ಹಿಂದೂಯಿಸಂ ಎಂದರೆ ನಿಜವಾಗಿಯೂ ಏನು...?

ವಿಶೇಷ ಅಂಕಣ
ವಿಶೇಷ ಅಂಕಣ
Published on

(ಸದ್ಗುರು ಅವರು ಯೋಗಿ, ದಾರ್ಶನಿಕ, ಆಧ್ಯಾತ್ಮಿಕ ನಾಯಕ)

ವಾಸ್ತವದಲ್ಲಿ ಹಿಂದೂಯಿಸಮ್ ಎನ್ನುವಂಥದ್ದೇನಿಲ್ಲ. ಈ ಪದ ಮತ್ತು ಕಲ್ಪನೆ ಇತ್ತೀಚಿನ ದಿನಗಳಲ್ಲಿ ಹುಟ್ಟಿಕೊಂಡಿದ್ದಷ್ಟೇ. ಹಿಂದೂ ನಾಗರಿಕತೆಯು ಸಿಂಧೂ ನದಿ ತೀರದ ಪ್ರದೇಶದಲ್ಲಿ ಉಗಮವಾಯಿತು, ಇದನ್ನು ಇಂಗ್ಲಿಷ್​ನಲ್ಲಿ ಇಂಡಸ್ ನದಿ ಎಂದು ಕರೆಯಲಾಗುತ್ತದೆ. ಪರ್ಷಿಯನ್ನರು ಇಲ್ಲಿಗೆ ಬಂದಾಗ, ಸಿಂಧೂ ನದಿಯ ಆಚೆ ವಾಸಿಸುವ ಜನರನ್ನು ಸೂಚಿಸಲು ಸಂಸ್ಕೃತ ಭಾಷೆಯ ಸಿಂಧೂ ಪದದಿಂದ ಸ್ವೀಕರಿಸಿದ ‘ಹಿಂದೂ’ ಪದವನ್ನು ಬಳಸಲಾರಂಭಿಸಿದರು. 

ಮೂಲಭೂತವಾಗಿ, ಹಿಂದೂ ಎಂದು ಕರೆಯಲ್ಪಡುವುದು ಭೌಗೋಳಿಕ ಮತ್ತು ಸಾಂಸ್ಕೃತಿಕ ಗುರುತಾಗಿದೆ. ಇದನ್ನು ಧಾರ್ವಿುಕ ಗುರುತಾಗಿ ವ್ಯವಸ್ಥೆಗೊಳಿಸುವ ಉದ್ದೇಶ ಎಂದಿಗೂ ಇರಲಿಲ್ಲ. ಇಡೀ ಹಿಂದೂ ಸಾಂಸ್ಕೃತಿಕ ಪರಂಪರೆಯು ಜನರು ತಮ್ಮ ಸಂಪೂರ್ಣ ಸಾಮರ್ಥ್ಯವನ್ನು ಕಂಡುಕೊಳ್ಳುವತ್ತ ಮಾತ್ರ ಗಮನ ಹರಿಸಿತ್ತು. ಈ ಸಂಸ್ಕೃತಿಯಲ್ಲಿ, ಮಾನವ ಜೀವನದ ಏಕೈಕ ಗುರಿ ಎಂದರೆ ಅದು ‘ಮುಕ್ತಿ’, ಅಂದರೆ ಬದುಕಿನ ಪ್ರಕ್ರಿಯೆಯಿಂದಲೇ ಬಿಡುಗಡೆ ಪಡೆದು, ನಮಗೆ ತಿಳಿದಿರುವ ಎಲ್ಲ ಮಿತಿಗಳನ್ನು ಮೀರಿ ನಿಲ್ಲುವುದು. ಹಿಂದೂ ಜೀವನ ವಿಧಾನವು ಕೇವಲ ವ್ಯವಸ್ಥಿತ ನಂಬಿಕೆಯಲ್ಲ, ಬದಲಿಗೆ ಮುಕ್ತಿಯ ವಿಜ್ಞಾನವಾಗಿದೆ.

ಮುಕ್ತಿಯ ವಿಜ್ಞಾನ ಪ್ರಪಂಚದಲ್ಲಿ ನಡೆಯುವ ಸಂಘರ್ಷಗಳನ್ನು ಯಾವಾಗಲೂ ಒಳ್ಳೆಯದು ಮತ್ತು ಕೆಟ್ಟದ್ದರ ನಡುವಿನ ಹೋರಾಟ ಎಂದು ಬಿಂಬಿಸಲಾಗುತ್ತದೆ. ಆದರೆ ನಿಜವಾಗಿ ನೋಡುವುದಾದರೆ, ಇದು ಯಾವಾಗಲೂ ಒಬ್ಬರ ನಂಬಿಕೆ ಹಾಗೂ ಮತ್ತೊಬ್ಬರ ನಂಬಿಕೆಯ ನಡುವಿನ ಸಂಘರ್ಷವಾಗಿರುತ್ತದೆ. ಹಿಂದೆ ಜನರಿಗೆ ಧರ್ಮವು ಇಂದಿಗಿಂತಲೂ ಹೆಚ್ಚು ಮುಖ್ಯವಾಗಿತ್ತು. ಆದರೂ ಈ ಸಂಸ್ಕೃತಿಯಲ್ಲಿ ಯಾವುದೇ ಧರ್ವಧಾರಿತ ರಾಜಪ್ರಭುತ್ವಗಳು ಇರಲಿಲ್ಲ. ರಾಜನಿಗೆ ತನ್ನದೇ ಧರ್ಮವಿದ್ದರೂ, ಪ್ರಜೆಗಳಿಗೆ ತಮ್ಮದೇ ಆದ ಮಾರ್ಗವನ್ನು ಅನುಸರಿಸುವ ಸಂಪೂರ್ಣ ಸ್ವಾತಂತ್ರ್ಯವಿತ್ತು. ಜನರು ಧರ್ಮವನ್ನು ಸಂಘಟಿತ ವ್ಯವಸ್ಥೆಯಾಗಿ ನೋಡದ ಕಾರಣ ಯಾವುದೇ ಸಂಘರ್ಷವಿರಲಿಲ್ಲ. 

ಇಲ್ಲಿ ಸಂಘಟನೆ ಎಂಬುದು ಮತ್ತೊಬ್ಬರನ್ನು ಧಾರ್ವಿುಕವಾಗಿ ಗೆಲ್ಲುವುದಕ್ಕಾಗಿ ಇರಲಿಲ್ಲ. ಆಧ್ಯಾತ್ಮಿಕತೆಯನ್ನು ಎಲ್ಲರಿಗೂ ತಲುಪಿಸಲು ಮಾತ್ರ ಸೀಮಿತವಾಗಿತ್ತು. ರೈತರು ತಮ್ಮ ನೇಗಿಲನ್ನು ಪೂಜಿಸಿದರೆ, ಮೀನುಗಾರರು ತಮ್ಮ ದೋಣಿಯನ್ನು ಆರಾಧಿಸುತ್ತಿದ್ದರು. ಜನರು ತಮ್ಮ ಜೀವನಕ್ಕೆ ಹತ್ತಿರವಾದ ಯಾವುದೇ ರೂಪವನ್ನು ಆರಾಧಿಸಬಹುದಾಗಿತ್ತು ಮತ್ತು ಅದಕ್ಕೆ ಇಲ್ಲಿ ಪೂರ್ಣ ಸಮ್ಮತಿಯಿತ್ತು. ಮೂಲಭೂತವಾಗಿ, ಪೂರ್ವದ ದೇಶಗಳಲ್ಲಿ ಧರ್ಮ ಎಂದರೆ ಅದು ನಿಮ್ಮ ಬಗ್ಗೆ, ಅದು ನಿಮ್ಮ ಮುಕ್ತಿಯ ಕುರಿತಾಗಿತ್ತೇ ಹೊರತು ದೇವರ ಕುರಿತಲ್ಲ. ದೇವರು ಎನ್ನುವುದು ನಿಮ್ಮ ಪರಮ ಮುಕ್ತಿಯತ್ತ ಸಾಗಲು ನೀವು ಬಳಸಬಹುದಾದ ಅಥವಾ ಬಿಡಬಹುದಾದ ಒಂದು ಮೆಟ್ಟಿಲು ಮಾತ್ರ.

ಇಲ್ಲಿ ಕೆಲವರು ದೇವರನ್ನು ನಂಬಬಹುದು, ಇನ್ನು ಕೆಲವರು ನಂಬದಿರಲು ನಿರ್ಧರಿಸಬಹುದು. ಪ್ರತಿಯೊಬ್ಬರಿಗೂ ತಮ್ಮದೇ ಆದ ಪೂಜೆಯ ವಿಧಾನ ಮತ್ತು ಮುಕ್ತಿಯ ಮಾರ್ಗವನ್ನು ಆಯ್ಕೆ ಮಾಡಿಕೊಳ್ಳಬಹುದು. ಒಂದು ಕುಟುಂಬದಲ್ಲಿ ಐದು ಜನರಿದ್ದರೆ, ಐದೂ ಜನರು ತಮಗೆ ಇಷ್ಟ ಬಂದ ದೇವರನ್ನು ಪೂಜಿಸಬಹುದು ಅಥವಾ ಏನನ್ನೂ ಪೂಜಿಸದೆಯೂ ಇರಬಹುದು, ಆದರೂ ಅವರು ಉತ್ತಮ ಹಿಂದೂಗಳಾಗಿಯೇ ಇರಲು ಸಾಧ್ಯವಿದೆ. ಅಂದರೆ, ನಿಮ್ಮ ನಂಬಿಕೆಗಳು ಏನೇ ಇರಲಿ ಅಥವಾ ಇಲ್ಲದಿರಲಿ, ನೀವು ಹಿಂದೂ ಆಗಿರಬಹುದು.

ಸತ್ಯದ ಅನ್ವೇಷಣೆಯ ಸಂಸ್ಕೃತಿ ವಿಶ್ವದ ಇತರ ಭಾಗಗಳಲ್ಲಿ ಚಾಲ್ತಿಯಲ್ಲಿದ್ದ ಸಂಘಟಿತ ಧರ್ಮದ ವಿರುದ್ಧ ಯಾರಾದರೂ ಮಾತನಾಡಿದರೆ, ಮೊದಲು ಕೇಳಿಬರುತ್ತಿದ್ದ ಧ್ವನಿ ‘ಕೊಲ್ಲಿರಿ’ ಎಂಬುದಾಗಿತ್ತು. ಸಾಕ್ರಟೀಸ್, ಮನ್ಸೂರ್ ಅಥವಾ ಏಸುಕ್ರಿಸ್ತ - ಇವರೆಲ್ಲರೂ ಜಗತ್ತಿಗೆ ಪರಿಚಿತರಾದ ಪ್ರಮುಖರು. ಆದರೆ ಇತಿಹಾಸದಲ್ಲಿ ಇದೇ ಕಾರಣಕ್ಕಾಗಿ ಜಗತ್ತಿಗೆ ತಿಳಿಯದಂತೆಯೇ ಲಕ್ಷಾಂತರ ಜನರನ್ನು ಕೊಲ್ಲಲಾಗಿದೆ. ಏಸುಕ್ರಿಸ್ತನಿಗಿಂತ ಐದು ನೂರು ವರ್ಷಗಳ ಮುನ್ನವೇ, ಗೌತಮ ಬುದ್ಧ ಈ ನಾಡಿನಲ್ಲಿದ್ದ ಎಲ್ಲ ದೇವತೆಗಳನ್ನು ಹಾಸ್ಯ ಮಾಡಿದ್ದ. ‘ನೀವು ಹಾವು, ಮರ ಮತ್ತು ಹಸುಗಳನ್ನು ಪೂಜಿಸುತ್ತೀರಿ. ನಿಮಗೆ ದೇವರು ಎಂದರೆ ಏನೆಂದೇ ತಿಳಿದಿಲ್ಲ’ ಎಂದು ಬುದ್ಧ ಹೇಳಿದಾಗ, ಇಲ್ಲಿನ ಜನರು ಸಿಟ್ಟಾಗಲಿಲ್ಲ. ಬದಲಿಗೆ, ‘ನಮಗೂ ಗೊತ್ತು ಇರುವುದು ಒಂದೇ ದೇವರೆಂದು, ಆದರೆ ನಾವು ಈ ವೈವಿಧ್ಯತೆಯನ್ನು ಆನಂದಿಸುತ್ತಿದ್ದೇವೆ’ ಎಂದರು. 

ಬುದ್ಧ ಇನ್ನೂ ಮುಂದುವರಿದು ‘ದೇವರೇ ಇಲ್ಲ’ ಎಂದಾಗ, ಜನರು ಮರುಮಾತನಾಡದೆ ‘ಹೌದು, ನಮ್ಮ ಉಪನಿಷತ್ತುಗಳೂ ಸಹ ದೇವರಿಲ್ಲ, ಆದರೆ ಆತ್ಮ ಮತ್ತು ವಿಶ್ವವ್ಯಾಪಿ ಆತ್ಮವಾದ ಪರಮಾತ್ಮ ಮಾತ್ರ ಇರುವುದು ಎನ್ನುತ್ತವೆ’ ಎಂದರು. ಆಗ ಬುದ್ಧ, ‘ಇಲ್ಲಿ ಆತ್ಮವೂ ಇಲ್ಲ, ಪರಮಾತ್ಮವೂ ಇಲ್ಲ. ನೀವೆಲ್ಲರೂ ಅನಾತ್ಮರು’ ಎಂದನು. ಅಂದರೆ ಬುದ್ಧ ‘ನೀವು ಆತ್ಮರಹಿತರು’ ಎಂದು ಹೇಳುತ್ತಿದ್ದ. ಈ ರೀತಿಯಾಗಿ ಬುದ್ಧ ಅಂದು ಚಾಲ್ತಿಯಲ್ಲಿದ್ದ ಪ್ರತಿಯೊಂದು ನಂಬಿಕೆಯನ್ನು ವಿರೋಧಿಸಿದರೂ, ಯಾರೂ ಅವನ ಮೇಲೆ ಕಲ್ಲು ಎಸೆಯುವ, ವಿಷ ಉಣಿಸುವ ಅಥವಾ ಶಿಲುಬೆಗೇರಿಸುವ ಯೋಚನೆ ಮಾಡಲಿಲ್ಲ. ಏಕೆಂದರೆ ಇಲ್ಲಿನ ಮುಖ್ಯ ಗುರಿ ಸತ್ಯದ ಅನ್ವೇಷಣೆಯಾಗಿತ್ತು. 

ಜನರು ಒಟ್ಟಿಗೆ ಕುಳಿತು ತಮಗೆ ತಿಳಿದಿರುವುದು ಸರಿಯೋ ಅಥವಾ ಎದುರಿಗಿರುವವರಿಗೆ ತಿಳಿದಿರುವುದು ಸರಿಯೋ ಎಂದು ರ್ಚಚಿಸುತ್ತಿದ್ದರು. ಜನರು ಸತ್ಯವನ್ನು ತಿಳಿಯಲು ಹಂಬಲಿಸುತ್ತಿದ್ದರೇ ಹೊರತು, ತಮ್ಮದೇ ಆದ ಒಂದು ನಂಬಿಕೆಯನ್ನು ಸರಿ ಎಂದು ಸಾಬೀತುಪಡಿಸುವ ಪ್ರಯತ್ನದಲ್ಲಿರಲಿಲ್ಲ. ಏಕೆಂದರೆ ಹಿಂದೂ ಜೀವನ ವಿಧಾನದಲ್ಲಿ ಯಾವುದೇ ಕಟ್ಟುನಿಟ್ಟಾದ ನಂಬಿಕೆಯ ಚೌಕಟ್ಟು ಇಲ್ಲವೇ ಇಲ್ಲ. ತಮಗೆ ತಿಳಿದಿಲ್ಲವೆಂದು ಅರಿತುಕೊಳ್ಳುವುದು, ಯಾವುದೇ ಅನ್ವೇಷಣೆಯ ಮೂಲ ಎಂಬುದನ್ನು ಯಾರೂ ಮರೆಯಬಾರದು. ಜನರಿಗೆ ತಮ್ಮ ಅಸ್ತಿತ್ವದ ಸ್ವರೂಪವೇ ತಿಳಿದಿರುವುದಿಲ್ಲ. ಕೇವಲ ಸಾಂಪ್ರದಾಯಿಕವಾಗಿ ಅನುಕೂಲಕರವಾದ ಯಾವುದೋ ನಂಬಿಕೆಗೆ ಶರಣಾಗುವ ಬದಲು, ಇಡೀ ಸಮಾಜವೇ ತನ್ನ ಸತ್ಯವನ್ನು ತಾನೇ ಕಂಡುಕೊಳ್ಳಲು ಧೈರ್ಯ ಮತ್ತು ಬದ್ಧತೆಯನ್ನು ಪ್ರದರ್ಶಿಸಿತು - ಇದೇ ‘ಭಾರತ’ ಎಂದು ಕರೆಯಲ್ಪಡುವ ರಾಷ್ಟ್ರದ ಅಡಿಪಾಯ.

ಭಾರತದ ಈ ಮೂಲಭೂತ ತತ್ವ, ಜ್ಞಾನದ ಪರಂಪರೆ ಮತ್ತು ಜೀವನದ ಮುಕ್ತ ಅನ್ವೇಷಣೆಯನ್ನು ಉಳಿಸಿ, ಕಾಪಾಡಿ, ಪೋಷಿಸುವುದು ಇಡೀ ಮಾನವಕುಲಕ್ಕೆ ಕೊಡುವ ನಿಜವಾದ ಕೊಡುಗೆಯಾಗಿದೆ. ಇಂದಿನ ತಲೆಮಾರಿನವರಾಗಿ ಇದನ್ನು ನೆರವೇರಿಸುವುದು ನಮ್ಮ ಮೇಲಿರುವ ಪ್ರಮುಖ ಜವಾಬ್ದಾರಿಯಾಗಿದೆ. ಈ ನೆಲದ ಋಷಿಗಳು ಅನ್ವೇಷಿಸಿ, ಜಗತ್ತಿಗೆ ಸಾರಿದ ಈ ಅಪಾರ ಸಾಧ್ಯತೆಗಳು ಧಾರ್ವಿುಕ ಅಂಧಾಭಿಮಾನ ಮತ್ತು ಅರ್ಥಹೀನ ಸಾಧಾರಣ ಮತಸಿದ್ಧಾಂತಗಳ ಮಧ್ಯೆ ಕಳೆದುಹೋಗದಿರಲಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net