

| ಮನೋಹರ ಜೋಶಿ
ಇತಿಹಾಸದಲ್ಲಿಯೇ ಬಹುಮುಖ ಪ್ರತಿಭೆಯ ವ್ಯಕ್ತಿತ್ವ ಶ್ರೀಮಧ್ವಾಚಾರ್ಯರದು. ಮಧ್ವಗುರುಗಳ ಪರಂಪರೆಯವರು ಶ್ರೀ ಕವೀಂದ್ರ ತೀರ್ಥರು. ಆದರ್ಶ ಸನ್ಯಾಸಿಗಳಾಗಿ ಪೀಠದಲ್ಲಿ ವಿರಾಜಿಸಿದವರು. ಶ್ರೀ ವಿದ್ಯಾಧೀರಾಜರ ಸುಧಾರಣೆಗಳನ್ನು ಮುಂದುವರಿಸಿ ಮಧ್ವ ಸಿದ್ಧಾಂತವನ್ನು ಪ್ರಚುರಪಡಿಸಿದವರು.
ಶ್ರೀ ಕವೀಂದ್ರ ತೀರ್ಥರು ಪೀಠದಲ್ಲಿದ್ದದ್ದು ಕೆಲವೇ ವರ್ಷಗಳಾದರೂ ಅವರು ಮಾಡಿದ ಸಾಮಾಜಿಕ ಕಾರ್ಯ, ಯೋಜನೆಗಳು ನೂರಾರು ವರುಷಗಳಿಂದ ಇಂದಿಗೂ ಮಾದರಿಯಾಗಿವೆ. ಶ್ರೀ ವಿದ್ಯಾಧಿರಾಜರ ಪ್ರಿಯ ಶಿಷ್ಯರಾಗಿ ಗುರುಗಳ ಆದೇಶ ಹಾಗೂ ಅನುಗ್ರಹದಂತೆ ವೇದಾಂತ ಸಾಮ್ರಾಜ್ಯವನ್ನು ವೈಭವೋಪೇತವಾಗಿ ಮುನ್ನಡೆಸಿಕೊಂಡು ಬಂದ ಕೀರ್ತಿ ಇವರದು. ಸಮಾಜದ ಉದ್ಧಾರಕ್ಕಾಗಿ ಸದಾ ಧ್ಯಾನಿಸುತ್ತಿದ್ದು ಸ್ಮರಣೀಯ ಸೇವೆಯನ್ನು ಸಲ್ಲಿಸಿದರು. ಶ್ರೀ ವಿದ್ಯಾಧಿರಾಜರ ಬಹುಮುಖ ಕೆಲಸಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಅವರ ಸಮಾಜಮುಖಿ ಕನಸುಗಳನ್ನೆಲ್ಲ ನನಸು ಮಾಡಿದರು. ಅನೇಕ ಸುಧಾರಣೆಗಳನ್ನು ತಂದ ಕೀರ್ತಿಗೆ ಭಾಜನರಾದರು. ಪೂರ್ವಾಶ್ರಮದ ಹೆಸರು ವಿದ್ವಾನ್ ವಿಷ್ಣು ದಾಸಾಚಾರ್ಯರು. ನ್ಯಾಯ ಮತ್ತು ವೇದಾಂತ ವಿದ್ಯೆಯಲ್ಲಿ ಅಗಣಿತ ಸಾಧನೆಯನ್ನು ಮಾಡಿ ಪ್ರಕಾಂಡ ಪರಮಹಂಸರಾಗಿ ಅನೇಕ ಪಂಡಿತರನ್ನು ರೂಪಿಸಿ ಸಮಾಜಕ್ಕೆ ಸನಾತನ ಧರ್ಮ ರಕ್ಷಣೆಗಾಗಿ ಕೊಡುಗೆ ನೀಡಿದರು. ‘ವಾದ ರತ್ನಾವಳಿ’ ಶ್ರೀ ಕವೀಂದ್ರ ತೀರ್ಥರು ರಚಿಸಿರುವ ಅಪೂರ್ವ ಗ್ರಂಥಗಳಲ್ಲಿ ಪ್ರಮುಖವಾದದ್ದು.
ಶ್ರೀ ಕವೀಂದ್ರ ತೀರ್ಥರು ತಮ್ಮ ಸಾಧನಾ ಜೀವನವನ್ನು ಸಂಪನ್ನಗೊಳಿಸಿ ಶ್ರೀ ವಾಗೀಶ ತೀರ್ಥರನ್ನು ಮಠದ ಪೀಠಾಧಿಪತಿ ಪಟ್ಟಕ್ಕೆ ನೇಮಿಸಿದರು. ಪಾಂಡಿತ್ಯ ಹಾಗೂ ಆಡಳಿತ ಸಾಮರ್ಥ್ಯ ಎರಡನ್ನೂ ಪಡೆದಿದ್ದ ಶ್ರೀ ಕವೀಂದ್ರ ತೀರ್ಥರು 1399ರಲ್ಲಿ ಹಂಪಿ-ಆನೆಗುಂದಿ ನಡುವಿನ ನಡುಗಡ್ಡೆ ನವವೃಂದಾವನ ಕ್ಷೇತ್ರದಲ್ಲಿ ಚೈತ್ರ ಶುದ್ಧ ನವಮಿ ಶ್ರೀ ರಾಮ ನವಮಿಯ ದಿನದಂದು ಶ್ರೀ ರಾಮ ದೇವರನ್ನು ಭಕ್ತಿಯಿಂದ ಪೂಜಿಸಿ ಬೃಂದಾವನ ಪ್ರವೇಶಿಸಿದರು.
ನವವೃಂದಾವನ ಕ್ಷೇತ್ರದಲ್ಲಿ ಮಾರ್ಚ್ 30ರಂದು ಸಹಸ್ರಾರು ಭಕ್ತರ ಸಮಕ್ಷಮದಲ್ಲಿ ಶ್ರೀ ಕವೀಂದ್ರ ತೀರ್ಥರ ವೈಭವದ ಆರಾಧನೆ ಜರುಗಲಿದೆ.
ಚರಮ ಶ್ಲೋಕ: ವಿಂದ್ರಾರೂಢಪಾದಾಸಕ್ತಂ ರಾಜೇಂದ್ರಮುನಿಸೇವಿತಂ
ಶ್ರೀ ಕವೀಂದ್ರಮುನಿಂ ವಂದೇ ಭಜತಂ ಚಂದ್ರಸನ್ನಿಭಂ