

ಬೋಯಿಂಗ್ ವಿಮಾನಗಳ ಖರೀದಿ ರದ್ದುಪಡಿಸಿದ ಡ್ರ್ಯಾಗನ್ | ಡೊನಾಲ್ಡ್ ಟ್ರಂಪ್ ವ್ಯಗ್ರ | ಕರ ಸಮರ ತೀವ್ರ
ವಾಷಿಂಗ್ಟನ್: ಚೀನಾದ ಸೇಡಿನ ಕ್ರಮಗಳಿಂದ ಕ್ರುದ್ಧರಾಗಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಆ ರಾಷ್ಟ್ರದಿಂದ ಆಮದಾಗುವ ವಸ್ತುಗಳ ಮೇಲೆ ವಿಧಿಸಿದ್ದ ತೆರಿಗೆಯ ಪ್ರಮಾಣವನ್ನು ಇದೀಗ ಶೇ. 245ಕ್ಕೆ ಏರಿಸಿದ್ದು, ಇದರಿಂದಾಗಿ ಜಗತ್ತಿನ ಎರಡು ಅತಿ ದೊಡ್ಡ ಆರ್ಥಿಕತೆಗಳ ನಡುವಿನ ವ್ಯಾಪಾರ ಸಮರ ಮತ್ತಷ್ಟು ಉಲ್ಬಣಗೊಂಡಂತಾಗಿದೆ.
ತೆರಿಗೆ ಹೆಚ್ಚಳದ ವಿಷಯವನ್ನು ಒಂದೆಡೆ ಶ್ವೇತಭವನ ಖಚಿತಪಡಿಸಿದರೆ ಇನ್ನೊಂದೆಡೆ ಟ್ರಂಪ್ ತಮ್ಮ ಸಾಮಾಜಿಕ ಜಾಲತಾಣ ಟ್ರುಥ್ ಸೋಶಿಯಲ್ನಲ್ಲಿ ಈ ಬಗ್ಗೆ ಸಂದೇಶವೊಂದನ್ನು ಪೋಸ್ಟ್ ಮಾಡಿದ್ದಾರೆ. ‘ಬೋಯಿಂಗ್ ಖರೀದಿಯ ದೊಡ್ಡ ಒಪ್ಪಂದವನ್ನು ಚೀನಾ ರದ್ದುಪಡಿಸಿದೆ. ವಿಮಾನಗಳನ್ನು ಪಡೆಯಲು ಈಗ ನಿರಾಕರಿಸುತ್ತಿದೆ. ಇಂಥವರಿಂದ ಅಮೆರಿಕವನ್ನು ಮತ್ತು ಅಮೆರಿಕನ್ನರನ್ನು ರಕ್ಷಿಸುತ್ತೇನೆ’ ಎಂದು ಹೇಳಿದ್ದಾರೆ. ಅಮೆರಿಕದ ವಿಮಾನ ತಯಾರಕ ಕಂಪನಿಯಾದ ಬೋಯಿಂಗ್ನಿಂದ ವಿಮಾನಗಳ ಡೆಲಿವರಿ ತೆಗೆದುಕೊಳ್ಳುವುದು ಬೇಡ ಎಂಬುದಾಗಿ ಚೀನಾ ತನ್ನ ವಿಮಾನ ಯಾನ ಸಂಸ್ಥೆಗಳಿಗೆ ಸೂಚನೆ ನೀಡಿದೆ ಎಂಬ ವರದಿಗಳನ್ನು ಸ್ವತಃ ಟ್ರಂಪ್ ಈ ಮೂಲಕ ದೃಢಪಡಿಸಿದಂತಾಗಿದೆ.
ಇದಕ್ಕೆ ಮುನ್ನ ಶ್ವೇತಭವನ ಬಿಡುಗಡೆ ಮಾಡಿದ ಫ್ಯಾಕ್ಟ್ಶೀಟ್ನಲ್ಲಿ, ‘ಸಂಸ್ಕರಿತ ನಿರ್ಣಾಯಕ ಖನಿಜಗಳು ಮತ್ತು ಅವುಗಳ ಉಪ ಉತ್ಪನ್ನಗಳ ಆಮದಿನ ಮೇಲೆ ಅಮೆರಿಕ ಎಷ್ಟು ಅವಲಂಬಿತವಾಗಿದೆ ಮತ್ತು ಅದರಿಂದ ದೇಶದ ಭದ್ರತೆ ಮೇಲಾಗುವ ಪರಿಣಾಮ ಏನು ಎಂಬುದರ ಬಗೆಗಿನ ತನಿಖೆಯ ಆದೇಶಕ್ಕೆ ಟ್ರಂಪ್ ಸಹಿ ಮಾಡಿದ್ದಾರೆ’ ಎಂದು ಹೇಳಿದೆ.
‘ಈಗಾಗಲೇ 75ಕ್ಕೂ ಹೆಚ್ಚು ದೇಶಗಳು ಅಮೆರಿಕದ ಜತೆ ಹೊಸ ವ್ಯಾಪಾರ ಒಪ್ಪಂದ ಮಾಡಿಕೊಳ್ಳಲು ಚರ್ಚೆಗೆ ಮುಂದಾಗಿವೆ. ಈ ಸಮಾಲೋಚನೆಗಳು ಮುಕ್ತ ವಾತಾವರಣದಲ್ಲಿ ನಡೆಯಲಿ ಎಂಬ ಉದ್ದೇಶದಿಂದಲೇ ಪರಸ್ಪರ ತೆರಿಗೆಗಳನ್ನು ಸದ್ಯಕ್ಕೆ ತಡೆಹಿಡಿಯಲಾಗಿದೆ. ಸೇಡಿನ ಕ್ರಮಕ್ಕೆ ಮುಂದಾದ ಚೀನಾವನ್ನು ಮಾತ್ರ ಇದರಿಂದ ಹೊರಗಿಡಲಾಗಿದೆ. ಅದರ ಮೇಲೆ ಶೇ. 245ರಷ್ಟು ತೆರಿಗೆ ಹೇರಲಾಗಿದೆ’ ಎಂದು ಶ್ವೇತಭವನ ವಿವರಿಸಿದೆ.
‘ಗ್ಯಾಲಿಯಂ, ಜಮೇನಿಯಂ, ಆಂಟಿಮೊನಿ ಮತ್ತಿತರ ಪ್ರಮುಖ ಉನ್ನತ ತಂತ್ರಜ್ಞಾನದ ವಸ್ತುಗಳನ್ನು ಅಮೆರಿಕಕ್ಕೆ ರಫ್ತು ಮಾಡುವುದನ್ನು ಚೀನಾ ನಿಷೇಧಿಸಿದೆ. ಅಮೆರಿಕದ ಮತ್ತು ಇತರ ದೇಶಗಳ ವಾಹನ, ವಿಮಾನ, ಸೆಮಿಕಂಡಕ್ಟರ್ಗಳ ತಯಾರಕರು ಮತ್ತು ಮಿಲಿಟರಿ ಗುತ್ತಿಗೆದಾರರಿಗೆ ಸಮಸ್ಯೆ ಆಗಲೆಂಬ ದುರುದ್ದೇಶದಿಂದಲೇ ಚೀನಾ ಹೀಗೆ ಮಾಡಿದೆ. ಅಮೆರಿಕದ ರಕ್ಷಣಾ ಕೈಗಾರಿಕೆಗಳಿಗೆ ಈ ವಸ್ತುಗಳು ಬೇಕು. ಜೆಟ್ ಇಂಜಿನ್, ಕ್ಷಿಪಣಿ ವ್ಯವಸ್ಥೆ, ಅತ್ಯಾಧುನಿಕ ಕಂಪ್ಯೂಟಿಂಗ್, ರೇಡಾರ್, ಭದ್ರತಾ ಸಂವಹನ ಉಪಕರಣಗಳಲ್ಲಿ ಕೂಡ ಈ ವಸ್ತುಗಳ ಅವಶ್ಯಕತೆ ಇದೆ. ಇವುಗಳಿಗಾಗಿ ಅಮೆರಿಕವು ವಿದೇಶಗಳ ಮೇಲೆ, ಅದರಲ್ಲೂ ವಿರೋಧಿ ದೇಶಗಳ ಮೇಲೆ ಅವಲಂಬಿತವಾಗಿದೆ. ಚೀನಾದ ಕ್ರಮವು ಇವುಗಳ ಪೂರೈಕೆ ಸರಪಳಿಗೆ ಧಕ್ಕೆ ಉಂಟು ಮಾಡುವ ಮತ್ತು ಆರ್ಥಿಕ ದಬ್ಬಾಳಿಕೆ ನಡೆಸುವ ಕ್ರಮವಾಗಿದೆ’ ಎಂದು ಶ್ವೇತಭವನದ ಫ್ಯಾಕ್ಟ್ಶೀಟ್ನಲ್ಲಿ ವಿವರಿಸಲಾಗಿದೆ.
ಚೀನಾದಿಂದ ಅಧಿಕಾರಿ ನೇಮಕ: ಈ ಮಧ್ಯೆ, ಚೀನಾ ವಾಣಿಜ್ಯ ಸಚಿವಾಲಯದಲ್ಲಿ ಅಂತಾರಾಷ್ಟ್ರೀಯ ವ್ಯಾಪಾರ ಪ್ರತಿನಿಧಿಯನ್ನಾಗಿ ಲೀ ಚೆಂಗ್ಯಾಂಗ್ ಅವರನ್ನು ನೇಮಕ ಮಾಡಿದೆ. ಇವರಿಗೆ ಅಂತಾರಾಷ್ಟ್ರೀಯ ಮಾತುಕತೆಗಳಲ್ಲಿ ದಶಕಗಳ ಅನುಭವವಿದೆ. ವಿಶ್ವ ವ್ಯಾಪಾರ ಸಂಘಟನೆಯಲ್ಲಿ (ಡಬ್ಲ್ಯುಟಿಒ) ಚೀನಾದ ಪ್ರತಿನಿಧಿಯಾಗಿಯೂ ಕೆಲಸ ಮಾಡಿದ್ದಾರೆ. ತೆರಿಗೆ ಬಿಕ್ಕಟ್ಟನ್ನು ಪರಿಹರಿಸಿಕೊಳ್ಳುವುದಕ್ಕೆ ಸಂಬಂಧಿಸಿದಂತೆ ‘ಚೆಂಡು ಈಗ ಚೀನಾದ ಅಂಗಳದಲ್ಲಿದೆ’ ಎಂಬುದಾಗಿ ಟ್ರಂಪ್ ಹೇಳಿಕೆ ನೀಡಿದ ಬೆನ್ನಲ್ಲೇ ಚೀನಾ ಈ ನೇಮಕ ಮಾಡಿದೆ.
ಅಮೆರಿಕದ ತೆರಿಗೆ ನೀತಿಯಿಂದಾಗಿ ಸಾಲ ಪರಿಸ್ಥಿತಿ ದುರ್ಬಲವಾಗಲಿದ್ದು, ಸಾಲ ಮರುಪಾವತಿಯ ಪ್ರಮಾಣವೂ ಕಡಿಮೆಯಾಗಲಿದೆ ಎಂದು ಮೂಡೀಸ್ ರೇಟಿಂಗ್ ಸಂಸ್ಥೆ ಬುಧವಾರ ತಿಳಿಸಿದೆ. ಅಮೆರಿಕದ ನೀತಿ ಸದ್ಯಕ್ಕೆ ಯಾರೂ ಊಹೆ ಮಾಡಲಾಗದಷ್ಟು ಅನಿರೀಕ್ಷಿತವಾಗಿದೆ. ಇದು ಜಾಗತಿಕ ಮಟ್ಟದಲ್ಲಿ ಸಾಲ ಪರಿಸ್ಥಿತಿಗೆ ವ್ಯತಿರಿಕ್ತ ಪರಿಣಾಮ ಉಂಟು ಮಾಡುತ್ತದೆ. ಆರ್ಥಿಕ ಬೆಳವಣಿಗೆಯನ್ನು ಕುಂಠಿತಗೊಳಿಸುತ್ತದೆ. ಆರ್ಥಿಕ ಹಿಂಜರಿತಕ್ಕೆ ದಾರಿ ಮಾಡಿಕೊಟ್ಟರೂ ಆಶ್ಚರ್ಯವಿಲ್ಲ ಎಂದು ಮೂಡೀಸ್ ತನ್ನ ಸಮೀಕ್ಷಾ ವರದಿಯಲ್ಲಿ ವಿವರಿಸಿದೆ.
ಅಮೆರಿಕದೊಂದಿಗಿನ ಭಾರತದ ದ್ವಿಪಕ್ಷೀಯ ವ್ಯಾಪಾರ 2024-25ರಲ್ಲಿ 131.84 ಶತಕೋಟಿ ಡಾಲರ್ನಷ್ಟಾಗಿದ್ದು, ಸತತ ನಾಲ್ಕನೇ ವರ್ಷವೂ ಅಮೆರಿಕವೇ ಭಾರತದ ಅತಿ ದೊಡ್ಡ ವ್ಯಾಪಾರ ಪಾಲುದಾರನಾಗಿ ಹೊರಹೊಮ್ಮಿದೆ ಎಂದು ಕೇಂದ್ರ ಸರ್ಕಾರದ ಅಂಕಿಅಂಶಗಳು ತಿಳಿಸಿವೆ. ಚೀನಾಕ್ಕೆ ಭಾರತದ ರಫ್ತು 2023-24ರಲ್ಲಿ 16.66 ಶತಕೋಟಿ ಡಾಲರ್ ಇದ್ದದ್ದು 2024-25ರಲ್ಲಿ 14.25 ಶತಕೋಟಿ ಡಾಲರ್ಗೆ (ಶೇ. 14.5ರಷ್ಟು) ಇಳಿದಿದೆ. ಇದೇ ವೇಳೆ ಆಮದು ಪ್ರಮಾಣ 2023-24ರಲ್ಲಿ 101.73 ಶತಕೋಟಿ ಡಾಲರ್ನಷ್ಟಿದ್ದುದು 2024-25ರಲ್ಲಿ 113.45 ಶತಕೋಟಿ ಡಾಲರ್ಗೆ (ಶೇ. 11.52ರಷ್ಟು) ಏರಿಕೆಯಾಗಿದೆ. ಚೀನಾದೊಂದಿಗಿನ ವ್ಯಾಪಾರ ಕೊರತೆ ಶೇ. 17ರಷ್ಟು ಹೆಚ್ಚಾಗಿದೆ. ಭಾರತದ ಎರಡನೇ ಅತಿದೊಡ್ಡ ವ್ಯಾಪಾರ ಪಾಲುದಾರ ಸ್ಥಾನದಲ್ಲಿ ಚೀನಾ ಇದೆ. 2013-14ರಿಂದ 2017-18ರವರೆಗೆ ಮತ್ತು 2020-21ರಲ್ಲಿ ಚೀನಾವೇ ಭಾರತದ ಅತಿ ದೊಡ್ಡ ವ್ಯಾಪಾರ ಪಾಲುದಾರ ಆಗಿತ್ತು. ಚೀನಾಕ್ಕಿಂತ ಮೊದಲು ಯುಎಇ ಈ ಸ್ಥಾನದಲ್ಲಿತ್ತು. 2021-22ರಿಂದ ಅಮೆರಿಕವೇ ಭಾರತದ ಅತಿ ದೊಡ್ಡ ವ್ಯಾಪಾರ ಪಾಲುದಾರ ಆಗಿದೆ ಎಂದು ವಾಣಿಜ್ಯ ಸಚಿವಾಲಯ ವಿವರಿಸಿದೆ.