ಅಮರವೀರ ಶಿವಾಜಿ: ಇಂದು ಜಯಂತಿ

Shivaji
Published on

| ಅಕ್ಷಯಾ ಗೋಖಲೆ ಭೌತಶಾಸ್ತ್ರ ಉಪನ್ಯಾಸಕರು

ಅಮ್ಮ ಹೇಳುತ್ತಿದ್ದ ರಾಮಾಯಣ, ಮಹಾಭಾರತದ ಕಥೆಗಳನ್ನೂ, ಪುರಾಣಪುರುಷರ, ಭರತವರ್ಷದ ವೀರ ಕ್ಷಾತ್ರಪರಂಪರೆಯ ಧೀರರಸರ ಗಾಥೆಗಳಿಂದಲೂ ಪ್ರೇರಿತನಾಗಿ ಸಣ್ಣವಯಸ್ಸಿನಲ್ಲಿಯೇ ಹಿಂದುರಾಷ್ಟ್ರದ ಕನಸು ಕಟ್ಟಿ, ಸ್ವರಾಜ್ಯ - ಸ್ವಧರ್ಮ - ಸುಶಾಸನಗಳ ಯೋಜನೆ ರೂಪಿಸಿ, ಗುಡ್ಡಗಾಡುಗಳ ಯುವಕರನ್ನು ಒಗ್ಗೂಡಿಸಿ, ಪುಟ್ಟ ಸೇನೆಯನ್ನು ರಚಿಸಿ ಹತ್ತೊಂಬತ್ತನೆಯ ವಯಸ್ಸಿಗೆ ತೋರಣಗಢವನ್ನು ಗೆದ್ದು ಅಮ್ಮನಿಗೆ ಕಾಣಿಕೆಯಾಗಿ ನೀಡಿದ ವೀರ ಶಿವಾಜಿ ಜನಿಸಿದ್ದು 1630ರ ಫೆಬ್ರವರಿ 19ರಂದು ಪೂನಾದ ಶಿವನೇರುದುರ್ಗದಲ್ಲಿ. ತಂದೆ ಶಹಾಜಿರಾಜೆ ಭೋಂಸ್ಲೆ ಮತ್ತು ತಾಯಿ ಜೀಜಾಬಾಯಿಯ ವಾತ್ಸಲ್ಯ ಹಾಗೂ ರಾಷ್ಟ್ರೀಯ ಆದರ್ಶಗಳು ಸಾಮಾನ್ಯ ಬಾಲಕನಲ್ಲಿ ಅಸಾಮಾನ್ಯ ಶಕ್ತಿ ತುಂಬಿತು. ಅನಿವಾರ್ಯತೆಯಿಂದ ಸುಲ್ತಾನನ ಸರದಾರನಾಗಿದ್ದ ಶಹಾಜಿಗೆ ತನ್ನ ಮಗ ಸ್ವತಂತ್ರ ರಾಜನಾಗಬೇಕೆಂಬ ಉತ್ಕಟ ಆಸೆ. ಖಡ್ಗ ಝುಳಪಿಸಿ ಹಿಂದುಸ್ಥಾನವನ್ನು ಇಸ್ಲಾಮೀಕರಣಗೊಳಿಸುತ್ತಿದ್ದ ದೊರೆಗಳ ವಿರುದ್ಧ ತನ್ನ ಮಗ ರಣಮಂತ್ರದುಚ್ಚಾರಗೈದು ಧರ್ಮರಾಜ್ಯ ಸ್ಥಾಪಿಸುವ ಕನಸು ತಾಯಿಯದು. ಸಮರ್ಥ ರಾಮದಾಸ - ದಾದಾಜಿ ಕೊಂಡದೇವರ ಪ್ರತಿಯೊಂದು ಸೂಚನೆಯನ್ನೂ ಮಗನಲ್ಲಿ ಯಥಾವತ್ ತುಂಬಿದ ಮಹಾತಾಯಿ ಜೀಜಾಬಾಯಿಯ ಶ್ರಮ ನಷ್ಟವಾಗಲು ಮಗ ಬಿಡುವನೇ?

ಗುರು ಕಾಣಿಕೆ: ಶಿವಾಜಿ ಮಹಾರಾಜರು ಸಾತಾರಾ ಹತ್ತಿರದ ಕೋಟೆಯಲ್ಲಿರುವಾಗ ಒಂದು ದಿನ, ತನ್ನ ಗುರುಗಳಾದ ಸ್ವಾಮಿ ರಾಮದಾಸರು ಮನೆಯಿಂದ ಮನೆಗೆ ಭಿಕ್ಷಾಟನೆ ಮಾಡುತ್ತಿರುವುದನ್ನು ನೋಡಿದರು. ತನ್ನಂಥ ಶಿಷ್ಯನಿರುವಾಗ ಅವರು ಭಿಕ್ಷೆ ಬೇಡಿ ಯಾಕೆ ಉಪಜೀವಿಸಬೇಕು ಎಂದೆನಿಸಿ ಅವರು ಸುಖವಾಗಿರಲು ಏನು ಬೇಕಾದರೂ ಬೇಡಲಿ ಕೊಡೋಣ ಎಂದು ನಿರ್ಧರಿಸಿ ವಿನಯಪೂರ್ವಕವಾಗಿ ಒಂದು ಪತ್ರವನ್ನು ಬರೆದರು. ‘ಸ್ವಾಮಿ, ನನ್ನ ಹತ್ತಿರ ಇರುವುದೆಲ್ಲವೂ ನಿಮ್ಮದೇ. ನನ್ನನ್ನೂ ಸೇರಿ ನನ್ನ ಸರ್ವಸ್ವವನ್ನೂ ನಿಮಗೆ ಧಾರೆಯೆರೆದಿದ್ದೇನೆ. ಇನ್ನು ಮುಂದೆ ತಾವು ಭಿಕ್ಷೆ ಬೇಡಬೇಕಾಗಿಲ್ಲ’. ಮೊಹರು ಹಾಕಿದ ಆ ರಾಜಪತ್ರವನ್ನು ಓದಿ ರಾಮದಾಸರು ಮರುದಿನ ಬೆಳಗ್ಗೆ ಶಿವಾಜಿಯ ಹತ್ತಿರ ಬಂದು, ‘ನೀನು ಎಲ್ಲವನ್ನೂ ನನಗೆ ಕೊಟ್ಟಿದ್ದೀಯಾ!’ ‘ಹೌದು’. ‘ಈಗ ನಿನ್ನ ಹತ್ತಿರ ಏನೂ ಇಲ್ಲವಲ್ಲ? ಹಾಗಾದರೆ ನೀನೂ ನನ್ನ ಜೊತೆಗೆ ಬಾ. ಇಬ್ಬರೂ ಸೇರಿ ಭಿಕ್ಷೆ ಬೇಡೋಣ’. ಶಿವಾಜಿ ಮರು ಮಾತಾಡದೇ ಅವರ ಜೊತೆ ಹೊರಟೇ ಬಿಟ್ಟರು. ಜನರೆಲ್ಲರೂ ಕಲ್ಲು ನೀರಲ್ಲಿ ತೇಲುತ್ತಿದೆಯೇನೋ ಎಂಬ ಅಚ್ಚರಿಯಂತೆ ನೋಡತೊಡಗಿದರು. ದಿನಪೂರ್ತಿ ಭಿಕ್ಷೆ ಬೇಡಿದ ನಂತರ ಇಬ್ಬರೂ ಒಂದು ನದಿತೀರಕ್ಕೆ ಬಂದು ಕುಳಿತುಕೊಂಡರು. ಶಿವಾಜಿ, ‘ನಿಜವಾಗಿಯೂ ನಿಮ್ಮ ಶಿಷ್ಯನಾಗಿ ನಿಮ್ಮ ಜೊತೆಗೆ ಉಳಿಯುವ ಆಸೆ’ ಎಂದರು. ರಾಮದಾಸರಿಗೆ ಶಿವಾಜಿ ಮೇಲಿನ ಪ್ರೀತಿ, ಅಭಿಮಾನ ಇಮ್ಮಡಿಯಾಯಿತು. ಇಷ್ಟು ದೊಡ್ಡ ಮಹಾರಾಜನಾದರೂ ಎಂಥ ಸದ್ಗುಣ, ಎಷ್ಟೊಂದು ಸರಳತೆ! ಆಗ ರಾಮದಾಸರು ಶಿವಾಜಿಗೆ, ‘ಇದು ನಿವೃತ್ತಿ ಹೊಂದುವ ಸಮಯವಲ್ಲ. ಈ ಪುಣ್ಯಭೂಮಿಯಲ್ಲಿ ಸ್ವರಾಜ್ಯವನ್ನು ಪುನಃ ಸ್ಥಾಪಿಸಬೇಕಾಗಿದೆ. ಪ್ರಜಾರಕ್ಷಣೆಗಾಗಿ ತೆಗೆದುಕೋ ಈ ರಾಜ್ಯವನ್ನು. ಈಗ ಇದು ಸವೋಚ್ಚ ಶಕ್ತಿಯೊಂದಿಗೆ ನಿನಗೆ ತಿರುಗಿ ಬಂದಿದೆ. ಇದರ ಪ್ರತಿನಿಧಿಯಾಗಿ ಸ್ವಂತ ಬಲದ ಮೇಲೆ ನಂಬಿಕೆಯಿಟ್ಟು ಮುನ್ನುಗ್ಗು. ನಿನಗೆ ಪರಮ ಶ್ರೇಯ ಉಂಟಾಗಲಿ’ಎಂದು ಆಶೀರ್ವದಿಸಿದರು. ಅದನ್ನು ಪ್ರಸಾದವೆಂಬಂತೆ ಸ್ವೀಕರಿಸಿದ ಶಿವಾಜಿ ಆದರದ ದ್ಯೋತಕವಾಗಿ ಅವರು ಧರಿಸುವ ಕೇಸರಿ ವಸ್ತ್ರದ ಬಣ್ಣವನ್ನೇ ಭಗವಾ ಧ್ವಜ ಮಾಡಿಕೊಂಡು ‘ಇದು ಹಿಂದವೀ ಸ್ವರಾಜ್ಯವಾಗಬೇಕೆಂಬುದು ಶ್ರೀಗಳ ಇಚ್ಛೆ’ ಎಂಬ ಘೊಷವಾಕ್ಯದೊಂದಿಗೆ ರಾಜ್ಯಭಾರ ಮಾಡಿದರು. ಮುಂದೆ ಯಾರಿಗೂ ಅವರನ್ನು ಸೋಲಿಸಲಿಕ್ಕಾಗಲಿಲ್ಲ.

ಸುಲ್ತಾನನ ಮುಖಭಂಗ: ಶಿವಾಜಿಯ ಪರಾಕ್ರಮದಿಂದ ಬೆಚ್ಚಿಬಿದ್ದ ಸುಲ್ತಾನ, ಕ್ರೂರಿ ಸರದಾರನೆಂದೇ ಹೆಸರಾಗಿದ್ದ ಅಫಜಲಖಾನನ ಮೂಲಕ ಸಹ್ಯಾದ್ರಿಯ ಸಿಂಹವನ್ನು ಬೇಟೆಯಾಡಲು ನಿಶ್ಚಯಿಸಿದ. ಅಫಜಲಖಾನನಾದರೋ ತನ್ನ ದೊರೆಯನ್ನು ಮೆಚ್ಚಿಸಿ ಶಿವಾಜಿಯನ್ನು ಕೆಣಕಲು ಮಠ ಮಂದಿರಗಳನ್ನು ಕೆಡವಿ ದೇವರ ವಿಗ್ರಹಗಳನ್ನು ಭಗ್ನಗೊಳಿಸಿ, ಗೋಹತ್ಯೆಗೈದು ಕ್ರೌರ್ಯದ ಉತ್ತುಂಗದಲ್ಲಿದ್ದಾಗ ಶಿವಾಜಿ ಭಯಭೀತನಾದಂತೆ ಸ್ನೇಹಹಸ್ತ ಚಾಚಿ ಖಾನನ ಅಂತ್ಯಕ್ಕೆ ಮುನ್ನುಡಿಯಿಟ್ಟರು. ಮಿತ್ರತ್ವದ ಹೆಸರಿನಲ್ಲಿ ಶಿವಾಜಿಯನ್ನು ಅಪ್ಪಿದ ಖಾನ್ ಪೂರ್ವನಿರ್ಧರಿತ ಸಂಚಿನಂತೆ ಹಿಡಿತ ಬಲಪಡಿಸಿ ಇರಿಯಲು ಪ್ರಯತ್ನಿಸಿದಾಗ, ಅವನ ಕರುಳನ್ನು ಬಗೆದು ರುಂಡವನ್ನು ಜೀಜಾಮಾತೆಗೆ ಕಾಣಿಕೆಯಾಗಿ ನೀಡಿ ಸುಲ್ತಾನನ ಮುಖಭಂಗ ಮಾಡಿದ ಶಿವಾಜಿ ಅಂದು ಕೇವಲ ವ್ಯಕ್ತಿಯಾಗಿರದೆ ಹಿಂದೂಸಮಾಜದ ಶಕ್ತಿಯಾದರು.

ದೇಶರಕ್ಷಣೆಗಿಂತ ಮಿಗಿಲಾದುದಿಲ್ಲ: ಸುಲ್ತಾನ, ಔರಂಗಜೇಬರ ಆಕ್ರಮಣಗಳಿಗೆ ತಕ್ಕ ಉತ್ತರ ನೀಡಿ ಹೈಂದವೀ ಸ್ವರಾಜ್ಯದ ನಿರ್ವಣದತ್ತ ಶಿವಾಜಿ ಮಹಾರಾಜರು ಹೆಜ್ಜೆಗಳನ್ನು ಇಡುತ್ತಿದ್ದಾಗ ನಾಡೊಳಗಿನ ಶತ್ರು ರಾಜಾ ಜಯಸಿಂಹ ಸ್ವರಾಷ್ಟ್ರಕ್ಕೆ ಕಂಟಕನಾದ. ಇವನ ಕುಟಿಲನೀತಿಯಿಂದ ಶಿವಾಜಿ ಮಗ ಸಂಭಾಜಿಯೊಂದಿಗೆ ಔರಂಗಜೇಬನ ಸೆರೆಯಾದರೂ, ಹದ್ದಿನಗಣ್ಣಿಟ್ಟು ಕಾಯುತ್ತಿದ್ದ ಸೈನಿಕರಿಗೆ ಚಳ್ಳೆಹಣ್ಣು ತಿನ್ನಿಸಿ ಸಂನ್ಯಾಸಿ ವೇಷಧಾರಿಯಾಗಿ ಮಿಠಾಯಿ ಬುಟ್ಟಿಯಲ್ಲಿ ಕೂತು ಪರಾರಿಯಾದರು. ಆ ಹೊತ್ತಿಗಾಗಲೇ ಅನೇಕ ದುರ್ಗಗಳನ್ನು ಗೆದ್ದು ಜನಮಾನಸದ ಅನಭಿಷಿಕ್ತ ದೊರೆಯಾಗಿದ್ದ ಶಿವಾಜಿ ಮಹಾರಾಜರು 1674ರ ಜ್ಯೇಷ್ಠ ಶುದ್ಧ ತ್ರಯೋದಶಿಯಂದು ರಾಯಗಢದಲ್ಲಿ ಗಾಗಾಭಟ್ಟರಿಂದ ಪಟ್ಟಾಭಿಷಿಕ್ತನಾಗಿ ಛತ್ರಪತಿಯಾದರು. ಕರಾವಳಿಯನ್ನು ಬಿಳಿಯರಿಂದ ರಕ್ಷಿಸಲು, ದಕ್ಷಿಣಭಾರತವನ್ನು ಮೊಘಲರಿಂದ ಕಾಪಾಡಲು ಅಷ್ಟಪ್ರಧಾನ ವ್ಯವಸ್ಥೆ ರೂಪಿಸಿ ಎಲ್ಲ ರಾಜರೊಂದಿಗೆ ಉತ್ತಮ ಬಾಂಧವ್ಯ ಹೊಂದಿ ದೇಶರಕ್ಷಣೆಗೆ ಮಿಗಿಲಾದುದಿಲ್ಲ ಎಂಬ ಸಂದೇಶವನ್ನು ತನ್ನ ಬದುಕಿನ ಮೂಲಕವೇ ನೀಡಿದ ಮಹಾರಾಜರು ಧರ್ಮ ಜಾಗರಣೆಯ ಅರಿವು ಮೂಡಿಸುವುದರ ಮೂಲಕ ಹಿಂದು ಮಹಾಸಾಮ್ರಾಜ್ಯದ ಅಧಿನಾಯಕರಾದರು. ಸದಾಕಾಲ ದೇಶವನ್ನೇ ಉಸಿರಾಡಿದ ನಾಯಕ 1680ರ ಏಪ್ರಿಲ್ 3ರಂದು ದೈವಾಧೀನರಾದರು. ಸುಲ್ತಾನನಿಗೆ ಸವಾಲೊಡ್ಡಿ ನಡುಕ ಹುಟ್ಟಿಸಿದ ಪುಟ್ಟ ಬಾಲಕ ಭಾರತೀಯರ ಹೃದಯ ಸಾಮ್ರಾಟನಾಗಿ ಬೆಳೆದು ನಿಂತ ಪರಿ ಪುಟಾಣಿ ಮಕ್ಕಳಿಗೆ ಸದಾಕಾಲ ಪ್ರೇರಣೆ.

40 ಕೋಟೆಗಳ ಮೇಲೆ ಸ್ವರಾಜ್ಯ ಧ್ವಜ: ಅಮ್ಮ ನೀಡಿದ ಸಂಸ್ಕಾರ, ಗುರುವಿನ ಮಾರ್ಗದರ್ಶನ, ಹೃದಯ ಮಂದಿರದಲ್ಲಿ ನೆಲೆಯಾಗಿದ್ದ ತುಳಜಾಭವಾವಿಯ ಕೃಪೆಯಿಂದ ಗುಡ್ಡಗಾಡು ಯುವಕರಲ್ಲಿ ಶಕ್ತಿತುಂಬಿ ಸೈನ್ಯ ರೂಪಿಸಿದ ಶಿವಾಜಿಯ ಯುವಸೇನೆಯ ಬಲವೇ ದೇಶದ ಮೇಲಿದ್ದ ಪ್ರೀತಿ, ಗೌರವಾದರಗಳು. ಈತ ಗೆಲ್ಲುತ್ತಿದ್ದ ಒಂದೊಂದೇ ಕೋಟೆಗಳು ಸುಲ್ತಾನನ ಆಧಿಪತ್ಯದ ಕೊನೆಗಾಲದ ಸಾಮೀಪ್ಯವನ್ನು ಸೂಚಿಸುತ್ತಿತ್ತು. ಶಿವಾಜಿ ಬೆಳೆದಂತೆ, ಸ್ವರಾಜ್ಯದ ಕನಸೂ ಬೆಳೆದು ಹೆಮ್ಮರವಾದರೆ ತಮಗೆ ಅಸ್ತಿತ್ವವಿರಲಾರದೆಂದು ಬಿಜಾಪುರದ ಸುಲ್ತಾನನು ಇತರ ಮುಸಲ್ಮಾನ ರಾಜರೊಂದಿಗೆ ಸೇರಿ ಶಹಾಜಿಯನ್ನು ಬಂಧನದಲ್ಲಿರಿಸಿ, ಶಿವಾಜಿ ಮತ್ತು ಬೆಂಗಳೂರಿನಲ್ಲಿದ್ದ ಸಹೋದರ ಸಂಭಾಜಿಯ ಮೇಲೆ ಏಕಕಾಲಕ್ಕೆ ದಾಳಿ ನಡೆಸಿದ. ಒಂದು ಕ್ಷಣ ವಿಚಲಿತರಾದ ಶಿವಾಜಿಗೆ ಪತ್ನಿ ಸಯೀಬಾಯಿ ಧೈರ್ಯತುಂಬುವ ಮಾತನ್ನಾಡಿ ಹುರಿದುಂಬಿಸಿ ವೀರ ಪರಂಪರೆಯ ಮರಾಠಾ ಇತಿಹಾಸದಲ್ಲಿ ತನ್ನ ಹೆಸರನ್ನು ಸ್ವರ್ಣಾಕ್ಷರದಲ್ಲಿ ಬರೆದಿಟ್ಟಳು. ಚತುರ ಯುದ್ಧತಂತ್ರಗಳಿಂದ ಗೆದ್ದು ಸುಲ್ತಾನನಿಗೆ ಭಯ ಹುಟ್ಟಿಸಿ ಶಹಾಜಿಯ ಗೌರವಪೂರ್ವಕ ಬಿಡುಗಡೆಗೆ ರಣನೀತಿ ಹೆಣೆದು ಸಫಲನಾದ. ಮಾವಳ ಯುವಕರ ದೇಹಬಲ, ರಾಷ್ಟ್ರಪ್ರೇಮ ಮತ್ತು ತನ್ನ ಚಾಣಾಕ್ಷಮತಿ ನಡೆಯಿಂದ ಕೇವಲ ಇಪ್ಪತ್ತೆಂಟರ ಹರೆಯದಲ್ಲಿ ಸುಮಾರು ನಲವತ್ತು ಕೋಟೆಗಳ ಮೇಲೆ ಸ್ವರಾಜ್ಯದ ಧ್ವಜವನ್ನು ನಭದೆತ್ತರಕ್ಕೆ ಹಾರಿಸಿ ಶತ್ರುಗಳನ್ನು ಮಾನಸಿಕವಾಗಿ ಅಧೀರನನ್ನಾಗಿಸಿದ ಶಿವಾಜಿ, ಸಮುದ್ರಮಾರ್ಗದಲ್ಲಿ ಭಾರತದೊಳಗೆ ಬಂದು ಪಾರಮ್ಯ ಮೆರೆಯುವ ಹುನ್ನಾರ ಮಾಡುತ್ತಿದ್ದ ಬಿಳಿಯರ ತಂತ್ರಗಳಿಗೆ ದೇಶ ಮಣಿಯ ಬಾರದೆಂದು ಸಮರ್ಥ ಸಮರಪಡೆ, ಸಮರನೌಕೆ ಮತ್ತು ಅಭೇದ್ಯ ಸಮುದ್ರಕೋಟೆಗಳನ್ನು ಕಟ್ಟಿ ಕರಾವಳಿಯ ರಕ್ಷೆಗೆ ಬದ್ಧರಾದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net