

19ನೆಯ ಶತಮಾನದ ಸುಪ್ರಸಿದ್ಧ ಪಾಶ್ಚಾತ್ಯ ವಿದ್ವಾಂಸ ಮ್ಯಾಕ್ಸ್ ಮುಲ್ಲರ್ ಭಾರತ ದೇಶದ ಬಗ್ಗೆ ತಾವು ಬರೆದ ಲೇಖನ ಮಾಲೆಯಲ್ಲಿ, ಪಾಶ್ಚಾತ್ಯರು ಭಾರತದಿಂದ ಕಲಿಯಬೇಕಾದ ವಿಷಯಗಳನ್ನು ಪಟ್ಟಿ ಮಾಡುತ್ತಾ ಉಲ್ಲೇಖಿಸಿರುವ ಮುಖ್ಯ ಅಂಶಗಳೆಂದರೆ, ವೇದ ಹಾಗೂ ವೇದಾಂತ, ಸಂಸೃ್ಕ ಸಾಹಿತ್ಯದಲ್ಲಿನ ಮಾನವೀಯ ಮೌಲ್ಯಗಳು ಮತ್ತು ಹಿಂದೂ ಜನರ ಸತ್ಯನಿಷ್ಠ ಚಾರಿತ್ರ್ಯ. ಅವರು ಪಾಶ್ಚಾತ್ಯರಿಗೆ ನೀಡಿದ ಕರೆಯಲ್ಲಿ, ಭಾರತವು ನಮ್ಮಿಂದ ಕಲಿಯಬೇಕಾಗಿರುವ ಬಹಳಷ್ಟು ವಿಷಯಗಳಿರುವಂತೆಯೇ, ನಾವೂ ಭಾರತದಿಂದ ಕಲಿಯಬೇಕಾಗಿರುವ ಬಹಳ ಮುಖ್ಯ ವಿಷಯಗಳಿವೆ. ನಮ್ಮ ಆಧುನಿಕ ಯುಗದಲ್ಲಿ ಇಂದು, ಪಾಶ್ಚಾತ್ಯರ ಕ್ರಿಯಾಶೀಲತೆ ಮತ್ತು ತಂತ್ರಜ್ಞಾನದೊಂದಿಗೆ ಭಾರತೀಯ ಆಧ್ಯಾತ್ಮಿಕತೆಯನ್ನು ಜೋಡಿಸಿ ಸಮನ್ವಯ ಸಾಧಿಸುವುದು, ಇಡೀ ಮಾನವ ಜನಾಂಗದ ಕಲ್ಯಾಣಕ್ಕಾಗಿ ಅನಿವಾರ್ಯವಾಗಿದೆ. ಆಧ್ಯಾತ್ಮಿಕತೆಯಿಲ್ಲದ ತಂತ್ರಜ್ಞಾನಾಧಾರಿತ ಭೌತಿಕ ಪ್ರಗತಿ ಕುರುಡನಿದ್ದಂತೆ; ತಂತ್ರಜ್ಞಾನ ಹಾಗೂ ಭೌತಿಕ ಪ್ರಗತಿಯ ದೃಷ್ಟಿಕೋನವಿಲ್ಲದ ಆಧ್ಯಾತ್ಮಿಕತೆಯು ಕುಂಟನಿದ್ದಂತೆ! ಲೋಕ ಕಲ್ಯಾಣಕ್ಕಾಗಿ ಇವೆರಡರ ಸಂಗಮವು ಅಗತ್ಯ. ಮಹಾತ್ಮ ಗಾಂಧಿಯವರು ಉಲ್ಲೇಖಿಸಿರುವಂತೆ, ಪಾಶ್ಚಾತ್ಯ ನಾಗರಿಕತೆಯು ಅದ್ಭುತ ಕ್ರಿಯಾಶೀಲತೆಯನ್ನು ಪ್ರತಿನಿಧಿಸಿದರೆ, ಪೌರಾತ್ಯ ನಾಗರಿಕತೆಯು ಆಳವಾದ ಧ್ಯಾನಪರತೆ ಮತ್ತು ಚಿಂತನಶೀಲತೆಯನ್ನು ಪ್ರತಿನಿಧಿಸುತ್ತದೆ. ಇವೆರಡರ ಆರೋಗ್ಯಕರ ಸಮನ್ವಯವು ಅತ್ಯುತ್ತಮ ಸುಖ-ಶಾಂತಿಮಯ ಮಾನವ ಜೀವನವನ್ನು ರೂಪಿಸಬಲ್ಲದು.
ಒಬ್ಬ ಕುಂಟನು ಇನ್ನೊಬ್ಬ ಕುರುಡನೊಡನೆ ಸೇರಿ ಮುಂದೆ ಸಾಗಿ ಗಮ್ಯಸ್ಥಾನವನ್ನು ತಲುಪಿದ ಕಥೆಯು ನಮಗೆಲ್ಲರಿಗೂ ಗೊತ್ತಿದೆಯಲ್ಲವೇ? ಕುರುಡನು ನೋಡಲಾರ, ಆದರೆ ನಡೆಯಬಲ್ಲ; ಕುಂಟನು ನಡೆಯಲಾರ, ಆದರೆ ನೋಡಬಲ್ಲ. ಕುರುಡನ ಹೆಗಲ ಮೇಲೆ ಕುಂಟನು ಕುಳಿತುಕೊಂಡು ಮುಂದೆ ನಡೆದು ಇಬ್ಬರೂ ತಮ್ಮ ಗುರಿಯನ್ನು ಮುಟ್ಟಿದರಲ್ಲವೇ! ಅಂತೆಯೇ ತಂತ್ರಜ್ಞಾನ ಮತ್ತು ಕ್ರಿಯಾಶೀಲತೆಗಳಿಲ್ಲದೆ, ಕೇವಲ ಆಧ್ಯಾತ್ಮಿಕತೆಯು ಸಮಾಜದಲ್ಲಿ ಸರ್ವರಿಗೂ ಭೌತಿಕ ಪ್ರಗತಿ ನೀಡಲು ಸಾಧ್ಯವಿಲ್ಲ; ಆದರೆ ಆಧ್ಯಾತ್ಮಿಕ ದೃಷ್ಟಿಕೋನವಿಲ್ಲದ ಕೇವಲ ಭೌತಿಕ ಪ್ರಗತಿಯು ಎಲ್ಲರಿಗೂ ಗಂಡಾಂತರಕಾರಿಯಾಗುತ್ತದೆ. ಸಮಸ್ತ ಲೋಕಾಃ ಸುಖಿನೋ ಭವಂತು ಎಂಬ ಸನಾತನ ಧರ್ಮದ ಆದರ್ಶವನ್ನು ಸಾಕಾರಗೊಳಿಸಬೇಕಾದರೆ, ಇವೆರಡರ ಸಮ್ಮಿಲನವು ಅನಿವಾರ್ಯವಾಗಿದೆ.
ಭಾರತಕ್ಕಿಂತ ಎಷ್ಟೋ ಹೆಚ್ಚು ಭೌತಿಕ ಅಭಿವೃದ್ಧಿಯನ್ನು ಸಾಧಿಸಿರುವ ಪಶ್ಚಿಮ ದೇಶಗಳಿಗೆ ಹೋಗಿ ಅಲ್ಲಿನ ಜನರೊಡನೆ ಮಾತುಕತೆ ನಡೆಸಿದಾಗ, ಆಧ್ಯಾತ್ಮರಹಿತ ಶ್ರೀಮಂತ ಜೀವನದ ದುರಂತವು ನಮ್ಮೆದುರು ಪ್ರತ್ಯಕ್ಷವಾಗುತ್ತದೆ. ಇದು ನನ್ನ ಸ್ವಂತ ಅನುಭವವಾಗಿದೆ. ಅಲ್ಲಿಯ ಜನಮನದಲ್ಲಿ ಸನಾತನ ಧರ್ಮದ ಆಧ್ಯಾತ್ಮಾಧಾರಿತ ಸರ್ವಜನಕಲ್ಯಾಣದ ಆದರ್ಶದ ಅಗತ್ಯವಿದೆ. ಅಲ್ಲಿಯ ಜನರಲ್ಲಿ ಈ ಆದರ್ಶದ ಬಗ್ಗೆ ಜಿಜ್ಞಾಸೆ ಈಗಾಗಲೇ ಜಾಗೃತವಾಗುತ್ತಿರುವುದನ್ನು ನಾವು ಕಾಣಬಹುದು. ಅಂತೆಯೇ ಭಾರತದಲ್ಲಿ ಜನರು, ಅದರಲ್ಲಿಯೂ ಯುವಜನರು ಇಂದು ಶೀಘ್ರ ಭೌತಿಕ ಅಭಿವೃದ್ಧಿಯ ಕನಸನ್ನು ಕಾಣಲಾರಂಭಿಸಿದ್ದಾರೆ. ಅದಕ್ಕಾಗಿ ತಂತ್ರಜ್ಞಾನಾಧಾರಿತ ಕ್ರಿಯಾಶೀಲತೆಯನ್ನು ಮೈಗೂಡಿಸಿಕೊಳ್ಳುತ್ತಿದ್ದಾರೆ. ಇದು ಭವಿಷ್ಯದ ಭವ್ಯ ಭಾರತ ನಿರ್ವಣಕ್ಕೆ ನಾಂದಿ.
ಹೀಗೆ ಪೂರ್ವ-ಪಶ್ಚಿಮಗಳು ಪರಸ್ಪರ ಪ್ರೀತಿ- ಗೌರವಗಳೊಂದಿಗೆ ಇಂತಹ ಆದರ್ಶವನ್ನು ಅಂಗೀಕರಿಸಿ, ಅನುಷ್ಠಾನಗೊಳಿಸಿದಾಗ ವಸುಧೈವ ಕುಟುಂಬಕಂ ಎಂಬ ಸನಾತನ ಧರ್ಮದ ಆಶಯವು ರೂಪುದಾಳಬಹುದು. ನಮ್ಮ ದೇಶವು ಬ್ರಿಟಿಷರಿಂದ ಸ್ವಾತಂತ್ರ್ಯ ಗಳಿಸಿದ ನಂತರದ 75 ವರ್ಷಗಳಲ್ಲಿ ನಾವು ಸಾಕಷ್ಟು ಭೌತಿಕ ಅಭಿವೃದ್ಧಿ ಸಾಧಿಸಿದ್ದೇವೆ. ದೇಶದ ಆಧ್ಯಾತ್ಮಿಕ ಆದರ್ಶಗಳು ನಮ್ಮ ಸಾಮಾಜಿಕ ಪ್ರಜ್ಞೆಯಲ್ಲಿ ಸಾವಿರಾರು ವರ್ಷಗಳಿಂದ ಆಳವಾಗಿ ಬೇರೂರಿರುವುದರಿಂದ, ಅವು ನಮ್ಮಿಂದ ಶಾಶ್ವತವಾಗಿ ಮಾಯವಾಗಲು ಎಂದೂ ಸಾಧ್ಯವಿಲ್ಲ. ಕೆಲವೊಮ್ಮೆ ಜನಮನದಲ್ಲಿ ಐಹಿಕ ಮತ್ತು ಆಧ್ಯಾತ್ಮಿಕ ಆಸಕ್ತಿಗಳ ನಡುವೆ ಸಂಘರ್ಷವಾಗುವುದು ಅನಿವಾರ್ಯ; ಅದರ ಪ್ರಭಾವವೂ ಆಗಾಗ ಅಲ್ಲಲ್ಲಿ ಎದ್ದು ಕಾಣುವುದುಂಟು. ಆದರೆ, ಅದು ಕೇವಲ ತಾತ್ಕಾಲಿಕವಷ್ಟೆ.
ಈ ಕಾರಣದಿಂದ ಭಾರತವು ಇಂದು ಪೂರ್ವ- ಪಶ್ಚಿಮಗಳ ಅಪೂರ್ವ ಸಂಗಮಸ್ಥಾನವಾಗಿದೆ.
ಕನ್ನಡದ ಮೇಧಾವಿ, ಕವಿ ಡಿ.ವಿ.ಗುಂಡಪ್ಪನವರು ಮಂಕುತಿಮ್ಮನ ಕಗ್ಗದಲ್ಲಿ ಸರಳ ಸುಂದರ ಭಾಷೆಯಲ್ಲಿ ತಿಳಿಸಿರುವಂತೆ:
ಹೊಸ ಚಿಗುರು ಹಳೆ ಬೇರು ಕೂಡಿರಲು ಮರ ಸೊಬಗು
ಹೊಸ ಯುಕ್ತಿ ಹಳೆ ತತ್ತ್ವದೊಡಗೂಡೆ ಧರ್ಮ
ಋಷಿವಾಕ್ಯದೊಡನೆ ವಿಜ್ಞಾನ ಕಲೆ ಮೇಳವಿಸೆ
ಜಸವು ಜನಜೀವನಕೆ ಮಂಕುತಿಮ್ಮ!
ಮುಂದಿನ 25 ವರ್ಷಗಳಲ್ಲಿ ಭಾರತ ಸ್ವಾತಂತ್ರ್ಯದ ಶತಮಾನೋತ್ಸವವದ ಸಂಭ್ರಮಣಾಚರಣೆಯ ವೇಳೆಗೆ, ಪ್ರಾಚೀನತೆ ಹಾಗೂ ಆಧುನಿಕತೆಗಳ ಸಂಗಮದ ಸೊಬಗಿನ ಮರದಂತೆ ನಮ್ಮ ದೇಶವು ಕಂಗೊಳಿಸಿ ಜಗತ್ತಿನ ಎಲ್ಲಾ ದೇಶಗಳಿಗೆ ನಿದರ್ಶನವಾಗಿ ಬೆಳಗಲೆಂದು ಪ್ರಾರ್ಥಿಸೋಣ, ಅದಕ್ಕಾಗಿ ದುಡಿಯೋಣ!
(ಲೇಖಕರು ಸಾಮಾಜಿಕ ಹಾಗೂ ಆಧ್ಯಾತ್ಮಿಕ ಗುರುಗಳು)