

ಓಂ ಸಹನಾವವತು | ಸಹನೌ ಭುನಕ್ತು |
ಸಹ ವೀರ್ಯು ಕರವಾವಹೈ | ತೇಜಸ್ವಿ ನಾವತಮಸ್ತು ಮಾ ವಿದ್ವಿಷಾವಹೈ ||
ಇದು ಉಪನಿಷತ್ತಿನ ಒಂದು ಶಾಂತಿಮಂತ್ರ. ಈ ಮಂತ್ರವು ಅಧ್ಯಯನದ ಪ್ರಾರಂಭದಲ್ಲಿ ಗುರು-ಶಿಷ್ಯರು ಪಠಿಸುವ ಪ್ರಾರ್ಥನೆಯಾಗಿದೆ-‘ದೇವರೇ, ನಮ್ಮಿಬ್ಬರನ್ನೂ ರಕ್ಷಿಸು; ಕಲಿಕೆ ಹಾಗೂ ಬೋಧನೆಯ ಈ ಸಂದರ್ಭದಲ್ಲಿ ನಮ್ಮಿಬ್ಬರನ್ನೂ ಜ್ಞಾನದಿಂದ ಪೋಷಿಸು; ಜ್ಞಾನಾರ್ಜನೆಯ ಈ ಮಾರ್ಗದಲ್ಲಿ ನಾವು ಹೆಚ್ಚಿನ ಪ್ರಯತ್ನವನ್ನು ಮಾಡುವಂತಾಗಲಿ; ಆತ್ಮಜ್ಞಾನದ ಕಡೆಗೆ ಕೊಂಡೊಯ್ಯಲು ಸಹಾಯಕವಾಗುವ, ನಮ್ಮ ಬುದ್ಧಿಯನ್ನು ಪ್ರಚೋದಿಸುವ, ಏಕಾಗ್ರತೆಯನ್ನು ಪ್ರಸಾದಿಸಿ, ಅದನ್ನು ಅನುಸರಿಸುವಂತೆ ಅನುಗ್ರಹಿಸು; ನಾವಿಬ್ಬರೂ ಪರಸ್ಪರ ಎಂದೂ ದ್ವೇಷಿಸುವಂತಾಗದಿರಲಿ.’
ಅತ್ಯುತ್ತಮ ಗುರು, ಉತ್ತಮ ವಿದ್ಯಾರ್ಥಿ ಹಾಗೂ ಸುಂದರ ಶಿಕ್ಷಣ ವಿಧಾನವನ್ನು ಹೊಂದಿರುವ ಭಗವದ್ಗೀತೆಯು ಇಂತಹ ಒಂದು ಮೇರುಕೃತಿಯಾಗಿದೆ. ಏಕೆಂದರೆ ಜ್ಞಾನವನ್ನು ಬೋಧಿಸಲು ಶ್ರೀಕೃಷ್ಣನು ಎಷ್ಟು ಉತ್ಸುಕನಾಗಿದ್ದನೋ, ಅಷ್ಟೇ ಉತ್ಸುಕತೆಯಿಂದ ಅರ್ಜುನನು ಆ ಜ್ಞಾನವನ್ನು ಪಡೆಯುವ ಹಸಿವು ಹಾಗೂ ಪಡೆದ ಜ್ಞಾನವನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಸದ್ಬುದ್ಧಿಯನ್ನು ಹೊಂದಿದ್ದನು. ಈ ಗ್ರಂಥವು ಸಮಂಜಸ ಪ್ರಶ್ನೋತ್ತರಗಳನ್ನೊಳಗೊಂಡ ಮಹತ್ತರ ಶಿಕ್ಷಣಶಾಸ್ತ್ರ. ಅರ್ಜುನ ವಿಷಾದ ಯೋಗವೆಂಬ ಹೆಸರು ವಿಚಿತ್ರವಾಗಿ ತೋರುತ್ತದೆ. ಏಕೆಂದರೆ ಇಲ್ಲಿ ವಿಷಾದ, ಅಂದರೆ ದುಃಖ ಸಹ ಯೋಗವೆಂದು ಕರೆಯಲ್ಪಟ್ಟಿದೆ. ಯೋಗವೆಂದರೆ ಸೇರಿಸು, ಒಂದುಗೂಡಿಸು, ಅಥವಾ ಯೋಜಿಸು ಎಂದು ಅರ್ಥ. ಈ ಅರ್ಥದಲ್ಲಿ ಅರ್ಜುನನ ದುಃಖವು ಅವನನ್ನು ಸತ್ಯವನ್ನು ತಿಳಿದುಕೊಳ್ಳಲು ಸಹಾಯ ಮಾಡಿ ಭಗವಂತನೊಂದಿಗೆ ಒಂದಾಗುವಂತೆ ಮಾಡಿತು. ಜೀವನದಲ್ಲಿ ಅನೇಕಬಾರಿ ಕಷ್ಟಗಳು ಮಾನವನನ್ನು ಭಗವಂತನ ಸಮೀಪಕ್ಕೆ ಕರೆದೊಯ್ಯುತ್ತವೆಯೆಂಬುದು ಭಕ್ತರ ಅನುಭವವಾಗಿದೆ.
ಭಗವದ್ಗೀತೆಯ ಮೂಲ ಬೋಧನೆಯೆಂದರೆ ಧರ್ಮ. ‘ಧಾರಯತಿ ಇತಿ ಧರ್ಮಃ’. ಅಂದರೆ ಯಾವುದು ಎಲ್ಲವನ್ನೂ ಎತ್ತಿಹಿಡಿಯುತ್ತದೆಯೋ, ರಕ್ಷಿಸುತ್ತದೆಯೋ, ಎಲ್ಲದರ ಮೂಲವಾಗಿರುತ್ತದೆಯೋ, ಅದುವೇ ಧರ್ಮ. ಕುರುಕ್ಷೇತ್ರ ಯುದ್ಧವು ಧರ್ಮಯುದ್ಧವಾಗಿತ್ತು; ಒಳಿತನ್ನು ಅಂದರೆ, ಧರ್ಮವನ್ನು ರಕ್ಷಣೆ ಮಾಡಿದ ಯುದ್ಧವಾಗಿತ್ತು.
ಭಗವದ್ಗೀತೆಯ ಮೊದಲನೆಯ ಅಧ್ಯಾಯದಲ್ಲಿ ಧರ್ವಚರಣೆ ಬಗ್ಗೆ ಬೋಧಿಸಲಾಗಿದೆ. ಪ್ರತಿಯೊಬ್ಬರೂ ಮನಸ್ಸು ಹಾಗೂ ಹೃದಯಗಳ ನಡುವೆ, ನೀಚ ಹಾಗೂ ಉನ್ನತ ಆಸೆಗಳ ಮಧ್ಯೆ, ಶ್ರೇಯಸ್ಸು ಹಾಗೂ ಪ್ರೇಯಸ್ಸುಗಳ ಮಧ್ಯೆ ಸತತ ಕಾದಾಟವನ್ನು ಅನುಭವಿಸುತ್ತಲೇ ಇರುತ್ತಾರೆ.
ಒಬ್ಬ ನ್ಯಾಯಾಧೀೕಶನು ಯಾವುದೇ ಪೂರ್ವಾಗ್ರಹ ಹಾಗೂ ವ್ಯಕ್ತಿಗತ ಭಾವನೆ ಗಳಿಲ್ಲದೆ, ಕೇವಲ ತನ್ನ ಕರ್ತವ್ಯ ನಿರ್ವಹಿಸಲು ಅಪರಾಧಿಗೆ ಮರಣದಂಡನೆ ವಿಧಿಸಿದಾಗ, ಆತನಿಗೆ ಯಾವುದೇ ಪಾಪ-ಪುಣ್ಯಗಳು ಅಂಟುವುದಿಲ್ಲ. ಒಬ್ಬ ಪೋಲಿಸ್ ಅಧಿಕಾರಿಯು ಜನರನ್ನು ರಕ್ಷಿಸಲು, ಕಳ್ಳಕೋರರನ್ನು ಹಿಡಿದು, ದಂಡಿಸಿದಾಗ ಅವನಿಗೂ ಯಾವುದೇ ಪಾಪ-ಪುಣ್ಯಗಳು ತಟ್ಟುವುದಿಲ್ಲ. ಹಾಗೆಯೇ ಕ್ಷತ್ರಿಯನಾದ ಅರ್ಜುನನ ಕರ್ತವ್ಯವು ದುಷ್ಟರಿಂದ ಪ್ರಜೆಗಳನ್ನು ಸಂರಕ್ಷಿಸಲು ಧರ್ಮವನ್ನು ಎತ್ತಿಹಿಡಿಯುವುದಾಗಿತ್ತು. ಆದರೆ ಅರ್ಜುನನನ್ನು ಕವಿದ ಬಂಧು- ಬಾಂಧವರೆಡೆಗಿನ ವ್ಯಾಮೋಹವು ಅವನನ್ನು ತನ್ನ ಧರ್ಮವನ್ನು ನಿರ್ವಹಿಸುವಲ್ಲಿ ಹಿಂಜರಿಯುವಂತೆ ಮಾಡಿತು. ಭಗವದ್ಗೀತೆಯು ಮಾನವನಿಗೆ ಜೀವನದಲ್ಲಿ ಸರಿಯಾದ ನಿರ್ಣಯಗಳನ್ನು ತೆಗೆದುಕೊಳ್ಳುವ ಹಾಗೂ ಎಲ್ಲ ವ್ಯಾಮೋಹ, ಅಹಂಕಾರ-ಮಮಕಾರಗಳಿಗೆ ಅತೀತವಾದ ಧರ್ಮವನ್ನು ಬೋಧಿಸುತ್ತದೆ. ವ್ಯಕ್ತಿಯು ಜೀವನದಲ್ಲಿ ಅನಿವಾರ್ಯವಾಗಿ, ಅಗತ್ಯವಾಗಿ ಮಾಡಲೇಬೇಕಾಗಿರುವುದನ್ನು ಹಿಂಜರಿಯದೆ ಮಾಡುವುದೇ ಧರ್ಮವಾಗಿದೆ.
ಧೃತರಾಷ್ಟ್ರ-ದುರ್ಯೋಧನರಿಬ್ಬರಿಗೂ ಇದು ಧರ್ಮ ಯುದ್ಧವಾಗಿದ್ದು, ಕೊನೆಗೆ ಧರ್ಮವೇ ಜಯಿಸುವುದೆಂಬ ಅರಿವಿತ್ತು. ಆದರೂ ಸಿಂಹಾಸದೆಡೆಗಿನ ವ್ಯಾಮೋಹವು ಅವರನ್ನು ಅಂಧರನ್ನಾಗಿಸಿತ್ತು. ಒಂದು ರೀತಿಯಲ್ಲಿ ನೋಡಿದಾಗ, ತಾನು ಸಿಂಹಾಸನದ ಮೇಲೆ ಶಾಶ್ವತವಾಗಿ ಕುಳಿತಿರಬೇಕೆಂಬ ಧೃತರಾಷ್ಟ್ರನ ದುರಾಸೆಯೇ ದುರ್ಯೋ ಧನನಲ್ಲಿ ಪಾಂಡವರೆಡೆಗೆ ದ್ವೇಷದ ಬೀಜವನ್ನು ಬಿತ್ತಿತ್ತು.
ಆ ಅಜ್ಞಾನ-ದ್ವೇಷಗಳ ಅಂಧಕಾರವು ಎಷ್ಟರ ಮಟ್ಟಿಗೆ ದುರ್ಯೋಧನನನ್ನು ಆವರಿಸಿತ್ತೆಂದರೆ, ಶ್ರೀ ಕೃಷ್ಣನು ಧರ್ಮದ ಬಗ್ಗೆ ಮಾರ್ಗದರ್ಶನ ನೀಡಲು ಬಂದಾಗ, ಅವನು, ‘ಜಾನಾಮಿ ಧರ್ಮಂ ನ ಚ ಮೇ ಪ್ರವೃತ್ತಿ; ಜಾನಾಮಿ ಅಧರ್ಮಂ ನ ಚ ಮೇ ನಿವೃತ್ತಿ’ - ‘ಧರ್ಮವಾವುದೆಂದು ನನಗೆ ತಿಳಿದಿದೆ, ಆದರೆ ನನ್ನಲ್ಲಿ ಅದನ್ನು ಆಚರಿಸಲು ಅಗತ್ಯವಾದ ಮನೋಶಕ್ತಿಯಿಲ್ಲ; ಅಧರ್ಮವು ಯಾವುದೆಂದು ನನಗೆ ತಿಳಿದಿದೆ, ಆದರೆ ಅದನ್ನು ಮಾಡದೇ ಇರಲು ನನಗೆ ಸಾಧ್ಯವಿಲ್ಲ’ ಎಂದು ಹೇಳುತ್ತಾನೆ! ಕೃಷ್ಣನು ಉತ್ತಮ ಗುರುವಾಗಿದ್ದರೂ, ಇಲ್ಲಿ ದುರ್ಯೋಧನನು ಕಲಿಯಲು ಸಿದ್ಧನಾಗಿರಲಿಲ್ಲ; ಆದ್ದರಿಂದ ಅವನು ಉತ್ತಮ ವಿದ್ಯಾರ್ಥಿಯಲ್ಲ. ಆದ್ದರಿಂದ ಕೃಷ್ಣನು ಜ್ಞಾನವನ್ನು ಧಾರೆಯೆರೆಯಲು ಅರ್ಜುನನನ್ನು ಆಯ್ಕೆ ಮಾಡಿಕೊಂಡನು.
ಯುದ್ಧ ಪ್ರಾರಂಭವಾಗುವ ಮೊದಲು, ಕೃಷ್ಣನು ರಥವನ್ನು ಭಿಷ್ಮಾಚಾರ್ಯರ ಮುಂದೆ ತಂದು ನಿಲ್ಲಿಸಿದನು. ಆಗ ಅರ್ಜುನನು ಅವನು ಪಿತಾಮಹನೆಂಬ ಮೋಹಕ್ಕೊಳಗಾಗಿ, ಯುದ್ಧದಿಂದ ಹಿಂದೆಗೆಯಲು ಕಾರಣಗಳನ್ನು ನೀಡತೊಡಗಿದನು. ಮೋಹವು ಅವನನ್ನು ಗೊಂದಲಕ್ಕೀಡು ಮಾಡಿತು. ಅರ್ಜುನನು ಕೃಷ್ಣನಲ್ಲಿ, ‘ನಾನು ನನ್ನ ಸ್ವಂತ ಜನರನ್ನೇ ಕೊಂದರೆ, ನಮ್ಮ ಕುಲವು ನಾಶವಾಗುತ್ತದೆ. ಹೆಣ್ಣುಮಕ್ಕಳು ಪತಿ-ಪುತ್ರರ ಮರಣದಿಂದ ದುಃಖಕ್ಕೊಳಗಾಗಿ ಅಸಹಾಯಕರಾಗುತ್ತಾರೆ. ತಂದೆಯನ್ನು ಕಳೆದುಕೊಂಡ ಮಕ್ಕಳು ಸರಿಯಾದ ಮಾರ್ಗದರ್ಶನವಿಲ್ಲದೆ ಬೆಳೆಯುತ್ತಾರೆ. ಇಷ್ಟು ಜನರನ್ನು ಸಾಯಿಸುವ ಬದಲು ನಾನೇ ಸಾಯುತ್ತೇನೆ. ನನಗೆ ಗೆಲ್ಲಲು ಇಷ್ಟವಿಲ್ಲ. ಇವರೆಲ್ಲರನ್ನು ಕೊಲ್ಲುವುದರಿಂದ ನನಗೆ ಸಂತೋಷ ದೊರಕುವುದಿಲ್ಲ’ ಎಂದು ಮೊರೆಯಿಡುತ್ತಾನೆ.
ಗಾಂಡೀವಂ ಸ್ರಂಸತೇ ಹಸ್ತಾತ್ತ್ವಕ್ಚೈ ವ ಪರಿದಹ್ಯತೇ|
ನ ಚ ಶಕ್ನೋಮ್ಯವಸ್ಥಾತುಂ ಭ್ರಮತೀವ ಚ ಮೇ ಮನಃ || 1.30 ||
’ಅಗ್ನಿದೇವನಿಂದ ಪಡೆದ ಮಹಾಧನಸ್ಸು ಕೈಯಿಂದ ಜಾರಿ ಬೀಳುತ್ತಿದೆ, ಈ ಭಯದಿಂದ ಶರೀರವು ಸುಡುತ್ತಿದೆಯೋ ಎಂಬ ಭಾವವು ತುಂಬಿದೆ, ಕಾಲುಗಳು ನಿಲ್ಲಲು ಸಹಕರಿಸುತ್ತಿಲ್ಲ; ಹಾಗೆಯೇ ನನ್ನವರಾದ ಜನರನ್ನೇ ಸುತ್ತಲೂ ನೋಡಿ ಸಂಗ್ರಾಮದ ಪರಿಣಾಮಗಳ ಯೋಚನೆಯಿಂದ ತಲೆ ಸುತ್ತುತ್ತಿದೆ.’
ತಸ್ಮಾನ್ನಾರ್ಹಾ ವಯಂ ಹಂತುಂ ಧಾರ್ತರಾಷ್ಟಾ›ನ್ ಸ್ವಬಾಂಧವಾನ್ |
ಸ್ವಜನಂ ಹಿ ಕಥಂ ಹತ್ವಾ ಸುಖಿನಃ ಸ್ಯಾಮ ಮಾಧವ || 1.37 ||
‘ಗುರು-ಹಿರಿಯರನ್ನು ಗೌರವಿಸುವ ನಾನು, ಅವರ ವಿರುದ್ಧ ಯುದ್ಧ ಮಾಡಿ ಯಾವ ಸುಖ ಪಡೆಯಲಿ! ಯುದ್ಧ ಗೆದ್ದರೆ ನನ್ನ ಜನರೇ ನನ್ನೊಂದಿಗೆ ಇರುವುದಿಲ್ಲ; ಸೋತರೆ ನಾನೇ ಇರಲಾರೆ, ಹೀಗಿರುವಾಗ ಯಾವ ಪುರುಷಾರ್ಥಕ್ಕಾಗಿ ಈ ಯುದ್ಧ!’
ಕಠೋಪನಿಷತ್ತಿನಲ್ಲಿ, ಸತ್ಯವನ್ನರಿಯಲು ಬಂದ ಶ್ರದ್ಧಾಪೂರ್ಣ ಸಾಧಕ ನಚಿಕೇತನಿಗೆ ಯಮಧರ್ಮರಾಜನು ಒಂದು ಮುಖ್ಯ ಮಾರ್ಗದರ್ಶನವನ್ನು ನೀಡುತ್ತಾನೆ. ಆಧ್ಯಾತ್ಮಿಕ ಮಾರ್ಗದಲ್ಲಿ ಮುನ್ನಡೆಯಲು ಬೇಕಾಗಿರುವ ಮೂಲಭೂತ ಅಂಶವೆಂದರೆ, ಶ್ರೇಯಸ್ಸು ಹಾಗೂ ಪ್ರೇಯಸ್ಸುಗಳ ನಡುವೆ ಸದಾ ಶ್ರೇಯಸ್ಸನ್ನೇ ಮಾನವನು ಆರಿಸಿಕೊಳ್ಳಬೇಕು.
ಶ್ರೇಯಶ್ಚ ಪ್ರೇಯಶ್ಚ ಮನುಷ್ಯಮೇತಸ್ತೌ ಸಂಪರೀತ್ಯ ವಿವಿನಕ್ತಿ ಧೀರಃ |
ಶ್ರೇಯೋ ಹಿ ಧೀರೋಭಿಪ್ರೇಯಸೋ ವೃಣಿತೇ ಪ್ರೇಯೋ ಮಂದೋ ಯೋಗಕ್ಷೆಮಾದ್ ವೃಣೀತೇ ||
ಕಠೋಪನಿಷತ್ - ಅಧ್ಯಾಯ 2, ವಲ್ಲಿ 1, ಶ್ಲೋಕ 2 ||
‘ಶ್ರೇಯೋಮಾರ್ಗ ಮತ್ತು ಪ್ರೇಯೋಮಾರ್ಗ - ಇವೆರಡೂ ಮನುಷ್ಯರಿಗೆ ವಿಹಿತವಾಗಿವೆ. ಯಾರು ಇವೆರಡರ ವ್ಯತ್ಯಾಸ ಅರಿತು, ಶ್ರೇಯೋಮಾರ್ಗದಲ್ಲಿ ನಡೆಯುತ್ತಾನೆಯೋ, ಅವನಿಗೆ ಸಂಸಾರಬಂಧನದ ಭಯವಿಲ್ಲ. ಯಾರು ಪ್ರೆಯೋಮಾರ್ಗವನ್ನು ಅನುಸರಿಸಿ ಮುಂದೆ ಸಾಗುತ್ತಾನೆಯೋ, ಅವನಿಗೆ ಇಹದ ಸುಖವು ಲಭಿಸಿದರೂ, ಸಂಸಾರ ಬಂಧನವು ಮುಂದುವರಿಯುತ್ತದೆ. ಹಾಗಾಗಿ ವೇದಾಂತವನ್ನು ಅರಿತ ಧೀರನು ಶ್ರೇಯೋಮಾರ್ಗವನ್ನೇ ಅನುಸರಿಸಬೇಕಾಗಿದೆ.’
ಒಬ್ಬ ವೈದ್ಯನು ತನ್ನ ಸ್ವಂತ ಮಗುವಿಗೆ ಶಸ್ತ›ಚಿಕಿತ್ಸೆ ಮಾಡುವಾಗ ಭಯದಿಂದ ನಡುಗುತ್ತಾನೆ. ಈ ವ್ಯಾಮೋಹವೇ ಜೀವನದಲ್ಲಿ ಮಾನವನು ತೆಗೆದುಕೊಳ್ಳುವ ಎಲ್ಲಾ ತಪ್ಪು ನಿರ್ಣಯಗಳಿಗೆ ಕಾರಣ. ಭಗವದ್ಗೀತೆಯು ವ್ಯಾಮೋಹವನ್ನು ಬದಿಗಿಟ್ಟು, ಪ್ರೇಯಸ್ಸನ್ನು ಬಯಸದೆ, ಶ್ರೇಯಸ್ಸನ್ನು ಆರಿಸಿಕೊಂಡು, ಸರಿಯಾದ ನಿರ್ಣಯಗಳನ್ನು ತೆಗೆದುಕೊಳ್ಳುವುದನ್ನು ಕಲಿಸುತ್ತದೆ. ಅರ್ಜುನನು ಸಹ ಮೋಹದಿಂದ ಭಯಗೊಂಡು, ತನ್ನ ಮಗುವಿಗೆ ಶಸ್ತ›ಚಿಕಿತ್ಸೆ ಮಾಡಲು ನಡುಗುತ್ತಿರುವ ವೈದ್ಯನಂತಾಗಿದ್ದಾನೆ!
ಕಾರ್ಪಣ್ಯದೋಷೋಪಹತಸ್ವಭಾವಃ
ಪೃಚ್ಛಾಮಿ ತ್ವಾಂ ಧರ್ಮಸಮ್ಮೂಢಚೇತಾಃ |
ಯಚ್ಛೆ›ೕಯಃ ಸ್ಯಾತ್ ನಿಶ್ಚಿತಂ ಬ್ರೂಹಿ ತನ್ಮೇ
ಶಿಷ್ಯಸ್ತೇಹಂ ಶÝ— ಮಾಂ ತ್ವಾಂ ಪ್ರಪನ್ನಂ || 2.7 ||
’ಈಗ ನನ್ನ ಕರ್ತವ್ಯದ ಬಗ್ಗೆ ಗೊಂದಲಕ್ಕೊಳಗಾಗಿದ್ದೇನೆ ಮತ್ತು ದೌರ್ಬಲ್ಯದಿಂದಾಗಿ ಎಲ್ಲಾ ಸಂಯಮವನ್ನು ಕಳೆದುಕೊಂಡಿದ್ದೇನೆ. ಈ ಸ್ಥಿತಿಯಲ್ಲಿ ನನಗೆ ಯಾವುದು ಉತ್ತಮವೆಂದು ಸ್ಪಷ್ಟವಾಗಿ ನಿರ್ದೇಶಿಸಲು ಬೇಡುತ್ತಿದ್ದೇನೆ. ನಾನು ನಿನ್ನ ಶಿಷ್ಯನಾಗಿ ಶರಣಾಗಿದ್ದೇನೆ. ದಯವಿಟ್ಟು ನನಗೆ ಸರಿಯಾದ ಮಾರ್ಗವನ್ನು ಬೋಧಿಸು’.
ಹೀಗೆ ಅರ್ಜುನನು ಶರಣಾದ ನಂತರವೇ, ಕೃಷ್ಣನು ಪ್ರಥಮ ಬಾರಿಗೆ ಗುರುವಿನ ಪಾತ್ರವನ್ನು ವಹಿಸಿದನು. ಆದ್ದರಿಂದಲೇ ಶಿಷ್ಯನು ಸಿದ್ಧವಾದಾಗ ಗುರುವು ಪ್ರತ್ಯಕ್ಷನಾಗುತ್ತಾನೆ ಎಂಬ ಮಾತಿದೆ!
ನಷ್ಟೋ ಮೋಹಃ ಸೃ್ಮರ್ಲಬ್ಧಾ ತ್ವತ್ಪ›ಸಾದಾನ್ಮಯಾಚ್ಯುತ |
ಸ್ಥಿತೋಸ್ಮಿ ಗತಸಂದೇಹಃ ಕರಿಷ್ಯೇ ವಚನಂ ತವ || 18.73 ||
’ಹೇ ಕೃಷ್ಣ, ನಿನ್ನ ಕೃಪೆಯಿಂದ ನನ್ನ ಭ್ರಮೆಯು ದೂರವಾಗಿ, ಜ್ಞಾನವು ಲಭಿಸಿದೆ. ನಾನು ಈಗ ಸಂದೇಹಗಳಿಂದ ಮುಕ್ತನಾಗಿದ್ದೇನೆ ಮತ್ತು ನಿನ್ನ ಆಜ್ಞೆಯ ಪ್ರಕಾರ ಕಾರ್ಯ ನಿರ್ವಹಿಸುತ್ತೇನೆ’
ಇಲ್ಲಿ ಅರ್ಜುನನು ಯುದ್ಧದ ನಿಜ ಉದ್ದೇಶವನ್ನು ಅರಿತುಕೊಂಡನು. ಯುದ್ಧ ಮಾಡುತ್ತಿರುವುದು ಧರ್ಮಕ್ಕಾಗಿಯೇ ಹೊರತು, ತನ್ನ ಸೋದರರ ಮೇಲೆ ದ್ವೇಷ ಸಾಧಿಸಲು ಅಲ್ಲ. ಅರ್ಜುನನನ್ನು ಉತ್ತಮ ಶಿಷ್ಯನೆಂದು ಪರಿಗಣಿಸಲು ಕಾರಣವೆಂದರೆ, ಅವನು ಇತರರ ದುಃಖಗಳಿಗೆ ಮಿಡಿಯುವ ಹೃದಯವಂತನಾಗಿದ್ದನು. ಅವನಲ್ಲಿ ಪಶ್ಚಾತ್ತಾಪ - ಒಂದು ಕರ್ಮ ಮಾಡಿ, ನಂತರ ಅದರ ದುಷ್ಟ ಪರಿಣಾಮಗಳನ್ನು ಕುರಿತು ವಿಷಾದಿಸುವ - ಗುಣದ ಬದಲು ಅವನಲ್ಲಿ ಪೂರ್ವತಾಪ ಅಂದರೆ ಕರ್ಮದಿಂದ ಉಂಟಾಗುವ ಪರಿಣಾಮಗಳ ಕುರಿತು ಕರ್ಮಮಾಡುವ ಮೊದಲೇ ಯೋಚಿಸುವ -ಗುಣವಿತ್ತು. ಆದ್ದರಿಂದಲೇ ಪಾಂಡವರಲ್ಲಿ ಉತ್ತಮನೆಂದರೆ ಅರ್ಜುನನೇ.
ಹಾಗಾಗಿ ನಮ್ಮ ಧರ್ಮಬದ್ಧ ಕರ್ತವ್ಯದಲ್ಲಿ ಸಂಪೂರ್ಣವಾಗಿ ತೊಡಗಿಸಿ ಕೊಳ್ಳುವುದಲ್ಲದೆ, ಅದನ್ನು ಸಂಪೂರ್ಣ ನಿರ್ಲಿಪ್ತತೆಯಿಂದ ಮಾಡಬೇಕೆಂದು ಭಗವದ್ಗೀತೆಯು ಬೋಧಿಸುತ್ತದೆ. ಇದು ಎಲ್ಲಾ ಉಪನಿಷತ್ತುಗಳ ಸಾರ. ಭಗವದ್ಗೀತೆಯು 5,000 ವರ್ಷಗಳ ಹಿಂದೆ ಸರ್ವಸಮಂಜಸವಾಗಿತ್ತು, ಇಂದೂ ಸಮಂಜಸವಾಗಿದೆ, 5,000 ವರ್ಷಗಳ ನಂತರವೂ, ಅದು ಸಮಂಜಸ ವಾಗಿರುವುದೆಂಬುದರಲ್ಲಿ ಸಂದೇಹವಿಲ್ಲ!
(ಲೇಖಕರು ಸಾಮಾಜಿಕ ಹಾಗೂ ಆಧ್ಯಾತ್ಮಿಕ ಗುರುಗಳು)