ಶಬ್ದಗಳನ್ನು ಮೀರಿ ನಿಶ್ಶಬ್ದದತ್ತ ಸಾಗುವ ಅದ್ಭುತ ಪಯಣ...

sadguru
Published on

ಪದಗಳ ಬೆಂಬಲ ಪಡೆದು ಮುಂದೆ ಸಾಗಿದರೆ, ಅಸಂಬದ್ಧದಿಂದ ತುಂಬಿಹೋಗುವಿರಿ. ಶಬ್ದಗಳ ಬೆಂಬಲ ಪಡೆದು ಮುಂದೆ ಸಾಗಿದರೆ, ಪ್ರಕೃತಿಯ ವಿವಿಧಾಂಶಗಳನ್ನು ಪರಿಶೋಧಿಸಬಹುದು. ರೂಪಗಳಿಂದ ತುಂಬಿರುವುದೇ ಎಲ್ಲವೂ ಅಲ್ಲವಾದರೂ ಅದು ಪದಗಳಲ್ಲಿ ಕಳೆದುಹೋಗುವುದಕ್ಕಿಂತ ಒಂದು ಹೆಜ್ಜೆ ಮುಂದೆ.

ಮಾತು ಸಮಾಜದ್ದು, ಪದಗಳು ಮನಸ್ಸಿನದ್ದು, ಶಬ್ದಗಳು ಪ್ರಕೃತಿಯದ್ದು, ನಿಶ್ಶಬ್ದ ಅತೀತದ್ದು. ಹೀಗಾಗಿ, ಯಾರು ತಮ್ಮನ್ನು ತಮ್ಮ ಮಾತಿನೊಂದಿಗೆ ಗುರುತಿಸಿಕೊಳ್ಳುತ್ತಾರೋ, ಅಂತಹವರು ಸಮಾಜಕ್ಕೆ ಸೇರಿರುತ್ತಾರೆ. ಯಾರು ಪದಗಳಿಂದ ಗುರುತಿಸಿಕೊಳ್ಳುತ್ತಾರೋ, ಅಂತಹವರು ಮನಸ್ಸಿಗೆ ಸೇರಿರುತ್ತಾರೆ. ಯಾರು ಶಬ್ದಗಳೊಂದಿಗೆ ಗುರುತಿಸಿಕೊಳ್ಳುತ್ತಾರೋ, ಅಂತಹವರು ಪ್ರಕೃತಿಗೆ ಸೇರಿರುತ್ತಾರೆ. ನಿಶ್ಶಬ್ದತೆಯಲ್ಲಿ ವಿಲೀನವಾದವರಿಗೆ ಮಾತ್ರ ಅತೀತದ ಅನುಭವಗಳು ಲಭ್ಯವಾಗುತ್ತವೆ.

ನಾವು ‘ಸಮಾಜ’ ಎಂದು ಕರೆಯುವುದು ಮೂಲಭೂತವಾಗಿ ಒಂದು ಮಾತುಕತೆ. ನಿರಂತರ ಮಾತುಕತೆಯಿಂದಾಗಿ, ಅಂದರೆ ಒಂದು ರೀತಿಯ ಸಂಪರ್ಕ, ಆಲೋಚನೆ, ಭಾವನೆ ಮತ್ತು ವಿಚಾರಗಳ ಅಭಿವ್ಯಕ್ತಿ ಇರುವುದರಿಂದಲೇ ನೀವು ಏನನ್ನಾದರೂ ಸಮಾಜ ಎಂದು ಕರೆಯಬಹುದಾಗಿದೆ. ಯಾವುದೇ ಮಾತುಕತೆ ಅಥವಾ ಸಂಪರ್ಕವಿಲ್ಲದಿದ್ದರೆ, ಅಥವಾ ಮೂಲಭೂತವಾಗಿ ಮಾತೇ ಇಲ್ಲದಿದ್ದರೆ, ಸಮಾಜವಿರುವುದಿಲ್ಲ. ಹೆಚ್ಚಿನವರಿಗೆ ಮೌನವಾಗಿರುವುದು ತುಂಬ ಕಷ್ಟ, ಏಕೆಂದರೆ ಮೌನವು, ಒಬ್ಬ ಸಾಮಾಜಿಕ ಜೀವಿಯಿಂದ ವೈಯಕ್ತಿಕ ಜೀವಿಯಾಗಿ ಬದಲಾಗುವ ಮಾರ್ಗವಾಗಿದೆ. ‘ಸಾಮಾಜಿಕ ಜೀವಿ’ ಎಂಬ ಪದವು ‘ಒಂದು ಗುಂಪು’ ಎಂದು ಕರೆಯುವ ಸಭ್ಯ ರೀತಿಯಷ್ಟೇ. ಗ್ರಹಿಸುವಿಕೆ, ಅತೀತವನ್ನು ದಾಟುವ ಹಂಬಲ ಮತ್ತು ಜ್ಞಾನೋದಯವನ್ನು ಹೊಂದುವುದು ವ್ಯಕ್ತಿಗತವಾಗಿ ಮಾತ್ರ ಸಾಧ್ಯ, ಏಕೆಂದರೆ ಸಮಾಜವೊಂದು ವಾಸ್ತವಿಕತೆಯಲ್ಲ, ಅದು ಕೇವಲ ಮಾತುಕತೆ, ಮಾತುಗಳ ಗಲಾಟೆಯಷ್ಟೆ.

ಮಾನವ ಮನಸ್ಸಿಗೆ ಪದವನ್ನು ಆವಿಷ್ಕರಿಸಲು ಸಾಧ್ಯವಾಗಿದ್ದರಿಂದಲೇ ಸಂಭಾಷಣೆ, ಮಾತು ಮತ್ತು ಸಾಮಾಜಿಕ ವ್ಯವಸ್ಥೆಗಳು ರೂಪುಗೊಂಡವು. ಪದ ವಾಸ್ತವತೆಯಲ್ಲ. ಮನಸ್ಸೂ ಸಹ ವಾಸ್ತವವಲ್ಲ. ಶಬ್ದ ಒಂದು ವಾಸ್ತವ. ಪ್ರಕೃತಿಯಲ್ಲಿ ಎಲ್ಲ ರೀತಿಯ ಶಬ್ದಗಳಿವೆ. ಆದರೆ ಪದ ವಾಸ್ತವವಲ್ಲ. ಭಾರತದಲ್ಲಿ, 1300ಕ್ಕೂ ಹೆಚ್ಚು ಭಾಷೆಗಳು ಮತ್ತು ಉಪಭಾಷೆಗಳಿವೆ. ಇವುಗಳಿಗೆ ಸಮೀಪದ ನಂಟಿರುವುದರಿಂದ ಒಂದು ಭಾಷೆಯಲ್ಲಿನ ಒಂದು ಪದದ ಅರ್ಥ ಯಾವುದೋ ಒಂದು ಪವಿತ್ರ ವಸ್ತುವಾದರೆ ಇನ್ನೊಂದು ಭಾಷೆಯಲ್ಲಿ ಅದು ಹೊಲಸು ಪದದ ಅರ್ಥವಾಗಿರುತ್ತದೆ. ಪದ ಒಂದು ನಿರ್ವಿುತ ವಿಷಯ. ಶಬ್ದ ನಿರ್ವಿುತ ವಿಷಯವಲ್ಲ. ಶಬ್ದ ಒಂದು ಖಚಿತ ವಾಸ್ತವ. ಪ್ರಕೃತಿಯ ಸ್ವರೂಪವನ್ನು ಭೇದಿಸುವುದಕ್ಕೆ ಶಬ್ದ ಒಂದು ಮಾಧ್ಯಮವಾಗಬಹುದು, ಆದರೆ ಪದಗಳು ನಿಮ್ಮನ್ನು ಎಲ್ಲಿಯೂ ಕರೆದೊಯ್ಯುವುದಿಲ್ಲ, ಏಕೆಂದರೆ ಅವುಗಳು ಮನಸ್ಸಿನಲ್ಲಿ ರೂಪುಗೊಂಡಿವೆಯಷ್ಟೆ. ಶಬ್ದ ನಿಮ್ಮನ್ನು ನಿರಂತರವಾಗಿ ಆವರಿಸಿರುವ ವಾಸ್ತವ. ‘ರೂಪ’ ಎಂದು ಏನನ್ನು ಕರೆಯುತ್ತೀರೋ, ಅದು ಶಬ್ದದ ಮತ್ತೊಂದು ಸ್ತರ. ಶಬ್ದ ಒಂದು ಕಂಪನವಾಗಿದ್ದು ಅದು ಅಸ್ತಿತ್ವದ ವಾಸ್ತವ. ಪದಗಳ ನಿರಂತರ ಬಳಕೆ ಮತ್ತು ವಾಕ್ಯಗಳು, ಭಾಷೆ, ಸಂಭಾಷಣೆ ಮತ್ತು ಸಾಹಿತ್ಯ ಎಂದು ಕರೆಯುವ ಪದಗಳ ಹೆಚ್ಚು ಸಂಕೀರ್ಣ ರಚನೆಗಳ ಕಾರಣದಿಂದ ಮನಸ್ಸು ಪದಗಳಿಂದ ತುಂಬಿಹೋಗಿದೆ- ಎಷ್ಟು ತುಂಬಿಹೋಗಿದೆಯೆಂದರೆ ಅಸ್ತಿತ್ವದ ವಾಸ್ತವವೇ ಮಂಕಾಗಿದೆ.

ಪತಂಜಲಿಯ ಯೋಗದ ವ್ಯಾಖ್ಯಾನ ‘ಚಿತ್ತ ವೃತ್ತಿ ನಿರೋಧಃ’ ಎಂದು. ಇದರರ್ಥ, ‘ನಿಮ್ಮ ಮನಸ್ಸಿನ ಎಲ್ಲ ಬದಲಾವಣೆಗಳು ಇಲ್ಲವಾದಾಗ, ಅದು ಯೋಗ.’ ಮನಸ್ಸಿನ ಹೊಯ್ದಾಟ ಇಲ್ಲವಾದಾಗ, ಅದು ಯೋಗ. ಮನಸ್ಸಿನ ಹೊಯ್ದಾಟ ಮೂಲಭೂತವಾಗಿ ನಾವು ಹುಟ್ಟಿಸುವ ಪದಗಳಿಂದ ಉಂಟಾಗುತ್ತದೆ. ಪದಗಳನ್ನು ಹುಟ್ಟಿಸುವುದೆಂದರೆ ಅರ್ಥಹೀನ ಶಬ್ದಗಳಿಗೆ ಅರ್ಥಗಳನ್ನು ರೂಪಿಸುತ್ತಿದ್ದೀರಿ ಎಂದು.

ಪದಗಳ ಬೆಂಬಲ ಪಡೆದು ಮುಂದೆ ಸಾಗಿದರೆ, ಅಸಂಬದ್ಧದಿಂದ ತುಂಬಿಹೋಗುವಿರಿ. ಶಬ್ದಗಳ ಬೆಂಬಲ ಪಡೆದು ಮುಂದೆ ಸಾಗಿದರೆ, ಪ್ರಕೃತಿಯ ವಿವಿಧಾಂಶಗಳನ್ನು ಪರಿಶೋಧಿಸಬಹುದು. ರೂಪಗಳಿಂದ ತುಂಬಿರುವುದೇ ಎಲ್ಲವೂ ಅಲ್ಲವಾದರೂ ಅದು ಪದಗಳಲ್ಲಿ ಕಳೆದುಹೋಗುವುದಕ್ಕಿಂತ ಒಂದು ಹೆಜ್ಜೆ ಮುಂದೆ. ಹತ್ತು ಬೇರೆ ಬೇರೆ ಭಾಷೆಗಳನ್ನು ಕಲಿಯುತ್ತಿದ್ದು, ಹತ್ತೂ ಭಾಷೆಗಳನ್ನು ಸರಾಗವಾಗಿ ಬಳಸುತ್ತಿದ್ದರೆ, ಮನಸ್ಸಿನಲ್ಲಿ ಯಾವುದೇ ಪದಗಳಿರುವುದಿಲ್ಲ, ಕೇವಲ ರೂಪಗಳಿರುತ್ತವೆ ಎಂಬುದನ್ನು ಗಮನಿಸಬಹುದು, ಏಕೆಂದರೆ ಈಗ ‘ಮರ’ ಎಂದು ಹೇಳಬೇಕಾದರೆ, ಮರಕ್ಕೆ ಹತ್ತು ಪದಗಳಿವೆ. ಸಂಸ್ಕೃತ ಭಾಷೆ ಇದನ್ನು ಮಾಡಿದೆ- ಪ್ರತಿ ರೂಪಕ್ಕೂ ಅವರು ಹತ್ತಾರು ವಿಭಿನ್ನ ಪದಗಳನ್ನು ರಚಿಸಿದ್ದಾರೆ. ಇದರಿಂದ ಮನಸ್ಸಿನಲ್ಲಿ ಪದ ಉಳಿಯುವುದಿಲ್ಲ, ರೂಪ ಮಾತ್ರ ಉಳಿಯುತ್ತದೆ. ಮಾತನಾಡಬೇಕಾದಾಗ, ಒಂದು ರೂಪವನ್ನು ರಚಿಸಿ, ಪರಿಸ್ಥಿತಿಗೆ ಅನುಗುಣವಾಗಿ ಸೂಕ್ತವಾದ ಪದವನ್ನು ನಿರ್ವಿುಸಬೇಕು. ಜೀವಿಸುತ್ತಿದಂತೆ, ಸ್ವತಃ ಜೀವನದ ಪ್ರಕ್ರಿಯೆಯೇ ಹಂತ ಹಂತವಾಗಿ ಆ ನಿಶ್ಶಬ್ದದತ್ತ, ಸೃಷ್ಟಿ ಮತ್ತು ವಿಮೋಚನೆಯ ಮೂಲದತ್ತ ಕರೆದೊಯ್ಯಲು ಈ ಸಾಧನಗಳನ್ನು ರಚಿಸಲಾಯಿತು. ಎಲ್ಲವನ್ನೂ ಆ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿತ್ತು.

ಪಂಚೇಂದ್ರಿಯಗಳ ಮೂಲಕ ನಮಗೆ ನೋಡಲು, ಕೇಳಲು, ಆಘ್ರಾಣಿಸಲು, ಆಸ್ವಾದಿಸಲು ಮತ್ತು ರ್ಸ³ಸಲು ಸಾಧ್ಯವಾಗುವ ಈ ಅಸ್ತಿತ್ವ ಮೂಲಭೂತವಾಗಿ ಒಂದು ಕಂಪನದ ಉತ್ಪನ್ನವಾಗಿದೆ; ಶಬ್ದ ಅಥವಾ ನಾದದ ಲೀಲೆಯಾಗಿದೆ. ಮನುಷ್ಯನ ದೇಹ ಮತ್ತು ಮನಸ್ಸು ಸಹ ಕಂಪನಗಳೇ. ಆದರೆ ದೇಹ ಮತ್ತು ಮನಸ್ಸು, ಅವೇ ಒಂದು ಅಂತ್ಯವಲ್ಲ- ಅವು ಕೇವಲ ಸಾಧ್ಯತೆಯ ಹೊರಗಿನ ಸಿಪ್ಪೆಯಷ್ಟೆ. ಹೆಚ್ಚಿನವರು ಸಿಪ್ಪೆಯ ಮಟ್ಟವನ್ನು ಮೀರಿ ಹೋಗುವುದಿಲ್ಲ; ಅವರು ಜೀವನದುದ್ದಕ್ಕೂ ದ್ವಾರದ ಹೊಸ್ತಿಲಿನಲ್ಲೇ ಕುಳಿತಿರುತ್ತಾರೆ. ಆದರೆ ದ್ವಾರದ ಉದ್ದೇಶ ಅದನ್ನು ಪ್ರವೇಶಿಸುವುದು; ಆ ದ್ವಾರವನ್ನು ದಾಟಿದಾಗ ಏನಿದೆಯೋ, ಅದನ್ನು ಅನುಭವಿಸುವುದು. ಮಾತನಾಡದಿರುವ ಅಭ್ಯಾಸವನ್ನು ಮೌನ ಎಂದು ಕರೆಯಲಾಗುತ್ತದೆ.

‘ಸೈಲೆನ್ಸ್’ ಎಂಬ ಇಂಗ್ಲಿಷ್ ಪದ ಹೆಚ್ಚೇನನ್ನೂ ಹೇಳುವುದಿಲ್ಲ. ಸಂಸ್ಕೃತ ಭಾಷೆಯಲ್ಲಿ ಸೈಲೆನ್ಸ್-ಗೆ ಹಲವು ಪದಗಳಿವೆ. ‘ಮೌನ’ ಮತ್ತು ‘ನಿಶ್ಶಬ್ದ’ ಎರಡು ಮುಖ್ಯವಾದವು. ‘ಮೌನ’ ಎಂದರೆ ಸಾಮಾನ್ಯವಾಗಿ ತಿಳಿದಿರುವಂತೆ ಮಾತನಾಡದಿರುವುದು; ಇದು ನಿಶ್ಶಬ್ದವನ್ನು ಉಂಟುಮಾಡುವ ಪ್ರಯತ್ನ. ‘ನಿಶ್ಶಬ್ದ’ ಎಂದರೆ ಶಬ್ದರಾಹಿತ್ಯ ಅಥವಾ ಶಬ್ದವನ್ನು ಮೀರಿದ್ದು ಎಂದು. ಯಾವುದು ಶಬ್ದವನ್ನು ಮೀರಿದೆಯೋ, ಅದು ರೂಪ ಮತ್ತು ಪಂಚಭೂತಗಳ ಆಟವನ್ನು ಮೀರಿದೆ. ಯಾವುದು ಶಬ್ದವನ್ನು ಮೀರಿದೆಯೋ, ಅದು ಸೃಷ್ಟಿಯ ಮೂಲಕ್ಕೆ ಅಂತಿಮ ದ್ವಾರವಾಗಿದೆ.

ನಿಶ್ಶಬ್ದ, ನಿರ್ವಾಣ, ನಿರ್ವಿಕಲ್ಪ, ಇವೆಲ್ಲವೂ ಒಂದು ರೀತಿಯಲ್ಲಿ ಒಂದೇ. ನಿಶ್ಶಬ್ದ ಎಂದರೆ ಶಬ್ದರಾಹಿತ್ಯ, ನಿರ್ವಾಣ ಎಂದರೆ ನಿರಾಕಾರತೆ, ನಿರ್ವಿಕಲ್ಪ ಎಂದರೆ ಕಲ್ಪ ಅಥವಾ ಸೃಷ್ಟಿಗೆ ಮೀರಿದ್ದು, ಯಾವುದು ಶಬ್ದವೂ ಅಲ್ಲ ಅಥವಾ ರೂಪವೂ ಅಲ್ಲ ಎಂದು.

ಮಹಾನ್ ಯೋಗಿಗಳಾದ ಮತ್ಸೆ್ಯೕಂದ್ರನಾಥ ಮತ್ತು ಗೋರಖನಾಥರ ಬಗ್ಗೆ ಒಂದು ಕಥೆ ಇದೆ. ಅವರಿಬ್ಬರು ಒಂದು ಬಾರಿ ಸಂಚರಿಸುತ್ತಿದ್ದಾಗ ಆಗಷ್ಟೇ ಒಂದು ಸಣ್ಣ ಹೊಳೆಯನ್ನು ದಾಟಿದ್ದರು. ಮತ್ಸೆ್ಯೕಂದ್ರನಾಥರು ಮರದ ಕೆಳಗೆ ಕುಳಿತು ‘ನನಗೆ ಸ್ವಲ್ಪ ನೀರು ತಂದುಕೊಡು’ ಎಂದರು. ಗೋರಖನಾಥ ನೀರನ್ನು ತರಲು ಧಾವಿಸಿದ. ಗುರು ನೀರು ಕೇಳಿದರೆ, ಅವನಿಗೆ ಅದನ್ನು ಒಂದು ಕ್ಷಣದಲ್ಲಿ ತಂದುಕೊಡಬೇಕು; ಆದ ಕಾರಣ ಅವನು ಓಡಿದ. ಹೊಳೆಯ ನೀರು ಕೆಸರುಮಯವಾಗಿದ್ದನ್ನು ಕಂಡ. ಗುರುವಿನ ಬಳಿ ಓಡಿ ಬಂದು, ‘ಆ ಸ್ಥಳದಲ್ಲಿ ನೀರು ಕೆಸರುಮಯವಾಗಿದೆ. ಕೇವಲ ಹತ್ತು ನಿಮಿಷಗಳ ನಡಿಗೆಯ ದೂರದಲ್ಲಿ ಒಂದು ನದಿ ಇದೆ, ಅಲ್ಲಿಂದ ನೀರನ್ನು ತರುತ್ತೇನೆ.’ ಎಂದ. ಮತ್ಸೆ್ಯೕಂದ್ರನಾಥರು, ‘ಇಲ್ಲ, ಅದೇ ಹೊಳೆಯಿಂದ, ಅದೇ ಸ್ಥಳದಿಂದ ನೀರನ್ನು ತಾ’ ಎಂದರು. ಗೋರಖನಾಥ ಮತ್ತೆ ಹೊಳೆಯ ಕಡೆಗೆ ಓಡಿದ. ನೀರಿನ್ನೂ ಕೆಸರುಮಯವಾಗಿತ್ತು. ಏನು ಮಾಡಬೇಕೆಂದು ತಿಳಿಯದೆ ಮತ್ತೆ ಗುರುವಿನ ಬಳಿಗೆ ಓಡಿದ. ಗುರುಗಳು ಮತ್ತೆ, ‘ಇಲ್ಲ, ನನಗೆ ಆ ಹೊಳೆಯಿಂದಲೇ ನೀರು ಬೇಕು’ ಎಂದರು. ಅವನು ಮತ್ತೆ ಹೊಳೆಗೆ ಬಂದ. ಅಲ್ಲಿ ನೀರು ಸ್ವಲ್ಪ ತಿಳಿಯಾಗಿದ್ದನ್ನು ನೋಡಿ, ಸ್ವಲ್ಪ ಹೊತ್ತು ಕಾದ. 5-10 ನಿಮಿಷಗಳಲ್ಲಿ ಅದು ಚೆನ್ನಾಗಿ ತಿಳಿಯಾಯಿತು. ಭಾವೋತ್ಕರ್ಷನಾಗಿ, ಸಂತೋಷದಿಂದ ಜಿಗಿಯುತ್ತ ನೀರನ್ನು ತಂದು ಗುರುವಿಗೆ ನೀಡಿದ. ಮತ್ಸೆ್ಯೕಂದ್ರನಾಥರು ನೀರನ್ನು ಕುಡಿಯಲಿಲ್ಲ, ಅದನ್ನು ಬದಿಗಿಟ್ಟರು. ಅವರಿಗೆ ಬಾಯಾರಿಕೆಯಾಗಿರಲಿಲ್ಲ.

ಗೋರಖನಾಥ ಎಂತಹವನೆಂದರೆ, ಅವನಿಗೆ ಒಂದು ಮಂತ್ರ ಹತ್ತು ಬಾರಿ ಪಠಿಸಲು ಹೇಳಿದರೆ, ಅದನ್ನವನು ಹತ್ತು ಸಾವಿರ ಬಾರಿ ಹೇಳುವಂತಹವನು. ಸದಾ ಕಾಲ ಅತೀವವಾಗಿ ಸಕ್ರಿಯವಾಗಿರುವವನು. ಅವನಿಗೆ ಏನೇ ಹೇಳಿದರೂ, ಅದನ್ನವನು ಅತ್ಯುತ್ಸಾಹದಿಂದ ಮಾಡುವಂತಹವನು. ಅದು ಒಳ್ಳೆಯ ಗುಣವಾದರೂ ಅವನು ಇನ್ನೊಂದು ಸ್ತರಕ್ಕೆ ತೆರಳುವ ಸಮಯ ಬಂದಿತ್ತು. ಹಾಗಾಗಿ ಮತ್ಸೆ್ಯೕಂದ್ರನಾಥರು ಅವನಿಗೊಂದು ಸಂದೇಶ ಕೊಡುತ್ತಿದ್ದರು-‘ನೀನು ಓಡಾಡುವುದನ್ನು ಮತ್ತು ತೀವ್ರತರವಾದ ಚಟುವಟಿಕೆಯನ್ನು ಉತ್ತಮವಾಗಿ ಮಾಡಿರುವೆ. ಆದರೆ ಈಗ ಸಮಯ ಬಂದಾಗಿದೆ. ಸ್ವಲ್ಪ ತಾಳು, ಅದು ಸುಸ್ಪಷ್ಟವಾಗುತ್ತದೆ’.

ಶಬ್ದ ಮೂಲತಃ ಮನಸ್ಸಿನಲ್ಲಿರುವುದು. ಮಲಗಿದ್ದರೆ, ಏನೇ ಶಬ್ದವಾಗುತ್ತಿದ್ದರೂ ಅದು ಅಪ್ರಸ್ತುತ. ನಿದ್ರಾಹೀನತೆಯಿದ್ದರೆ ಮಾತ್ರ ಅದು ಸಮಸ್ಯೆ, ಇಲ್ಲದಿದ್ದರೆ ಮಲಗಿದ್ದಾಗ ಶಬ್ದಕ್ಕೆ ಯಾವ ಅರ್ಥವಿದೆ? ಮಬ್ಬಾದ ಮನಸ್ಸಿರುವುದು ನೀವು ಹುಟ್ಟಿಸುವ ಶಬ್ದಗಳಿಂದಾಗಿ- ಅದು ಪದಗಳ ಆಕಾರವನ್ನು ಪಡೆದುಕೊಳ್ಳುತ್ತದೆ, ಮತ್ತು ಅರ್ಥರಹಿತ ಶಬ್ದಗಳಿಗೆ ಅರ್ಥವನ್ನು ಕೊಡುತ್ತೀರಿ. ಶಬ್ದಗಳೆಲ್ಲ ಇಲ್ಲವಾದರೆ, ಪದಗಳಿಗೆ ಅರ್ಥ ಕೊಡುವುದನ್ನು ನಿಲ್ಲಿಸಿದರೆ, ಎಲ್ಲವೂ ಬಿದ್ದುಹೋದರೆ, ಆಗ ಸುಸ್ಪಷ್ಟವಾಗುತ್ತದೆ, ನಿಶ್ಶಬ್ದವಾಗುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net