ಶ್ರಮ ಸಂಸ್ಕೃತಿಗೆ ಸಂದ ಅನುಭಾವಿ ಲೋಕದೃಷ್ಟಿ

untitled-design-9-690e383d4be58
Published on
ಭಕ್ತಿ ತತ್ವದ ಮೂಲಕವೇ ಸಮತೆಯ ಸಾರವನ್ನು ಪ್ರಚುರಪಡಿಸಿದ ಕನಕದಾಸರು ಪಾರಮಾರ್ಥದ ಹಾದಿಯಲ್ಲಿ ಮುನ್ನಡೆಯುತ್ತಲೇ ಸಮಾಜದಲ್ಲಿನ ತರತಮಗಳು, ಕರ್ಮಠ ಆಚರಣೆಗಳ ವಿರುದ್ಧ ಜನಜಾಗೃತಿ ಮೂಡಿಸಿದರು. ಶ್ರಮಸಂಸ್ಕೃತಿಯ ವಿವೇಕ, ಚಿಂತನೆಯ ಪ್ರತೀಕದಂತೆ ಕಂಗೊಳಿಸುವ ಕನಕದಾಸರು ಭಕ್ತಿ ಎಂಬುದು ಪಾರಮಾರ್ಥದ ಹಾದಿಯೆಂತೋ ಅಂತೆಯೇ ಸಾಮಾಜಿಕ ಓರೆಕೋರೆಗಳನ್ನು ತಿದ್ದುವ ಸಾಧನವೂ ಆಗಬಲ್ಲದು ಎಂದು ತೋರಿದವರು.

ಪಾಂಡಿತ್ಯ, ಮೇಲರಿಮೆಯ ಅಹಂಕಾರದಲ್ಲಿ, ಕರ್ಮಠ ಆಚರಣೆಗಳ ಬಂಧನದಲ್ಲಿ ಸಿಲುಕಿದವರಿಗೆ ಕನಕದಾಸರು ಮಾನವ ಜನ್ಮದ ಉದ್ಧಾರವು ಭಕ್ತಿಭಾವದಿಂದ ಸಾಧ್ಯವೇ ಹೊರತು ಭೇದಭಾವದಿಂದಲ್ಲ ಎಂದು ನಿರೂಪಿಸಿದರು. ಆಧುನಿಕ ಭಾರತದಲ್ಲಿ ಸಮತೆಯ ಸಾಧನವಾಗಿ, ಘನತೆಯ ಬದುಕಿಗೆ ಆಸರೆಯಾಗಿ ಸಂವಿಧಾನವಿದೆ. ಆದರೆ, ಸಂವಿಧಾನದ ಅನುಪಸ್ಥಿತಿಯ ಕಾಲಘಟ್ಟಗಳಲ್ಲಿಯೂ ಸಹ ಮಾನವೀಯ ಮೌಲ್ಯಗಳನ್ನು ಸಾಕಾರಗೊಳಿಸಲು ಭಕ್ತಿ, ಅನುಭಾವಗಳನ್ನು ಈ ನೆಲದಲ್ಲಿ ಅರಳಿದ ಸಂತರು, ದಾರ್ಶನಿಕರು ಬಳಸಿದ ರೀತಿ ಅವರೆಡೆಗೆ ವೈಯಕ್ತಿಕವಾಗಿ ನನ್ನಲ್ಲಿ ಅಪಾರವಾದ ಹೆಮ್ಮೆಯನ್ನು ಮೂಡಿಸುತ್ತದೆ.

ಸಾಹಿತ್ಯ, ತತ್ವಶಾಸ್ತ್ರದ ವಿದ್ಯಾರ್ಥಿಗಳು, ಪಾರಮಾರ್ಥದ ಆಸಕ್ತರು ಸಾಮಾನ್ಯವಾಗಿ ವ್ಯಾಸಕೂಟ, ದಾಸಕೂಟವೆಂಬ ಹರಿಭಕ್ತಿ ಸಾರದ ನೆಲೆಗಳನ್ನು ಅರಿತಿರುತ್ತಾರೆ. ವ್ಯಾಸಕೂಟವು ಶಾಸ್ತ್ರಾಧ್ಯಯನ, ಸಿದ್ಧಾಂತ, ಪ್ರಮೇಯಗಳ ತರ್ಕದಲ್ಲಿ ಮುಳುಗಿದ್ದರೆ, ಹರಿದಾಸಾನುಯಾಯಿಗಳ ದಾಸ ಕೂಟವು ಭಕ್ತಿ ಮಾರ್ಗ ಪ್ರಧಾನವಾಗಿ ಭಗವಂತನಿಗೇ ತಮ್ಮನ್ನು ಅರ್ಪಿಸಿಕೊಂಡಿತು. ಇಷ್ಟೇ ಆಗಿದ್ದರೆ ಬಹುಶಃ ಕನಕ, ಪುರಂದರಾದಿಯಾಗಿ ದಾಸಕೂಟವು ಭಕ್ತಿ, ಅನುಭಾವಕ್ಕೆ ಮಾತ್ರವೇ ಸೀಮಿತವಾಗುತ್ತಿತ್ತೇನೋ. ಆದರೆ, ಅದೆಂದೂ ಶ್ರೇಷ್ಠತೆ, ಅಹಂಕಾರಗಳಿಗೆ ಒಳಗಾಗದೆ ಭಕ್ತಿಯೆಂಬುದು ಮುಕ್ತಿಯ ವೈಯಕ್ತಿಕ ಹಾದಿಯೆಂತೋ ಅಂತೆಯೇ ಸಮಾಜದ ಸ್ವಾಸ್ಥ್ಯವನ್ನು ಕಾಯುವ ಹೊಣೆಗಾರಿಕೆಯೆಂದೂ ಭಾವಿಸಿತು.

ಸಾಮಾಜಿಕ ಚಿಂತನೆ, ಪ್ರೇರಣೆ: ಸಾಮಾಜಿಕ ಚಿಂತನೆಗಳ ಹಾದಿಯಲ್ಲಿ ಕನಕದಾಸರು ಕ್ರಮಿಸಿದ ದೂರ, ಮಾಡಿದ ಮಹತ್ಸಾಧನೆ ಆದರಣೀಯವಾದದ್ದು. ಕನಕದಾಸರು ತಮ್ಮ ಕೀರ್ತನೆಗಳಲ್ಲಿ, ಕೃತಿಗಳಲ್ಲಿ ಭಕ್ತಿ, ಅನುಭಾವದಷ್ಟೇ ಪ್ರಮುಖವಾಗಿ ಸಾಮಾಜಿಕ ಚಿಂತನೆಗಳನ್ನು ಪ್ರಬಲವಾಗಿ ಮಂಡಿಸಿದರು. ಜಾತಿ, ಮತ, ಪಂಥಗಳ ಸಂಕೋಲೆಯಲ್ಲಿ ಬಂಧಿತರಾಗಿ ಭಕ್ತಿವಿಹೀನರಾದವರಿಗೆ ‘ಕುಲ ಕುಲ ಕುಲವೆಂದು ಹೊಡೆದಾಡದಿರಿ, ನಿಮ್ಮ ಕುಲದ ನೆಲೆಯನೇನಾದರೂ ಬಲ್ಲಿರಾ, ಬಲ್ಲಿರಾ’ ಎಂದು ಪ್ರಶ್ನಿಸಿದರು. ‘ನಾರಾಯಣನಾವ ಕುಲವಯ್ಯಾ, ಜಗವಲ್ಲಭನಾವಕುಲ ಪೇಳಿರಯ್ಯಾ?’ ಎಂದು ಮೂಢಮತಿಗಳನ್ನು ವಿಮರ್ಶೆಗೆ ಹಚ್ಚಿದರು.

ಹರಿದಾಸ ಸಂಕೀರ್ತನೆಗಳನ್ನು ಕೈಗೊಳ್ಳುತ್ತಾ, ಊರುಕೇರಿಗಳಲ್ಲಿ ಸಂಚರಿಸಿದ ಕನಕದಾಸರು ಇದೇ ವೇಳೆ ಜೀವನದ ಸಾರ, ಅನುಭವ ದ್ರವ್ಯಗಳ ಮುಖೇನ ಸಮಾಜದ ಸ್ವಾಸ್ಥ್ಯಕ್ಕೆ ಅತ್ಯಗತ್ಯವಾದ ನೀತಿಬೋಧೆಗಳನ್ನು, ಭಕ್ತಿ ರಸಪಾಕದಲ್ಲಿ, ಸಂಗೀತ ಮಾಧುರ್ಯದಲ್ಲಿ ಹರಿಸಿದರು. ಮುಕ್ತಿಯೆಡೆಗೆ ಸಾಗುವ ಭಕ್ತಿಯ ಹಾದಿಯಲ್ಲಿ ದ್ವೇಷಾಸೂಯೆ, ಪರಮತ ನಿಂದೆ, ಅಸಹಿಷ್ಣುತೆಗೆ ಜಾಗವಿಲ್ಲವೆಂದು ಸಾರಿದರು. ಸಣ್ಣತನ, ಕಪಟ, ಮೋಸ, ಲೋಭ, ವಂಚನೆಗಳಿಂದ ದೂರವಾಗಿ ಆಚಾರ, ವಿಚಾರಗಳಲ್ಲಿ ಶುದ್ಧರಾಗಲು ಸಮಾಜವನ್ನು ಪ್ರೇರೇಪಿಸಿದರು.

‘ಜಪವ ಮಾಡಿದರೇನು, ತಪವ ಮಾಡಿದರೇನು ಕಪಟ ಗುಣ ವಿಪರೀತ ಕಲುಷವಿದ್ದವರು’ ಎಂದು ಆಚಾರ ಶುದ್ಧತೆಯಿಲ್ಲದೆ ಮಾಡುವ ಜಪ-ತಪ, ನೇಮ-ನಿಷ್ಠೆಗಳ ಬಗ್ಗೆ ತೀಕ್ಷ್ಣವಾಗಿ ಕ್ಷ-ಕಿರಣ ಬೀರಿದವರು ಕನಕದಾಸರು. ಸತ್ಯ, ಪ್ರಾಮಾಣಿಕತೆಗಳು ಮರೀಚಿಕೆಯಾಗುತ್ತಿರುವ ಆಧುನಿಕ ಬದುಕಿನಲ್ಲಿ ಆಚಾರ ಶುದ್ಧತೆಯಿಲ್ಲದೆ ಢಾಂಬಿಕತೆಯ ಸೋಗಿನ ಮೂಲಕವೇ ಭಗವಂತನನ್ನು ಅಷ್ಟೈಶ್ವರ್ಯ, ಅಧಿಕಾರ ಬೇಡುವವರು ಕನಕದಾಸರ ಈ ಸಾಲುಗಳ ಮೇಲೆ ಕಣ್ಣಾಡಿಸಬೇಕು.

ನುಡಿ ನಡೆವ ಕಾಲದಲಿ ದಾನಧರ್ಮವ ಮಾಡದೆ,

ಅಡವಿಯೊಳು ಕೆರೆ ತುಂಬಿ ಬತ್ತಿದಂತೆ,

ಮಡದಿ ಮಕ್ಕಳಿಗೆಂದು ಒಡವೆವಸ್ತ್ರ ಗಳಿಸೆ,

ಹಿಡಿಯಲಾಯಮನವರ ಕಟ್ಟಿಗೊಳಗಾಗಿ

ಎಂದರು ಕನಕದಾಸರು. ಬಾಹ್ಯ ಆಚರಣೆಗಳಿಗೇ ಒತ್ತು ನೀಡಿ, ಅಂತರಂಗದ ವಿಚಾರವನ್ನು ಮರೆತವರನ್ನು ‘ಸಾಧುಸಜ್ಜನರ ಸಂಗವೇ ಒಂದು ಸ್ನಾನ, ಭೇದಭಾವ ವಳಿದಡೆ ಒಂದು ಸ್ನಾನ, ಆದಿಮೂರುತಿ ಕಾಗಿನೆಲೆಯಾದಿಕೇಶವನ ಪಾದಧ್ಯಾನವೇ ನಿತ್ಯ ಗಂಗಾಸ್ನಾನ’ ಎಂದು ತಿದ್ದಿದರು.

ಶ್ರಮಸಂಸ್ಕೃತಿಯ ಹರಿಕಾರ: ಶ್ರಮ ಸಂಸ್ಕೃತಿಯ ಪ್ರತಿನಿಧಿಯಾಗಿ ಕರ್ಮಯೋಗದ ಮಹತ್ವವನ್ನು ಸಾರಿದ ಕನಕದಾಸರು ತಮ್ಮ ‘ರಾಮಧಾನ್ಯ ಚರಿತೆ’ಯ ಮುಖೇನ ಶ್ರಮಿಕ ಪರಂಪರೆಯನ್ನು ಎತ್ತಿಹಿಡಿದರು. ರಾಮನ ಮುಂದೆ ರಾಗಿ, ಭತ್ತಗಳ ನಡುವೆ ನಡೆಯುವ, ತಮ್ಮಿಬ್ಬರಲ್ಲಿ ಯಾರು ಶ್ರೇಷ್ಠರು ಎನ್ನುವ ವಾಗ್ವಾದವು ವರ್ಗ-ವರ್ಣ ಸಂಘರ್ಷಗಳ ಸಾಮಾಜಿಕ ತರತಮಗಳ ಪ್ರತಿಮಾತ್ಮಕ ಮಂಡನೆಯಾಗಿದೆ. ಅಂತಿಮವಾಗಿ, ರಾಗಿಯ ಗೆಲುವಿನ ಮೂಲಕ ಶ್ರಮ ಸಂಸ್ಕೃತಿಯ ಮಹತ್ವವನ್ನು ಕನಕದಾಸರು ಎತ್ತಿ ಹಿಡಿಯುತ್ತಾರೆ.

ಕನಕದಾಸರು ಅಂದಿಗೂ, ಇಂದಿಗೂ, ಎಂದೆಂದಿಗೂ ಸಲ್ಲುವುದು ಅವರೊಳಗಿನ ಪರಿಶುದ್ಧ ಭಕ್ತಿ ಹಾಗೂ ನಿಸ್ಪೃ ಸಾಮಾಜಿಕ ಕಾಳಜಿಯಿಂದ. ಗುಡಿಗುಂಡಾರಗಳಲ್ಲಿ, ಶಾಸ್ತ್ರಾಚರಣೆಗಳಲ್ಲಿ ಕೆಲವೇ ಕೆಲವರ ಸ್ವತ್ತಿನಂತೆ ಕೈದಿಯಾಗಿದ್ದ ದೇವರ ಪರಿಕಲ್ಪನೆಯನ್ನು ವಚನಕಾರರಂತೆಯೇ, ಕೀರ್ತನಕಾರರು, ವಿಶೇಷವಾಗಿ ಹರಿದಾಸರು ಮುಕ್ತಗೊಳಿಸಿ ಜನರೆಡೆಗೆ, ಊರುಕೇರಿಗಳೆಡೆಗೆ ಒಯ್ದರು; ಒಳಿತೆಂಬ ದೈವತ್ವದ ಸಂಚಾರ ನಡೆಸಿದರು. ಕನಕದಾಸರು ಈ ಕಾರ್ಯದಲ್ಲಿ ಮುಂಚೂಣಿಯಲ್ಲಿದ್ದರು.

ಸರಳ ನಡೆ, ನುಡಿಗಳ ಮೂಲಕವೇ ಅಧ್ಯಾತ್ಮದ ಅನುಸಂಧಾನವನ್ನು ಭಕ್ತಿ ಮಾರ್ಗದಲ್ಲಿ ಸಾಧಿಸಬಹುದೆಂದು ತೋರಿದ ಕನಕದಾಸರು ಸಿದ್ಧಾಂತ, ಪ್ರಮೇಯಗಳು ಮೀರಲಾಗದ ಕಂದರಗಳನ್ನು ತಮ್ಮ ಸಂಗೀತಮಯ ಸರಳ, ಸುಂದರ ಕೀರ್ತನೆಗಳು ಲಂಘಿಸಬಲ್ಲವು ಎಂದು ನಿರೂಪಿಸಿದರು. ಕರ್ನಾಟಕ ಸಂಗೀತವು ಭದ್ರವಾಗಿ ನೆಲೆಗೊಳ್ಳಲು ಬೇಕಾದ ಭಕ್ತಿಭಾವ, ನೀತಿ ರಸಾಯನವನ್ನು ಅಣಿಗೊಳಿಸಿದ ಶ್ರೇಯದಲ್ಲಿಯೂ ಅವರ ಪಾಲು ಬಲುದೊಡ್ಡದು. ಅವರ ಕೀರ್ತನೆಗಳು ಹಾಡುಗಬ್ಬಗಳಾಗಿ, ಅರಿವಿನ ತಿದಿಯಾಗಿ ನಿರಂತರವಾಗಿ ಜನಾನುರಾಗ ಗಳಿಸಿವೆ.

ಅನುಭವ- ಅನುಭಾವಗಳಲ್ಲಿ ಮುಪ್ಪರಿದ, ಭಕ್ತಿಯೊಟ್ಟಿಗೇ ಸಾಮಾಜಿಕ ಚಿಂತನೆ, ವೈಚಾರಿಕತೆಯನ್ನು ಬೆಸೆದ ಕನಕದಾಸರ ಬಹುಮುಖೀ ವ್ಯಕ್ತಿತ್ವ ಹಾಗೂ ವಿಚಾರತತ್ವಗಳು ಬಹುನೆಲೆಗಳಲ್ಲಿ ಬೆಳಗುತ್ತಿವೆ. ಹಾಗಾಗಿಯೇ, ಸಮಕಾಲೀನ ಸಮಾಜಕ್ಕೆ ಪ್ರೇರಣಾದಾಯಕವೂ, ಮಾರ್ಗದರ್ಶಿಯೂ ಆಗಿವೆ.

ಸಂಸಾರ, ಭವಬಂಧನಗಳಿಗೆ ವಿಮುಖರಾಗದೆಯೂ ಅಂತರಂಗದ ಬೆಳಕಿನ ಹಾದಿಯನ್ನು ಅನ್ವೇಷಿಸುವ ಕನಕದಾಸರು ತೋರಿದ ಅನುಭಾವಿಗಳ ಮಾರ್ಗ ಇಂದಿನ ಸಮಾಜಕ್ಕೆ ಅಗತ್ಯವಾಗಿದೆ. ಸಮಾಜದಲ್ಲಿ ಮಡುಗಟ್ಟಿರುವ ಮತೀಯವಾದ, ದ್ವೇಷ, ಅಸಹನೆ, ಭೋಗಲೋಲುಪತೆ, ಢಾಂಬಿಕತೆಗಳಿಗೆ ಕನಕದಾಸರು ಹಾಗೂ ಅವರಂತಹ ಸಂತ ಅನುಭಾವಿಗಳ ತತ್ವ, ಕೀರ್ತನೆ, ಚಿಂತನೆಗಳು ದಿವ್ಯವೌಷಧವಾಗಿವೆ.

ಕನಕದಾಸರ ಅರ್ಥಪೂರ್ಣ ಸ್ಮರಣೆ: ಕನಕದಾಸರನ್ನು ಅರ್ಥಪೂರ್ಣವಾಗಿ ಸ್ಮರಿಸುವ, ಅರಿಯುವ, ಸಂಶೋಧಿಸುವ, ಅವರ ಅರಿವಿನ ಬೆಳಕನ್ನು ಎಲ್ಲೆಡೆ ಪಸರಿಸುವ ಉದ್ದೇಶದಿಂದ ಕರ್ನಾಟಕ ಸರ್ಕಾರವು ಅನೇಕ ಕಾರ್ಯಕ್ರಮಗಳು, ಉಪಕ್ರಮಗಳನ್ನು ಕೈಗೊಂಡಿದೆ. ಕನಕದಾಸರ ಕರ್ಮಭೂಮಿಯಾದ ಕಾಗಿನೆಲೆ ಹಾಗೂ ಹುಟ್ಟಿದ ಸ್ಥಳವಾದ ಬಾಡ ಗ್ರಾಮ ಹಾಗೂ ಸುತ್ತಮತ್ತಲಿನ ಐತಿಹಾಸಿಕ ಪರಂಪರೆಯ ತಾಣಗಳನ್ನು ಅಭಿವೃದ್ಧಿಗೊಳಿಸಲು ಇತ್ತೀಚೆಗಷ್ಟೇ 34 ಕೋಟಿ ರೂ. ಮೊತ್ತದ ಕ್ರಿಯಾಯೋಜನೆಗಳಿಗೆ ಮಂಜೂರಾತಿ ನೀಡಲಾಗಿದೆ. ಈ ಸಂಬಂಧ ನನ್ನ ಅಧ್ಯಕ್ಷತೆಯಲ್ಲಿ ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರದ 13ನೇ ಸಭೆಯನ್ನು ಇತ್ತೀಚೆಗೆ ನಡೆಸಲಾಯಿತು. ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರ ಹಾಗೂ ಕನಕ ಅಧ್ಯಯನ ಪೀಠಗಳು ಸಮನ್ವಯದಿಂದ ಕಾರ್ಯಕ್ರಮಗಳನ್ನು ರೂಪಿಸಿ ಅನುಷ್ಠಾನಗೊಳಿಸಲು ಸೂಚಿಸಲಾಗಿದೆ.

ಪ್ರಾಧಿಕಾರದ ವತಿಯಿಂದ ಕನಕ ವಸ್ತು ಸಂಗ್ರಹಾಲಯ, ಶಿಲ್ಪಸಂಗ್ರಹಾಲಯ, ಕಲಾಭವನ, ಚೆನ್ನಕೇಶವ ದೇವಾಲಯದ ಗೋಪುರ, ಕಮಾನುಗಳು ಮುಂತಾದವುಗಳ ನಿರ್ವಣ, ಉದ್ಯಾನವನಗಳ ನಿರ್ವಹಣೆ ಮುಂತಾದ ಹತ್ತುಹಲವು ಕಾಮಗಾರಿ ಕೈಗೊಳ್ಳಲು ನಿರ್ದೇಶಿಸಲಾಗಿದೆ. ಅದೇ ರೀತಿಯಲ್ಲಿ ಬಹುಮುಖ್ಯವಾಗಿ ಕನಕದಾಸರ ಸಾಹಿತ್ಯ, ಸಂಗೀತ, ತತ್ವದರ್ಶನಗಳನ್ನು ಬಹುಆಯಾಮಗಳಲ್ಲಿ, ಬಹುಶಿಸ್ತೀಯವಾಗಿ ಸಂಶೋಧನೆಗಳನ್ನು ಕೈಗೊಳ್ಳಲು ಒತ್ತು ನೀಡಲಾಗಿದೆ ಎಂದು ತಿಳಿಸಲು ಹರ್ಷಿಸುತ್ತೇನೆ. ನಾಡಬಾಂಧವರಿಗೆ ಕನಕದಾಸ ಜಯಂತಿಯ ಶುಭಾಶಯಗಳು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net