ಪಾಲಕರು ಜಗಳವಾಡಿದಾಗ ನೀವೇನು ಮಾಡಬಹುದು?: ಸದ್ಗುರು ಅವರ ಅಮೃತಧಾರೆ ಅಂಕಣ

Universe sadguru
Published on

ಜಗತ್ತು ನಿಮ್ಮ ಮೇಲೆ ಏನನ್ನು ಎಸೆಯುತ್ತದೆ ಎಂಬುದನ್ನು ನೀವು ಎಂದಿಗೂ ನಿರ್ಧರಿಸಲು ಸಾಧ್ಯವಿಲ್ಲ, ಆದರೆ ಅದರಿಂದ ನೀವು ಏನನ್ನು ಮಾಡುತ್ತೀರಿ ಎಂಬುದು ಯಾವಾಗಲೂ ನೂರು ಪ್ರತಿಶತ ನೀವೇ ನಿರ್ಧರಿಸಬಹುದು. ಜೀವನದಲ್ಲಿ ನಿಮ್ಮ ಕಡೆಗೆ ಬರುವ ಎಲ್ಲದರಿಂದಲೂ ನೀವು ಉತ್ತಮವಾದದ್ದನ್ನೇ ಮಾಡಬೇಕು.

ಮಾನವ ಸಂಬಂಧಗಳು ಎಷ್ಟು ಸುಂದರವಾಗಿವೆಯೋ, ಸರಿಯಾಗಿ ನಿರ್ವಹಿಸದಿದ್ದಲ್ಲಿ ಅಷ್ಟೇ ಕೆಟ್ಟ ರೀತಿಯಲ್ಲೂ ನಡೆಯಬಹುದು. ನೀವೇ ತಪು್ಪ ಮಾಡಿರಬೇಕು ಎಂದೇನಿಲ್ಲ. ಯಾವುದೇ ವಿಷಯ ಇರದಿದ್ದರೂ ಜಗಳ ನಡೆದು ಜನರು ಬೇರ್ಪಡುವಷ್ಟು ರೀತಿಯಲ್ಲಿ ಅತಿರೇಕಕ್ಕೆ ಹೋಗುತ್ತದೆ. ಇವರ್ಯಾರೂ ರಾಜ್ಯಕ್ಕಾಗಿ ಹೋರಾಡುತ್ತಿಲ್ಲ. ಸಣ್ಣ-ಸಣ್ಣ ವಿಷಯಗಳಿಗಾಗಿ ಹೋರಾಡುತ್ತಿದ್ದಾರೆ! ದುರದೃಷ್ಟವಶಾತ್, ಸಣ್ಣ ವಿಷಯಗಳಿಗಾಗಿನ ಈ ಜಗಳಗಳು ತುಂಬ ಕೆಟ್ಟ ಸ್ಥಿತಿಗೆ ತಲುಪುವ ಮೂಲಕ, ಎಲ್ಲರ ಜೀವನವನ್ನೂ ಕೆಡಿಸಬಹುದು.

ಅವರು ಅಗಾಧವಾದ ಪ್ರೀತಿ, ವಾತ್ಸಲ್ಯ ಮತ್ತು ಉತ್ಸಾಹದಿಂದ ಒಂದಾಗಬೇಕೆಂಬ ಹಂಬಲದಿಂದಲೇ ಸೇರಿಕೊಂಡಿದ್ದರೂ, ಇಂತಹ ಬೇರ್ಪಡುವ ಪರಿಸ್ಥಿತಿ ಎದುರಾಗುತ್ತಿದೆ. ಜೀವನದ ಆರಂಭದ ದಿನಗಳಲ್ಲಿಯೇ ಅಂತಹ ವಿಷಯಗಳಿಗೆ ಸಾಕ್ಷಿಯಾಗಿದ್ದಲ್ಲಿ, ಅದರಲ್ಲಿ ಸಿಕ್ಕಿಹಾಕಿಕೊಳ್ಳುವ ಬದಲು ನಿಮ್ಮ ಜೀವನವನ್ನು ನೀವು ಹೇಗೆ ನಡೆಸಲಿದ್ದೀರಿ ಎಂದು ಯೋಚಿಸಿ, ಆ ನಿಟ್ಟಿನಲ್ಲಿ ಮನಸ್ಸು ಮಾಡಬೇಕು.

ಮುಳ್ಳುಹಂದಿ ಸಂದಿಗ್ಧತೆ: ಇದು ಕೇವಲ ಗಂಡ-ಹೆಂಡತಿಯ ವಿಷಯದಲ್ಲಿ ಮಾತ್ರವಲ್ಲ. ಯಾವುದೇ ಸಂಬಂಧದಲ್ಲಿಯೇ ಆಗಲಿ, ಎದುರಿನ ವ್ಯಕ್ತಿ ತಿಳಿಯದೆಯೇ ಏನನ್ನಾದರೂ ಮಾಡಿದರೂ, ನೀವು ಮುಳ್ಳುಹಂದಿಯಂತೆ ಆಗುತ್ತೀರಿ. ಒಮ್ಮೆ ನಾನು ಮುಳ್ಳುಹಂದಿಯನ್ನು ಎದುರಿಸಬೇಕಾದ ಪರಿಸ್ಥಿತಿ ಒದಗಿತ್ತು, ಆದ್ದರಿಂದಲೇ ನಾನು ಈ ಸಂದರ್ಭದಲ್ಲಿ ‘ಮುಳ್ಳುಹಂದಿ’ ಉದಾಹರಣೆಯನ್ನು ಬಳಸುತ್ತಿದ್ದೇನೆ.

ನಾನೊಂದು ಹೊಸ ಜಾಗದ ಅನ್ವೇಷಣೆಯಲ್ಲಿದ್ದ ಸಂದರ್ಭದಲ್ಲಿ ಕಿರಿದಾದ ಗುಹೆಯಲ್ಲಿ ತೂರಿಕೊಂಡಿದ್ದೆ. ನನ್ನ ಎರಡು ಕೈಗಳೂ ಸಿಕ್ಕಿಹಾಕಿಕೊಂಡಿದ್ದವು. ಗುಹೆಯಲ್ಲಿ ಒಂದು ಮುಳ್ಳುಹಂದಿ ಇತ್ತು. ಅದು ನನ್ನತ್ತ ತಿರುಗಿ ದಾಳಿ ಮಾಡಲು ಆರಂಭಿಸಿತು. ನನ್ನ ಕೈಗಳು ಸಿಕ್ಕಿಕೊಂಡ ಕಾರಣ ಆ ಗುಹೆಯಿಂದ ತೆವಳಲೂ ಸಾಧ್ಯವಾಗುತ್ತಿರಲಿಲ್ಲ. ದಾಳಿಯ ಸಂದರ್ಭದಲ್ಲಿ ನನ್ನ ಮುಖದ ಮೇಲೆಲ್ಲ ಮಣ್ಣನ್ನು ಎರೆಚಲಾರಂಭಿಸಿತು, ಆದರೆ ನನ್ನ ಕಣ್ಣಗಳನ್ನು ತೆರೆದೇ ಇಡಲು ಪ್ರಯತ್ನಿಸುತ್ತಿದ್ದೆ, ಏಕೆಂದರೆ ಅದು ಮುಳ್ಳುಗಳನ್ನು ಎತ್ತ ಎಸೆಯುತ್ತಿದೆ ಎಂಬುದನ್ನು ನೋಡಬೇಕಿತ್ತು. ಅದೃಷ್ಟವಶಾತ್, ಅದು ಕೇವಲ ಅಣಕು ದಾಳಿಯಲ್ಲಿ ಮುಕ್ತಾಯವಾಯಿತು.

ಮನೆಯಲ್ಲಿನ ಈ ಜಗಳಗಳಿಗೆ ಮುಳ್ಳುಹಂದಿ ಸೂಕ್ತ ಉದಾಹರಣೆ. ಆರಂಭದಲ್ಲಿ, ಅವು ತಮ್ಮ ಮುಳ್ಳುಗಳನ್ನು ಕಳಚಿ ಬೊಬ್ಬೆ ಹಾಕುತ್ತವೆ ಹಾಗೂ ಅಣಕು ದಾಳಿಯಿಡುತ್ತವೆ. ಎಲ್ಲೋ ಕೆಲವು, ಹಲವು ಅಣಕು ದಾಳಿಗಳ ನಂತರ, ತನ್ನ ನಿಯಂತ್ರಣ ಕಳೆದುಕೊಂಡು, ನಿಜವಾಗಿಯೂ ದಾಳಿಗಿಳಿಯುತ್ತವೆ. ಜನರು ನಿಮಗೆ ಕೆಟ್ಟ ವಿಷಯಗಳನ್ನು ಹೇಳಿದಾಗ, ನಿಮ್ಮ ಬಗ್ಗೆ ಅಸಹ್ಯ ಆರೋಪಗಳನ್ನು ಮಾಡಿದಾಗ ಅಥವಾ ಕೆಲವೊಮ್ಮೆ ನಿಮ್ಮೊಂದಿಗೆ ಅಸಹ್ಯಕರವಾಗಿ ನಡೆದುಕೊಂಡಾಗಲೂ, ಅದೆಲ್ಲವನ್ನೂ ಮೀರಿ ನೋಡಲು ಮತ್ತು ನಿಮ್ಮ ಜೀವನವನ್ನು ಲಾಲಿತ್ಯದಿಂದ ನಡೆಸಲು ನಿಮ್ಮೊಳಗೆ ಒಂದು ನಿರ್ದಿಷ್ಟ ಪ್ರಜ್ಞೆ ತಂದುಕೊಳ್ಳಬೇಕಾಗುತ್ತದೆ. ದೇಶ, ಸಮುದಾಯ ಅಥವಾ ಕುಟುಂಬದಲ್ಲಿ ಹಲವು ಬಗೆಯ ಕೆಟ್ಟ ಸಂಗತಿಗಳು ನಡೆಯುತ್ತಿವೆ ಎಂಬುದರ ಗೊಂದಲಕ್ಕೆ ಸಿಲುಕುವ ಬದಲು ನೀವು ಈ ಪ್ರಜ್ಞೆಯನ್ನು ನಿಮ್ಮೊಳಗೆ ತಂದುಕೊಳ್ಳಬೇಕು. ‘ಬಹಳಷ್ಟು ಕೆಟ್ಟ ಸಂಗತಿಗಳು ನಡೆಯುತ್ತಿವೆ. ನಾವು ಅದನ್ನು ಮೀರಿದರಷ್ಟೇ, ಯಶಸ್ವಿ ಮಾನವರಾಗಲು ಸಾಧ್ಯ’.

ನೀವು ಸಿಲುಕಿ ಹಾಕಿಕೊಳ್ಳಬೇಡಿ: ಯಾರೋ ಒಬ್ಬರು ಅಸಹ್ಯವಾಗಿ ಏನನ್ನಾದರೂ ಹೇಳುತ್ತಾರೆಂದರೆ ಅವರೊಳಗೆ ಏನೋ ಅಸಹ್ಯವಾದದ್ದು ನಡೆಯುತ್ತಿದೆ ಎಂದರ್ಥ. ನಿಮ್ಮೊಳಗೆ ಏನಾದರೂ ಅಸಹ್ಯ ಸಂಭವಿಸದ ಹೊರತು ನೀವು ಅಸಹ್ಯವನ್ನು ಉಗುಳಲು/ಹೊರಹಾಕಲು ಸಾಧ್ಯವಿಲ್ಲ. ಯಾರಾದರೂ ಅಸಹ್ಯಕರವಾದದ್ದನ್ನು ಉಗುಳಿದರೆ, ಅವರಿಗೆ ನಿಮ್ಮಲ್ಲಿನ ಪ್ರೀತಿ, ಸಹಾನುಭೂತಿ ಅಥವಾ ಅಂತರ ಬೇಕಾಗುತ್ತದೆ. ಆರಂಭದಲ್ಲಿ, ನೀವು ಪ್ರೀತಿಯ ಮೂಲಕ ಪ್ರಯತ್ನಿಸಿ. ಅದು ಕೆಲಸ ಮಾಡದಿದ್ದರೆ, ಸಹಾನುಭೂತಿ ತೋರಿಸಿ. ಅದೂ ಕೆಲಸ ಮಾಡದಿದ್ದರೆ, ಅಂತರವನ್ನು ಕಾಪಾಡಿಕೊಳ್ಳಿ. ಆದರೆ ನೀವು ಸ್ವತಃ ಆ ಅಸಹ್ಯತೆಯ ಸುಳಿಯಲ್ಲಿ ಸಿಲುಕಿಕೊಳ್ಳಬೇಡಿ! ಏಕೆಂದರೆ ಅದಕ್ಕೆ ಅಂತ್ಯವೇ ಇಲ್ಲ. ಅದು ನಿಮ್ಮನ್ನೇ ಸೆಳೆದುಕೊಂಡು ಬಿಡುತ್ತದೆ. ಅದ್ಭುತ ಸಾಮರ್ಥ್ಯಗಳನ್ನು ಹೊಂದಿರುವ ಅನೇಕ ಅದ್ಭುತ ಜನರು ಅಸಹ್ಯ ಸಂಬಂಧ/ತಾಕಲಾಟಗಳ ಸುಳಿಯಲ್ಲಿ ಸಿಲುಕಿಕೊಂಡು ಅಧೋಗತಿಗೆ ಇಳಿಯುವುದನ್ನು ನಾನು ನೋಡಿದ್ದೇನೆ.

ನೀವು ಇನ್ನೂ ಚಿಕ್ಕವರಾಗಿದ್ದಾಗ, ನಿಮ್ಮ ಹೆತ್ತವರೊಂದಿಗೆ ಏನು ನಡೆಯುತ್ತಿದೆ ಎಂಬ ವಿಷಯ ದೊಡ್ಡ ಸಮಸ್ಯೆಯೇ ಆಗಿರಬಹುದು. ಆದರೆ ಪ್ರತಿಯೊಂದು ಪೀಳಿಗೆಯಲ್ಲಿಯೂ ಪಾಲಕರು ಇದ್ದರು. ಸ್ವಲ್ಪ ಕಾಲದ ನಂತರ, ಅವರು ಏನು ಮಾಡುತ್ತಾರೆ ಮತ್ತು ಏನು ಮಾಡುವುದಿಲ್ಲ ಎಂಬುದು ಜೀವನದ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಅರ್ಥ ಮಾಡಿಕೊಳ್ಳುತ್ತೀರಿ. ಆಗ ನೀವು ಅದನ್ನು ಮೀರಿ ಬೆಳೆಯುತ್ತೀರಿ. ಈಗಲೇ, ಇದನ್ನು ಮೀರಿ ಬೆಳೆಯುವ ಅವಕಾಶವನ್ನು ಪಾಲಕರು ನಿಮಗೆ ನೀಡುತ್ತಿದ್ದರೆ, ದಯವಿಟ್ಟು ಈ ಅವಕಾಶವನ್ನು ಬಳಸಿಕೊಳ್ಳಿ! ಜೀವನದಲ್ಲಿ ನಿಮ್ಮನ್ನು ಕುರಿತು ಏನು ಬರುತ್ತದೆ ಎಂಬುದು ಅಪ್ರಸ್ತುತವಾಗುತ್ತದೆ, ಅದು ಏನೇ ಬಂದರೂ ನೀವು ಅದನ್ನು ನಿಮ್ಮ ಬೆಳವಣಿಗೆಗಾಗಿನ ಮೆಟ್ಟಿಲುಗಳನ್ನಾಗಿ ಪರಿವರ್ತಿಸಿಕೊಳ್ಳಬೇಕು.

ಒಂದು ಬುದ್ಧಿವಂತ ಕತ್ತೆ: ಶಂಕರನ್ ಪಿಳ್ಳೈ ಬಳಿ ಕತ್ತೆಯೊಂದಿತ್ತು. ಅದಕ್ಕೆ ವಯಸ್ಸಾಗಿದ್ದರಿಂದ ಅದನ್ನು ಮಾರಾಟ ಮಾಡಲು ನಿರ್ಧರಿಸಿದ, ಆದರೆ ಯಾರೂ ಆ ಮುದಿ ಕತ್ತೆಯನ್ನು ಖರೀದಿಸಲು ಸಿದ್ಧರಿರಲಿಲ್ಲ. ಒಂದು ದಿನ ಬೆಳಗ್ಗೆ, ಒಣಗಿದ್ದ ತೆರೆದ ಒಂದು ಬಾವಿಯೊಳಗೆ ಬಿದ್ದಿತು. ಆ ಬಾವಿಯಿಂದ ಹೊರಬರುವ ಪ್ರಯತ್ನದಲ್ಲಿ ಭಯದಿಂದ ಜೋರಾಗಿ ಅರಚಲಾರಂಭಿಸಿತು. ಶಂಕರನ್ ಪಿಳ್ಳೈ ಮತ್ತು ಅವನ ಸ್ನೇಹಿತರು ಹಾಗೂ ನೆರೆಯ ರೈತರು ಬಂದು ಇದನ್ನು ನೋಡಿದರು. ಅವರು, ‘ಹೇಗಿದ್ದರೂ ಇದು ನಿಷ್ಪ್ರಯೋಜಕ, ಮುದಿ ಕತ್ತೆ. ಹೇಗೂ ನಾವು ಈ ಒಣ ಬಾವಿಯನ್ನು ಮುಚ್ಚಬೇಕೆಂದು ಬಹಳ ಹಿಂದೆಯೇ ಯೋಚಿಸಿದ್ದೆವು. ಕತ್ತೆ ಸಮೇತ ಅದನ್ನು ಮುಚ್ಚಿಬಿಡೋಣ’ ಎಂದು ನಿರ್ಧರಿಸಿದರು.

ಹಾಗಾಗಿ ಅವರು ಬುಟ್ಟಿಗಳಿಂದ ಮಣ್ಣನ್ನು ಬಾವಿಗೆ ಹಾಕಲು ಪ್ರಾರಂಭಿಸಿದರು. ಪ್ರತಿ ಬಾರಿ ಮಣ್ಣು ಕತ್ತೆಯ ಮೇಲೆ ಬೀಳುತ್ತಿದ್ದಂತೆ, ಕತ್ತೆ ಮಣ್ಣನ್ನು ಕೊಡವಿಕೊಂಡು ಅದರ ಮೇಲೆ ನಿಲ್ಲುತ್ತಿತ್ತು. ಈ ರೀತಿ, ಅವರು ಪ್ರತಿ ಬಾರಿ ಮಣ್ಣನ್ನು ಎಸೆದಾಗಲೂ, ಅದು ಮೇಲೆ ಬರಲು ಪ್ರಾರಂಭಿಸಿತು. ಅವರು, ‘ಇದು ನಿಜವಾಗಿಯೂ ಬುದ್ಧಿವಂತ ಕತ್ತೆ!’ ಎಂದು ಆಶ್ಚರ್ಯಚಕಿತರಾದರು. ಅವರು ಹೆಚ್ಚು ಮಣ್ಣನ್ನು ಎಸೆಯಲು, ಅದು ಮೇಲಮೇಲಕ್ಕೆ, ಬರತೊಡಗಿತು ಮತ್ತು ಕೊನೆಯಲ್ಲಿ ಅದು ಬಾವಿಯಿಂದ ಹೊರಬಂದಿತು. ಶಂಕರನ್ ಪಿಳ್ಳೈ ಈಗ ಕತ್ತೆಯ ಬುದ್ಧಿವಂತಿಕೆ ನೋಡಿ ನಿಜವಾಗಿಯೂ ಇಷ್ಟಪಟ್ಟು, ಕತ್ತೆಯನ್ನು ತಬ್ಬಿಕೊಳ್ಳಲು ಪ್ರಯತ್ನಿಸಿದ, ಆದರೆ ಕತ್ತೆ ತಿರುಗಿ ಅವನ ಮುಖಕ್ಕೆ ಒದ್ದು ದೂರ ಸರಿಯಿತು. ನೀವು ಆ ಕತ್ತೆಯಂತೆಯೇ ಇರಬೇಕು, ಸರಿಯೇ?.

ಜೀವನವು ನಿಮ್ಮ ಮೇಲೆ ಏನನ್ನೇ ಎಸೆದರೂ, ನೀವು ಅದನ್ನೆಲ್ಲ ಕೊಡವಿ, ಅದರ ಮೇಲೆ ನಿಂತುಕೊಳ್ಳಿ. ನಮ್ಮ ಜೀವನದ ಪ್ರತಿಯೊಂದು ಅನುಭವವೂ ನಮ್ಮನ್ನು ಉತ್ತಮವಾಗಿಸಬೇಕು. ನಾವು ಸಿಹಿ ಅನುಭವಗಳನ್ನಷ್ಟೆ ಹುಡುಕಬೇಕಿಲ್ಲ. ನಮ್ಮ ಹಾದಿಯಲ್ಲಿ ಏನೇ ಬಂದರೂ, ಅದನ್ನು ನಮ್ಮ ಬೆಳವಣಿಗೆ, ಪ್ರಬುದ್ಧತೆ ಮತ್ತು ಒಳಿತಿಗೆ ಆಧಾರವಾಗಿಸಿಕೊಳ್ಳಬೇಕು. ಜಗತ್ತು ನಿಮ್ಮ ಮೇಲೆ ಏನನ್ನು ಎಸೆಯುತ್ತದೆ ಎಂಬುದನ್ನು ನೀವು ಎಂದಿಗೂ ನಿರ್ಧರಿಸಲು ಸಾಧ್ಯವಿಲ್ಲ, ಆದರೆ ಅದರಿಂದ ನೀವು ಏನನ್ನು ಮಾಡುತ್ತೀರಿ ಎಂಬುದು ಯಾವಾಗಲೂ ನೂರು ಪ್ರತಿಶತ ನೀವೇ ನಿರ್ಧರಿಸಬಹುದು. ಜೀವನದಲ್ಲಿ ನಿಮ್ಮ ಕಡೆಗೆ ಬರುವ ಎಲ್ಲದರಿಂದಲೂ ನೀವು ಉತ್ತಮವಾದದ್ದನ್ನೇ ಮಾಡಬೇಕು.

ನೀವು ಚಿಕ್ಕವರಿದ್ದಾಗ ಜೀವನದಲ್ಲಿ ಬಹಳಷ್ಟು ಕಹಿಘಟನೆಗಳು ಸಂಭವಿಸಿವೆ ಎಂದರೆ, ನೀವು ಈಗ ಎಲ್ಲರಿಗಿಂತ ಬುದ್ಧಿವಂತರಾಗಿರಬೇಕು. ಆದರೆ ಹೆಚ್ಚಿನ ಜನರು ಅದರಿಂದಾಗಿ ಗಾಯಾಳುವಿನಂತೆ ಆಗುತ್ತಾರೆ. ನಿಮ್ಮ ಗಾಯಗಳನ್ನು ನೀವು ಎಲ್ಲಿಯೂ ಸಾಗಿಸಲು ಸಾಧ್ಯವಿಲ್ಲ. ಸತ್ತಾಗ, ದೇಹವನ್ನು ಬಿಡುತ್ತೀರಿ, ಆದ್ದರಿಂದ ನೀವು ಅದನ್ನು ಲಾಂಛನದಂತೆ ಬಳಸಲು ಸಾಧ್ಯವಿಲ್ಲ. ಹೆಚ್ಚಿನ ಜನರು ತಮ್ಮ ಗಾಯಗಳನ್ನು ಲಾಂಛನದಂತೆ ಹೊತ್ತುಕೊಂಡು ತಿರುಗುತ್ತಾರೆ-‘ನನಗೆ ಏನಾಯಿತು ಎಂದು ನಿಮಗೆ ಗೊತ್ತೆ?’ ಎಂಬ ಸಂಗತಿ ಮತ್ತೆ ಮತ್ತೆ ತೋಡಿಕೊಳ್ಳುತ್ತಿರುತ್ತಾರೆ. ನಿಮಗೆ ಏನೇ ಆಗಿರಲಿ, ನೀವು ನಿಮ್ಮನ್ನು ಏನು ಮಾಡಿಕೊಂಡಿದ್ದೀರಿ? ಎಂಬುದೇ ಇಲ್ಲಿನ ಪ್ರಶ್ನೆ. ಇತರ ಜನರು ನಿಮಗೆ ಏನು ಮಾಡಿದ್ದಾರೆ ಎಂಬುದು ಪ್ರಶ್ನೆಯಲ್ಲ. ‘ನಿಮ್ಮನ್ನು ನೀವು ಏನು ಮಾಡಿಕೊಂಡಿದ್ದೀರಿ?’ ಎಂಬುದು ದೊಡ್ಡ ಪ್ರಶ್ನೆಯಾಗುತ್ತದೆ. ನೀವು ಉತ್ತಮವಾದುದನ್ನೇ ಮಾಡಬೇಕು. ಆ ಬುದ್ಧಿವಂತ ಕತ್ತೆಯ ಹಾಗೆ!.

(ಸದ್ಗುರು ಅವರು ಯೋಗಿ, ದಾರ್ಶನಿಕ, ಆಧ್ಯಾತ್ಮಿಕ ನಾಯಕ) 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net