ಜಗತ್ತನ್ನು ಬದಲಿಸುವ ಶಕ್ತಿ ನಿಮ್ಮೊಳಗೇ ಇದೆ!

ಜಗತ್ತನ್ನು ಬದಲಿಸುವ ಶಕ್ತಿ ನಿಮ್ಮೊಳಗೇ ಇದೆ!
ಜಗತ್ತನ್ನು ಬದಲಿಸುವ ಶಕ್ತಿ ನಿಮ್ಮೊಳಗೇ ಇದೆ!
Published on

ಲೇಖಕರು ಸಾಮಾಜಿಕ ಹಾಗೂ ಆಧ್ಯಾತ್ಮಿಕ ಗುರುಗಳು
https://srisathyasaianandanam.com






ಪ್ರತಿಯೊಬ್ಬರೂ ಒಳ್ಳೆಯ ಜಗತ್ತಿನ ಕನಸು ಕಾಣುತ್ತಾರೆ. ಹಸಿವು ಇಲ್ಲದ ಜಗತ್ತು, ಯುದ್ಧವಿಲ್ಲದ ಜಗತ್ತು, ಅನಾರೋಗ್ಯವಿಲ್ಲದ ಸಮಾಜ, ಶಿಕ್ಷಣದಿಂದ ಯಾರೂ ವಂಚಿತರಾಗದ ಲೋಕ - ಇದು ಎಲ್ಲರ ಆಶಯ. ಆದರೆ, ಈ ಕನಸು ನನಸಾಗುವುದು ಯಾರಿಂದ? ಸರ್ಕಾರಗಳಿಂದಲೇ? ಶ್ರೀಮಂತರಿಂದಲೇ? ಅಥವಾ ಮಹಾನ್ ನಾಯಕರಿಂದಲೇ? ನಾನು ಹೇಳುವುದು ಒಂದೇ - ಜಗತ್ತನ್ನು ಬದಲಿಸುವ ಶಕ್ತಿ ಪ್ರತಿಯೊಬ್ಬ ವ್ಯಕ್ತಿಯಲ್ಲೂ ಇದೆ. ಒಬ್ಬ ವ್ಯಕ್ತಿ ಬದಲಾದರೆ ಆತನ ಕುಟುಂಬ ಬದಲಾಗುತ್ತದೆ. ಕುಟುಂಬ ಬದಲಾದರೆ ಸಮಾಜ ಬದಲಾಗುತ್ತದೆ. ಸಮಾಜ ಬದಲಾದರೆ ರಾಷ್ಟ್ರ ಬದಲಾಗುತ್ತದೆ. ರಾಷ್ಟ್ರಗಳು ಬದಲಾದಾಗ ಜಗತ್ತೇ ಬದಲಾಗುತ್ತದೆ. ಆದ್ದರಿಂದ ನಾನು ಜಗತ್ತನ್ನು ಬದಲಿಸಲು ಹೊರಟಿಲ್ಲ; ಒಬ್ಬ ವ್ಯಕ್ತಿಯ ಹೃದಯವನ್ನು ಬದಲಿಸಲು ಪ್ರಯತ್ನಿಸುತ್ತಿದ್ದೇನೆ.

ಭಾರತದ ಮಹಾನ್ ರಾಜ ರಂತಿದೇವನ ಪ್ರಾರ್ಥನೆಯನ್ನು ನೆನಪಿಸಿಕೊಳ್ಳಿ. "ನನಗೆ ರಾಜ್ಯ ಬೇಡ, ಸ್ವರ್ಗ ಬೇಡ, ಮೋಕ್ಷವೂ ಬೇಡ. ದುಃಖದಲ್ಲಿ ಇರುವವರ ನೋವನ್ನು ದೂರಮಾಡುವ ಶಕ್ತಿಯನ್ನು ಮಾತ್ರ ಕರುಣಿಸು" ಎಂದು ಅವನು ಪ್ರಾರ್ಥಿಸಿದನು. ಇದೇ ನಿಜವಾದ ಆಧ್ಯಾತ್ಮಿಕತೆ. ರಾಜ ರಂತಿದೇವನಲ್ಲಿ ದೇವರು ಕೇಳುತ್ತಾನೆ, "ನಿನಗೆ ಏನು ಬೇಕು" ಎಂದು, ಆಗ ರಾಜ ಹೆಚ್ಚುವರಿ ಸಾಮ್ರಾಜ್ಯವನ್ನೋ, ಸಂಪತ್ತನ್ನೋ, ಮುಂದಿನ ಜನ್ಮದಲ್ಲಿ ರಾಜನಾಗಿ ಹುಟ್ಟಬೇಕೆಂಬ ಬಯಕೆಯನ್ನೋ ಕೇಳಬಹುದಿತ್ತು, ಆದರೆ ಆತ ಹಾಗೆ ಮಾಡಲಿಲ್ಲ. ಬದಲಾಗಿ ಸಂಕಷ್ಟದಲ್ಲಿ ಇರುವವರ ಕಣ್ಣೀರನ್ನು ಒರೆಸುವ ಶಕ್ತಿ ಕೊಡು ಎಂದು ಕೇಳಿಕೊಂಡ. ದೇವರಲ್ಲಿ ಏನನ್ನೋ ಕೇಳುವುದು ಭಕ್ತಿ ಅಲ್ಲ; ದೇವರು ಸೃಷ್ಟಿಸಿದ ಜೀವಿಗಳ ನೋವನ್ನು ತನ್ನ ನೋವನ್ನಾಗಿ ಅನುಭವಿಸುವುದೇ ನಿಜವಾದ ಭಕ್ತಿ.
ಮಹಾತ್ಮ ಗಾಂಧಿಯವರ ಒಂದು ಮಾತು ಇಲ್ಲಿ ಉಲ್ಲೇಖನೀಯ. "ಪ್ರತಿ ಮನುಷ್ಯನ ಅಗತ್ಯಗಳನ್ನು ಪೂರೈಸಲು ಸಾಕಾಗುವಷ್ಟು ಸಂಪನ್ಮೂಲ ನಮ್ಮಲ್ಲಿ ಇದೆ. ಆದರೆ, ದುರಾಸೆ ಈಡೇರಿಸುವಷ್ಟು ಇಲ್ಲ" ಎಂದು ಹೇಳಿದ್ದರು. ದೇವರು ಈ ವಿಶ್ವವನ್ನು ಸೃಷ್ಟಿಸಿ ಎಲ್ಲ ಜೀವಿಗಳಿಗೂ ಅದರಲ್ಲಿ ಇರಲು ಅವಕಾಶ ಮಾಡಿಕೊಟ್ಟಿದ್ದಾನೆ. ತನ್ನ ಮಕ್ಕಳಿಗೆ ಹೇಗೆ ಮತ್ತು ಎಷ್ಟು ಪೂರೈಸಬೇಕೆಂದು ಅವನಿಗೆ ಗೊತ್ತಿಲ್ಲವೇ? ಒಬ್ಬ ತಾಯಿಗೆ ತನ್ನ ಎಲ್ಲ ಮಕ್ಕಳಿಗೆ ಹೊಟ್ಟೆ ತುಂಬ ಉಣ್ಣಲು ಎಷ್ಟು ಆಹಾರವನ್ನು ತಯಾರಿಸಬೇಕೆಂದು ಗೊತ್ತಿರುವ ಹಾಗೆ ವಿಶ್ವ ನಿಯಾಮಕನಿಗೂ ತನ್ನ ಎಲ್ಲ ಮಕ್ಕಳಿಗೂ ಹೇಗೆ ಮತ್ತು ಎಷ್ಟು ಪೂರೈಸಬೇಕೆಂದು ಗೊತ್ತಿದೆ. ದೇವರು ಪ್ರತಿಯೊಬ್ಬನಿಗೂ ಸಾಕಷ್ಟು ಪೂರೈಸಿದ್ದಾನೆ. ದುರದೃಷ್ಟವಶಾತ್, ಕೆಲವರ ಸ್ವಾರ್ಥ ಹಾಗೂ ದುರಾಸೆಗಳು, ಅವರು ತಮ್ಮ ಅಗತ್ಯಕ್ಕಿಂತ ಹೆಚ್ಚಿನದನ್ನು ಕೂಡಿಡುವಂತೆ ಮಾಡುತ್ತವೆ. ಈ ರೀತಿಯ ದುರ್ನಡತೆಗಳು ಜಗತ್ತಿನಲ್ಲಿ ಪರಸ್ಪರ ಭಿನ್ನಾಭಿಪ್ರಾಯಗಳನ್ನು, ವೈರುಧ್ಯಗಳನ್ನು, ದುಃಖ ಮತ್ತು ಬೇಸರಗಳನ್ನು ಸೃಷ್ಟಿಸುತ್ತವೆ. ಜಗತ್ತಿನ ಸಮಸ್ಯೆಗಳಿಗೆ ಪರಿಹಾರಗಳು ಸರ್ಕಾರದ ನಿಯಮಗಳಲ್ಲಿ, ಕಟ್ಟಳೆಗಳಲ್ಲಿ ಅಥವಾ ಕಾಯ್ದೆಗಳಲ್ಲಿ ಸಿಗಲಾರವು. ಅದು ಪ್ರತಿಯೊಬ್ಬನ ಹೆಗಲ ಮೇಲಿರುವ ಜವಾಬ್ದಾರಿ. ಅದು ಪ್ರತಿಯೊಬ್ಬರು ಈಗಿರುವುದಕ್ಕಿಂತ ಹೆಚ್ಚು ಸ್ವಾರ್ಥರಹಿತರಾಗಿ ವರ್ತಿಸುವುದನ್ನು ಅವಲಂಬಿಸಿದೆ. ಒಬ್ಬನು ತನ್ನ ಅಗತ್ಯಕ್ಕಿಂತ ಹೆಚ್ಚಾಗಿ ಕೂಡಿಟ್ಟಾಗ, ಮತ್ತೊಬ್ಬನ ಪಾಲಿನ ಅವಕಾಶ ಕಸಿದುಕೊಳ್ಳಲ್ಪಡುತ್ತದೆ. ಆದ್ದರಿಂದ ಸಮಸ್ಯೆ ಹಣದ ಕೊರತೆಯಲ್ಲ; ಸಮಸ್ಯೆ ಹೃದಯದ ಕೊರತೆ.
ನಿಮ್ಮ ಜೀವನವನ್ನು ಒಂದು ಕ್ಷಣ ಗಮನಿಸಿ. ನಿಮ್ಮ ಮನೆಯಲ್ಲಿ ಆಹಾರವಿದೆಯೆ? ಧರಿಸಲು ಬಟ್ಟೆಯಿದೆಯೆ? ಮಲಗಲು ಮನೆಯಿದೆಯೆ? ಮಕ್ಕಳಿಗೆ ವಿದ್ಯಾಭ್ಯಾಸದ ಅವಕಾಶವಿದೆಯೆ? ಆರೋಗ್ಯ ಸಿಕ್ಕಿದೆಯೆ? ಹಾಗಿದ್ದರೆ ದೇವರು ನಿಮ್ಮನ್ನು ಆಶೀರ್ವದಿಸಿದ್ದಾನೆ. ಆದರೆ ಆ ಆಶೀರ್ವಾದವನ್ನು ಅನುಭವಿಸಲು ಮಾತ್ರ ಕೊಡಲಿಲ್ಲ; ಅದನ್ನು ಮತ್ತೊಬ್ಬರ ಜೀವನದ ಆಶೀರ್ವಾದವಾಗಿಸಬೇಕೆಂದು ಕೊಟ್ಟಿದ್ದಾನೆ. "ನಾನು ಇವತ್ತಿನ ಮಟ್ಟಿಗೆ ಸಂತೃಪ್ತನಾಗಿರುವೆ; ನಾನೀಗ ಬೇರೆ ಯಾರೋ ಹಸಿದಿರುವವರ ಕುರಿತು ಯೋಚಿಸಬೇಕು; ನಾನು ವಿದ್ಯಾವಂತನಾಗಿ ಸಮಾಜದಲ್ಲಿ ಒಳ್ಳೆಯ ಸ್ಥಾನದಲ್ಲಿರುವೆ; ನಾನೀಗ ಶಿಕ್ಷಣ ವಂಚಿತರ ಕುರಿತಾಗಿ ಯೋಚಿಸಬೇಕು. ನನ್ನಲ್ಲಿ ಒಳ್ಳೆಯ ಬಟ್ಟೆಗಳಿವೆ, ನನಗೆ ಆಶ್ರಯವಾಗಿ ಒಂದು ಮನೆ ಇದೆ, ಜೀವನದ ಎಲ್ಲ ರಂಗಗಳಲ್ಲಿಯೂ ನಾನು ಸುಖವಾಗಿದ್ದೇನೆ. ಈಗ ನಾನು ಬಟ್ಟೆಗಳಿಲ್ಲದವರ, ಆಶ್ರಯವಿಲ್ಲದವರ ಹಾಗೂ ಅನಾರೋಗ್ಯಪೀಡಿತರ ಕಡೆಗೆ ಗಮನವನ್ನು ಹರಿಸಬೇಕು" - ಇದು ಎಲ್ಲರ ಧ್ಯೇಯವಾಕ್ಯವಾದರೆ ಸಮೃದ್ಧ ಸಮಾಜ ನಿರ್ಮಾಣ ಸಾಧ್ಯ. ತಮ್ಮ ಜೀವನಗಳಿಗೆ ಮೂಲಭೂತವಾದ ಅಗತ್ಯಗಳನ್ನು ಪಡೆದ ಜಗತ್ತಿನ ಅರ್ಧಭಾಗದ ಜನರು ಉಳಿದರ್ಧ ಭಾಗದ ಜನರ ಕುರಿತು ಯೋಚಿಸಲು ಪ್ರಾರಂಭಿಸಿದರೆ, ಎಲ್ಲರಿಗೂ ಸಮಾಧಾನಕರ ಜೀವನವು ದೊರಕುತ್ತದೆ. ಜಗತ್ತಿನ ಸಮಸ್ಯೆಗಳಿಗೆ ಇದೊಂದೇ ಪರಿಹಾರ. ಪ್ರತಿಯೊಬ್ಬನೂ ಇನ್ನೊಬ್ಬರ ಕುರಿತು ಯೋಚಿಸಲು ಪ್ರಾರಂಭಿಸಬೇಕು.
ಭಕ್ತ ಮತ್ತು ಜ್ಞಾನಿ: ಅನೇಕರು ಆಧ್ಯಾತ್ಮಿಕತೆ ಎಂದರೆ ಪೂಜೆ, ಜಪ, ಧ್ಯಾನ ಎಂದು ಭಾವಿಸಿಕೊಳ್ಳುತ್ತಾರೆ. ಇದೆಲ್ಲವೂ ಒಳ್ಳೆಯದೇ. ಆದರೆ ಅವು ನಮ್ಮ ಹೃದಯವನ್ನು ಮೃದುಗೊಳಿಸಬೇಕು. ಪರರ ನೋವಿಗೆ ಸ್ಪಂದಿಸುವ ಮನಸ್ಸನ್ನು ಬೆಳೆಸಬೇಕು, ಇಲ್ಲದೇ ಇದ್ದರೆ ಆ ಸಾಧನೆ ಅಪೂರ್ಣ. ದೇವರನ್ನು ಕಲ್ಲಿನ ವಿಗ್ರಹದಲ್ಲಿ ಮಾತ್ರ ನೋಡುವವನು ಭಕ್ತನಾಗಬಹುದು; ಆದರೆ ಪ್ರತಿಯೊಬ್ಬ ಜೀವಿಯಲ್ಲೂ ದೇವರನ್ನು ಕಾಣುವವನು ಜ್ಞಾನಿಯಾಗುತ್ತಾನೆ. ನಾನು ಯಾವಾಗಲೂ ಹೇಳುವುದು, "ಸೇವೆ ಎನ್ನುವುದು ನಾವು ದೇವರಿಗೆ ಮಾಡುವ ಉಪಕಾರವಲ್ಲ; ದೇವರು ನಮಗೆ ಕೊಟ್ಟಿರುವ ಅವಕಾಶ" ಎಂದು. ಹಸಿದವನಿಗೆ ಅನ್ನ ನೀಡುವಾಗ ನಾವು ಅವನಿಗೆ ಸಹಾಯ ಮಾಡುತ್ತಿಲ್ಲ. ಅವನ ರೂಪದಲ್ಲಿ ನಿಂತಿರುವ ದೇವರು ನಮ್ಮೊಳಗಿನ ದಯೆಯನ್ನು ಹೊರತರುವ ಅವಕಾಶವನ್ನು ನೀಡುತ್ತಿದ್ದಾನೆ ಎಂದು ಭಾವಿಸಿಕೊಳ್ಳಬೇಕು. ಆದ್ದರಿಂದ ಸೇವೆ ಮಾಡುವಾಗ ಅಹಂಕಾರ ಇರಬಾರದು. ಕೃತಜ್ಞತೆ ಇರಬೇಕು.
ಅಂತಾರಾಷ್ಟ್ರೀಯ ಸಂಸ್ಥೆಗಳು, ಸರ್ಕಾರಗಳು ಮತ್ತು ಬೃಹತ್ ಸಂಸ್ಥೆಗಳ ಅಧಿಕಾರಿಗಳೂ ಒಳ್ಳೆಯ ಉದ್ದೇಶಗಳಿಂದ ತಮಗೆ ಸಾಧ್ಯವಾದಷ್ಟೂ ಕೆಲಸ ಮಾಡುತ್ತಿರುವಾಗ, ಈ ದಿಸೆಯಲ್ಲಿ ನನ್ನ ವಿಚಾರವೇ ಬೇರೆಯಾಗಿದೆ. ಜಗತ್ತನ್ನು ಬದಲಾಯಿಸಬೇಕಾದರೆ, ನಾನು ಒಬ್ಬ ವ್ಯಕ್ತಿಯನ್ನು ಬದಲಿಸುವ ವಿಚಾರ ಹೊಂದಿದ್ದೇನೆ. ಶಾಲೆಗಳಲ್ಲಿ ಬೆಳಗಿನ ಉಪಾಹಾರ ನೀಡುವ ಅನ್ನಪೂರ್ಣಾ ಯೋಜನೆಯು ಪ್ರಾರಂಭವಾದಾಗ, ಹೆಚ್ಚಿನ ಪ್ರಮಾಣದಲ್ಲಿ ಜನರು ಅದಕ್ಕೆ ಸ್ಪಂದಿಸಲಿಲ್ಲ. ಆದರೆ ಅನ್ನಪೂರ್ಣಾ ಯೋಜನೆಯ ಆದರ್ಶ ಅರಿವಿಗೆ ಬಂದಾಗ ಜನರು ಸ್ಪಂದಿಸಲು ಶುರು ಮಾಡಿದರು. ಸ್ತ್ರೀಯರು ಅನಾರೋಗ್ಯದಿಂದ ಬಳಲುತ್ತಾರೆ, ಮಕ್ಕಳು ಹಸಿವಿನಿಂದಲೇ ಶಾಲೆಗೆ ಹೋಗುತ್ತಾರೆ, ಹಿರಿಯರಿಗೆ ಅಗತ್ಯವಾದ ಕಾಳಜಿ ಸಿಗುವುದಿಲ್ಲ, ಇದು ಅತ್ಯಂತ ಕರುಣಾಜನಕ ಸಂಗತಿ. ಇದು ಬದಲಾಗಬೇಕು. ಎಲ್ಲಿಯೂ ಒಂದು ಮಗು ಅಥವಾ ಒಬ್ಬ ವ್ಯಕ್ತಿಯೂ ಹಸಿದ ಹೊಟ್ಟೆಯಲ್ಲಿ ಮಲಗಬಾರದು. ಇಂಥ ಭವಿಷ್ಯದ ಕನಸನ್ನು ನಾನು ಕಾಣುತ್ತಿದ್ದೇನೆ. ಯಾವೊಬ್ಬ ಮಗುವಿಗೂ ಸರಿಯಾದ ರೀತಿಯ ಶಿಕ್ಷಣ ಕನಸಿನ ಗಂಟಾಗಬಾರದು. ಯಾರೊಬ್ಬರಿಗೂ ದುಡ್ಡಿನ ಅಡಚಣೆಯಿಂದ ಅಗತ್ಯವಾದ ಆರೋಗ್ಯ ರಕ್ಷಣೆಯು ಕನಸಿನ ಮಾತಾಗಬಾರದು. ಎಲ್ಲರಿಗೂ ಆಶ್ರಯಕ್ಕೆ ಒಂದು ಮನೆ, ಮೈತುಂಬ ತೊಟ್ಟುಕೊಳ್ಳುವ ಬಟ್ಟೆ, ಹೊಟ್ಟೆತುಂಬುವಷ್ಟು ಊಟ ಸಿಗುತ್ತಿರುವ ಒಂದು ಜಗತ್ತಿನ ಕನಸನ್ನು ಕಾಣುತ್ತಿದ್ದೇನೆ. ಅಂತಹ ಜಗತ್ತನ್ನು ನಿರ್ಮಿಸಲೆಂದು ಕೆಲಸ ಮಾಡುತ್ತಿದ್ದೇವೆ.
ಪ್ರೀತಿಯೇ ಶಕ್ತಿ: ಹಣವೇ ಎಲ್ಲವನ್ನೂ ಮಾಡುತ್ತದೆ ಎಂದು ಅನೇಕರು ಭಾವಿಸುತ್ತಾರೆ. ಆದರೆ ಇತಿಹಾಸವನ್ನು ನೋಡಿದರೆ ಜಗತ್ತನ್ನು ಬದಲಿಸಿದ್ದು ಹಣವಲ್ಲ; ಪ್ರೀತಿಯಿಂದ ತುಂಬಿದ ಹೃದಯಗಳು. ಹಣ ಕಟ್ಟಡಗಳನ್ನು ನಿರ್ಮಿಸಬಹುದು. ಆದರೆ ಕರುಣೆಯೇ ಮನೆಗಳನ್ನು ಕುಟುಂಬಗಳನ್ನಾಗಿ ಮಾಡುತ್ತದೆ. ಹಣ ಆಸ್ಪತ್ರೆ ಕಟ್ಟಬಹುದು. ಆದರೆ ಸೇವಾಭಾವವೇ ರೋಗಿಯ ನೋವನ್ನು ಕಡಿಮೆ ಮಾಡುತ್ತದೆ. ಹಣ ಶಾಲೆಗಳನ್ನು ಕಟ್ಟಬಹುದು. ಆದರೆ ಪ್ರೀತಿಯಿಂದ ಪಾಠ ಹೇಳುವ ಗುರುಗಳೇ ಭವಿಷ್ಯವನ್ನು ರೂಪಿಸುತ್ತಾರೆ. ಆದ್ದರಿಂದ ನನ್ನ ಸಂಪತ್ತು ಹಣವಲ್ಲ; ಒಳ್ಳೆಯ ಜನರು. ನಿಸ್ವಾರ್ಥ ಮನಸ್ಸುಳ್ಳ ವ್ಯಕ್ತಿಗಳೇ ಜಗತ್ತಿನ ನಿಜವಾದ ಐಶ್ವರ್ಯ. ಸಾವಿರಾರು ಹೃದಯಗಳು 'ನನ್ನ ಬಗ್ಗೆ ಅಲ್ಲ, ನಮ್ಮ ಬಗ್ಗೆ' ಎಂದು ಯೋಚಿಸಲು ಆರಂಭಿಸಿದರೆ, ಹಸಿವು ಕಡಿಮೆಯಾಗುತ್ತದೆ. ಅಜ್ಞಾನ ದೂರವಾಗುತ್ತದೆ. ಅನಾರೋಗ್ಯದ ನೋವು ಇಳಿಯುತ್ತದೆ. ಸಮಾಜದಲ್ಲಿ ಶಾಂತಿ ನೆಲೆಸುತ್ತದೆ.
ನೀವು ಪ್ರತಿದಿನ ನಿಮಗೆ ನೀವು ಒಂದು ಪ್ರಶ್ನೆ ಕೇಳಿಕೊಳ್ಳಿ. "ಇಂದು ನನ್ನಿಂದ ಯಾರ ಜೀವನದಲ್ಲಿ ಒಂದು ಸಣ್ಣ ಬದಲಾವಣೆ ಆಯಿತೇ?" ಒಬ್ಬನಿಗೆ ಒಂದು ಸಾಂತ್ವನದ ಮಾತು ಹೇಳಿದಿರಾ? ಒಬ್ಬ ವಿದ್ಯಾರ್ಥಿಗೆ ಪುಸ್ತಕ ಕೊಟ್ಟಿರಾ? ಒಬ್ಬ ವೃದ್ಧನನ್ನು ಗೌರವದಿಂದ ಮಾತನಾಡಿಸಿದಿರಾ? ಒಬ್ಬ ರೋಗಿಯ ಕೈ ಹಿಡಿದು ಧೈರ್ಯ ತುಂಬಿದಿರಾ? ಇಂತಹ ಸಣ್ಣ ಕಾರ್ಯಗಳೇ ದೊಡ್ಡ ಪರಿವರ್ತನೆಯ ಬೀಜಗಳು.
ಆಧ್ಯಾತ್ಮಿಕತೆಯ ಪರಮ ಗುರಿ ದೇವರನ್ನು ಹುಡುಕುವುದು ಅಲ್ಲ. ನಮ್ಮೊಳಗಿನ ದೈವತ್ವವನ್ನು ಜಾಗೃತಗೊಳಿಸುವುದು. 'ನಾನು' ಎಂಬ ಭಾವ ಕಡಿಮೆಯಾಗಿ 'ನಾವು' ಎಂಬ ಭಾವ ಬೆಳೆಯುವುದು. 'ಇದು ನನ್ನ ಕುಟುಂಬ' ಎಂಬ ಗಡಿ ಅಳಿದು ಇಡೀ ಜಗತ್ತೇ 'ನನ್ನ ಕುಟುಂಬ' ಎಂಬ ಅನುಭವ ಮೂಡುವುದು. ಇದೇ ವಸುದೈವ ಕುಟುಂಬಕಂ. ಇದೇ ಮಾನವಧರ್ಮ. ಇದೇ ದೈವಧರ್ಮ. ಆದ್ದರಿಂದ, ನಿಮ್ಮ ಜೀವನವನ್ನು ಕೇವಲ ನಿಮ್ಮ ಯಶಸ್ಸಿಗಾಗಿ ಮೀಸಲಿಡಬೇಡಿ. ನಿಮ್ಮಿಂದ ಮತ್ತೊಬ್ಬರ ಕಣ್ಣಲ್ಲಿ ಆಶಾಕಿರಣ ಮೂಡಲಿ. ನಿಮ್ಮ ಕೈಗಳು ಕೇವಲ ಸಂಪಾದನೆಗಾಗಿ ಅಲ್ಲ, ಸೇವೆಗಾಗಿ ಚಾಚಲಿ. ನಿಮ್ಮ ಜ್ಞಾನ ಕೇವಲ ನಿಮ್ಮ ಬೆಳವಣಿಗೆಗೆ ಅಲ್ಲ, ಸಮಾಜದ ಉದ್ಧಾರಕ್ಕೆ ಬಳಕೆಯಾಗಲಿ. ಆದ್ದರಿಂದ ನಾವೆಲ್ಲರೂ ರಾಜ ರಂತಿದೇವನ ಹಾಗೆ ಒಂದೇ ಪ್ರಾರ್ಥನೆ ಮಾಡೋಣ, 'ಸರ್ವೇ ಭವಂತು ಸುಖಿನಃ... ಸಮಸ್ತ ಲೋಕಾಃ ಸುಖಿನೋ ಭವಂತು'. ಈ ಪ್ರಾರ್ಥನೆ ನಮ್ಮ ತುಟಿಗಳಲ್ಲಷ್ಟೇ ಅಲ್ಲ, ನಮ್ಮ ಬದುಕಿನಲ್ಲೂ ಅರಳಿದಾಗ, ಕನಸಿನ ಜಗತ್ತು ದೂರದ ಕನಸಾಗಿರುವುದಿಲ್ಲ; ನಮ್ಮ ಕಣ್ಣೆದುರೇ ಅರಳುವ ಸತ್ಯವಾಗುತ್ತದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net