ಸಂಸ್ಕೃತಕ್ಕೆ ಮಾತ್ರವೇ ರಾಷ್ಟ್ರಭಾಷೆಯಾಗುವ ಅರ್ಹತೆ

Sanskrith
ಸಂಸ್ಕೃತವನ್ನು ರಾಷ್ಟ್ರಭಾಷೆಯನ್ನಾಗಿ ಮಾಡಬೇಕೆಂದು ಡಾ. ಬಿ.ಆರ್. ಅಂಬೇಡ್ಕರ್ ಆಗ್ರಹಿಸಿರುವುದು ಅಂದಿನ ಪತ್ರಿಕೆಗಳಲ್ಲಿ ಪ್ರಕಟವಾಗಿರುವುದು.
Published on
ಡಾ. ಬಿ. ಆರ್. ಅಂಬೇಡ್ಕರ್ ಅವರು ಸಂಸ್ಕೃತ ಭಾಷೆಯ ಉತ್ಕೃಷ್ಟತೆಯನ್ನು ಮನದಟ್ಟಾಗಿಸಿಕೊಂಡೇ ಅದು ರಾಷ್ಟ್ರಭಾಷೆಯಾಗಲು ಯೋಗ್ಯ ಎಂದು ಸ್ಪಷ್ಟ ಅಭಿಪ್ರಾಯವನ್ನು ನೀಡಿದರು. ಇದನ್ನು ದೇಶದ ಶಾಸಕೀಯ ಭಾಷೆಯನ್ನಾಗಿ ಮಾಡಲು 360 ಎ(1) ಮಸೂದೆಗೆ ತಿದ್ದುಪಡಿ ಮಾಡಲು ಸೂಚಿಸಿದರು. ಆದರೆ, ಒಂದು ಮತದಿಂದ ಅದು ಹಿಂದೆ ಉಳಿಯಿತು.

ಅತ್ಯಂತ ಪ್ರಾಚೀನ ಭಾಷೆ ಎಂಬ ಹೆಗ್ಗಳಿಕೆ ಇರುವ ಸಂಸ್ಕೃತ ಭಾಷೆಯು ಭಾರತೀಯ ಸಂಸ್ಕೃತಿಯ ಆಕರ ಸ್ಥಾನವಾಗಿದೆ. ಇದನ್ನೇ ಪಂಡಿತ್ ಜವಾಹರಲಾಲ್ ನೆಹರು ಅವರು ಇನ್ನೊಂದು ರೀತಿಯಲ್ಲಿ ಹೀಗೆ ಹೇಳುತ್ತಾರೆ... ಭಾರತದ ಅತಿದೊಡ್ಡ ಸಂಪತ್ತು ಹಾಗೂ ಅತ್ಯುತ್ತಮ ಪರಂಪರೆ ಯಾವುದೆಂದು ನನ್ನನ್ನು ಕೇಳಿದರೆ, ಅದು ಸಂಸ್ಕೃತ ಭಾಷೆ ಹಾಗೂ ಸಾಹಿತ್ಯ ಎಂದು ಯಾವುದೇ ಹಿಂಜರಿಕೆ ಇಲ್ಲದೆ ಹೇಳುತ್ತೇನೆ.

ಇದೇ ವಿಷಯವನ್ನು ಕೈವಲ್ಯ ಸುಧಾ (ನವೆಂಬರ್ 15, 1965) ಎಂಬ ಪತ್ರಿಕೆಯು ಹೀಗೆ ಪುಷ್ಟೀಕರಿಸುತ್ತದೆ- ಜಗತ್ತಿನ ಬೇರಾವುದೇ ಭಾಷೆಗಳು ಪ್ರತಿಪಾದನೆ ಮಾಡಲಾಗದಂತಹ ಸಂಪತ್ತು ಸಂಸ್ಕೃತ ಭಾಷೆಯಲ್ಲಿದೆ.

ಹೀಗಿರುವ ಸಂಸ್ಕೃತದಲ್ಲಿ ಸು. 5000 ವರ್ಷಗಳ ಹಿಂದೆಯೇ ರಚಿತವಾದ ಮಹಾಭಾರತವು ಇತಿಹಾಸ ಹಾಗೂ ಸಂಸ್ಕೃತಿಯ ಕೈಗನ್ನಡಿಯಾಗಿದೆ. ಅದಕ್ಕೂ ಹಿಂದೆಯೇ ಕವಿ ಪುಂಗವರಾದ ವಾಲ್ಮೀಕಿ ಮಹರ್ಷಿಗಳು 24,000 ಶ್ಲೋಕಗಳಲ್ಲಿ ಉತ್ಕೃಷ್ಟ ಹಾಗೂ ಸುಂದರವಾದ ಭಾಷೆಯಲ್ಲಿ ರಚಿಸಿದ ರಾಮಾಯಣವು ಭಾರತೀಯ ಸಂಸ್ಕೃತಿ ಹಾಗೂ ಇತಿಹಾಸದ ಪ್ರತೀಕವಾಗಿದೆ. ಇಷ್ಟೊಂದು ಪ್ರಾಚೀನವಾದ ಭಾಷೆಯು ವೇದ, ಉಪನಿಷತ್ತು, ಪುರಾಣ, ದರ್ಶನ, ಆಯುರ್ವೆದ, ಅರ್ಥಶಾಸ್ತ್ರ, ಯೋಗ, ಸಂಗೀತ ಮುಂತಾದ ಕ್ಷೇತ್ರಗಳಲ್ಲಿ ವ್ಯಾಪಕವಾಗಿ ಬೆಳೆದು ನಿಂತಿದೆ. ಭಾರತದ ಎಲ್ಲಾ ಪ್ರಾಂತಗಳಲ್ಲಿಯೂ ಸಂಸ್ಕೃತ ಗ್ರಂಥ ರಚನೆ ಹಾಗೂ ಅಧ್ಯಯನ ಇವತ್ತಿಗೂ ನಡೆಯುತ್ತಲೇ ಇದೆ.

ಎಲ್ಲ ಭಾರತೀಯ ಭಾಷೆಗಳಲ್ಲಿ ಸಂಸ್ಕೃತದ ಪದಗಳು ಪ್ರಾಕೃತರೂಪ ತಾಳಿ ವ್ಯಾಪಕವಾಗಿ ಬಳಕೆಯಲ್ಲಿವೆ. ಆಂಗ್ಲ ಭಾಷೆಯ ಪದಗಳಲ್ಲಿಯೂ ಸಂಸ್ಕೃತದ ಪ್ರಭಾವವನ್ನು ಕಾಣಬಹುದಾಗಿದೆ. ಕ್ರೂರ-cruel, ಸರ್ಪ- serpent, ಲುಕ್ (ಧಾತು)- look, ಯೂಯಂ- you, ಅದಸ್- thus, ತ್ರಿ- three, ನವತಿ- ninety, ಪಥ- path, ನಾಮ- Name, ಜ್ಯಾಮಿತಿ- geometry, ಮರ್ಮರ- murmur, ವಾಹಕ- vehicle, ವಾರ್- water, ಸೂನು- son, ವಾಗ್- word, ಸಾಮಿ- semi, ಇಂತಹ ಇನ್ನೂ ಅನೇಕ ಪ್ರಭಾವಿತ ಶಬ್ದಗಳನ್ನು ಕಾಣುತ್ತೇವೆ. ಏನೇ ಆದರೂ ಎಲ್ಲ ಭಾರತೀಯ ಪ್ರಾಂತಗಳ ಭಾಷೆಗಳಲ್ಲಿ ಸಂಸ್ಕೃತವು ಹೂಮಾಲೆಯ ಸೂತ್ರದಂತೆ, ಹಾಸುಹೊಕ್ಕಾಗಿದೆ. ಸದ್ಯ ಜಗತ್ತಿನ 300 ವಿಶ್ವವಿದ್ಯಾಲಯಗಳಲ್ಲಿ ಸಂಸ್ಕೃತದ ಅಧ್ಯಯನ ನಡೆಯುತ್ತಿದೆ.

ಯಾವ ಪ್ರಾಂತೀಯ ಭಾಷೆಯೂ ರಾಷ್ಟ್ರಭಾಷೆಯಾಗಲು ಅರ್ಹವಲ್ಲ. ಆರೇಳು ಪ್ರಾಂತಗಳ ಭಾಷೆಯಾದ ಹಿಂದಿ ಭಾಷೆಯು ಸಂಪರ್ಕ ಭಾಷೆಯಾಗಿ ಪ್ರಚಲಿತವಾಗಿದೆ. ಆದರೆ, ಅದನ್ನು ರಾಷ್ಟ್ರಭಾಷೆಯನ್ನಾಗಿ ಸ್ವೀಕರಿಸಿದರೆ ಪಕ್ಷಪಾತ ಧೋರಣೆ ಆಗುವುದು. ಮಾತೃಭಾಷೆಯಲ್ಲಿ ಶೋಧಲೇಖನಗಳನ್ನಾಗಲಿ, ಗ್ರಂಥಗಳನ್ನಾಗಲಿ ಬರೆಯುವುದು ಬಹಳ ಸುಲಭ. ಉತ್ತರ ಪ್ರದೇಶದವರೆಗೆ ಮಾತೃಭಾಷೆಯಾದ ಹಿಂದಿಯಲ್ಲಿ ಬರೆದುದಕ್ಕೆ ಅಖಿಲ ಭಾರತೀಯ ಮಟ್ಟದಲ್ಲಿ ಅಭಿಜ್ಞಾನ ಸಿಗುವುದು. ಕನ್ನಡಾದಿ ಭಾಷೆಗಳಲ್ಲಿ ಬರೆದರೆ ರಾಷ್ಟ್ರಮಟ್ಟದಲ್ಲಿ ಅಭಿಜ್ಞಾನ (National recognition) ಸಿಗಲಾರದು. ಯುಜಿಸಿ ನಿಯಮ ದಂತೆ ಹಿಂದಿಯಲ್ಲಿ ಪ್ರಕಾಶಿತವಾದ ಎಲ್ಲ ಲೇಖನಗಳು ರಾಷ್ಟ್ರಮಟ್ಟದಲ್ಲಿ ಗುರುತಿಸಲಾಗಿ ಉತ್ತರದವರಿಗೆ ಹೆಚ್ಚು ಗುಣಗಳು ಸಿಕ್ಕು ನೇಮಕಾತಿಗಳಿಗೆ ಹೆಚ್ಚು ಅನುಕೂಲವಾಗಬಹುದು. ನಾವು ಹಿಂದಿ, ಇಂಗ್ಲಿಷ್ ಅಥವಾ ಸಂಸ್ಕೃತ ಕಲಿತು ಅದರಲ್ಲಿ ಲೇಖ ಬರೆದಾಗ ಮಾತ್ರ ಅಭಿಜ್ಞಾನ ಸಿಗಬಹುದು. ಮಾತೃಭಾಷೆಯಲ್ಲಿ ಬರೆದಷ್ಟು ಸುಲಭವಾಗಿ ಪರಭಾಷೆಯಲ್ಲಿ ಬರೆಯಲಾಗುವುದಿಲ್ಲ. ಅಖಿಲ ಭಾರತ ಮಟ್ಟದಲ್ಲಿ ಭಾಷಣ, ಸ್ಪರ್ಧಾತ್ಮಕ ಪರೀಕ್ಷೆಗಳು, ಸಂದರ್ಶನ, ಅಧ್ಯಯನ, ಅಧ್ಯಾಪನ ಮುಂತಾದ ಸಂದರ್ಭಗಳಲ್ಲಿ ಮಾತೃಭಾಷೆಯಷ್ಟು ಅನುಕೂಲ ಬೇರೆ ಭಾಷೆಯಾಗಲಾರದು. ಹೀಗಾಗಿ, ನಮಗೆ ಹೆಚ್ಚು ಅಂಕಗಳು ಸಿಗಲಾರವು. ಈ ಪಕ್ಷಪಾತದ ಕಾರಣದಿಂದ ಹಿಂದಿ ಭಾಷೆಯನ್ನು ರಾಷ್ಟ್ರಭಾಷೆಯನ್ನಲಾಗದು. ಆದರೆ, ಅದು ಬಹಳ ವ್ಯಾಪಕವಾಗಿ ಬೆಳೆದಿದ್ದರಿಂದ ಅದು ಸಂಪರ್ಕ ಭಾಷೆಯಾಗಿ ಮುಂದುವರಿಯಬಹುದು, ಜನಸಾಮಾನ್ಯರಿಗೂ ಅದು ಸುಲಭ. ಅದು ಸುಂದರ ಮಧುರ ಸರಳ ಎಂಬಲ್ಲಿ ಎರಡು ಮಾತಿಲ್ಲ. ಆದರೆ, ಪ್ರಾಂತೀಯ ಭಾಷೆಯಾಗಿದ್ದರಿಂದ ರಾಷ್ಟ್ರಭಾಷೆಯಾಗಲಾರದು.

ಸಂಸ್ಕೃತ ಸಾಹಿತ್ಯ ಬಹಳ ವಿಶಾಲ, ಶಬ್ದ ಸಂಪತ್ತು ಆಮೇಯ. ಆಧುನಿಕ ವೈಜ್ಞಾನಿಕ ಕ್ಷೇತ್ರದಲ್ಲಿಯ ಆಂಗ್ಲ ಭಾಷೆಯ ಎಲ್ಲ ಪಾರಿಭಾಷಿಕ ಶಬ್ದಗಳನ್ನು ಸಂಸ್ಕೃತದಲ್ಲಿ ಸುಲಭವಾಗಿ ಸೃಷ್ಟಿಸಬಹುದು. ಸಾವಿರಾರು ಧಾತುಗಳು ಅನೇಕ ಉಪಸರ್ಗಗಳು ಕೃದಂತಾದಿ ರೂಪಗಳು ಅವುಗಳ ಸಹಾಯದಿಂದ ಹೊಸ ಶಬ್ದಗಳನ್ನು ಸುಲಭವಾಗಿ ಜೋಡಿಸಬಹುದು. ಶಿಕ್ಷಣಕ್ಷೇತ್ರದಲ್ಲಿ ಅರ್ಥಶಾಸ್ತ್ರ, ರಾಜನೀತಿ, ಮನೋವಿಜ್ಞಾನ, ಇತಿಹಾಸ, ಸಮಾಜಶಾಸ್ತ್ರ ಯಾವ ಶಾಸ್ತ್ರ ತೆಗೆದುಕೊಂಡರೂ ಅಲ್ಲಿ ಬರುವ ಪಾರಿಭಾಷಿಕ ಶಬ್ದ (Technical terms) ಗಳಿಗೆ ಸರಿಸಮಾನ ಅರ್ಥ ಕೊಡುವ ಪದಗಳನ್ನು ನಿರ್ವಿುಸುವುದು ಸಂಸ್ಕೃತದಲ್ಲಿ ಬಹಳ ಸುಲಭ. ಸಮಾಸದ ವೈಶಿಷ್ಟ್ಯವೇ ಇದಕ್ಕೆ ಮೂಲ ಕಾರಣ.

ಸಂಸ್ಕೃತವು ಬಹಳ ಕಠಿಣ ಎಂಬ ಭ್ರಾಂತಿಯಿಂದ ಸರಿದು ಬಂದರೆ ಮಾತ್ರ ಇದು ಸುಲಭವಾಗುತ್ತದೆ. ಎಲ್ಲ ಭಾಷೆಗಳಲ್ಲಿಯೂ ಕಂಠಪಾಠ ಮಾಡುವ ಅಂಶಗಳು ಇರಲೇ ಬೇಕು. ಇಲ್ಲಿ ಸ್ವಲ್ಪ ಹೆಚ್ಚಾಗಿರಬಹುದು. ಆದರೆ ಶಬ್ದದ ರೂಪಗಳನ್ನು ಕಂಠಪಾಠ ಮಾಡಿದಲ್ಲಿ ಸಾವಿರಾರು ಪದಗಳ ರೂಪಗಳನ್ನು ತಿಳಿಯಲು ಸಾಧ್ಯ. ಅಲ್ಲದೆ, ಕೃತಪಾನ್ ಗತವಾನ್, ಶ್ರುತವಾನ್, ಪಠಿತಮಾನ್, ಲಿಖಿತವಾನ್ ಮುಂತಾದ ರೂಪಗಳನ್ನು ಬಳಸಿ ಕ್ರಿಯಾಪದದ ಕ್ಲೇಶವನ್ನು ಸುಲಭವಾಗಿ ನಿವಾರಿಸಿಕೊಳ್ಳಬಹುದು. ‘ಭವಾನ್ ಶಬ್ದ ಬಳಸಿ ‘ತ್ವಂ ಇದರ ಮಧ್ಯಮ ಪುರುಷದ ರೂಪಗಳನ್ನು ಕೈಬಿಡಬಹುದು. ಸಂಸ್ಕೃತ ಭಾರತಿ ಸಂಸ್ಥೆಯು ಸಂಸ್ಕೃತವು ಹೇಗೆ ಸುಲಭ ಎಂಬುದನ್ನು ತೋರಿಸುವಲ್ಲಿ ಕ್ರಾಂತಿಯನ್ನೇ ಮಾಡಿದೆ. ಸಂಭಾಷಣಾ ಶಿಬಿರಾದಿಗಳಿಂದ ಸುಲಭವಾಗಿ ಸಂಸ್ಕೃತವನ್ನು ಕಲಿಯುವ ಸರಣಿಯನ್ನು ಜನಸಾಮಾನ್ಯರ ಮನೆಯ ಬಾಗಿಲಕ್ಕೆ ತಲುಪಿಸುತ್ತಿದೆ.

ಪ್ರಾಚೀನ ಭಾರತದಲ್ಲಿ ಸಂಸ್ಕೃತವೇ ಸಮಗ್ರ ಭಾರತದ ರಾಷ್ಟ್ರಭಾಷೆಯಾಗಿತ್ತು. ಅಖಂಡ ಭಾರತದ ಐಕ್ಯತೆಯ ಪ್ರತೀಕವಾಗಿತ್ತು. ಉತ್ತರ ಹಾಗೂ ದಕ್ಷಿಣ ಭಾರತದ ಏಕೀಕರಣದ ಭಾವವನ್ನು ಬೆಳೆಸಲು ಸಂಸ್ಕೃತ ಏಕೈಕ ಸಾಧನವಾಗಿದೆ. ಎಲ್ಲ ಪ್ರಾಂತಗಳಲ್ಲಿಯೂ ಸಂಸ್ಕೃತದ ಅಧ್ಯಯನ ನಡೆದೇ ಇರುತ್ತದೆ. ಇದಕ್ಕೆ ಸ್ವಲ್ಪ ಹೆಚ್ಚು ಒತ್ತುಕೊಟ್ಟು ಪ್ರೋತ್ಸಾಹಿಸಿದಲ್ಲಿ ನಿಶ್ಚಿತವಾಗಿಯೂ ರಾಷ್ಟ್ರಭಾಷೆಯಾಗಬಲ್ಲದು. ಹಿಂದಿ ಸಂಪರ್ಕ ಭಾಷೆಯಾಗಿ ಇದ್ದೇ ಇರುತ್ತದೆ. ಇಂಗ್ಲಿಷ್ ಭಾಷೆಯು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮತ್ತು ಔದ್ಯೋಗಿಕ ಭಾಷೆಯಾಗಿ ಇದ್ದೇ ಇರುತ್ತದೆ. ಆದರೆ, ರಾಷ್ಟ್ರಭಾಷೆಯ ಗೌರವ ಸಂಸ್ಕೃತಕ್ಕೆ ಮಾತ್ರ ಸಲ್ಲುವುದು ಯೋಗ್ಯವೆನಿಸುತ್ತದೆ. ಇಸ್ರೇಲ್ ದೇಶದಲ್ಲಿ ಹಿಂದೆ ಸರಿಸಲ್ಪಟ್ಟಿದ್ದ, ಪ್ರಾಚೀನ ಸಂಸ್ಕೃತಿಯ ಪ್ರತೀಕವಾಗಿದ್ದ ಹಿಬ್ರೂ ಭಾಷೆಯನ್ನು ರಾಷ್ಟ್ರಭಾಷೆಯನ್ನಾಗಿ ಘೊಷಿಸಿ 15 ವರ್ಷಗಳಲ್ಲಿಯೇ ಅದು ಜನವಾಣಿಯಾಗುವಂತೆ ಮಾಡಲಾಗಿದೆ. ಹಾಗೆಯೇ ಇಲ್ಲಿ ಎಲ್ಲಾ ಪ್ರಾಂತಗಳಲ್ಲಿಯೂ ಪ್ರಾಂತೀಯ ಭಾಷೆಯ ಜೊತೆಗೆ ನಡೆಯುತ್ತಿರುವ ಸಂಸ್ಕೃತದ ಅಧ್ಯಯನವನ್ನು ಪೊ್ರೕತ್ಸಾಹಿಸಿದಲ್ಲಿ ನಿಶ್ಚಿತವಾಗಿಯೂ ಅದು ಜನವಾಣಿಯಾಗಲು ಸಾಧ್ಯವಿದೆ. ಆದರೆ, ಸಂಸ್ಕೃತ ಕಠಿಣ ಎಂಬ ಭ್ರಾಂತಿಯಿಂದ ದೂರವಿರಬೇಕು.

1965ರಲ್ಲಿ ಕೇಂದ್ರ ವಿದ್ಯಾಮಂತ್ರಿಗಳಾಗಿದ್ದ ಛಾಗಲಾ ಅವರು ಸಂಸ್ಕೃತಾಧ್ಯಯನವನ್ನೇ ಹೀಗೆ ಪೊ್ರೕತ್ಸಾಹಿಸಿದ್ದರು. ‘ಮಾತೃಭಾಷೆಯನ್ನು ಬಿಡಬೇಕೆಂದು ನಾನು ಪ್ರತಿಪಾದಿಸುವುದಿಲ್ಲ. ಮಾತೃಭಾಷೆಯ ಜತೆಗೆ ಸಂಸ್ಕೃತವನ್ನೂ ಕಲಿಯಬೇಕೆಂದು ನಾನು ಬಯಸುತ್ತೇನೆ’ ಎಂದಿದ್ದರು. ಮಹಾತ್ಮಾ ಗಾಂಧೀಜಿ ಕೂಡ ಹೀಗೆಯೇ ಅಭಿಪ್ರಾಯಪಟ್ಟಿದ್ದರು. ಡಾ. ಬಿ. ಆರ್. ಅಂಬೇಡ್ಕರ್ ಅವರು ಸಂಸ್ಕೃತ ಭಾಷೆಯ ಉತ್ಕೃಷ್ಟತೆಯನ್ನು ಮನದಟ್ಟಾಗಿಸಿಕೊಂಡೇ ಅದು ರಾಷ್ಟ್ರಭಾಷೆಯಾಗಲು ಯೋಗ್ಯ ಎಂದು ತಮ್ಮ ಸ್ಪಷ್ಟ ಅಭಿಪ್ರಾಯವನ್ನು ನೀಡಿದರು. ದಿ ಸಂಡೇ ಹಿಂದುಸ್ತಾನ್ ಸ್ಟಾ್ಯಂಡರ್ಡ್ (ಸೆಪ್ಟೆಂಬರ 11, 1949), ಸ್ಟೇಟ್ಸಮನ್, ದಿ ಹಿಂದು, ದಿ ನ್ಯಾಷನಲ್ ಹೆರಾಲ್ಡ್ ಮುಂತಾದ ಅನೇಕ ಪತ್ರಿಕೆಗಳು ಡಾ. ಅಂಬೇಡ್ಕರ ಅವರು ಸಂಸ್ಕೃತವನ್ನೇ ರಾಷ್ಟ್ರಭಾಷೆಯನ್ನಾಗಿ ಸ್ವೀಕರಿಸಲು ಒತ್ತು ನೀಡಿದರೆಂದು ಉಲ್ಲೇಖಿಸಿರುತ್ತವೆ. ಈ ಚರ್ಚೆಯ ಸಂದರ್ಭದಲ್ಲಿ ಇದನ್ನು ದೇಶದ ಶಾಸಕೀಯ ಭಾಷೆಯನ್ನಾಗಿ ಮಾಡಲು 360 ಎ(1) ಮಸೂದೆಗೆ ತಿದ್ದುಪಡಿ ಮಾಡಲು ಸೂಚಿಸಿದರು ಎಂದು ಪತ್ರಿಕೆಗಳು ವರದಿ ಮಾಡಿವೆ. ಒಂದು ಮತದಿಂದ ಅದು ಹಿಂದೆ ಉಳಿಯಿತು ಎಂದು ತಿಳಿದು ಬರುತ್ತದೆ. ಏನೇ ಇರಲಿ ಈಗಾದರೂ ಕೂಡ ನಿಷ್ಪಕ್ಷಪಾತದಿಂದ ಪೂರ್ವಗ್ರಹವಿಲ್ಲವೇ ವಿಚಾರ ಮಾಡಿದಲ್ಲಿ ಸಂಸ್ಕೃತ ಒಂದೇ ರಾಷ್ಟ್ರಭಾಷೆಯಾಗುವ ಅರ್ಹತೆಯನ್ನು ಹೊಂದಿದೆ ಎಂಬುದು ಗಮನಾರ್ಹವಾಗಿದೆ.

ಇನ್ನೊಂದು ಅತ್ಯಂತ ಆಶ್ಚರ್ಯಕರ ವಿಷಯವೆಂದರೆ ಸಂಸ್ಕೃತ ಶಬ್ದಗಳ ಪ್ರಭಾವ ರಶಿಯನ್ ಭಾಷೆಯಲ್ಲಿಯೂ ಕಾಣಬಹುದಾಗಿದೆ. ಧಾಮ- ಧೋಮ, ಕದಾ- ಕೊದಾ, ತದಾ- ತೋದಾ, ಸದಾ- ಸೇಗದಾ, ಸ್ನುಷಾ (ಸೊಸೆ)- ಸ್ನುಖಾ, ಧೂಮ- ದೀಮ, ಸೂನು- ಸೀನ್, ಮದೀಯ - ಮೋಯಿ, ತತ್ - ಟೋತ್, ಮಾತಾ - ಮಾಮ್ ಮಾಂಸ - ಮಾಸೋ, ಕುತ್ರ - ಕೊತೋರಿಯಾ (‘ಸಂಸ್ಕೃತ ಪುಟ 38) ಇನ್ನೂ ಅನೇಕ ಶಬ್ದಗಳ ಸಾಮ್ಯ ನೋಡಬಹುದಾಗಿದೆ. ಉರ್ದು ಭಾಷೆಯಲ್ಲಿ ಸಂಸ್ಕೃತದ ಪ್ರಭಾವ ಧಾರಾಳವಾಗಿದೆ. ಹೀಗೆ ಭಾರತೀಯ ಸಂಸ್ಕೃತಿಯ ಕೇಂದ್ರ ಬಿಂದು ಆದ ಸಂಸ್ಕೃತದ ಅಧ್ಯಯನವನ್ನು ಪ್ರಾಂತೀಯ ಭಾಷೆಯ ಜೊತೆಗೆ ಕಲಿಯಲು ಅವಕಾಶ ಮಾಡಬಹುದಾಗಿದೆ. ಕನ್ನಡ, ಸಂಸ್ಕೃತ, ಇಂಗ್ಲಿಷ್ ಅಥವಾ ಹಿಂದಿ... ಹೀಗೆ ತ್ರಿಭಾಷಾ ಸೂತ್ರವನ್ನು ಪಾಲಿಸಬಹುದು. ಉತ್ತರ ಪ್ರದೇಶದಲ್ಲಿ ಹಿಂದಿ, ಸಂಸ್ಕೃತ ಹಾಗೂ ಇಂಗ್ಲಿಷ್ ಹೀಗೆ ತ್ರಿಭಾಷೆಯ ನಿಯಮ ಬಹಳ ಸುಲಭ. ಇನ್ನು ಅನೇಕ ವರ್ಷಗಳವರೆಗೆ ಹಿಂದಿ ಸಂಪರ್ಕ ಭಾಷೆಯಾಗಿ ಇದ್ದೇ ಇರುತ್ತದೆ. ಅವಶ್ಯವಾಗಿ ಇರಲಿ. ಆದರೆ, ಶಿಕ್ಷಣ ಕ್ಷೇತ್ರದಲ್ಲಿ ಅದು ಐಚ್ಛಿಕವಾಗಿ ಇರಬಹುದು. 6 ಮತ್ತು 7ನೇ ಈಯತ್ತೆಗೆ ಹಿಂದಿ ಅಥವಾ ಸಂಸ್ಕೃತವೆಂದಾದರೂ ಮಾಡಿದಲ್ಲಿ ಸಂಸ್ಕೃತದ ಅಧ್ಯಯನವು ಸರಳವಾಗಿ ನಡೆಯಬಹುದು. ಹೀಗೆ ಎಲ್ಲ ದೃಷ್ಟಿಯಲ್ಲಿಯೂ ಸಂಸ್ಕೃತ ರಾಷ್ಟ್ರಭಾಷೆಯಾಗಲು ಯೋಗ್ಯವೆಂಬುವಲ್ಲಿ ಎರಡು ಮಾತಿಲ್ಲ.

(ಲೇಖಕರು ನಿವೃತ್ತ ಸಂಸ್ಕೃತ ಪ್ರಾಕೃತ ಪ್ರಾಧ್ಯಾಪಕರು, ಕೆ.ಸಿ.ಡಿ.)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net