ವೈಯಕ್ತಿಕ ಪ್ರೀತಿಗಿಂತ ರಾಷ್ಟ್ರಧರ್ಮವೇ ಮಿಗಿಲು

ವೈಯಕ್ತಿಕ ಪ್ರೀತಿಗಿಂತ ರಾಷ್ಟ್ರಧರ್ಮವೇ ಮಿಗಿಲು
ವೈಯಕ್ತಿಕ ಪ್ರೀತಿಗಿಂತ ರಾಷ್ಟ್ರಧರ್ಮವೇ ಮಿಗಿಲು
Published on
(ಸದ್ಗುರು ಅವರು ಯೋಗಿ, ದಾರ್ಶನಿಕ, ಆಧ್ಯಾತ್ಮಿಕ ನಾಯಕ.www.isha.sadhguru.org)
ಇಪ್ಪತ್ತನೇ ಶತಮಾನದ ಆರಂಭದಲ್ಲಿ ಭಾರತದ ಸ್ವಾತಂತ್ರ್ಯ ಸಂಗ್ರಾಮ ನಡೆಯುತ್ತಿದ್ದಾಗಲೂ, ಮಹಾತ್ಮ ಗಾಂಧಿ ಅವರು ರಾಮರಾಜ್ಯವನ್ನು ನಿರ್ವಿುಸುವ ಬಗ್ಗೆ ಮಾತನಾಡುತ್ತಿದ್ದರು. ಅಂದರೆ ಜಾತಿ, ಮತ, ಪಂಥ, ಬಣ್ಣ ಅಥವಾ ಇನ್ನಾವುದೇ ಭೇದವಿಲ್ಲದೆ, ಪ್ರತಿಯೊಬ್ಬರೂ ಸಮಾನ ಮನುಷ್ಯರಾಗಿ ಬದುಕುವ ಮತ್ತು ಎಲ್ಲರಿಗೂ ಸಮಾನ ಅವಕಾಶವಿರುವ ರಾಜ್ಯ ಎಂದರ್ಥ. ಈಗಲೂ ಸಹ ಪ್ರಾದೇಶಿಕ ಭಾಷೆಗಳಲ್ಲಿ ಯಾರಾದರೂ ಒಂದು ಆದರ್ಶ ರಾಷ್ಟ್ರ ಎಂದು ಹೇಳಬೇಕಾದಾಗ ಅವರು ರಾಮರಾಜ್ಯ ಎನ್ನುತ್ತಾರೆ.
ಆದರೆ ಈ ದಿನಗಳಲ್ಲಿ ಕೆಲವರು ರಾಮನನ್ನು ‘ಪುರುಷ ಅಹಂಕಾರಿ’ ಎಂದು ವಾದಿಸುತ್ತಾರೆ. ಅವನು ಅಹಂಕಾರ ಅಥವಾ ಅಸುರಕ್ಷಿತ ಭಾವನೆಯಿಂದ ತನ್ನ ಪತ್ನಿಯನ್ನು ಮತ್ತೆ ಕಾಡಿಗೆ ಕಳುಹಿಸಿದ ಎನ್ನುತ್ತಾರೆ. ‘ಯೂತ್ ಆಂಡ್ ಟ್ರುಥ್’ ಅಭಿಯಾನದ ಸಮಯದಲ್ಲಿ, ದೇಶದ ಪ್ರಮುಖ ಶಿಕ್ಷಣ ಸಂಸ್ಥೆಯೊಂದರಲ್ಲಿ ಯುವಕನೊಬ್ಬ ಈ ವಿಷಯವನ್ನು ಪ್ರಸ್ತಾಪಿಸಿದ. ‘ರಾಮ ತನ್ನ ಪತ್ನಿಯನ್ನು ನಡೆಸಿಕೊಂಡ ರೀತಿ ಸರಿಯೇ? ಅವನು ಅವಳನ್ನು ಲಂಕೆಯಿಂದ ಮರಳಿ ಕರೆತಂದದ್ದೇನೋ ಸರಿ, ಆದರೆ ನಂತರ ಮತ್ತೆ ಅರಣ್ಯಕ್ಕೆ ಕಳುಹಿಸಿದ. ಅವಳು ಸ್ವಲ್ಪ ಕಾಲ ಬೇರೆಡೆ ಇದ್ದಳು ಎಂಬ ಅಸುರಕ್ಷಿತ ಭಾವನೆ ಅವನಲ್ಲಿ ಇತ್ತೆಂದು ನನಗನ್ನಿಸುತ್ತದೆ’ ಎಂದು ಹೇಳಿದ. ಅದಕ್ಕೆ ಉತ್ತರವಾಗಿ ನಾನು, ‘ನೋಡಿ, ರಾಮನ ಮನೋವೈದ್ಯರಾಗಲು ನೀವು ಖಂಡಿತವಾಗಿಯೂ ಸಮರ್ಥರಲ್ಲ. 6000 ವರ್ಷಗಳ ನಂತರ, ನೀವು ಈ ರೀತಿಯ ತೀರ್ಪಗಳನ್ನು ನೀಡಬೇಡಿ’ ಎಂದು ಹೇಳಿದೆ.
ರಾಮ ಒಬ್ಬ ಸಾಮಾನ್ಯ ಮನುಷ್ಯನಾಗಿದ್ದರೆ, ಅವನು ತನ್ನ ಹೆಂಡತಿಯನ್ನು ಹೇಗೆ ನಡೆಸಿಕೊಂಡ ಎಂದು ನೀವು ಪ್ರಶ್ನಿಸಬಹುದಿತ್ತು. ಆದರೆ ಅವನು ಒಬ್ಬ ರಾಜನಾಗಿದ್ದ. ರಾಮನಿಗೆ ತನ್ನ ಪ್ರಜೆಗಳು ಅತ್ಯಂತ ಪ್ರಮುಖರಾಗಿದ್ದರು. ಅವನು ಈ ನೆಲದ ಧರ್ಮವನ್ನು ನೆಲೆಗೊಳಿಸಲು ಪ್ರಯತ್ನಿಸುತ್ತಿದ್ದ ಕಾಲದಲ್ಲಿ ಬದುಕಿದ್ದ. ಮೂಲಭೂತವಾಗಿ, ಅವನು ಜನರನ್ನು ಕಾನೂನು ಪಾಲಿಸುವಂತೆ ಮಾಡಲು ಪ್ರಯತ್ನಿಸುತ್ತಿದ್ದ. ಪ್ರಚಲಿತದಲ್ಲಿರುವ ಕಥೆಯ ಪ್ರಕಾರ, ಅಗಸನೊಬ್ಬ ರಾಮನಿಗೆ, ‘ನಿಮ್ಮ ಹೆಂಡತಿ ಬೇರೆ ಎಲ್ಲೋ ಇದ್ದು ಬಂದಿದ್ದಾಳೆ. ಅವಳು ಹೊತ್ತಿರುವ ಮಕ್ಕಳು ನಿಮ್ಮವರೇ ಎಂಬುದು ನಮಗೆ ಹೇಗೆ ತಿಳಿಯುವುದು? ಅವಳು ಎಂತಹ ರಾಜಮಾತೆ?’ ಎಂದು ಪ್ರಶ್ನೆ ಕೇಳುತ್ತಿದ್ದ. ಇದು ಕೇವಲ ಒಬ್ಬ ಅಗಸನ ವಿಷಯವಾಗಿರಲಿಲ್ಲ. ಅಲ್ಲಿ ಅಗಸ ಎಂದು ಹೇಳಿದಾಗ, ಸಾಮಾನ್ಯ ಜನರೆಲ್ಲರೂ ಹೀಗೆ ಮಾತನಾಡುತ್ತಿದ್ದರು ಎಂದು ಅದರ ಅರ್ಥ.
ಒಂದು ವೇಳೆ ರಾಜ ತನ್ನ ಜನರಿಗೆ, ‘ನೀವು ಏನಂದುಕೊಳ್ಳುತ್ತೀರಿ ಎಂಬುದು ನನಗೆ ಮುಖ್ಯವಲ್ಲ, ನಾನು ನನ್ನ ಹೆಂಡತಿಯನ್ನು ಪ್ರೀತಿಸುತ್ತೇನೆ’ ಎಂದು ಹೇಳಿ ಅವಳನ್ನು ತನ್ನಲ್ಲೇ ಇರಿಸಿಕೊಂಡಿದ್ದರೆ, ಅವನನ್ನು ಒಬ್ಬ ಶ್ರೇಷ್ಠ ರಾಜನೆಂದು ಪರಿಗಣಿಸಲು ಆಗುತ್ತಿರಲಿಲ್ಲ. ಸೀತೆ ಅವನಿಗೆ ಕೇವಲ ಇನ್ನೊಬ್ಬ ಹೆಣ್ಣಾಗಿರಲಿಲ್ಲ. ಅವಳಿಗಾಗಿ ಅವನು 3000 ಕಿಲೋಮೀಟರ್ ನಡೆದುಕೊಂಡು ಹೋಗಿ ಯುದ್ಧ ಮಾಡಿದ್ದ. ಅವನು ಅವಳಿಗಾಗಿಯೇ ಬದುಕುತ್ತಿದ್ದ, ಆದರೂ ಅವಳು ಗರ್ಭಿಣಿಯಾಗಿದ್ದಾಗ ಅವಳನ್ನು ಕಾಡಿಗೆ ಕಳುಹಿಸಿದ. ಯಾವುದೇ ಪುರುಷನಿಗೆ ಮಗು ಎಂಬುದು ದೊಡ್ಡ ವಿಷಯ. ಒಬ್ಬ ರಾಜನಿಗಂತೂ ಅದು ವಿಶೇಷವಾಗಿ ಪ್ರಮುಖವಾದ ವಿಷಯ. ಹೀಗಿದ್ದರೂ, ಅವನು ಅಂದಿನ ಕಾಲದ ಜನರ ಯೋಗಕ್ಷೇಮವನ್ನು ಮತ್ತು ರಾಷ್ಟ್ರದ ಕಾನೂನಿನ ಆಡಳಿತವನ್ನು ತನ್ನ ವೈಯಕ್ತಿಕ ಪ್ರೀತಿಗಿಂತ ಮಿಗಿಲಾಗಿರಿಸಿದ್ದು ಗಮನಿಸಬೇಕಾದ ಅಂಶ.
ಈ ರಾಷ್ಟ್ರಕ್ಕೆ ತನ್ನ ಕುಟುಂಬ ಮತ್ತು ವೈಯಕ್ತಿಕ ಪ್ರೀತಿಗಿಂತ ರಾಷ್ಟ್ರದ ಜನರನ್ನು ಮಿಗಿಲಾಗಿ ಕಾಣುವ ನಾಯಕ ಬೇಕೆ ಅಥವಾ ಯಾವುದೇ ಬೆಲೆಯನ್ನಾದರೂ ತೆತ್ತು ನನ್ನ ಮಗನೇ ಬೇಕು ಎಂಬ ಧೃತರಾಷ್ಟ್ರ ಬೇಕೆ? ಆ ದೃಷ್ಟಿಯಲ್ಲಿ ಯೋಚಿಸುವುದಾದರೆ, ರಾಮನೇ ಪ್ರಪಂಚದ ಭವಿಷ್ಯದ ನಾಯಕನಾಗಬೇಕು. ತಮ್ಮ ಕುಟುಂಬ, ವೈಯಕ್ತಿಕ ಇಷ್ಟಾನಿಷ್ಟಗಳು ಮತ್ತು ತಮ್ಮದೇ ಆದ ನೋವು ನಲಿವುಗಳ ಆಚೆಗೆ ಆಲೋಚಿಸಿ, ಜನರಿಗೆ ಯಾವುದು ಉತ್ತಮ ಎಂದು ನೋಡುವ ನಾಯಕರ ಅಗತ್ಯ ನಮಗಿದೆ. ರಾಮ ಮತ್ತು ಈ ಸಂಸ್ಕೃತಿಯು ಪ್ರತಿನಿಧಿಸುವುದು ಅದನ್ನೇ- ಅಂದರೆ ತ್ಯಾಗ ಮನೋಭಾವ. ಮೂಲಭೂತವಾಗಿ, ತನ್ನ ಬಗ್ಗೆ ವೈರಾಗ್ಯ ಅಥವಾ ನಿರಾಸಕ್ತಿ ಇರುವುದು ಮತ್ತು ತನ್ನ ಸುತ್ತಲಿರುವ ಎಲ್ಲರ ಬಗ್ಗೆ ಅತ್ಯಂತ ಕಾಳಜಿ ಅಥವಾ ತೀವ್ರತೆಯನ್ನು ಹೊಂದಿರುವುದು- ಇದೊಂದೇ ಭಾರತೀಯರಾದ ನಾವು ಗೌರವಿಸಿದ ವಿಷಯ.
ಸನಾತನ ಧರ್ಮ ಅಥವಾ ಹಿಂದೂ ಜೀವನ ಪದ್ಧತಿಯಲ್ಲಿ ಅತ್ಯಂತ ಪ್ರಮುಖವಾದ ವಿಷಯವೆಂದರೆ ಮುಕ್ತಿಯನ್ನು ಪಡೆಯುವುದು- ಮುಕ್ತಿ, ಮೋಕ್ಷ, ನಿರ್ವಾಣ - ನೀವು ಅದನ್ನು ಏನಾದರೂ ಕರೆಯಿರಿ, ಮೂಲಭೂತವಾಗಿ ನೀವು ಬಂಧನಗಳಿಂದ ಮುಕ್ತರಾಗಬೇಕು. ಹಾಗಾಗಿ, ಮುಕ್ತಿ ಪಡೆದವರನ್ನು ಕಂಡಾಗ, ನಾವು ಅವರನ್ನು ಪೂಜಿಸುತ್ತೇವೆ. ಕೇವಲ ರಾಮ ಮಾತ್ರವಲ್ಲ- ಅಂತಹವರು ಅನೇಕರಿದ್ದಾರೆ- ಆದರೆ ಒಬ್ಬ ರಾಜ ಇಂತಹವನಾಗಿರುವುದು ಬಹಳ ಅಪರೂಪದ ಸಂಗತಿ. ಪರ್ವತಗಳಲ್ಲಿ ಋಷಿಯೊಬ್ಬರು ಆದರ್ಶಪುರುಷರಾಗಿ ವಾಸಿಸುತ್ತಿರಬಹುದು, ಆದರೆ ಅವರು ಜನಸಾಮಾನ್ಯರಿಗೆ ಲಭ್ಯವಿರುವುದಿಲ್ಲ ಮತ್ತು ಅವರು ಯಾವುದೇ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವುದಿಲ್ಲ. ಅವರು ಅದ್ಭುತವಾದ ಮನುಷ್ಯರೇ, ಆದರೆ ಪ್ರತಿದಿನದ ಗೊಂದಲಗಳನ್ನು ನಿಭಾಯಿಸುತ್ತಾ, ಯುದ್ಧಗಳನ್ನು ಮಾಡುತ್ತಾ, ಆಡಳಿತ ಮತ್ತು ರಾಜಕೀಯವನ್ನು ನಡೆಸುತ್ತಿದ್ದರೂ, ಸಂಪೂರ್ಣ ಮುಕ್ತ ಸ್ಥಿತಿಯಲ್ಲಿರುವ ರಾಜ ನಮಗೆಲ್ಲರಿಗೂ ದೊಡ್ಡ ಸ್ಪೂರ್ತಿ.
ಇದಕ್ಕಾಗಿಯೇ ನಾವು ಅವನನ್ನು ಮರ್ಯಾದಾ ಪುರುಷೋ ತ್ತಮ ಎಂದು ಕರೆಯುತ್ತೇವೆ, ಅಂದರೆ ಅವನು ತನ್ನ ಮಿತಿಗಳನ್ನು ಮೀರಿ ಬೆಳೆದಿದ್ದರಿಂದ ಪ್ರತಿಯೊಬ್ಬರ ಗೌರವಕ್ಕೆ ಅರ್ಹನಾಗಿದ್ದಾನೆ ಎಂದರ್ಥ. ಅವನು ಒಬ್ಬ ಮನುಷ್ಯನಾಗಿ ಜನಿಸಿದ ಮತ್ತು ಜೀವನದಲ್ಲಿ ಎದುರಾದ ಅನೇಕ ಕಷ್ಟಕಾರ್ಪಣ್ಯಗಳನ್ನು ಅನುಭವಿಸಿದ- ಇತರರಿಗಿಂತಲೂ ಹೆಚ್ಚಿನ ಸವಾಲುಗಳನ್ನು ಅವನು ಕಂಡ, ಆದರೆ ಅವೆಲ್ಲವನ್ನೂ ಮೀರಿ ಮುನ್ನಡೆದ. ಅವನು ಒಬ್ಬ ಜ್ಞಾನಿಯಿದ್ದಂತೆ. ಆದರೆ ಸಿಂಹಾಸನದ ಮೇಲೆ ಕುಳಿತು ರಾಷ್ಟ್ರವನ್ನು ಮುನ್ನಡೆಸುತ್ತಾನೆ. ಅದುವೇ ಎಲ್ಲೆಡೆಯೂ ಗೌರವಕ್ಕೆ ಪಾತ್ರವಾಗುತ್ತದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net