ಸಂಪಾದಕೀಯ : ಅಮೆರಿಕದ ಅತಿರೇಕ

photo-3-68adf35922a4e
Published on

ಭಾರತದ ವಿರುದ್ಧ ಅಮೆರಿಕದ ಸುಂಕ ಸಮರ ನಿರ್ಣಾಯಕ ಹಂತಕ್ಕೆ ತಲುಪಿದ್ದು, ಇಂದಿನಿಂದ (ಬುಧವಾರ) ಶೇಕಡ 50ರಷ್ಟು ಸುಂಕ ಜಾರಿಗೆ ಬರಲಿದೆ. ಇದು ನಮ್ಮ ದೇಶದ ಮೇಲೆ ಅಲ್ಪಕಾಲೀನ ಪರಿಣಾಮ ಬೀರಬಹುದಾದರೂ, ದೀರ್ಘಕಾಲಿನ ಪರಿಣಾಮಗಳಾಗುವುದಿಲ್ಲ. ‘ಅಮೆರಿಕದ ತೆರಿಗೆ ಸಮರವನ್ನು ಎದುರಿಸಲು ಭಾರತ ಸನ್ನದ್ಧವಾಗಿದೆ’ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ತನ್ನ ಹಿತಾಸಕ್ತಿಗೆ ಪೂರಕವಾಗಿ ನಡೆದುಕೊಳ್ಳದಿದ್ದಲ್ಲಿ ಅಮೆರಿಕ ಬೆದರಿಕೆಯ ತಂತ್ರಗಳನ್ನು ಅನುಸರಿಸುತ್ತದೆ ಎಂಬುದಕ್ಕೆ ಇತಿಹಾಸ ಸಾಕ್ಷಿಯಾಗಿದೆ. ಈ ಹಿಂದೆ ಭಾರತಕ್ಕೆ ಗೋಧಿ ರಫ್ತನ್ನು ನಿಷೇಧಿಸಿತ್ತು. ಅಲ್ಲದೆ, ಭಾರತ ಅಣ್ವಸ್ತ್ರ ಪರೀಕ್ಷೆ ನಡೆಸಿದಾಗ ಹಲವು ಕ್ಷೇತ್ರಗಳಲ್ಲಿ ನಿಷೇಧ ವಿಧಿಸಿತು. ಆದರೆ, ಪ್ರತಿಬಾರಿಯೂ ಭಾರತ ಈ ಬೆದರಿಕೆತಂತ್ರಕ್ಕೆ ಮಣಿಯದೆ, ತನ್ನ ಸ್ವಂತಶಕ್ತಿಯಿಂದ ಮತ್ತೆ ಪುಟಿದೆದ್ದಿದೆ.

ತೆರಿಗೆಗೆ ಸಂಬಂಧಿಸಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿವೇಚನೆ ಮರೆತಂತೆ ವರ್ತಿಸುತ್ತಿರುವುದು ಸ್ಪಷ್ಟ. ರಷ್ಯಾದಿಂದ ಅಗ್ಗದ ದರದಲ್ಲಿ ಭಾರತ ಕಚ್ಚಾತೈಲ ಖರೀದಿಸುತ್ತಿರುವುದು ಟ್ರಂಪ್ ಅಸಮಾಧಾನಕ್ಕೆ ಪ್ರಮುಖ ಕಾರಣ. ಆದರೆ, ನಾವು ಯಾವ ದೇಶದಿಂದ ಕಚ್ಚಾತೈಲ ಖರೀದಿಸಬೇಕು ಎಂಬುದನ್ನು ನಿರ್ಧರಿಸುವ ಹಕ್ಕು ಅಮೆರಿಕ ಸೇರಿದಂತೆ ಯಾವುದೇ ರಾಷ್ಟ್ರಕ್ಕಿಲ್ಲ. ಟ್ರಂಪ್ ಈಗ ಚೀನಾದ ವಿರುದ್ಧ 200% ಸುಂಕ ಹೇರುವುದಾಗಿ ಬೆದರಿಕೆ ಒಡ್ಡಿದ್ದಾರೆ. ಈ ಬಗೆಯ ತೆರಿಗೆ ಸಮರದಿಂದ ಖುದ್ದು ಅಮೆರಿಕವೇ ನಷ್ಟಕ್ಕೆ ಒಳಗಾಗಲಿದೆ, ಅಲ್ಲಿ ಹಣದುಬ್ಬರ ಹೆಚ್ಚಲಿದೆ, ಜನಸಾಮಾನ್ಯರು ಸಂಕಷ್ಟ ಎದುರಿಸಲಿದ್ದಾರೆ ಎಂಬ ಸರಳಸತ್ಯವನ್ನು ಟ್ರಂಪ್ ಒಪ್ಪಿಕೊಳ್ಳುತ್ತಿಲ್ಲ.

ಅಮೆರಿಕದ ಹಿತ ಕಾಯುವ ನೆಪದಲ್ಲಿ ಇತರ ರಾಷ್ಟ್ರಗಳ ಮೇಲೆ ಈ ಬಗೆಯ ಪ್ರಹಾರ ವ್ಯಾವಹರಿಕವಲ್ಲ. ಹಾಗಾಗಿಯೇ ಟ್ರಂಪ್ ನಿರ್ಧಾರಕ್ಕೆ ಅಮೆರಿಕದೊಳಗೇ ವಿರೋಧಗಳು ಹೆಚ್ಚಿವೆ.‘ಭಾರತದೊಂದಿಗಿನ ಬಾಂಧವ್ಯವನ್ನು ಹದಗೆಡಿಸಬೇಡಿ’ ಎಂದು ಅಲ್ಲಿನ ಹಿರಿಯ ರಾಜಕಾರಣಿಗಳು ಈಗಾಗಲೇ ಸಲಹೆ ನೀಡಿದ್ದಾರೆ.

ಭಾರತ ಈ ಎಲ್ಲ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ. ಮುಖ್ಯವಾಗಿ, ರಫ್ತು ವಿಷಯದಲ್ಲಿ ಭಾರತ ಅಮೆರಿಕವೊಂದನ್ನೇ ನೆಚ್ಚಿಕೊಂಡಿಲ್ಲವಾದ್ದರಿಂದ, ಪರ್ಯಾಯ ಮಾರುಕಟ್ಟೆಗಳನ್ನು ಕಂಡುಕೊಳ್ಳಲು ಸಮರ್ಥವಾಗಿದೆ. ಟ್ರಂಪ್ ನಡೆಯನ್ನು ಗಮನಿಸಿ ಚೀನಾ ಈಗಾಗಲೇ ಭಾರತದೊಂದಿಗೆ ಸ್ನೇಹ ವೃದ್ಧಿಸಲು ಮುಂದಾಗಿದೆ. ಟ್ರಂಪ್ ವಿರುದ್ಧ ಸೆಣಸಲು ಒಂದು ಕೂಟ ರಚಿಸಲು ಮುಂದಾಗಿರುವ ಚೀನಾ ಅಧ್ಯಕ್ಷ ಷಿ ಜಿನ್​ಪಿಂಗ್, ಭಾರತ ಪ್ರಧಾನಿ ನರೇಂದ್ರ ಮೋದಿ ಹಾಗೂ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುತಿನ್ ಅಲ್ಲದೆ ಜಗತ್ತಿನ ಅನೇಕ ದೇಶಗಳ ಮುಖಂಡರ ಸಭೆ ನಡೆಸಲು ಸಜ್ಜಾಗಿದ್ದಾರೆ. ಹೊಸ ವಿಶ್ವ ವ್ಯವಸ್ಥೆಯೊಂದು ಉದಯಿಸುತ್ತಿದೆ ಎಂಬುದನ್ನು ಅಮೆರಿಕದ ಮುಖಕ್ಕೆ ರಾಚುವಂತೆ ತೋರಿಸುವುದು ಇದರ ಉದ್ದೇಶವಾಗಿದೆ.

ಭಾರತ ಈಗಾಗಲೇ 16 ರಾಷ್ಟ್ರಗಳೊಂದಿಗೆ ಮುಕ್ತ ವ್ಯಾಪಾರ ಒಪ್ಪಂದ ಮಾಡಿಕೊಂಡಿದೆ. ವಾಣಿಜ್ಯ ಸಂಬಂಧಗಳನ್ನು ಹೆಚ್ಚಿಸಲು ಇನ್ನಷ್ಟು ದೇಶಗಳು ಉತ್ಸುಕವಾಗಿವೆ. ಈ ಹಿನ್ನೆಲೆಯಲ್ಲಿ ಮುಂದಡಿ ಇಡುತ್ತಿರುವ ಭಾರತವನ್ನು ತಡೆಯಲು ಸಾಧ್ಯವಿಲ್ಲ. ಹಾಗಾಗಿ, ತಮ್ಮ ನೀತಿಯನ್ನು, ಸುಂಕ ಸಮರದ ಅತಿರೇಕವನ್ನು ಟ್ರಂಪ್ ಪರಾಮಶಿಸುವುದು ಸೂಕ್ತ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net