ನಂಬಿಕೆಗೆ ತೆತ್ತ ಬೆಲೆ; ಆ ಕ್ಷಣ ಅಂಕಣ...

Aa kshana
Published on
ಎಂಬತ್ತಾರು ವಯಸ್ಸಿನ ರಾಮಯ್ಯ ಮಹಾನಗರದಲ್ಲಿ ತಾವೇ ಕಟ್ಟಿದ್ದ ಭವ್ಯ ಬಂಗಲೆಯಲ್ಲಿ 80 ವರ್ಷದ ಪತ್ನಿ ಜಾನಕಮ್ಮನೊಡನೆ ವಾಸ ಮಾಡುತ್ತಿದ್ದರು. ವಿಶ್ವಸಂಸ್ಥೆಯ ಹಿರಿಯ ಹುದ್ದೆಯಿಂದ ನಿವೃತ್ತಿ ಹೊಂದಿದ್ದ ಅವರಿಗೆ ಇಬ್ಬರು ಮಕ್ಕಳು. ಇಬ್ಬರೂ ಅಮೆರಿಕದಲ್ಲಿಯೇ ಜನಿಸಿದ್ದು, ಅಲ್ಲಿಯೇ ಕುಟುಂಬಗಳೊಡನೆ ನೆಲೆಸಿದ್ದರು. ರಾಮಯ್ಯನವರಿಗೆ ಆಜೀವ ಪರ್ಯಂತದ ನಿವೃತ್ತಿ ವೇತನ ಬರುತ್ತಿದ್ದ ಕಾರಣ ಹಣದ ಕೊರತೆಯೇನೂ ಇರಲಿಲ್ಲ. ಪ್ರತಿವರ್ಷ ಅವರು ಪತ್ನಿಯೊಡನೆ ಅಮೆರಿಕಕ್ಕೆ ಹೋಗಿ ಅಲ್ಲಿ ಮಕ್ಕಳೊಡನೆ ಆರು ತಿಂಗಳು ಕಳೆದು ಚಳಿಗಾಲದ ಸಮಯಕ್ಕೆ ತವರಿಗೆ ವಾಪಸಾಗುತ್ತಿದ್ದರು.

ಮನೆಯಲ್ಲಿ ಸಹಾಯಕ್ಕೆಂದು 22 ವರ್ಷದ ಕಿಶನ್ ಎನ್ನುವ ಯುವಕನನ್ನು ನೇಮಿಸಿಕೊಂಡಿದ್ದರು. ನೇಪಾಳಿ ಮೂಲದವನಾದ ಕಿಶನ್ ಅಡುಗೆಯನ್ನೂ ಮಾಡುತ್ತಿದ್ದ. ಸರಳವಾಗಿ ಕನ್ನಡದಲ್ಲಿ ಮಾತನಾಡುತ್ತಿದ್ದ ಆತ ಜಾನಕಮ್ಮನವರಿಗೆ ಮಗನಂತೆಯೇ ಆಗಿದ್ದ. ರಾಮಯ್ಯನವರಂತೂ ಪ್ರತಿಯೊಂದಕ್ಕೂ ಕಿಶನ್​ನನ್ನೇ ಅವಲಂಬಿಸುತ್ತಿದ್ದರು. ಆತ ನೇಪಾಳಿ ಮೂಲದ ಇತರ ನಾಲ್ವರು ಯುವಕರೊಂದಿಗೆ ಅದೇ ಬಡಾವಣೆಯ ಹೊರವಲಯದಲ್ಲಿ ರೂಮ್ ಮಾಡಿಕೊಂಡಿದ್ದು, ರಾಮಯ್ಯನವರ ಮನೆಯಲ್ಲಿ ಕೆಲಸ ಮುಗಿಸಿಕೊಂಡು ರಾತ್ರಿ 7 ಗಂಟೆಗೆ ರೂಮಿಗೆ ಹೋಗುತ್ತಿದ್ದ.

ಕೆಲವು ತಿಂಗಳುಗಳಿಂದ ಕಿಶನ್​ನ ನಡವಳಿಕೆಯಲ್ಲಿ ವ್ಯತ್ಯಾಸವನ್ನು ಪತಿಪತ್ನಿಯರಿಬ್ಬರೂ ಗಮನಿಸಿದ್ದರು. ಆತ ಪದೇಪದೆ ಸಿಡುಕುತ್ತಿದ್ದ ಮತ್ತು ಯಾವ ಕೆಲಸವನ್ನೂ ನಿಷ್ಠೆಯಿಂದ ಮಾಡುತ್ತಿರಲಿಲ್ಲ. ‘ನಿನಗೇನಾದರೂ ತೊಂದರೆಯಿದೆಯೇ?’ ಎಂದು ಅವನನ್ನು ವಿಚಾರಿಸಿದಾಗ, ‘ಊರಿನಲ್ಲಿ ಭೂಕಂಪವಾಗಿ ನನ್ನ ಮನೆ ಬಿದ್ದುಹೋಗಿದೆ, ಮನೆ ಕಟ್ಟಲು ಹಣವಿಲ್ಲದೆ ತಂದೆ ಒದ್ದಾಡುತ್ತಿದ್ದಾರೆ, ಊರಿಗೆ ವಾಪಸಾಗಬೇಕೆಂದು ಯೋಚಿಸುತ್ತಿದ್ದೇನೆ’ ಎಂದ ಕಿಶನ್. ಆಗ ರಾಮಯ್ಯ ಅವನಿಗೆ 25 ಸಾವಿರ ರೂ.ಗಳನ್ನು ಕೊಟ್ಟು ಮನೆ ರಿಪೇರಿ ಮಾಡಿಸಿಕೊಳ್ಳಲು ತಂದೆಗೆ ಕೊಡು ಎಂದರು. ಮೂರ್ನಾಲ್ಕು ವಾರ ಸರಿಯಾಗಿ ಕೆಲಸ ಮಾಡಿದ ಕಿಶನ್ ಮತ್ತೆ ಕೆಲಸದ ಬಗ್ಗೆ ಆಸಕ್ತಿ ಕಳೆದುಕೊಂಡ. ಮನೆಯಲ್ಲಿರುವಾಗ ಪದೇಪದೆ ಮೊಬೈಲ್ ಫೋನಿನಲ್ಲಿ ವಿಡಿಯೋ ಮತ್ತು ಸಿನಿಮಾಗಳನ್ನು ನೋಡುತ್ತಿದ್ದ. ‘ಕೆಲಸದ ಬಗ್ಗೆ ಆಸಕ್ತಿ ವಹಿಸು’ ಎಂದು ರಾಮಯ್ಯ ಹೇಳಿದಾಗ ಅವನಿಗೆ ಕೋಪ ಬರುತ್ತಿತ್ತು. ಆದರೆ ಮಾರುತ್ತರ ಕೊಡದೆ ಕೆಲಕಾಲ ಮನೆಯಿಂದ ಹೊರಗೆ ಹೋಗುತ್ತಿದ್ದ.

ಒಂದು ಮಧ್ಯಾಹ್ನ ಊಟವಾದ ನಂತರ ವೃದ್ಧದಂಪತಿಗೆ ಪ್ರತಿದಿನ ಕೊಡಬೇಕಾದ ಮಾತ್ರೆಗಳನ್ನು ಕೊಟ್ಟ ಕಿಶನ್ ವಾಡಿಕೆಯಂತೆ ಅವರಿಗೆ ಬಿಸಿಹಾಲನ್ನು ಕೊಟ್ಟ. ಅರ್ಧಗಂಟೆ ನಂತರ ಇಬ್ಬರೂ ನಿದ್ರೆಗೆ ಜಾರಿದರು. ಮಧ್ಯಾಹ್ನ 4 ಗಂಟೆಗೆ ರಾಮಯ್ಯನವರ ಮನೆ ಮುಂದೆ ಟೆಂಪೋ ಬಂದು ನಿಂತಿತು. ಅದರಲ್ಲಿದ್ದ ಮೂವರು ಯುವಕರು ಮನೆಯ ಕರೆಗಂಟೆ ಬಾರಿಸಿದರು. ಕಿಶನ್ ಮನೆಯ ಬಾಗಿಲು ತೆರೆದ. ಆ ಮೂರು ಜನರು ಮನೆಯೊಳಗಿದ್ದ ಫ್ರಿಜ್ ಒಂದನ್ನು ಕಿಶನ್ ಸಹಾಯದಿಂದ ಹೊರತೆಗೆದು ಟೆಂಪೋದಲ್ಲಿ ಇರಿಸಿದರು. ನೆರೆಮನೆಯ ವೃದ್ಧ ಕಿಶನ್​ನನ್ನು ‘ಫ್ರಿಜ್ ಎಲ್ಲಿಗೆ ಒಯ್ಯತ್ತಿದ್ದೀರಿ?’ ಎಂದು ಪ್ರಶ್ನಿಸಿದಾಗ ‘ಇದು ಹಳೆಯದಾಗಿರುವ ಕಾರಣ ಮಾಲೀಕರು ನನಗೆ ಬಳುವಳಿಯಾಗಿ ಕೊಟ್ಟಿದ್ದಾರೆ. ಇದನ್ನು ರೂಮಿಗೆ ತೆಗೆದುಕೊಂಡು ಹೋಗುತ್ತಿದ್ದೇನೆ’ ಎಂದ. ನಂತರ ಕಿಶನ್ ಅವರೆಲ್ಲರೊಡನೆ ಆ ಟೆಂಪೋ ಹತ್ತಿಕೊಂಡು ಎಲ್ಲಿಗೋ ಹೊರಟು ಹೋದ.

ಸಂಜೆ 6.45ಕ್ಕೆ ಜಾನಕಮ್ಮ ನಿದ್ರೆಯಿಂದ ಎಚ್ಚರಗೊಂಡರು. ಹೊರಗೆ ಕತ್ತಲಾಗಿರುವುದನ್ನು ಗಮನಿಸಿ ಪ್ರತಿದಿನವೂ 5 ಗಂಟೆಗೆ ಏಳುತ್ತಿದ್ದ ತಾನು ಇಂದೇಕೆ ಇಷ್ಟು ತಡವಾಗಿ ಎದ್ದೆ ಎಂದು ಯೋಚಿಸುತ್ತ, ‘ಕಿಶನ್, ಒಂದು ಕಪ್ ಕಾಫಿ ಮಾಡಿಕೊಂಡು ಬಾ’ ಎಂದು ಕರೆದರು. ಯಾವುದೇ ಉತ್ತರ ಬರಲಿಲ್ಲ. ಪತಿಯ ರೂಮಿನಲ್ಲಿ ಆತ ಇರಬಹುದು ಎಂದುಕೊಳ್ಳುತ್ತ ಹೋಗಿ ನೋಡಿದರೆ ಅವರೂ ಅಲ್ಲಿರಲಿಲ್ಲ. ಪತಿ ಬಾತ್​ರೂಂಗೆ ಹೋಗಿರಬಹುದು ಎಂದು ಕಾದರು. ಬರಲಿಲ್ಲ. ರಾಮಯ್ಯ ಕಿಶನ್​ನ ಜತೆಗೆ ಎಲ್ಲಿಗೋ ಹೋಗಿರಬಹುದೆಂದು ಪತಿಯ ಸೆಲ್​ಫೋನಿಗೆ ಕರೆ ಮಾಡಿದರು. ಆ ಫೋನ್ ರಾಮಯ್ಯನವರ ಹಾಸಿಗೆಯ ಮೇಲೆಯೇ ರಿಂಗಣಿಸಿತು. ಕಿಶನ್​ನ ಫೋನು ಸ್ವಿಚ್ ಆಫ್ ಆಗಿತ್ತು. ಗಾಬರಿಗೊಂಡ ಜಾನಕಮ್ಮ ಕೂಡಲೇ ಮನೆಯ ದೂರವಾಣಿಯಿಂದ ಪೊಲೀಸ್ ಕಂಟ್ರೋಲ್ ರೂಮಿಗೆ ಕರೆ ಮಾಡಿ ಪತಿ ಕಾಣೆಯಾಗಿದ್ದಾರೆ ಎಂದು ದೂರು ಕೊಟ್ಟರು. ಕೆಲವೇ ಕ್ಷಣಗಳಲ್ಲಿ ಹೊಯ್ಸಳ ವಾಹನ ಅವರ ಮನೆಯ ಮುಂದೆ ಬಂದು ನಿಂತಿತು. ಜಾನಕಮ್ಮ ಅವರಿಗೆ ನಡೆದ ಘಟನೆಯನ್ನು ವಿವರಿಸಿದರು.

ಪೊಲೀಸರು ಕರೆ ಮಾಡಿದಾಗಲೂ ಕಿಶನ್​ನ ಫೋನು ಸ್ವಿಚ್ ಆಫ್ ಆಗಿತ್ತು. ರಾಮಯ್ಯನವರ ಮನೆಯಲ್ಲಿ ಆತನ ವಿಳಾಸವೂ ಇರಲಿಲ್ಲ, ಆತನ ಸ್ನೇಹಿತರ ವಿವರಗಳೂ ಇರಲಿಲ್ಲ. ಅಷ್ಟರಲ್ಲಿ ಅಡುಗೆಮನೆಗೆ ಹೋದ ಜಾನಕಮ್ಮ ಅಲ್ಲಿದ್ದ ಫ್ರಿಜ್ ನಾಪತ್ತೆಯಾಗಿರುವುದನ್ನು ಕಂಡು ಪೊಲೀಸರಿಗೆ ತಿಳಿಸಿದರು. ಪೊಲೀಸರು ಅಕ್ಕಪಕ್ಕದಲ್ಲಿ ವಿಚಾರಿಸಿದಾಗ, ತನ್ನ ಜೊತೆಗಾರರೊಂದಿಗೆ ಕಿಶನ್ ಫ್ರಿಜ್ ಅನ್ನು ಮಧ್ಯಾಹ್ನ ತೆಗೆದುಕೊಂಡು ಹೋಗಿದ್ದು, ಮಾಲೀಕರು ಅದನ್ನು ತನಗೆ ಉಡುಗೊರೆಯಾಗಿ ಕೊಟ್ಟಿದ್ದಾರೆ ಎಂದು ತಿಳಿಸಿದನೆಂಬ ಮಾಹಿತಿಯನ್ನು ನೆರೆಮನೆಯಾತ ನೀಡಿದರು. ಕಿಶನ್ ಜತೆಗೆ ಮೂವರು ಇತರರು ಫ್ರಿ್ರ್ ಅನ್ನು ಮಿನಿ ಲಾರಿಗೆ ಲೋಡ್ ಮಾಡುತ್ತಿದ್ದುದು ಮನೆಯ ಹೊರಗಿನ ಸಿಸಿಟಿವಿ ಕ್ಯಾಮರಾದಲ್ಲಿ ದಾಖಲಾಗಿತ್ತು, ಆದರೆ ಆ ವಾಹನದ ನೋಂದಣಿ ಸಂಖ್ಯೆಯಲ್ಲಿ ಕೇವಲ ಎರಡೇ ಅಂಕಿಗಳು ಕಂಡುಬರುತ್ತಿದ್ದವು.

ಕಿಶನ್ ತನ್ನ ಜತೆಗಾರರೊಂದಿಗೆ ಕೂಡಿ ಹಣಕ್ಕಾಗಿ ರಾಮಯ್ಯನವರ ಅಪಹರಣ ಮಾಡಿದ್ದಾನೆ ಎಂದು ಊಹಿಸಿದ ಪೊಲೀಸರು ಅಪಹರಣ ಪ್ರಕರಣ ದಾಖಲಿಸಿದರು. ಅಪಹರಣಕಾರರಿಂದ ಒತ್ತೆಹಣಕ್ಕಾಗಿ ಬೇಡಿಕೆ ಬರಬಹುದೆಂದು ಎಲ್ಲರೂ ಕಾಯತೊಡಗಿದರು. ಮಾರನೆಯ ದಿನವೂ ಯಾವುದೇ ಕರೆ ಬರದಿದ್ದಾಗ ಪೊಲೀಸರು ಮಿನಿ ಲಾರಿಗಾಗಿ ಹುಡುಕಾಟ ಪ್ರಾರಂಭಿಸಿದರು. ಅದರ ಮಾಲೀಕನ ವಿವರಗಳು ಸಿಕ್ಕಾಗ ಆತ ತನ್ನ ಲಾರಿ ಚಾಲಕ ಗೋಪಾಲ್​ನ ಬಳಿಯಿದೆ ಎಂದು ತಿಳಿಸಿ ಗೋಪಾಲನ ಮನೆಯ ವಿಳಾಸ ಕೊಟ್ಟ. ಅಲ್ಲಿಗೆ ಹೋದಾಗ ಅದೊಂದು ಬಾಡಿಗೆಯ ಕೋಣೆಯಾಗಿದ್ದು ಅದರಲ್ಲಿಯೇ ಕಿಶನ್ ವಾಸಮಾಡುತ್ತಿದ್ದು ಆತನೂ ಸ್ಥಳದಲ್ಲಿಯೇ ಸಿಕ್ಕ. ಆ ಲಾರಿಯೂ ಮನೆಯ ಹೊರಗೇ ನಿಂತಿತ್ತು. ಅವರಿಬ್ಬರನ್ನೂ ತೀವ್ರವಾಗಿ ವಿಚಾರಣೆ ಮಾಡಿದಾಗ ಕಿಶನ್ ಹೀಗೆ ಹೇಳಿದ:

‘ನನ್ನ ಮಾಲೀಕರಾದ ರಾಮಯ್ಯ ಬಹಳ ಸಿಡುಕಿನ ಸ್ವಭಾವದವರು. ಒಂದು ಸಣ್ಣ ತಪ್ಪು ಮಾಡಿದರೂ ಬಯ್ಯುತ್ತಿದ್ದರು. ಎಷ್ಟೋ ಬಾರಿ ನನಗೆ ಹೊಡೆದೂ ಇದ್ದಾರೆ. ಆದರೆ ಅವರ ಪತ್ನಿ ಬಹಳ ಒಳ್ಳೆಯವರಾಗಿದ್ದು ನನ್ನನ್ನು ಮಗನಂತೆ ಕಾಣುತ್ತಿದ್ದರು. ತಾವು ಕೊಟ್ಟ ಹಣವನ್ನು ಹಿಂತಿರುಗಿಸಬೇಕೆಂದು ರಾಮಯ್ಯ ಒತ್ತಾಯ ಮಾಡುತ್ತಿದ್ದರು. ಅವರು 25000 ರೂ.ಗಳನ್ನು ನನಗೆ ನೀಡಿದಾಗ ಅದು ಅವರ ಸಹಾಯವೆಂದು ಭಾವಿಸಿದ್ದೆ. ಆದರೆ ಅವರು ಅದನ್ನು ಸಾಲವೆಂದು ಪರಿಗಣಿಸಿದ್ದರು. ಹೀಗಾಗಿ ಅವರನ್ನು ಅಪಹರಣ ಮಾಡಿ ಆನಂತರ ತಾವು ಕೊಟ್ಟ ಸಾಲ ತೀರಿದೆ ಎಂದು ಒಂದು ಪತ್ರದಲ್ಲಿ ಬರೆಸಿಕೊಂಡು ಅವರನ್ನು ಬಿಟ್ಟುಬಿಡಲು ತೀರ್ವನಿಸಿದ್ದೆ. ಅಪಹರಣವನ್ನು ಹೇಗೆ ಮಾಡಬೇಕು ಎಂದು ಬಹಳ ವಿಚಾರ ಮಾಡಿದೆ. ಅವರ ಮನೆಯಲ್ಲಿ ವಿದೇಶದಲ್ಲಿ ತಯಾರಾಗಿದ್ದ ಬೃಹತ್ ಫ್ರಿಜ್ ಇತ್ತು. ಅದರಲ್ಲಿ ಅವರನ್ನು ಅಡಗಿಸಿ ನನ್ನ ಕೋಣೆಗೆ ಕರೆತರಬೇಕೆಂದು ನಿರ್ಧರಿಸಿದೆ. ಈ ಯೋಜನೆಗೆ ನನ್ನ ಕೋಣೆಯಲ್ಲಿ ವಾಸಮಾಡುವ ಇತರರಾದ ಗೋಪಾಲ್, ಶಂಕರ್ ಮತ್ತು ರಮೇಶ್ ಕೈಜೋಡಿಸಲು ಒಪ್ಪಿದರು. ಗೋಪಾಲನ ಟೆಂಪೋವನ್ನೇ ಕೃತ್ಯಕ್ಕೆ ಬಳಸಲು ನಿರ್ಧರಿಸಿದೆವು.

ಮಾಲೀಕರು ಮತ್ತು ಅವರ ಪತ್ನಿ ಮಧ್ಯಾಹ್ನದ ಊಟ ಮಾಡಿದ ನಂತರ ಸೇವಿಸುವ ಹಾಲಿಗೆ ನಿದ್ರೆಗುಳಿಗೆಯನ್ನು ಹಾಕಿ ಕೊಟ್ಟೆ. ಇಬ್ಬರೂ ನಿದ್ರೆಗೆ ಜಾರಿದಾಗ ಗೆಳೆಯರನ್ನು ಮನೆಗೆ ಬರಹೇಳಿದೆ. ಅವರ ಸಹಾಯದಿಂದ, ಗಾಢನಿದ್ರೆಯಲ್ಲಿದ್ದ ರಾಮಯ್ಯನವರನ್ನು ಫ್ರಿಜ್ಜಿನಲ್ಲಿ ಮಲಗಿಸಿ ಅದನ್ನು ಎತ್ತಿಕೊಂಡು ಟೆಂಪೋಗೆ ಹಾಕಿಕೊಂಡು ಇಲ್ಲಿಗೆ ಬಂದೆವು. ಬಯಲಿನಲ್ಲಿ ಫ್ರಿಜ್ ಇಳಿಸಿ ಅದರ ಬಾಗಿಲನ್ನು ತೆರೆದಾಗ ನಮ್ಮ ಮಾಲೀಕರು ಸತ್ತುಹೋಗಿದ್ದರು. ನಮಗೆ ಮುಂದೇನು ಮಾಡಬೇಕೆಂದು ತೋಚಲಿಲ್ಲ. ಹೀಗಾಗಿ ಆ ರಾತ್ರಿ ನಾವೆಲ್ಲರೂ ಇದೇ ಬಯಲಿನ ಮೂಲೆಯಲ್ಲಿ ಒಂದು ಗುಂಡಿಯನ್ನು ತೋಡಿ ಶವವನ್ನು ಹೂತಿದ್ದೇವೆ’ ಎಂದು ಗುಂಡಿಯನ್ನು ತೋರಿಸಿದ.

ಆನಂತರ ರಾಮಯ್ಯನವರ ಶವವನ್ನು ಆ ಗುಂಡಿಯಿಂದ ಹೊರತೆಗೆಯಲಾಯಿತು. ಫ್ರಿ್ರ್ನ ಬಾಗಿಲು ಮುಚ್ಚಿದ್ದ ಕಾರಣ ಆಮ್ಲಜನಕದ ಅಭಾವದಿಂದ ಅವರು ಉಸಿರುಗಟ್ಟಿ ಸತ್ತಿರುವರೆಂದು ಶವಪರೀಕ್ಷೆ ಮಾಡಿದ ವೈದ್ಯರು ತಿಳಿಸಿದರು. ಕಿಶನ್ ಮತ್ತು ಅವನ ಮೂವರು ಸಹಚರರನ್ನು ಬಂಧಿಸಿ ಅಪಹರಣದ ಪ್ರಕರಣಕ್ಕೆ ಕೊಲೆ ಮತ್ತು ಸಾಕ್ಷ್ಯನಾಶದ ಆರೋಪವನ್ನೂ ಸೇರಿಸಲಾಯಿತು. ನ್ಯಾಯಾಲಯವು ಕಿಶನ್​ಗೆ 7 ವರ್ಷ ಮತ್ತು ಉಳಿದವರಿಗೆ ತಲಾ 3 ವರ್ಷ ಜೈಲುವಾಸವನ್ನು ವಿಧಿಸಿತು.

‘ನಾವು ಇತರರನ್ನು ಅತಿಯಾಗಿ ನಂಬದಿರುವುದೇ ನಂಬಿಕೆದ್ರೋಹದ ವಿರುದ್ಧ ನಮಗಿರುವ ರಕ್ಷಣೆ’ ಎಂದ ಅಮೆರಿಕದ ನಾಟಕಕಾರ ಟೆನೆಸ್ಸಿ ವಿಲಿಯಮ್ಸ್​ನ ಮಾತುಗಳನ್ನು ಹಿರಿಯ ನಾಗರಿಕರಷ್ಟೇ ಅಲ್ಲದೆ ಪ್ರತಿಯೊಬ್ಬರೂ ಪಾಲಿಸಿದರೆ ಇಂತಹ ದುರ್ಘಟನೆಗಳನ್ನು ಕಡಿಮೆ ಮಾಡಬಹುದು.

(ಲೇಖಕರು ನಿವೃತ್ತ ಪೊಲೀಸ್ ಅಧಿಕಾರಿ)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net