ಒಮ್ಮೆ ನೀವು ಮನಸ್ಸನ್ನು ಗೆದ್ದು, ನಿಮ್ಮೊಳಗೆ ನೀವು ಆತ್ಮಸಂತೃಪ್ತಿಯನ್ನು ಅನುಭವಿಸಿದರೆ, ನಿಮ್ಮನ್ನು ರಂಜಿಸಲು ಯಾವುದೇ ಬಾಹ್ಯ ಸಾಧನಗಳ ಅಗತ್ಯವೇ ಇರುವುದಿಲ್ಲ. ಜನರು ತಮ್ಮ ಮನಸ್ಸಿನ ಮೇಲೆ ಪ್ರಭುತ್ವ ಸಾಧಿಸಲು ವಿಫಲರಾಗಿರುವುದರಿಂದಲೇ ಸತತವಾಗಿ ಇಂಟರ್ನೆಟ್ ಸಂಪರ್ಕದಲ್ಲಿರಬೇಕೆಂದು ಬಯಸುತ್ತಾರೆ. ಅಂಥವರು ತಮ್ಮ ಇಂದ್ರಿಯಗಳಿಗೆ ಸಂಪೂರ್ಣ ದಾಸರಾಗಿರುತ್ತಾರೆ. ಫೋನ್ ಇಲ್ಲದೆ ಅವರನ್ನು ಒಂದು ಕೊಠಡಿಯೊಳಗೆ ಒಂಟಿಯಾಗಿ ಬಿಟ್ಟರೆ, ಚಡಪಡಿಸುತ್ತಾರೆ ಹಾಗೂ ಕೆಲವೇ ಕ್ಷಣಗಳಲ್ಲಿ ಉಸಿರುಗಟ್ಟಿದಂತಾಗಿ ಹೊರಗೆ ಓಡಿಬರುತ್ತಾರೆ. ಏಕೆಂದರೆ, ಅವರು ಎಂದಿಗೂ ತಮಗೆ ತಾವೇ ಮುಖಾಮುಖಿಯಾಗಿಲ್ಲ, ತಮ್ಮೊಂದಿಗೆ ತಾವು ಒಂಟಿಯಾಗಿ ಸಮಯ ಕಳೆದಿಲ್ಲ, ತಮ್ಮ ಮನಸ್ಸಿನೊಂದಿಗೆ ಏಕಾಂತದಲ್ಲಿ ಮಾತನ್ನೇ ಆಡಿಲ್ಲ, ಒಳದನಿಯನ್ನು ಕೇಳಿಸಿಕೊಳ್ಳುವ ಪ್ರಯತ್ನವನ್ನೇ ಮಾಡಿಲ್ಲ. ತಮ್ಮಷ್ಟಕ್ಕೆ ತಾವು ಹೇಗೆ ತೃಪ್ತರಾಗಿರಬೇಕೆಂದು (ಆತ್ಮತೃಪ್ತಿ) ಅವರಿಗೆ ತಿಳಿದಿಲ್ಲ. ಇದು ದೊಡ್ಡ ಸವಾಲು ಮತ್ತು ಇದನ್ನು ಎದುರಿಸಿ ಗೆಲ್ಲಲು ಆರಂಭದಲ್ಲಿ ನೀವು ಮನಸ್ಸನ್ನು ಬಲವಂತವಾಗಿ ಒಳಗೆ ಸೆಳೆದುಕೊಳ್ಳಬೇಕಾಗುತ್ತದೆ. ಈ ಪ್ರಯತ್ನದಿಂದ ನೀವು ದೂರ ಉಳಿದರೆ, ಸಾಮಾಜಿಕ ಮಾಧ್ಯಮಗಳೆಂಬ ಮಾಯಾಜಾಲದಲ್ಲಿ ಮನಸ್ಸು ನಿಮ್ಮನ್ನು ಇನ್ನಷ್ಟು ಹೊರಗೆ ಎಳೆಯುತ್ತಲೇ ಇರುತ್ತದೆ.