

(ಸದ್ಗುರು ಅವರು ಯೋಗಿ, ದಾರ್ಶನಿಕ, ಆಧ್ಯಾತ್ಮಿಕ ನಾಯಕ)
ಆ ದಿನ, ಪ್ರಕೃತಿಯು ಬಹಳ ಸಹಕಾರಿಯಾಗಿರುತ್ತದೆ. ಗ್ರಹಗಳ ಜೋಡಣೆ ಅಂದಿನ ದಿನ ಎಷ್ಟು ವಿಶಿಷ್ಟವಾಗಿರುತ್ತದೆ ಎಂದರೆ, ಒಬ್ಬ ಸಾಧಕನಿಗೆ ಅಧ್ಯಾತ್ಮ ಪಥವನ್ನು ಅನ್ವೇಷಿಸಲು ಒಳ್ಳೆಯ ದಾರಿಯಾಗಿದೆ ಮತ್ತು ತನ್ನ ಜೀವ ಶಕ್ತಿಗಳನ್ನು ಉನ್ನತಕ್ಕೆ ಒಯ್ಯಲು ಸದವಕಾಶ. ಶಕ್ತಿಯ ಈ ಪ್ರಾಕೃತಿಕ ಮೇಲ್ಮುಖ ಹರಿವಿನಿಂದ, ಈ ರಾತ್ರಿಯಿಡೀ ಯಾರಾದರೂ ತಮ್ಮ ಬೆನ್ನುಹುರಿಯನ್ನು ಲಂಬವಾಗಿ ಇರಿಸಿಕೊಂಡು ಎಚ್ಚರದಿಂದ ಇದ್ದರೆ, ಹಲವಾರು ಲಾಭಗಳಿವೆ. ಚರಿತ್ರೆಯಲ್ಲಿ ಋಷಿ ಮುನಿಗಳು ಮತ್ತು ಇನ್ನೂ ಹಲವರು ಈ ಮೇಲ್ಮುಖ ಹರಿವನ್ನು ಬಳಸಿಕೊಂಡು, ತಮ್ಮ ಉನ್ನತಿಯನ್ನು ಸಾಧಿಸಿದ್ದಾರೆ.
ಒಂದು ಜೈವಿಕ ಅಸ್ತಿತ್ವದಿಂದ ಆಧ್ಯಾತ್ಮಿಕನಾಗಲು ಬೇಕಾಗಿರುವುದು ಶಕ್ತಿಯ ಮೇಲ್ಮುಖ ಹರಿವು. ನಾವು ಪ್ರಕೃತಿಯ ಒಂದು ಅಂಶವಾದ ಈ ದೇಹದ ಅಗತ್ಯಗಳನ್ನಷ್ಟೇ ಪೂರೈಸುತ್ತಾ ಇದ್ದುಬಿಟ್ಟರೆ, ನಾವು ಸುಮ್ಮನೆ ಇರುವಿಕೆಗೆ ಮತ್ತು ಸಂತಾನೋತ್ಪತ್ತಿಗೆ ಪ್ರಾಮುಖ್ಯತೆ ಕೊಟ್ಟಂತಾಗುತ್ತದೆ. ನಮ್ಮ ಭೌತಿಕ ಅಸ್ತಿತ್ವಕ್ಕೆ ಬೇರೆ ಯಾವುದೇ ಉದ್ದೇಶಗಳಿಲ್ಲ. ಈ ಬ್ರಹ್ಮಾಂಡದಲ್ಲಿರುವ ಎಲ್ಲಾ ಜೀವಿಗಳು ಕೇವಲ ಇರುವಿಕೆಗಾಗಿ ಮತ್ತು ಸಂತಾನೋತ್ಪತ್ತಿಗೆ ನಿರಂತರವಾಗಿ ಹೆಣಗಾಡುತ್ತಾ ಜೀವನವನ್ನು ಸಾಗಿಸುತ್ತವೆ. ಆದರೆ ನೀವು ಮನುಷ್ಯರಾಗಿ, ನಿಮ್ಮ ಬೆನ್ನು ಹುರಿಯನ್ನು ಲಂಬವಾಗಿರಿಸಿಕೊಂಡಾಗ, ಸುಮ್ಮನೆ ಜೀವನ ಸಾಗಿಸುವುದಷ್ಟೇ ಸಾಲದು ಎಂದು ಅರಿವಾಗುತ್ತದೆ.
ಜೀವಶಾಸ್ತ್ರಜ್ಞರ ಪ್ರಕಾರ ವಿಕಸನ ಪ್ರಕ್ರಿಯೆಗೆ ಮುಖ್ಯವಾದದ್ದು ಬೆನ್ನು ಹುರಿಯನ್ನು ಅಡ್ಡಡ್ಡವಾಗಿ ಮಲಗಿಸುವುದಕ್ಕಿಂತ ಲಂಬವಾಗಿ ಇರಿಸಿಕೊಳ್ಳುವುದು. ಹೀಗೆ ಮಾಡಿದಾಗಲೇ ಬುದ್ಧಿವಂತಿಕೆ ಅರಳುವುದು. ಪ್ರಾಕೃತಿಕವಾಗಿಯೇ ಶಕ್ತಿಯ ಮೇಲ್ಮುಖ ಹರಿವಿರುವ ಮಹಾಶಿವರಾತ್ರಿಯಂದು, ರಾತ್ರಿಯಿಡೀ ಸೂಕ್ತವಾದ ಮಂತ್ರ ಪಠಣ ಮತ್ತು ಧ್ಯಾನಗಳೊಂದಿಗೆ, ಜಾಗರಣೆ ಮಾಡುತ್ತ ಸಂಭ್ರಮದ ಆಚರಣೆಗಳೊಂದಿಗೆ ದೈವಕ್ಕೆ ಹತ್ತಿರವಾಗಬಹುದು. ಶಕ್ತಿಯ ಏರಿಕೆ ಯಾವುದೇ ಸಾಧನೆ ಮಾಡದ ಸಾಮಾನ್ಯ ಮನುಷ್ಯನಲ್ಲೂ ಆಗುತ್ತದೆ, ಆದರೆ ದೇಹವನ್ನು ನೆರವಾಗಿರಿಸಿಕೊಡು ಯೋಗ ಸಾಧನೆ ಮಾಡುವವರು ಈ ರಾತ್ರಿ ಮಲಗದೇ ಬೆನ್ನು ಹುರಿಯನ್ನು ನೇರವಾಗಿರಿಸಿಕೊಂಡು ಎಚ್ಚರವಾಗಿರುವುದು ಬಹಳ ಮುಖ್ಯ.
ಆದಿಯೋಗಿ-ಶಿವ: ಆಧ್ಯಾತ್ಮಿಕ ಪಥದಲ್ಲಿರುವವರಿಗೆ ಮಹಾಶಿವರಾತ್ರಿ ಬಹಳ ಪ್ರಮುಖವಾದದ್ದು. ಗೃಹಸ್ಥರಿಗೂ, ಮಹತ್ವಾಕಾಂಕ್ಷಿಗಳಿಗೂ ಇದು ತುಂಬಾ ಮಹತ್ವದ್ದಾಗಿದೆ. ಗೃಹಸ್ಥರು ಮಹಾಶಿವರಾತ್ರಿಯನ್ನು ಶಿವನ ಮದುವೆಯ ವಾರ್ಷಿಕೋತ್ಸವವನ್ನಾಗಿ ಆಚರಿಸಿದರೆ. ಮಹತ್ವಾಕಾಂಕ್ಷಿಗಳು ಈ ದಿನವನ್ನು ಶಿವನು ಶತ್ರುಗಳನ್ನು ಜಯಿಸಿದ ದಿನವನ್ನಾಗಿ ನೋಡುತ್ತಾರೆ. ಆದರೆ, ಯೋಗ ಪರಂಪರೆಯಲ್ಲಿ ಶಿವನನ್ನು ದೇವರೆಂದು ನೋಡುವುದಿಲ್ಲ. ಆದರೆ ಆದಿಯೋಗಿಯಾಗಿ ಮತ್ತು ಆದಿ ಗುರುವಾಗಿ ನೋಡುತ್ತಾರೆ. ಯೋಗ ಪ್ರಕ್ರಿಯೆಗಳನ್ನು ಮೊದಲು ಪ್ರಾರಂಭಿಸಿದವನು ಶಿವ. ಅವನು ಏಳು ಜನ ಶಿಷ್ಯರನ್ನು ಆಯ್ಕೆ ಮಾಡಿಕೊಂಡ ಕಾರಣ ಯೋಗ ವಿಜ್ಞಾನದ ಪ್ರಸರಣ ಪ್ರಾರಂಭವಾಯಿತು.
ಭಾರತದಲ್ಲಿ ಈ ಏಳು ಜನರೇ ಸರ್ಪ¤ಗಳೆಂದು ಕರೆಸಿಕೊಂಡರು. ಇದು ನಡೆದದ್ದು ಕೇದಾರನಾಥದ ಕಾಂತಿ ಸರೋವರದ ದಡದಲ್ಲಿ. ವಿಶ್ವದ ಮೊಟ್ಟ ಮೊದಲ ಯೋಗ ಕಾರ್ಯಕ್ರಮ ಇದಾಯಿತು. ನಾವು ಯೋಗ ಎಂದಾಗ, ನಿಮ್ಮ ಶರೀರವನ್ನು ಹೇಗೆಲ್ಲಾ ತಿರುಚಿ ಬಗ್ಗಿಸಬಹುದು ಎಂದು ಯೋಚಿಸಬೇಡಿ. ಅಥವಾ ಉಸಿರನ್ನು ಬಿಗಿ ಹಿಡಿಯಬೇಕು ಎಂದೂ ಯೋಚಿಸಬೇಡಿ. ನಾವು ಕೇವಲ ಬದುಕಿನ ತಾಂತ್ರಿಕತೆಯನ್ನು ಅರಿತುಕೊಳ್ಳಲು ಪ್ರಯತ್ನಿಸುತ್ತಿದ್ದೇವೆ. ಒಬ್ಬ ಯೋಗಿಯೆಂದರೆ, ತನ್ನ ಶರೀರ ಮತ್ತು ಸಂಪೂರ್ಣ ಜೀವ ಪ್ರಕ್ರಿಯೆಯನ್ನು ಕಳಚಿಹಾಕಿ ಮತ್ತೆ ಅದನ್ನು ಹಾಗೆಯೇ ಸರಿಯಾಗಿ ಜೋಡಿಸುವ ಸಾಮರ್ಥ್ಯವುಳ್ಳವನು.
ನಾವು ಶಿವ ಎಂದಾಗ, ಇನ್ನೊಂದು ವಿಗ್ರಹವನ್ನೋ ಅಥವಾ ದೇವರನ್ನೋ ಸೃಷ್ಟಿಸಿ, ನಮಗೆ ಸುಖ-ಸಮೃದ್ಧಿಗಳನ್ನು ಕೊಡು ಎಂದು ಬೇಡಿಕೊಳ್ಳುವುದಲ್ಲ. ಶಿವ ಎಂದರೆ ಯಾವುದು ಅಲ್ಲವೋ ಅದು. ರ್ತಾಕವಾಗಿ ನಿಮಗೆ ಹೇಳಬೇಕೆಂದರೆ, ಇಂದು ವಿಜ್ಞಾನ ಹೇಳುವ ಹಾಗೆ, ಎಲ್ಲವೂ ವಿಕಸನಗೊಂಡಿರುವುದೇ ಶೂನ್ಯದಿಂದ ಮತ್ತು ಪುನಃ ಎಲ್ಲವೂ ಅಲ್ಲಿಗೇ ಸೇರುತ್ತವೆ ಎಂದು. ಇದೇ ಜೀವನದ ವಾಸ್ತವತೆ. ಈ ಶೂನ್ಯವೇ ಶಿವ. ಎಲ್ಲವನ್ನೂ ತನ್ನೊಳಗೇ ಅಡಕವಾಗಿರಿಸಿಕೊಂಡು, ಯಾವುದು ಅಲ್ಲವೋ ಅದು.
ನೀವು ನೀವೇ ಅಲ್ಲದ ಸ್ಥಿತಿಯಲ್ಲಿ ನಿಮ್ಮನ್ನಿರಿಸಿಕೊಂಡು, ಶಿವನೇ ನಿಮ್ಮಲ್ಲಿರುವಂತೆ ಆದಾಗ, ಜೀವನವನ್ನು ಹೊಸ ದೃಷ್ಟಿಯೊಂದಿಗೆ ನೋಡಲು ಮತ್ತು ಸಂಪೂರ್ಣ ಸ್ಪಷ್ಟತೆ ಪಡೆಯಲು ಸಾಧ್ಯವಾಗುತ್ತದೆ. ಶಿವನಿಗೆ ಮೂರನೇ ಕಣ್ಣು ಇರುವುದರಿಂದ ಅವನನ್ನು ತ್ರಯಂಬಕನೆಂದೂ ಕರೆಯುತ್ತೇವೆ. ಭೌತಿಕವಾಗಿರುವ ಎರಡು ಕಣ್ಣುಗಳು ಕೇವಲ ಒಂದು ಪಂಚೇಂದ್ರಿಯ ಅಷ್ಟೇ. ಅದು ನಿಮ್ಮ ಮನಸ್ಸಿಗೆ ಎಲ್ಲಾ ಅಸಂಬದ್ಧಗಳನ್ನೇ ತುಂಬುತ್ತದೆ ಏಕೆಂದರೆ, ಕಣ್ಣಿಗೆ ಕಾಣುವುದೆಲ್ಲಾ ನಿಜವಲ್ಲ. ನೀವು ಒಬ್ಬ ವ್ಯಕ್ತಿಯನ್ನು ನೋಡಿ, ಅವನು ಹೀಗಿರಬಹುದು, ಹಾಗಿರಬಹುದು ಅಂದುಕೊಳ್ಳುತ್ತೀರಿ, ಆದರೆ, ಅವನಲ್ಲಿರುವ ಶಿವನನ್ನು ನೋಡುವುದಿಲ್ಲ. ಅಂದರೆ, ಈ ಎರಡು ಕಣ್ಣುಗಳು ನಿಜವನ್ನು ನೋಡುವುದಿಲ್ಲ.
ಹಾಗಾಗಿ ಇನ್ನೊಂದು ಕಣ್ಣು, ಒಂದು ತೀಕ್ಷ್ಣವಾದ ದೃಷ್ಟಿ ಹೊಂದಿರುವ ಕಣ್ಣು ತೆರೆದುಕೊಳ್ಳಬೇಕು. ನಮ್ಮ ನಾಡಿನ ಪರಂಪರೆಯಲ್ಲಿ ತಿಳುವಳಿಕೆ ಎಂದರೆ, ಕೇವಲ ಪುಸ್ತಕಗಳನ್ನು ಓದುವುದು, ಯಾರದ್ದಾದರೂ ಉಪನ್ಯಾಸಗಳನ್ನು ಕೇಳುವುದು, ಅಥವಾ ಎಲ್ಲಕಡೆಯಿಂದ ಮಾಹಿತಿಗಳನ್ನು ಸಂಗ್ರಹಿಸುವುದಲ್ಲ. ತಿಳಿವು ಎಂದರೆ ಜೀವನವನ್ನು ತಿಳಿಯುವ ಒಂದು ಹೊಸ ದೃಷ್ಟಿಯನ್ನು ತೆರೆಯುವುದು. ಮಹಾಶಿವರಾತ್ರಿಯಂದು ಪ್ರಕೃತಿಯೇ, ಈ ಸಾಧ್ಯತೆಯು ನಮಗೆ ಹತ್ತಿರವಾಗುವಂತೆ ಮಾಡುತ್ತದೆ. ಇದು ಪ್ರತಿ ದಿನವೂ ಆಗುತ್ತದೆ, ಈ ಒಂದು ನಿರ್ದಿಷ್ಟ ದಿನಕ್ಕೇ ಕಾಯಬೇಕೆಂದೇನಿಲ್ಲ. ಆದರೆ ಈ ದಿನ ಪ್ರಕೃತಿಯೇ ಇದನ್ನು ನಮಗೆ ಲಭ್ಯವಾಗಿಸುತ್ತದೆ.
ನಿಮ್ಮ ತಾರ್ಕಿಕ ಆಲೋಚನೆಗಳನ್ನು ಯಾರು ಬೇಕಾದರೂ ವಿರೂಪಗೊಳಿಸಬಹುದು. ಕಠಿಣ ಪರಿಸ್ಥಿತಿಗಳು ಸಂಪೂರ್ಣವಾಗಿ ಸಂಕಷ್ಟಕ್ಕೀಡು ಮಾಡಬಹುದು. ಕೇವಲ ಅಂತಃದೃಷ್ಟಿಯಿದ್ದಾಗ ಮಾತ್ರ ಸ್ಪಷ್ಟತೆ ಇರುತ್ತದೆ. ನಿಮ್ಮಲ್ಲಿರುವ ಸ್ಪಷ್ಟತೆಯನ್ನು ಯಾವುದೇ ಸನ್ನಿವೇಶವಾಗಲೀ, ಯಾರೇ ಆಗಲಿ ವಿರೂಪಗೊಳಿಸಲು ಸಾಧ್ಯವಿಲ್ಲ. ಹೀಗೆ ನಿಮ್ಮ ಮೂರನೇ ಕಣ್ಣನ್ನು ತೆರೆದು, ಹೊಸ ದೃಷ್ಟಿಯನ್ನು ಪಡೆಯಲು, ಮತ್ತು ನೀವು ತ್ರಯಂಬಕರಾಗಲು ಈ ಮಹಾಶಿವರಾತ್ರಿಯು ಒಂದು ಸದವಕಾಶ. ಈ ರಾತ್ರಿಯ ಸಾಧ್ಯತೆಯೇ ಇದು.
ಜೀವಂತಿಕೆ, ಅರಿವಿನ ರಾತ್ರಿ: ನಾವು ಶಿವ ಎನ್ನುವುದು ಪರಮೋಚ್ಛ ಗ್ರಹಿಕೆಯ ಸಾಕಾರ ರೂಪ. ಈಶ ಯೋಗಕೇಂದ್ರದಲ್ಲಿ ಮಹಾಶಿವರಾತ್ರಿಯ ಆಚರಣೆಯ ಉದ್ದೇಶವೇ ಇದು. ಬಹಳಷ್ಟು ರೀತಿಯಲ್ಲಿ, ಯೋಗ ಕೇಂದ್ರವು ಈ ಮಹಾಶಿವರಾತ್ರಿಗಾಗಿ ವರ್ಷವಿಡೀ ಎದುರು ನೋಡುತ್ತಿರುತ್ತದೆ. ಪ್ರತಿಯೊಬ್ಬರೂ ತಮ್ಮ ಗ್ರಹಿಕೆಯನ್ನು ಒಂದಿಷ್ಟಾದರೂ ಹೆಚ್ಚಿಸಿಕೊಳ್ಳಲು ಸಾಧ್ಯವಾಗುವಂತಹ ಒಂದು ಸದವಕಾಶ. ನೀವು ಜೀವನದ ಬಗ್ಗೆ ನಿರ್ಣಾಯಕವಾಗಿ, ನಾನಾ ರೀತಿಯ ಆಲೋಚನೆಗಳು, ಭಾವನೆಗಳ ಗೊಂದಲಗಳಿಂದ ಹೊರ ಬರಲು ಇರುವ ಒಂದು ಅವಕಾಶ. ಶಿವನೆಂದರೂ ಇದೇ, ಯೋಗ ಎಂದರೂ ಇದೇ. ಈ ಮಹಾಶಿವರಾತ್ರಿಯು ನಿಮಗೆ ಕೇವಲ ಜಾಗರಣೆಯಷ್ಟೇ ಆಗಿರದೇ, ಉತ್ಕಟ ಜೀವಂತಿಕೆಯ ಮತ್ತು ಅರಿವಿನ ರಾತ್ರಿಯಾಗಲಿ. ಈ ದಿನದ ಪ್ರಕೃತಿಯ ಈ ಅದ್ಭುತ ಕಾಣಿಕೆಯನ್ನು ನೀವು ಸಂಪೂರ್ಣವಾಗಿ ಅನುಭವಿಸುಂತಾಗಲಿ ಎಂದು ನನ್ನ ಹಾರೈಕೆ ಮತ್ತು ಆಶೀರ್ವಾದ. ಶಿವ ಎಂದಾಗ ಆಗುವ ಶಕ್ತಿಯ ಈ ಮೇಲ್ಮುಖ ಹರಿವಿನ ಸೌಂದರ್ಯ ಮತ್ತು ಭಾವೋತ್ಕರ್ಷವನ್ನು ನೀವು ಅನುಭವಿಸುವಂತಾಗಲಿ ಎಂದು ಆಶಿಸುತ್ತೇನೆ.