ನೀವು ಯಾವ ರೀತಿಯ ಮಾನವಜೀವಿ...?

sadguru apri 3 20
Published on

ಮಾನವ ಜೀವಿಗಳಾಗಿದ್ದರೆ, ಹೇಗೆ ಇರಬೇಕೆಂದು ನಾವು ತಿಳಿದಿರಬೇಕು. ಹೇಗೆ ಇರಬೇಕೆಂದು ತಿಳಿದಿದ್ದರೆ, ಸರಳ ನಿಯಮಗಳನ್ನು ಅನುಸರಿಸಿ, ಸೋಂಕನ್ನು ಇನ್ನೊಬ್ಬ ವ್ಯಕ್ತಿಗೆ ಮತ್ತು ಮತ್ತೊಬ್ಬ ವ್ಯಕ್ತಿಗೆ ರವಾನಿಸದೇ ಇರುವುದು ಮುಖ್ಯ. ಮಾನವ ಪ್ರಾಣಿಗಳಾಗಿದ್ದರೆ, ಹೇಗಾದರೂ ಪರಸ್ಪರರ ಮೇಲೆ ಬಿದ್ದು ಅದನ್ನು ಸಾರ್ವತ್ರಿಕ ಪ್ರಕ್ರಿಯೆಯನ್ನಾಗಿ ಮಾಡುತ್ತೀರಿ.

ವೈರಸ್​ನಿಂದಾಗಿ ಎಲ್ಲರಿಗೂ ವಿವೇಕ ಮತ್ತು ಅರಿವು ಬರುತ್ತದೆ ಎಂದು ಮೊದಲೇ ತಿಳಿದಿದ್ದರೆ, ನಾನು ನಿಮಗೆ ಬಹಳ ಹಿಂದೆಯೇ ಒಂದನ್ನು ನೀಡುತ್ತಿದ್ದೆ. ನಿಮಗೆ ಅರಿವು ಮೂಡಿಸಲು, ನಿಮ್ಮನ್ನು ಸಂವೇದನಾಶೀಲವಾಗಿಸಲು, ಎಷ್ಟು ವಿಷಯಗಳನ್ನು ನಿಮಗೆ ಕಲಿಸಲು ನಾನು ನನ್ನ ಸಮಯವನ್ನು ಏಕೆ ವ್ಯರ್ಥ ಮಾಡುತ್ತಿದ್ದೇನೆ! ಒಂದು ವೈರಸ್ ಇದನ್ನು ಮಾಡಬಹುದೆಂದು ನನಗೆ ತಿಳಿದಿರಲಿಲ್ಲ. ಒಳ್ಳೆಯದು, ಆದರೆ ಇದು ನಗುವ ವಿಷಯವಲ್ಲ, ಹಾಗೆಂದು ನಿಮ್ಮ ನಗುವನ್ನು ಕಳೆದುಕೊಂಡರೆ ವೈರಸ್ ಹೋಗುವುದಿಲ್ಲ. ನೀವು ಸತ್ತ ರೀತಿಯಲ್ಲಿ ಗಂಭೀರವಾಗಿದ್ದರೆ, ನೀವು ಸಾಯುವ ಮೊದಲೇ ಸಾಯುತ್ತೀರಿ.

ಆದ್ದರಿಂದ, ಈ ರೀತಿಯ ಸಮಯದಲ್ಲಿ, ನಾವು ಬಿಕ್ಕಟ್ಟಿನಲ್ಲಿರುವಾಗ ಅಥವಾ ಬಿಕ್ಕಟ್ಟನ್ನು ಎದುರಿಸಬೇಕಾದಾಗ ಅಥವಾ ಸಂಭವನೀಯ ಬಿಕ್ಕಟ್ಟು ಇದೆ ಎಂದು ನಾವು ಭಾವಿಸುವಾಗ, ಇಂತಹ ಸಮಯದಲ್ಲಿಯೇ ನೀವು ಯಾವ ರೀತಿಯ ವ್ಯಕ್ತಿಗಳು ಎಂಬುದು ಮುಖ್ಯವಾಗುತ್ತದೆ. ಇದು ಎಲ್ಲ ಸಮಯದಲ್ಲೂ ಮುಖ್ಯವಾಗಿರುತ್ತದೆ, ಆದರೆ ಸಾಮಾನ್ಯ ಕಾಲದಲ್ಲಿ ಎಲ್ಲ ರೀತಿಯ ‘ಜೊಳ್ಳು’ಗಳು ತಪ್ಪಿಸಿಕೊಳ್ಳುತ್ತವೆ. ಅವರು ಸ್ವಲ್ಪ ನಟಿಸಬಹುದು ಅಷ್ಟೆ. ಆದರೆ ಬಿಕ್ಕಟ್ಟು ನಿಮಗೆ ಅಪ್ಪಳಿಸಿದಾಗ ನೀವು ಯಾವ ರೀತಿಯ ಮನುಷ್ಯರಾಗಿದ್ದೀರಿ ಎಂಬುದು ಅತ್ಯಂತ ಅಮೂಲ್ಯವಾದ ವಿಷಯ.

ಈಗ ಈ ವೈರಸ್ ಬಿಕ್ಕಟ್ಟು! ನೀವೆಲ್ಲರೂ ಈಗಾಗಲೇ ಸಾಕಷ್ಟು ಓದಿದ್ದೀರಿ, ಅದರ ಬಗ್ಗೆ ಸಾಕಷ್ಟು ಕೇಳಿದ್ದೀರಿ, ನಾನು ಹೆಚ್ಚಿನ ವಿವರ ಮತ್ತು ಅದರ ಸ್ವರೂಪಕ್ಕೆ ಹೋಗುವುದಿಲ್ಲ, ಆದರೆ ನಮ್ಮ ಪಾಲಿಗೆ ಇದರ ಪ್ರಮುಖ ಅಂಶವೆಂದರೆ, ಇದನ್ನು ಸೊಳ್ಳೆ, ಇಲಿಗಳು ಅಥವಾ ಇನ್ನಿತರ ಬೇರೆ ಪ್ರಾಣಿಗಳು ಒಯ್ಯುತ್ತಿಲ್ಲ, ಇದು ನಮ್ಮಿಂದ ಒಯ್ಯಲ್ಪಡುತ್ತಿದೆ. ನಾವೇ ವಾಹಕಗಳು. ಇದು ಸಮಸ್ಯೆ, ಆದರೆ ಇದು ಒಂದು ದೊಡ್ಡ ಪ್ರಯೋಜನವೂ ಆಗಿದೆ. ಏಕೆಂದರೆ ನಾವು ಮಾನವರು.

ಹಾಗಾಗಿ ನಾವು ನಿರ್ಧರಿಸಿಕೊಳ್ಳಬೇಕು, ನಾವು ಮಾನವ ಜೀವಿಗಳೇ ಅಥವಾ ಮಾನವ ಪ್ರಾಣಿಗಳೇ? ಮಾನವ ಜೀವಿಗಳಾಗಿದ್ದರೆ, ಹೇಗೆ ಇರಬೇಕೆಂದು ನಾವು ತಿಳಿದಿರಬೇಕು. ಹೇಗೆ ಇರಬೇಕೆಂದು ತಿಳಿದಿದ್ದರೆ, ಸರಳ ನಿಯಮಗಳನ್ನು ಅನುಸರಿಸಿ, ಸೋಂಕನ್ನು ಇನ್ನೊಬ್ಬ ವ್ಯಕ್ತಿಗೆ ಮತ್ತು ಮತ್ತೊಬ್ಬ ವ್ಯಕ್ತಿಗೆ ರವಾನಿಸದೇ ಇರುವುದು ಮುಖ್ಯ. ಮಾನವ ಪ್ರಾಣಿಗಳಾಗಿದ್ದರೆ, ಹೇಗಾದರೂ ಪರಸ್ಪರರ ಮೇಲೆ ಬಿದ್ದು ಅದನ್ನು ಸಾರ್ವತ್ರಿಕ ಪ್ರಕ್ರಿಯೆಯನ್ನಾಗಿ ಮಾಡುತ್ತೀರಿ.

ನಮ್ಮಲ್ಲಿ ಅನೇಕರು ಇದೀಗ ವೈರಸ್​ನ ಲಕ್ಷಣರಹಿತ ವಾಹಕಗಳಾಗಿರಬಹುದು. ಹಲವರಲ್ಲಿ ಇದು ಎಂದಿಗೂ ಯಾವುದೇ ರೋಗಲಕ್ಷಣವನ್ನು ತೋರಿಸದಿರಬಹುದು, ಕೆಲವರಲ್ಲಿ ಇದು ಸೌಮ್ಯ ಲಕ್ಷಣಗಳನ್ನು ತೋರಿಸಬಹುದು, ಕೆಲವರಲ್ಲಿ ಇದು ತೀವ್ರವಾದ ರೋಗಲಕ್ಷಣಗಳನ್ನೂ ತೋರಿಸಬಹುದು, ಕೆಲವರು ಸಾಯಬಹುದು. ಆದರೆ ಹೆಚ್ಚಿನವರು ಇದರ ಯಾವುದೇ ರೋಗಲಕ್ಷಣವನ್ನು ತೋರಿಸದೆ ಅದನ್ನು ತಮ್ಮ ಮೂಲಕ ಹರಿಯಲು ಅವಕಾಶ ಮಾಡಿಕೊಡಬಹುದು. ಅಂದರೆ ನಾವು ಅದನ್ನು, ಯಾರ ಜೀವಕ್ಕೆ ಅಪಾಯವಿದೆಯೋ, ನಮಗಿಂತ ಯಾರು ಹೆಚ್ಚು ದುರ್ಬಲವಾಗಿದ್ದಾರೋ ಅವರಿಗೆ ನೀಡುವ ಸಾಧ್ಯತೆ ತಳ್ಳಿಹಾಕಲಾಗದು.

ಆದ್ದರಿಂದ, ನೀವು ಯಾವ ರೀತಿಯ ಮಾನವರು ಎಂದು ಸಾಬೀತುಪಡಿಸುವ ಸಮಯ ಇದಾಗಿದೆ. ಮೊದಲನೆಯದಾಗಿ, ಮಾನವ ಜೀವಿ ಎಂದು ಕರೆಯಲು ಯೋಗ್ಯರಾಗಿದ್ದೀರಾ ಅಥವಾ ಕೇವಲ ಪ್ರಾಣಿಗಳೇ? ಕಡ್ಡಾಯ ಪ್ರವೃತ್ತಿಯ ಪ್ರಾಣಿಯೇ ಅಥವಾ ಒಬ್ಬ ಪ್ರಜ್ಞಾಪೂರ್ವಕ ಜೀವಿಯೇ? ಜೀವಿಯಾಗಿದ್ದರೆ, ನೀವು ಹೇಗೆ ಇರಬೇಕೆಂದು ತಿಳಿದಿರುವುದು ಅತ್ಯಂತ ಮೂಲಭೂತ ವಿಷಯ. ಹೇಗೆ ಇರಬೇಕೆಂದು ತಿಳಿದಿದ್ದರೆ ಸಾಮಾಜಿಕ ವ್ಯವಹಾರ ಆಯ್ಕೆಯಿಂದ ಮಾತ್ರ ನಡೆಯುತ್ತದೆ. ಇದರ ಅಗತ್ಯವಿಲ್ಲದಿದ್ದರೆ ನಿಮ್ಮ ಪಾಡಿಗೆ ನೀವು ಇರಬಹುದು ಮತ್ತು ಅದಕ್ಕೆ ಇದು ಒಳ್ಳೆಯ ಸಮಯ.

‘ಏನನ್ನೂ ಮಾಡದಿರುವ’ ಮೂಲಕ ನೀವು ಪ್ರಪಂಚಕ್ಕೆ ಅದ್ಭುತವಾದದ್ದನ್ನು ಮಾಡಿದ ಭಾರಿ ತೃಪ್ತಿಯನ್ನು ಅನುಭವಿಸಬಹುದು. ಹಿಂದೆಂದೂ ಈ ಅವಕಾಶ ಸಿಕ್ಕಿಲ್ಲ. ನಾನು ನಿಮ್ಮೊಂದಿಗೆ ಅನೇಕ ವರ್ಷಗಳಿಂದ ‘ಏನೂ ಮಾಡದೇ ಇರುವುದರ’ ಬಗ್ಗೆ ಮಾತನಾಡುತ್ತಿದ್ದೇನೆ. ನಿಮ್ಮನ್ನು ಏನೂ ಮಾಡದೆ ಕೆಲವು ನಿಮಿಷಗಳ ಕಾಲ ಕುಳಿತುಕೊಳ್ಳುವಂತೆ ಮಾಡಲು ನಾನು ವಿವಿಧ ಸಾಧನಗಳು, ಬೋಧನೆಗಳು, ವಿಧಾನಗಳೊಂದಿಗೆ ಬರಬೇಕಾಗಿತ್ತು. ಆದರೆ ಈಗ ನೀವು ಏನನ್ನೂ ಮಾಡದೆ ಪ್ರಪಂಚಕ್ಕೆ ದೊಡ್ಡ ಸೇವೆ ಮಾಡುತ್ತಿದ್ದೀರಿ. ದೇಶಸೇವೆ, ಜನರ ಸೇವೆ, ಮಾನವೀಯತೆಗೆ ಸೇವೆ ಏನೂ ಮಾಡದೆ! ಈ ರೀತಿಯ ಮತ್ತೊಂದು ಅವಕಾಶವನ್ನು ನೀವು ಪಡೆಯುವುದಿಲ್ಲ, ಇದನ್ನು ಸಂಪೂರ್ಣವಾಗಿ ಬಳಸಿಕೊಳ್ಳಬೇಕು.

ಇನ್ನೂ ಹನ್ನೆರಡು ತಿಂಗಳ ಅವಧಿಯವರೆಗೆ ಈ ವೈರಸ್ ತನ್ನ ನಾಟಕವನ್ನು ಆಡಬಹುದು ಎಂದು ಭಾವಿಸುತ್ತಿದ್ದೇವೆ. ಮುಂದಿನ ಹನ್ನೆರಡು ತಿಂಗಳುಗಳ ಕಾಲ ಒಂದು ಬದ್ಧತೆಯಿಂದ ಇರಬೇಕು ಎಂದು ನಾನು ಬಯಸುತ್ತೇನೆ. ಈ ಅವಧಿಯಲ್ಲಿ ನಿಮ್ಮ ಕುಟುಂಬಗಳಲ್ಲಿ, ನಿಮ್ಮ ಸುತ್ತಲಿರುವ ಜನರಲ್ಲಿ ಯಾರೂ ಇದಕ್ಕೆ ಗುರಿಯಾಗಬಾರದು. ಈ ಬದ್ಧತೆಯನ್ನು ತೆಗೆದುಕೊಂಡು ಅದು ನಡೆಯುವಂತೆ ನೋಡಿಕೊಳ್ಳಬೇಕು, ಆಗುವುದೇ?

ಪ್ರಶ್ನೆ: ಇದೊಂದು ಅನಿರೀಕ್ಷಿತ ಪರಿಸ್ಥಿತಿ. ದೇಶದಲ್ಲಿ ಮಾತ್ರವಲ್ಲದೆ ಪ್ರಪಂಚದಾದ್ಯಂತವೂ ಯಾರೂ ಯಾವ ಸುಳಿವನ್ನೂ ಹೊಂದಿದಂತಿಲ್ಲ. ಪ್ರಪಂಚದ ಅಂತ್ಯವು ಹತ್ತಿರದಲ್ಲಿದೆ ಎಂದು ನೀವು ಭಾವಿಸುತ್ತೀರಾ?

-ಒಂದು ಬಾರಿ ಇಬ್ಬರು ನಕಲಿ ಬಾಬಾಗಳು ‘ಅಂತ್ಯವು ಹತ್ತಿರದಲ್ಲಿದೆ‘ ಎಂಬ ಬೋರ್ಡ್​ನೊಂದಿಗೆ ನಿಂತಿದ್ದರು. ಕಾರನ್ನು ಓಡಿಸುತ್ತಿದ್ದ ಒಬ್ಬ ವ್ಯಕ್ತಿ ಹತ್ತಿರ ಬಂದು, ಬೋರ್ಡ್ ನೋಡಿ, ಕಾರಿನಿಂದ ತಲೆ ಹೊರಹಾಕಿ, ‘ನೀವೂ ನಿಮ್ಮ ಭವಿಷ್ಯವಾಣಿ... ಬೇರೇನೂ ಕೆಲಸವಿಲ್ಲವೇ...’ ಎಂದು ಏನೇನೋ ಗೊಣಗಿ ಹೊರಟು ಹೋದ. ಸ್ವಲ್ಪ ಸಮಯದ ನಂತರ ಅವರು ಟೈರ್ ಉಜ್ಜಿಕೊಂಡು ಹೋಗುವ ಮತ್ತು ಕ್ರ್ಯಾಶ್ ಆಗಿ ಬಿದ್ದ ಶಬ್ದವನ್ನು ಕೇಳಿದರು. ಆಗ ಅವರಲ್ಲಿ ಒಬ್ಬರು, ‘ನಾವು ಸುಮ್ಮನೆ ಸರಳವಾಗಿ ‘ಸೇತುವೆ ಮುರಿದಿದೆ’ ಎಂದು ಬರೆಯಬೇಕು’ ಎಂದು ಹೇಳಿದರು.

ಆದ್ದರಿಂದ ನಾವು ಹೇಳುತ್ತಿದ್ದೇವೆ, ‘ಜವಾಬ್ದಾರಿಯುತವಾಗಿ ವರ್ತಿಸಿ, ಇದು ಮುಗಿದು ಹೋಗುತ್ತದೆ’ ಎಂದು, ಆದರೆ ನೀವು ‘ಅಂತ್ಯವು ಹತ್ತಿರದಲ್ಲಿದೆ!’ ಎನ್ನಲು ಬಯಸುತ್ತೀರ. ಹಾಗೇನಿಲ್ಲ, ಅಂತ್ಯವೇನು ಹತ್ತಿರದಲ್ಲಿಲ್ಲ. ಪ್ರಪಂಚದ ಜನಸಂಖ್ಯೆಯೇನು ನಾಶವಾಗಿಲ್ಲ. ಆದರೆ ಇದು ಮುಗಿಯುವ ಹೊತ್ತಿಗೆ, ಒಂದು ಪೀಳಿಗೆಯ ಜನರಾಗಿ ‘ನಾವು ಈ ಬಿಕ್ಕಟ್ಟನ್ನು ಚೆನ್ನಾಗಿ ನಿಭಾಯಿಸಿದೆವು’ ಎಂಬ ತೃಪ್ತಿಯನ್ನು ಹೊಂದಿರಬಹುದು ಅಥವಾ ‘ನಾವು ಬೇಜವಾಬ್ದಾರಿಯುತ ಕೆಲಸಗಳನ್ನು ಮಾಡಿ ಅನೇಕ ಅಮೂಲ್ಯವಾದ ಜೀವಗಳನ್ನು ಕಳೆದುಕೊಂಡೆವು’ ಎಂದು ನಮ್ಮ ತಲೆಯನ್ನು ತಗ್ಗಿಸುವ ಅವಮಾನವನ್ನು ನಾವು ಹೊಂದಬಹುದು.

ಒಂದೋ ನೀವು ಈ ಹನ್ನೆರಡು ತಿಂಗಳ ಅವಧಿಯಲ್ಲಿ, ನಿಮ್ಮ ತಲೆಯನ್ನು ಅವಮಾನದಿಂದ ತಗ್ಗಿಸುತ್ತೀರಿ ಅಥವಾ ಜೀವನದಲ್ಲಿ ಒಂದು ನಿರ್ದಿಷ್ಟವಾದ ಸಂಕಲ್ಪ ಮತ್ತು ಉದ್ದೇಶದಿಂದ ನಡೆದುಕೊಳ್ಳುತ್ತೀರಿ. ಏಕೆಂದರೆ ಒಂದು ಪೀಳಿಗೆಯ ಜನರಾಗಿ ನಾವು ಇದರ ಮೂಲಕ ಮಾನವೀಯತೆಗೆ ಕನಿಷ್ಠ ಪ್ರಮಾಣದ ಹಾನಿಯೊಂದಿಗೆ ಸಾಗಿರುತ್ತೇವೆ. ಈ ಒಂದು ವಿಷಯ ಖಂಡಿತವಾಗಿಯೂ ನಿಮಗೆ ಲಭ್ಯವಿರುತ್ತದೆ. ಹನ್ನೆರಡು ತಿಂಗಳ ಸಮಯದ ನಂತರ ನಾವು ನಮ್ಮ ತಲೆಯನ್ನು ಎತ್ತರಕ್ಕೆ ಎತ್ತಿ ಹಿಡಿಯಬೇಕು ಎಂಬುದು ನನ್ನ ಆಸೆ ಮತ್ತು ಆಶೀರ್ವಾದ, ಅದನ್ನು ಮಾಡೋಣ.

ಪ್ರಶ್ನೆ: ನನ್ನ ತಂದೆ ವೈದ್ಯರು. 68 ವರ್ಷ. ಅವರು ತಮ್ಮ ಕರ್ತವ್ಯಗಳನ್ನು ಪೂರೈಸುವ ಅಗತ್ಯವಿದೆ ಎಂದು ನಾನು ಅರ್ಥಮಾಡಿಕೊಂಡಿದ್ದೇನೆ, ಆದರೆ ಅವರ ಆರೋಗ್ಯದ ಬಗ್ಗೆ ಭಯ. ಈ ಭಯವನ್ನು ಹೇಗೆ ನಿವಾರಿಸಬೇಕೆಂದು ಮಾರ್ಗದರ್ಶನ ಮಾಡುವಿರಾ?

ನಿಮ್ಮಲ್ಲಿರುವ ಕಾಳಜಿಯನ್ನು ನಾನು ಮೆಚ್ಚುತ್ತೇನೆ ಮತ್ತು ಗೌರವಿಸುತ್ತೇನೆ. ಪ್ರತಿಯೊಬ್ಬ ವೈದ್ಯಕೀಯ ವೃತ್ತಿಪರರು ಸೋಂಕಿಗೆ ಒಳಗಾಗುತ್ತಾರೆ ಅಥವಾ ಇದರಿಂದ ತೊಂದರೆಗೆ ಒಳಗಾಗುತ್ತಾರೆ ಎಂದೇನಿಲ್ಲ. ಆದರೆ ಸೂಕ್ತ ಕಾಳಜಿಯನ್ನೂ ತೆಗೆದುಕೊಳ್ಳಬೇಕು. ಕಾಳಜಿ ವೈದ್ಯಕೀಯ ವೃತ್ತಿಯವರಿಂದಲೇ ಮಾತ್ರವಲ್ಲ, ರೋಗಿಗಳು ಮತ್ತು ಬರುವ ಇತರರಿಂದಲೂ ಇರಬೇಕು. ಅವರು ಹೇಗೆ ವರ್ತಿಸುತ್ತಾರೆ ಮತ್ತು ಅವರು ಹೇಗೆ ನಡೆದುಕೊಳ್ಳುತ್ತಾರೆ ಎಂಬುದೂ ಮುಖ್ಯ. ‘ನಾನು ಸೋಂಕನ್ನು ಹೊಂದಿರಬಹುದು’ ಎಂಬ ಭಯದಿಂದ ಹೋಗಿ ನಿಮ್ಮ ವೈದ್ಯರನ್ನು ಹಿಡಿದುಕೊಳ್ಳಲು ಬಯಸುವುದು ಸರಿಯಾದ ಮಾರ್ಗವಲ್ಲ. ಪ್ರತಿಯೊಬ್ಬರೂ ಜವಾಬ್ದಾರಿಯುತವಾಗಿ ವರ್ತಿಸುವುದು ಮುಖ್ಯ. ವಿಶೇಷವಾಗಿ ನಮಗೆ ಸೇವೆ ಸಲ್ಲಿಸಲು ಇಲ್ಲಿರುವವರ ಜೀವನವನ್ನು ನಾವು ಹಾನಿಗೊಳಿಸಬಾರದು.

ನಮಗೆ ಸೇವೆ ಸಲ್ಲಿಸಲು ಬದ್ಧರಾಗಿ ಇರುವ ವೈದ್ಯಕೀಯ ವೃತ್ತಿಪರರಿಗೆ ಬೇಜವಾಬ್ದಾರಿಯಿಂದ ಸೋಂಕು ಉಂಟುಮಾಡದೆ ಇರುವುದು ಪ್ರತಿಯೊಬ್ಬ ನಾಗರಿಕರ ಜವಾಬ್ದಾರಿಯಾಗಿದೆ ಮತ್ತು ಪರಿಸ್ಥಿತಿ ಸ್ವಲ್ಪ ಹೆಚ್ಚು ಅನಿಯಂತ್ರಿತವಾದಲ್ಲಿ ನೀವು ಎಷ್ಟು ವೈದ್ಯರನ್ನು ಹೊಂದಿದ್ದರೂ ಸಾಲುವುದಿಲ್ಲ. ಆದ್ದರಿಂದ ಈ ಸಂದರ್ಭದಲ್ಲಿ, ವೈದ್ಯರನ್ನು ಉಳಿಸುವುದು ಮತ್ತು ರಕ್ಷಿಸುವುದು ಬಹಳ ಮುಖ್ಯ. ದಯವಿಟ್ಟು, ನೀವು ಯಾರೇ ಆಗಿರಲಿ, ನೀವು ಎಲ್ಲಿದ್ದರೂ, ಅವರ ಯೋಗಕ್ಷೇಮವನ್ನು ನೋಡಿಕೊಳ್ಳಲಾಗಿದೆಯೆ ಎಂದು ಖಚಿತಪಡಿಸಿಕೊಳ್ಳಿ ಮತ್ತು ಅಗತ್ಯವಿರುವ ಎಲ್ಲ ರೀತಿಯಲ್ಲಿಯೂ ಅವರಿಗೆ ಅಗತ್ಯವಾದ ಬೆಂಬಲವನ್ನು ಕೊಡಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net