ರೋಷತಪ್ತ ಭಾರತೀಯ ಹೆಬ್ಬುಲಿ ಧೃತಿಗೆಟ್ಟ ಪಾಕ್ ಕುರಿ

ವಿಜಯವಾಣಿ (3)
Published on

(ಲೇಖಕರು ರಾಜಕೀಯ ವಿಶ್ಲೇಷಕರು, ಕನ್ನಡ ಕತೆಗಾರರು)

ಪಹಲ್ಗಾಮ್ ಭಯೋತ್ಪಾದಕ ದಾಳಿ 26 ಅಮಾಯಕ ಜೀವಗಳನ್ನು ಬಲಿತೆಗೆದುಕೊಂಡು ವಾರ ಕಳೆದಿದೆ. ಭಾರತೀಯರ ಮನೋಭಾವ ಆಘಾತ, ಶೋಕ, ರೋಷದ ಹಂತಗಳನ್ನು ಹಾದು ಪ್ರತೀಕಾರಕ್ಕೆ ಹಾತೊರೆಯಲು ತೊಡಗಿಯೂ ವಾರವಾ ಗುತ್ತಿದೆ. ಅತ್ತ ಪಾಕಿಸ್ತಾನದ ನಡೆಗಳಲ್ಲಿ ವಿರೋಧಾಭಾಸ ಹಾಗೂ ದಾರಿ ತಪ್ಪಿಸುವ ನೌಟಂಕಿಗಳು ಕಾಣುತ್ತಿವೆ. ಮೊದಲಿಗೆ ದಾಳಿಯ ಜವಾಬ್ದಾರಿಯನ್ನು ಹೊತ್ತುಕೊಂಡ ಕುಖ್ಯಾತ ಲಷ್ಕರ್-ಎ-ತೋಯ್ಬಾ ಭಯೋತ್ಪಾದಕ ಸಂಘಟನೆಯ ಅಂಗವಾದ ‘ದ ರೆಸಿಸ್ಟೆನ್ಸ್ ಫ್ರಂಟ್’ (ಟಿಆರ್​ಎಫ್) ನಂತರ ಹಿಂದೆ ಸರಿಯಿತು. ಅದರ ನೇತಾರ ಸೈಫುಲ್ಲಾ ಕಸೂರಿ ವಿಡಿಯೋ ಸಂದೇಶವೊಂದರಲ್ಲಿ ತಮ್ಮ ಸಂಘಟನೆಗೂ ದಾಳಿಗೂ ಸಂಬಂಧವಿಲ್ಲ ಎಂದಿದ್ದಾನೆ ಮತ್ತು ದಾಳಿಗೆ ಭಾರತವನ್ನೇ ದೂಷಿಸಿದ್ದಾನೆ.

ಟಿಆರ್​ಎಫ್​ನ ಈ ಎರಡು ನಡೆಗಳ ನಡುವೆ 2 ದಿನಗಳಿಗೂ ಹೆಚ್ಚಿನ ಅಂತರವಿರುವುದು ಅದರ ನೇತಾರನ ವಿಡಿಯೋ ಸಂದೇಶದ ಮಾತನ್ನು ಸುಳ್ಳು ಎಂದು ಹೇಳಲು ಸಾಕಾಗುತ್ತದೆ. ಪಾಕಿಸ್ತಾನಿ ಸರ್ಕಾರದ ನಡೆಯಂತೂ ಇನ್ನಷ್ಟು ಅಧ್ವಾನ. ಮತ್ತು ಅದರ ಮುಖವಾಗಿ ರಕ್ಷಣಾಮಂತ್ರಿ ಖ್ವಾಜಾ ಆಸಿಫ್ ನಿಂತಿದ್ದಾರೆ. ಮೊದಲಿಗೆ ಪಹಲ್ಗಾಮ್ ಭಯೋತ್ಪಾದಕ ದಾಳಿಯನ್ನು ಭಾರತದ ತಲೆಗೇ ಕಟ್ಟಲು ಹೋದ ಆಸಿಫ್, ಬಲೂಚಿಸ್ತಾನದಲ್ಲಿ ಭಾರತ ಭಯೋತ್ಪಾದನೆಯನ್ನು ಪ್ರಾಯೋಜಿಸುತ್ತಿರುವುದಾಗಿಯೂ, ಅದಕ್ಕೆ ಪುರಾವೆಗಳು ತಮ್ಮಲ್ಲಿರುವುದಾಗಿಯೂ ಹೇಳಿದರು. ಎರಡು ದಿನಗಳ ನಂತರ ಬ್ರಿಟಿಷ್ ವಾರ್ತಾವಾಹಿನಿಗೆ ಭಯೋತ್ಪಾದನೆಯಲ್ಲಿ ಪಾಕಿಸ್ತಾನದ ಪಾತ್ರದ ಕುರಿತಾಗಿನ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತ, ‘ಅಮೆರಿಕಾ ಮತ್ತು ಬ್ರಿಟನ್ ಸಹ ಸೇರಿದಂತೆ ಪಶ್ಚಿಮಕ್ಕಾಗಿ ಪಾಕಿಸ್ತಾನ ಈ ಕೊಳಕು ಕೆಲಸವನ್ನು ಮೂರು ದಶಕಗಳಿಂದಲೂ ಮಾಡುತ್ತ ಬಂದಿದೆ’ ಎಂದು ಹೇಳಿದರು!

ಇಲ್ಲಿ ಅವರು ಉತ್ತರಿಸಬೇಕಾದ ಪ್ರಶ್ನೆಯೆಂದರೆ, 2011ರ ಅಕ್ಟೋಬರ್​ನಲ್ಲಿ ಅಮೆರಿಕಾದ ಆಗಿನ ವಿದೇಶಾಂಗ ಕಾರ್ಯದರ್ಶಿ ಹಿಲರಿ ಕ್ಲಿಂಟನ್ ಪಾಕಿಸ್ತಾನದ ರಾಜಧಾನಿಯಲ್ಲೇ ಪಾಕಿಸ್ತಾನದ ವಿದೇಶಮಂತ್ರಿ ಶಾ ಮಹಮೂದ್ ಖುರೇಶಿಯವರನ್ನು ಪಕ್ಕದಲ್ಲಿ ಕೂರಿಸಿಕೊಂಡು ‘ನೀವು ನಿಮ್ಮ ಹಿತ್ತಲಲ್ಲಿ ಹಾವುಗಳನ್ನು ಸಾಕಿ, ಅವು ನಿಮ್ಮ ನೆರೆಯವರನ್ನು ಮಾತ್ರ ಕಚ್ಚುತ್ತವೆ ಅಂದುಕೊಂಡರೆ ನೀವು ತಪ್ಪು ತಿಳಿದಿದ್ದೀರಿ!’ ಎಂದು ಹೇಳಿದ್ದು ಪಾಕಿಸ್ತಾನಕ್ಕೆ ಇನ್ನೂ ಅರ್ಥವಾಗಿಲ್ಲವೇ ಎಂದು. ಪಾಕಿಸ್ತಾನ ಭಯೋತ್ಪಾದನೆಯಲ್ಲಿ ತೊಡಗಿರುವುದರ ಕುರಿತಾಗಿ ಚೀಲದಿಂದ ಬೆಕ್ಕನ್ನು ಹೊರಗೆ ಬಿಟ್ಟ ಪಾಕ್ ನೇತಾರರಲ್ಲಿ ಖ್ವಾಜಾ ಆಸಿಫ್ ಮೊದಲಿಗರೇನಲ್ಲ. ಈ ಕುರಿತಾಗಿನ ಸುಳಿವು ನೀಡುವ ಮಾತುಗಳನ್ನು 1994ರಲ್ಲೇ ಆಗಿನ ಪ್ರಧಾನಮಂತ್ರಿ ಬೆನಜೀರ್ ಭುಟ್ಟೋ ನೀಡಿದ್ದರು. ದಶಕದ ನಂತರ ಸೇನಾ ಸರ್ವಾಧಿಕಾರಿ ಪರ್ವೆಜ್ ಮುಷರಫ್ ‘ಟೆರರಿಸ್ಟ್ ತೊ ಹಮಾರೇ ಹೀರೋಸ್ ಥೇ ಜೀ’ ಎಂದು ನಾಚಿಕೆಯಿಲ್ಲದೆ ಹೇಳಿದ್ದರು. ಮತ್ತೆ 2008ರಲ್ಲಿ ಅಧ್ಯಕ್ಷ ಆಸಿಫ್ ಆಲಿ ಜರ್ದಾರಿ ತಮ್ಮ ದೇಶದ ಸೇನೆ ಭಯೋತ್ಪಾದಕ ಕೃತ್ಯಗಳನ್ನು ಪ್ರಾಯೋಜಿಸುತ್ತಿರುವುದರಿಂದಾಗಿ ಭಾರತದೊಂದಿಗೆ ಸಂಬಂಧಗಳನ್ನು ಸುಧಾರಿಸಿಕೊಳ್ಳಲು ತಮಗೆ ಸಾಧ್ಯವಾಗುತ್ತಿಲ್ಲ ಎಂದು ಬೇಸರ ತೋಡಿಕೊಂಡಿದ್ದರು.

ಹೀಗೆ ಪಾಕಿಸ್ತಾನದ ಮಾಜಿ ಪ್ರಧಾನಮಂತ್ರಿ, ಸೇನಾ ಸರ್ವಾಧಿಕಾರಿ ಹಾಗೂ ಅಧ್ಯಕ್ಷರೇ ತಮ್ಮದೊಂದು ಭಯೋತ್ಪಾದಕ ರಾಷ್ಟ್ರ ಎಂದು ಬಹಿರಂಗವಾಗಿಯೇ ಸಾರಿದರೂ ಆ ಕೊಳಕು ಕೆಲಸಕ್ಕಾಗಿ ಇದುವರೆಗೆ ಇಸ್ಲಾಮಾಬಾದ್​ನ ಯಾವ ಸರ್ಕಾರವೂ ಪಶ್ಚಾತ್ತಾಪ ತೋರಿಲ್ಲ ಮತ್ತು ಅದನ್ನು ನಿಲ್ಲಿಸುವ ಕಿಂಚಿತ್ ಪ್ರಯತ್ನವನ್ನೂ ಮಾಡಿಲ್ಲ. ವಾಸ್ತವ ಹೀಗಿರುವಾಗ ಇಂದು ಬೈಸರನ್ ಕಣಿವೆಯಲ್ಲಿನ ಇಸ್ಲಾಮಿಕ್ ಭಯೋತ್ಪಾದನೆಯ ಹೊಣೆಯನ್ನು ಪಾಕಿಸ್ತಾನ ಹೊತ್ತುಕೊಳ್ಳುತ್ತದೆ ಮತ್ತು ಮುಂದೆ ಅಂತಹ ಸೈತಾನಿ ಕೃತ್ಯಗಳಾಗದಂತೆ ನೋಡಿಕೊಳ್ಳುತ್ತದೆ ಎಂದು ನಿರೀಕ್ಷಿಸುವುದು ಅರ್ಥಹೀನ. ಇದು ಭಾರತ ಸರ್ಕಾರಕ್ಕೂ, ರಕ್ಷಣಾ ಪಡೆಗಳ ಮುಖ್ಯಸ್ಥರಿಗೂ ತಿಳಿದೇ ಇದೆ. ಆದರೆ 2016ರ ಉರಿ ಭಯೋತ್ಪಾದಕ ದಾಳಿಗೆ ಉತ್ತರವಾಗಿ ಪಾಕ್ ಆಕ್ರಮಿತ ಕಾಶ್ಮೀರದಲ್ಲಿನ ಭಯೋತ್ಪಾದಕ ತಾಣಗಳ ಮೇಲೆ ಮತ್ತು 2019ರ ಪುಲ್ವಾಮಾ ಭಯೋತ್ಪಾದಕ ದಾಳಿಗೆ ಎದುರೇಟಾಗಿ ಬಾಲಾಕೋಟ್​ನಲ್ಲಿನ ಭಯೋತ್ಪಾದಕ ತರಬೇತಿ ಕೇಂದ್ರದ ಮೇಲೆ ಸರ್ಜಿಕಲ್ ದಾಳಿ ನಡೆಸಿದಂತೆ ಈ ಬಾರಿಯೂ ಮಾಡುವುದರಿಂದಲೂ ಹೆಚ್ಚೇನೂ ಪ್ರಯೋಜನವಾಗದು ಎನ್ನುವುದೂ ನವದೆಹಲಿಗೆ ಗೊತ್ತೇ ಇದೆ.

2016ರ ಸೆಪ್ಟೆಂಬರ್ 18 ಮತ್ತು 2019ರ ಫೆಬ್ರವರಿ 14ರ ಹಾಗೆ 2025ರ ಏಪ್ರಿಲ್ 22 ಅಲ್ಲ. ಈ ದಾಳಿ ಎಸಗಿದವರು ಕೇವಲ ಭಯೋತ್ಪಾದಕರಲ್ಲ ಮತ್ತು ಅವರನ್ನು ಈ ಕೃತ್ಯಕ್ಕಾಗಿ ಅಟ್ಟಿದವರು ಇಸ್ಲಾಮಾಬಾದ್​ನಲ್ಲಿ ಮಾತ್ರ ಇಲ್ಲ. ಈ ಬಾರಿ ಭಾರತಕ್ಕಿರುವ ಆಯ್ಕೆಗಳನ್ನು ಸೀಮಿತ ಹಾಗೂ ಕಠಿಣಗೊಳಿಸಿರುವುದು ಈ ಅಂಶ. ಪಾಕಿಸ್ತಾನ ಆರ್ಥಿಕವಾಗಿ ಹೀನಾಯ ಸ್ಥಿತಿಯಲ್ಲಿದೆ. ಜತೆಗೆ ಅದರ ಶಸ್ತ್ರಾಸ್ತ್ರ ಸಂಗ್ರಹವೂ ದೊಡ್ಡ ಮಟ್ಟದಲ್ಲಿಲ್ಲ. ಸಣ್ಣ ಶಸ್ತ್ರಾಸ್ತ್ರಗಳ ಬಹುದೊಡ್ಡ ಭಾಗವನ್ನು ಅದು ಕೆಲವು ಮಿಲಿಯನ್ ಡಾಲರ್​ಗಳಿಗಾಗಿ ಯೂಕ್ರೇನ್​ಗೆ ಮಾರಿಯಾಗಿದೆ. ಇನ್ನು ಟ್ಯಾಂಕ್ ಮತ್ತಿತರ ಸೇನಾವಾಹನಗಳನ್ನು ಹಾಗೂ ಯುದ್ಧವಿಮಾನಗಳನ್ನು ಚಾಲನೆಯಲ್ಲಿಡಲು ಅಗತ್ಯವಾದ ಇಂಧನದ ಕೊರತೆಯನ್ನು ಆ ದೇಶ ಎರಡು ವರ್ಷಗಳಿಂದಲೂ ಅನುಭವಿಸುತ್ತಿದೆ. ಹೀಗಾಗಿಯೇ ಈ ವರ್ಷದ ಡಿಸೆಂಬರ್​ವರೆಗೆ ಭೂಸೇನೆ ಹಾಗೂ ವಾಯುಸೇನೆಯ ಯಾವುದೇ ಕಸರತ್ತುಗಳನ್ನು ನಡೆಸದಿರುವ ನಿರ್ಧಾರವನ್ನು ಆ ದೇಶ ಇದೇ ಜನವರಿಯಲ್ಲಿ ತೆಗೆದುಕೊಂಡಿತ್ತು.

ಇಂತಹ ಸನ್ನಿವೇಶದಲ್ಲಿ ಏಕಾಏಕಿ ಉಲ್ಬಣಗೊಂಡ ಬಲೂಚಿ ಸ್ವಾತಂತ್ರ್ಯ ಹೋರಾಟ ಮತ್ತು 2022ರ ನವೆಂಬರ್​ನಲ್ಲಿ ಕದನವಿರಾಮ ಒಪ್ಪಂದ ರದ್ದಾದಂದಿನಿಂದಲೂ ದಿನೇದಿನೇ ತೀವ್ರಗೊಳ್ಳುತ್ತಿರುವ ಪಾಕ್ ತಾಲಿಬಾನಿಗಳ (ತೆಹ್ರೀಕ್-ಎ-ತಾಲಿಬಾನ್ ಪಾಕಿಸ್ತಾನ್, ಟಿಟಿಪಿ) ಚಟುವಟಿಕೆಗಳು ಪಾಕ್ ಸೇನೆಯ ಮೇಲೆ ಅಗಾಧ ಒತ್ತಡವನ್ನು ನಿರ್ವಿುಸಿವೆ. ಜತೆಗೆ, ಉತ್ತರದ ಅಫ್ಘಾನಿಸ್ತಾನದ ಜತೆಗೂ ಪಾಕಿಸ್ತಾನದ ಸಂಬಂಧ ಹಳಸಿಹೋಗಿದೆ. ಹೀಗೆ ‘ಎಲ್ಲವೂ’ ತನಗೆ ಪ್ರತಿಕೂಲವಾಗಿರುವಾಗ ಭಾರತವನ್ನು ಬರ್ಬರ ಭಯೋತ್ಪಾದಕ ರಕ್ತಪಾತದ ಮೂಲಕ ಕೆಣಕುವ ದುಸ್ಸಾಹಸವನ್ನು ಆ ದೇಶ ಮಾಡುವ ಸ್ಥಿತಿಯಲ್ಲಿಲ್ಲ. ಆದಾಗ್ಯೂ ಆ ದೇಶ ಪಹಲ್ಗಾಮ್ ರಕ್ತಪಾತಕ್ಕೆ ಮುಂದಾಗಿದೆ. ಅದಕ್ಕಾಗಿ ತನ್ನ ಸೇನೆಯ ಕಮ್ಯಾಂಡೋಗಳನ್ನು ನಿಯೋಜಿಸಿದೆ, ಅವರ ಕೈಗೆ ಅತ್ಯಾಧುನಿಕ ಎಂ4 ಕಾರ್ಬೆನ್ ಅಸಾಲ್ಟ್ ರೈಫಲ್​ಗಳನ್ನಿತ್ತಿದೆ! ಇದು ಹೇಗಾಯಿತು? ಈ ಪ್ರಶ್ನೆಯ ಉತ್ತರಕ್ಕಾಗಿ ನಾವು ಪಾಕಿಸ್ತಾನದ ಆಚೆಗೆ ಹೋಗಬೇಕು.

2020ರ ಬೇಸಿಗೆಯಿಂದಲೂ ಭಾರತದ ಮೇಲೆ ನಿರಂತರವಾಗಿ ಸೇನಾ ಒತ್ತಡವನ್ನು ಹೇರುತ್ತ, ಮಾತುಕಥೆಗಳನ್ನು ಕೇವಲ ಹೊತ್ತು ಕಳೆಯುವ ತಂತ್ರವಾಗಷ್ಟೇ ಬಳಸಿದ್ದ ಚೀನಾ ಕಳೆದ ವರ್ಷದ ಅಕ್ಟೋಬರ್ ಹೊತ್ತಿಗೆ ತನ್ನ ವರ್ತನೆಯನ್ನು ಬದಲಾಯಿಸಿಕೊಂಡಿತು. ಪಶ್ಚಿಮದ ವಾಸ್ತವ ಹತೋಟಿ ರೇಖೆಯಲ್ಲಿನ ಆರು ಸೂಕ್ಷ್ಮ ಸ್ಥಳಗಳಿಂದ ತನ್ನ ಸೇನೆಯನ್ನು ಹಿಂದಕ್ಕೆ ತೆಗೆದುಕೊಳ್ಳಲು ಆಗ ಚೀನಾ ಮುಂದಾದದ್ದು ಏಕೆ? ಕಾರಣ ಸರಳ. 2017-21ರ ತಮ್ಮ ಮೊದಲ ಅಧ್ಯಕ್ಷಾವಧಿಯಲ್ಲಿ ಚೀನಿ ಅರ್ಥವ್ಯವಸ್ಥೆಗೆ ಹಾನಿಕರವೆನಿಸುವ ಹಲವು ನಡೆಗಳನ್ನು ಪ್ರದರ್ಶಿಸಿದ್ದ ಡೊನಾಲ್ಡ್ ಟ್ರಂಪ್ ಮತ್ತೆ ಶ್ವೇತಭವನ ಪ್ರವೇಶಿಸುವ ಸಾಧ್ಯತೆ ಅಧಿಕವಾಗುತ್ತಿರುವುದನ್ನು ಗುರುತಿಸಿದ ಹದ್ದಿನ ಕಣ್ಣಿನ ಚೀನಿ ಅಧ್ಯಕ್ಷ ಷಿ ಜಿನ್​ಪಿಂಗ್ ಮುಂದಾಗಲಿರುವ ಅಪಾಯವನ್ನು ಗುರುತಿಸಿದರು. ಹಿಂದಿನದೇ ಕ್ರಮಗಳನ್ನು ಟ್ರಂಪ್ ಮತ್ತೆ ಅನುಸರಿಸಿದರೆ ಹಿಂದೆ ಅರೆಜೀವವಾಗಿದ್ದ ಚೀನೀ ಅರ್ಥವ್ಯವಸ್ಥೆ ಈಗ ಸಾಯುವುದು ನಿಶ್ಚಿತ ಎಂದವರು ಸರಿಯಾಗಿಯೇ ಗುರುತಿಸಿದರು.

ಟ್ರಂಪ್ ಆರಂಭಿಸಬಹುದಾದ ಸುಂಕ ಸಮರದ ಅನಾಹುತವನ್ನು ತುಸುವಾದರೂ ಸರಿದೂಗಿಸಿಕೊಳ್ಳಲು ಭಾರತದಂತಹ ದೊಡ್ಡ ಮಾರುಕಟ್ಟೆಯ ಅಗತ್ಯವನ್ನು ಮನಗಂಡ ಅವರು ಆ ಕಾರಣದಿಂದಲೇ ಭಾರತದ ವಿಶ್ವಾಸವನ್ನು ಗಳಿಸಿಕೊಳ್ಳಲು ಮೊದಲ ಹೆಜ್ಜೆಯಿಟ್ಟರು. ಅವರ ಆತಂಕ ನಿಜವಾಗಿ, ಟ್ರಂಪ್ ಮತ್ತೆ ಅಧ್ಯಕ್ಷರಾಗಿ ಚೀನಾ ಮೇಲೆ ಆಯಾತ ಸುಂಕವನ್ನು ಹಂತಹಂತವಾಗಿ ಏರಿಸತೊಡಗಿದಾಗ ಷಿ ಮತ್ತೆ ಭಾರತಕ್ಕೆ ಗಾಳ ಬೀಸಿದರು, ಭಾರತ ಮತ್ತು ಚೀನಾಗಳ ನಡುವೆ ಸ್ನೇಹಸಹಕಾರಗಳ ಅಗತ್ಯವನ್ನು ‘ಡ್ರ್ಯಾಗನ್​ ಮತ್ತು ಆನೆ ಒಟ್ಟಿಗೆ ನರ್ತಿಸಬೇಕು’ ಎಂಬ ಉಪಮಾಲಂಕಾರದೊಂದಿಗೆ ಒತ್ತಿಹೇಳಿ ನಮ್ಮ ರಾಷ್ಟ್ರಪತಿಗಳಿಗೆ ಚಂದದ ಪತ್ರ ಬರೆದರು, ಭಾರತದ ವಸ್ತುಗಳಿಗೆ 5% ಸುಂಕ ವಿನಾಯಿತಿ ನೀಡುವುದಲ್ಲದೆ ಚೀನಿ ಮಾರುಕಟ್ಟೆಗೆ ಹೆಚ್ಚಿನ ಭಾರತೀಯ ಸರಕುಗಳ ಪ್ರವೇಶಕ್ಕೆ ಅವಕಾಶ ಮಾಡಿಕೊಡುವುದಾಗಿಯೂ ಹೇಳಿದರು. ಅವರ ಈ ಎಲ್ಲ ನೌಟಂಕಿಗಳ ಉದ್ದೇಶ ಇಷ್ಟೇ- ಭಾರತ ಹೆಚ್ಚುಹೆಚ್ಚು ಚೀನಿ ವಸ್ತುಗಳಿಗೆ ತನ್ನ ಮಾರುಕಟ್ಟೆಯನ್ನು ತೆರೆಯಬೇಕು, ಆ ಮೂಲಕ ಅಮೆರಿಕಾದಲ್ಲಿ ಮಾರಲಾಗದ ತನ್ನ ಸರಕುಗಳ ಒಂದಷ್ಟು ಭಾಗವನ್ನು ಭಾರತದ ಮೇಲೆ ಸುರಿದು ತನ್ನ ಕಾರ್ಖಾನೆಗಳು ಮುಚ್ಚದಿರುವಂತೆ ನೋಡಿಕೊಳ್ಳುವುದು!

ಭಾರತ ಈ ಆಮಿಷಗಳಿಗೆ ಸೋಲದೆ ಹೋದರೆ ಅದನ್ನು ಹೇಗೆ ‘ದಾರಿಗೆ ತರಬೇಕು’ ಎಂದೂ ಕುಟಿಲ ಷಿ ಲೆಕ್ಕಹಾಕಿಯೇ ಇದ್ದರು. ಅದೂ ಹಳೆಯ ತಂತ್ರವೇ. ಭಾರತ ಮತ್ತು ಪಾಕಿಸ್ತಾನಗಳ ನಡುವೆ ವೈಮನಸ್ಯವನ್ನು ಉದ್ರೇಕಿಸುವುದು ಮತ್ತು ಮಧ್ಯವರ್ತಿಯ ಕಳ್ಳವೇಷವನ್ನೂ ಹಾಕುವುದು! ಇದರಿಂದ ಎರಡು ಗುರಿಗಳನ್ನು ಸಾಧಿತವಾಗಬಹುದಾಗಿತ್ತು. ಒಂದು- ಪಾಕಿಸ್ತಾನಕ್ಕೆ ‘ಬುದ್ಧಿ ಹೇಳುವ’, ಆ ಮೂಲಕ ಭಾರತದ ಹಿತ ಕಾಯುವ ನಾಟಕವಾಡಿ ನವದೆಹಲಿಯಿಂದ ಆರ್ಥಿಕ ಸವಲತ್ತುಗಳನ್ನು ಪಡೆದುಕೊಳ್ಳುವುದು, ಎರಡು- ಭಾರತ ಮತ್ತು ಪಾಕಿಸ್ತಾನಗಳ ನಡುವೆ ಯಾವ ಸಮಯದಲ್ಲಾದರೂ ಯುದ್ಧ ಆರಂಭವಾಗಬಹುದು ಮತ್ತು ಅದರಿಂದಾಗಿ ಭಾರತದಲ್ಲಿ ಹೂಡಿಕೆ ಮುಳುಗಿಹೋಗಬಹುದು ಎಂಬ ಹೆದರಿಕೆಯನ್ನು ಆಪಲ್, ಫಾಕ್ಸ್​ಕಾನ್ ಮುಂತಾದ ಬಹುರಾಷ್ಟ್ರೀಯ ಕಂಪನಿಗಳಲ್ಲಿ ಮೂಡಿಸಿ, ಅವು ಚೀನಾದಲ್ಲಿನ ತಮ್ಮ ಉತ್ಪಾದನಾ ಘಟಕಗಳನ್ನು ಭಾರತಕ್ಕೆ ವರ್ಗಾಯಿಸದಂತೆ ಪ್ರೇರೇಪಿಸುವುದು.

ತನ್ನ ಈ ನಾಟಕದಲ್ಲಿ ಪಾಕ್ ಸೇನಾ ದಂಡನಾಯಕ ಜ. ಆಸಿಂ ಮುನೀರ್ ಸೂಕ್ತ ಪಾತ್ರಧಾರಿ ಎನ್ನುವುದು ಅಧ್ಯಕ್ಷ ಷಿ ಅವರಿಗೆ ಗೊತ್ತೇ ಇದೆ. ಪಾಕಿಸ್ತಾನಕ್ಕೆ ಅಮೆರಿಕಾಗಿಂತಲೂ ಚೀನಾ ಹೆಚ್ಚು ಮುಖ್ಯ ಎಂದು ಜ. ಮುನೀರ್ ತಾವು ಐಎಸ್​ಐ ಮುಖ್ಯಸ್ಥರಾಗಿದ್ದಾಗಿನಿಂದಲೂ ತೋರಿಸಿಕೊಳ್ಳುತ್ತಲೇ ಇದ್ದಾರೆ. ಜತೆಗೆ, ಭಾರತದಿಂದ ಅಪಾಯವಿದೆಯೆಂದು ಗುಲ್ಲೆಬ್ಬಿಸಿ ಬಲೂಚಿಗಳು ಮತ್ತು ಪಖ್ತೂನಿಗಳನ್ನು ಆಂದೋಲನದಿಂದ ವಿಮುಖಗೊಳಿಸಿ, ಆ ಮೂಲಕ ತಮ್ಮ ಸೇನೆಯ ಮೇಲೆ ಏರುತ್ತಿರುವ ಒತ್ತಡವನ್ನು ಕಡಿಮೆಗೊಳಿಸಿಕೊಳ್ಳಬಹುದು ಎಂದೂ ಅವರು ತಿಳಿದಿದ್ದಾರೆ. ಹಿಂದೂಗಳ ವಿರುದ್ಧ ದ್ವೇಷ ಕಾರುವ, 1971ರಲ್ಲೇ ಇತಿಹಾಸದ ಕಸದಬುಟ್ಟಿ ಸೇರಿದ ‘ದ್ವಿರಾಷ್ಟ್ರ ಸಿದ್ಧಾಂತ’ವನ್ನು ಪಾಕಿಸ್ತಾನಿಯರಿಗೆ ನೆನಪಿಸುವ ಭಾಷಣವನ್ನು ಏಪ್ರಿಲ್ 18ರಂದು ಅವರು ಮಾಡಿದ್ದು ಇದೇ ಉದ್ದೇಶದಿಂದ.

ತಂತಮ್ಮ ಲೆಕ್ಕಾಚಾರದಲ್ಲಿ ಚೀನಿ ಅಧ್ಯಕ್ಷ ಮತ್ತು ಪಾಕ್ ದಂಡನಾಯಕ ಜಂಟಿಯಾಗಿ ರೂಪಿಸಿದ ಹುನ್ನಾರದಂತೆ ಪಾಕಿಸ್ತಾನಿ ಸೇನೆಯ ಕಮ್ಯಾಂಡೋಗಳನ್ನೂ ಒಳಗೊಂಡ ಭಯೋತ್ಪಾದಕ ಹಂತಕರ ತಂಡ ಹಲವು ದಿನಗಳ ಹಿಂದೆಯೇ ಕಾಶ್ಮೀರವನ್ನು ಪ್ರವೇಶಿಸಿದೆ. ಇಂತಹವರ ಒಳನುಸುಳುವಿಕೆ 2022ರ ನವೆಂಬರ್​ನಲ್ಲಿ ಆಸಿಮ್ ಮುನೀರ್ ಸೇನಾ ದಂಡನಾಯಕರಾದಾಗಿನಿಂದಲೂ ಮತ್ತೆಮತ್ತೆ ನಡೆಯುತ್ತಲೇ ಇದೆ. ಪೆಹಲ್​ಗಾಮ್ ಪ್ರದೇಶದಲ್ಲಿ ಪೂರ್ವಪರೀಕ್ಷಣೆ ನಡೆಸಿದ ವಿವರಗಳೂ ಈಗ ಹೊರಬರುತ್ತಿವೆ. ಮುಂದೆ ಯಾವುದೋ ದಿನ ಎಸಗಬೇಕೆಂದುಕೊಂಡಿದ್ದ ತಮ್ಮ ಕರಾಳ ಕೃತ್ಯವನ್ನು ಏ. 22ರಂದೇ ಎಸಗಲು ಅವರು ನಿರ್ಧರಿಸಿದ ಸಾಧ್ಯತೆ ಇದೆ. ಇದರ ಸೂಚನೆ ದೊರೆಯುವುದು ಹತ್ಯಾಕಾಂಡದ ಸಮಯ.

ಟ್ರಂಪ್​ರ ಸುಂಕನೀತಿಯಿಂದಾಗಿ 2018ರಲ್ಲೇ ಧಕ್ಕೆಗೊಳಗಾಗಿದ್ದ ಚೀನಿ ಉಕ್ಕು ತಯಾರಿಕಾ ಉದ್ಯಮ ಅವರ 25% ಹೊಸ ಸುಂಕದಿಂದ ಧರಾಶಾಯಿಯಾಗುವ ಸ್ಥಿತಿಗೆ ತಲುಪಿತ್ತು. ಈ ಹಿನ್ನೆಲೆಯಲ್ಲಿ ಅಧ್ಯಕ್ಷ ಷಿ ಅವರ ಎಲ್ಲ ಆಮಿಷಗಳನ್ನು ಧಿಕ್ಕರಿಸಿ ಭಾರತ ತನ್ನ ಉಕ್ಕು ಆಯಾತದ ಮೇಲೆ 12% ಸುಂಕ ವಿಧಿಸುವ ನಿರ್ಧಾರವನ್ನು ಏಪ್ರಿಲ್ 21ರಂದು ಪ್ರಕಟಿಸಿತು. ಅದಾದ 24 ತಾಸಿನೊಳಗೆ ಬೈಸರನ್ ಹತ್ಯಾಕಾಂಡ ಘಟಿಸಿಹೋಯಿತು! ಅಂದರೆ ಹತ್ಯಾಕಾರಿಗಳು ಸಿದ್ಧತೆಗಳನ್ನು ಮಾಡಿಕೊಂಡು ‘ಆಜ್ಞೆ’ಗಾಗಿ ಕಾಯುತ್ತಿದ್ದಿರಬಹುದು ಎಂದು ಊಹಿಸಬಹುದಾಗಿದೆ. ಅದು ತೋರುವುದು ಅಧ್ಯಕ್ಷ ಷಿ ಅವರ ಹತಾಶೆ ಮತ್ತು ಜ. ಮುನೀರ್ ಅವರ ಆತುರವನ್ನು. ಆದರೆ ಬೈಸರನ್ ಹತ್ಯಾಕಾಂಡಕ್ಕೆ ಭಾರತ ತೋರಲಾರಂಭಿಸಿರುವ ಪ್ರತಿಕ್ರಿಯೆ ಜ. ಮುನೀರ್ ಹಾಗೂ ಅಧ್ಯಕ್ಷ ಷಿ ಇಬ್ಬರ ಮುಖವಾಡಗಳನ್ನೂ ಕಿತ್ತುಹಾಕಿದೆ ಮತ್ತು ತಮ್ಮ ತಂತ್ರ ತಮಗೇ ಬೂಮ್ಯರ್ಯಾಂಗ್ ಆಗುತ್ತಿರುವ ಸ್ಷಷ್ಟ ಸೂಚನೆಯನ್ನು ನೀಡುತ್ತಿದೆ.

ಜ. ಮುನೀರ್ ಧೈರ್ಯಗೆಟ್ಟು ಸಂಸಾರವನ್ನು ಸುರಕ್ಷೆಗಾಗಿ ಲಂಡನ್​ಗೆ ರವಾನಿಸಿ ತಾವು ಕಣ್ಮರೆಯಾಗಿದ್ದಾರೆ. ಅವರು ರಾವಲ್​ಪಿಂಡಿಯಲ್ಲಿ ಬಂಕರ್ ಒಂದರಲ್ಲಿ ಅಡಗಿರಬಹುದಾದ ಸುದ್ದಿಗಳು ಬರುತ್ತಿವೆ. ಅವರು ಹೆದರುತ್ತಿರುವುದು ಭಾರತೀಯ ಸೇನೆಯ ಜತೆಗೆ ತನ್ನ ಸೇನೆಯಲ್ಲಿನ ವಿದ್ರೋಹಕ್ಕಾಗಿ ಮತ್ತು ಪಾಕಿಸ್ತಾನದಾದ್ಯಂತ ಹೊರಹೊಮ್ಮಿರುವ ಜನಾಕ್ರೋಶಕ್ಕಾಗಿ. ಇದೇ ಸಮಯದಲ್ಲಿ ಪಾಕಿಸ್ತಾನಕ್ಕೆ ತಾನು ಈಗಾಗಲೇ ನೀಡಿರುವ ಜೆ-17 ಯುದ್ಧವಿಮಾನಗಳಲ್ಲಿ ಅಳವಡಿಸಲು ಪಿಎಲ್-15 ಕ್ಷಿಪಣಿಗಳನ್ನು ಚೀನಾ ತರಾತುರಿಯಲ್ಲಿ ಪೂರೈಸಿರುವ ಸುದ್ದಿ ಬರುತ್ತಿದೆ. ಭಾರತದ ರಫೇಲ್ ಯುದ್ಧವಿಮಾನಗಳು ಮತ್ತು ಅವುಗಳಲ್ಲಿನ ಮೀಟಿಯೋರ್ ಕ್ಷಿಪಣಿಗಳನ್ನು ಎದುರಿಸಲು ಈ ಸಿದ್ಧತೆಯಂತೆ. ಜತೆಗೆ, ಚೀನಾ ತೆರೆಯ ಮರೆಯಿಂದ ಹೊರಬಂದಿದೆ. ಪಾಕ್ ಮೇಲೆ ಆಕ್ರಮಣವೆಸಗದಂತೆ ಭಾರತವನ್ನು ಹೆದರಿಸಲು ಈ ಎರಡೂ ದೇಶಗಳ ಜತೆ ಗಡಿ ಹೊಂದಿರುವ ತನ್ನ ಯಯ್ಘರ್ ಝಿನ್​ಜಿಯಾಂಗ್​ನಲ್ಲಿ ಸೇನಾ ಕವಾಯತು ನಡೆಸಿ ಶಕ್ತಿ ಪ್ರದರ್ಶನಕ್ಕಿಳಿದಿದೆ. ಸೂಕ್ಷ್ಮ ಸನ್ನಿವೇಶದಲ್ಲಿ ದಕ್ಷಿಣ ಏಷ್ಯಾದಲ್ಲಿ ಏನಾಗಬಹುದೆಂದು ಜಾಗತಿಕವಾಗಿ ಕುತೂಹಲ ಕೆರಳಿಸಿರುವ ಸಂಗತಿ.

(ಚೀನಾ ಅಮೆರಿಕಾಗಳ ನಡುವಿನ ಸುಂಕ ಸಮರ ಸರಣಿಯನ್ನು ಮುಂದೂಡಲಾಗಿದೆ)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net