

ಸಂದೇಹ ಬೇರೆ-ಬೇರೆ ಹಂತದಲ್ಲಿ ಇರುತ್ತದೆ. ಪ್ರಮುಖವಾದ ಸಂದೇಹವೇನೆಂದರೆ ನಿಜವಾಗಲೂ ಇದನೆಲ್ಲ ಮೀರಿ ಬೇರೆ ಏನಾದರೂ ಇರುವುದೇ ಎಂದು. ಕೆಲವರು ಅದೃಷ್ಟವಂತರು, ಏಕೆಂದರೆ ‘ಮೇಲೆ ಒಬ್ಬ ಮನುಷ್ಯ/ದೇವರು ಕುಳಿತಿದ್ದಾನೆ ಮತ್ತು ಅವನು ಎಲ್ಲವನ್ನೂ ಮಾಡುತ್ತಿದ್ದಾನೆ’ ಎಂದು ಅವರ ನಂಬಿಕೆ! ಆದರೆ ಆಲೋಚನೆ ಮಾಡುವ ಜನರಿಗೆ ಎಲ್ಲದರ ಬಗ್ಗೆಯೂ ಸಂದೇಹವೇ. ಈ ಜನರಿಗೆ ಸೃಷ್ಟಿಯ ತಳಹದಿ ಬಗ್ಗೆಯೇ ಸಂದೇಹವಿದೆ. ಆದರೆ ನಮ್ಮ ಇರುವಿಕೆಯ ಬಗ್ಗೆ ನಮಗೆ ಸಂದೇಹವಿರಲು ಸಾಧ್ಯವಿಲ್ಲ. ನಾವು ಬದುಕಿದ್ದೇವೆ. ಆದರೆ, ನಿಮ್ಮ ಜೀವನವನ್ನು ನೀವು ಹೆಚ್ಚು ನೋಡಿಕೊಂಡಾಗ, ಎಲ್ಲದರ ಬಗ್ಗೆ ಇನ್ನೂ ಹೆಚ್ಚು ಸಂದೇಹ ಬರುತ್ತದೆ.
ಆಲೋಚನೆಯ ಸ್ವಭಾವವೇ ಅಪೂರ್ಣತೆ. ಅದು ಎಷ್ಟು ಎಂದರೆ ಅದಕ್ಕೆ ಎಲ್ಲದರ ಬಗ್ಗೆ ಸಾವಿರಾರು ಸಂದೇಹಗಳಿರುತ್ತವೆ. ಜೀವನದ ಆ ಎಲ್ಲ ಅಂಶಗಳ ಬಗ್ಗೆ ಆಲೋಚಿಸಿ, ಸಾವಿರಾರು ಸಂದೇಹಗಳು ಏಳುತ್ತವೆ. ಅದು ಆಲೋಚನೆಯ ಸ್ವಭಾವ, ಅದರ ಗ್ರಹಣಶಕ್ತಿ ಅಸಂಪೂರ್ಣ. ಯಾರೋ ಒಬ್ಬರು ಹೇಳಿದ್ದರು- ‘ನಾನು ಯೋಚಿಸುವುದರಿಂದ ನಾನು ಅಸ್ತಿತ್ವದಲ್ಲಿ ಇದ್ದೇನೆ’- ಇದು ಹಾಸ್ಯಾಸ್ಪದ!
ನನ್ನ ಬಗ್ಗೆ ಹೇಳುವುದಾದರೆ, ನಾನೇನು ಯೋಚಿಸುತ್ತಿಲ್ಲ, ಆದರೂ ಅಸ್ತಿತ್ವದಲ್ಲಿ ಇದ್ದೇನೆ. ಪ್ರಜ್ಞಾಪೂರ್ವಕವಾಗಿ ಪ್ರಯತ್ನ ಪಟ್ಟರೆ ಮಾತ್ರ, ನಾನು ಯೋಚಿಸುತ್ತೇನೆ. ಇಲ್ಲದಿದ್ದಲ್ಲಿ ಯೋಚಿಸುವುದಿಲ್ಲ. ಆದರೆ ಖಂಡಿತ ಅಸ್ತಿತ್ವದಲ್ಲಿದ್ದೇನೆ. ಎಲ್ಲರ ಊಹೆಗೂ ಮೀರಿದ ಉನ್ನತ ಮಟ್ಟದಲ್ಲಿ. ಆಲೋಚನೆಯಿಂದ ಬರುವುದೇ ಸಂದೇಹ. ಆಲೋಚಿಸಿದಷ್ಟು, ಮನಸ್ಸಿನಲ್ಲಿ ಹೆಚ್ಚು ಸಂದೇಹಗಳು ಏಳುತ್ತವೆ. ಒಂದು ಮಟ್ಟದ ಸಂದೇಹ ಸೃಷ್ಟಿ ಮತ್ತು ಅದರ ಸ್ವರೂಪದ ಬಗ್ಗೆ- ಇದು ನಿಜವೋ, ಅದು ನಿಜವೋ ಎಂದು. ದೇವರಿದ್ದಾನೆಯೇ ಅಥವಾ ಇಲ್ಲವೋ ಎನ್ನುವುದರ ಬಗ್ಗೆ. ಇನ್ನೊಂದು ಮಟ್ಟದ ಸಂದೇಹ ಆಧ್ಯಾತ್ಮಿಕ ಸಾಧಕರಿಗೆ ಬರುವುದೇನೆಂದರೆ ಸಾಧನೆ ಮತ್ತು ಗುರುಗಳ ಬಗ್ಗೆ. ಮೊದಲನೆಯ ಮಟ್ಟದ ಸಂದೇಹ ಆರೋಗ್ಯಕರವಾದದ್ದು, ಎರಡನೆಯದು ನಮ್ಮನ್ನು ಹಿಡಿದಿಡುತ್ತದೆ. ಪ್ರಶ್ನಿಸುವುದು, ಸಂದೇಹ ಪಡುವುದೂ ಪರವಾಗಿಲ್ಲ. ಆದರೆ ಸಮಸ್ಯೆ ಏನೆಂದರೆ ಸಂದೇಹಕ್ಕೆ ಬುದ್ಧಿವಂತಿಕೆ ಬೇಕು. ಆದರೆ ಅನೇಕ ಜನರಿಗೆ ಸಂದೇಹ ಪಡುವಷ್ಟು ಬುದ್ಧಿವಂತಿಕೆ ಇರುವುದಿಲ್ಲ, ಅವರಿಗೆ ಸಂಶಯ.
ಸಂಶಯ ಒಂದು ನಿಶ್ಚಿತ ಆಲೋಚನೆಯ ಮುನ್ಸೂಚನೆ. ಸಂದೇಹವೆಂದರೆ, ನನಗೆ ಗೊತ್ತಿಲ್ಲ ಎಂಬಂಥ ಸ್ಥಿತಿ, ಆಗ ತಿಳಿದುಕೊಳ್ಳಲು ಬಯಸುವಿರಿ. ತಿಳಿಯಲು ಬಯಸಿದಾಗ ಮನಸ್ಸು ತೆರೆದಿರುತ್ತದೆ. ಈ ಸಂದರ್ಭದಲ್ಲಿ, ಸಂದೇಹ ಆರೋಗ್ಯಕರವಾದದ್ದು. ಅದು ಒಂದು ಸಾಧ್ಯತೆ. ನೀವು ಸಂಶಯಿಸಿದರೆ, ಮೊದಲೇ ತೀರ್ಮಾನ ಮಾಡಿಕೊಂಡಿದ್ದೀರಿ ಎಂದರ್ಥ, ಇದೆಲ್ಲ, ಅರ್ಥರಹಿತವಾದದ್ದೇನೋ ಎಂದು- ಇದು ಶಂಕೆ, ಸಂದೇಹವಲ್ಲ. ನೀವಾಗಲೇ ತೀರ್ವನಿಸಿಕೊಂಡಿದ್ದೀರಿ ಮತ್ತು ಅದನ್ನು ದೃಢಪಡಿಸಲು ಪ್ರಯತ್ನ ಮಾಡುತ್ತಿದ್ದೀರಿ. ಈಗ ನಿಮಗೆ ತರ್ಕದ ಮನಸ್ಸಿದೆ, ಆ ಮನಸ್ಸನ್ನು ಆಗಲೇ ಎಲ್ಲ ತರಹದ ನಂಬಿಕೆ, ಆಲೋಚನೆ, ತತ್ತ್ವ ಮತ್ತು ಹೊರಗಿನ ಪ್ರಭಾವಗಳಿಂದ ತೀವ್ರವಾಗಿ ನಿಯಂತ್ರಿಸಲಾಗಿದೆ. ಅದನ್ನು ಪಕ್ಕಕ್ಕೆ ಇಡಲಾಗುತ್ತಿಲ್ಲ. ನಿಮಗೆ ಕೊಟ್ಟಿರುವ ಪ್ರಕ್ರಿಯೆ ಬಗ್ಗೆ, ಅವನ್ನು ಕೊಟ್ಟ ವ್ಯಕ್ತಿ ಅಥವಾ ಸಾಧ್ಯತೆಯ ಬಗ್ಗೆ- ದೊಡ್ಡ ಹೋರಾಟ ನಿಮ್ಮಲ್ಲಿ ಪ್ರತೀ ದಿನ ನಡೆಯುತ್ತಿದ್ದರೆ- ನನ್ನ ಸಲಹೆ ಏನೆಂದರೆ ಒಂದು ಬಾರಿಗೆ ಒಂದು ಹೆಜ್ಜೆಯನ್ನು ಹಾಕಿ, ಅದೇ ಉತ್ತಮ.
ಒಂದು ಬಾರಿಗೆ ಒಂದು ಮಿತಿಯನ್ನು ದಾಟುವುದು: ನೀವು ಕೆಲವು ಮಿತಿಗಳಲ್ಲಿ ಬದುಕುತ್ತಿದ್ದೀರಿ ಎಂದು ಅರ್ಥಮಾಡಿಕೊಂಡಿದ್ದೀರಾ? ಮಿತಿಗಳಿದ್ದರೆ ಅಲ್ಲಿ ಗಡಿರೇಖೆ ಇರುತ್ತದೆ- ಆ ಗಡಿರೇಖೆ ಮೀರಿ ಏನೋ ಇರಬೇಕು? ಅಮಿತವಾದದ್ದು ಇರುವುದೋ ಇಲ್ಲವೋ, ಕನಿಷ್ಠ ಪಕ್ಷ ಗಡಿರೇಖೆ ಇದೆಯೆಂದು ತಿಳಿದರೆ ಅದನ್ನು ಮೀರಿ ಇನ್ನೇನೋ ಇರಬೇಕು. ಈಗ ನಿಮ್ಮ ಕೆಲಸ ಒಂದು ಮಿತಿಯನ್ನು ದಾಟಿ ಇನ್ನೊಂದು ಮಿತಿಯ ಕಡೆಗೆ ಹೋಗುವುದು. ಅದನ್ನು ಪಾರು ಮಾಡಿ ಇನ್ನೊಂದು ಮಟ್ಟಕ್ಕೆ ಹೋಗುವುದು. ‘ಪರಮಪದ’ ಎಂಬುದು ಇದೆಯೋ ಇಲ್ಲವೋ ಎಂದು ನಿಮಗೆ ಗೊತ್ತಿಲ್ಲ. ಅದನ್ನು ಊಹಿಸಬೇಕಾಗಿಲ್ಲ ಅಥವಾ ಮನಸ್ಸಿನಲ್ಲಿ ಸೃಷ್ಟಿಸಬೇಕಾಗಿಲ್ಲ. ಇದು ನಿಮ್ಮಲ್ಲಿರುವ ಅನೇಕ ಸಾಧ್ಯತೆಗಳನ್ನು ನಾಶಪಡಿಸುತ್ತದೆ. ನೀವೀಗ ಒಂದು ಪರಿಧಿಯಲ್ಲಿ ಇರುವಿರೆಂದು ತಿಳಿದುಕೊಳ್ಳಿ ಮತ್ತು ಅದನ್ನು ಪಾರುಮಾಡುವುದು ಹೇಗೆಂದು ಯೋಚಿಸಿ. ಅದನ್ನು ಪಾರು ಮಾಡಿದರೆ ಇನ್ನೊಂದು ಸೆರೆಗೆ ಹೋಗುತ್ತೀರಿ- ಸ್ವಲ್ಪ ದೊಡ್ಡದು. ಅದನ್ನು ಪಾರು ಮಾಡಿದಾಗ ಇನ್ನೊಂದಕ್ಕೆ ಹೋಗುತ್ತೀರಿ. ಹೀಗೆಯೇ ಮಾಡುತ್ತಿದ್ದರೆ ಅದು ಎಲ್ಲಿಗೆ ಹೋಗುತ್ತದೆಯೋ ನೋಡೋಣ, ಕನಿಷ್ಠ ಒಂದು ದೊಡ್ಡ ಸೆರೆಮನೆಗಾದರೂ ಹೋಗೋಣ. ಜೀವನದ ಎಲ್ಲ ವಿಷಯದಲ್ಲೂ ಮಾಡುತ್ತಿರುವುದು ಅಷ್ಟೇ. ಒಂದು ಹೆಜ್ಜೆ ಮುಂದಕ್ಕೆ ಹೋಗಲು ಪ್ರಯತ್ನಿಸುತ್ತಿದ್ದೀರ ಅಲ್ಲವೇ? ಆಧ್ಯಾತ್ಮಿಕ ಸಾಧನೆಯಲ್ಲೂ ಅಷ್ಟೇ, ಒಂದು ಬಾರಿಗೆ ಒಂದು ಹೆಜ್ಜೆ ಹಾಕಿರಿ.
ಸ್ವಲ್ಪ ವರ್ಷದ ಹಿಂದೆ, ಭಾರತದ ಕ್ರಿಕೆಟ್ ತಂಡ ಆಸ್ಟ್ರೇಲಿಯಾದ ತಂಡವನ್ನು ಆ ದೇಶದಲ್ಲೇ ಸೋಲಿಸಿತು. ಅದು ಕಳೆದ 22 ವರ್ಷದಲ್ಲಿ ನಡೆದಿರಲಿಲ್ಲ. ನಾನು ಒಂದು ಪತ್ರಿಕೆಯಲ್ಲಿ ಆ ಆಟಗಾರನ ಬಗ್ಗೆ ಓದುತ್ತಿದ್ದೆ. ಅವನು ಬೆಂಗಳೂರಿನವನು. ಅವನು 233 ರನ್ ಗಳಿಸಿದ್ದ. ಜನರು ಅವನನ್ನು, ‘ನೀನು ಹೇಗೆ ಆಟ ಆಡುತ್ತೀಯ?’ ಎಂದು ಪ್ರಶ್ನಿಸಿದರು. ಅವನು ಉತ್ತರಿಸಿದ, ‘ನಾನು ಒಂದು ಬಾರಿಗೆ ಒಂದು ಚೆಂಡನ್ನು ಆಡಲು ಪ್ರಯತ್ನಿಸುತ್ತೇನೆ. ಇಡೀ ಪಂದ್ಯವನ್ನು ಆಡುವುದಿಲ್ಲ’. ಬ್ಯಾಟಿಂಗ್ ಮಾಡುವಾಗ ತುಂಬ ಮುಖ್ಯವಾಗಿ ಏನನ್ನು ಗಮನಿಸಬೇಕೆಂದರೆ, ನಿಮ್ಮ ಹಣೆಬರಹ, ಅಂಕಿಸಂಖ್ಯೆಗಳು, ವೃತ್ತಿಜೀವನ ಅಥವಾ ಏನೇ ಆಗಲಿ ನಿರ್ಣಯ ಮಾಡುವುದು ನಂತರ ಬರುವ ಚೆಂಡು. ಅದನ್ನು ದೀರ್ಘಕಾಲ ಮಾಡಿದರೆ ಯಶಸ್ಸು ಪಡೆಯಬಹುದು. ಅದು ಸುಲಭವಾಗಿ ಮಾಡಲು ಸಾಧ್ಯವಿಲ್ಲ. ಈ ಆಟಗಾರ ಈ ಸತ್ಯವನ್ನು ತಿಳಿದುಕೊಂಡಿದ್ದಾನೆ. ಏಕೆಂದರೆ ಒಂದು ಬಾರಿಗೆ ಒಂದೇ ಚೆಂಡು ಆಡಬಹುದು.
ಒಂದು ಬಾರಿಗೆ ಒಂದು ಚೆಂಡು: ಈಗ ನೀವು ಒಂದು ಬಾರಿಗೆ ಒಂದು ಚೆಂಡನ್ನು ಮಾತ್ರ ಆಡಿ. ಸದ್ಯಕ್ಕೆ ಸಮಸ್ಯೆ ಪಕ್ಕದಲ್ಲಿ ಕುಳಿತಿರುವವರನ್ನು ನೀವು ಸಹಿಸಿಕೊಳ್ಳುವುದಕ್ಕೆ ಸಾಧ್ಯವಾಗುತ್ತಿಲ್ಲವೆಂದರೆ- ಅದನ್ನು ಸರಿಪಡಿಸಿಕೊಳ್ಳಲು ಯತ್ನಿಸಿ. ದೇವರನ್ನು ಕಾಣುವ ಅಥವಾ ಮೋಕ್ಷದ ಬಗ್ಗೆ ಚಿಂತಿಸಬೇಡಿ. ಚಿಕ್ಕ ಚಿಕ್ಕ ಸಮಸ್ಯೆಗಳನ್ನು ಬಗೆಹರಿಸಲು ನೋಡಿ. ಈ ರೀತಿಯಲ್ಲಿ ಬೆಳೆಯುತ್ತೀರಿ. ಏನಾದರೂ ಅತಿ ದೊಡ್ಡದನ್ನು ಊಹಿಸಿದರೆ ಅದು ಸ್ವಲ್ಪ ಸಮಯ ಇರುತ್ತದೆ. ಆಮೇಲೆ ಮತ್ತೆ ಮೊದಲಿನ ಸ್ಥಿತಿಗೇ ಬರುತ್ತೀರಿ. ಏನನ್ನೇ ಊಹಿಸಿಕೊಳ್ಳಿ ದೇವರನ್ನಾಗಲಿ, ದೆವ್ವವನ್ನಾಗಲಿ ಅದೇನೆ ಆಗಿರಲಿ ಜೀವನ ನಿಮಗೆ ಕೆಲಸ ಕೊಟ್ಟೇ ಕೊಡುತ್ತದೆ! ಬದುಕನ್ನು ನಿಭಾಯಿಸುವುದು ಕಲಿಯಿರಿ. ಅದೇನೇ ಆಗಿರಲಿ ಬದುಕುವುದೇ ಇಲ್ಲಿನ ವಿಷಯ. ಜೀವನವನ್ನು ತಿಳಿದುಕೊಳ್ಳಲು ಶುರು ಮಾಡಿದರೆ ಮತ್ತು ಅದರ ಮಿತಿಯನ್ನು, ವ್ಯಾಪ್ತಿಯನ್ನು ತಿಳಿದುಕೊಂಡರೆ ಮಾತ್ರ ಅದನ್ನು ಮೀರಿ ಹೋಗುವ ತವಕ ಚಿಗುರುತ್ತದೆ. ಜೀವನವನ್ನು ಆಮೂಲಾಗ್ರವಾಗಿ ತಿಳಿದುಕೊಳ್ಳದಿದ್ದರೆ ಅದನ್ನು ಮೀರಿ ಹೋಗುವ ಕಾತುರತೆ ಸುಳ್ಳಾಗುತ್ತದೆ.
(ಸದ್ಗುರು ಅವರು ಯೋಗಿ, ದಾರ್ಶನಿಕ, ಆಧ್ಯಾತ್ಮಿಕ ನಾಯಕ. www.isha.sadhguru.org)