

(ಲೇಖಕರು ಸಾಮಾಜಿಕ ಹಾಗೂ ಆಧ್ಯಾತ್ಮಿಕ ಗುರುಗಳು)
ನಮ್ಮ ಧರ್ಮಗ್ರಂಥಗಳು ಗುರುವಿನ ಮಹತ್ವವನ್ನು ಸಾರಿಹೇಳಿವೆ. ಶ್ರೀ ಆದಿ ಶಂಕರಾಚಾರ್ಯರು ತಮ್ಮ ವಿವೇಕಚೂಡಾಮಣಿಯಲ್ಲಿ ಗುರುವನ್ನು ‘ಕರುಣಾಸಿಂಧೋ’ (ಕರುಣೆಯ ಸಾಗರವೇ) ಎಂದು ಸ್ತುತಿಸುತ್ತಾರೆ. ಪ್ರಾಪಂಚಿಕ ಜಂಜಾಟಗಳ ಭವಸಾಗರದಲ್ಲಿ ಸಿಲುಕಿದ ಸಾಧಕನಿಗೆ ತನ್ನನ್ನು ತಾನು ಉದ್ಧರಿಸಿಕೊಳ್ಳುವ ಶಕ್ತಿಯಿರುವುದಿಲ್ಲ. ಅವನಿಗೆ ಮಾರ್ಗದರ್ಶನ ಮಾಡಿ ಕಾಪಾಡಲು ಕರುಣಾಸಾಗರನಾದ ಗುರುವಿನ ಕಣ್ಣಂಚಿನಿಂದ ಸೂಸುವ ಕರುಣೆಯ ಒಂದೇ ಒಂದು ನೋಟ ಬೇಕಿರುತ್ತದೆ. ಒಬ್ಬ ವ್ಯಕ್ತಿಯ ಸಾಧನೆಯ ಹಾದಿಯಲ್ಲಿ ಗುರುವಿಗೆ ಬಹಳ ಮಹತ್ವವಿದೆ. ಯಾವುದೇ ಷರತ್ತುಗಳಿಲ್ಲದ, ನಿರಪೇಕ್ಷ ಕರುಣೆಯ ಸ್ವರೂಪವೇ ಗುರುತತ್ತ್ವ.
ಯಾವುದೋ ವ್ಯಕ್ತಿ ಯಾವುದೋ ಕಾರಣಕ್ಕೆ ಜಗತ್ತಿನಿಂದ ತಿರಸ್ಕೃತವಾಗಿರಬಹುದು. ಆದರೆ ಶರಣಾದ ಶಿಷ್ಯನನ್ನು ಗುರುವು ಎಂದಿಗೂ ತಿರಸ್ಕರಿಸುವುದಿಲ್ಲ. ತನ್ನ ಕರುಣೆಯ ನೋಟದಿಂದ ಅವನನ್ನು ಸ್ವೀಕರಿಸಿ, ಅವನಿಗೆ ದೋಷಮುಕ್ತಿಯ ಮಾರ್ಗಗಳನ್ನು ಸೂಚಿಸುತ್ತಾನೆ. ಗುರುವಿನ ಈ ಅದ್ಭುತ ಸಾನ್ನಿಧ್ಯದಲ್ಲಿಯೇ ಸಾಧಕನು ತನ್ನ ಅಹಂಕಾರವನ್ನು ಕಳೆದುಕೊಂಡು ದೈವತ್ವಕ್ಕೇರುವ ಸುಂದರ ಪಯಣದ ಆರಂಭ ಅಡಗಿರುತ್ತದೆ.
ಪ್ರಾಪಂಚಿಕ ಜಗತ್ತಿನ ಬಂಧನದಲ್ಲಿ ಸಿಲುಕಿದವರಿಗೆ ‘ನಾನು’ ಮತ್ತು ‘ನನ್ನದು’ ಎನ್ನುವ ಬಂಧನಗಳಿಂದ, ಸಂಸಾರ ಸಾಗರದಿಂದ ಪಾರಾಗಿ ಹೊರಬರುವುದು ಬಹಳ ಕಷ್ಟ. ಅದು ಮನುಷ್ಯನ ಸಾಮಾನ್ಯ ಸಾಮರ್ಥ್ಯವನ್ನು ಮೀರಿದ್ದು. ಅಂಥ ಸಂದರ್ಭಗಳಲ್ಲಿ ಸಾಧಕನಾದವನು ಪ್ರಾಮಾಣಿಕವಾಗಿ ಹಂಬಲಿಸಿದರೆ ಅವನಿಗೆ ಒಬ್ಬ ಮಹಾಪುರುಷನ ಆಶ್ರಯ ದೊರೆಯುತ್ತದೆ. ಅವರು ದೋಣಿಯ ಮೂಲಕ ಸಾಗರ ದಾಟಿಸುವ ನಾವಿಕನಂತೆ ಸಾಧಕನನ್ನು ಕೈಹಿಡಿದು ನಡೆಸುತ್ತಾರೆ. ಲೌಕಿಕ ಪ್ರಪಂಚ ಮತ್ತು ಗುರುವಿನ ಕೃಪೆ ಎರಡೂ ಒಟ್ಟಿಗೆ ಸಿಗುವುದಿಲ್ಲ; ಲೌಕಿಕ ವ್ಯಾಮೋಹಗಳನ್ನು ತ್ಯಜಿಸಿದಾಗ ಮಾತ್ರ ದೈವಿಕ ಕೃಪೆ ಲಭ್ಯವಾಗುತ್ತದೆ. ‘ನಮಗೆ ಗುರುವಿನ ಅವಶ್ಯಕತೆ ಇದೆ’ ಎಂಬುದನ್ನು ಅರಿತುಕೊಳ್ಳುವುದೇ ಗುರುವಿನ ಕೃಪೆಗೆ ಪಾತ್ರವಾಗುವ ಮೊದಲ ಹೆಜ್ಜೆ.
ನಾನು ಶುದ್ಧ, ನಿಸ್ವಾರ್ಥ ಪ್ರೀತಿ. ನೀನು ನನ್ನನ್ನು ಅರಿಯಬೇಕಾದರೆ, ನೀನು ನಾನಾಗಬೇಕು ಎನ್ನುವುದನ್ನು ಅರಿತುಕೊಂಡರೆ ಮಾತ್ರ ನೀವು ನನಗೆ ಯೋಗ್ಯ ಗುರುದಕ್ಷಿಣೆ ಕೊಟ್ಟಂತೆ.
ಗುರು ಸರ್ವವ್ಯಾಪಿ, ತನ್ನ ಶಿಷ್ಯರಿಗಾಗಿ ಸದಾ ಮಿಡಿಯುವವನು ಎಂದು ನಿರೂಪಿಸುವ ಅದ್ಭುತ ನಿದರ್ಶನ ಇದು.