ಅಂತ್ಯ ಕಾಣದ ರಕ್ತರಂಜಿತ ಇತಿಹಾಸ

Hamas Isreal War
Published on

ಲೆವಾಂಟ್​ನ ಸರಿಸುಮಾರು ಮೂರು ಸಹಸ್ರಮಾನಗಳ ರಕ್ತರಂಜಿತ ಇತಿಹಾಸದ ಮತ್ತೊಂದು ಪುಟ ತೆರೆದುಕೊಂಡಿದೆ. ಅಕ್ಟೋಬರ್ 7ರ ಬೆಳಗು ಕೇವಲ

ಇಪ್ಪತ್ತು ನಿಮಿಷಗಳಷ್ಟು ಕ್ಷಿಪ್ರ ಅವಧಿಯಲ್ಲಿ ಪ್ಯಾಲೆಸ್ಟೀನೀಯನ್ ಭಯೋತ್ಪಾದಕ ಸಂಘಟನೆ ಹಮಾಸ್ ಇಸ್ರೇಲ್ ಮೇಲೆ ಐದರಿಂದ ಏಳು ಸಾವಿರ ಕ್ಷಿಪಣಿಗಳ ಮಳೆಗರೆದಿದೆ. ಇಸ್ರೇಲ್​ನ ವಿಶ್ವಖ್ಯಾತ ಐರನ್ ಡೋಮ್ ಕ್ಷಿಪಣಿ ಸುರಕ್ಷಾ ವ್ಯವಸ್ಥೆ ಬೆರಳೆಣಿಕೆಯಷ್ಟು ಕ್ಷಿಪಣಿಗಳ ಹೊರತಾಗಿ ಉಳಿದೆಲ್ಲವನ್ನೂ ಆಕಾಶದಲ್ಲೇ ತಡೆಗಟ್ಟಿ ನಿಷ್ಪಲಗೊಳಿಸಿದ ಕಾರಣ ಅವುಗಳಿಂದ ಆ ಯೆಹೂದಿ ರಾಷ್ಟ್ರಕ್ಕಾದ ಹಾನಿಯೇನೂ ಗಂಭೀರವಲ್ಲ. ಆದರೆ ಇದುವರೆಗಿನ ತನ್ನ ಇಪ್ಪತ್ತಮೂರು ದಾಳಿಗಳಲ್ಲಿ ಮಾಡದಿದ್ದನ್ನು ಈ ಬಾರಿ ಹಮಾಸ್ ಮಾಡಿದೆ. ಅದರ ಶಸ್ತ್ರಸಜ್ಜಿತ ಭಯೋತ್ಪಾದಕರು ಗಾಝಾ ಇಸ್ರೇಲ್ ಗಡಿಯಲ್ಲಿನ ಲೋಹಬೇಲಿಯನ್ನು ಬುಲ್​ಡೋಜರ್​ಗಳ ಮೂಲಕ ಭೇದಿಸಿ ಇಸ್ರೇಲ್​ನೊಳಗೆ ನುಗ್ಗಿ ಒಂದು ತಾಸಿನೊಳಗೆ ಹೆಂಗಸರು, ಮಕ್ಕಳು, ಹಿರಿಯರೆನ್ನದೆ ಬರ್ಬರವಾಗಿ ಕೊಂದದ್ದು ಸುಮಾರು ಏಳುನೂರು ಜನರನ್ನು. ಮಧ್ಯಯುಗದಲ್ಲಿ ಮುಸ್ಲಿಂ ದಾಳಿಕೋರರು ಉತ್ತರ ಅರೇಬಿಯಾ, ಮೆಸೊಪೊಟೇಮಿಯಾ, ಸಿರಿಯಾ, ಲೆವಾಂಟ್, ಪರ್ಶಿಯಾ, ಅನತೋಲಿಯಾ, ಖ್ವಾರಿಝ್ಮಿಯಾ, ಅಫ್ಘಾನಿಸ್ತಾನ ಮತ್ತು ಉತ್ತರ ಭಾರತದಲ್ಲಿ ಎಸಗಿದ ಪೈಶಾಚಿಕ ದಾಳಿಗಳ ಒಂದು ‘ಸ್ಯಾಂಪಲ್’ನಂತೆ ಕಂಡ ಆ ದಾಳಿಗಳಲ್ಲಿ ಹಮಾಸ್ ಭಯೋತ್ಪಾದಕರು ನೂರೈವತ್ತರಿಂದ ಇನ್ನೂರು ಜನರನ್ನು ಬಂಧಿಗಳನ್ನಾಗಿಸಿಕೊಂಡು ಗಾಝಾಗೆ ಎಳೆದುಕೊಂಡುಹೋಗಿದ್ದಾರೆ. ಅವರಲ್ಲಿ ಇಸ್ರೇಲಿಗಳಲ್ಲದೇ ಅಮೆರಿಕ, ಕೆನಡಾ, ಮೆಕ್ಸಿಕೋ, ಕೊಲಂಬಿಯಾ, ಅರ್ಜೆಂಟೈನಾ, ಬ್ರೆಝಿಲ್, ಚಿಲಿ ಬ್ರಿಟನ್, ಫ್ರಾನ್ಸ್, ಥಾಯ್ಲ್ಯಾಂಡ್ ಮತ್ತು ಫಿಲಿಪ್ಪೀನ್ಸ್​ನ ನಾಗರಿಕರೂ ಸೇರಿ ಜಗತ್ತಿನ ಮೂಲೆಮೂಲೆಯ ಜನರಿದ್ದಾರೆ. ಅವರಲ್ಲಿ ಇಬ್ಬರು ಅಮೆರಿಕನ್ ತಾಯಿ-ಮಗಳು ಮತ್ತು ಇಬ್ಬರು ಇಸ್ರೇಲಿ ವೃದ್ಧೆಯರನ್ನು ಎರಡು ವಾರಗಳ ಬಂಧನದ ನಂತರ ಹಮಾಸ್ ಬಿಡುಗಡೆ ಮಾಡಿದೆ. ಉಳಿದವರಲ್ಲಿ ಮೂಳೆ ಮುರಿತಕ್ಕೆ ಚಿಕಿತ್ಸೆ ಪಡೆಯುತ್ತಿರುವ ಒಬ್ಬಾಕೆಯ ಹೊರತಾಗಿ ಮತ್ತಾವ ಬಂಧಿಯ ಬಗೆಗೂ ವಿಶ್ವಾಸಾರ್ಹ ಮಾಹಿತಿ ಹೊರಬಂದಿಲ್ಲ. ಮಧ್ಯಯುಗದಲ್ಲಾಗುತ್ತಿದ್ದಂತೆ ಪುರುಷರೆಲ್ಲರ ಹತ್ಯೆ, ಮಹಿಳೆಯರ ಮಾನಭಂಗ ಮತ್ತು ಬಲವಂತ ವಿವಾಹ ಹಾಗೂ ಮಕ್ಕಳ ಮತಾಂತರ ಮತ್ತು ಗುಲಾಮಗಿರಿ ಈಗ ಆಗಿಲ್ಲ ಎಂದು ಆಶಿಸೋಣ. ಹಾಗೆಯೇ ಆಗಿಹೋಗಿದ್ದರೆ ಆ ಬಗ್ಗೆ ಅಚ್ಚರಿ ಪಡಬೇಕಾಗಿಲ್ಲ. ಅದು ಆ ಜನಗಳ ಪುರಾತನ ರಿವಾಜು. ಬಲಿಯಾದವರ ಬಗ್ಗೆ ಮರುಕ ಪಡುವುದಲ್ಲದೆ ಬೇರೇನೂ ಮಾಡಲು ನಮ್ಮಿಂದಾಗದು.

ಹಮಾಸ್​ನ ಅಮಾನುಷ ದಾಳಿ ನಂತರದ ಎರಡು ವಾರಗಳಿಗೂ ಅಧಿಕ ಅವಧಿಯಲ್ಲಿ ಗಾಝಾದಿಂದ ಬರುತ್ತಿರುವ ಸುದ್ದಿಗಳು ಹೃದಯವಿದ್ರಾವಕ. ಇಸ್ರೇಲ್​ನ ಪ್ರತಿದಾಳಿಯಲ್ಲಿ ಇದುವರೆಗೆ ಸುಮಾರು ಐದುಸಾವಿರ ಅಮಾಯಕ ಪ್ಯಾಲೆಸ್ತೀನಿಯನ್ನರು ಹತರಾಗಿರುವುದಲ್ಲದೆ ಹದಿನೈದು ಸಾವಿರ ಜನರು ಗಾಯಗೊಂಡಿದ್ದಾರೆ. ಬದುಕಿ ಉಳಿದವರ ಗತಿ ನರಮನುಷ್ಯರ ಸಹನಾಸಾಮರ್ಥ್ಯಕ್ಕೆ ಮೀರುವಂತಹದ್ದು. ವಾಯುದಾಳಿಗಳಿಂದಾಗಿ ವಿಶ್ವಸಂಸ್ಥೆ ತನ್ನ ಹದಿನೇಳು ಆಹಾರ ವಿತರಾಣಾ ಕೇಂದ್ರಗಳನ್ನು ಮುಚ್ಚಿದ ನಂತರ ಮತ್ತು ಇಸ್ರೇಲ್ ಆಹಾರ, ನೀರು ಮತ್ತು ಇಂಧನ ಪೂರೈಕೆಯನ್ನು ಬಂದ್ ಮಾಡಿದ ನಂತರ ತಡೆರಹಿತ ವಾಯುದಾಳಿಗಳಲ್ಲಿ ಆ ಜನ ಹೇಗೆ ಬದುಕುತ್ತಿದ್ದಾರೆ ಎನ್ನುವ ಪೂರ್ಣವಿವರಗಳು ಹೊರಬರುತ್ತಿಲ್ಲ.

ಇಷ್ಟು ಮನುಷ್ಯಸಹಜ ಭಾವನಾತ್ಮಕ ಆಯಾಮವಾಯಿತು. ಇನ್ನು ವ್ಯಾವಹಾರಿಕ ವಸ್ತುನಿಷ್ಠತೆಯಿಂದ ನೋಡಿದರೆ ಈ ರಕ್ತಪಾತ ಇನ್ನಷ್ಟು ಹಾನಿಯ ಹೊರತಾಗಿ ಮತ್ತೇನೂ ಸಾಧಿಸುವುದಿಲ್ಲ, ಯಾಕೆಂದರೆ ಆ ನೆಲದಲ್ಲಿ ಶಾಂತಿ ಸ್ಥಾಪನೆಯಾಗಬಾರದು ಎಂದು ಕೆಲವು ಶಕ್ತಿಗಳು ಸಂಚು ಹೂಡುತ್ತಿವೆ. ತನ್ನ ಪೈಶಾಚಿಕ ವರ್ತನೆಗೆ ಇಸ್ರೇಲ್ ಉಗ್ರವಾಗಿ ಪ್ರತಿಕ್ರಿಯಿಸುತ್ತದೆ ಎನ್ನುವುದು ಹಮಾಸ್​ಗೆ ಗೊತ್ತಿಲ್ಲದೇನಲ್ಲ. ಅದರಿಂದಾಗಿ ಇಸ್ರೇಲ್ ಮತ್ತು ಅರಬ್ ರಾಷ್ಟ್ರಗಳ ನಡುವೆ ಚಿಗುರುತ್ತಿರುವ ಶಾಂತಿ ಪ್ರಕ್ರಿಯೆಗೆ ಹೊಡೆತ ಬೀಳುತ್ತದೆ ಎನ್ನುವುದನ್ನು ಅರಿಯದ ಅಮಾಯಕವೇನೂ ಅಲ್ಲ ಆ ಭಯೋತ್ಪಾದಕ ಸಂಘಟನೆ. ಆದರೆ ಯೆಹೂದಿಗಳನ್ನೂ ಅರಬ್ಬರನ್ನೂ ಸಮಾನವಾಗಿ ದ್ವೇಷಿಸುವ ಇರಾನಿಯನ್ನರು ಮತ್ತು ತುರ್ಕೀಯರ ಮಾತು ಕೇಳಿ ತಾನು ಯಾರನ್ನು ಪ್ರತಿನಿಧಿಸುತ್ತೇನೆಂದು ತೋರಿಸಿಕೊಳ್ಳುತ್ತಿದೆಯೋ ಅದೇ ಬಡಪಾಯಿ ಪ್ಯಾಲೆಸ್ತೀನಿಯನ್ನರ ಮಾರಣಹೋಮಕ್ಕೆ ತಾನು ಕಾರಣವಾಗುತ್ತಿದ್ದೇನೆಂದು ಹಮಾಸ್ ಅರಿಯದೇ ಇರುವುದು ದುರಂತವೇ ಸರಿ. ಹೀಗಾಗಿ ಈ ಸುಳಿಯೊಳಗೆರಡು ಸುಳಿಗಳು, ಅವುಗಳೊಳಗೆ ನಾಲ್ಕು ಸುಳಿಗಳು ಎನ್ನುವಂತಿರುವ ಈ ಪಶ್ಚಿಮ ಏಷ್ಯಾ ದುರಂತ ನಾಟಕ ಹಾಗೂ ಅದರ ಪ್ರತ್ಯಕ್ಷ ಹಾಗೂ ಪರೋಕ್ಷ ಪಾತ್ರಧಾರಿಗಳನ್ನು ಅನಾವರಣಗೊಳಿಸುವುದು ಎರಡು ಭಾಗಗಳ ಈ ಲೇಖನದ ವಸ್ತುವಿಷಯ. ಮೊದಲನೆಯ ಭಾಗದಲ್ಲಿ ಸಮಸ್ಯೆಯ ಮೂಲದ ಅವಲೋಕನ ಮತ್ತು ಎರಡನೆಯ ಭಾಗದಲ್ಲಿ, ಕುದಿಯುತ್ತಿರುವ ಲೆವಾಂಟ್ ಹಂಡೆಯಲ್ಲಿ ತಮ್ಮ ಬೇಳೆ ಬೇಯಿಸಿಕೊಳ್ಳುತ್ತ ಪರಿಹಾರವನ್ನು ದೂರದೂರಕ್ಕೆ ತಳ್ಳುತ್ತಿರುವ ಪಶ್ಚಿಮ ಏಷ್ಯಾದ್ದೇ ಆದ ಅರಬೇತರ ಮತ್ತು ಈ ವಲಯದಾಚೆಗಿನ ದುಷ್ಟಶಕ್ತಿಗಳ ಅನಾವರಣ ಇರುತ್ತದೆ.

ಕಳೆದ ಮುಕ್ಕಾಲು ಶತಮಾನದಲ್ಲಿ ಆ ವಲಯದಲ್ಲಿ ಪುನಾರಾವರ್ತಿಸುತ್ತಿರುವುದು ಅರಬ್ ಹಿಂಸಾಕ್ರಿಯೆ, ಇಸ್ರೇಲ್ ಉಗ್ರ ಪ್ರತಿಕ್ರಿಯೆ. ಆದರೆ ಇದರಲ್ಲಿ ಹಂತಹಂತವಾಗಿ ಕಾಣುವ ಬದಲಾವಣೆಯೆಂದರೆ, ಅರಬ್ ಎನ್ನುವುದು ಪ್ಯಾಲೆಸ್ತೇನ್​ ಎಂದೂ, ಪ್ಯಾಲೆಸ್ತೇನ್​ ಎನ್ನುವುದು ಕೇವಲ ಹಮಾಸ್ ಎಂದೂ ಸೀಮಿತಗೊಳ್ಳುತ್ತ ಹೋಗಿರುವುದು. ಆದಾಗ್ಯೂ, ಪ್ರತೀ ಸಂದರ್ಭದಲ್ಲೂ ಇಸ್ರೇಲ್ ಅನ್ನು ಖಳನಾಯಕನಂತೆ ಚಿತ್ರಿಸುವ ಪರಿಪಾಠ ಭಾರತ ಸೇರಿದಂತೆ ಏಷ್ಯಾ ಮತ್ತು ಆಫ್ರಿಕಾಗಳಲ್ಲಿ ಪ್ರಚಲಿತದಲ್ಲಿದೆ. ಈ ಚಿತ್ರಣ ವಾಸ್ತವಕ್ಕೆ ವಿರುದ್ಧ ಎನ್ನುವುದು ಇತಿಹಾಸವನ್ನೂ, ವರ್ತಮಾನವನ್ನೂ ವಸ್ತುನಿಷ್ಠವಾಗಿ ಅವಲೋಕಿಸಿದರೆ ಸ್ಪಷ್ಟವಾಗುತ್ತದೆ. ಹೀಗಾಗಿ ನಮ್ಮ ಅವಲೋಕನವನ್ನು ಮೇ 15, 1948ರಂದು ಇಸ್ರೇಲ್ ಸ್ಥಾಪನೆಯಾದ ಗಳಿಗೆಯಿಂದಲೇ ಆರಂಭಿಸೋಣ.

ಇಸ್ರೇಲ್ ಸ್ಥಾಪನೆಯಾದ ಮರುಗಳಿಗೆಯೇ ಸುತ್ತಲಿನ ಜೋರ್ಡಾನ್, ಸಿರಿಯಾ, ಈಜಿಪ್ಟ್​ಗಳು ಒಟ್ಟಾಗಿ ಆ ದೇಶದ ಮೇಲೆ ದಾಳಿಯೆಸಗಿದವು. ಆ ದಾಳಿ ಯಶಸ್ವಿಯಾಗಿ ಇಸ್ರೇಲ್ ಮೊಳಕೆಯಲ್ಲೇ ಮುರುಟಿಹೋಗುತ್ತದೆಂದೂ, ಇಡೀ ಪ್ಯಾಲೆಸ್ತೇನ್​ ತಮ್ಮದಾಗುತ್ತದೆಂದೂ ನಂಬಿದ ಅರಬ್ಬರಿಗೆ ಅಂತಿಮವಾಗಿ ಆದದ್ದು ಭ್ರಮನಿರಸನ. ಯುದ್ಧದಲ್ಲಿ ಅರಬ್ ರಾಷ್ಟ್ರಗಳು ಸೋತುಹೋದವು. ಜತೆಗೆ ವಿಶ್ವಸಂಸ್ಥೆಯು ಪ್ಯಾಲೆಸ್ತೀನಿಯನ್ ಅರಬ್ಬರಿಗೆ ನೀಡಿದ್ದ ಪ್ರದೇಶಗಳಲ್ಲಿ ಬಹುಪಾಲನ್ನು ಇಸ್ರೇಲ್ ಆಕ್ರಮಿಸಿಕೊಂಡು ಅರಬ್ಬರಿಗಾಗಿ ಪಶ್ಚಿಮದ ಮೂಲೆಯಲ್ಲಿ ಒಂದು ತುಂಡು ಗಾಝಾವನ್ನೂ ಪೂರ್ವದಲ್ಲಿ ಜೋರ್ಡಾನ್ ನದಿಯ ಪಶ್ಚಿಮ ತಟಕ್ಕೆ ಹೊಂದಿಕೊಂಡಂತೆ ವೆಸ್ಟ್ ಬ್ಯಾಂಕ್ ಅನ್ನು ಮಾತ್ರ ಉಳಿಸಿತು. ಅಳಿದುಳಿದ ಪ್ರದೇಶಗಳನ್ನಾದರೂ ತಮ್ಮ ಆಡಳಿತಕ್ಕೆ ತೆಗೆದುಕೊಂಡು ಸ್ವತಂತ್ರ ಪ್ಯಾಲೆಸೆ ôನ್ ಅನ್ನು ಸ್ಥಾಪಿಸಿ, ವಿಶ್ವಸಂಸ್ಥೆಯ ಮಾನ್ಯತೆ ಪಡೆದು, ಕಳೆದುಹೋದ ಪ್ರದೇಶಗಳನ್ನು ಮರಳಿ ಪಡೆಯಲು ರಾಜತಾಂತ್ರಿಕ ಉಪಾಯಗಳನ್ನು ರೂಪಿಸುವಂಥ ಮುತ್ಸದ್ಧಿತನವನ್ನು ಪ್ರದರ್ಶಿಸುವುದರಲ್ಲಿ ಪ್ಯಾಲೆಸ್ತೇನ್​ ಅರಬ್ಬರು ವಿಫಲವಾದರು. ಅವರಿಗೆ ಆ ಮಾರ್ಗ ತೋರಿಸುವ ವಿವೇಕ ಸುತ್ತಲಿನ ಅರಬ್ ರಾಷ್ಟ್ರಗಳಿಗೂ ಇರಲಿಲ್ಲ. ಹೀಗಾಗಿ ಗಾಝಾವನ್ನು ಈಜಿಪ್ಟ್​ನ ಆಡಳಿತಕ್ಕೂ, ವೆಸ್ಟ್​ಬ್ಯಾಂಕ್ ಅನ್ನು ಜೋರ್ಡಾನ್​ನ ಆಡಳಿತಕ್ಕೂ ಒಪ್ಪಿಸಲಾಯಿತು. ಅದಾದ ಮೇಲೂ ಶಾಂತಿಯುತ ಮಾರ್ಗ ಅರಬ್ಬರಿಗೆ ಕಾಣಲಿಲ್ಲ. 1964ರಲ್ಲಿ ಹಲವು ಗೆರಿಲ್ಲಾ ಸಂಘಟನೆಗಳು ಒಟ್ಟುಗೂಡಿ ಯಾಸೆರ್ ಅರಾಫತ್ ನೇತೃತ್ವದಲ್ಲಿ ಪ್ಯಾಲೆಸ್ತೇನ್​ ಲಿಬರೇಷನ್ ಆರ್ಗನೈಝೇಷನ್ (ಪಿಎಲ್​ಓ) ಸ್ಥಾಪಿಸಿಕೊಂಡು ಹಿಂಸಾತ್ಮಕತೆಯನ್ನು ಮತ್ತೊಂದು ಮಜಲಿಗೆ ಒಯ್ದವು.

1967ರ ಆರು ದಿನಗಳ ಯುದ್ಧಕ್ಕೆ ಕಾರಣವಾದದ್ದು ಇಸ್ರೇಲ್​ಗೆ ಅಖಾಬಾ ಕೊಲ್ಲಿ ಹಾಗೂ ಸುಯೆಜ್ ಕಾಲುವೆಗಳೆರಡನ್ನೂ ಬಂದ್ ಮಾಡಿ ಆ ದೇಶಕ್ಕೆ ಏಷ್ಯಾ ಜತೆಗಿನ ಸಮುದ್ರ ವ್ಯಾಪಾರಕ್ಕೆ ಧಕ್ಕೆಯೊದಗಿಸಿದ ಈಜಿಪ್ಟ್​ನ ತಂಟೆಕೋರ ನೀತಿ. ಆ ಯುದ್ಧದಲ್ಲೂ ಇಸ್ರೇಲ್ ಜಯಗಳಿಸಿ ಎರಡು ಪ್ಯಾಲೆಸೆ ôನ್ ಪ್ರದೇಶಗಳನ್ನೂ ಆಕ್ರಮಿಸಿಕೊಂಡಿತು. ಜತೆಗೆ ಈಜಿಪ್ಟ್​ನ ಸಿನಾಯ್ ಪರ್ಯಾಯದ್ವೀಪವನ್ನೂ ಆಕ್ರಮಿಸಿಕೊಂಡು ಅಖಾಬಾ ಕೊಲ್ಲಿಯಿಂದ ಈಜಿಪ್ಟ್ ಕಾಲ್ತೆಗೆಯುವಂತೆ ಮಾಡಿತು.

1967ರ ಯುದ್ಧದಿಂದಾಗಿ ಪ್ಯಾಲೆಸ್ತೇನಿಯರ ಎಲ್ಲ ಪ್ರದೇಶಗಳೂ ಇಸ್ರೇಲಿ ಕೈಗೆ ಬಿದ್ದವು. ಸುಮಾರು ಎರಡೂವರೆ ಲಕ್ಷ ಪ್ಯಾಲೆಸ್ತೀನೀಯರು ನಿರಾಶ್ರಿತರಾಗಿ ಜೋರ್ಡಾನ್​ನಲ್ಲಿ ಆಶ್ರಯ ಪಡೆದರು. ಆದರೆ ಅಲ್ಲಿಯೂ ಅವರ ಬದುಕು ಸುಗಮವಾಗಲಿಲ್ಲ. ಪ್ಯಾಲೆಸ್ತೇನ್​ ಗೆರಿಲ್ಲಾಗಳು ತಮಗೆ ಆಶ್ರಯ ನೀಡಿದ ಜೋರ್ಡಾನಿನ ರಾಜಪ್ರಭುತ್ವವನ್ನೇ ಬುಡಮೇಲು ಮಾಡಿ ಆ ದೇಶದ ಸರ್ಕಾರವನ್ನೇ ತಮ್ಮ ವಶಕ್ಕೆ ತೆಗೆದುಕೊಳ್ಳಲು ಸೆಪ್ಟೆಂಬರ್ 1970ರಲ್ಲಿ ಪಿತೂರಿ ನಡೆಸಿದರು. ಅವರ ಈ ಉಂಡ ಮನೆಗೆ ಎರಡು ಬಗೆಯುವ ಘಾತಕಕೃತ್ಯಕ್ಕೆ ಪ್ರತಿಯಾಗಿ ಕಾರ್ಯಾಚರಣೆ ಕೈಗೊಂಡ ಜೋರ್ಡಾನ್ ಸೇನೆ ಸಾವಿರಕ್ಕೂ ಹೆಚ್ಚಿನ ಪ್ಯಾಲೆಸ್ತೇನ್​ ಗೆರಿಲ್ಲಾಗಳನ್ನು ಕೊಂದಿತು. ಜತೆಗೆ ಪಿಎಲ್​ಓ ಅನ್ನು ಅಮ್ಮಾನ್​ನಲ್ಲಿ ನೆಲೆ ಕಳೆದುಕೊಂಡು ಲೆಬನಾನ್​ನ ಬೈರೂತ್​ಗೆ ಓಡುವಂತಂತಾಯಿತು. ಅರಾಜಕತೆಯಲ್ಲಿ ನರಳುತ್ತಿದ್ದ ಆ ದೇಶದಲ್ಲಿ ಹನ್ನೆರಡು ವರ್ಷಗಳ ಕಾಲ ಇವರದ್ದೇ ದರಬಾರು ಸಾಗಿತು. ಲೆಬನೀಸ್ ಪ್ರದೇಶಗಳ ಮೂಲಕ ಇಸ್ರೇಲ್ ಮೇಲೆ ದಾಳಿಯೆಸಗುತ್ತಿದ್ದ ಪ್ಯಾಲೆಸೆ ôನ್ ಗೆರಿಲ್ಲಾಗಳ ವಿರುದ್ಧ 1982ರಲ್ಲಿ ಕಾರ್ಯಾಚರಣೆ ಕೈಗೊಂಡ ಇಸ್ರೇಲ್ ತನ್ನ ಸೇನೆಯನ್ನು ಲೆಬನಾನ್​ಗೆ ನುಗ್ಗಿಸಿ ಬೈರೂತ್ ನಗರವನ್ನು ವಶಕ್ಕೆ ತೆಗೆದುಕೊಂಡು ಅಲ್ಲಿದ್ದ ಪಿಎಲ್​ಓ ಗೆರಿಲ್ಲಾಗಳನ್ನು ಹೊರಗಟ್ಟಿತು. ದಿಕ್ಕೆಟ್ಟ ಪಿಎಲ್​ಓ ಕೊನೆಗೆ ನೆಲೆನಿಂತದ್ದು ದೂರದ ಟ್ಯುನೀಸಿಯಾದಲ್ಲಿ!

ಈ ನಡುವೆ 1974ರಲ್ಲಿ ಇಸ್ರೇಲಿನ ಯುದ್ಧಸನ್ನದ್ಧತೆಯ ಕುಂದುಗಳ ಬಗ್ಗೆ ಸೋವಿಯತ್ ಯೂನಿಯೆನ್​ನ ತಪ್ಪು ಸಲಹೆಗಳನ್ನು ನಂಬಿ ಈಜಿಪ್ಟ್ 67ರ ಯುದ್ಧದಲ್ಲಿ ಕಳೆದುಕೊಂಡ ತನ್ನ ಸಿನಾಯ್ ಪ್ರದೇಶವನ್ನು ಮರಳಿ ಪಡೆಯಲು ಇಸ್ರೇಲ್ ಮೇಲೆ ಹಠಾತ್ ದಾಳಿ ನಡೆಸಿತು. ಪ್ರತಿದಾಳಿ ನಡೆಸಿದ ಇಸ್ರೇಲ್ ‘ಯೋಂ ಕಿಪ್ಪುರ್’ ಎಂದು ಕರೆಸಿಕೊಂಡ ಈ ಯುದ್ಧವನ್ನು ತುಸು ಪ್ರಯಾಸದಿಂದಲೇ ಜಯಿಸಿತು. ಕಳೆದುಹೋದ ಪ್ರದೇಶಗಳನ್ನು ಯುದ್ಧದ ಮೂಲಕ ಮರಳಿ ಪಡೆಯುವುದು ಅಸಾಧ್ಯ ಎಂಬುದನ್ನು ಈಜಿಪ್ಟ್​ನ ಆಗಿನ ಅಧ್ಯಕ್ಷ ಅನ್ವರ್ ಸದಾತ್ ಈ ಸೋಲಿನಿಂದ ಅರಿತರು. ಶಾಂತಿಯುತ ಮಾತುಕತೆಗಳ ಮಾರ್ಗ ಹಿಡಿಯುವ ವಿವೇಕಯುತ ನಿರ್ಧಾರ ಕೈಗೊಂಡ ಅವರು ತಮಗೂ, ಇಸ್ರೇಲ್​ನ ಆಗಿನ ಪ್ರಧಾನಿ ಮನಾಕೀಂ ಬೆಗಿನ್ ಅವರಿಗೂ ಸಮಾನವಾಗಿ ಮಿತ್ರರಾಗಿದ್ದ ರುಮೇನಿಯಾದ ಅಧ್ಯಕ್ಷ ನಿಕೊಲೇ ಚೌಸೆಸ್ಕೂ್ಯ ಮೂಲಕ ಟೆಲ್ ಅವಿವ್​ಗೆ ಶಾಂತಿಸಂದೇಶ ಕಳಿಸಿದರು. ಅರವತ್ತೇಳರ ಯುದ್ಧದ ಸಂದರ್ಭದಲ್ಲೇ, ‘ಶಾಂತಿಸ್ಥಾಪನೆಗಾಗಿ ಅರಬ್ಬರಿಂದ ಕೇವಲ ಒಂದು ಟೆಲಿಫೋನ್ ಕರೆಗಾಗಿ ಕಾಯುತ್ತಿದ್ದೇವೆ’ ಎಂದು ಘೊಷಿಸಿದ್ದ ಇಸ್ರೇಲೀ ರಕ್ಷಣಾಮಂತ್ರಿ ಮೋಷೆ ದಯಾನ್ ತಕ್ಷಣ ಕಾರ್ಯಪ್ರವೃತ್ತರಾದರು. ಪರಿಣಾಮವಾಗಿ ಅಧ್ಯಕ್ಷ ಸದಾತ್ ಇಸ್ರೇಲ್​ಗೆ ಭೇಟಿನೀಡಿ ಅ ದೇಶದ ಸಂಸತ್​ನ್ನು ಉದ್ದೇಶಿಸಿ ಮಾತಾಡಿದರು. ಅದೊಂದು ಅಭೂತಪೂರ್ವ ಕ್ಷಣ. ನಂತರ ಅಮೆರಿಕದ ಅಧ್ಯಕ್ಷ ಜಿಮ್ಮಿ ಕಾರ್ಟರ್​ರ ಮಧ್ಯಸ್ಥಿಕೆಯಲ್ಲಿ ಮುಂದುವರಿದ ಮಾತುಕತೆಗಳು ಯಶಸ್ವಿಯಾಗಿ 1978ರಲ್ಲಿ ಕ್ಯಾಂಪ್ ಡೇವಿಡ್​ನಲ್ಲಿ ಒಪ್ಪಂದಕ್ಕೆ ಸಹಿ ಬಿದ್ದು ಈಜಿಪ್ಟ್ ಅಧಿಕೃತವಾಗಿ ಇಸ್ರೇಲ್​ನ ಅಸ್ತಿತ್ವವನ್ನು ಮಾನ್ಯಮಾಡಿತು. ಪ್ರತಿಯಾಗಿ ಇಸ್ರೇಲ್ ತಾನು ಆಕ್ರಮಿಸಿಕೊಂಡಿದ್ದ ಸಿನಾಯ್ ಪರ್ಯಾಯದ್ವೀಪವನ್ನು ಈಜಿಪ್ಟ್​ಗೆ ಹಿಂತಿರುಗಿಸಿತು. ಇಸ್ರೇಲ್ ಜತೆಗಿನ ಈ ಮೈತ್ರಿಗೆ ಈಜಿಪ್ಟ್ ತೆತ್ತ ಬೆಲೆ ಅಪಾರ. ಆ ದೇಶವನ್ನು ಅರಬ್​ಲೀಗ್​ನಿಂದ ಹೊರಗಟ್ಟಲಾಯಿತು. ಶಾಂತಿಯ ಶತ್ರುವೊಬ್ಬ ಅಧ್ಯಕ್ಷ ಸದಾತ್ ಅವರನ್ನು ಆಗಸ್ಟ್ 1981ರಲ್ಲಿ ಗುಂಡಿಟ್ಟು ಕೊಂದ.

ತನ್ನ ಜತೆ ಮೈತ್ರಿ ಬಯಸಿದ ಯಾವುದೇ ಅರಬ್ ರಾಷ್ಟ್ರದ ಜತೆ ಮೈತ್ರಿಗಾಗಿ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಇಸ್ರೇಲ್ ಹೇಳುತ್ತಿದ್ದುದು ಬರೀ ಬೊಗಳೆ ಅಲ್ಲ ಎಂಬುದು ಜಗತ್ತಿಗೆ ಮನವರಿಕೆಯಾದದ್ದು ಕ್ಯಾಂಪ್ ಡೇವಿಡ್ ಒಪ್ಪಂದಗಳು ಮತ್ತು ಸಿನಾಯ್ ಪರ್ಯಾಯದ್ವೀಪದ ಹಿಂತಿರುಗಿಸುವಿಕೆಯಿಂದ. 1982ರಲ್ಲಿ ಬೈರೂತ್​ನಿಂದ ಟ್ಯುನೀಸಿಯಾಗೆ ಅಟ್ಟಲ್ಪಟ್ಟ ಪಿಎಲ್​ಓಗೂ ಇದು 1988ರಲ್ಲಿ ಅರಿವಾಯಿತು. ಅದರ ಅಧ್ಯಕ್ಷ ಯಾಸೆರ್ ಅರಾಫತ್ ಇಸ್ರೇಲ್ ವಿರುದ್ಧ ಹಿಂಸಾಮಾರ್ಗವನ್ನು ತಾವು ತೊರೆಯುತ್ತಿರುವುದಾಗಿ ಆ ವರ್ಷದ ನವೆಂಬರ್ 15ರಂದು ಘೊಷಿಸಿದರು. ಮುಂದೆ ನಡೆದದ್ದು ಇತಿಹಾಸ. ಅಮೆರಿಕದ ನಿಗಾದಲ್ಲಿ, ನಾರ್ವೆಯ ಮಧ್ಯಸ್ಥಿಕೆಯಲ್ಲಿ ನಡೆದ ನಾಲ್ಕೂವರೆ ವರ್ಷಗಳ ಶಾಂತಿ ಮಾತುಕತೆಗಳು ಫಲಪ್ರದಗೊಂಡು 1993 ಸೆಪ್ಟೆಂಬರ್ 13ರಂದು ವಾಷಿಂಗ್​ಟನ್​ನಲ್ಲಿ ಒಪ್ಪಂದಕ್ಕೆ ಸಹಿಯಾಯಿತು, ಇಸ್ರೇಲ್​ನ ಅಸ್ತಿತ್ವವನ್ನು ಪಿಎಲ್​ಓ ಒಪ್ಪಿಕೊಂಡಿತು. ಪ್ರತಿಯಾಗಿ ಪ್ಯಾಲೆಸ್ತೇನ್​ಗೆ ಸ್ವಾತಂತ್ರ್ಯ ಕೊಡುವ ಮೊದಲ ಹಂತವಾಗಿ ಗಾಝಾ ಮತ್ತು ವೆಸ್ಟ್ ಬ್ಯಾಂಕ್​ನ ಜೆರಿಕೋ ಪಟ್ಟಣಗಳನ್ನು ಪ್ಯಾಲೆಸ್ತೀನೀಯರಿಗೆ ಇಸ್ರೇಲ್ ಹಿಂತಿರುಗಿಸಿತು. ಕೊನೆಗೂ ಪ್ಯಾಲೆಸ್ತೇನ್​ ರಾಷ್ಟ್ರ ಅಸ್ತಿತ್ವಕ್ಕೆ ಬಂದಿತು. ಇದಾದದ್ದು ಶಾಂತಿ ಮಾತುಕತೆಗಳ ಮೂಲಕ, ಹಿಂಸಾಚಾರದಿಂದಲ್ಲ ಎನ್ನುವುದು ಇಲ್ಲಿ ಗಮನಿಸಬೇಕಾದ ಅಂಶ.

ಓಸ್ಲೋ ಒಪ್ಪಂದಗಳ ಪರಿಣಾಮವಾಗಿ ಈ ಸಲ ಗುಂಡಿಗೆ ಬಲಿಯಾಗುವ ಸರದಿ ಇಸ್ರೇಲ್ ಪ್ರಧಾನಿ ಯಿಟ್ಜಾಕ್ ರಬೀನ್ ಅವರದಾಯಿತು. ಶಾಂತಿಯ ಶತ್ರುಗಳು ಇದ್ದೇ ಇರುತ್ತಾರೆ ಎನ್ನುವುದು ನಾವು ಒಪ್ಪಿಕೊಳ್ಳಲೇಬೇಕಾದ ಕಹಿಸತ್ಯ. ಹೀಗಾಗಿಯೇ ಪಶ್ಚಿಮ ಏಷ್ಯಾದಲ್ಲಿ ಶಾಶ್ವತ ಶಾಂತಿ ದೂರವಾಗಿಯೇ ಉಳಿದುಹೋಗಿದೆ. ಇದಕ್ಕೆ ಕಾರಣ ಅರಾಫತ್ ನೇತೃತ್ವದ ಫತಾ ಶಾಂತಿಯ ಮಂತ್ರ ಜಪಿಸಿದರೂ ಅದಕ್ಕೆ ವಿರುದ್ಧವಾಗಿ ಹಮಾಸ್ ಇಸ್ರೇಲ್ ಮೇಲೆ ಹಿಂಸಾಚಾರವನ್ನು ಮುಂದುವರಿಸಿದ್ದು, ಇಸ್ರೇಲ್​ನ ಸಂಪೂರ್ಣ ನಾಶವೇ ತನ್ನ ಗುರಿ ಎಂದು ಅಧಿಕೃತವಾಗಿಯೇ ದಾಖಲಿಸಿಕೊಂಡಿರುವ ಹಮಾಸ್ 2006ರ ಮೊದಲ (ಹಾಗೂ ಕೊನೆಯ) ಚುನಾವಣೆಗಳಲ್ಲಿ ಗಾಝಾವನ್ನು ತನ್ನ ಹಿಡಿತಕ್ಕೆ ತೆಗೆದುಕೊಂಡಿತು. ಅದಾದ ಕೂಡಲೇ ಅದು ಮಾಡಿದ ಕೆಲಸ ಫತಾವನ್ನು ಗಾಝಾದಿಂದ ಹಿಂಸಾತ್ಮಕವಾಗಿ ಉಚ್ಚಾಟಿಸಿದ್ದು. ಅಲ್ಲಿಂದೀಚೆಗೆ ಗಾಝಾ ಹಮಾಸ್​ನ ಕಪಿಮುಷ್ಟಿಯಲ್ಲಿದೆ. ಪ್ಯಾಲೆಸ್ತೀನೀಯರ ರಾಜಕೀಯ ನಾಯಕತ್ವವನ್ನೇ ಗಾಝಾದಿಂದ ಅವಮಾನಕರವಾಗಿ ಹೊರಗೆ ಹಾಕಿದ ಹಮಾಸ್​ನಿಂದ ಇಸ್ರೇಲ್ ಸದ್ವರ್ತನೆಯನ್ನು ನಿರೀಕ್ಷಿಸಲಾದೀತೇ? ಕಳೆದ ಹದಿನಾರು ವರ್ಷಗಳಿಂದ ಆಗುತ್ತಿರುವುದು ಇದೇ.

(ಲೇಖಕರು ರಾಜಕೀಯ ವಿಶ್ಲೇಷಕರು, ಕನ್ನಡ ಕತೆಗಾರರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net