

ಬಾಲ್ಯದಲ್ಲಿ ಹಿರಿಯರು ನಮಗೆ ಸಂಖ್ಯೆಗಳ ಎಣಿಕೆಯನ್ನು ಕಲಿಸುವಾಗ, ಸುಲಭವಾಗಿ ಅರ್ಥವಾಗುವಂತೆ ವಿವಿಧ ಸೃಜನಶೀಲ ವಿಧಾನಗಳನ್ನು ಉಪಯೋಗಿಸಿದರಲ್ಲವೇ? ಈಗ ಅದೇ ರೀತಿಯಲ್ಲಿ ಒಂದರಿಂದ ಹತ್ತರವರೆಗೆ ಎಣಿಕೆ ಮಾಡುವಾಗ, ಸನಾತನ ಧರ್ಮದ ಮುಖ್ಯ ತತ್ತ್ವ ಹಾಗೂ ಸೂತ್ರಗಳನ್ನು ಈ ಸಂಖ್ಯೆಗಳೊಡನೆ ಜೋಡಿಸಿದಾಗ, ಅವುಗಳನ್ನು ಸುಲಭವಾಗಿ ನೆನಪಿನಲ್ಲಿ ಇಟ್ಟುಕೊಳ್ಳಬಹುದು. ಏಕೋ ದೇವಃ ಅಂದರೆ ಒಬ್ಬನೇ ಪರಮಾತ್ಮ, ದ್ವೇ ವಿದ್ಯೆ- ಎರಡು ರೀತಿಯ ವಿದ್ಯೆಗಳು, ತ್ರಿಗುಣಾಃ- ಸೃಷ್ಟಿಯಲ್ಲಿನ ಮೂರು ಮೂಲಭೂತ ಗುಣಗಳು, ಚತುರ್ವಿಧ ಪುರುಷಾರ್ಥಾ- ಮಾನವ ಜೀವನದ ನಾಲ್ಕು ಮುಖ್ಯ ಉದ್ದೇಶಗಳು, ಪಂಚಕೋಶಾಃ - ಮಾನವ ವ್ಯಕ್ತಿತ್ವದ ಐದು ಪದರಗಳು, ಷಟ್ ಸಂಪತ್ತಿ- ಆರು ಆಧ್ಯಾತ್ಮಿಕ ಸಂಪತ್ತುಗಳು, ಸಪ್ತ ಚಕ್ರಾಃ- ಶರೀರದಲ್ಲಿನ ಏಳು ಶಕ್ತಿ ಕೇಂದ್ರಗಳು, ಅಷ್ಟಾಂಗ ಯೋಗಾಃ- ಯೋಗದ ಎಂಟು ಅಂಗಗಳು, ನವವಿಧ ಭಕ್ತಿ- ಭಕ್ತಿಯ ಒಂಬತ್ತು ರೀತಿಗಳು, ಹಾಗೂ ದಶೋಪನಿಷದಃ- ಹತ್ತು ಪ್ರಮುಖ ಉಪನಿಷತ್ತುಗಳು- ಹೀಗೆ ಒಂದರಿಂದ ಹತ್ತರವರೆಗಿನ ಎಣಿಕೆ ಪೂರ್ಣವಾಗುತ್ತದೆ.
1
ಏಕೋ ದೇವಃ - ಒಬ್ಬನೇ ಪರಮಾತ್ಮ: ಇದೇ ಅಂಕಣದ ‘ಸನಾತನ ಧರ್ಮದಲ್ಲಿ ಪರಮಾತ್ಮನ ಪರಿಕಲ್ಪನೆ’ ಎಂಬ ಲೇಖನದಲ್ಲಿ ಸಾರಿರುವಂತೆ ಸನಾತನ ಧರ್ಮದ ಪ್ರಕಾರ ಪರಮಾತ್ಮನು ಒಬ್ಬನೇ; ಅವನಿಗೆ ರೂಪ-ನಾಮ-ಗುಣಗಳಿಲ್ಲ, ಲಿಂಗಭೇದವೂ ಇಲ್ಲ. ಪ್ರಾಚೀನ ಋಷಿಗಳು ಹೇಳಿರುವಂತೆ ಭಗವಂತನೆಂದರೆ ‘ಸತ್ಯಂ ಜ್ಞಾನಂ ಅನಂತಂ ಬ್ರಹ್ಮ’- ಚ್ಯುತಿಯಿಲ್ಲದ ಶಾಶ್ವತ ಅಸ್ತಿತ್ವ ಹಾಗೂ ಅನಂತ ಪ್ರಜ್ಞೆಗಳೇ ಏಕಮೇವ ಬ್ರಹ್ಮನ ಸ್ವರೂಪ (ತೈತ್ತಿರೀಯ 2.1.1). ಬ್ರಹ್ಮನು ಕಾಲಾತೀತ ಸತ್ಯ; ಪ್ರಜ್ಞಾಸ್ವರೂಪನಾದ ಅವನು ಸರ್ವ ಅಸ್ತಿತ್ವದ ಕಣಕಣವನ್ನೂ ವ್ಯಾಪಿಸಿ ಎಲ್ಲವನ್ನೂ ಅರಿತವನು; ಯಾವುದೇ ಇತಿಮಿತಿಗಳಿಲ್ಲದೆ ಅನಂತವಾದವನು. ಹೀಗೆ ಏಕಮೇವ ಬ್ರಹ್ಮನು ಸೃಷ್ಟಿಯಲ್ಲಿನ ದೇಶ-ಕಾಲ-ಕಾರಣಗಳನ್ನು ಮೀರಿ ನಿಂತಿದ್ದಾನೆ. ಹೀಗೆ ಸರ್ವಾತೀತನಾದ ಒಬ್ಬನೇ ಪರಮಾತ್ಮನನ್ನು ‘ನಿರ್ಗಣಬ್ರಹ್ಮ’ನೆಂದು ಕರೆದರೆ, ತನ್ನ ಸಂಕಲ್ಪದಿಂದಲೇ ಈ ಸೃಷ್ಟಿಯಲ್ಲಿ ರೂಪ-ನಾಮ-ಗುಣಗಳೊಂದಿಗೆ ಅಭಿವ್ಯಕ್ತವಾದಾಗ ಅವನೇ ‘ಸಗುಣಬ್ರಹ್ಮ’ನಾಗುತ್ತಾನೆ. ಆಧ್ಯಾತ್ಮಿಕ ಸಾಧಕನು ತನ್ನ ಅಭಿರುಚಿಯನ್ನು ಹೊಂದಿಕೊಂಡು ನಿರ್ಗಣೋಪಾಸನೆಯನ್ನಾಗಲೀ ಅಥವಾ ಸಗುಣೋಪಾಸನೆಯನ್ನಾಗಲೀ ಅವಲಂಬಿಸಬಹುದು. ಇದು ಸನಾತನ ಧರ್ಮದ ವೈಶಿಷ್ಟ್ಯ.
ಬ್ರಹ್ಮನು ಒಬ್ಬನೇ ಆದರೂ ಜೀವಿಯಲ್ಲಿ ಅವನು ಎರಡಾಗಿ ತೋರುತ್ತಾನೆ- ಕರ್ತ ಹಾಗೂ ಸಾಕ್ಷಿ, ಅಥವಾ ಜೀವಾತ್ಮ ಮತ್ತು ಪರಮಾತ್ಮ. ಒಬ್ಬನೇ ಸೂರ್ಯನು ಅನೇಕ ಪಾತ್ರೆಗಳಲ್ಲಿ ಅನೇಕ ಪ್ರತಿಬಿಂಬಗಳಾಗಿ ಕಾಣುವಂತೆ ಒಬ್ಬನೇ ಪರಮಾತ್ಮನು ಅನೇಕ ಜೀವಿಗಳಲ್ಲಿ ಅನೇಕ ಜೀವಾತ್ಮರಾಗಿ ತೋರುತ್ತಾನೆ. ಪರಮಾತ್ಮನು ಬಿಂಬವಾದರೆ, ಜೀವಾತ್ಮನು ಪ್ರತಿಬಿಂಬ. ಮಾನವ ಜೀವನದ ಪರಮೋದ್ದೇಶವೆಂದರೆ ತಾನು ಜೀವಾತ್ಮನೆಂಬ ಭ್ರಮೆಯನ್ನು ದಾಟಿ ತಾನು ಪರಮಾತ್ಮನೇ ಎಂಬುದನ್ನು ಅರಿಯುವುದು.
2
ದ್ವೇ ವಿದ್ಯೆ- ಎರಡು ರೀತಿಯ ವಿದ್ಯೆಗಳು: ಇದೇ ಅಂಕಣದ ‘ಪರಿಪೂರ್ಣ ವಿದ್ಯೆಯ ಎರಡು ಅಂಗಗಳು’ ಎಂಬ ಲೇಖನದಲ್ಲಿ ಅರುಹಿರುವಂತೆ ಗುರುಕುಲ ಪದ್ಧತಿಯ ಶಿಕ್ಷಣದಲ್ಲಿ ಪ್ರತಿ ವಿದ್ಯಾರ್ಥಿ ಗುರುವಿನಿಂದ ಎರಡು ರೀತಿಯ ವಿದ್ಯೆಗಳನ್ನು ಕಲಿಯುತ್ತಿದ್ದ. ಗುರುಗೃಹವಾಸವು ಗುರುಕುಲ ಪದ್ಧತಿಯ ಮೂಲಭೂತ ವೈಶಿಷ್ಟ್ಯ. ಮುಂಡಕೋಪನಿಷತ್ತಿನಲ್ಲಿ ಹೇಳಿರುವಂತೆ ‘ದ್ವೇ ವಿದ್ಯೆ ವೇದಿತವ್ಯೇ’ (ಮುಂಡಕ 1.1.4)- ಅಪರಾ ಹಾಗೂ ಪರಾ ಎಂಬ ಎರಡು ವಿದ್ಯೆಗಳನ್ನು ಕಲಿಯಬೇಕು. ಪ್ರಾಚೀನ ಕಾಲದಲ್ಲಿ ಅಪರಾ ವಿದ್ಯೆಯೆಂದರೆ ಈ ಭೌತಿಕ ಪ್ರಪಂಚದಲ್ಲಿ ಮಾನವನು ತನ್ನ ಜೀವನವನ್ನು ಸಾಗಿಸಲು ಅಗತ್ಯವಾದ ಲೌಕಿಕ ಹಾಗೂ ಧಾರ್ವಿುಕ ವಿಧಿ-ವಿಧಾನಗಳನ್ನು ತಿಳಿಸುವ ವಿದ್ಯೆ. ಆಗ ಅಪರಾ ವಿದ್ಯೆಯಲ್ಲಿ ವಿದ್ಯಾರ್ಥಿಗಳು ಋಗ್ವೇದ, ಯಜುರ್ವೆದ, ಸಾಮವೇದ ಹಾಗೂ ಅಥರ್ವಣವೇದಗಳ ನಾಲ್ಕು ಭಾಗಗಳಾದ ಸಂಹಿತೆ, ಬ್ರಾಹ್ಮಣ, ಅರಣ್ಯಕ ಹಾಗೂ ಉಪನಿಷತ್ತುಗಳನ್ನು ಕಲಿಯುವುದಲ್ಲದೆ, ಶಿಕ್ಷಾ, ವ್ಯಾಕರಣ, ನಿರುಕ್ತ, ಛಂದಸ್ಸು, ಜ್ಯೋತಿಷ ಹಾಗೂ ಕಲ್ಪಗಳೆಂಬ ಆರು ವೇದಾಂಗಗಳನ್ನೂ ಕಲಿಯುತ್ತಿದ್ದರು. ಇಷ್ಟು ಮಾತ್ರವಲ್ಲದೆ ಲೌಕಿಕ ಜೀವನದ ನಿರ್ವಹಣೆಗೆ ಅಗತ್ಯವಾದ ಅರ್ಥವನ್ನು ಸಂಚಯಿಸಲು ಇತರ ವೇದೋಕ್ತ ಶಾಸ್ತ್ರಗಳಾದ ಆರೋಗ್ಯಶಾಸ್ತ್ರ, ಅರ್ಥಶಾಸ್ತ್ರ, ಲೋಹಶಾಸ್ತ್ರ, ವಾಸ್ತುಶಿಲ್ಪಶಾಸ್ತ್ರ ಹಾಗೂ ಲಲಿತಕಲಾಶಾಸ್ತ್ರಗಳ ಪೈಕಿ ತಮ್ಮ ಅಭಿರುಚಿಗನುಗುಣವಾಗಿ ಕೆಲವನ್ನು ಅಭ್ಯಾಸ ಮಾಡುತ್ತಿದ್ದರು.
ಪರಾವಿದ್ಯೆಯೆಂದರೆ, ತನ್ನ ಸ್ವಸ್ವರೂಪ ಜ್ಞಾನವನ್ನು ಪಡೆದುಕೊಳ್ಳುವುದು. ಇದಕ್ಕಾಗಿ ಶಿಷ್ಯನು ಆತ್ಮಜ್ಞಾನಿಯಾದ ಗುರುವಿನ ಸನ್ನಿಧಿಯಲ್ಲಿ ಪರಮೋಚ್ಚ ಜ್ಞಾನದ ಗಣಿಗಳಾದ ಉಪನಿಷತ್ತುಗಳನ್ನು ಕಲಿತು, ಶ್ರವಣ-ಮನನ-ನಿಧಿಧ್ಯಾಸನಗಳ ಮೂಲಕ ಅಂತರಂಗದಲ್ಲಿ ಆತ್ಮಾನುಸಂಧಾನವನ್ನು ಮಾಡಬೇಕಾಗಿತ್ತು. ಮನಸ್ಸು-ಬುದ್ಧಿ-ಇಂದ್ರಿಯಗಳಿಗೆ ಅಗ್ರಾಹ್ಯನಾದ ಪರಮಾತ್ಮನನ್ನು ಅರಿಯಲು ಶಿಷ್ಯನು ಶ್ರದ್ಧೆಯಿಂದ ತಪಸ್ಸು ಹಾಗೂ ನಿಷ್ಕಾಮ ಕರ್ಮಗಳನ್ನು ಆಚರಿಸಿ ಚಿತ್ತಶುದ್ಧಿಯನ್ನು ಗಳಿಸುವುದು ಪರಾವಿದ್ಯೆಯ ಪ್ರಥಮ ಸೋಪಾನವಾಗಿತ್ತು.
3
ತ್ರಿಗುಣಾಃ - ಸೃಷ್ಟಿಯಲ್ಲಿನ ಮೂರು ಮೂಲಭೂತ ಗುಣಗಳು: ಇದೇ ಅಂಕಣದ ‘ಸಾರ್ಥಕ ಮಾನವ ಜೀವನದ ನಾಲ್ಕು ಮಜಲುಗಳು’ ಎಂಬ ಲೇಖನದಲ್ಲಿ ನಾವು ತ್ರಿಗುಣಗಳ ಬಗ್ಗೆ ತಿಳಿದುಕೊಂಡಿದ್ದೇವೆ. ನಿಜವಾಗಿ ಮಾನವನು ಮೂಲತಃ ಪರಮಾತ್ಮ ಸ್ವರೂಪನೇ ಆಗಿದ್ದರೂ, ತಾನು ದೇಹಸ್ವರೂಪಿಯಾದ ಒಬ್ಬ ವ್ಯಕ್ತಿ ಎಂದು ಭ್ರಮಿಸಲು ಕಾರಣ, ಸೃಷ್ಟಿಯನ್ನು ಆವರಿಸಿರುವ ಮಾಯೆಯೇ. ಈ ಮಾಯೆಯ ಅಂಗಗಳಾದ ಮೂರು ಮೂಲಭೂತ ಗುಣಗಳೇ ವಿವಿಧ ವ್ಯಕ್ತಿಗಳು ವಿವಿಧ ರೀತಿಯಲ್ಲಿ ಯೋಚಿಸಲು, ಮಾತನಾಡಲು ಅಥವಾ ಕರ್ಮಗಳನ್ನೆಸಗಲು ಕಾರಣವಾಗಿವೆ. ಜಡತೆ ಹಾಗೂ ಆಲಸ್ಯಗಳು ತಮೋಗುಣದ ಲಕ್ಷಣಗಳು. ಸಹಜ ಪಶುಪ್ರವೃತ್ತಿಗಳಾದ ಹಸಿವು, ನಿದ್ರೆ, ಭಯ, ಮೈಥುನಗಳ ರೂಪದಲ್ಲಿ ಈ ಗುಣವು ವ್ಯಕ್ತವಾಗುತ್ತದೆ. ರಜೋಗುಣದ ಮೂಲ ಲಕ್ಷಣವೆಂದರೆ ಸ್ವಾರ್ಥ-ಸ್ವಪ್ರಯೋಜನಗಳ ಸಾಧನೆಗಾಗಿ ಸದಾ ಶ್ರಮಿಸುವಂತೆ ಮಾಡುವುದು. ಇದು ಸಾಮಾನ್ಯ ಮಾನವನ ಪ್ರವೃತ್ತಿ. ಸತ್ವಗುಣದ ಮುಖ್ಯ ಲಕ್ಷಣಗಳೆಂದರೆ ಪ್ರಶಾಂತತೆ ಹಾಗೂ ನಿಸ್ವಾರ್ಥತೆ. ಇದು ಅಂತರಂಗದಲ್ಲಿನ ಪಶು ಪ್ರವೃತ್ತಿ ಹಾಗೂ ಮಾನವ ಸಹಜ ಸ್ವಾರ್ಥ ಪ್ರವೃತ್ತಿಗಳನ್ನು ಮೀರಿದ ಋಷಿ ಅಥವಾ ದಿವ್ಯಮಾನವನ ಗುಣವಾಗಿರುತ್ತದೆ. ಮಾನವನು ತಾನು ಪರಮಾತ್ಮ ಸ್ವರೂಪನೇ ಎಂದು ಅರಿಯಬೇಕಾದರೆ, ಅವನು ಈ ಮೂರು ಗುಣಗಳಿಗೂ ಅತೀತನಾಗಿ ಬೆಳಗಬೇಕಾಗುತ್ತದೆ. ತಾನು ಕರ್ತ ಎಂಬ ಅಜ್ಞಾನದ ಭ್ರಮೆಯನ್ನು ನೀಗಿಕೊಂಡು ಪರಮ ದಿವ್ಯಪ್ರಜ್ಞೆಯಲ್ಲಿ ನೆಲೆಸಿ ಎಲ್ಲ ಕರ್ಮಗಳಿಗೂ ಸಾಕ್ಷೀಭೂತನಾಗಿ ನಿಲ್ಲಬೇಕಾಗುತ್ತದೆ.
ತ್ರಿಗುಣಗಳ ರೀತಿಯಲ್ಲಿಯೇ ಮೂರರ ಸಂಖ್ಯೆಯ ಇನ್ನಾವುದೇ ತತ್ತ್ವ ಅಥವಾ ಸೂತ್ರಗಳು ನಿಮ್ಮ ಸ್ಮರಣೆಗೆ ಬರುತ್ತಿವೆಯೇ ಉದಾಹರಣೆಗೆ, ದೈವ ಸಾಕ್ಷಾತ್ಕಾರಕ್ಕಾಗಿ ಅವಲಂಬಿಸುವ ಮೂರು ಪಥಗಳಾದ ಕರ್ಮ, ಭಕ್ತಿ, ಜ್ಞಾನಗಳು ಹಾಗೂ ಅವಿದ್ಯೆಯ ಮೂರು ಹೃದಯಗ್ರಂಥಿಗಳಾದ ಅಜ್ಞಾನ, ಕಾಮನೆ ಹಾಗೂ ಕರ್ಮಗಳು.
4
ಚತುರ್ವಿಧ ಪುರುಷಾರ್ಥಾ: ಮಾನವ ಜೀವನದ ನಾಲ್ಕು ಮುಖ್ಯ ಉದ್ದೇಶಗಳು ಇದೇ ಅಂಕಣದ ‘ಸಮಾಜದ ಸುಗಮ ನಿರ್ವಹಣೆಗಾಗಿ ಚತುರ್ವಿಧ ವರ್ಣ ವ್ಯವಸ್ಥೆ’ ಎಂಬ ಲೇಖನದಲ್ಲಿ ಹೇಳಿರುವಂತೆ ಧರ್ಮ, ಅರ್ಥ, ಕಾಮ ಹಾಗೂ ಮೋಕ್ಷಗಳು ಮಾನವ ಜೀವನದ ನಾಲ್ಕು ಮುಖ್ಯ ಉದ್ದೇಶಗಳು. ಧರ್ಮವೆಂದರೆ, ಮಾನವನು ತನ್ನ ಪರಮ ಶ್ರೇಯಸ್ಸಿಗಾಗಿ ಉತ್ತಮ ಗುಣಗಳನ್ನು ಬೆಳೆಸಿಕೊಂಡು ಜೀವನವನ್ನು ಧರ್ಮಬದ್ಧವಾಗಿ ನಿರ್ವಹಿಸುವುದು. ಅರ್ಥವೆಂದರೆ, ತನ್ನ ಹಾಗೂ ಕುಟುಂಬದ ಜೀವನ ನಿರ್ವಹಣೆಗಾಗಿ ಅಗತ್ಯವಾದ ಸಂಪತ್ತನ್ನು ಧರ್ಮದ ಚೌಕಟ್ಟಿನಲ್ಲಿ ಸಂಪಾದಿಸುವುದು. ಕಾಮವೆಂದರೆ, ಧರ್ಮಬದ್ಧವಾದ ತನ್ನ ದೈಹಿಕ ಹಾಗೂ ಮಾನಸಿಕ ಆಸೆಗಳನ್ನು ತಾನು ಧರ್ಮಮಾರ್ಗದಲ್ಲಿ ಸಂಚಯಿಸಿದ ಸಂಪತ್ತನ್ನು ವಿನಿಯೋಗಿಸಿ ಪೂರೈಸಿಕೊಳ್ಳುವುದು. ಇದರಿಂದ ತಾನು ಆಧ್ಯಾತ್ಮಿಕವಾಗಿ ಬೆಳೆದು ಅಂತಿಮವಾಗಿ ಜೀವನದ ಪರಮೋಚ್ಚ ಗುರಿಯಾದ ಮೋಕ್ಷಕ್ಕಾಗಿ ಮಾತ್ರ ಕಾಮನೆಯನ್ನು ಉಳಿಸಿಕೊಂಡು ಅದಕ್ಕಾಗಿ ಹಂಬಲಿಸುತ್ತಾನೆ. ಮೋಕ್ಷವೆಂದರೆ, ತಾನು ದೇಹಸ್ವರೂಪಿಯೆಂಬ ಅಜ್ಞಾನವನ್ನು ಗೆದ್ದು ತಾನು ಪರಮಾತ್ಮಸ್ವರೂಪನೇ ಎಂದು ಅರಿಯುವುದು. ಈ ನಾಲ್ಕು ಜೀವನದ ಗುರಿಗಳು ನಾಲ್ಕು ವರ್ಣದ ಜನರಿಗೂ ಸಾಮಾನ್ಯವಾಗಿರುತ್ತವೆ.
ಈ ನಾಲ್ಕರ ಸಂಖ್ಯೆಗೆ ಇದೇ ರೀತಿಯಲ್ಲಿ ಹೊಂದಿಕೆಯಾಗುವ ತತ್ತ್ವ ಅಥವಾ ಸೂತ್ರಗಳೆಂದರೆ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ ಹಾಗೂ ಶೂದ್ರರೆಂಬ ಚತುರ್ವಿಧವರ್ಣ ವ್ಯವಸ್ಥೆ, ಹಾಗೂ ಬ್ರಹ್ಮಚರ್ಯ, ಗೃಹಸ್ಥ, ವಾನಪ್ರಸ್ಥ ಮತ್ತು ಸಂನ್ಯಾಸವೆಂಬ ನಾಲ್ಕು ಆಶ್ರಮಗಳು.
5
ಪಂಚಕೋಶಾಃ - ಮಾನವ ವ್ಯಕ್ತಿತ್ವದ ಐದು ಪದರಗಳು: ‘ಸನಾತನ ಧರ್ಮದಲ್ಲಿ ಸುಖಾನ್ವೇಷಣೆ’ ಎಂಬ ಲೇಖನದಲ್ಲಿ ಕಂಡುಬರುವಂತೆ ತೈತ್ತಿರೀಯ ಉಪನಿಷತ್ತಿನ ಆನಂದವಲ್ಲಿಯಲ್ಲಿ ಮಹರ್ಷಿ ಭೃಗು ಹಾಗೂ ಆತನ ಪುತ್ರ ವಾರುಣಿಯ ಕಥೆಯಿಂದ ನಮಗೆ ಮಾನವ ವ್ಯಕ್ತಿತ್ವದ ಪಂಚಕೋಶಗಳ ಬಗ್ಗೆ ತಿಳಿದಿದೆ. ವಾರುಣಿಯು ತನಗೆ ಸತ್ಯಬೋಧನೆ ಮಾಡಬೇಕೆಂದು ತಂದೆಯಲ್ಲಿ ಕೇಳಿಕೊಂಡಾಗ, ತಂದೆ ಸೃಷ್ಟಿಯ ಉಗಮ, ನಿರ್ವಹಣೆ ಹಾಗೂ ಲಯಗಳ ಮೂಲದಲ್ಲಿರುವ ಅಗೋಚರ ಶಕ್ತಿಯ ಕುರಿತಾಗಿ ತನ್ನ ಅಂತರಂಗದಲ್ಲಿಯೇ ಚಿಂತನೆ ಮಾಡುವಂತೆ ಪ್ರೇರೇಪಿಸುತ್ತಾನೆ. ಈ ಚಿಂತನೆ-ಧ್ಯಾನಗಳಿಂದ ವಾರುಣಿ ವ್ಯಕ್ತಿತ್ವದ ಐದು ಪದರಗಳನ್ನು ಅರಿಯುತ್ತಾನೆ. ಮೊದಲನೆಯದು ಅನ್ನಮಯಕೋಶ- ಕಣ್ಣಿಗೆ ಕಾಣುವ ಭೌತಿಕ ದೇಹ; ಎರಡನೆಯದು ಪ್ರಾಣಮಯಕೋಶ- ದೇಹದ ಎಲ್ಲ ಕ್ರಿಯೆಗಳನ್ನು ನಡೆಸುವ ಶಕ್ತಿ; ಮೂರನೆಯದು ಮನೋಮಯಕೋಶ- ಒಬ್ಬ ವ್ಯಕ್ತಿಯ ಎಲ್ಲ ಯೋಚನೆ, ಭಾವನೆ ಹಾಗೂ ನೆನಪುಗಳ ಮೂಟೆ, ಅಲ್ಲದೆ ದೇಹಾತ್ಮ ಭಾವನೆಯ ಕೇಂದ್ರ; ನಾಲ್ಕನೆಯದು ವಿಜ್ಞಾನಮಯಕೋಶ- ವಿವೇಚನೆ ಹಾಗೂ ನಿರ್ಣಯಗಳನ್ನು ಮಾಡುವ ಬುದ್ಧಿ, ಹಾಗೂ ಐದನೆಯದು ಆನಂದಮಯಕೋಶ- ವ್ಯಕ್ತಿಯ ಎಲ್ಲ ಅನುಭವ-ಭೋಗಗಳಿಗೆ ಮೂಲ.
ಈ ಐದರ ಸಂಖ್ಯೆ ನಿಮಗೆ ಸನಾತನ ಧರ್ಮದಲ್ಲಿನ ಇತರ ತತ್ತ್ವಗಳನ್ನು ನೆನಪಿಗೆ ತರಬಹುದು. ಉಳಿದ ಐದು ಸಂಖ್ಯೆಗಳ ಕುರಿತಾದ ವೈಶಿಷ್ಟ್ಯ ಮತ್ತು ವಿವರಣೆಯನ್ನು ಮುಂದಿನ ಅಂಕಣದಲ್ಲಿ ತಿಳಿಯೋಣ.
(ಲೇಖಕರು ಸಾಮಾಜಿಕ ಹಾಗೂ ಆಧ್ಯಾತ್ಮಿಕ ಗುರುಗಳು)