ಭಗವಂತನ ನಾಮಸ್ಮರಣೆಯೇ ಭವಸಾಗರ ದಾಟಿಸುವ ಸಾಧನ

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on: 

(ಲೇಖಕರು ಜಾಗತಿಕ ಮಾನವತಾವಾದಿ ಹಾಗೂ ಆಧ್ಯಾತ್ಮಿಕ ಗುರುಗಳು)

ನಾರದ ಪುರಾಣದಲ್ಲಿ ಸ್ಪಷ್ಟವಾಗಿ ಹೇಳಿರುವಂತೆ, ‘ಕಲೌ ನಾಸ್ತಯ ನಾಸ್ತಯ ನಾಸ್ತಯ ಗತಿರನ್ಯಥಾ’. ಅಂದರೆ, ಈ ಕಲಿಯುಗದಲ್ಲಿ ಮುಕ್ತಿಯನ್ನು ಹೊಂದಲು ಹರಿನಾಮದ ಸ್ಮರಣೆಯೊಂದೇ ಉಪಾಯ. ಇದನ್ನು ಬಿಟ್ಟು ಬೇರೆ ದಾರಿಯಿಲ್ಲ. ಎಲ್ಲಿ ಭಗವಂತನ ನಾಮ ಇರುತ್ತದೆಯೋ, ಅಲ್ಲಿ ಭಗವಂತನ ರೂಪವು ಒಡಮೂಡುತ್ತದೆ. ನಾಮ ಮತ್ತು ರೂಪಗಳು ಒಂದೇ ನಾಣ್ಯದ ಎರಡು ಮುಖ. ಅವೆರಡನ್ನೂ ಬೇರ್ಪಡಿಸಲು ಸಾಧ್ಯವಿಲ್ಲ. ಈ ಅದ್ಭುತ ತತ್ವವನ್ನು ಮಹಾಭಾರತದ ಶ್ರೀಕೃಷ್ಣ ತುಲಾಭಾರದ ಪ್ರಸಂಗ ಅತ್ಯಂತ ಮಾರ್ವಿುಕವಾಗಿ ವಿವರಿಸುತ್ತದೆ. ಕೃಷ್ಣನ ಜನ್ಮದಿನದಂದು ಆತನ ಪತ್ನಿಯರಾದ ರುಕ್ಮಿಣಿ ಮತ್ತು ಸತ್ಯಭಾಮೆ ಒಂದು ನಿರ್ಧಾರ ಮಾಡುತ್ತಾರೆ. 

ಶ್ರೀಕೃಷ್ಣನ ದೇಹದ ತೂಕದಷ್ಟೇ ಬಂಗಾರವನ್ನು ತೂಗಿ, ಅದನ್ನು ದಾನ ನೀಡಬೇಕು ಎಂಬುದು ಅವರ ಸಂಕಲ್ಪವಾಗಿರುತ್ತದೆ. ತಕ್ಕಡಿ ತರಿಸಿ, ಅದರ ಒಂದು ಬದಿಯಲ್ಲಿ ಕೃಷ್ಣನನ್ನು ಕೂರಿಸುತ್ತಾರೆ. ಮತ್ತೊಂದು ಬದಿಯಲ್ಲಿ ತಮ್ಮ ಬಳಿ ಇದ್ದ ಬಂಗಾರವನ್ನು ಹಾಕಲು ಪ್ರಾರಂಭಿಸುತ್ತಾರೆ. ಶ್ರೀಕೃಷ್ಣನು ಶಾಂತನಾಗಿ, ಮೌನವಾಗಿ ಆಸೀನನಾಗಿರುತ್ತಾನೆ. ತಕ್ಕಡಿಯ ಒಂದು ತಟ್ಟೆಯಲ್ಲಿ ಎಷ್ಟೇ ರಾಶಿ ಬಂಗಾರವನ್ನು ಸುರಿದರೂ, ಕೃಷ್ಣನಿದ್ದ ತಕ್ಕಡಿಯ ಭಾಗವು ಮೇಲಕ್ಕೆ ಏರಲೇ ಇಲ್ಲ. ತಕ್ಕಡಿಯ ಸೂಜಿಯು ಸ್ವಲ್ಪವೂ ಕದಲದೆ ಸ್ಥಿರವಾಗಿಯೇ ಉಳಿಯಿತು. ಇದನ್ನು ಕಂಡ ಇಬ್ಬರೂ ರಾಣಿಯರು ದಿಗ್ಭ್ರಮೆಗೊಳಗಾದರು. ತಮ್ಮ ಅರಮನೆಯಲ್ಲಿದ್ದ ಸಮಸ್ತ ಚಿನ್ನಾಭರಣಗಳನ್ನು ತಂದು ಹಾಕಿದರೂ ತಕ್ಕಡಿಯು ಒಂದಿನಿತೂ ಚಲಿಸಲಿಲ್ಲ. 

ಈ ವಿದ್ಯಮಾನವನ್ನು ನೋಡುತ್ತಾ ಶ್ರೀಕೃಷ್ಣನು ತುಂಟ ನಗೆಯನ್ನು ಬೀರುತ್ತಾ ಕುಳಿತಿದ್ದನು. ಆಗ ರುಕ್ಮಿಣಿಗೆ, ಅನಂತನಾದ ಪರಮಾತ್ಮನನ್ನು ಕೇವಲ ಭೌತಿಕವಾದ ಬಂಗಾರದ ತೂಕಕ್ಕೆ ಸಮೀಕರಿಸಲು ಯತ್ನಿಸಿದ ಅಹಂಕಾರದ ಅರಿವಾಗುತ್ತದೆ. ಇದೇ ಸಂದರ್ಭದಲ್ಲಿ ಅಲ್ಲಿಗೆ ಆಗಮಿಸಿದ ನಾರದ ಮಹರ್ಷಿಗಳು ಅವರ ಕಷ್ಟವನ್ನು ನೋಡಿ, ದಾರಿಯನ್ನು ತೋರುತ್ತಾರೆ. ಶ್ರೀಕೃಷ್ಣನಿಗೆ ಈ ಜಗತ್ತಿನಲ್ಲಿ ಬೇರೆ ಯಾರೂ, ಯಾವುದೂ ಸಮನಾಗಲಾರದು ಎಂದು ತಿಳಿಸುತ್ತಾರೆ. ಆಗ ರುಕ್ಮಿಣಿ ಮತ್ತು ಸತ್ಯಭಾಮೆ, ಹಾಗಾದರೆ ನಾವೆಲ್ಲಿಂದ ಇನ್ನೊಬ್ಬ ಕೃಷ್ಣನನ್ನು ಹುಡುಕಿ ತರಲು ಸಾಧ್ಯ ಎಂದು ಕೇಳುತ್ತಾರೆ. ಅದಕ್ಕೆ ಉತ್ತರಿಸುವ ಕೃಷ್ಣನು, ಭಗವಂತನ ನಾಮವೇ ಆತನ ರೂಪಕ್ಕೆ ಸಮನಾಗಿರುತ್ತದೆ ಎಂಬ ಪರಮಸತ್ಯವನ್ನು ಬಿಚ್ಚಿಡುತ್ತಾನೆ. ಆ ತಕ್ಷಣ ರುಕ್ಮಿಣಿಯು ಅತ್ಯಂತ ಭಕ್ತಿಭಾವದಿಂದ ಒಂದು ತುಳಸೀದಳವನ್ನು ತೆಗೆದುಕೊಂಡು ತನ್ನ ಕೂದಲಿನ ಸಿಕ್ಕಿಯಿಂದ (ಹೇರ್​ಪಿನ್) ಅದರ ಮೇಲೆ ಶ್ರೀಕೃಷ್ಣ ಎಂದು ಬರೆಯುತ್ತಾಳೆ.

ಅತ್ಯಂತ ಪೂಜ್ಯಭಾವನೆಯಿಂದ, ಸಂಪೂರ್ಣ ಶರಣಾಗತಿಯಿಂದ ಆ ತುಳಸೀದಳವನ್ನು ತಕ್ಕಡಿಯ ಇನ್ನೊಂದು ಬದಿಗೆ ಇಡುತ್ತಾಳೆ. ಆಶ್ಚರ್ಯವೆಂಬಂತೆ, ಆ ಕ್ಷಣವೇ ತಕ್ಕಡಿಯ ಎರಡೂ ಬದಿಗಳು ಸಮನಾಗಿ ತೂಗುತ್ತವೆ. ಅಪಾರ ಬಂಗಾರಕ್ಕೆ ತೂಗದೆ ಇದ್ದ ಭಗವಂತ, ಭಕ್ತಿಯ ಒಂದು ಸಣ್ಣ ನಾಮಕ್ಕೆ ಒಲಿಯುತ್ತಾನೆ. ಭಗವಂತನ ನಾಮವು ಆತನ ರೂಪಕ್ಕೆ, ಅಸ್ತಿತ್ವಕ್ಕೆ ಸಮ ಎನ್ನುವುದೇ ಈ ಕಥೆಯ ನೀತಿ. ನಾಮಸ್ಮರಣೆಗೆ ಇರುವ ಅಗಾಧ ಶಕ್ತಿಯನ್ನು ಇದು ತಿಳಿಸಿಕೊಡುತ್ತದೆ. ಶ್ರೀಮನ್ನಾರಾಯಣನು ಸ್ವತಃ ನಾರದರಿಗೆ ಹೇಳಿರುವ ಒಂದು ಪ್ರಸಿದ್ಧ ಶ್ಲೋಕವಿದೆ. ‘ಮದ್ಭಕ್ತಾ ಯತ್ರ ಗಾಯಂತಿ ತತ್ರ ತಿಷ್ಠಾಮಿ ನಾರದ’ ಅಂದರೆ, ನಾನು ಕೇವಲ ವೈಕುಂಠದಲ್ಲಿ ವಾಸಿಸುವುದಿಲ್ಲ, ತಪಸ್ವಿಗಳಾದ ಯೋಗಿಗಳ ಹೃದಯಗಳಲ್ಲಿಯೂ ವಾಸಿಸುವುದಿಲ್ಲ. 

ಬದಲಾಗಿ, ನನ್ನ ಭಕ್ತರು ಎಲ್ಲಿ ಒಗ್ಗೂಡಿ ನನ್ನ ನಾಮ ಸ್ಮರಿಸುತ್ತಾರೋ, ನಾನು ಅಲ್ಲಿಯೇ ಸದಾಕಾಲ ಇರುತ್ತೇನೆ. ಏಕಾಗ್ರತೆಯಿಂದ, ಭಕ್ತಿಯಿಂದ ಭಗವಂತನ ನಾಮಸ್ಮರಣೆ ಮಾಡಿದಾಗ, ಆತನು ನಿಮ್ಮ ಪಕ್ಕದಲ್ಲಿಯೇ ಬಂದು ನಿಲ್ಲುತ್ತಾನೆ. ಏಕೆಂದರೆ, ನಾಮ ಮತ್ತು ರೂಪಗಳು ಸದಾ ಜತೆಯಾಗಿಯೇ ಇರುತ್ತವೆ. ನಮ್ಮ ಸಂಸ್ಕೃತಿಯಲ್ಲಿ ಓಂ ಎಂಬ ಬೀಜಾಕ್ಷರವನ್ನು ಪೂಜಿಸುತ್ತೇವೆ. ಓಂಕಾರವೇ ಬ್ರಹ್ಮನ ಸ್ವರೂಪ. ಪ್ರತಿಯೊಂದು ಪವಿತ್ರ ಮಂತ್ರ ಅಥವಾ ಪ್ರಾರ್ಥನೆಯು ‘ಓಂ’ಕಾರದಿಂದಲೇ ಪ್ರಾರಂಭವಾಗುತ್ತದೆ. ಏಕೆಂದರೆ, ಭಗವಂತನು ಈ ಸೃಷ್ಟಿಯ ಅಡಿಪಾಯವಾದ ಶಬ್ದದ ಮೂಲಕವೇ ಮೊದಲು ಪ್ರಕಟಗೊಂಡಿದ್ದಾನೆ. ಶುದ್ಧ, ಧನಾತ್ಮಕ ದೈವಿಕ ಶಬ್ದಗಳು ಮನುಷ್ಯನ ಮನಸ್ಸನ್ನು ಮತ್ತು ಈ ಇಡೀ ಸೃಷ್ಟಿಯನ್ನು ಉನ್ನತೀಕರಿಸುತ್ತವೆ. ಭಗವಂತನ ಅತ್ಯಂತ ಸುಂದರವಾದ ಅಭಿವ್ಯಕ್ತಿಯೇ ಆತನ ನಾಮ.

ಶಿವನು ಪಾರ್ವತಿಗೆ ‘ಶ್ರೀರಾಮ ರಾಮೇತಿ ರಮೇ ರಾಮೇ ಮನೋರಮೆ’ ಎಂದು ವಿವರಿಸುತ್ತಾ, ಭಗವಂತನ ಒಂದು ರಾಮನಾಮವು ಸಾವಿರ ಉಳಿದ ದೈವಿಕ ನಾಮಗಳನ್ನು ಸ್ಮರಿಸಿದ ಪುಣ್ಯಕ್ಕೆ ಸಮ ಎಂದು ಹೇಳುತ್ತಾನೆ. ರಾಮನಾಮವನ್ನು ಕೇವಲ ಒಂದು ಸಲ ಭಕ್ತಿಯಿಂದ ಜಪಿಸಿದರೂ, ಅದು ಮನಸ್ಸಿಗೆ ಅಪಾರವಾದ ಶಾಂತಿ, ಆನಂದವನ್ನು ನೀಡುತ್ತದೆ. ಇದೇ ಭಗವಂತನ ನಾಮದ ಅಸೀಮ ಮಹಿಮೆ. ಕಾಡಿನಲ್ಲಿ ದಾರಿಹೋಕರನ್ನು ಸುಲಿಗೆ ಮಾಡುತ್ತಿದ್ದ ದರೋಡೆಕೋರ ರತ್ನಾಕರನು, ರಾಮನಾಮ ಜಪಿಸಲು ಆರಂಭಿಸಿದ್ದರಿಂದಲೇ ಪವಿತ್ರನಾದನು. ಮಹಾನ್ ಜ್ಞಾನಿಯಾಗಿ, ಆದಿಕವಿ ವಾಲ್ಮೀಕಿಯಾಗಿ ಜಗತ್ತಿಗೆ ರಾಮಾಯಣವನ್ನು ನೀಡಿದನು. ಅಷ್ಟೇ ಅಲ್ಲ, ಕೊನೆಗೆ ಸಾಕ್ಷಾತ್​ಶ್ರೀರಾಮನಲ್ಲಿಯೇ ಒಂದಾದನು. ನಾಮಸ್ಮರಣೆ ಎಂತಹ ಪಾಪಿಯನ್ನಾದರೂ ಧನ್ಯನನ್ನಾಗಿಸುವ, ಪವಿತ್ರಗೊಳಿಸುವ ಶಕ್ತಿಯನ್ನು ಹೊಂದಿದೆ.

ಆದರೆ, ಭಗವಂತನ ನಾಮವನ್ನು ಸ್ಮರಿಸುವ ಅಭ್ಯಾಸವು ಮನುಷ್ಯನಿಗೆ ಅಷ್ಟು ಸುಲಭವಾಗಿ ಒಲಿಯುವುದಿಲ್ಲ. ಕಷ್ಟ ಬಂದಾಗಲಷ್ಟೇ ದೇವರನ್ನು ನೆನಪಿಸಿಕೊಳ್ಳುವ ರೂಢಿ ನಮ್ಮೆಲ್ಲರಲ್ಲಿದೆ. ಈ ಕುರಿತಂತೆ ಒಂದು ಸ್ವಾರಸ್ಯಕರವಾದ ಕಥೆಯಿದೆ. ಒಂದು ರಾತ್ರಿ ಓರ್ವ ಕಳ್ಳನು ದರೋಡೆ ಮಾಡಲು ಮನೆಯೊಂದಕ್ಕೆ ನುಗ್ಗುತ್ತಾನೆ. ಅದನ್ನು ಕೈಲಾಸದಲ್ಲಿದ್ದ ಶಿವ, ಪಾರ್ವತಿ ಗಮನಿಸುತ್ತಾರೆ. ಆತನು ಒಂದು ವೇಳೆ ಸಿಕ್ಕಿಬಿದ್ದು ಪೆಟ್ಟು ತಿಂದರೆ, ಆ ನೋವಿನಲ್ಲಿ ಅವನು ಯಾರ ಹೆಸರನ್ನು ಕರೆಯುತ್ತಾನೆಂದು ನೋಡೋಣ ಎಂದು ಆ ದೇವದಂಪತಿಗಳು ನಿರ್ಧರಿಸುತ್ತಾರೆ. ಒಂದು ವೇಳೆ ಅವನು ಅಪ್ಪಾ ಎಂದು ಕೂಗಿದರೆ, ನಾನು ಹೋಗಿ ಅವನನ್ನು ರಕ್ಷಿಸುವೆ. ಒಂದು ವೇಳೆ ಅವನು ಅಮ್ಮಾ ಎಂದು ಕೂಗಿದರೆ, ನೀನು ಹೋಗಿ ರಕ್ಷಿಸು ಎಂದು ಶಿವನು ಪಾರ್ವತಿಗೆ ಹೇಳಿ ಒಪ್ಪಂದ ಮಾಡಿಕೊಳ್ಳುತ್ತಾನೆ. ಮುಂದೇನಾಗುವುದೋ ಎಂದು ನೋಡಲು ಇಬ್ಬರೂ ಕುತೂಹಲದಿಂದ ಕಾದು ಕುಳಿತುಕೊಳ್ಳುತ್ತಾರೆ.

ಆ ಕಳ್ಳನು ಮನೆಯವರ ಕೈಗೆ ಸಿಕ್ಕಿಬೀಳುತ್ತಾನೆ. ಜನರು ಅವನಿಗೆ ಮನಸೋಇಚ್ಛೆ ಥಳಿಸುತ್ತಾರೆ. ಕಳ್ಳನು ಆ ನೋವಿನಲ್ಲಿ ಅಮ್ಮಾ ಎಂದೂ ಕರೆಯುವುದಿಲ್ಲ, ಅಪ್ಪಾ ಎಂದೂ ಕರೆಯುವುದಿಲ್ಲ. ಬದಲಾಗಿ, ಅಯ್ಯೋ ಅಯ್ಯೋ ಎಂದು ಚೀರುತ್ತಾನೆ. ಅವನ ರಕ್ಷಣೆಗೆ ಯಾರೂ ಬರುವುದಿಲ್ಲ. ಇದರ ಹಿಂದಿನ ಮರ್ಮವೇನೆಂದರೆ, ಚಿಕ್ಕವಯಸ್ಸಿನಿಂದಲೇ ಭಗವಂತನ ಹೆಸರನ್ನು ಜಪಿಸುವುದನ್ನು ನಮ್ಮ ದೈನಂದಿನ ಜೀವನದಲ್ಲಿ ರೂಢಿಸಿಕೊಳ್ಳದಿದ್ದರೆ, ಕಷ್ಟಕಾಲ ಬಂದಾಗ ಒಮ್ಮಿಂದೊಮ್ಮೆಲೆ ಆತನ ಹೆಸರು ನಮ್ಮ ಬಾಯಿಗೆ ಬರುವುದಿಲ್ಲ. ಸದಾಕಾಲ ಆತನ ಹೆಸರನ್ನು ನೆನಪಿಸಿಕೊಳ್ಳುವ ಅಭ್ಯಾಸವಿದ್ದರಷ್ಟೇ, ನಮ್ಮ ಸಂಕಟದ ಸಮಯದಲ್ಲಿ ಆ ದೈವಿಕ ನಾಮವು ಸಹಜವಾಗಿ ನಮ್ಮ ನೆರವಿಗೆ ಒದಗಿಬರುತ್ತದೆ.

ಹದಿನೈದನೇ ಶತಮಾನದ ಶ್ರೇಷ್ಠ ಸಂತಕವಿ ಕಬೀರದಾಸರು ಇದೇ ವಿಚಾರವನ್ನು ಕುರಿತು, ದುಃಖ ಮೇ ಸುಮಿರನ ಸಬ ಕರೆ, ಸುಖ ಮೇ ಕರೆ ನಾ ಕೋಯಿ’ ಎಂದು ಹಾಡಿದ್ದಾರೆ. ಅಂದರೆ, ದುಃಖದ ಸಮಯದಲ್ಲಿ ಮಾತ್ರ ಎಲ್ಲರೂ ದೇವರನ್ನು ನೆನೆಯುತ್ತಾರೆ, ಆದರೆ ಸುಖವಿರುವಾಗ ಯಾರೊಬ್ಬರೂ ಆತನನ್ನು ನೆನಪಿಸಿಕೊಳ್ಳುವುದಿಲ್ಲ. ಸುಖದ ಸಮಯದಲ್ಲಿಯೂ ನಾವು ದೇವರನ್ನು ಭಕ್ತಿಯಿಂದ ನೆನೆಸಿದರೆ, ನಮ್ಮ ಜೀವನದಲ್ಲಿ ದುಃಖವು ಏಕೆ ತಾನೇ ಬರುತ್ತದೆ? ಎನ್ನುವುದು ಅವರ ಪ್ರಶ್ನೆಯಾಗಿದೆ. ಮಹಾಭಾರತದಲ್ಲಿ ದ್ರೌಪದಿಯ ವಸ್ತ್ರಾಪಹರಣದ ಪ್ರಸಂಗವು ಇದನ್ನೇ ಸಾಬೀತುಪಡಿಸುತ್ತದೆ. ದುಶ್ಯಾಸನನು ಅವಳನ್ನು ಎಳೆದು ತಂದಾಗ, ಪ್ರಾರಂಭದಲ್ಲಿ ದ್ರೌಪದಿಯು ತನ್ನ ಸ್ವಂತ ಬಲದಿಂದ ತನ್ನನ್ನು ತಾನೇ ರಕ್ಷಿಸಿಕೊಳ್ಳಲು ಯತ್ನಿಸುತ್ತಾಳೆ. ಆ ಪ್ರಯತ್ನ ವಿಫಲವಾದಾಗ, ಮಹಾವೀರರಾಗಿದ್ದ ತನ್ನ ಗಂಡಂದಿರಾದ ಪಾಂಡವರನ್ನು, ಕುರುವಂಶದ ಹಿರಿಯರಾದ ಭೀಷ್ಮ ದ್ರೋಣರ ನೆರವನ್ನು ಕೋರುತ್ತಾಳೆ. ಯಾರೊಬ್ಬರೂ ಅವಳ ನೆರವಿಗೆ ಧಾವಿಸುವುದಿಲ್ಲ. ಅಂತಿಮವಾಗಿ, ಸಂಪೂರ್ಣ ಅಸಹಾಯಕಳಾಗಿ, ಅಹಂಕಾರವನ್ನು ತೊರೆದು ಅವಳು ಕೃಷ್ಣಾ, ಗೋವಿಂದಾ ಎಂದು ಕೂಗುತ್ತಾಳೆ. ಆ ಕ್ಷಣವೇ ಶ್ರೀಕೃಷ್ಣನು ಅವಳ ಮಾನರಕ್ಷಣೆಗೆ ಓಡಿಬರುತ್ತಾನೆ.

ಹಾಗೆಯೇ, ತನ್ನ ಎಲ್ಲಾ ಶಕ್ತಿಯನ್ನೂ ಕಳೆದುಕೊಂಡು ಮರಣಶಯ್ಯೆಯಲ್ಲಿದ್ದ ಗಜೇಂದ್ರನು ಆಕ್ರಂದನದಿಂದ ಬೇಡಿಕೊಂಡಾಗ ಭಗವಂತನು ಗರುಡವಾಹನನಾಗಿ ಓಡಿಬರಲಿಲ್ಲವೇ? ಭಕ್ತ ಪ್ರಹ್ಲಾದನ ರಕ್ಷಣೆಗಾಗಿ ಉರಿಯುವ ಕಂಬವನ್ನೂ ಸೀಳಿಕೊಂಡು ಆತನು ಉದ್ಭವಿಸಲಿಲ್ಲವೇ? ನಮ್ಮ ಜೀವನದಲ್ಲಿ ನಾವು ಭಗವಂತನನ್ನು ಮೊದಲು ನೆನಪಿಸಿಕೊಳ್ಳಬೇಕು, ಉಳಿದವರನ್ನು ನಂತರ. ನೀವು ಎಲ್ಲಿಯೇ ಇರಲಿ, ಏನೇ ಮಾಡುತ್ತಿರಲಿ, ನಡೆಯುತ್ತಿರಲಿ, ಕೆಲಸ ಮಾಡುತ್ತಿರಲಿ, ನಿಮ್ಮ ಮನಸ್ಸಿನಲ್ಲಿಯೇ ದೇವರ ನಾಮವನ್ನು ಜಪಿಸುತ್ತಿರಿ. ಆ ನಾಮಸ್ಮರಣೆಯು ಒಂದು ಕವಚದಂತೆ ನಿಮ್ಮನ್ನು ಸದಾ ಕಾಯುತ್ತದೆ. ಭಗವಂತನು ಸದಾ ನಿಮ್ಮ ಅತ್ಯಂತ ಆತ್ಮೀಯ ಹಾಗೂ ಹತ್ತಿರದ ಬಂಧು. ನೀವು ಯಾವುದೇ ಭೌತಿಕ ಸೇವಾಕಾರ್ಯಗಳಲ್ಲಿ ಭಾಗವಹಿಸಲು ಅಸಾಧ್ಯವಾದರೆ, ಕನಿಷ್ಠಪಕ್ಷ ದೇವರ ನಾಮವನ್ನಾದರೂ ನಿರಂತರವಾಗಿ ಜಪಿಸುತ್ತಿರಬೇಕು.

ನಾಮಸ್ಮರಣೆಯಿಂದ ಉದ್ಭವಿಸುವ ಪರಿಶುದ್ಧವಾದ, ಧನಾತ್ಮಕ ಕಂಪನಗಳು ಇಡೀ ಜಗತ್ತನ್ನು ಗುಣಮುಖವಾಗಿಸಲು ಸಹಾಯ ಮಾಡುತ್ತವೆ. ಜಗತ್ತಿನ ಕಲ್ಯಾಣಕ್ಕಾಗಿ ನೀವು ನೀಡಬಹುದಾದ ಅತ್ಯಂತ ಶ್ರೇಷ್ಠವಾದ ನಿಸ್ವಾರ್ಥ ಸೇವೆ ಎಂದರೆ ಇದೇ ಆಗಿದೆ. ಭಗವಂತನ ನಾಮಸ್ಮರಣೆಯು ನಮ್ಮ ದೈನಂದಿನ ಉಸಿರಾಗಲಿ, ಆ ಮೂಲಕ ನಮ್ಮ ಅಂತರಂಗವೂ ಪರಿಶುದ್ಧವಾಗಲಿ, ಈ ಜಗತ್ತಿಗೂ ಒಳಿತಾಗಲಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net