ಮೈದಳೆಯಲಿದೆ ಮನರಂಜನಾ ಪಾರ್ಕ್!

Park 1
Published on

ನಾಲ್ಕು ತಾಲೂಕುಗಳೊಂದಿಗೆ ರಾಜ್ಯ ರಾಜಧಾನಿಯ ಗಡಿ ಹಂಚಿಕೊಂಡಿರುವ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ರಿಯಾಲ್ಟಿ ಕ್ಷೇತ್ರ ದೊಡ್ಡ ಸದ್ದು ಮಾಡುತ್ತಿದೆ. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಹೊಂದಿರುವ ಖ್ಯಾತಿ ಇರುವ ದೇವನಹಳ್ಳಿ ತಾಲೂಕು ಹಾಗೂ ನಗರದ ಸೆರಗಿನಲ್ಲಿರುವ ನೆಲಮಂಗಲ ತಾಲೂಕಿನ ಸುತ್ತಮುತ್ತ ರಿಯಲ್ ಎಸ್ಟೇಟ್ ಉದ್ಯಮ ಗರಿಗೆದರಿದೆ. ಇದಕ್ಕೆ ಕಾರಣವಾಗಿರುವುದು ಮನರಂಜನಾ (ಅಮ್ಯೂಸ್​ವೆುಂಟ್) ಪಾರ್ಕ್ ನಿರ್ವಣದ ಮಹತ್ವಾಕಾಂಕ್ಷಿ ಯೋಜನೆ..

ಹೌದು! ಜಿಲ್ಲೆಯ ಪ್ರವಾಸೋದ್ಯಮ ಇಲಾಖೆ ಈ ಮನರಂಜನಾ ಪಾರ್ಕ್ ನಿರ್ವಣದ ರೂಪುರೇಷೆ ಸಿದ್ಧಪಡಿಸುತ್ತಿರುವುದು ಹೂಡಿಕೆದಾರರಿಗೆ ಸ್ವರ್ಗದ ಬಾಗಿಲು ತೆರೆದಂತಾಗಿದೆ. ಕರೊನಾ ಲಾಕ್​ಡೌನ್ ತೆರವು ಬಳಿಕ ಜಿಲ್ಲಾ ಪ್ರವಾಸೋದ್ಯಮ ಇಲಾಖೆಯಲ್ಲಿ ಚಟುವಟಿಕೆಗಳು ಗರಿಗೆದರಿದ್ದು, ರಾಮನಗರ ಜಿಲ್ಲೆ ಬಿಡದಿ ಸಮೀಪದ ಪ್ರಖ್ಯಾತ ‘ವಂಡರ್​ಲಾ’ ಮಾದರಿಯ ಅಮ್ಯೂಸ್​ವೆುಂಟ್ ಪಾರ್ಕ್ ನಿರ್ವಣಕ್ಕೆ ರೂಪುರೇಷೆ ಸಿದ್ಧವಾಗುತ್ತಿದೆ. ಇದಕ್ಕಾಗಿಯೇ 10 ಎಕರೆ ವಿಸ್ತೀರ್ಣದ ಭೂಮಿಯ ಹುಡುಕಾಟ ಆರಂಭವಾಗಿದೆ. ಅದರಲ್ಲೂ ದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪವೇ ಪಾರ್ಕ್ ನಿರ್ವಣಕ್ಕೆ ಜಿಲ್ಲಾಡಳಿತ ಆಸಕ್ತಿ ತೋರಿಸಿದೆ. ಈ ಹಿನ್ನೆಲೆಯಲ್ಲಿ ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕು ರಿಯಾಲ್ಟಿ ಕ್ಷೇತ್ರಕ್ಕೆ ರತ್ನಗಂಬಳಿ ಹಾಸಲಿದೆ ಎಂಬುದು ರಿಯಲ್ ಎಸ್ಟೇಟ್ ಉದ್ಯಮ ಪಂಡಿತರ ಆಂಬೋಣವಾಗಿದೆ.

ನೆಲಮಂಗಲವೂ ಫೇವರಿಟ್: ಸಿಲಿಕಾಟ್ ಸಿಟಿ ಸೆರಗಿನಲ್ಲೇ ಇರುವ ಗ್ರಾಮಾಂತರ ಜಿಲ್ಲೆಯಲ್ಲಿ ಭೂಮಿಗೆ ಚಿನ್ನದ ಬೆಲೆ ಇದೆ. ಈಗಾಗಲೇ ಕೃಷಿ ಹೊರತುಪಡಿಸಿದ ಜಮೀನುಗಳು ಲೇಔಟ್​ಗಳಾಗಿ ಗ್ರಾಹಕರನ್ನು ಸೆಳೆಯುತ್ತಿವೆ. ಅದರಲ್ಲೂ ನೆಲಮಂಗಲ ತಾಲೂಕು ಉದ್ಯಾನನಗರಿ ಬೆಂಗಳೂರಿಗೆ ಅಂಟಿಕೊಂಡಂತೆ ಇರುವುದರಿಂದ ರಿಯಾಲ್ಟಿ ಚಟುವಟಿಕೆಗೆ ಬಿರುಸಿನಿಂದ ಸಾಗಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾ ಪ್ರವಾಸೋದ್ಯಮ ಇಲಾಖೆ ನೆಲಮಂಗಲ ತಾಲೂಕಿನ ಮೇಲೆ ಕಣ್ಣಿಟ್ಟಿದ್ದು, ತಾಲೂಕಿನಲ್ಲೇ ಅಮ್ಯೂಸ್​ವೆುಂಟ್ ಪಾರ್ಕ್ ನಿರ್ಮಾಣ ಮಾಡಿದರೆ ಹೇಗೆ ಎಂಬ ಚಿಂತನೆಯೂ ನಡೆದಿದೆ. ಈ ಹಿನ್ನೆಲೆಯಲ್ಲಿ ಈಗಾಗಲೇ ಅಧಿಕಾರಿಗಳ ತಂಡ ಭೂಮಿ ಹುಡುಕಾಟ ನಡೆಸಿದೆ. ಕೆಲವು ದಿನಗಳ ಹಿಂದಷ್ಟೆ ಪ್ರವಾಸೋದ್ಯಮ ಇಲಾಖೆ ನೆಲಮಂಗಲ ತಾಲೂಕು ಸೋಂಪುರ ಹೋಬಳಿಯ ನರಸೀಪುರ ಗ್ರಾಪಂ ವ್ಯಾಪ್ತಿಯ ಹೆಗ್ಗುಂದ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ.

ಖಾಸಗಿ ಸಹಭಾಗಿತ್ವ: ಅಮ್ಯೂಸ್​ವೆುಂಟ್ ಪಾರ್ಕ್ ನಿರ್ವಣದ ಯೋಜನೆ ಈಗಾಗಲೇ ಜಿಲ್ಲೆಯಲ್ಲಿ ದೊಡ್ಡ ಸದ್ದು ಮಾಡುತ್ತಿದ್ದು, ಸ್ಥಳೀಯ ನಿವಾಸಿಗಳು ಖಾಸಗಿ ಸಹಭಾಗಿತ್ವದಲ್ಲಿ ಭೂಮಿ ನೀಡಲು ಮುಂದೆ ಬಂದಿದ್ದಾರೆ ಎನ್ನಲಾಗಿದೆ. ಸದ್ಯಕ್ಕೆ ಸರ್ಕಾರಿ ಭೂಮಿಯ ಹುಡುಕಾಟದಲ್ಲಿರುವ ಇಲಾಖೆ ಎಲ್ಲಿಯೂ ಅಷ್ಟ್ಟು ವಿಸ್ತೀರ್ಣದ ಸರ್ಕಾರಿ ಭೂಮಿ ದೊರೆಯದಿದ್ದರೆ ಖಾಸಗಿ ಭೂಮಿ ಖರೀದಿಸುವ ಉತ್ಸುಕತೆ ತೋರಿಸಿದೆ ಎನ್ನಲಾಗಿದೆ. ಇದು ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಸಂಚಲನಕ್ಕೆ ಕಾರಣವಾಗಿದ್ದು, ಪಾರ್ಕ್ ಸುತ್ತಮುತ್ತಲ ಪ್ರದೇಶದಲ್ಲಿ ವಾಣಿಜ್ಯ ಚಟುವಟಿಕೆಗಳು ಗರಿಗೆದರುವ ಕನಸು ಕಾಣುತ್ತಿದ್ದಾರೆ. ಜಿಲ್ಲೆಯ ನಾಲ್ಕೂ ತಾಲೂಕುಗಳ ಮೇಲೆ ಪ್ರವಾಸೋದ್ಯಮ ಇಲಾಖೆ ಕಣ್ಣಿಟ್ಟಿದ್ದರೂ, ವಾಸ್ತವವಾಗಿ ನೆಲಮಂಗಲ ಅಥವಾ ದೇವನಹಳ್ಳಿ ತಾಲೂಕು ವ್ಯಾಪ್ತಿಯಲ್ಲೇ ಪಾರ್ಕ್ ನಿರ್ವಣಕ್ಕೆ ಪ್ರಾಧಾನ್ಯತೆ ನೀಡುತ್ತಿದೆ ಎನ್ನಲಾಗಿದೆ. ಈಗಾಗಲೇ ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳ ಬೆನ್ನುಬಿದ್ದಿರುವ ರಿಯಲ್ ಎಸ್ಟೇಟ್ ಉದ್ಯಮಿಗಳು ಜಮೀನುಗಳ ಮಾಹಿತಿ ರವಾನಿಸುತ್ತಿದ್ದಾರೆ. ಜಿಲ್ಲಾಡಳಿತದಿಂದಲೂ ಪಾರ್ಕ್​ಗೆ ಗ್ರೀನ್ ಸಿಗ್ನಲ್ ಸಿಕ್ಕಿರುವುದರಿಂದ

ಭೂಮಿ ಅಂತಿಮ ಆಗುತ್ತಿದ್ದಂತೆ ಅಮ್ಯೂಸ್​ವೆುಂಟ್ ಪಾರ್ಕ್ ಮೈದಳೆಯಲಿದೆ. ಈಗಾಗಲೇ ಹೂಡಿಕೆದಾರರಿಗೆ ರತ್ನಗಂಬಳಿ ಹಾಸಿರುವ ಗ್ರಾಮಾಂತರ ಜಿಲ್ಲೆಯ ರಿಯಲ್​ಎಸ್ಟೇಟ್ ಉದ್ಯಮ ಅಮ್ಯೂಸ್​ವೆುಂಟ್ ಪಾರ್ಕ್ ಕನಸಿನೊಂದಿಗೆ ಹೂಡಿಕೆದಾರರನ್ನು ಕೈಬೀಸಿ ಕರೆಯುತ್ತಿದೆ.

ರೆಸಾರ್ಟ್ ನಿರ್ಮಾಣಕ್ಕೆ ಪ್ಲಾನ್

ಅಮ್ಯೂಸ್​ವೆುಂಟ್ ಪಾರ್ಕ್ ನಿರ್ವಣವಾಗುವ ಸರಹದ್ದಿನಲ್ಲೇ ರೆಸಾರ್ಟ್, ಹೋಂಸ್ಟೇ ನಿರ್ವಣದ ಯೋಜನೆ ಸಿದ್ಧವಾಗುತ್ತಿದೆ. ಇದಕ್ಕಾಗಿಯೇ ರಾಜ್ಯ ಸೇರಿ ಹೊರ ಜಿಲ್ಲೆಯ ಹೂಡಿಕೆದಾರರು ಉತ್ಸುಕತೆ ತೋರುತ್ತಿದ್ದಾರೆ. ರಾಜ್ಯದಲ್ಲೇ ವಿನೂತನ ಮಾದರಿ ಪಾರ್ಕ್ ಆಗಲಿದೆ ಎಂದೇ ಬಿಂಬಿತವಾಗಿರುವ ಅಮ್ಯೂಸ್​ವೆುಂಟ್ ಪಾರ್ಕ್ ಕಲ್ಪನೆ, ಗ್ರಾಮಾಂತರ ಜಿಲ್ಲೆಯನ್ನು ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಬಾನೆತ್ತರಕ್ಕೆ ಕರೆದೊಯ್ಯಲಿದೆ ಎಂದೇ ರಿಯಾಲ್ಟಿ ಪಂಡಿತರು ವ್ಯಾಖ್ಯಾನಿಸುತ್ತಿದ್ದಾರೆ. ಸ್ಟೋರ್ಟ್ಸ್ ಕ್ಲಬ್, ರೆಸಾರ್ಟ್, ಬೋರ್ಡಿಂಗ್ ಹಾಗೂ ಲಾಡ್ಜಿಂಗ್​ಗಳು ತಲೆ ಎತ್ತಲಿದ್ದು, ಅಮ್ಯೂಸ್​ವೆುಂಟ್ ಪಾರ್ಕ್ ಸರಹದ್ದಿನ ಪ್ರದೇಶ ರಿಯಾಲ್ಟಿ ಕ್ಷೇತ್ರದ ಬಾಗಿಲು ತೆರೆಯುವ ನಿರೀಕ್ಷೆ ಗರಿಗೆದರಿದೆ.

ಪ್ರವಾಸಿತಾಣಗಳ ಪಟ್ಟಿ

ಗ್ರಾಮಾಂತರ ಜಿಲ್ಲೆಯಲ್ಲಿ ಪ್ರವಾಸೋದ್ಯಮ ಉತ್ತೇಜನ ಮತ್ತು ಪ್ರವಾಸಿಗರ ಸೆಳೆಯಲು ಪ್ರವಾಸಿ ತಾಣಗಳ ಪಟ್ಟಿ ಮಾಡಿ ಸಮಗ್ರ ಅಭಿವೃದ್ಧಿ ಯೋಜನೆ ರೂಪಿಸಲು ಪ್ರವಾಸೋದ್ಯಮ ಸಚಿವರಾಗಿದ್ದ ಸಿ.ಟಿ.ರವಿ ನಿರ್ದೇಶನ ನೀಡಿದ್ದರು. ಜಿಲ್ಲೆಯ ಎಲ್ಲ ಪ್ರವಾಸೋದ್ಯಮ ತಾಣಗಳನ್ನು ಮತ್ತೊಮ್ಮೆ ಗುರುತಿಸುವುದು, ರಸ್ತೆ ಸಂಪರ್ಕದ ಬಗ್ಗೆ ಮಾಹಿತಿ ಸಂಗ್ರಹಿಸುವುದು, ಪ್ರವಾಸಿ ತಾಣಗಳ ಪಟ್ಟಿಯಿಂದ ಬಿಟ್ಟು ಹೋದ ತಾಣಗಳನ್ನು ಪಟ್ಟಿ ಮಾಡುವ ಜತೆಗೆ ಪ್ರದೇಶದ ಸಾಂಸ್ಕೃತಿಕ ಚಿತ್ರಣದ ಯೋಜನಾ ವರದಿ ಸಿದ್ಧಪಡಿಸುವಲ್ಲಿ ಇಲಾಖೆ ಮುಂದಾಗಿದೆ. ದಕ್ಷಿಣ ಕಾಶಿ ಎಂದು ಪ್ರಸಿದ್ದವಾಗಿರುವ ಶಿವಗಂಗೆ, ಐತಿಹಾಸಿಕ ಪ್ರಸಿದ್ದ ಘಾಟಿ ಸುಬ್ರಹ್ಮಣ್ಯ ಕ್ಷೇತ್ರ, ಚಿಕ್ಕಬಳ್ಳಾಪುರ ಜಿಲ್ಲೆಯೊಂದಿಗೆ ಗಡಿ ಹಂಚಿಕೊಂಡಿರುವ ಪ್ರಸಿದ್ದ ನಂದಿಗಿರಿಧಾಮ ಸೇರಿ ಅನೇಕ ಪ್ರವಾಸಿ ತಾಣಗಳು ಅಭಿವೃದ್ಧಿ ಕಡೆಗೆ ಮುಖಮಾಡಿದ್ದು ಪರೋಕ್ಷವಾಗಿ ರಿಯಾಲ್ಟಿ ಕ್ಷೇತ್ರವನ್ನು ಕೈಬೀಸಿ ಕರೆಯುತ್ತಿವೆ.

| ಶಿವರಾಜ ಎಂ. ಬೆಂಗಳೂರು ಗ್ರಾಮಾಂತರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net