ಪಾಕ್​ನೊಂದಿಗೆ ಅಮೆರಿಕ ದೋಸ್ತಿ! ಭಾರತ ಎಚ್ಚರಿಕೆಯ ಹೆಜ್ಜೆಗಳನ್ನು ಇರಿಸಬೇಕಿದೆ

13-68d82464b0be2
Published on

ಹಲವು ವರ್ಷಗಳ ನಂತರ ಅಮೆರಿಕ-ಪಾಕಿಸ್ತಾನ ನಡುವಿನ ರಾಜತಾಂತ್ರಿಕ ಸಂಬಂಧ ವೃದ್ಧಿಗೊಂಡಿದ್ದು, ಪರಸ್ಪರ ಸಹಕಾರವೂ ಹೆಚ್ಚಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇಲ್ಲಿ ವಿದೇಶಾಂಗ ನೀತಿಗಿಂತ ವಾಣಿಜ್ಯ ಹಿತಾಸಕ್ತಿ ಮತ್ತು ಲಾಭವನ್ನು ನೋಡುತ್ತಿದ್ದಾರೆ. ಇದನ್ನರಿಯದ ಪಾಕಿಸ್ತಾನ ಟ್ರಂಪ್​ಗೆ ಬಹುಪರಾಕ್ ಹಾಕುತ್ತಿದೆ. ಅದೇನಿದ್ದರೂ, ಅಮೆರಿಕ ಮತ್ತು ಪಾಕಿಸ್ತಾನ ನಡುವಿನ ಸ್ನೇಹವರ್ಧನೆ ಭಾರತಕ್ಕೆ ಮಾತ್ರವಲ್ಲ ಜಗತ್ತಿನ ಉಳಿದ ದೇಶಗಳಿಗೂ ಎಚ್ಚರಿಕೆಯ ಗಂಟೆಯೇ ಹೌದು.

ಡ್ರ್ಯಾಗನ್ ರಾಷ್ಟ್ರ ಚೀನಾದೊಂದಿಗಿನ ಸ್ನೇಹದತ್ತ ವಾಲಿದ್ದ ಪಾಕಿಸ್ತಾನ ಈಗ ಅಮೆರಿಕಕ್ಕೆ ಹತ್ತಿರವಾಗಿದೆ. ಭಾರತವನ್ನು ‘ಆಪ್ತರಾಷ್ಟ್ರ’, ಪ್ರಧಾನಿ ನರೇಂದ್ರ ಮೋದಿಯವರನ್ನು ‘ಆಪ್ತಮಿತ್ರ’ ಎಂದು ಕರೆಯುತ್ತಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪಾಕ್​ನೊಂದಿಗೆ ದೋಸ್ತಿ ಬೆಳೆಸಿದ್ದಾರೆ.

ಸುಂಕ ವಿವಾದದ ಹಿನ್ನೆಲೆಯಲ್ಲಿ ಅಮೆರಿಕ-ಭಾರತ ನಡುವೆ ಭಿನ್ನಾಭಿಪ್ರಾಯ ತಲೆದೋರಿರುವ ಹಿನ್ನೆಲೆಯಲ್ಲಿ ಇದೇ ‘ಸದವಕಾಶ’ವೆಂದು ತಿಳಿದಿರುವ ಪಾಕ್, ಅಮೆರಿಕದೊಂದಿಗೆ ಸ್ನೇಹವರ್ಧನೆಗೆ ಯತ್ನಿಸುತ್ತಿದೆ. ಪಾಕಿಸ್ತಾನದ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಅಮೆರಿಕಕ್ಕೆ ಪದೇಪದೆ ಭೇಟಿ ನೀಡುತ್ತಿದ್ದು, ಸೆ.26ರಂದು (ಶುಕ್ರವಾರ) ಪಾಕಿಸ್ತಾನದ ಪ್ರಧಾನ ಮಂತ್ರಿ ಶೆಹಬಾಜ್ ಷರೀಫ್ ಮತ್ತು ಪಾಕ್ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಒಟ್ಟಾಗಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರನ್ನು ಶ್ವೇತಭವನದಲ್ಲಿ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. 80 ನಿಮಿಷಗಳ ಕಾಲ ನಡೆದ ಈ ಸಭೆಯಲ್ಲಿ ಅಮೆರಿಕ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ಮತ್ತು ವಿದೇಶಾಂಗ ಕಾರ್ಯದರ್ಶಿ ಮಾರ್ಕೆ ರುಬಿಯೊ ಸಹ ಪಾಲ್ಗೊಂಡಿದ್ದರು. ಟ್ರಂಪ್ ಜತೆ ಮಾತುಕತೆ ನಡೆಸಿದ ಬಳಿಕ ವಿಶ್ವಸಂಸ್ಥೆಯಲ್ಲಿ ಭಾಷಣ ಮಾಡಿದ ಶೆಹಬಾಜ್ ಷರೀಫ್ ಟ್ರಂಪ್​ರನ್ನು ಹೊಗಳಿದ್ದಾರೆ.

ಅಷ್ಟೇ ಅಲ್ಲ, ಭಾರತದೊಂದಿಗಿನ ಸಂಘರ್ಷದಲ್ಲಿ ಪಾಕ್ ಮೇಲುಗೈ ಸಾಧಿಸಿತ್ತು ಎಂದು ಹಸಿಸುಳ್ಳು ಹೇಳಿದ್ದಾರೆ. ‘ಭಾರತ ವಿರುದ್ಧದ ಸಂಘರ್ಷದಲ್ಲಿ ಪಾಕಿಸ್ತಾನ ಮೇಲುಗೈ ಸಾಧಿಸಿದ್ದರೂ ಟ್ರಂಪ್ ಅವರ ನಾಯಕತ್ವಕ್ಕೆ ಬೆಲೆ ಕೊಟ್ಟು ಕದನ ವಿರಾಮಕ್ಕೆ ಒಪ್ಪಿಗೆ ಸೂಚಿಸಿತ್ತು. ಕದನ ವಿರಾಮ ಜಾರಿಗೊಳಿಸುವಲ್ಲಿ ಸಕ್ರಿಯ ಪಾತ್ರವಹಿಸಿದ ಎಲ್ಲರಿಗೂ ಧನ್ಯವಾದಗಳು. ಪಾಕಿಸ್ತಾನ ಟ್ರಂಪ್​ರನ್ನು ನೊಬೆಲ್ ಶಾಂತಿ ಪ್ರಶಸ್ತಿಗೆ ನಾಮನಿರ್ದೇಶನ ಮಾಡಿದೆ. ಅವರು ನಿಜವಾಗಿಯೂ ಶಾಂತಿದೂತ’ ಎಂದು ಶೆಹಬಾಜ್ ಷರೀಫ್ ಹೇಳಿರುವುದು, ಟ್ರಂಪ್​ರಿಗೆ ನೊಬೆಲ್ ಪ್ರಶಸ್ತಿ ಆಸೆಯನ್ನು ಮತ್ತಷ್ಟು ಹೆಚ್ಚಿಸಿದೆ.

ಲಾಭದ ಮೇಲೆ ಕಣ್ಣು

ಡೊನಾಲ್ಡ್ ಟ್ರಂಪ್ ಅವರದ್ದು ವಾಣಿಜ್ಯಿಕ ದೃಷ್ಟಿ ಎಂಬುದು ನಿರ್ವಿವಾದ. ತಮಗೆ ಲಾಭವಾಗುತ್ತದೆ ಎಂದಾದರೆ, ಯಾವುದೇ ರಾಷ್ಟ್ರದೊಂದಿಗೆ ಸ್ನೇಹ ಬೆಳೆಸಲು ಅವರು ಹಿಂಜರಿಯುವುದಿಲ್ಲ. ಪಾಕ್​ನೊಂದಿಗೆ ಬಾಂಧವ್ಯ ಹೆಚ್ಚಿಸುವ ಕ್ರಮದ ಹಿಂದೆ ಭಾರತವನ್ನು ಕೆರಳಿಸುವ ಉದ್ದೇಶವೂ ಇದೆ. ‘ಭಾರತ ರಷ್ಯಾದಿಂದ ಕಚ್ಚಾ ತೈಲ ಖರೀದಿಸುವ ಮೂಲಕ ಯೂಕ್ರೇನ್ ವಿರುದ್ಧದ ಸಮರಕ್ಕೆ ಸಹಕರಿಸುತ್ತಿದೆ’ ಎಂದು ಟ್ರಂಪ್ ಹಲವು ಬಾರಿ ಹೇಳಿದ್ದಾರೆ ಮತ್ತು ‘ಭಾರತ ತನ್ನ ಹಿತಾಸಕ್ತಿಯನ್ನು ಬಲಿ ಕೊಡುವುದಿಲ್ಲ’ ಎಂದು ಕೇಂದ್ರ ಸರ್ಕಾರ ಇದಕ್ಕೆ ಸ್ಪಷ್ಟ ಪ್ರತ್ಯುತ್ತರ ನೀಡಿದೆ. ಇದು ಟ್ರಂಪ್​ರನ್ನು ಮತ್ತಷ್ಟು ಕೆರಳಿಸಿತು. ಹಾಗಾಗಿ ಸುಂಕ ವಿವಾದದಲ್ಲಿ ಭಾರತ ನಿಲುವು ಸಡಿಲಿಸಬೇಕು ; ಈ ನಿಟ್ಟಿನಲ್ಲಿ ಒತ್ತಡ ಹೇರಲು ಭಾರತದ ಶತ್ರುರಾಷ್ಟ್ರ ಪಾಕ್​ನೊಂದಿಗಿನ ಸ್ನೇಹ ಹೆಚ್ಚಿಸುವುದು ಅಗತ್ಯ ಎಂಬ ತೀರ್ವನಕ್ಕೆ ಟ್ರಂಪ್ ಬಂದಂತಿದೆ. ಅವರ ಮಾತು, ನಡೆ ಇದನ್ನು ಪುಷ್ಟೀಕರಿಸಿದೆ.

ಪಾಕಿಸ್ತಾನದಲ್ಲಿ ಕಚ್ಚಾ ತೈಲ ನಿಕ್ಷೇಪಗಳು ಭಾರಿ ಪ್ರಮಾಣದಲ್ಲಿ ಪತ್ತೆಯಾಗಿದ್ದು, ಇವುಗಳನ್ನು ಅಭಿವೃದ್ಧಿಗೊಳಿಸಿ ಕಚ್ಚಾ ತೈಲ ಹೊರತೆಗೆಯುವ ಗುತ್ತಿಗೆಯನ್ನು ಅಮೆರಿಕದ ಕಂಪನಿಗಳೇ ಪಡೆಯುತ್ತಿವೆ. ಈ ವಿಚಾರದ ಬಗ್ಗೆ ಟ್ರಂಪ್ ಹಿಂದೆಯೂ ಮಾತನಾಡಿದ್ದಾರೆ. ಅಷ್ಟೇ ಅಲ್ಲ, ಪಾಕ್​ನಲ್ಲಿನ ಕಚ್ಚಾ ತೈಲ ಮತ್ತು ಅಪರೂಪದ ಖನಿಜಗಳ ನಿಕ್ಷೇಪದ ಮೇಲೆ ಚೀನಾ ಕಣ್ಣು ಬಿದ್ದರೆ ಅಮೆರಿಕಕ್ಕೆ ಅವಕಾಶ ತಪ್ಪಿಹೋಗುತ್ತದೆ ಎಂಬ ಆತಂಕವೂ ಟ್ರಂಪ್​ಗೆ ಇದೆ. ಹಾಗಾಗಿಯೇ ಪಾಕ್​ನೊಂದಿಗೆ ಸ್ನೇಹ ಬೆಳೆಸಿದ್ದು ಮಾತ್ರವಲ್ಲ, ಆ ದೇಶದ ನಾಯಕರೊಂದಿಗೆ ಪದೇಪದೆ ಭೇಟಿಯಾಗುತ್ತಿದ್ದಾರೆ. ಕಚ್ಚಾತೈಲ ಹೊರತೆಗೆಯುವ ಮೂಲಕ ಸಿಗುವ ಲಾಭವನ್ನು ತಪ್ಪಿಸಿಕೊಳ್ಳದಿರಲು ನಿರ್ಧರಿಸಿದ್ದಾರೆ. ಇದರ ಬದಲಾಗಿ ಪಾಕ್​ಗೆ ಅಮೆರಿಕ ಹಣಕಾಸು ಮತ್ತು ಸೇನಾ ನೆರವನ್ನು ನೀಡಲಿದೆ.

ಡೊನಾಲ್ಡ್ ಟ್ರಂಪ್ ಅವರ ಪುತ್ರರು ಮತ್ತು ಕುಟುಂಬದ ಸದಸ್ಯರು ಪಾಕಿಸ್ತಾನದಲ್ಲಿ ಕ್ರಿಪ್ಟೋ ಕರೆನ್ಸಿ, ಕಚ್ಚಾ ತೈಲ ಹಾಗೂ ಇಂಧನ ಕ್ಷೇತ್ರದಲ್ಲಿ ಹೂಡಿಕೆ ಮಾಡಿದ್ದಾರೆ. ಇಲ್ಲಿ ಹೆಚ್ಚು ಲಾಭ ಮಾಡಬೇಕಾದರೆ ‘ಸ್ನೇಹ ಅನಿವಾರ್ಯ’ ಎಂಬ ವಾಣಿಜ್ಯಿಕ ಹಿತಕ್ಕೆ ಟ್ರಂಪ್ ಮಣೆ ಹಾಕಿದ್ದಾರೆ.

ಚೀನಾ ಅಮೆರಿಕದ ಪ್ರತಿಸ್ಪರ್ಧಿ ರಾಷ್ಟ್ರ. ಅಮೆರಿಕದ ಧೋರಣೆಗಳು, ಟ್ರಂಪ್ ಸುಂಕನೀತಿಯ ಬಗ್ಗೆ ಸೃಷ್ಟಿಸಿರುವ ವಿವಾದದ ಬಿರುಗಾಳಿ ಹಾಗೂ ಪದೇಪದೆ ಬದಲಾಗುವ ನಿಲುವುಗಳಿಂದ ಸ್ವಾಭಾವಿಕವಾಗಿಯೇ ಜಾಗತಿಕ ಮಟ್ಟದಲ್ಲಿ ಚೀನಾದ ವರ್ಚಸ್ಸು ಹೆಚ್ಚತೊಡಗಿದೆ. ಮಾತ್ರವಲ್ಲ, ಚೀನಾ ಭಾರತದೊಂದಿಗೆ ಬಾಂಧವ್ಯವೃದ್ಧಿಗೆ ಮುಂದಾಗಿದೆ. ಚೀನಾ-ಭಾರತ-ರಷ್ಯಾ ಮೂರೂ ಒಟ್ಟಾಗಿ ನಿಂತರೆ, ತನ್ನ ಬೆದರಿಕೆ ತಂತ್ರಗಳು ನಡೆಯುವುದಿಲ್ಲ, ಅಮೆರಿಕದ ಮೇಲಿನ ಅವಲಂಬನೆಯೂ ಗಮನಾರ್ಹವಾಗಿ ಕಡಿಮೆಯಾಗುತ್ತದೆ ಎಂಬುದು ಟ್ರಂಪ್​ಗೆ ಗೊತ್ತಿದೆ. ಮತ್ತೊಂದೆಡೆ ಇತ್ತೀಚಿನ ವರ್ಷಗಳಲ್ಲಿ ಶಸ್ತ್ರಾಸ್ತ್ರ ಖರೀದಿ ಮತ್ತು ಇತರ ಕ್ಷೇತ್ರದಲ್ಲಿ ಹೂಡಿಕೆಗಾಗಿ ಚೀನಾ ಮೇಲಿನ ಪಾಕ್ ಅವಲಂಬನೆ ಹೆಚ್ಚಿದೆ. ಇದು ಟ್ರಂಪ್​ರನ್ನು ಚಿಂತೆಗೀಡು ಮಾಡಿದೆ. ಈ ಅವಲಂಬನೆ ತಗ್ಗಿಸಬೇಕಾದರೆ, ಪಾಕ್​ನ್ನು ಹತ್ತಿರವಾಗಿಸಿಕೊಳ್ಳಬೇಕು ಎಂಬ ತಂತ್ರ ಅನುಸರಿಸುತ್ತಿದ್ದಾರೆ. ಅಂದರೆ, ಚೀನಾದ ಪ್ರಾಬಲ್ಯ ಅಥವಾ ವರ್ಚಸ್ಸು ಕುಗ್ಗಿಸಲು ಪಾಕ್​ನ್ನು ದಾಳವಾಗಿ ಬಳಸುತ್ತಿದ್ದಾರೆ.

ಅಪ್ಘಾನಿಸ್ತಾನದ ರಾಜಧಾನಿ ಕಾಬುಲ್ ಬಳಿ ಅಮೆರಿಕ 2001ರಲ್ಲಿ ಅಲ್-ಕಾಯಿದಾ ಮತ್ತು ತಾಲಿಬಾನ್​ನೊಂದಿಗೆ ಸೆಣೆಸಲು ಬಾಗ್ರಾಮ್ ವಾಯುನೆಲೆಯನ್ನು ಅಭಿವೃದ್ಧಿಗೊಳಿಸಿತ್ತು. 2021ರಲ್ಲಿ ಅಪ್ಘಾನಿಸ್ತಾನದಲ್ಲಿ ತಾಲಿಬಾನ್ ಆಡಳಿತ ಆರಂಭವಾದ ಮೇಲೆ ಅಮೆರಿಕ ಅಪ್ಘಾನಿಸ್ತಾನದಿಂದ ತನ್ನ 1 ಲಕ್ಷ ಸೈನಿಕರನ್ನು ವಾಪಸ್ ಕರೆಸಿಕೊಂಡಿತ್ತು. ತನ್ನ ದೇಶದ ಸೈನಿಕರನ್ನು ಅಪ್ಘಾನಿಸ್ತಾನದಿಂದ ವಾಪಸ್ ಕರೆಸಿಕೊಂಡದ್ದು ದೊಡ್ಡ ಪ್ರಮಾದ ಎಂಬುದು ಟ್ರಂಪ್​ಗೆ ತಡವಾಗಿ ಜ್ಞಾನೋದಯವಾಗಿದೆ. ಹಾಗಾಗಿ, ಬಾಗ್ರಾಮ್ ವಾಯುನೆಲೆಯನ್ನು ಮರಳಿ ಪಡೆಯಲು ಶತಾಯಗತಾಯ ಯತ್ನ ಮಾಡುತ್ತಿದ್ದಾರೆ. ಇತ್ತೀಚೆಗೆ ಸಾಮಾಜಿಕ ಜಾಲತಾಣ ‘ಟ್ರೂಥ್’ನಲ್ಲಿ ಬರೆದಿದ್ದ ಟ್ರಂಪ್, ‘ಒಂದು ವೇಳೆ ಅಪ್ಘಾನಿಸ್ತಾನ ಬಾಗ್ರಾಮ್ ವಾಯುನೆಲೆಯನ್ನು ಅಮೆರಿಕಕ್ಕೆ ವಾಪಸ್ ಕೊಡದಿದ್ದರೆ, ಅದರ ಪರಿಣಾಮಗಳು ತುಂಬ ಕೆಟ್ಟದ್ದಾಗಿ ಇರುತ್ತವೆ’ ಎಂದು ಎಚ್ಚರಿಸಿದ್ದಾರೆ. ಅಪ್ಘಾನಿಸ್ತಾನದಲ್ಲಿನ ಬಾಗ್ರಾಮ್ ವಾಯುನೆಲೆ ಮರಳಿ ಪಡೆಯಬೇಕಾದರೆ ಅಮೆರಿಕಕ್ಕೆ ಪಾಕಿಸ್ತಾನದ ಸಹಕಾರ ಬೇಕೆ ಬೇಕು. ಸ್ನೇಹವೃದ್ಧಿಗೆ ಇದೂ ಪ್ರಮುಖ ಕಾರಣ.

ಆರ್ಥಿಕ ಸಹಕಾರ

‘ಪಾಕಿಸ್ತಾನದೊಂದಿಗಿನ ಆರ್ಥಿಕ ಸಹಕಾರವನ್ನು ಇನ್ನಷ್ಟು ಕ್ಷೇತ್ರಗಳಿಗೆ ವಿಸ್ತರಿಸುವುದನ್ನು ತಮ್ಮ ದೇಶ ಎದುರು ನೋಡುತ್ತಿದೆ’ ಎಂದು ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಮಾಕೋ ರೂಬಿಯೋ ಇತ್ತೀಚೆಗೆ ಹೇಳಿದ್ದಾರೆ. ನಿರ್ಣಾಯಕ ಖನಿಜಗಳು ಮತ್ತು ಹೈಡ್ರೋಕಾರ್ಬನ್ ಸಹಿತ ನಾನಾ ಕ್ಷೇತ್ರಗಳಲ್ಲಿ ಸಹಕಾರವನ್ನು ವಿಸ್ತರಿಸುವ ಉದ್ದೇಶವಿದೆ. ಅಲ್ಲದೆ, ಭಯೋತ್ಪಾದನೆ ನಿಗ್ರಹ ಮತ್ತು ವಾಣಿಜ್ಯ ವರ್ಧನೆ ವಿಚಾರದಲ್ಲಿ ಪಾಕ್ ನಡೆಸುತ್ತಿರುವ ಪ್ರಯತ್ನಗಳು ಶ್ಲಾಘನೀಯ ಎಂದೂ ರೂಬಿಯೋ ಹೇಳಿದ್ದಾರೆ.

ತಜ್ಞರು ಏನಂತಾರೆ?

ಈ ವರ್ಷದಲ್ಲಿ (2025) ಅಮೆರಿಕ ಪಾಕಿಸ್ತಾನದ ಬಗ್ಗೆ ತನ್ನ ನಿಲುವನ್ನು ಬದಲಿಸುವುದು ಮತ್ತು ಸ್ನೇಹ ವೃದ್ಧಿಸಿರುವುದು ಹೌದು. ಅದಕ್ಕೆ ಮುಖ್ಯ ಕಾರಣ ಅಮೆರಿಕದ ಹಿತಾಸಕ್ತಿಯೇ. ಆದರೆ, ಅಮೆರಿಕ-ಪಾಕ್ ಸ್ನೇಹ ದೀರ್ಘಕಾಲ ಮುಂದುವರಿಯುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಪಾಕ್​ಗಿಂತಲೂ ಇನ್ನೊಂದು ದೇಶದಿಂದ ತನಗೆ ಹೆಚ್ಚು ಲಾಭವಾಗುತ್ತದೆ ಎಂದರೆ ಟ್ರಂಪ್ ಯಾವಾಗ ಬೇಕಾದರೂ ಯೂಟರ್ನ್ ತೆಗೆದುಕೊಳ್ಳಬಹುದು. ಸದ್ಯದ ಮಟ್ಟಿಗೆ ಅವರಿಗೆ ಪಾಕ್ ಲಾಭಕಾರಿಯಾಗಿ ಕಾಣುತ್ತಿದೆ. ಹೀಗಾಗಿ ಈ ಸಹಕಾರ ಏರ್ಪಟ್ಟಿದೆ ಎಂಬುದು ತಜ್ಞರ ಅಭಿಪ್ರಾಯ.

ಅಮೆರಿಕಕ್ಕೆ ಮುನೀರ್ ಮೂರನೇ ಭೇಟಿ...

ಪಾಕಿಸ್ತಾನದ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಕಳೆದ ನಾಲ್ಕು ತಿಂಗಳಲ್ಲೇ ಅಮೆರಿಕಕ್ಕೆ ಮೂರು ಬಾರಿ ಭೇಟಿ ನೀಡಿದ್ದಾರೆ. ಜೂನ್ 18ರಂದು ಅಮೆರಿಕದಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಯೋಜಿಸಿದ್ದ ಭೋಜನಕೂಟದಲ್ಲಿ ಮುನೀರ್ ಭಾಗಿಯಾಗಿದ್ದರು. ಈ ವೇಳೆ ನೊಬೆಲ್ ಶಾಂತಿ ಪ್ರಶಸ್ತಿಗೆ ಟ್ರಂಪ್ ಹೆಸರನ್ನು ಶಿಫಾರಸು ಮಾಡಿದ್ದ ಮುನೀರ್, ಆಗಸ್ಟ್ 18ರಂದು ಅಮೆರಿಕಕ್ಕೆ ಭೇಟಿ ನೀಡಿದಾಗಲೂ ಅದನ್ನು ಪುನರುಚ್ಚರಿಸಿದ್ದರು. ಅಲ್ಲದೆ, ಕಾಶ್ಮೀರ ವಿಚಾರವನ್ನೂ ಪ್ರಸ್ತಾಪಿಸಿದ್ದ ಮುನೀರ್, ‘ಕಾಶ್ಮೀರ ಭಾರತದ ಆಂತರಿಕ ವಿಷಯವಲ್ಲ, ಅದು ಅಪೂರ್ಣ ಅಂತಾರಾಷ್ಟ್ರೀಯ ಕಾರ್ಯಸೂಚಿ’ ಎಂದಿದ್ದರು. ಸೆಪ್ಟೆಂಬರ್ 25-26ರಂದು ಪಾಕ್ ಪ್ರಧಾನಿ ಶೆಹಬಾಜ್ ಜತೆ ಮೂರನೇ ಬಾರಿ ಅಮೆರಿಕಕ್ಕೆ ಭೇಟಿ ನೀಡಿದ್ದಾರೆ. ಪಾಕ್-ಅಮೆರಿಕ ನಡುವಿನ ವ್ಯಾಪಾರ ಒಪ್ಪಂದ ಪಾಕಿಸ್ತಾನಕ್ಕೆ ಭಾರಿ ಹೂಡಿಕೆಯನ್ನು ತರುವ ನಿರೀಕ್ಷೆ ಇದ್ದು, ಅಂತಾರಾಷ್ಟ್ರೀಯ ಸಂಬಂಧಗಳಲ್ಲಿ ಪಾಕ್ ಗಣನೀಯ ಯಶಸ್ಸು ಗಳಿಸಿದೆ ಎಂದೂ ಮುನೀರ್ ಹೇಳಿಕೊಂಡಿದ್ದಾರೆ.

ಭಾರತದ ನಿಲುವು

ಈ ಎಲ್ಲ ಬೆಳವಣಿಗೆಗಳ ಮೇಲೆ ಕೇಂದ್ರ ವಿದೇಶಾಂಗ ಸಚಿವಾಲಯ ನಿಗಾ ವಹಿಸಿದೆ. ಆದರೆ, ಅಮೆರಿಕ ಮುಖ್ಯವಾಗಿ ಟ್ರಂಪ್ ನಿಲುವಿನ ಬಗ್ಗೆ ಭಾರತ ಸ್ಪಷ್ಟ, ಕಠೋರ ನಿಲುವು ತಳೆಯದಿದ್ದಲ್ಲಿ ಟ್ರಂಪ್ ಭಾರತದ ಹಿತಕ್ಕೆ ಮಾರಕವೆನಿಸುವ ಮತ್ತಷ್ಟು ನಿರ್ಧಾರಗಳನ್ನು ಕೈಗೊಳ್ಳಲು ಹಿಂಜರಿಯುವುದಿಲ್ಲ. ಇತ್ತೀಚೆಗೆ ಸೌದಿ ಅರೇಬಿಯಾ ಮತ್ತು ಪಾಕಿಸ್ತಾನದ ನಡುವೆ ಮಹತ್ವದ ರಕ್ಷಣಾ ಒಪ್ಪಂದ ಏರ್ಪಟ್ಟಿದ್ದು, ಅದರ ಬೆನ್ನಲ್ಲೇ ಅಮೆರಿಕದೊಂದಿಗೆ ಸಂಬಂಧ ಬಲಗೊಂಡಿದೆ.

1 ಭಾರತ ಅಂತಾರಾಷ್ಟ್ರೀಯ ಸಂಬಂಧಗಳನ್ನು ಉತ್ತಮವಾಗಿ ಕಾಪಾಡಿಕೊಂಡಿದ್ದು, ತರಾತುರಿಯಲ್ಲಿ ಯಾವುದೇ ರಾಷ್ಟ್ರದೊಂದಿಗೆ ಸ್ನೇಹ ಅಥವಾ ವೈರ ಮಾಡುವುದಿಲ್ಲ.

2 ಶಸ್ತ್ರಾಸ್ತ್ರ ಪೂರೈಕೆಯ ವಿಷಯದಲ್ಲಿ ಭಾರತಕ್ಕೆ ಆಪ್ತ ಮತ್ತು ನಂಬಿಕಸ್ಥ ರಾಷ್ಟ್ರ ಮೊದಲಿನಿಂದಲೂ ರಷ್ಯಾವೇ. ರಷ್ಯಾದೊಂದಿಗೆ ಭಾರತ ಉತ್ತಮ ಸಂಬಂಧ ಹೊಂದಿದ್ದು, ಅಮೆರಿಕದ ಬದಲಾದ ನೀತಿಗೆ ಹೆಚ್ಚು ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ ಎನ್ನುತ್ತಾರೆ ತಜ್ಞರು.

3 ‘ಆಪರೇಷನ್ ಸಿಂಧೂರ’ದ ಮೂಲಕ ಭಾರತ ತನ್ನ ಶಕ್ತಿಯನ್ನು ಜಗತ್ತಿನ ಎದುರು ಅನಾವರಣಗೊಳಿಸಿದೆ. ಭಯೋತ್ಪಾದನೆ ನಿಗ್ರಹ ವಿಷಯದಲ್ಲಿ ಅಗತ್ಯಬಿದ್ದಲ್ಲಿ ಭಾರತ ಇನ್ನಷ್ಟು ಆಕ್ರಮಕ ಮತ್ತು ಕಠಿಣ ಕ್ರಮಗಳನ್ನು ಕೈಗೊಳ್ಳಲು ಹಿಂಜರಿಯುವುದಿಲ್ಲ ಎಂಬುದು ಟ್ರಂಪ್​ಗೆ ಗೊತ್ತಿದೆ. ಹಾಗಾಗಿ, ಪಾಕ್​ನೊಂದಿಗೆ ಸ್ನೇಹ ಬೆಳೆಸಿದ್ದಾರೆ. ಆದರೆ, ಇದು ಭಾರತದ ಅಚಲ ನಿಲುವನ್ನು ಅಲುಗಾಡಿಸುವುದಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net