ಸೈಕಲ್ ಮೇಲೆ ಏಕಾಂಗಿ ಸಂಚಾರ; ಪೋರಬಂದರ್ ತಲುಪಿ ಬಂದ ಯುವಕ

CYCLE
Published on

ಜೀವನ ನಿರ್ವಹಣೆಗೆ ಒಂದು ನೌಕರಿ, ಕೈಯಲ್ಲೊಂದಿಷ್ಟು ಹಣ, ಕಾಲ ಕಳೆಯಲು ಒಂದು ಮೊಬೈಲ್ ಇದ್ದರೆ ಸಾಕು, ಇಡೀ ಜಗತ್ತೇ ನಮ್ಮ ಕೈಯಲ್ಲಿ ಎನ್ನುವ ಯುವಕರೇ ಹೆಚ್ಚು. ಅಂಥವರ ನಡುವೆ ಸಮಾಜ ಸೇವೆ, ಜನಜಾಗೃತಿಗಳಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ವಿಭಿನ್ನವಾಗಿ ಕಾಣಿಸುತ್ತಿದ್ದಾರೆ ಶಿವರಾಯಪ್ಪ.

ಹಂದಲಗೆರೆ ಗಿರೀಶ್ ಅವರು ರಚಿಸಿದ, ನಾದ ಮಣಿನಾಲ್ಕೂರು ಹಾಡಿದ, ಏಕಾಂಗಿಯಾಗಿ ಹೊರಡು, ಯಾರಾದರು ಸಿಕ್ಕಾರು| ಏನನ್ನು ಬಯಸದೇ ಹೊರಡು, ಬೇಕಾದುದು ಸಿಕ್ಕೀತು| ಎಂಬ ಗೀತೆ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ವೈರಲ್ ಆಗಿತ್ತು. ಇದೊಂದು ಆಪ್ತ ಗೀತೆ. ಬೇಸರಗೊಂಡ ಮನಸ್ಸಿಗೆ ಸ್ಪೂರ್ತಿ ತುಂಬಿ ಕೆಲಸಕ್ಕೆ ಹಚ್ಚುವ ಪ್ರೇರಣಾತ್ಮಕ ಗೀತೆ. ಈ ಗೀತೆಯ ಸಾಲುಗಳು ಜೀವನದ ಮೌಲ್ಯವನ್ನು ಎತ್ತಿ ಹಿಡಿಯುತ್ತವೆ. ಈ ಹಾಡಿನ ಸಾಲುಗಳಿಗೆ ಪೂರಕ ಎಂಬಂತೆ 25ರ ಯುವಕನೊಬ್ಬ ಏಕಾಂಗಿಯಾಗಿ ಸೈಕಲ್​ನಲ್ಲಿ 1700 ಕಿ.ಮೀ ದೂರ ಪ್ರಯಾಣಿಸಿ ಇತರೆ ಯುವಕರಿಗೆ ಮಾದರಿಯಾಗಿದ್ದಾನೆ.

ಕೊಪ್ಪಳ ತಾಲೂಕಿನ ಹಿರೇಸಿಂದೋಗಿ ಗ್ರಾಮದ ಯುವಕ ಶಿವರಾಯಪ್ಪ ವೀರಪ್ಪ ನೀರಲೋಟಿ ಈ ಸಾಹಸಕ್ಕೆ ಕೈಹಾಕಿದವರು. ಬಳ್ಳಾರಿ ಜಿಲ್ಲೆಯ ಹೂವಿನಹಡಗಲಿಯ ಸಾರ್ವಜನಿಕ ಆಸ್ಪತ್ರೆಯಲ್ಲಿ ಡಿ-ದರ್ಜೆ ನೌಕರ ಇವರು. ‘ಸ್ವಚ್ಛ ಭಾರತ, ಸ್ವಸ್ಥ ಭಾರತ’ ಎಂಬ ಧ್ಯೇಯವಾಕ್ಯವನ್ನು ಎಲ್ಲೆಡೆ ಪಸರಿಸಲು ಹೂವಿನಹಡಗಲಿಯಿಂದ ಗುಜರಾತಿನ ಪೋರಬಂದವರೆಗೆ ಏಕಾಂಗಿಯಾಗಿ ಸೈಕಲ್ ಮೇಲೆ ಪ್ರಯಾಣಿಸಿ ಬಂದಿದ್ದಾರೆ. 2019ರ ಡಿ. 18ರಂದು ಹೂವಿನಹಡಗಲಿಯಿಂದ ಪ್ರಾರಂಭವಾದ ಸೈಕಲ್ ಪಯಣ ಡಿ. 29ರಂದು ಪೋರಬಂದರ್​ನ ಗಾಂಧಿ ಆಶ್ರಮದಲ್ಲಿ ಮುಕ್ತಾಯವಾಗಿದೆ.

ಮಾರ್ಗದ ಅನೇಕ ಗ್ರಾಮ ಹಾಗೂ ನಗರಗಳಲ್ಲಿ ನಿಂತು, ಅಲ್ಲಿನ ಜನರೊಂದಿಗೆ ಸ್ವಚ್ಛತೆ ಹಾಗೂ ಸ್ವಸ್ಥತೆಯ ಬಗ್ಗೆ ತಿಳಿವಳಿಕೆ ಮೂಡಿಸುವ ಕಾಯಕ ಮಾಡಿದ್ದಾರೆ. ರಸ್ತೆಯಲ್ಲಿ 8-10 ಜನರಿದ್ದರೆ ಅಲ್ಲಿಯೇ ನಿಂತು ತನ್ನದೇ ಆದ ಶೈಲಿಯಲ್ಲಿ ಅರಿವು ಮೂಡಿಸುತ್ತಾ ಪಯಣವನ್ನು ಖುಷಿಯಿಂದ ಪೂರೈಸಿದ್ದಾರೆೆ. ಈ ಹಿಂದೆ ಪಕ್ಕದ ಅಳವಂಡಿ ಗ್ರಾಮದ ಕೆಲ ಗೆಳೆಯರು ಪಂಜಾಬ್​ಗೆ ಸೈಕಲ್ ಮೇಲೆ ಪ್ರಯಾಣ ಮಾಡಿ ಬಂದಿದ್ದರು. ಇದರಿಂದ ಸ್ಪೂರ್ತಿ ಪಡೆದು ಒಬ್ಬಂಟಿಯಾಗಿ ಪಯಣಿಸಬೇಕು, ಪ್ರಯಾಣದಲ್ಲಿ ಏನಾದರೂ ಸಂದೇಶ ಸಾರಬೇಕು ಎಂಬ ಮಹದಾಸೆ ಹುಟ್ಟಿತ್ತು. ಈ ಪಯಣ ಅದರ ಫಲ ಎನ್ನುತ್ತಾರೆ ಶಿವರಾಯಪ್ಪ.

ಮಾರ್ಗದಲ್ಲಿ ದೊರೆತ ಗೆಳೆಯ: ಮಾರ್ಗ ಮಧ್ಯೆ ಅಪರಿಚಿತನೊಬ್ಬ ಗೆಳೆಯ ಆಗಿದ್ದು ಹಾಗೂ ವೈದ್ಯರೊಬ್ಬರು ಭೇಟಿಯಾಗಿರುವ ವಿಷಯ ಶಿವರಾಯಪ್ಪ ಎಂದಿಗೂ ಮರೆಯುವುದಿಲ್ಲ. ‘ನಿಪ್ಪಾಣಿಯ ಬಳಿ ನನ್ನಂತೆಯೇ ಒಂಟಿ ಸೈಕಲ್ ಪಯಣ ಕೈಗೊಂಡ ಮಲ್ಲಿಕಾರ್ಜುನ ಮೇಟಿ ಎಂಬಾತ ಸಿಕ್ಕ.ಅವನು ಉಡುಪಿಯಿಂದ ಅಯೋಧ್ಯೆಗೆ ಹೊರಟಿದ್ದ. ನಿಪ್ಪಾಣಿಯಿಂದ ಪುಣೆಯವರೆಗೂ ಇಬ್ಬರೂ ಜೊತೆಯಾಗಿ ಪ್ರಯಾಣ ಮುಂದುವರೆಸಿದೆವು.

ಪುಣೆಯ ಬಳಿಯ ಇಳಿಜಾರಿನಲ್ಲಿ ಆತನ ಸೈಕಲ್ ನಿಯಂತ್ರಣ ತಪ್ಪಿ ಚಿಕ್ಕ ಅಪಘಾತಕ್ಕೀಡಾಯಿತು. ಆಗ ಒಂದು ದಿನ ಅವನ ಜತೆ ಆಸ್ಪತ್ರೆಯಲ್ಲಿ ಕಳೆದೆ. ಆಸ್ಪತ್ರೆಯ ವೈದ್ಯರು ನನ್ನ ಪ್ರಯಾಣದ ಉದ್ದೇಶ ಅರಿತು, ಧನ ಸಹಾಯ ಮಾಡಿದ್ದಲ್ಲದೇ ಹಣ್ಣುಹಂಪಲು ನೀಡಿ ಬೀಳ್ಕೊಟ್ಟರು. ಗೆಳೆಯನಿಗೆ ಉಚಿತ ಚಿಕಿತ್ಸೆಯನ್ನೂ ನೀಡಿದರು’ ಎನ್ನುತ್ತಾರೆ ಅವರು.

ಇಲಾಖೆ ಹಾಗೂ ಕುಟುಂಬದ ಬೆಂಬಲ: ಶಿವರಾಯಪ್ಪನ ಪಯಣಕ್ಕೆ ಆರೋಗ್ಯ ಇಲಾಖೆ ಹಾಗೂ ಕುಟುಂಬದವರು ಬೆಂಬಲ ಸೂಚಿಸಿದ್ದರು. ಪ್ರಾರಂಭದಲ್ಲಿ ಮನೆಯವರು ಇಷ್ಟೊಂದು ದೂರದ ಒಂಟಿ ಪಯಣಕ್ಕೆ ಒಪ್ಪಿರಲಿಲ್ಲ. ಪಯಣದ ಉದ್ದೇಶ ಹಾಗೂ ಅದಕ್ಕೆ ಪೂರಕ ವ್ಯವಸ್ಥೆಗಳ ಬಗ್ಗೆ ತಿಳಿಸಿದಾಗ ಒಪ್ಪಿ ಕಳಿಸಿದರು.

ಇವರ ಸಂಪರ್ಕಕ್ಕೆ: 8970674345.

ಹೀಗಿತ್ತು ಪಯಣ

ಪ್ರತಿದಿನ ಹಗಲಿನ 10 ಗಂಟೆಗಳಲ್ಲಿ 120-150 ಕಿ.ಮೀ ಪಯಣ. 12 ದಿನಗಳಲ್ಲಿ 1700 ಕಿ.ಮೀ ದೂರವನ್ನು ಸೈಕಲ್​ನಲ್ಲಿ ಪೂರ್ಣಗೊಳಿಸಿದ ಸಂತೃಪ್ತಿ ಶಿವರಾಯ ಅವರದ್ದು. ದೇವಸ್ಥಾನ, ಪೆಟ್ರೋಲ್ ಬಂಕ್ ಅಥವಾ ರಸ್ತೆ ಪಕ್ಕದ ಲಾರಿಗಳಲ್ಲಿ ರಾತ್ರಿ ವಾಸ್ತವ್ಯ. ಸೈಕಲ್ ಮೇಲಿನ ಘೊಷಣೆ ನೋಡಿದ ಕೆಲವರು ಮಾತನಾಡಿಸಿ ಉದ್ದೇಶ ತಿಳಿದುಕೊಂಡು ಊಟ ಮತ್ತು ವಸತಿ ವ್ಯವಸ್ಥೆ ಮಾಡಿದ್ದಾರೆ. ಪಯಣಕ್ಕಾಗಿ 15 ಸಾವಿರ ಮೊತ್ತದ ಸೈಕಲ್ ಖರೀದಿಸಿದಾರೆೆ. ಎರಡು ಜತೆ ಬಟ್ಟೆ, ಹಾಸಿಗೆ ಹೊದಿಕೆ, ಸ್ವೆಟರ್, ಸೈಕಲ್​ಗೆ ಗಾಳಿ ತುಂಬಲು ಪಂಪ್, ಪಂಚರ್ ಹಾಕಲು ಬೇಕಾದ ಸಾಮಗ್ರಿಗಳು ಇಷ್ಟು ಸಾಮಗ್ರಿಗಳನ್ನು ಒಂದು ಚಿಕ್ಕ ಬ್ಯಾಗ್​ನಲ್ಲಿ ತುಂಬಿಕೊಂಡು ಪಯಣ ಪೂರೈಸಿದ್ದಾರೆೆ.

ಪಯಣದ ಮಾರ್ಗ

ಹೂವಿನ ಹಡಗಲಿ, ಗದಗ, ನರಗುಂದ, ಗೋಕಾಕ, ನಿಪ್ಪಾಣಿ, ಕೊಲ್ಲಾಪುರ, ಸತಾರ್, ಕರಾಡ್, ಪುಣೆ, ಥಾಣೆ, ವಾಪಿ, ಸೂರತ್, ಬರೂಚ್, ಪಿಪ್ಲಿ, ಗೊಂಡಾಲ್, ಪೋರಬಂದರ್.

| ಆರ್.ಬಿ. ಗುರುಬಸವರಾಜ  

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net