ದೇಹ-ಮನಸ್ಸನ್ನು ಸ್ಥಿರಗೊಳಿಸುವ ವಿಧಾನವೇ ನಿಶ್ಚಲತೆ

ದೇಹ-ಮನಸ್ಸನ್ನು ಸ್ಥಿರಗೊಳಿಸುವ ವಿಧಾನವೇ ನಿಶ್ಚಲತೆ
ದೇಹ-ಮನಸ್ಸನ್ನು ಸ್ಥಿರಗೊಳಿಸುವ ವಿಧಾನವೇ ನಿಶ್ಚಲತೆ
Published on
(ಸದ್ಗುರು ಅವರು ಯೋಗಿ, ದಾರ್ಶನಿಕ, ಆಧ್ಯಾತ್ಮಿಕ ನಾಯಕ.
www.isha.sadhguru.org)
ಸ್ಥಿರವಾಗಿ ಕುಳಿತುಕೊಳ್ಳಲು ಖಂಡಿತವಾಗಿಯೂ ನಿಮ್ಮ ದೇಹ ಸೂಕ್ತವಾಗಿ ಸಿದ್ಧಗೊಂಡಿರಬೇಕು. ಆ ನಿಟ್ಟಿನಲ್ಲಿ ಇರುವುದೇ ಹಠಯೋಗ. ದೇಹ ಉತ್ತಮ ಸ್ಥಿತಿಯಲ್ಲಿದ್ದರೂ, ಕೆಲವು ಇತರ ಆಯಾಮಗಳನ್ನು ನೆಲೆಗೊಳಿಸದಿದ್ದರೆ ನಿಶ್ಚಲರಾಗಿ ಕುಳಿತುಕೊಳ್ಳಲು ಸಾಧ್ಯವಾಗುವುದಿಲ್ಲ.

ಯೋಗದಲ್ಲಿ 8 ಅಂಗಗಳಿವೆ: ಯಮ, ನಿಯಮ, ಆಸನ, ಪ್ರಾಣಾಯಾಮ, ಪ್ರತ್ಯಾಹಾರ, ಧಾರಣ, ಧ್ಯಾನ ಮತ್ತು ಸಮಾಧಿ. ಇವು ಮೆಟ್ಟಿಲುಗಳಲ್ಲ, ಅಂಗಗಳು. ಉದಾಹರಣೆಗೆ, ಕೈಕಾಲುಗಳಲ್ಲಿ ಯಾವ ಅಂಗವನ್ನು ಮೊದಲು ಚಲಿಸಬೇಕು ಎಂಬುದು ನಿಮ್ಮ ಅಗತ್ಯಕ್ಕೆ ಬಿಟ್ಟ ನಿರ್ಧಾರ. ಯಾವ ಅಂಗವನ್ನು ಮೊದಲು ಚಲಿಸಬೇಕು ಎಂಬ ನಿಯಮವಿದೆಯೇ? ಭಾರತೀಯರಾಗಿರುವುದರಿಂದ, ಯಾವಾಗಲೂ ಬಲಗಾಲನ್ನೇ ಮೊದಲು ಇಡಬೇಕೆಂದು ತಿಳಿಯಬೇಡಿ. ಯಾವ ಕಾಲು ಮೊದಲು ಇಡಬೇಕೆಂಬುದು ನಾವು ಮಾಡುವ ಕೆಲಸದ ಸ್ವರೂಪವನ್ನು ಅವಲಂಬಿಸಿರುತ್ತದೆ. ಹಾಗೆಯೇ, ನಾವು ಪ್ರಸ್ತುತ ಯಾವ ಸ್ಥಿತಿಯಲ್ಲಿದ್ದೇವೆ ಎಂಬುದನ್ನು ಆಧರಿಸಿರುತ್ತದೆ.
ಇತಿಹಾಸದಲ್ಲಿ ಬಹಳ ದೀರ್ಘಕಾಲದವರೆಗೆ, ದೇಹವೇ ಅತ್ಯಂತ ಬಲಿಷ್ಠ ಅಂಶವೂ, ಅತಿ ದೊಡ್ಡ ಅಡಚಣೆಯೂ ಆಗಿತ್ತು. ಹಾಗಾಗಿಯೇ ಜನರನ್ನು ಮೊದಲು ಹಠಯೋಗಕ್ಕೆ ಒಳಪಡಿಸಲಾಗುತ್ತಿತ್ತು. ನೂರಾರು ವರ್ಷಗಳ ಹಿಂದೆ, ಶೇ. 5-10ರಷ್ಟು ಜನರಿಗೆ ಮಾತ್ರ ಮಾನಸಿಕ ಸಮಸ್ಯೆಗಳಿದ್ದವು. ಉಳಿದವರಿಗೆ ದೈಹಿಕ ಸಮಸ್ಯೆಗಳಿದ್ದವು. ಇಂದಿಗೂ ಹಳ್ಳಿಗಳಲ್ಲಿ ಹೆಚ್ಚಿನ ಜನರಿಗೆ ದೈಹಿಕ ಸಮಸ್ಯೆಗಳಿವೆಯೇ ಹೊರತು ಮಾನಸಿಕ ಸಮಸ್ಯೆಗಳಲ್ಲ. ಆದರೆ ಕಳೆದ ಕೆಲವು ತಲೆಮಾರುಗಳಲ್ಲಿ ದೈಹಿಕ ಸಮಸ್ಯೆಗಳಿಗಿಂತ ಮಾನಸಿಕ ಸಮಸ್ಯೆಗಳೇ ಹೆಚ್ಚಾಗಿವೆ, ಏಕೆಂದರೆ ಜನ ತಮ್ಮ ದೇಹಕ್ಕಿಂತ ಮನಸ್ಸನ್ನು ಹೆಚ್ಚಾಗಿ ಬಳಸುತ್ತಿದ್ದಾರೆ. ಮಾನವಕುಲದಲ್ಲಿ ಇದೊಂದು ದೊಡ್ಡ ಬದಲಾವಣೆ. ನೂರಿನ್ನೂರು ವರ್ಷಗಳ ಹಿಂದಿನವರೆಗೂ, ಮನುಷ್ಯರು ಮನಸ್ಸಿಗಿಂತ ಹೆಚ್ಚಾಗಿ ದೇಹವನ್ನು ಬಳಸುತ್ತಿದ್ದರು. ನಾನು ಸಮಕಾಲೀನ ಅನುಭಾವಿ. ಆದ್ದರಿಂದ ನಮ್ಮಲ್ಲಿ ಈಗಿನ ಜನರ ಸ್ಥಿತಿ ಗಮನಿಸಿ ಸಾಮಾನ್ಯವಾಗಿ ಕ್ರಿಯೆಗಳು ಮತ್ತು ಧ್ಯಾನಗಳೊಂದಿಗೆ ಆರಂಭಿಸುತ್ತೇವೆ. ಇವು ಮುಖ್ಯವಾಗಿ ಶಕ್ತಿ ಮತ್ತು ಮನಸ್ಸಿನ ಮಟ್ಟದಲ್ಲಿ ಕೆಲಸ ಮಾಡುತ್ತವೆ; ಆನಂತರ ಹಠಯೋಗಕ್ಕೆ ಹೋಗುತ್ತೇವೆ.
ನಿಶ್ಚಲವಾಗಿ ಕುಳಿತುಕೊಳ್ಳಬೇಕೆಂದರೆ, ಕೇವಲ ದೇಹದ ಕಾಳಜಿ ವಹಿಸಿದರೆ ಸಾಲದು. ಮನಸ್ಸಿನ ಮೇಲೆಯೂ ಕಾಳಜಿ ವಹಿಸಬೇಕಾಗುತ್ತದೆ. ವಿಶೇಷವಾಗಿ ಈ ತಲೆಮಾರಿನ ಜನರು ಮನಸ್ಸು, ಭಾವನೆಗಳು, ದೇಹ ಮತ್ತು ಶಕ್ತಿ ಹೀಗೆ ಇಡೀ ವ್ಯವಸ್ಥೆಯನ್ನು ಸ್ಥಿರಗೊಳಿಸುವ ಕಡೆಗೆ ಗಮನ ಹರಿಸುವುದು ಮುಖ್ಯವಾಗಿದೆ. ಈಗಿನವರು ಹಿಂದಿನವರಿಗಿಂತ ಬುದ್ಧಿವಂತರು ಎಂಬುದು ತಪ್ಪು ಕಲ್ಪನೆ. ಅಚಾನಕ್ಕಾಗಿ ಬಳಸುವುದರಿಂದ ಇಂದು ಜನರ ಮನಸ್ಸು ನಿಯಂತ್ರಣ ತಪ್ಪಿದೆ ಅಷ್ಟೇ.
ಈಗಿನ ಶಿಕ್ಷಣ ವ್ಯವಸ್ಥೆಯು ಗೊಂದಲದ ಮನಸ್ಸುಗಳಿಗೆ ದಾರಿ ಮಾಡಿಕೊಡುತ್ತದೆ. ಮಗು ಕಾವ್ಯವನ್ನು ಓದುತ್ತ ಗಣಿತದ ಕಡೆಗೆ ಹೋಗುತ್ತದೆ. ಇವೆರಡಕ್ಕೂ ಸಂಬಂಧವಿದೆ, ಆದರೆ ಆ ಸಂಬಂಧವನ್ನು ಜೋಡಿಸಿ ಹೇಳಿಕೊಡಲು ಯಾರೂ ಇಲ್ಲ. ಗಣಿತದಿಂದ ಸಂಗೀತಕ್ಕೆ, ಸಂಗೀತದಿಂದ ರಸಾಯನಶಾಸ್ತ್ರಕ್ಕೆ ಹೋಗುವುದಕ್ಕೂ ಸಂಬಂಧವಿದೆ, ಆದರೆ ಆ ಸಂಬಂಧವನ್ನು ತೋರಿಸಿಕೊಡಲು ಯಾರೂ ಇಲ್ಲ. ಎಲ್ಲವನ್ನೂ ಬಿಡಿಬಿಡಿಯಾಗಿ ಹೇಳಿಕೊಡಲಾಗುತ್ತಿದೆ; ತಿಳಿಯಬೇಕೆಂಬ ಹಂಬಲದಿಂದ ಯಾರೂ ಓದುತ್ತಿಲ್ಲ. ಪರೀಕ್ಷೆ ಪಾಸು ಮಾಡಲು, ಕೆಲಸ ಗಿಟ್ಟಿಸಿಕೊಳ್ಳಲು ಓದುತ್ತಿದ್ದಾರೆ. ಸುಶಿಕ್ಷಿತರಾಗಲು ಇದು ವಿನಾಶಕಾರಿ ಮಾರ್ಗ, ಬದುಕಲು ತೀರಾ ದಯನೀಯವಾದ ದಾರಿ. ಇದು ಎಷ್ಟೇ ಅರ್ಥಹೀನವಾಗಿದ್ದರೂ, ಪ್ರಪಂಚದ ಬಹುಪಾಲು ಜನ ಹೀಗೆಯೇ ಬದುಕುತ್ತಿದ್ದಾರೆ.
ಇತ್ತೀಚೆಗೆ, ನಾನು ಒಂದು ಪ್ರತಿಷ್ಠಿತ ಸಂಜೆ ಕೂಟದಲ್ಲಿದ್ದೆ, ಅಲ್ಲೊಂದು ಮೂಲೆಯಲ್ಲಿ ಮದ್ಯ ನೀಡಲಾಗುತ್ತಿತ್ತು. ಕಾರ್ಯಕ್ರಮದ ಆಯೋಜಕರು, "ಸದ್ಗುರುಗಳು ಇಲ್ಲಿದ್ದಾರೆ, ಮದ್ಯ ಸರಬರಾಜು ಮಾಡುವುದು ಬೇಡ" ಎಂದರು. ಆದರೆ ಕೆಲವರಿಗೆ ಅದರ ಮೇಲಿನ ಆಸೆಯನ್ನು ಹತ್ತಿಕ್ಕಲು ಸಾಧ್ಯವಾಗಲಿಲ್ಲ. ಅಲ್ಲಿಗೆ ಬಂದ ಒಬ್ಬ ಸಚಿವರು, "ಸದ್ಗುರುಗಳು ಪ್ರಪಂಚ ಜ್ಞಾನವಿರುವವರು, ಅವರು ಇದನ್ನೆಲ್ಲಾ ತಪ್ಪು ತಿಳಿಯುವುದಿಲ್ಲ" ಎಂದರು. ಅದಕ್ಕೆ ನಾನು, "ಇಡೀ ಪ್ರಪಂಚ ಕುಡಿತದಲ್ಲಿ ಮಗ್ನವಾದದ್ದು ಯಾವಾಗ?" ಎಂದು ಕೇಳಿದೆ. ಇಂದು ಪರಿಸ್ಥಿತಿ ಹೇಗಾಗಿದೆ ಎಂದರೆ, ನೀವು ಪ್ರಪಂಚದ ಜತೆ ಬೆರೆಯುವರಾಗಿದ್ದರೆ ಕಡ್ಡಾಯವಾಗಿ ಕುಡಿಯಲೇಬೇಕು, ಇಲ್ಲದಿದ್ದರೆ ನೀವು ಈ ಪ್ರಪಂಚಕ್ಕೆ ಸೇರಿದವರೇ ಅಲ್ಲ ಎನ್ನುವಂತೆ ಬಿಂಬಿಸಲಾಗುತ್ತಿದೆ.
ಜನರ ಮನಸ್ಸನ್ನು ತೀರಾ ತಪ್ಪು ಹಾದಿಯಲ್ಲಿ ಬೆಳೆಸುತ್ತಿರುವಾಗ ಅವರು ನೆಮ್ಮದಿ, ಆನಂದದಿಂದ ಇರುತ್ತಾರೆಂದು ನಾವು ಹೇಗೆ ನಿರೀಕ್ಷಿಸಲು ಸಾಧ್ಯ? ಸರಿಯಾದ ಕೆಲಸಗಳನ್ನು ಮಾಡದ ಹೊರತು, ಸರಿಯಾದದ್ದು ಸಂಭವಿಸುವುದಿಲ್ಲ. ಸುಮ್ಮನೆ ಕುಳಿತಾಗಲೂ ದೇಹ ನಿರಾಳವಾಗಿದೆ ಅನಿಸುತ್ತಿಲ್ಲ ಎಂದರೆ, ದೇಹದಲ್ಲಿ ಏನೋ ಸಮಸ್ಯೆಯಿದೆ ಎಂದೇ ಅರ್ಥ. ಅಮೆರಿಕದ ವೈದ್ಯಕೀಯ ಪಠ್ಯಪುಸ್ತಕಗಳ ಪ್ರಕಾರ, ವಾರಕ್ಕೆರಡು ಬಾರಿ ಶೌಚಕ್ಕೆ ಹೋಗುವುದು ಸಾಮಾನ್ಯ ಎಂದು ತಿಳಿದು ನನಗೆ ಆಶ್ಚರ್ಯವಾಯಿತು. ಯೋಗ ಸಂಸ್ಕೃತಿಯ ಪ್ರಕಾರ, ದಿನಕ್ಕೆರಡು ಬಾರಿ ಶೌಚಕ್ಕೆ ಹೋಗಬೇಕು, ಮಲವು ದೇಹದೊಳಗೆ ಉಳಿಯಬಾರದು. ಬೆಳಗ್ಗೆ ಎದ್ದ ತಕ್ಷಣ ಮೊದಲು ಮಾಡಬೇಕಾದ ಕೆಲಸವೇ ಇದು. ವಾರಕ್ಕೆರಡು ಬಾರಿ ಎಂದರೆ ಸರಾಸರಿ 3 ದಿನ ಅದನ್ನು ದೇಹದಲ್ಲೇ ಇಟ್ಟುಕೊಳ್ಳುತ್ತೀರಿ ಎಂದರ್ಥ; ಹೀಗಿರುವಾಗ ನಿಮ್ಮ ಮನಸ್ಸು ಚೆನ್ನಾಗಿರಲು ಸಾಧ್ಯವೇ? ದೊಡ್ಡ ಕರುಳು ಮತ್ತು ಮನಸ್ಸು ನೇರವಾಗಿ ಕನೆಕ್ಟ್ ಆಗಿವೆ. ದೊಡ್ಡ ಕರುಳು ನಮ್ಮ ಶಕ್ತಿ ವ್ಯವಸ್ಥೆಯ ಆಧಾರವಾಗಿರುವ "ಮೂಲಾಧಾರ ಚಕ್ರ"ದ ಬಳಿ ಇರುತ್ತದೆ. ಮೂಲಾಧಾರದಲ್ಲಿ ಏನೇ ನಡೆದರೂ, ಅದು ಇಡೀ ವ್ಯವಸ್ಥೆಯ ಮೇಲೆ, ನಿಮ್ಮ ಮನಸ್ಸಿನ ಮೇಲೆ ಪ್ರಭಾವ ಬೀರುತ್ತದೆ. ಇಂದಿನ ವಿಜ್ಞಾನಿಗಳು ಇಂತಹ ತೀರ್ಮಾನಗಳಿಗೆ ಬರುತ್ತಿದ್ದಾರೆ, ಏಕೆಂದರೆ ಅವರು ಮನುಷ್ಯನನ್ನು ಮೈಕ್ರೋಸ್ಕೋಪ್‌ನಡಿ ಬಿಡಿಬಿಡಿಯಾಗಿ ಅಧ್ಯಯನ ಮಾಡುತ್ತಾರೆ. ಪ್ರತಿಯೊಂದು ಸಣ್ಣ ಭಾಗದ ಬಗ್ಗೆಯೂ ಬೇರೆ ಬೇರೆ ತೀರ್ಮಾನಕ್ಕೆ ಬರುತ್ತಾರೆ. ಸಮಗ್ರ ಆಂತರಿಕ ಪರಿಸ್ಥಿತಿಯನ್ನು ಹೊರಗಿನಿಂದ ಗ್ರಹಿಸಲು ಸಾಧ್ಯವಿಲ್ಲ, ಒಳಗಿನಿಂದ ಮಾತ್ರ ಅರಿಯಬಹುದು. ಸಾಧನೆ ಮಾಡಿ, ಆಹಾರ ಕ್ರಮ ಬದಲಾಯಿಸಿ. ಹೆಚ್ಚು ನೈಸರ್ಗಿಕ ಆಹಾರ ಅಳವಡಿಸಿಕೊಳ್ಳಿ; ಒಂದೆರಡು ತಿಂಗಳುಗಳಲ್ಲಿ ನೀವು ನಿಶ್ಚಲರಾಗಿ ಕುಳಿತುಕೊಳ್ಳುವುದನ್ನು ನೀವೇ ಕಾಣುತ್ತೀರಿ.

ಧ್ಯಾನಲಿಂಗದ ಹಿಂದಿರುವ ವಿಜ್ಞಾನ

ಈ ತಿಂಗಳ 24ರಂದು ಧ್ಯಾನಲಿಂಗವು ಪ್ರಾಣಪ್ರತಿಷ್ಠಾಪನೆ ಪೂರ್ಣಗೊಂಡ ದಿನದ ವಾರ್ಷಿಕೋತ್ಸವ ಆಚರಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ಧ್ಯಾನಲಿಂಗದ ಹಿಂದಿರುವ ವಿಜ್ಞಾನದ ಬಗ್ಗೆ ತಿಳಿದುಕೊಳ್ಳೋಣ. ಯೋಗ ಪರಂಪರೆಯಲ್ಲಿ, ಶಿವ-ಶಕ್ತಿ ಎಂದು ಕರೆಯುವ ಸಂಪೂರ್ಣ ಅಂಶವು, ಜೀವನದ ದ್ವಂದ್ವ ಸ್ವಭಾವದ ಕುರಿತಾಗಿದೆ. ಇಂದ್ರಿಯ ಗ್ರಹಿಕೆಯ ಮೂಲಕ ಜೀವನವನ್ನು ಅನುಭವಿಸಿದಾಗ, ಅದರ ಅನುಭವವು ನಿರ್ದಿಷ್ಟವಾದ ದ್ವಂದ್ವದಲ್ಲಿರುತ್ತದೆ. ಇದೇ ದ್ವಂದ್ವವನ್ನು ಶಿವ-ಶಕ್ತಿ ಅಥವಾ ಅರ್ಧನಾರೀಶ್ವರ ಎಂದು ಸಾಕಾರಗೊಳಿಸಲಾಗಿದೆ. ಇದುವೇ ಯೋಗದಲ್ಲಿ ಇಡಾ, ಪಿಂಗಳಾ. ಪೂರ್ವದ ಸಂಸ್ಕೃತಿಗಳಲ್ಲಿ ಯಿನ್, ಯಾಂಗ್. ಇದನ್ನು ಸ್ತ್ರೀ ತತ್ವ, ಪುರುಷ ತತ್ವ ಅಥವಾ ಅಂತರ್ದೃಷ್ಟಿಯ ಆಯಾಮ, ತಾರ್ಕಿಕ ಆಯಾಮ ಎನ್ನಬಹುದು. ಮನುಷ್ಯ tactics ಮತ್ತು ಪ್ರಪಂಚ ಅಸ್ತಿತ್ವದಲ್ಲಿರುವುದು ಈ ಎರಡು ಆಯಾಮಗಳಲ್ಲಿಯೇ. 
ಈ ದ್ವಂದ್ವ ಆಧರಿಸಿಯೇ ಜೀವನ ಸೃಷ್ಟಿಯಾಗಿದೆ. ದ್ವಂದ್ವಗಳಿಲ್ಲದಿದ್ದರೆ ಜೀವನ ಅಸ್ತಿತ್ವದಲ್ಲಿರುವುದಿಲ್ಲ. ಆರಂಭದಲ್ಲಿ ಎಲ್ಲವೂ ಮೂಲಸ್ವರೂಪದಲ್ಲಿದ್ದವು - ಅಲ್ಲಿ ದ್ವಂದ್ವವಿರಲಿಲ್ಲ. ಸೃಷ್ಟಿಯು ಸಂಭವಿಸಿದ ನಂತರ ದ್ವಂದ್ವ ಉಂಟಾಯಿತು. ಇದನ್ನು ಅನುಭವಿಸಲು, ಇದಕ್ಕೆ ನಿಮ್ಮನ್ನು ಸೀಮಿತಗೊಳಿಸಲೆಂದೇ ಇಂದ್ರಿಯಗಳಿರುವುವು. ನೋಟ, ವಾಸನೆ, ರುಚಿ, ಶ್ರವಣ, ಸ್ಪರ್ಶ - ಹೀಗೆ ಇಂದ್ರಿಯಗಳ ಮೂಲಕವೇ ಎಲ್ಲವನ್ನೂ ಅನುಭವಿಸುತ್ತೀರಿ. ಇಂದ್ರಿಯಗಳು ದ್ವಂದ್ವದ ಪ್ರಕ್ರಿಯೆಯನ್ನು ಅಭಿವ್ಯಕ್ತಗೊಳಿಸುತ್ತವೆ, ಹೆಚ್ಚಿಸುತ್ತವೆ. ಬೆಳಕು-ಕತ್ತಲೆ, ಒಳ್ಳೆಯದು-ಕೆಟ್ಟದ್ದು, ಹಿತಕರ-ಅಹಿತಕರ ಎಂಬ ಭಾವನೆಯೇ ಎಲ್ಲವೂ ಹೆಚ್ಚು ಸುಸ್ಥಿರವಾಗಿ ಕಾಣುವಂತೆ ಮಾಡುತ್ತದೆ. ಇಂದ್ರಿಯಗಳ ಗ್ರಹಿಕೆಯಲ್ಲಿ ಹೆಚ್ಚು ತೊಡಗಿಸಿಕೊಂಡಂತೆ, ಜೀವನದ ಬಗ್ಗೆ ಯೋಚಿಸಿದಂತೆ ಮತ್ತು ಅನುಭವಿಸಿದಂತೆ, ದ್ವಂದ್ವ ಇನ್ನೂ ಆಳವಾಗುತ್ತ ಹೋಗುತ್ತದೆ.
ಸುಖ-ದುಃಖದ ಮೂಲ: ದ್ವಂದ್ವವಿಲ್ಲದೆ ಸೃಷ್ಟಿಯೇ ಇಲ್ಲ. ಈ ವಿರುದ್ಧಗಳ ಕಾರಣದಿಂದಾಗಿಯೇ ಸೃಷ್ಟಿ ಸಂಭವಿಸಿದೆ. ಆದರೆ ದ್ವಂದ್ವದೊಳಗೆ ಸಿಕ್ಕಿಹಾಕಿಕೊಳ್ಳುವುದೇ ಸಮಸ್ಯೆ. ದ್ವಂದ್ವಕ್ಕೆ ಸೀಮಿತರಾದವರು ಅದಕ್ಕೆ ಅತೀತವಾಗಿರುವುದನ್ನು ತಿಳಿಯಲಾರರು. ಇದು ಜೀವನದಲ್ಲಿ ಒಂದು ದೊಡ್ಡ ಮಿತಿ. ದ್ವಂದ್ವವೇ ಜಗತ್ತಿನ ಎಲ್ಲ ಸುಖಗಳ ಮೂಲ. ವಿರುದ್ಧಗಳಿಲ್ಲದಿದ್ದರೆ ಸುಖವೂ ಇರುತ್ತಿರಲಿಲ್ಲ. ಹಾಗಿದ್ದರೂ, ಅದೇ ದ್ವಂದ್ವವೇ ಜಗತ್ತಿನ ಎಲ್ಲ ದುಃಖಗಳಿಗೂ ಮೂಲ. ಈ ವಿರುದ್ಧಗಳಿಂದಾಗಿಯೇ ಜನರು ನರಳುತ್ತಾರೆ. ಜೀವನದ ಈ ಸುಖ-ದುಃಖದ ಅನುಭವದಲ್ಲಿ ಸಿಕ್ಕಿಬಿದ್ದು, ಜನರು ವಿವೇಕಿಗಳಾಗುವ ಬದಲು, ನೋವಿಗೊಳಗಾಗುತ್ತಾರೆ. ದ್ವಂದ್ವವನ್ನು ನಿಭಾಯಿಸಲು ಸಮರ್ಥರಾಗಿರುವುದಿಲ್ಲ ಅಥವಾ ಅದನ್ನು ಮೀರಿ ಹೋಗಲು ಸಾಧ್ಯವಾಗುವುದಿಲ್ಲ.
ಮನುಷ್ಯನು ಇಂದ್ರಿಯ ಗ್ರಹಿಕೆಗಳಿಗೆ ಸೀಮಿತಗೊಂಡಾಗ, ಈ ದ್ವಂದ್ವಕ್ಕೆ ಬದ್ಧನಾಗಿರುತ್ತಾನೆ. ಇಂದ್ರಿಯಗಳು ಸ್ವಾತಂತ್ರ್ಯದೆಡೆಗಿರುವ ಸಾಧ್ಯತೆಯಂತೆ ತೋರುತ್ತವೆ. ಉದಾಹರಣೆಗೆ ಕಣ್ಣುಗಳು, ದೃಷ್ಟಿ ನಿಮ್ಮ ಸ್ವಾತಂತ್ರ್ಯವೆಂದು ತೋರುತ್ತದೆ. ಕಣ್ಣುಗಳಿಲ್ಲದಿದ್ದರೆ ಹೊರಗಿನ ಅನುಭವವಿರುವುದಿಲ್ಲ, ಆದರೆ ಕಣ್ಣು ನಿಮ್ಮನ್ನು ಹಲವು ರೀತಿಯಲ್ಲಿ ಮಿತಿಯಲ್ಲಿರಿಸುತ್ತದೆ. ಕಣ್ಣು ದೇಹದ ಕಿಟಕಿಯಂತೆ - ಅದರ ಮೂಲಕ ಹೊರಗೆ ನೋಡಬಹುದು. ಅದು ದೊಡ್ಡ ಸಾಧ್ಯತೆಯಂತೆ ತೋರುತ್ತದೆ, ಆದರೆ ಅದೇ ನಿಮಗೆ ಮಿತಿಯೂ ಹೌದು. ಈ ಮಿತಿಯನ್ನು ಇಲ್ಲವಾಗಿಸಿದರೆ, ಆಗ ಕಣ್ಣುಗಳು ನೋಡುವುದಲ್ಲ, ನೋಡುವುದು ನೀವೇ ಎಂದು ಗಮನಿಸುತ್ತೀರಿ.
ಜೀವನ ಹೇಗಿದೆಯೋ ಹಾಗೆ ಅನುಭವಿಸಿ: ಧ್ಯಾನಲಿಂಗದ ಪ್ರಕ್ರಿಯೆ ಅಥವಾ ವಿಜ್ಞಾನವು ಜೀವನದ ದ್ವಂದ್ವದ ಹರ್ಷೋಲ್ಲಾಸವನ್ನು ನೆಲೆಗೊಳಿಸುವ ಸಾಧನ. ಇಡಾ, ಪಿಂಗಳ ನಾಡಿಗಳ ಮೂಲಕ, 7 ಚಕ್ರಗಳ ಮೂಲಕ ಮತ್ತು ಅಭಿವ್ಯಕ್ತಿ-ಅನುಭವದ ವ್ಯಾಪಕ ಶ್ರೇಣಿಯ ಮೂಲಕ ಜೀವನ ಸಂಭವಿಸಿದೆ. ಈ ದ್ವಂದ್ವ, ಏಳು ಚಕ್ರಗಳು ಅಥವಾ ಜೀವನದ ಏಳು ಆಯಾಮಗಳಿಂದಾಗಿಯೇ ಜೀವನದ ಹಲವು ರೂಪಗಳು, ಹಂತಗಳು ಮತ್ತು ಅನುಭವಿಸುವ ಮಾರ್ಗಗಳು ಪ್ರಪಂಚದಲ್ಲಿವೆ. ಧ್ಯಾನಲಿಂಗವು ಈ ಎಲ್ಲ ಹಂತಗಳಲ್ಲಿ ಅಭಿವ್ಯಕ್ತಗೊಂಡಿದೆ, ಆದರೆ ಅದರ ಉದ್ದೇಶ ಒಬ್ಬ ವ್ಯಕ್ತಿಯನ್ನು ಈ ದ್ವಂದ್ವದಿಂದಾಚೆಗೆ ಕರೆದೊಯ್ಯಲು ಸಹಾಯ ಮಾಡುವುದು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net