

ಜಗತ್ತಿನ ಎಲ್ಲ ಓಟ, ಹುಡುಕಾಟಗಳ ನಡುವೆಯೂ ಮನುಷ್ಯನಿಗೆ ಬೇಕಿರುವುದು ನೆಮ್ಮದಿಯ ನೆಲೆ. ಸ್ವಾತಂತ್ರ್ಯವನ್ನು ಕಸಿಯದ, ನಿರೀಕ್ಷೆಗಳ ಬಂಧನಕ್ಕೆ ಸಿಲುಕಿಸದ, ಸದಾ ಪ್ರೀತಿಯಿಂದ ಸ್ವಾಗತಿಸುವ ಭಗವಂತನ ಸಾನ್ನಿಧ್ಯವೇ ನಿಜವಾದ ಮನೆ.
ನನ್ನನ್ನು ನಾನು ಪ್ರೀತಿಸುವ ಸಲುವಾಗಿ ನನ್ನಿಂದ ನಾನೇ ಬೇರ್ಪಟ್ಟೆ. ಈ ಭಾವವು ಸೃಷ್ಟಿಯ ಹಿಂದಿರುವ ಪ್ರೀತಿಯ ರಹಸ್ಯವನ್ನು ತೆರೆದಿಡುತ್ತದೆ. ಪ್ರೀತಿಯನ್ನು ಅನುಭವಿಸಲು, ಹಂಚಿಕೊಳ್ಳಲು ಮತ್ತು ಅದರ ಆನಂದವನ್ನು ಸವಿಯಲು ಸೃಷ್ಟಿ ಅಸ್ತಿತ್ವಕ್ಕೆ ಬಂದಿದೆ. ತಾಯಿ ಮಗುವಿಗೆ ಜನ್ಮ ನೀಡಿ, ಅದರ ಮೇಲೆ ಪ್ರೀತಿ ಸುರಿಸಿ, ಮಗುವಿನಿಂದಲೂ ಪ್ರೀತಿಯನ್ನು ಮರಳಿ ಪಡೆಯುತ್ತಾಳೆ. ಕೊಡುವುದರಲ್ಲಿಯೂ ಪಡೆಯುವುದರಲ್ಲಿಯೂ ಪ್ರೀತಿ ತನ್ನ ಪೂರ್ಣತೆಯನ್ನು ಕಂಡುಕೊಳ್ಳುತ್ತದೆ. ಸೃಷ್ಟಿಯೂ ಹೀಗೆಯೇ ಭಗವಂತನಿಂದ ಹೊರಹೊಮ್ಮಿ, ಅಂತಿಮವಾಗಿ ಆತನ ಪ್ರೀತಿಯಲ್ಲಿಯೇ ತನ್ನ ಪೂರ್ಣತೆಯನ್ನು ಕಂಡುಕೊಳ್ಳುತ್ತದೆ.
ನಮ್ಮ ಬದುಕಿನಲ್ಲಿ ಅನೇಕ ಸಂಬಂಧಗಳಿವೆ. ಕುಟುಂಬ, ಸ್ನೇಹ, ಸಮಾಜ ಮತ್ತು ವೃತ್ತಿ ಬದುಕು ನಮ್ಮನ್ನು ಒಂದಕ್ಕೊಂದು ಬೆಸೆಯುತ್ತವೆ. ಈ ಸಂಬಂಧಗಳೆಲ್ಲವೂ ನಮ್ಮ ಜೀವನದ ಭಾಗವೇ. ಆದರೆ ಇವುಗಳ ನಡುವೆ ನಾವು ಮರೆಯಬಾರದ ಒಂದು ಸತ್ಯವಿದೆ. ಜೀವನದಲ್ಲಿ ಅನೇಕ ಸಂಗತಿಗಳು ವಿಫಲವಾಗಬಹುದು; ನಮ್ಮ ನಿರೀಕ್ಷೆಗಳು ಹುಸಿಯಾಗಬಹುದು; ನಾವು ಪ್ರೀತಿಸುವವರಿಂದಲೂ ನಿರಾಶೆ ಎದುರಾಗಬಹುದು. ಆದರೆ ನಿಷ್ಕಲ್ಮಷ ಪ್ರೀತಿಯ ಮೌಲ್ಯ ಎಂದಿಗೂ ಕಡಿಮೆಯಾಗುವುದಿಲ್ಲ. ಹೃದಯದಲ್ಲಿ ಭಗವಂತನ ಪ್ರೀತಿಯನ್ನು ಬೆಳೆಸಿಕೊಂಡಾಗ, ಬದುಕಿನ ಏರಿಳಿತಗಳನ್ನು ಎದುರಿಸುವ ಶಕ್ತಿ ನಮಗೆ ದೊರೆಯುತ್ತದೆ.
ಮನೆ ಎಂದರೆ ಕೇವಲ ಕಟ್ಟಡವಲ್ಲ: ನಾನು ಜಗತ್ತಿನ ವಿವಿಧ ದೇಶಗಳಲ್ಲಿ, ನಗರಗಳಲ್ಲಿ ಮತ್ತು ಮನೆಗಳಲ್ಲಿ ಅನೇಕ ಜನರನ್ನು ಭೇಟಿಯಾಗಿದ್ದೇನೆ. ಅವರಲ್ಲಿ ಹಲವರು ಮತ್ತೆ ಒಂದೇ ಕಡೆ ಸೇರಿ, ತಮ್ಮ ಮನೆಗೆ ಮರಳಿದವರಂತೆ ಸಂತೋಷದಿಂದ ಇರುವುದನ್ನು ನೋಡುವಾಗ, ಅದನ್ನು ನಿಜವಾದ ಹೋಮ್ಮಿಂಗ್ ಎಂದು ಭಾವಿಸುತ್ತೇನೆ.
ಭೂಮಿಯ ಮೇಲಿನ ಅತ್ಯಂತ ಶ್ರೇಷ್ಠ ಜಾಗ ಯಾವುದು? ಅದು ನಮ್ಮ ಮನೆ. ನಾವು ಎಷ್ಟೇ ಐಷಾರಾಮಿ ಹೋಟೆಲ್ಗಳಲ್ಲಿ ತಂಗಬಹುದು, ಜಗತ್ತಿನಾದ್ಯಂತ ಪ್ರಯಾಣಿಸ ಬಹುದು, ಅನೇಕ ಸೌಕರ್ಯಗಳನ್ನು ಅನುಭವಿಸಬಹುದು. ಆದರೆ ನಮ್ಮ ಮನೆಗೆ ಮರಳಿದಾಗ ದೊರೆಯುವ ನೆಮ್ಮದಿಯೇ ಬೇರೆ. ಮನೆಯ ಶ್ರೇಷ್ಠತೆ ಅದರ ಗಾತ್ರದಲ್ಲಿಲ್ಲ; ಅಲ್ಲಿ ದೊರೆಯುವ ಪ್ರೀತಿ, ಆತ್ಮೀಯತೆ ಮತ್ತು ವಿಶ್ರಾಂತಿಯಲ್ಲಿದೆ.
ಇದೇ ಸತ್ಯವನ್ನು ಭಗವಂತನ ಸಾನ್ನಿಧ್ಯಕ್ಕೂ ಅನ್ವಯಿಸಬಹುದು. ಮನುಷ್ಯ ಜಗತ್ತಿನಲ್ಲಿ ಅನೇಕ ಸಂಗತಿಗಳ ಹಿಂದೆ ಓಡುತ್ತಾನೆ. ಸಂಪತ್ತು ಗಳಿಸುತ್ತಾನೆ, ಸಾಧನೆ ಮಾಡುತ್ತಾನೆ, ಕೀರ್ತಿಯನ್ನು ಬಯಸುತ್ತಾನೆ. ಆದರೆ ಇವೆಲ್ಲದರ ನಡುವೆ ತನ್ನ ಮನಸ್ಸಿಗೆ ನೆಮ್ಮದಿ ನೀಡುವ ಆಶ್ರಯವೊಂದನ್ನು ಹುಡುಕುತ್ತಲೇ ಇರುತ್ತಾನೆ. ಭಗವಂತ ನೊಂದಿಗಿನ ಸಂಬಂಧವು ಅಂತಹ ಆಶ್ರಯವಾಗಿದೆ. ಜಗತ್ತಿನ ಎಲ್ಲ ಅನುಭವಗಳ ನಡುವೆಯೂ ನಮ್ಮೊಳಗಿನ ಶಾಂತಿಯನ್ನು ಉಳಿಸಿಕೊಳ್ಳಲು ಅದು ನೆರವಾಗುತ್ತದೆ.
ಹಕ್ಕಿಯ ಗೂಡಿನಂತಿರಲಿ ಪ್ರೀತಿ: ಒಮ್ಮೆ ಯಾರೋ ನನ್ನನ್ನು, ‘ಸ್ವಾಮಿ, ನೀವು ಎಲ್ಲರನ್ನೂ ಇಷ್ಟೊಂದು ನಿಸ್ವಾರ್ಥವಾಗಿ ಹೇಗೆ ಪ್ರೀತಿಸುತ್ತೀರಿ? ನಿಮ್ಮ ಪ್ರೀತಿಗೆ ಪ್ರತಿಯಾಗಿ ಏನನ್ನೂ ಏಕೆ ನಿರೀಕ್ಷಿಸುವುದಿಲ್ಲ?’ ಎಂದು ಕೇಳಿದರು. ಆಗ ನಾನು, ‘ಹಕ್ಕಿಯೊಂದು ಆಕಾಶದಲ್ಲಿ ಎಷ್ಟು ಹೊತ್ತು ಹಾರಬಲ್ಲದು? ಎಷ್ಟೇ ದೂರ ಹಾರಿದರೂ ವಿಶ್ರಾಂತಿ ಗಾಗಿ ತನ್ನ ಗೂಡಿಗೆ ಮರಳಲೇಬೇಕಲ್ಲವೇ?’ ಎಂದು ಕೇಳಿದೆ.
ಹಕ್ಕಿಯ ಗೂಡು ಅದನ್ನು ಬಂಧಿಸುವ ಸ್ಥಳವಲ್ಲ. ಅದು ಸ್ವತಂತ್ರವಾಗಿ ಹಾರಾಡಲು, ತನ್ನ ಅನುಭವಗಳನ್ನು ಪಡೆದುಕೊಳ್ಳಲು ಅವಕಾಶ ನೀಡುವ ಜಗತ್ತಿನ ನಡುವೆ, ವಿಶ್ರಾಂತಿಗಾಗಿ ಮರಳಬಹುದಾದ ಆಶ್ರಯ. ಹಕ್ಕಿ ಹೊರಗೆ ಹಾರಿದಾಗ ಅದರ ಗೂಡು ಅದನ್ನು ತಡೆಯುವುದಿಲ್ಲ. ಮರಳಿ ಬಂದಾಗಲೂ ಅದನ್ನು ತಿರಸ್ಕರಿಸುವುದಿಲ್ಲ. ಅದೇ ರೀತಿ ಭಗವಂತನ ಪ್ರೀತಿಯೂ ನಮ್ಮನ್ನು ಬಂಧಿಸುವುದಿಲ್ಲ; ಬದಲಿಗೆ ಸ್ವತಂತ್ರವಾಗಿ ಬದುಕಲು ಧೈರ್ಯ ನೀಡುತ್ತದೆ.
ಜಗತ್ತಿನ ಕೆಲವು ಸಂಬಂಧಗಳು ನಿರೀಕ್ಷೆ ಮತ್ತು ನಿಯಂತ್ರಣಗಳಿಂದ ಕೂಡಿರುತ್ತವೆ. ಪ್ರೀತಿಯ ಹೆಸರಿನಲ್ಲಿ ಇನ್ನೊಬ್ಬರ ಸ್ವಾತಂತ್ರ್ಯವನ್ನು ಕಸಿದುಕೊಳ್ಳುವಾಗ, ಆ ಸಂಬಂಧವೇ ಬಂಧನವಾಗುತ್ತದೆ. ನಿಜವಾದ ಪ್ರೀತಿ ಎಂದರೆ ಮತ್ತೊಬ್ಬರನ್ನು ನಮ್ಮ ಇಚ್ಛೆಯಂತೆ ರೂಪಿಸುವುದಲ್ಲ; ಅವರು ತಮ್ಮ ನೈಜ ಸ್ವಭಾವದಲ್ಲಿ ಬೆಳೆಯಲು ಅವಕಾಶ ನೀಡುವುದು. ತಪ್ಪು ಮಾಡಿದಾಗ ತಿದ್ದಿಕೊಳ್ಳಲು ನೆರವಾಗುವುದು, ಸಂಕಷ್ಟದಲ್ಲಿದ್ದಾಗ ಬೆಂಬಲ ನೀಡುವುದು ಮತ್ತು ಮರಳಿ ಬಂದಾಗ ಪ್ರೀತಿಯಿಂದ ಸ್ವಾಗತಿಸುವುದೇ ಪ್ರೀತಿಯ ನಿಜವಾದ ಲಕ್ಷಣ.
ಭಗವಂತನೊಂದಿಗಿನ ಸಂಬಂಧವು ಇಂತಹ ಸ್ವಾತಂತ್ರ್ಯ ಮತ್ತು ಪ್ರೀತಿಯನ್ನು ನೀಡುತ್ತದೆ. ಜಗತ್ತಿನಲ್ಲಿ ಎಲ್ಲೆಡೆ ಸಂಚರಿಸಿ, ಅನೇಕ ಅನುಭವಗಳನ್ನು ಪಡೆದು, ನಮ್ಮ ಕರ್ತವ್ಯಗಳನ್ನು ನಿರ್ವಹಿಸಿದರೂ, ಮನಸ್ಸಿಗೆ ವಿಶ್ರಾಂತಿ ಬೇಕಾದಾಗ ಭಗವಂತನ ಆಶ್ರಯಕ್ಕೆ ಮರಳಬಹುದು. ಆತ ಸದಾ ನಮ್ಮನ್ನು ಸ್ವೀಕರಿಸಲು ಸಿದ್ಧನಿದ್ದಾನೆ.
ಎಲ್ಲ ನದಿಗಳೂ ಸಾಗರವನ್ನು ಸೇರುತ್ತವೆ: ನದಿಯೊಂದು ತನ್ನ ಪಯಣದಲ್ಲಿ ಅನೇಕ ತಿರುವುಗಳನ್ನು ಪಡೆಯುತ್ತದೆ. ಬೆಟ್ಟಗಳನ್ನು ದಾಟುತ್ತದೆ, ಕಾಡುಗಳ ಮೂಲಕ ಹರಿಯುತ್ತದೆ, ಬಯಲುಗಳಲ್ಲಿ ಸಾಗುತ್ತದೆ. ಅದರ ಹಾದಿ ನೇರವಾಗಿರಬಹುದು ಅಥವಾ ಅಂಕುಡೊಂಕಾಗಿರಬಹುದು. ಆದರೆ ಅಂತಿಮವಾಗಿ ಅದು ಸಾಗರವನ್ನು ಸೇರುತ್ತದೆ. ಸಾಗರ ಸೇರುವುದೇ ಅದರ ಪಯಣದ ಪೂರ್ಣತೆ.
ಮನುಷ್ಯನ ಬದುಕೂ ಹೀಗೆಯೇ. ಪ್ರತಿಯೊಬ್ಬರೂ ತಮ್ಮದೇ ಆದ ದಾರಿಯಲ್ಲಿ ಸಂತೋಷವನ್ನು ಹುಡುಕುತ್ತಾರೆ. ಕೆಲವರು ಸಂಪತ್ತಿನಲ್ಲಿ, ಇನ್ನು ಕೆಲವರು ಅಧಿಕಾರ ಮತ್ತು ಕೀರ್ತಿಯಲ್ಲಿ, ಮತ್ತಿತರರು ಸಾಧನೆಗಳಲ್ಲಿ ಸಂತೃಪ್ತಿಯನ್ನು ಕಾಣಲು ಪ್ರಯತ್ನಿಸುತ್ತಾರೆ. ಈ ಅನುಭವಗಳೆಲ್ಲವೂ ಬದುಕಿನ ಭಾಗ. ಆದರೆ ಅವುಗಳಿಂದ ಮಾತ್ರ ಶಾಶ್ವತವಾದ ಆಂತರಿಕ ಶಾಂತಿ ದೊರೆಯುವುದಿಲ್ಲ. ಮನಸ್ಸು ಅಂತಿಮವಾಗಿ ಹುಡುಕುವುದು ಪ್ರೀತಿ, ನೆಮ್ಮದಿ ಮತ್ತು ಪೂರ್ಣತೆಯನ್ನೇ.
‘ನಾನ್ಯಃ ಪಂಥಾ ವಿದ್ಯತೇ ಅಯನಾಯ’ ಎಂಬ ವೇದವಾಕ್ಯವು ಪರಮ ಗುರಿಯನ್ನು ತಲುಪುವ ಸತ್ಯದತ್ತ ನಮ್ಮ ಗಮನ ಸೆಳೆಯುತ್ತದೆ. ನಮ್ಮ ಬದುಕಿನ ಪಯಣ ಎಷ್ಟೇ ವಿಭಿನ್ನವಾಗಿದ್ದರೂ, ಭಗವಂತನ ಪ್ರೀತಿಯಲ್ಲಿ ಶಾಂತಿಯನ್ನು ಕಂಡುಕೊಳ್ಳುವುದೇ ಆಧ್ಯಾತ್ಮಿಕ ಬದುಕಿನ ಸಾರ.
ಕಷ್ಟದ ಪಯಣವೂ ಆನಂದದ ಭಾಗ: ದೂರದ ದೇಶಗಳಿಂದ ನನ್ನನ್ನು ಭೇಟಿಯಾಗಲು ಬರುವವರು ಪ್ರಯಾಣದಲ್ಲಿ ಅನೇಕ ತೊಂದರೆಗಳನ್ನು ಅನುಭವಿಸಿರುತ್ತಾರೆ. ಅವರ ಶ್ರಮ ಮತ್ತು ತ್ಯಾಗದ ಅರಿವು ನನಗಿದೆ. ಪ್ರಯಾಣದ ಅವಧಿ ಹೆಚ್ಚಾದಷ್ಟೂ ಗುರಿಯನ್ನು ತಲುಪಿದಾಗ ದೊರೆಯುವ ಸಂತೋಷವೂ ಹೆಚ್ಚಾಗುತ್ತದೆ. ಸುಲಭವಾಗಿ ದೊರೆತದ್ದಕ್ಕಿಂತ ಶ್ರಮಪಟ್ಟು ಗಳಿಸಿದ ಅನುಭವ ನಮಗೆ ಹೆಚ್ಚಿನ ತೃಪ್ತಿಯನ್ನು ನೀಡುತ್ತದೆ.
ಹಿಂದಿನ ಕಾಲದಲ್ಲಿ ದೇವಾಲಯಗಳನ್ನು ಬೆಟ್ಟಗಳ ತುದಿಯಲ್ಲಿ, ಕಾಡುಗಳಲ್ಲಿ ಅಥವಾ ಊರುಗಳಿಂದ ದೂರದಲ್ಲಿ ನಿರ್ವಿುಸಲಾಗುತ್ತಿತ್ತು. ಭಕ್ತರು ಬಹುದೂರ ನಡೆದು ದೇವಾಲಯಗಳನ್ನು ತಲುಪುತ್ತಿದ್ದರು. ಆ ಪಯಣದ ಉದ್ದಕ್ಕೂ ದೇವರ ನಾಮಸ್ಮರಣೆ ಮಾಡುತ್ತಿದ್ದರು. ಗರ್ಭಗುಡಿಯನ್ನು ತಲುಪಿದಾಗ ಅವರಿಗೆ ದೊರೆಯುತ್ತಿದ್ದ ಆನಂದವನ್ನು ಮಾತಿನಲ್ಲಿ ವರ್ಣಿಸುವುದು ಕಷ್ಟ. ಪ್ರಯಾಣದ ಕಷ್ಟವೇ ಆ ಅನುಭವದ ಮೌಲ್ಯವನ್ನು ಹೆಚ್ಚಿಸುತ್ತಿತ್ತು.
ಬದುಕಿನಲ್ಲಿಯೂ ಕಷ್ಟಗಳು ನಮ್ಮನ್ನು ಗುರಿಯಿಂದ ದೂರ ಸರಿಸಲು ಬಿಡಬಾರದು. ಅವು ನಮ್ಮ ಸಹನೆ, ನಂಬಿಕೆ ಮತ್ತು ಸಂಕಲ್ಪವನ್ನು ಬಲಪಡಿಸಲಿ. ಭಗವಂತನನ್ನು ಸೇರುವ ಹಾದಿಯಲ್ಲಿ ಎದುರಾಗುವ ಸವಾಲುಗಳಿಗೆ ಧೈರ್ಯಗೆಡಬಾರದು. ಶ್ರದ್ಧೆಯಿಂದ ಮುಂದುವರಿದಾಗ ದೊರೆಯುವ ಆತ್ಮತೃಪ್ತಿ ಅಮೂಲ್ಯವಾದುದು.
ಹಕ್ಕಿ ಎಷ್ಟೇ ಎತ್ತರಕ್ಕೆ ಹಾರಲಿ, ಸಂಜೆಗೆ ಗೂಡಿಗೆ ಮರಳುತ್ತದೆ. ನದಿ ಎಷ್ಟೇ ದೂರ ಹರಿಯಲಿ, ಸಾಗರವನ್ನು ಸೇರುತ್ತದೆ. ನಾವೂ ಜಗತ್ತಿನಲ್ಲಿ ಎಷ್ಟೇ ಸಾಧನೆ ಮಾಡಲಿ, ನಮ್ಮೊಳಗಿನ ಶಾಂತಿಯನ್ನು ಕಳೆದುಕೊಳ್ಳಬಾರದು. ಪ್ರೀತಿ ಬಂಧನವಲ್ಲ, ಸ್ವಾತಂತ್ರ್ಯಕ್ಕೆ ಆಸರೆಯಾಗಬೇಕು. ಸಂಬಂಧಗಳು ನಿಯಂತ್ರಣದ ಸಾಧನಗಳಾಗದೆ, ನೆಮ್ಮದಿಯ ತಾಣಗಳಾಗಬೇಕು.
ನಮ್ಮ ಬದುಕಿನ ಎಲ್ಲ ಓಟ ಮತ್ತು ಹುಡುಕಾಟಗಳ ನಡುವೆ ಭಗವಂತನ ಪ್ರೀತಿಯನ್ನು ಮರೆಯದಿರೋಣ. ಏಕೆಂದರೆ, ಜಗತ್ತಿನಲ್ಲಿ ಎಲ್ಲೆಡೆ ಸಂಚರಿಸಿದರೂ ಕೊನೆಗೆ ಮನಸ್ಸು ಮರಳಬೇಕಾದದ್ದು ಪ್ರೀತಿ, ಶಾಂತಿ ಮತ್ತು ಆತ್ಮತೃಪ್ತಿಯ ನೆಲೆಗೆ. ಅದುವೇ ನಮ್ಮ ನಿಜವಾದ ಮನೆ.