್ನು ಹೇಗೆ ಬಳಸಿಕೊಳ್ಳಬಹುದು ಎನ್ನುವುದನ್ನು ಮೋದಿ ಜಗತ್ತಿಗೆ ತೋರಿಸಿ ಕೊಟ್ಟಿದ್ದಾರೆ. 130 ಕೋಟಿ ಜನರ ನಾಯಕ ಗಡಿ ಭಾಗಕ್ಕೆ ಹೋಗಿ ಯೋಧರಲ್ಲಿ ಸ್ಥೈರ್ಯ ತುಂಬಿದ್ದನ್ನು ಇಡೀ ಜಗತ್ತು ನೋಡಿದೆ. ಮೋದಿ ತಮ್ಮ ಭಾಷಣದಲ್ಲಿ ಚೀನಾದ ‘ವಿಸ್ತರಣಾವಾದಿ’ ತಂತ್ರಗಳ ವಿರುಧ ಖಡಕ್ ಎಚ್ಚರಿಕೆ ನೀಡಿದ್ದರು.

ಈ ಹಿನ್ನೆಲೆಯಲ್ಲಿ, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಮತ್ತು ಚೀನಾದ ವಿದೇಶಾಂಗ ಸಚಿವ ವಾಂಗ್ ಯೀ ನಡುವೆ ಭಾನುವಾರ ನಡೆದ ಮುಕ್ತ ಹಾಗೂ ಆಳವಾದ ಸಮಾಲೋಚನೆ ಸೈನಿಕರನ್ನು ವಾಪಸ್ ಕರೆಸಿಕೊಳ್ಳುವ ಪ್ರಕ್ರಿಯೆಗೆ ಚಾಲನೆ ನೀಡಿತು. ಸಮಸ್ಯಾತ್ಮಕ ಸ್ಥಳಗಳಲ್ಲಿ ಪಡೆಗಳನ್ನು ಕಡಿಮೆ ಮಾಡಲು, ಪಡೆಗಳನ್ನು ಹಿಂತೆಗೆಯಲು ಹಾಗೂ ಬಿಕ್ಕಟ್ಟಿನ ಸಂದರ್ಭದಲ್ಲಿ ನಿರ್ವಿುಸಲಾದ ಶಿಬಿರಗಳನ್ನು ಕೆಡವಲು ಉಭಯ ಕಡೆಯವರು ಅಂತಿಮವಾಗಿ ಒಪ್ಪಿಕೊಂಡರು.

ಸಂಘರ್ಷದ ಕೇಂದ್ರಗಳಲ್ಲಿನ ಸೈನಿಕರನ್ನು ವಾಪಸ್ ಕರೆಸಿಕೊಳ್ಳುವ ಮೊದಲ ಹಂತದ ಯೋಜನೆ ಬಫರ್ ವಲಯದ ರಚನೆಯೊಂದಿಗೆ ಆರಂಭವಾಗಿದ್ದು ಸೈನಿಕರನ್ನು ಸಂಪೂರ್ಣವಾಗಿ ವಾಪಸ್ ಕರೆಸಿಕೊಳ್ಳುವ ಕಾರ್ಯ ಈ ವರ್ಷ ಸೆಪ್ಟೆಂಬರ್ ಅಥವಾ ಅಕ್ಟೋಬರ್​ನಲ್ಲಿ ಮುಗಿಯಲಿದೆ.

ಸ್ವಾವಲಂಬಿ ಭಾರತದ ‘ಡಿಜಿಟಲ್ ಸ್ಟ್ರೈಕ್’: ‘ಆತ್ಮನಿರ್ಭರ’ (ಸ್ವಾವಲಂಬಿ) ಭಾರತ ನಿರ್ಮಾಣ ಕುರಿತು ಮೋದಿ ನೀಡಿದ ಘೋಷಣೆ ಚೀನಾದ ಮೇಲೆ ಅಪಾರ ಆರ್ಥಿಕ ಒತ್ತಡ ಉಂಟು ಮಾಡಿದೆ. 59 ಸಾಮಾಜಿಕ ಮಾಧ್ಯಮ ಆಪ್​ಗಳ ಮೂಲಕ ಹಾಗೂ ಸ್ಟಾರ್ಟಪ್​ಗಳಲ್ಲಿ ಹೂಡಿಕೆ ಮಾಡಿ ಅಪಾರ ಲಾಭ ಮಾಡಿಕೊಳ್ಳುತ್ತಿದ್ದ ಚೀನಾಕ್ಕೆ ಈ ಘೋಷಣೆ ದೊಡ್ಡ ಹೊಡೆತ ನೀಡಿದೆ.

ಚೀನಿ ವಸ್ತುಗಳ ಬಹಿಷ್ಕಾರಕ್ಕೆ ನೀಡಿದ ರಾಷ್ಟ್ರವ್ಯಾಪಿ ಕರೆಯ ಪರಿಣಾಮವಾಗಿ, ಉದ್ವಿಗ್ನತೆ ಕಡಿಮೆ ಮಾಡಿ ಶಾಂತಿ ಮಾತುಕತೆ ಆರಂಭಿಸುವಂತೆ ಚೀನಿ ಕಂಪನಿಗಳು ತಮ್ಮ ದೇಶದ ಸರ್ಕಾರದ ಮೇಲೆ ಒತ್ತಡ ಹೇರಿದವು. ಭಾರತ ಸರ್ಕಾರದ ಕ್ರಮದ ಫಲವಾಗಿ ಚೀನಿ ಕಂಪನಿಗಳು 50 ಬಿಲಿಯ ಡಾಲರ್ ನಷ್ಟ ಅನುಭವಿಸುವ ಆತಂಕ ಎದುರಿಸುತ್ತಿವೆ. ಭಾರತದಲ್ಲಿ ವ್ಯವಹಾರ ವಿಸ್ತರಿಸುವ ಹಾಗೂ ಹೂಡಿಕೆ ಹೆಚ್ಚಿಸುವ ಚೀನಿ ಕಂಪನಿಗಳ ಎಲ್ಲ ಯೋಜನೆಗಳು ಒಂದೇ ಒಂದು ‘ಡಿಜಿಟಲ್ ಸ್ಟ್ರೈಕ್’ನಿಂದ ಮಣ್ಣುಪಾಲಾಗಿವೆ.

ಅಮೆರಿಕ, ರಷ್ಯಾ, ಫ್ರಾನ್ಸ್, ಜರ್ಮನಿ, ಬ್ರಿಟನ್, ಜಪಾನ್ ಮತ್ತು ಇಸ್ರೇಲ್ ದೇಶಗಳ ಅಧ್ಯಕ್ಷ/ಪ್ರಧಾನಿಗಳೊಂದಿಗೆ ನಡೆದ ಶೃಂಗಸಭೆಗಳ ವೇಳೆ ಪ್ರಧಾನಿ ಮೋದಿ ಬೆಳೆಸಿಕೊಂಡ ವೈಯಕ್ತಿಕ ಬಾಂಧವ್ಯಕ್ಕೂ ಚೀನಾ ಸಂಬಂಧಿತ ಅವರ ಯಶಸ್ಸಿನಲ್ಲಿ ಪಾಲಿದೆ ಎನ್ನಬಹುದು. ಚೀನಾ ವಿರುದ್ಧದ ಸಂಘರ್ಷದ ವೇಳೆ ಈ ಎಲ್ಲ ದೇಶಗಳು ಭಾರತದ ಪರವಾಗಿ ಗಟ್ಟಿಯಾಗಿ ನಿಂತಿದ್ದವು. ರಾಜತಾಂತ್ರಿಕ ಜಾಲದೊಳಗೆ ಚೀನಾ ಸಿಕ್ಕಿ ಬೀಳುವಂತಾಯಿತು. ಉತ್ತರ ಕೊರಿಯಾ ಮತ್ತು ಪಾಕಿಸ್ತಾನದಂಥ ಕೆಲವು ರಾಷ್ಟ್ರಗಳು ಮಾತ್ರವೇ ತನ್ನ ಬೆಂಬಲಕ್ಕಿದೆ ಎನ್ನುವುದು ಚೀನಾಕ್ಕೆ ಅರಿವಾಯಿತು.

ಪೂರ್ವ ಹಾಗೂ ಆಗ್ನೇಯ ಏಷ್ಯಾದ ಕನಿಷ್ಠ 23 ನೆರೆಯ ದೇಶಗಳೊಂದಿಗೆ ಚೀನಾ ತಗಾದೆ ಹೊಂದಿರುವುದು ಅದು ಜಾಗತಿಕವಾಗಿ ಬಹುತೇಕವಾಗಿ ಏಕಾಂಗಿಯಾಗಲು ಒಂದು ದೊಡ್ಡ ಕಾರಣವಾಗಿದೆ. ಭಾರತಕ್ಕೆ ವಿಶ್ವವ್ಯಾಪಿ ಬೆಂಬಲ ದೊರಕಿದ್ದು ಮಾತ್ರವಲ್ಲದೆ ಭಾರತದ ಆರ್ಥಿಕ ಮತ್ತು ಮಿಲಿಟರಿ ಶಕ್ತಿ ಹೆಚ್ಚುತ್ತಿರುವುದು ಕೂಡ ಚೀನಾ ತಲೆ ಬಾಗಲು ಕಾರಣವಾಗಿದೆ.

ಮೋದಿ ನಾಯಕತ್ವದ ಹಿಂದೆ ಇಡೀ ದೇಶ ಕಲ್ಲುಬಂಡೆಯಂತೆ ನಿಂತಿದು ಚೀನಿ ಪಡೆಗಳು ವಾಪಸ್ ಹೋಗುವಂತೆ ಮಾಡುವಲ್ಲಿ ಪ್ರಧಾನಿ ಮೋದಿ ಯಶಸ್ವಿಯಾಗಲು ಕಾರಣವಾಗಿದೆ. ನಾಯಕತ್ವದ ನಿಜವಾದ ಸತ್ವಪರೀಕ್ಷೆ ನಡೆಯುವುದು ಇಂಥ ಬಿಕ್ಕಟ್ಟುಗಳ ಸಂದರ್ಭಗಳಲ್ಲೇ ಎನ್ನುವುದು ಗಮನಾರ್ಹ.

(ಲೇಖಕರು ಖ್ಯಾತ ಪತ್ರಕರ್ತರು, ವಿಶ್ಲೇಷಕರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net