ಮಗುವಿನಿಂದ ಕಲಿಯಲು ಯತ್ನಿಸಿ; ಪ್ರೀತಿಯ ವಾತಾವರಣ ಸೃಷ್ಟಿಸಿ

fd
Published on
ಬಹುತೇಕ ತಂದೆ-ತಾಯಿಗಳು ಮಕ್ಕಳನ್ನು ತಮ್ಮದೇ ಮುಂದುವರಿದ ಭಾಗ ಎಂದು ಭಾವಿಸಿಕೊಂಡಿರುವುದರಿಂದ ಅವರು ತಮ್ಮಂತೆಯೇ ಇರಬೇಕೆಂದು ಬಯಸುತ್ತಾರೆ, ಅಲ್ಲವಾದರೆ ಅವರಿಗೆ ಅಸ್ಥಿರ ಭಾವನೆ ಬಂದುಬಿಡುತ್ತದೆ. ಅವರಿಗೆ ‘ತಮ್ಮ ಮಕ್ಕಳು ಎಲ್ಲಿಂದ ಬಂದಿರಬಹುದು’ ಎಂಬ ಭಾವನೆಯೂ ಬರುತ್ತದೆ.
ಬಹುತೇಕರು, ಒಂದು ಮಗು ಹುಟ್ಟಿದ ಕೂಡಲೇ, ಅದು ತಾವು ‘ಶಿಕ್ಷಕ’ರಾಗುವ ಸಮಯವೆಂದು ಭಾವಿಸಿಕೊಂಡಿದ್ದಾರೆ. ಮನೆಯಲ್ಲಿ ಒಂದು ಮಗುವಿನ ಆಗಮನವಾದರೆ, ಆಗ ನೀವೊಬ್ಬ ಶಿಕ್ಷಕರಾಗುವ ಸಮಯವಲ್ಲ, ಬದಲಿಗೆ ಕಲಿಯುವ ಸಮಯ, ಏಕೆಂದರೆ, ನಿಮ್ಮನ್ನು ಮತ್ತು ಮಗುವನ್ನು ಹೋಲಿಸಿ ನೋಡಿದರೆ, ಯಾರು ಹೆಚ್ಚು ಸಂತೋಷಭರಿತರು? ನಿಮ್ಮ ಮಗು, ಅಲ್ಲವೇ? ಹಾಗಾಗಿ, ಅದು ನೀವು ಮಗುವಿನಿಂದ ಕಲಿಯುವ ಸಮಯ, ನಿಮ್ಮಿಂದ ಅದು ಕಲಿಯುವುದಲ್ಲ. ಮಗುವಿಗೆ ಕಲಿಸಬಹುದಾದ, ಒಂದು ಹಂತದವರೆಗೆ ಕಲಿಸಲೇಬೇಕಾದ ಏಕೈಕ ವಿಷಯವೆಂದರೆ- ಕೆಲವು ತಂತ್ರಗಳು, ಹೇಗೆ ಬದುಕಬೇಕು ಮತ್ತು ಪ್ರಪಂಚದಲ್ಲಿ ಒಂದೆರಡು ಕಾಸು ಸಂಪಾದಿಸುವುದು ಹೇಗೆ ಎನ್ನುವುದಷ್ಟೆ. ಆದರೆ ಜೀವನದ ವಿಷಯಕ್ಕೆ ಬಂದರೆ, ಒಂದು ಮಗು ಬದುಕಿನ ಬಗ್ಗೆ ಅನುಭವಾತ್ಮಕವಾಗಿ ಹೆಚ್ಚು ತಿಳಿದಿರುತ್ತದೆ. ಮಗುವೇ ಜೀವನ; ಅದಕ್ಕೆ ಗೊತ್ತಿದೆ. ನಿಮ್ಮ ವಿಷಯದಲ್ಲೂ ಹಾಗೆಯೇ, ಮನಸ್ಸಿನ ಮೇಲೆ ಹೇರಿದ ಪ್ರಭಾವಗಳನ್ನು ತೆಗೆದುಹಾಕಿದರೆ, ಈ ಜೀವ, ಜೀವಶಕ್ತಿಗಳು ‘ಹೇಗಿರಬೇಕು’ ಎಂಬುದನ್ನು ತಿಳಿದಿವೆ. ಮನಸ್ಸಿಗೆ ಮಾತ್ರ ‘ಹೇಗಿರಬೇಕು’ ಎಂಬುದು ಗೊತ್ತಿಲ್ಲ. ಹಾಗಾಗಿ, ಮಗುವಿನ ಮೇಲೆ ಹೇರುವ ಎಲ್ಲವೂ ನಿಮ್ಮ ಗಲಿಬಿಲಿಗೊಂಡ, ಕ್ಲೇಶಮಯ ಮನಸ್ಸೇ ಆಗಿದೆ.

ಹಾಗಾಗಿ ಅದು ಕಲಿಯುವ ಸಮಯ, ಕಲಿಸುವುದಲ್ಲ. ಒಳ್ಳೆಯ ರೀತಿಯಲ್ಲಿ ಸಾಕುವುದು ಎಂದರೆ, ಮಗುವಿಗೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂದು ಕಲಿಸುವುದಲ್ಲ, ಬದಲಾಗಿ ಒಂದು ವಾತಾವರಣವನ್ನು ಸೃಷ್ಟಿಸುವುದು. ಕೈತೋಟವನ್ನು ಬೆಳೆಸಬೇಕೆಂದರೆ, ನೀವಲ್ಲಿ ಪ್ರತಿದಿನ ಕುಳಿತು ಹೂವುಗಳನ್ನು ಅಥವಾ ಹಣ್ಣುಗಳನ್ನು ಗಿಡಗಳಿಂದ ಹೀರಲು ಪ್ರಯತ್ನಿಸುವುದಿಲ್ಲ. ಕೇವಲ ಬೇಕಾದ ವಾತಾವರಣವನ್ನು ನಿರ್ವಹಿಸುತ್ತೀರಿ ಮತ್ತು ಅದು ಚೆನ್ನಾಗಿ ಬೆಳೆಯುತ್ತದೆ, ಅಲ್ಲವೇ? ನೀವು ಮಾಡಬಹುದಾದದ್ದು ಮತ್ತು ಮಾಡಬೇಕಾದದ್ದು ಅಷ್ಟೆ.

ಬಹುತೇಕ ತಂದೆ-ತಾಯಿಗಳು ಮಕ್ಕಳನ್ನು ತಮ್ಮದೇ ಮುಂದುವರಿದ ಭಾಗ ಎಂದು ಭಾವಿಸಿಕೊಂಡಿರುವುದರಿಂದ ಮಕ್ಕಳು ತಮ್ಮಂತೆಯೇ ಇರಬೇಕೆಂದು ಬಯಸುತ್ತಾರೆ, ಅಲ್ಲವಾದರೆ ಅವರಿಗೆ ಅಸ್ಥಿರ ಭಾವನೆ ಬಂದುಬಿಡುತ್ತದೆ. ಅವರಿಗೆ ‘ತಮ್ಮ ಮಕ್ಕಳು ಎಲ್ಲಿಂದ ಬಂದಿರಬಹುದು’ ಎಂಬ ಭಾವನೆಯೂ ಬರುತ್ತದೆ, ಯಾಕೆಂದರೆ ಮಕ್ಕಳು ಅಷ್ಟರ ಮಟ್ಟಿಗೆ ತಂದೆ-ತಾಯಿಗಳಿಗಿಂತ ಭಿನ್ನವಾಗಿರುತ್ತಾರೆ. ಮಕ್ಕಳು ನಿಮ್ಮಂತೆ ಇರಬೇಕಾಗಿಲ್ಲ. ಮುಂದಿನ ಪೀಳಿಗೆಯ ಜನರು ನಿಮ್ಮಂತೆ ಯೋಚಿಸಬಾರದು ಮತ್ತು ಭಾವಿಸಬಾರದು. ನೀವು ಯೋಚಿಸಲೂ ಸಾಧ್ಯವಿಲ್ಲದಂಥ ಸಂಗತಿಗಳನ್ನು ಅವರು ಮಾಡಬೇಕು, ಅಲ್ಲವೇ? ತಂದೆ-ತಾಯಿಗಳು ತಮಗೆ ಗೊತ್ತಿರುವುದನ್ನು ಮಕ್ಕಳಿಗೆ ನಿರಂತರವಾಗಿ ಕಲಿಸಲು ಪ್ರಯತ್ನಿಸುವುದಕ್ಕೆ ಒಂದು ಮುಖ್ಯ ಕಾರಣವೆಂದರೆ ಅವರಲ್ಲಿ ಮಕ್ಕಳ ಮೂಲಕ ತಮ್ಮನ್ನು ವಿಸ್ತರಿಸಿಕೊಳ್ಳುವ ಪ್ರವೃತ್ತಿ ಇರುವುದು. ಅದರ ಅಗತ್ಯವಿಲ್ಲ. ಅಪೂರ್ಣತೆ ಮತ್ತು ಅಸ್ಥಿರತೆ ಭಾವನೆಯಿಂದ ಈ ಅವಶ್ಯಕತೆ ಉಂಟಾಗಿದೆ. ಇದನ್ನು ತ್ಯಜಿಸಿದರೆ, ಮಗುವಿನೊಂದಿಗೆ ಏನು ಮಾಡಬೇಕು ಎನ್ನುವುದು ಅವರಿಗೆ ತಿಳಿಯುತ್ತದೆ.

ಪ್ರೀತಿಸುವುದೆಂದರೆ ಯಾವಾಗಲೂ ಮುಕ್ತಗೊಳಿಸುವ ಪ್ರಕ್ರಿಯೆಯಾಗಿರಬೇಕು, ಬಂಧಿಸುವ ಪ್ರಕ್ರಿಯೆಯಲ್ಲ. ಆದರೆ ಅನೇಕ ರೀತಿಗಳಲ್ಲಿ, ತಂದೆ-ತಾಯಿಗಳು ಮಕ್ಕಳನ್ನು ತಮ್ಮದೆಂಬ ರೀತಿಯಲ್ಲಿ ಬಂಧಿಸಲು ಪ್ರಯತ್ನಿಸುತ್ತಾರೆ, ಏಕೆಂದರೆ ನಿರ್ದಿಷ್ಟ ವಯಸ್ಸಿನ ನಂತರ, ಮಕ್ಕಳ ಮೂಲಕವೇ ನಿಮ್ಮನ್ನು ಗುರುತಿಸಿಕೊಳ್ಳುತ್ತೀರಿ. ಪ್ರಾರಂಭದಲ್ಲಿ, ನಿಮ್ಮ ಗುರುತುಗಳು ಬೇರೆ ರೀತಿಗಳಲ್ಲಿರುತ್ತವೆ, ಆದರೆ ಮಕ್ಕಳು ವಯಸ್ಸಿಗೆ ಬಂದ ಮೇಲೆ ಮಕ್ಕಳ ಮೂಲಕ ಗುರುತಿಸಿಕೊಳ್ಳಲು ಪ್ರಯತ್ನಿಸುತ್ತೀರಿ. ಅವರ ಮೂಲಕ ಜೀವಿಸಲು ಪ್ರಯತ್ನಿಸುತ್ತೀರಿ, ಹಾಗಾಗಿ ಅವರು ನಿಮ್ಮಂತಿರಬೇಕು ಮತ್ತು ನಿಮ್ಮಂತೆಯೇ ಆಲೋಚಿಸಬೇಕು ಮತ್ತು ಭಾವಿಸಬೇಕು ಎಂದು ಬಯಸುತ್ತೀರಿ. ಅದು ಹಾಗಿರಬೇಕಾಗಿಲ್ಲ. ಅವರು ಸಂಪೂರ್ಣವಾಗಿ ನಿಮಗಿಂತ ಭಿನ್ನವಾಗಿರಬಹುದು.

ನಿಮ್ಮದು ಪರಿಪೂರ್ಣ ಜೀವವನ್ನಾಗಿಸಿಕೊಂಡರೆ- ಇನ್ನೊಬ್ಬರ ಮೂಲಕ ನಿಮ್ಮ ಜೀವನ ರೂಪಿಕೊಳ್ಳಬೇಕಾದ ಅವಶ್ಯಕತೆ ಬರುವುದಿಲ್ಲ. ಈ ಪ್ರಪಂಚದಲ್ಲಿ ಒಂದು ಮಗು ಅನೇಕ ರೀತಿಗಳಲ್ಲಿ ಅಸಹಾಯಕ ಮತ್ತು ಶೋಷಿತ ಜೀವವಾಗಿದೆ. ಏಕೆಂದರೆ ನಿಮ್ಮಿಂದ ತನ್ನನ್ನು ತಾನು ರಕ್ಷಿಸಿಕೊಳ್ಳುವ ಯಾವ ಸೌಲಭ್ಯವೂ ಅದಕ್ಕಿರುವುದಿಲ್ಲ. ‘ಇಲ್ಲ, ನಾನು ಏನೂ ತಪು್ಪ ಮಾಡುತ್ತಿಲ್ಲ. ನಾನು ಮಗುವಿಗೆ ಹೊಡೆಯುವುದಿಲ್ಲ ಅಥವಾ ಬೈಯ್ಯುವುದಿಲ್ಲ’ ಎಂದು ನೀವು ಹೇಳಬಹುದು. ಇಲ್ಲಿ ವಿಷಯ ಅದಲ್ಲ; ನಿಮ್ಮ ಆಲೋಚನೆ ಮತ್ತು ಭಾವನೆಗಳನ್ನು ಅದರ ಮೇಲೆ ಹೇರುತ್ತಿದ್ದೀರಿ. ಇದರ ವಿರುದ್ಧ ಅದು ಪೂರ್ತಿಯಾಗಿ ಅಸಹಾಯಕವಾಗಿದೆ.

ಹಾಗಾಗಿ ಮಗು ಹುಟ್ಟಿದಾಗ, ಮಗುವಿಗೆ ಪರಿಸರವನ್ನು ಗಮನಿಸಲು ಬಿಡಿ, ಪ್ರಕೃತಿಯೊಂದಿಗೆ ಮತ್ತು ತನ್ನೊಂದಿಗೆ ತಾನು ಸಮಯ ಕಳೆಯಲು ಬಿಡಿ. ಪ್ರೀತಿಯ ವಾತಾವರಣವನ್ನು ಸೃಷ್ಟಿಸಿ ಮತ್ತು ಬೆಂಬಲಿಸಿ ಮತ್ತು ನಿಮ್ಮ ನೈತಿಕತೆ, ಸಿದ್ಧಾಂತಗಳು, ಮತ ಅಥವಾ ಇನ್ನೇನೂ ಯಾವುದೇ ರೀತಿಯಲ್ಲೂ ಮಗುವಿನ ಮೇಲೆ ಹೇರಬೇಡಿ. ಅದನ್ನು ಸುಮ್ಮನೆ ಬೆಳೆಯಲು ಬಿಡಿ, ಅದರ ಬುದ್ಧಿ ಬೆಳೆಯಲು ಬಿಡಿ ಮತ್ತು ಅದು ಒಬ್ಬ ಮನುಷ್ಯ ಜೀವಿಯಾಗಿ ತನ್ನದೇ ರೀತಿಯಲ್ಲಿ ಜೀವನವನ್ನು ನೋಡಲು ಬಿಡಿ- ಕುಟುಂಬ, ಸಂಪತ್ತು ಅಥವಾ ಮತ್ಯಾವುದರೊಂದಿಗೂ ಗುರುತಿಸಿಕೊಳ್ಳದೇ ಬೆಳೆಯಲು ಬಿಡಿ.

ಅದೇ ಸಮಯದಲ್ಲಿ, ಸಮಾಜದಲ್ಲಿ ಮಗುವಿನ ಮೇಲೆ ಪ್ರಭಾವ ಬೀರಲು ನಿರಂತರವಾಗಿ ಪ್ರಯತ್ನಿಸುವ ಬೇರೆ ಶಕ್ತಿಗಳಿರುತ್ತವೆ. ಶಿಕ್ಷಣ, ಸ್ನೇಹಿತರು, ನಿಮ್ಮ ಮಗು ನಡೆದಾಡುವ ಬೀದಿ, ಇವೆಲ್ಲದರ ಪ್ರಭಾವಗಳಿವೆ. ಒಂದಲ್ಲ ಒಂದು ರೀತಿಯಲ್ಲಿ ನಾವು ಪ್ರಜ್ಞೆಯಿಲ್ಲದೆ ಈ ಸಾಮಾಜಿಕ ರಚನೆಯನ್ನು ನಿರ್ವಿುಸಿದ್ದೇವೆ ಮತ್ತು ಅದರ ಪ್ರಭಾವಗಳನ್ನು ನೂರಕ್ಕೆ ನೂರರಷ್ಟು ನಿವಾರಿಸಿಕೊಳ್ಳಲು ಸಾಧ್ಯವಿಲ್ಲ. ಮಗುವಿಗೆ ತನ್ನ ಬುದ್ಧಿಶಕ್ತಿಯಿಂದ ಜೀವನವನ್ನು ನೋಡಲು ಸಹಾಯ ಮತ್ತು ಸಹಕಾರ ನೀಡಬಹುದು ಅಷ್ಟೆ, ಇದೀಗ, ಬೀದಿಯ ಪ್ರಭಾವ ಮಗುವಿನ ಮೇಲೆ ಬಲವಾಗಿದೆ; ಇನ್ನೊಂದು ಕಡೆ ನೀವು ಪ್ರಭಾವ ಬೀರಲು ಪ್ರಯತ್ನಿಸುತ್ತಿದ್ದೀರಿ. ಅನೇಕ ಕಾರಣಗಳಿಂದ ಮಗು ಅದನ್ನು ಪ್ರತಿರೋಧಿಸುತ್ತದೆ, ಯೌವನದಲ್ಲಿದ್ದಾಗ ಬೀದಿಯ ವಾತಾವರಣ ಮನೆಯ ವಾತಾವರಣಕ್ಕಿಂತ ಆಕರ್ಷಣೀಯವಾಗಿ ಕಾಣುತ್ತದೆ. ಬಹುತೇಕ ಸಂದರ್ಭಗಳಲ್ಲಿ ತಂದೆ-ತಾಯಿಗಳು ಬೀದಿಯ ವಾತಾವರಣಕ್ಕೆ ವಿರುದ್ಧವಾದ ಪ್ರಭಾವ ಬೀರಲು ಪ್ರಯತ್ನಿಸುತ್ತಾರೆ, ಆದರೆ ಅದು ಅವರನ್ನು ಇನ್ನಷ್ಟು ಬೀದಿಯ ಕಡೆಗೆ ತಳ್ಳುತ್ತದೆ.

ಬೀದಿಯ ಗಂಡಾಂತರಗಳು ಯಾವಾಗಲೂ ಇರುತ್ತವೆ ನಿಜ. ಅದು ಮಾದಕವಸ್ತುಗಳಾಗಿರಬಹುದು, ಅಪಘಾತ, ಗಾಯ, ಸಾವಾಗಿರಬಹುದು, ಅದು ಅನೇಕ ರೀತಿಯ ಕೆಟ್ಟ ನಡವಳಿಕೆಗಳಾಗಿರಬಹುದು- ಇವೆಲ್ಲ ಪ್ರಪಂಚದಲ್ಲಿ ಇವೆ. ಆದರೆ ಅರ್ಥಮಾಡಿಕೊಳ್ಳಬೇಕಾದುದಿಷ್ಟೇ, ನಿಮಗಿಷ್ಟವಿದೆಯೋ ಅಥವಾ ಇಲ್ಲವೋ, ಇಂದೋ ಅಥವಾ ನಾಳೆಯೋ, ನಿಮ್ಮ ಮಗು ತನ್ನ ಸ್ವಂತ ಬುದ್ಧಿಶಕ್ತಿಯಿಂದ ಬದುಕುವುದನ್ನು ಕಲಿಯಬೇಕು. ಹಾಗಾಗಿ ಅವರು ಎಷ್ಟು ಬೇಗ ಇದರಿಂದ ಸಜ್ಜುಗೊಳ್ಳುತ್ತಾರೋ ಅಷ್ಟು ಒಳ್ಳೆಯದು. ಇದರರ್ಥ ಸ್ವಂತ ಬುದ್ಧಿಶಕ್ತಿ ಬಳಸುವುದನ್ನು ಕಲಿಯಲು ಮಗುವನ್ನು ಬೀದಿಗೆ ನೂಕಬೇಕೆಂದಲ್ಲ. ನಿಮ್ಮ ನೈತಿಕತೆ ಮತ್ತು ಮೌಲ್ಯಗಳಿಂದ ಮಗುವಿನ ಮೇಲೆ ವಿರುದ್ಧ ಪ್ರಭಾವವನ್ನು ಬೀರಲು ಪ್ರಯತ್ನಿಸದಿರಿ. ಯಾವುದೋ ಪ್ರಭಾವಕ್ಕೊಳಗಾಗುವುದರ ಬದಲಾಗಿ, ಅವರು ಹೆಚ್ಚಿನ ಬುದ್ಧಿವಂತಿಕೆಯಿಂದ ಜೀವನ ನೋಡಲು ಸಹಾಯ ಮಾಡಿ.

ಹಾಗಾಗಿ, ಮನೆ ಎನ್ನುವುದು ನಿಮ್ಮ ಸಂಸ್ಕೃತಿ, ಸಿದ್ಧಾಂತಗಳು ಮತ್ತು ನೈತಿಕತೆಗಳನ್ನು ಮಕ್ಕಳ ಮೇಲೆ ಹೇರುವ ಸ್ಥಳವಾಗಬಾರದು. ಅದು ಮಗುವಿನ ಮೇಲೆ ಯಾವುದೇ ರೀತಿಯ ಹೇರಿಕೆಯಿಲ್ಲದ ಪೋಷಕ ವಾತಾವರಣವಾಗಿರಬೇಕು ಮತ್ತು ಮಗುವಿನ ಬುದ್ಧಿಯನ್ನು ಪ್ರೋತ್ಸಾಹಿಸುವ ಸ್ಥಳವಾಗಿರಬೇಕು. ಒಂದು ಮಗು ಗೊಂದಲಕ್ಕೊಳಗಾದಾಗ ಅಥವಾ ಏನು ಮಾಡಬೇಕೆಂದು ತಿಳಿಯದಾದಾಗ ಅದು ಯೋಚಿಸಲು ತೊಡಗುತ್ತದೆ, ಜೀವನದ ಅನೇಕ ಅಂಶಗಳಿಗೆ ತೆರೆದುಕೊಂಡು ಬೆಳೆಯುತ್ತಿರುವ ಮಗುವಿಗೆ ಹಾಗಾಗುವುದು ಸಹಜ. ಆದರೆ, ಈಗ ಅದರ ಆಲೋಚನೆಯನ್ನು ಬೀದಿ ಅಥವಾ ಮನೆಯ ವಾತಾವರಣಗಳು ಪ್ರಭಾವಿಸುತ್ತವೆ. ಅದಕ್ಕೆ ಬದಲಾಗಿ, ಮಗು ತನ್ನ ಬುದ್ಧಿಯನ್ನು ಉಪಯೋಗಿಸಲು ಬಿಟ್ಟರೆ ಸಾಮಾನ್ಯವಾಗಿ ಮಕ್ಕಳು ಸರಿಯಾದುದನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ, ನನಗೆ ಈ ಬುದ್ಧಿವಂತಿಕೆಯ ಬಗ್ಗೆ ವಿಶ್ವಾಸವಿದೆ. ಹೌದು, ಕೆಲವು ಮಕ್ಕಳು ದಾರಿತಪ್ಪಬಹುದು. ದುರದೃಷ್ಟವಶಾತ್ ನಿಮ್ಮ ಮಗುವಿಗೆ ಹಾಗೆ ಆದರೆ, ನನಗೆ ಅದರ ನೋವು ಗೊತ್ತು, ಆದರೆ ಅದು ಪ್ರಪಂಚದ ವಾಸ್ತವವಾಗಿದೆ. ನೀವು ಅವರನ್ನು ಪ್ರಭಾವಿಸಲು ಪ್ರಯತ್ನಿಸಿದರೂ ಹಾಗೆ ಆಗುತ್ತದೆ; ನೀವು ಪ್ರಯತ್ನಿಸದಿದ್ದರೆ ಆಗಲೂ ಹಾಗೆ ಆಗುತ್ತದೆ. ಆದರೆ ಮನೆಯಲ್ಲಿ ಹೇರುವಿಕೆಯ ವಾತಾವರಣ ಇಲ್ಲದಿದ್ದರೆ ಹಾಗಾಗುವ ಸಾಧ್ಯತೆ ಅತ್ಯಂತ ಕಡಿಮೆ.

ಈಗ, ಮಗುವಿಗೆ ಮನೆ ಅತ್ಯಂತ ಅನುಕೂಲಕರವಾಗಿದ್ದರೆ, ಅದು ಸಹಜವಾಗಿಯೇ ಹೊರಗಡೆಗಿಂತ ಮನೆಯಲ್ಲೇ ಹೆಚ್ಚು ಕಾಲ ಕಳೆಯಲು ಬಯಸುತ್ತದೆ. ಈಗ, ಮನೆಯಲ್ಲಿಯ ಹೇರುವಿಕೆಯ ಕಾರಣದಿಂದ, ಮನೆಗಿಂತ ಬೀದಿಯ ಮೂಲೆಯೇ ಹೆಚ್ಚು ಅನುಕೂಲಕರವಾಗಿ ಕಾಣುತ್ತಿದೆ. ಹಾಗಾಗಿ, ಅಲ್ಲಿ ಆ ರೀತಿಯ ಅನಾನುಕೂಲವಿಲ್ಲದಿದ್ದರೆ, ಅವರು ಬೀದಿಯ ಮೂಲೆಯನ್ನು ತಮ್ಮ ಅಡ್ಡೆಯನ್ನಾಗಿಸಿಕೊಳ್ಳುವುದಿಲ್ಲ. ಇದರರ್ಥ ಮಗುವು ಪ್ರಪಂಚದ ಕಠಿಣ ವಾಸ್ತವಗಳಿಗೆ ತೆರೆದುಕೊಳ್ಳುವುದಿಲ್ಲ ಎಂದಲ್ಲ. ಯಾವಾಗಲೂ ಅದಾಗುತ್ತದೆ ಮತ್ತು ಅವರುಗಳು ಒಂದಲ್ಲ ಒಂದು ರೀತಿಯಲ್ಲಿ ಅವರ ಮೇಲೆ ಪ್ರಭಾವ ಬೀರುತ್ತಾರೆ. ಆದರೆ ಯಾವಾಗಲೂ, ತಂದೆ-ತಾಯಿಗಳು ಮಗುವಿಗೆ ತನ್ನ ಕುರಿತು ತಾನೇ ಯೋಚಿಸಲು, ತನಗೆ ಯಾವುದು ಒಳ್ಳೆಯದು ಎಂಬುದನ್ನು ತನ್ನ ಬುದ್ಧಿಯನ್ನು ಬಳಸಿ ತೀರ್ವನಿಸಲು ಕಲಿಸುವುದು ಒಂದು ಮಗು ಚೆನ್ನಾಗಿ ಬೆಳೆಯಲು ನೀಡುವ ಅತ್ಯುತ್ತಮ ವಿಮೆಯಾಗಿದೆ.

(ಸದ್ಗುರು ಅವರು ಯೋಗಿ, ದಾರ್ಶನಿಕ, ಆಧ್ಯಾತ್ಮಿಕ ನಾಯಕ.

 www.isha.sadhguru.org)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net