ಜಾನಪದ ಹಾಡಿನ ಸಾಂಸ್ಕೃತಿಕ ಮೌಲ್ಯ ಹಾಳುಗೆಡವದಿರಿ

Anisike
Published on

| ಶ್ರೀಶಾಂತಮಲ್ಲಿಕಾರ್ಜುನ ಸ್ವಾಮಿಗಳು

ಇತ್ತೀಚೆಗೆ ಬಿಡುಗಡೆಯಾದ ಕನ್ನಡ ಚಲನಚಿತ್ರ ‘ಗರುಡ ಗಮನ ವೃಷಭ ವಾಹನ’ದಲ್ಲಿ ಪುರಾಣದ ಐತಿಹ್ಯಗಳನ್ನು ಹೋಲಿಸಿ ಚಿತ್ರಕಥೆಯನ್ನು ರೂಪಿಸಲಾಗಿದೆ. ಸಿನಿಮಾ ರಂಗಕ್ಕೆ ಇದೇನೂ ಹೊಸತಲ್ಲ. ಆದರೆ ಈ ಸಿನಿಮಾದಲ್ಲಿ ಒಂದು ಕೊಲೆದೃಶ್ಯದ ನಂತರ ಹಿನ್ನೆಲೆಯಾಗಿ ಕೊಲೆಗಾರನು ನರ್ತಿಸುವಾಗ ‘ಸೋಜುಗದ ಸೂಜು ಮಲ್ಲಿಗೆ’ ಎಂಬ ಮಲೈ ಮಹದೇಶ್ವರ ಸ್ವಾಮಿ ಕುರಿತಾದ ಜಾನಪದ ಗೀತೆಯನ್ನು ಹೊಸದಾಗಿ ಸಂಯೋಜಿಸಿದ ಸಂಗೀತದ ಮೂಲಕ ಹಾಡಿಸಲಾಗಿದೆ. ಯಾವುದೇ ಕಲಾತ್ಮಕ ಕೃತಿಗಳ ಹಾಗೆಯೇ ಸಿನಿಮಾ ರಂಗವೂ ರಚನಾತ್ಮಕವಾಗಿ ಮತ್ತು ಸಮಾಜಮುಖಿಯಾಗಿ ನಡೆದುಕೊಳ್ಳಬೇಕಾಗಿರುವುದು ಈ ಕಾಲದ ಅಗತ್ಯ. ಹೀಗೆ ಮಾಡುವಾಗ ಸೃಜನಶೀಲತೆ ಹಲವು ರೂಪಗಳನ್ನು ಪಡೆದುಕೊಳ್ಳುತ್ತದೆ. ಇದಕ್ಕೆ ಯಾರ ವಿರೋಧವೂ ಇರಕೂಡದು. ಆದರೆ ಪ್ರಸ್ತುತ ಪ್ರಕರಣದಲ್ಲಿ ಕೊಲೆದೃಶ್ಯದ ಹಿನ್ನೆಲೆಯಾಗಿ ಮಾದೇವನನ್ನು ಪೂಜಿಸುವ, ಆರಾಧಿಸುವ ಜಾನಪದ ಹಾಡನ್ನು ಬಳಸಿರುವುದನ್ನು ನೋಡಿದಾಗ ಸಿನಿಮಾ ನಿರ್ದೇಶಕರ ಮಾರುಕಟ್ಟೆ ಆಧಾರಿತ ಚಿಂತನೆ ಬಗ್ಗೆ ಅನುಕಂಪ ಮೂಡುತ್ತದೆ.

ಇದಲ್ಲದೆ ದಾಸಶ್ರೇಷ್ಠ ಪುರಂದರದಾಸರ ‘ಚಂದ್ರಚೂಡ ಶಿವಶಂಕರ ಪಾರ್ವತಿ’ ಹಾಡನ್ನೂ ಇದೇ ಸಿನಿಮಾದಲ್ಲಿ ಇನ್ನೊಂದು ಸನ್ನಿವೇಶಕ್ಕೆ ಬಳಸಿಕೊಂಡಿದ್ದಾರೆ. ಪುರಂದರದಾಸರಾಗಲೀ, ಮನುಷ್ಯತ್ವದಿಂದ ದೈವತ್ವಕ್ಕೇರಿದ ಮಹಾಮಹಿಮ ಮಲೈ ಮಹದೇಶ್ವರ ಸ್ವಾಮಿಗಳಾಗಲೀ, ಭಕ್ತಿ ಪರವಶತೆಯಿಂದ ಪದ್ಯಗಳನ್ನು ರಚಿಸಿದ ಜನಪದರಾಗಲೀ ಈ ಹಾಡುಗಳ ಮೇಲೆ ಯಾವ ಹಕ್ಕುಗಳನ್ನೂ ಇಟ್ಟುಕೊಂಡಿಲ್ಲ. ತಮ್ಮ ಹಾಡುಗಳೆಲ್ಲವೂ ಸಮಾಜದ ಅಭ್ಯುದಯಕ್ಕಾಗಿ ಎಂದೇ ಅವರೆಲ್ಲ ಭಾವಿಸಿದ್ದರು; ಇಂದೇನಾದರೂ ಈ ಹಾಡುಗಳು ಕೃತಿಸ್ವಾಮ್ಯದಡಿ ಇದ್ದ ಪಕ್ಷದಲ್ಲಿ ಏನಾಗುತ್ತಿತ್ತು ಎಂಬುದನ್ನು ಈ ನಾಡಿನ ಚಿಂತಕರು, ಸಿನಿಮಾ ರಂಗದ ಅನುಭವಿಗಳು ಯೋಚಿಸಬೇಕಲ್ಲವೆ? ಉಳ್ಳವರು, ಬಡವರು ಎಂಬ ಭೇದಭಾವವಿಲ್ಲದೆ ಈ ಹಾಡುಗಳನ್ನು ಭಜಿಸುತ್ತ, ಶಿವನ ಸಾನಿಧ್ಯ ಬಯಸುತ್ತ ಮೈಲುಗಟ್ಟಲೆ ಪಾದಯಾತ್ರೆ ಮಾಡಿ ಬರುವ ಅಸಂಖ್ಯ ಭಕ್ತರು ಮಹದೇಶ್ವರ ಬೆಟ್ಟವನ್ನು ಹತ್ತುವುದು ತಮ್ಮಲ್ಲಿರುವ ಎಲ್ಲ ಬಗೆಯ ಅರಿಷಡ್ವರ್ಗಗಳು ನಾಶವಾಗಲಿ ಎಂದೇ ಹೊರತು ಕ್ರೌರ್ಯದ ಮಾನಸಿಕತೆ ಬೆಳೆಯಲಿ ಎಂದು ಅಲ್ಲವೇ ಅಲ್ಲ.

ಶತಮಾನಗಳ ಕಾಲ ಬಾಳಿದ ಈ ಹಾಡುಗಳು, ಇನ್ನೂ ನೂರಾರು ವರ್ಷಗಳ ಕಾಲ ಜನರ ಮನದಾಳದಲ್ಲಿ ಇದ್ದೇ ಇರುತ್ತವೆ. ಅದರೆ ಡಿಜಿಟಲ್ ವೇದಿಕೆಗಳಲ್ಲಿ ಹೆಚ್ಚು ಕಾಲ ಬಾಳುವ ಸಿನಿಮಾಗಳಲ್ಲಿ ಹೀಗೆ ಸಂಬಂಧ, ಸತರ್ಕವಿಲ್ಲದೆ ಸೃಜನಶೀಲತೆ ಹೆಸರಿನಲ್ಲಿ ಇಂಥ ಹಾಡುಗಳನ್ನು ಬಳಸುವುದು ಸರಿಯಲ್ಲ. ಜಾನಪದ, ತಾತ್ವಿಕ ಹಾಡುಗಳ ಸಾಂಸ್ಕೃತಿಕ ಮೌಲ್ಯವನ್ನು ಉಳಿಸಿ, ಬೆಳೆಸುವುದು ಮುಖ್ಯವೋ, ಅವುಗಳನ್ನು ವಾಣಿಜ್ಯ ಉದ್ದೇಶದ ರೂಪಕಗಳನ್ನಾಗಿ ರೂಪಾಂತರಿಸುವುದು ಮುಖ್ಯವೋ? ಇದನ್ನೂ ಜನರೇ ತೀರ್ವನಿಸಬೇಕು. ಸೃಜನಶೀಲತೆ ಎಂಬುದು ಸಾಂಸ್ಕೃತಿಕ ಪತನಕ್ಕೆ ಕಾರಣವಾಗದೆ, ಸಮಾಜದ ಉನ್ನತಿಗೆ ಬಳಕೆಯಾಗಲಿ.

ಸಿನಿಮಾ ನಿರ್ಮಾಣ ತಂಡದ ಯಾರೊಬ್ಬರು ಕ್ಷಮೆ ಕೇಳಿ ಆಗಬೇಕಾದ್ದೇನೂ ಇಲ್ಲ. ಕ್ಷಮಾಭಾವ ವ್ಯಕ್ತಿಯ ಅಂತರಂಗದಲ್ಲಿ ಅದಾಗೇ ಮೂಡಬೇಕೇ ಹೊರತು ಯಾವುದೇ ಒತ್ತಡಕ್ಕೆ ಕೃತಕವಾಗಿ ಹುಟ್ಟಬಾರದು. ಆತ್ಮಸಾಕ್ಷಿ ಇದ್ದವರಿಗೆ ಕ್ಷಮೆ ಕೇಳಬೇಕೇ ಬೇಡವೆ ಎಂದು ನಿರ್ಧರಿಸುವುದು ಕಷ್ಟವಾಗುವುದಿಲ್ಲ! ಅದೇನಿದ್ದರೂ, ಶತಮಾನಗಳಿಂದ ಅರಳಿದ ಜನಪದ ಸೊಗಡಿನ ಹಾಡೊಂದರ ಮೌಲ್ಯವನ್ನು, ಅದರಿಂದ ದೊರಕುವ ಅಮೂಲ್ಯ ದೈವಿಕ ರೂಪಕಗಳನ್ನು ಒಂದು ಸಿನಿಮಾದ ವಾಣಿಜ್ಯ ಉದ್ದೇಶದ ರೂಪಕಕ್ಕಾಗಿ ಬಲಿ ಕೊಡುವುದು ಎಷ್ಟು ಸರಿ?

(ಲೇಖಕರು ಶ್ರೀ ಮಲೆ ಮಹದೇಶ್ವರ ಸಾಲೂರು ಬೃಹನ್ಮಠದ ಪೀಠಾಧಿಪತಿಗಳು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net