ಅಮೃತಬಳ್ಳಿ ಎಂದೆಂದಿಗೂ ಅಮೃತವೇ!

Amruthaballi
Published on

ಸದಾ ಸರ್ವದಾ ಜಗತ್ತಿಗೆ ಒಳಿತನ್ನಷ್ಟೇ ಮಾಡಿದ ಆಯುರ್ವೇದವು ಅನುಗ್ರಹಿಸಿದ ಅಮೃತಬಳ್ಳಿಯ ಚಮತ್ಕಾರಿಕ ಗುಣವಿಶೇಷಗಳ ರೋಚಕ ವಿವರಣೆಯನ್ನು ಪ್ರಸ್ತುತಪಡಿಸುತ್ತಿದ್ದೇನೆ. ಒಬ್ಬ ವ್ಯಕ್ತಿಗೆ ಅಧಿಕ ರಕ್ತದೊತ್ತಡ ಇದೆಯೆನ್ನಿ. ಪ್ರತಿನಿತ್ಯ ಅಮೃತಬಳ್ಳಿಯ ನಾಲ್ಕು ಎಲೆಯನ್ನು ಸೇವಿಸಿದರೆ ರಕ್ತದೊತ್ತಡವನ್ನು ಸ್ವಲ್ಪಮಟ್ಟಿಗೆ ಹತೋಟಿಗೆ ತರಲು ಸಹಕರಿಸುತ್ತದೆ. ಅದೇ ನಾಲ್ಕು ಎಲೆ ಅಮೃತಬಳ್ಳಿ

ಯನ್ನು ದಿನನಿತ್ಯ ಸೇವನೆ ಮಾಡುತ್ತಾ ಹೋದರೆ ಮಧುಮೇಹದ ಪ್ರಮಾಣವೂ ಅಲ್ಪಮಟ್ಟಿಗೆ ನಿಯಂತ್ರಣಕ್ಕೆ ಬರುತ್ತದೆ. ಮತ್ತೊಬ್ಬರಿಗೆ ಶರೀರದ ರಕ್ತದಲ್ಲಿ ಹೆಚ್ಚಾಗಿರುವ ಕೊಬ್ಬಿನ ಅಂಶವನ್ನು ತಗ್ಗಿಸಲೂ ಇದೇ ಗುಡೂಚಿ ಎಲೆಗಳು ಕಾರ್ಯನಿರ್ವಹಿಸುತ್ತವೆ. ಮಗದೊಬ್ಬಾಕೆಗೆ ಮಾಸಿಕ ಋತುಸ್ರಾವದಲ್ಲಿ ಏರುಪೇರು ಆಗುತ್ತಿದ್ದಾಗ ಇದೇ ಎಲೆಗಳನ್ನು ತೆಗೆದುಕೊಳ್ಳುವುದರಿಂದ ನಿಯಮಿತವಾಗಿ ಋತುಸ್ರಾವ ಆಗಲು ಅದು ಉಪಕರಿಸುತ್ತದೆ. ಮತ್ತೋರ್ವ ವ್ಯಕ್ತಿಗೆ ಕ್ಷಯರೋಗ ಬಂದು ದೇಹವು ಸಹಜ ಸ್ಥಿತಿಗೇನೋ ಬಂದಿದೆ, ಆದರೆ ಮೊದಲಿದ್ದ ಚೈತನ್ಯವಾಗಲಿ, ಉತ್ಸಾಹವಾಗಲಿ, ಶಕ್ತಿಯಾಗಲಿ ಇಲ್ಲದೆ ಪರಿತಪಿಸುತ್ತಿರುತ್ತಾನೆ. ಅವನಿಗೂ ಅಮೃತಬಳ್ಳಿಯ ಎಲೆಗಳ ನಿತ್ಯ ಸೇವನೆಯಿಂದ ರೋಗನಿರೋಧಕ ಶಕ್ತಿಯು ಹೆಚ್ಚಿ ಮೊದಲಿನಂತಾಗುತ್ತಾನೆ. ಇನ್ನೋರ್ವ ವ್ಯಕ್ತಿಗೆ ಆಗಾಗ ಜ್ವರ, ಶೀತ, ಕೆಮ್ಮು ಬಂದು ಚಡಪಡಿಸುತ್ತಿರುವಾಗ ಅಮೃತಬಳ್ಳಿ ಸೇವನೆಯಿಂದ ದೇಹದ ವ್ಯಾಧಿ ಕ್ಷಮತ್ವ ಊರ್ಜಿತಗೊಂಡು ಶ್ವಾಸಕೋಶಗಳಿಗೆ ಬಲನೀಡಿ ಆ ತೊಂದರೆಯಿಂದ ಶಾಶ್ವತವಾಗಿ ಗುಣಹೊಂದುತ್ತಾನೆ. ಇವುಗಳೆಲ್ಲ ಅಮೃತ ಬಳ್ಳಿಯ ಕಾರ್ಯ ಸಾಧನೆಗಳಾದವು. ಹೇಳಿಕೊಳ್ಳುವಂತಹ ವಿಶೇಷವೇನಿದೆ ಇಲ್ಲಿ ಎಂಬ ಪ್ರಶ್ನೆ ಏಳಬಹುದು. ಅಮೃತಬಳ್ಳಿಯ ಮಹಿಮೆಯೇ ಇದರಲ್ಲಿ ಸ್ಥಾಪಿತವಾಗಿದೆ!

ಗಮನವಿಟ್ಟು ನೋಡಿ, ಒಬ್ಬ ವ್ಯಕ್ತಿಯ ಅಧಿಕ ರಕ್ತದೊತ್ತಡವನ್ನು ಕಡಿಮೆ ಮಾಡಿದ್ದು ನಿಜ. ಅದೇ ಸಮಯದಲ್ಲಿ ರಕ್ತದೊತ್ತಡ ಸಮಸ್ಯೆ ಇಲ್ಲದ ಉಳಿದ ಯಾರಲ್ಲೂ ಅದು ರಕ್ತದೊತ್ತಡ ತಗ್ಗಿಸುವ ಉಸಾಬರಿಗೇ ಹೋಗಲಿಲ್ಲ! ಮಧುಮೇಹ ರೋಗಿಯಲ್ಲಿನ ರಕ್ತದ ಸಕ್ಕರೆಯ ಅಂಶವನ್ನು ಕಡಿಮೆಗೊಳಿಸಿತು. ಹಾಗೆಂದು ಉಳಿದ ಯಾರಲ್ಲೂ ರಕ್ತದಲ್ಲಿನ ಸಕ್ಕರೆಯ ಪ್ರಮಾಣವನ್ನು ಕೆಳಗಿಳಿಸಲೇ ಇಲ್ಲವಲ್ಲ!! ಅಧಿಕ ಕೊಬ್ಬಿನ ಅಂಶವನ್ನು ಆ ರೋಗಿಯಲ್ಲಿ ಮಾತ್ರವೇ ಕಡಿಮೆಗೊಳಿಸಿ ಉಳಿದ ಯಾರಲ್ಲೂ ಅದರ ನಿಯಂತ್ರಣದ ಗೋಜಿಗೆ ಹೋಗಿಲ್ಲವಲ್ಲ!! ಸಿಯರ ಹಾರ್ಮೋನ್​ ಸರಿದೂಗಿಸಿದರೂ ಪುರುಷರಲ್ಲಿ ಆ ಹಾರ್ಮೋನ್​ಗಳ ಮಟ್ಟದಲ್ಲಿ ಒಂದಿನಿತೂ ಬದಲಾವಣೆಯನ್ನೇ ಮಾಡುವು ದಿಲ್ಲ!! ಪರಮಾಶ್ಚರ್ಯದ ಸಂಗತಿಯಿದು. ರಾಸಾಯನಿಕ ಔಷಧಗಳನ್ನು ಈ ರೀತಿಯಾಗಿ ಸೇವಿಸುವುದು ಬಿಡಿ, ಇಂತಹ ಕಲ್ಪನೆಯನ್ನಾದರೂ ಮಾಡಲು ಸಾಧ್ಯವೇ? ಮಧುಮೇಹದ ಔಷಧ ವನ್ನು ಮಧುಮೇಹ ಇಲ್ಲದ ವ್ಯಕ್ತಿಗೆ ಕೊಟ್ಟರೆ ಹೈಪೋಗ್ಲೆಸೀಮಿಯಾ ಆಗಿಬಿಡುತ್ತದೆ. ಮತ್ತೂ ಮುಂದುವರಿಸಿದರೆ ಎಚ್ಚರ ತಪ್ಪುತ್ತದೆ. ಇನ್ನೂ ನೀಡಿ ದರೆ ಪ್ರಾಣಪಯೇ ಹಾರಿಹೋಗುತ್ತದೆ! ಅಧಿಕ ರಕ್ತದೊತ್ತಡ ಇಲ್ಲದವರಲ್ಲಿ ಅಪ್ಪಿತಪ್ಪಿ ಅದರ ಔಷಧ ನೀಡುತ್ತಾ ಹೋದರೆ ಏನೆಲ್ಲಾ ಅನಾಹುತಗಳಾಗುತ್ತವೆ! ಕೊಲೆಸ್ಟರಾಲ್​ ಕಡಿಮೆ ಮಾಡುವ ಔಷಧವನ್ನು ಆ ತೊಂದರೆ ಇಲ್ಲದ ವ್ಯಕ್ತಿಗೆ ಕೊಟ್ಟರೆ ಎಷ್ಟೊಂದು ಅವಾಂತರ ಟಿಸಿ ಹೋಗುತ್ತದೆ. ಹೆಚ್ಚೇಕೆ, ಭೇದಿಗೆ ನೀಡುವ ಔಷಧವನ್ನು ದೇಹವು ಸಹಜ ಸ್ಥಿತಿಗೆ ಬಂದ ನಂತರ ಒಂದು ದಿನ ಮುಂದುವರಿಸಿದರೆ ಮಲಬದ್ಧತೆಯೇ ಆಗಿಬಿಡುತ್ತದೆ! ಇದಲ್ಲದೆ ಸರಿಯಾದ ಔಷಧವನ್ನು ಸೂಕ್ತ ಪ್ರಮಾಣದಲ್ಲಿ ನೀಡಿದರೂ ಅಡ್ಡ ಪರಿಣಾಮಗಳು ಪ್ರತ್ಯೇಕ! ಹಾಗಿದ್ದರೆ ಅಮೃತಬಳ್ಳಿ ಶರೀರದಲ್ಲಿ ಈ ರೀತಿಯಾಗಿ ತೊಂದರೆಯನ್ನೇ ಮಾಡದೆ ವ್ಯಕ್ತಿಯ ಶರೀರದ ಅಗತ್ಯಕ್ಕೆ ತಕ್ಕಂತೆ ಕೆಲಸ ಮಾಡುವ ಪರಿ ಊಹೆಗೂ ನಿಲುಕದ್ದು. ಇಲ್ಲಿ ಅಡ್ಡ ಪರಿಣಾಮದ ಮಾತು ಬಿಡಿ, ಪರಿಣಾಮದಲ್ಲೂ ಅದೆಷ್ಟು ಶ್ರೇಷ್ಠತೆ!

ಪ್ರತಿಯೊಬ್ಬ ವ್ಯಕ್ತಿಯ ದೇಹದಲ್ಲಿ ಸಹಜ ರಕ್ತದೊತ್ತಡ, ಸಕ್ಕರೆಯ ಅಂಶ, ಕೊಬ್ಬಿನ ಅಂಶಗಳೆಲ್ಲವೂ ಒಂದೇ ಸಮನಾಗಿರುವುದಿಲ್ಲ, ಬಹ ಳಷ್ಟು ವ್ಯತ್ಯಾಸವಿರುತ್ತದೆ. ಹಾಗಿದ್ದರೆ ಪ್ರತಿಯೊಬ್ಬ ವ್ಯಕ್ತಿಯ ರೋಗದ ತೀವ್ರತೆ ಈ ಅಮೃತಬಳ್ಳಿಗೆ ಅರ್ಥವಾಗುವುದಾದರೂ ಹೇಗೆ? ವಿಭಿನ್ನ ವ್ಯಕ್ತಿಗಳಲ್ಲಿ ಅವರವರ ದೇಹದ ಅಂಗಾಂಗಗಳ ಸಹಜ ಸ್ಥಿತಿ ಯಾವ ಮಟ್ಟದ್ದೆಂದು ತಿಳಿಯುವುದಾದರೂ ಹೇಗೆ? ವಿಚಿತ್ರವೆಂದರೆ, ಪ್ರಾಕೃತ ಸ್ಥಿತಿಗೆ ತಲುಪಿದ ನಂತರ ಆ ದಿಕ್ಕಿನಲ್ಲಿ ಕಾರ್ಯವೆಸಗುವುದನ್ನೇ ನಿಲ್ಲಸಿ ಬಿಡುತ್ತದೆ. ಏನೂ ಕೆಲಸವಿಲ್ಲ ಎಂದಾದರೆ, ರೋಗ ನಿರೋಧಕ ಶಕ್ತಿ ಹೆಚ್ಚಿಸುವತ್ತ ಗಮನ ನೀಡುತ್ತದೆ! ಏನದ್ಭುತವಿದು! ಇಲ್ಲಿ ಗಮನಾರ್ಹ ಅಂಶವೆಂದರೆ, ಔಷಧೀಯ ಗಿಡವನ್ನು ಭೂಮಿಯಿಂದ ತೆಗೆದಾಗ ಅದು ತನ್ನ ಪ್ರಾಣ ತ್ಯಜಿಸುತ್ತದೆ. ತನ್ನ ಜೀವ ಹೋದಮೇಲೂ ಉತಷ್ಠ ಕಾರ್ಯ ಶೈಲಿಯಿಂದ ಮಾನವರ ಪ್ರಾಣ ಉಳಿಸುತ್ತದೆ! ಮಾನವರಿಗೆ ಜೀವ ನೀಡುತ್ತದೆ!! ನೆನಪಿರಲಿ, ಅಮೃತಬಳ್ಳಿ ಅಮೃತವೇ ಎಂಬುದರ ಮುಂದೆ ಪ್ರಶ್ನಾರ್ಥಕ ಚಿಹ್ನೆ ಇಲ್ಲ, ಅಮೃತಬಳ್ಳಿ ಎಂದೆಂದಿಗೂ ಅಮೃತವೇ.

(ಪ್ರತಿಕ್ರಿಯಿಸಿ: vvsudina@gmail.com)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net