

ಬೆಂಗಳೂರು: ಕರೊನಾ ಸೋಂಕು ಹರಡುವ ಭೀತಿಯಿಂದ ಮಾಡಲಾಗಿದ್ದ ಲಾಕ್ಡೌನ್ನಿಂದ ಎಲ್ಲ ಕ್ಷೇತ್ರಗಳಂತೆ ರಿಯಲ್ ಎಸ್ಟೇಟ್ ಉದ್ಯಮಕ್ಕೂ ಭಾರಿ ಹೊಡೆತ ಬಿದ್ದಿದೆ. ಮುಂದಿನ ಆರು ತಿಂಗಳಿನಲ್ಲಿ ಈ ವಲಯವು ಬೆಳವಣಿಗೆ ಕಾಣಲಿದೆ ಎಂದು ಸಮೀಕ್ಷೆಯೊಂದರಿಂದ ತಿಳಿದು ಬಂದಿದೆ. ನೈಟ್ ಪ್ರ್ಯಾಂಕ್-ಪಿಕ್ಕಿ-ನರೇಡ್ಕೋ ಸಂಸ್ಥೆಗಳು ಜಂಟಿಯಾಗಿ ‘ರಿಯಲ್ ಎಸ್ಟೇಟ್ ಸೆಂಟಿಮೆಂಟ್ ಇಂಡೆಕ್ಸ್ ಕ್ಯು3 2020’ ಸಮೀಕ್ಷೆ ವರದಿಯಲ್ಲಿ ಮುಂದಿನ 6 ತಿಂಗಳಿನಲ್ಲಿ ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಚೇತರಿಕೆ ಕಂಡು ಬಂದು ಸಕಾರಾತ್ಮಕ ಬೆಳವಣಿಗೆ ಕಾಣಲಿದೆ ಎಂಬ ಅಂಶವನ್ನು ತಿಳಿಸಲಾಗಿದೆ.
ಹಿಂದಿನ ತ್ರೖೆಮಾಸಿಕಕ್ಕೆ ಹೋಲಿಸಿದರೆ ರಿಯಲ್ ಎಸ್ಟೇಟ್ ವಲಯದ ಮೇಲಿನ ಹೂಡಿಕೆ ಮಾಡುವ ಪ್ರಮಾಣದಲ್ಲಿ ಸುಧಾರಣೆ ಕಂಡು ಬರಲಿದೆ. ವ್ಯಾಪಾರ-ವಹಿವಾಟುಗಳು ಮತ್ತೆ ಪುನರಾರಂಭಗೊಂಡಿರುವುದರಿಂದ ಮೂರನೇ ತ್ರೖೆಮಾಸಿಕದಲ್ಲಿ ವಸತಿ ವಿಭಾಗವು ಚೇತರಿಕೆ ಕಂಡು ಮತ್ತೆ ಹಿಂದಿನ ಸ್ಥಿತಿಗೆ ಮರಳಲಿದೆ ಎಂದು ನೈಟ್ ಫ್ರ್ಯಾಂಕ್ ವರದಿಯಲ್ಲಿ ಹೇಳಿದೆ.
ರಿಯಾಲ್ಟಿಯಲ್ಲಿ ಹೂಡಿಕೆ ಹೆಚ್ಚಳ: ಶೇ.38 ಮಂದಿ ಮುಂದಿನ ಆರು ತಿಂಗಳಿನಲ್ಲಿ ರಿಯಾಲ್ಟಿ ಉದ್ಯಮದಲ್ಲಿ ಹೂಡಿಕೆ ಹೆಚ್ಚಾಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಶೇ.31 ಮಂದಿ ಈಗಿರುವ ಪ್ರಮಾಣದಲ್ಲಿಯೇ ಮುಂದೆಯೂ ಹೂಡಿಕೆ ಇರಲಿದೆ ಎಂದು ಹೇಳಿದ್ದಾರೆ. ಸಮೀಕ್ಷೆಯಲ್ಲಿ ಭಾಗವಹಿಸಿದ್ದ ಶೇ.57ರಷ್ಟು ಜನ ಮುಂದಿನ 6 ತಿಂಗಳುಗಳಲ್ಲಿ ಆರ್ಥಿಕತೆಯಲ್ಲಿ ಸುಧಾರಣೆ ಕಂಡು ಬರಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸೂಚ್ಯಂಕ ಶೇ.52 ಇರಲಿದ್ದು, ಆಶಾದಾಯಕವಾದ ಸ್ಥಿತಿಯಲ್ಲಿ ಇರಲಿದೆ ಎಂದು ವರದಿ ಹೇಳಿದೆ.
ಹಣಕಾಸು ಸಂಸ್ಥೆಗಳು, ನಿರ್ವಣಗಾರರು, ಬ್ಯಾಂಕ್ಗಳು, ಖಾಸಗಿ ಷೇರು ಪಾಲುದಾರರ ಮಾಹಿತಿಯೂ ಈ ವರದಿಯಲ್ಲಿದೆ. ಜುಲೈ-ಸೆಪ್ಟೆಂಬರ್ನಲ್ಲಿ ರಿಯಲ್ ಎಸ್ಟೇಟ್ ವಹಿವಾಟಿಗೆ ಸಂಬಂಧಿಸಿದ ಸೂಚ್ಯಂಕವು 40 ಇದ್ದು, ನಿರಾಶಾದಾಯಕ ಮಟ್ಟದಲ್ಲಿದೆ. ಆಶಾದಾಯಕ ಎಂದು ಪರಿಗಣಿಸಬೇಕಾದರೆ 50ಕ್ಕಿಂತ ಅಧಿಕ ಮಟ್ಟದಲ್ಲಿರಬೇಕಾಗುತ್ತದೆ. ಇದಕ್ಕೂ ಹಿಂದಿನ ತ್ರೖೆಮಾಸಿಕದ ಅವಧಿಗೆ ಹೋಲಿಸಿದರೆ ತುಸು ಸುಧಾರಣೆ ಕಂಡು ಬಂದಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ಕರೊನಾ ಭೀತಿ ಹಿನ್ನೆಲೆಯಲ್ಲಿ ಆರ್ಥಿಕ ಕುಸಿತದಿಂದಾಗಿ ದೇಶದಲ್ಲಿ ರಿಯಲ್ ಎಸ್ಟೇಟ್ನಲ್ಲಿ ಹೂಡಿಕೆ ಮಾಡಲು ಜನ ಹಿಂದೇಟು ಹಾಕುತ್ತಿದ್ದರು. ಇದೀಗ ಮತ್ತೆ ಈ ಉದ್ಯಮದಲ್ಲಿ ಹೂಡಿಕೆ ಮಾಡುವವರ ಪ್ರಮಾಣ ಕ್ರಮೇಣ ಏರಿಕೆಯಾಗುತ್ತಿದೆ. ಆದರೆ, ಜಾಗದ ಬೆಲೆಯಲ್ಲಿ ತೀರಾ ವ್ಯತ್ಯಾಸಗಳು ಕಂಡು ಬಂದಿಲ್ಲ. ಇದರಿಂದಾಗಿ ಮುಂದಿನ ದಿನಗಳಲ್ಲಿ ಜಾಗದ ಬೆಲೆ ಇನ್ನಷ್ಟು ಹೆಚ್ಚಳವಾಗುವ ನಿರೀಕ್ಷೆಯಿದೆ. ಹೀಗಾಗಿ ಈಗಲೇ ರಿಯಲ್ ಎಸ್ಟೇಟ್ನಲ್ಲಿ ಹೂಡಿಕೆ ಮಾಡುವುದು ಉತ್ತಮ ಎನ್ನುತ್ತಾರೆ ರಿಯಲ್ ಎಸ್ಟೇಟ್ ತಜ್ಞರು.
ಈ ಸಾಲಿನ ಜನವರಿಯಿಂದ ಆಗಸ್ಟ್ ವರೆಗೆ 6.5 ಸಾವಿರ ಕೋಟಿ ರೂ.ನಷ್ಟು ರಿಯಾಲ್ಟಿ ವಲಯದಲ್ಲಿ ಖಾಸಗಿ ಷೇರು ಹೂಡಿಕೆಯಾಗಿದೆ. ಹಿಂದಿನ ವರ್ಷ ಇದೇ ಅವಧಿಯಲ್ಲಿ 42,303 ಕೋಟಿ ರೂ. ಹೂಡಿಕೆಯಾಗಿತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷದಲ್ಲಿ ಶೇ.85 ಇಳಿಕೆಯಾಗಿದೆ ಎಂಬುದನ್ನು ಕೊಲಿಯರ್ಸ್ ಹಾಗೂ ಪಿಕ್ಕಿ ಜಂಟಿಯಾಗಿ ಸಿದ್ಧಪಡಿಸಿದ ವರದಿಯಲ್ಲಿ ಗಮನಿಸಬಹುದು.
ಕರೊನಾ ಬಿಕ್ಕಟ್ಟಿನಿಂದ ದೇಶಿ ಹಾಗೂ ವಿದೇಶಿ ಹೂಡಿಕೆದಾರರು ಎಚ್ಚರಿಕೆ ವಹಿಸಿ ಕಡಿಮೆ ಪ್ರಮಾಣದಲ್ಲಿ ಹೂಡಿಕೆ ಮಾಡುತ್ತಿದ್ದಾರೆ ಎಂಬ ಅಂಶವನ್ನೂ ಈ ವರದಿಯಲ್ಲಿ ವಿವರಿಸಲಾಗಿದೆ.
ಲಾಭ ಗಳಿಸುವುದು ಅಷ್ಟು ಸುಲಭವಲ್ಲ
ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಮೊದಲಿನಂತೆ ಲಾಭಗಳಿಸುವುದು ಸಾಧ್ಯವಿಲ್ಲದಿದ್ದರೂ ಕೆಲ ಪ್ರದೇಶದಲ್ಲಿ ಈಗಲೂ ಹೆಚ್ಚಿನ ಬೇಡಿಕೆಗಳಿವೆ. ಹಲವು ಮಂದಿ ಈ ಉದ್ಯಮ ದಲ್ಲಿ ಹೂಡಿಕೆ ಮಾಡಿ ಕೋಟ್ಯಂತರ ರೂ. ಲಾಭಗಳಿಸಿದ್ದರೂ, ಇದರಲ್ಲಿರುವ ರಿಸ್ಕ್ಗಳನ್ನು ಅಲ್ಲಗಳೆಯುವಂತಿಲ್ಲ. ಸಮಯಕ್ಕೆ ಸರಿಯಾಗಿ ಜಾಗ ಮಾರಾಟವಾಗದಿರುವುದು, ಕಟ್ಟಡ ನಿರ್ಮಾಣ ವಾಗದಿರುವುದು ಸೇರಿ ಹಲವು ಅಪಾಯಗಳೂ ಇವೆ. ಕಾಲವಧಿಯಲ್ಲಿ ಆಸ್ತಿಯ ಮೌಲ್ಯ ಹೆಚ್ಚಿದರೆ ಲಾಭಗಳಿಸಬಹುದು. ಮನೆಯ ಜಾಗ, ಸುತ್ತಮುತ್ತಲ ಪ್ರದೇಶಗಳು, ಆಯಾ ಕಾಲಘಟ್ಟಕ್ಕೆ ತಕ್ಕಂತಹ ರಿಯಾಲ್ಟಿ ಉದ್ಯಮವನ್ನು ಆಧರಿಸಿ ಮನೆ, ಕಟ್ಟಡ, ಜಾಗದ ಬೆಲೆಗಳು ನಿರ್ಧರಿಸಲ್ಪಡುತ್ತವೆ.
ದೇಶದ ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಚೇತರಿಕೆ
ಲಾಕ್ಡೌನ್, ಕರೊನಾದಿಂದ ಕುಸಿತ ಕಂಡಿದ್ದ ದೇಶದ ರಿಯಲ್ ಎಸ್ಟೇಟ್ ಉದ್ಯಮ ಕ್ರಮೇಣ ಚೇತರಿಕೆ ಕಾಣುತ್ತಿದೆ. ಅದರಲ್ಲೂ ಎರಡನೇ ತ್ರೖೆಮಾಸಿಕದಲ್ಲಿ ಶೇ. 60 ಆಸ್ತಿ, ಕಟ್ಟಡಗಳ ಖರೀದಿ ಮತ್ತು ಮಾರಾಟದ ಪ್ರಕ್ರಿಯೆ ಹೆಚ್ಚಾಗಿದೆ. ಕರೊನಾ ಕಾರಣದಿಂದಾಗಿ ಕಳೆದ ಮಾರ್ಚ್ ಅಂತ್ಯದಿಂದ ಜೂನ್ ಆರಂಭದವರೆಗೆ ಬಹುತೇಕ ಎಲ್ಲ ಉದ್ಯಮಗಳು ಸ್ಥಗಿತಗೊಂಡಿದ್ದವು. ಅದಕ್ಕೆ ರಿಯಲ್ ಎಸ್ಟೇಟ್ ಉದ್ಯಮವೂ ಸೇರ್ಪಡೆಗೊಂಡಿತ್ತು. ಅಲ್ಲದೆ, ನಿರ್ಮಾಣ ಕ್ಷೇತ್ರಕ್ಕೆ ಸಂಬಂಧಿಸಿದ ವಲಸೆ ಕಾರ್ವಿುಕರು ತಮ್ಮ ಊರುಗಳಿಗೆ ಲಾಕ್ಡೌನ್ನ ಮೊದಲ ಹಂತದ ತೆರವಿನ ನಂತರವೂ ವಾಪಾಸು ಕೆಲಸಕ್ಕೆ ಆಗಮಿಸಿರಲಿಲ್ಲ. ಹೀಗಾಗಿ ಆಸ್ತಿ ಕೊಳ್ಳುವ ಮತ್ತು ಮಾರಾಟ ಮಾಡುವ ಪ್ರಕ್ರಿಯೆ ಜೂನ್ ಅಂತ್ಯದವರೆಗೂ ಸ್ಥಗಿತಗೊಳ್ಳುವಂತಾಗಿತ್ತು. ಆದರೆ, ಜುಲೈ ಆರಂಭದಿಂದ ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಚೇತರಿಕೆ ಕಂಡಿದೆ. ದೇಶಾದ್ಯಂತ 2020-21ನೇ ಸಾಲಿನ ಆರ್ಥಿಕ ವರ್ಷದ ಮೊದಲ ತ್ರೖೆಮಾಸಿಕವಾದ ಏಪ್ರಿಲ್ನಿಂದ ಜೂನ್ಗಿಂತ ಎರಡನೇ ತ್ರೖೆಮಾಸಿಕ ಜುಲೈನಿಂದ ಸೆಪ್ಟೆಂಬರ್ವರೆಗಿನ ಆಸ್ತಿಗಳ ಮಾರಾಟದ ಪ್ರಮಾಣ ಶೇ. 60 ಹೆಚ್ಚಳವಾದಂತಾಗಿದೆ.
ಬೆಂಗಳೂರಿಗೆ ಮೂರನೇ ಸ್ಥಾನ: ಆಸ್ತಿ ಮಾರಾಟಕ್ಕೆ ಸಂಬಂಧಿಸಿದಂತೆ ದೇಶದಲ್ಲಿ ಕೋಲ್ಕತಾ ಮುಂಚೂಣಿಯಲ್ಲಿದೆ. ಮಾಹಿತಿಯಂತೆ ಕೋಲ್ಕತಾದಲ್ಲಿ ಮೊದಲ ತ್ರೖೆಮಾಸಿಕ್ಕಿಂತ ಎರಡನೇ ತ್ರೖೆಮಾಸಿಕದಲ್ಲಿ ರಿಯಲ್ ಎಸ್ಟೇಟ್ ಉದ್ಯಮದ ಚಟುವಟಿಕೆ ಶೇ. 68 ಹೆಚ್ಚಳವಾಗಿದೆ.