ಅಲ್ಲಮನು ಎಲ್ಲಿದ್ದನೋ ಅವೆಲ್ಲವೂ ದಿವ್ಯೇತ್ರವೇ ಆಗಿತ್ತು...

Allamma new
Published on
ಅಲ್ಲಮನು ಲಿಂಗದೊಡನೆ ಬೆರೆತು ಹೋದ. ಅ ಲಿಂಗದ ಸೋಂಕಿಗೆ ಚೆಲುವೆಲ್ಲವೂ ರಾಗದಿಂದ ಅಂಕುರಿಸಿತು. ಅಲ್ಲಮ ಅಲ್ಲಿಂದ ಹೊರಟ. ಗೊಗ್ಗೇಶ್ವರನು ಅವನನ್ನು ನೋಡುತ್ತ ಮೆಚ್ಚುಗೊಂಡ. ರಾಜನು ನೋಡಲಾಗದೆ ಬೆರಗಿನಿಂದ ಕಣ್ಮುಚ್ಚಿದ. ಆ ಲಿಂಗವು ಅವನನ್ನು ಎತ್ತೆತ್ತ ಕರೆದೊಯ್ಯುವುದೋ ಅತ್ತತ್ತ ಹೋಗುತ್ತಿದ್ದ. ಅಲ್ಲಿಯ ಪುರಜನಕ್ಕೆ ಕೌತುಕವುಂಟಾಯಿತು. ಎಲ್ಲಿಯ ಕಾಮಲತೆ? ಎಲ್ಲಿಯ ಅಲ್ಲಮ?

ಕೊನೆಗೂ ಪುಣ್ಯ ಕೂಡಿ ಬಂದಿತು. ಎಲ್ಲಿಯ ಶಿವನ ಕಳಶ? ಎಲ್ಲಿಯ ಶಿವಾಲಯ? ಶಿವನ ಸುಜ್ಞಾನದ ಸುಖದ ಅನುಭವ ಎಲ್ಲಿಂದ ಬಂದಿತು?

ಸಂಸಾರದಲ್ಲಿ ಮುಳುಗಿದ್ದ ಇವನು ಅಲ್ಲಿಂದ ಹೇಗೆ ಹೊರಬಂದ?

ಕಾಮಲತೆಗೊಲಿದಿರ್ದನೆಂಬುದದು ಪುಸಿ ನೋಡ

ಪ್ರೇಮವದು ಶಿವಲಿಂಗ ಪೂಜೆಯೆ ದಿಟಂ ನೋಡ

ಹೀಗೆಂದು ಪುರಜನರು ತಮತಮಗೆ ಮಾತನಾಡಿಕೊಂಡರು.

ಶಿವನ ಭಕ್ತಿ ಅಲ್ಲಮನಲ್ಲಿ ಹೇಗೆ ಸೇರಿಕೊಡಿತು? ಅಂಗೈನಲ್ಲಿ ಅಮೃತ ಫಲವನ್ನು ಪಡೆದ. ಲಿಂಗದಲ್ಲಿಯೇ ತನ್ನನ್ನು ತಾನೆ ಸಮರ್ಪಿಸಿಕೊಂಡ. ದೇಹದ ಪಂಚೀಕರಣವನ್ನು ಅಲ್ಲಮ ಮೀರಿಬಿಟ್ಟ. ದೇಹ ಮೋಹವೆಂಬುದು ಒಣಗಿ, ತಾನೇ ತಾನಾಗಿಬಿಟ್ಟ. ಅಕ್ಕರದ ಬೋಧೆಯನ್ನು ಮೀರಿದ. ಶಿವತತ್ತ$್ವವು ಇವನಿಗೆ ಕರತಳಾಮಲಕವಾಯಿತು. ಪರಮ ಶಿವಯೋಗಿಗಳ ಅನುಭವವು ದಿಟವಾಗಿ ಮೈದೋರಿತು.

ಶಶಿ ರವಿಗಳಂತೆ ಬೆಳ ಬೆಳಗು ತಿರ್ದಂ ನೋಡ/ಉಸುರಲಿಲ್ಲದ ಪರಬ್ರಹ್ಮವಾದಂ ನೋಡ ತಲೆಗೂದಲು ಬಿಚ್ಚಿಕೊಂಡದ್ದು ಅವನಿಗೆ ತಿಳಿಯದಾಯಿತು. ತಾನೇನು ಮಾತನಾಡುತ್ತಿ ರುವೆ ಎಂಬುದೂ ತಿಳಿಯದೆ ಹೋಯಿತು. ಅವನ ಎದುರಿಗೆ ಯಾರು ಬಂದರೂ ತಿಳಿಯದೆ ಹೋದ. ಇದು ಅಡವಿ, ಇದು ಊರು ಎಂಬುದು ತಿಳಿಯದೆ ಹೋಯಿತು. ಹೋಗಳುತ್ತಿದ್ದವರನ್ನು ಕೇಳಿಸಿಕೊಳ್ಳಲಿಲ್ಲ; ಬೈಯುತ್ತಿದ್ದವರನ್ನೂ ಕೇಳಿಸಿಕೊಳ್ಳುತ್ತಿರಲಿಲ್ಲ. ನಾಡೊಡೆಯ ಯಾರೆಂದು ತಿಳಿಯದೆ ಹೋದ; ಏಳುಲೋಕಗಳು ಯಾವುವೆಂಬುದೂ ಅವನಿಗೆ ತಿಳಿಯದೆ ಹೋಯಿತು! ಅಲ್ಲಮನು ಪರಮಜ್ಞಾನದ ಅರಿವಿನ ಎಚ್ಚರದಲ್ಲಿದ್ದ. ಈ ಜಗತ್ತು ಹುಸಿ ಎಂಬುದಾಗಲಿ, ಜಗತ್ತಿನ ಇರವು ಹುಸಿಯೆಂದಾಗಲಿ ಒಂದನೊಂದು ಬೆರಸದ ಅರಿವಿನಲ್ಲಿದ್ದನು. ಹೀಗೆಂದು ಊರಿನ ಜನರೆಲ್ಲಾ ಕೌತುಕಪಡುತ್ತ, ತಮ್ಮತಮ್ಮಲ್ಲಿಯೇ ಮಾತನಾಡಿಕೊಳ್ಳುತ್ತಿದ್ದರು. ಆಗ ಅಲ್ಲಮನ ಅವಸ್ಥೆಯನ್ನು ಕಂಡ ಕೋಗಿಲೆಗಳು

ಎಲೆಲೆ ಶಿವಲಿಂಗ ದೃಢನೀ ಬಂದನೀ ಬಂದ

ಎಲೆಲೆ ನಿರ್ಮಳ ಸಿದ್ಧನಿ ಬಂದನೀ ಬಂದ

ಹೀಗೆಂದು ಕರೆಯುತ್ತಿದ್ದವು. ಗಿಡ&ಪೊದರು ಗಳಲ್ಲಿದ್ದ ಗಿಳಿಗಳು ಇಂಬಿನಿಂದ ನುಡಿಯುತ್ತಿದ್ದವು. ಅಲ್ಲಮ ನಡೆದುದೇ ದಾರಿಯಾಯಿತು. ಅವನು ಹೇಳಿದ್ದೆಲ್ಲವೂ ವೇದವಾಯಿತು. ಅವನು ಮುಟ್ಟಿದ ಮರಗಳು ಮನುಜರಂತೆ ನಡೆದುವು. ಅವನು ತಿಳಿದ ಪ್ರಾಣಿಗಳು ಸ್ವರ್ಗಕ್ಕೆ ಸಂದವು. ಅವನು ನಡೆವಾಗ ನೆರಳಿನಂತೆ ಅವನನ್ನು ಹಿಂಬಾಲಿಸಿದವು. ಬೆಟ್ಟಗಳು ಪಕ್ಕಕ್ಕೆ ಸರಿದು ಅವನಿಗೆ ದಾರಿಮಾಡಿಕೊಟ್ಟವು. ಇದೇನು ಚೋದ್ಯ ನೋಡ! ಆ ಅರಣ್ಯಗಳಲ್ಲಿದ್ದ ಹುಲಿ&ಹುಲ್ಲೆ, ಫಣಿ&ನಕುಲಗಳು, ಸಿಂಹ&ಆನೆಗಳು ತಮ್ಮ ವೈರತ್ವವನ್ನು ಮರೆತುಬಿಟ್ಟವು. ಹೀಗೆ, ಅಲ್ಲಮನು ತನ್ನನ್ನು ತಾನೆ ಮರೆತು ಶಿವತ್ವದಲ್ಲಿ ಬರುತ್ತಿದ್ದನು. ಅವನ ಕರತಳದಲ್ಲಿ ಸಿಂಹಾಸನದಲ್ಲಿದ್ದ ಲಿಂಗಕ್ಕೆ ವನದೇವತೆಯರು ಬಂದು ಮೈಯಿಕ್ಕಿದರು. ಮಾವಿನ ಮರದ ಎಲೆಚಿಗುರು ಲಿಂಗಕ್ಕೆ ಸೋಂಕಿತು. ಅಲ್ಲಿದ್ದ ಲತೆ&ಪುಷ್ಪಮಂಜರಿಗಳು ಚಾಮರ ಬೀಸಿದುವು. ಆ ಅಲ್ಲಮನೊ ಶಿವಸುಖದ ರಾಜ್ಯದಲ್ಲಿ ಇದ್ದ. ಆ ಅಲ್ಲಮ ಪರಮಕರುಣಾ ಸಮುದ್ರದಲ್ಲಿಯೇ ಮುಳುಗಿದ್ದ. ಅವನು ತನ್ನ ಕರತಳದಲ್ಲಿದ್ದ ಲಿಂಗಕ್ಕೆ ನೋಟದಿಂದಲೇ ಮಜ್ಜನ ಮಾಡಿಸಿದ. ಅವನ ಅರಳಿರುವ ಕಣ್ಣುಗಳಿಂದ ಪೂಜಿಸಿ ತನ್ನನ್ನು ತಾನೇ ಮರೆತುಬಿಟ್ಟ. ಅವನ ಉಸಿರಾಟವೆ ಪರಿಮಳದ ಧೂಪವಾಯಿತು. ಮನದ ಮೂಲಕವೆ ಬೆಳಗಿನ ಆರತಿಯೆತ್ತಿದ. ತಕ್ಷಣ ನೇಹವನ್ನೆ ಆರೋಗಣೆಗೆ ಕೊಟ್ಟ. ಆ ಲಿಂಗದ ಮುಂದೆ ಅಕ್ಕರೆಯ ಆನಂದವನ್ನು ಇಟ್ಟ. ಸಮಸ್ತ ಸುಖವನ್ನು ಕಣ್ಣುಗಳಿಂದಲೇ ಕೈಗೂಡಿಸಿದ. ಸಮಸ್ತ ಭೋಗಗಳನ್ನು ಅವನು ನೋಟದಿಂದಲೇ ನೀಡುತ್ತಿದ್ದ.

ತರುನಿಕಾಯದ ಕೋಟರಂಗಳೊಳಗಲ್ಲಮಂ

ಗಿರಿಕುಳದ ಗಹ್ವರಂಗಳೊಳಗಲ್ಲಮಂ

ನೆರೆದ ನಿರ್ಮಳಿನ ಪುಳಿನ ಸ್ಥಳದೊಳಲ್ಲಮಂ.

ಚಂದ್ರಕಾಂತ ಶಿಲೆಯ ತಂಪಿನಲ್ಲಿ, ಇಂದ್ರನಿಲ ಮಣಿಯ ಶಿಲಾ ತಲದಲ್ಲಿ, ಶ್ರೀಗಂಧದ ಪರಿಮಳದಲ್ಲಿ, ಸಂಪಗೆಯ ಬಿರಿಮುಗುಳ ಹೂವಿನಲ್ಲಿ, ಕೆಂದಳಿರ ಸ್ಥಳಗಳಲ್ಲಿ, ಮಾಧವಿಯ ಮಂಟಪದಲ್ಲಿ, ತಾವರೆಯ ತಿಳಿಗೊಳದಲ್ಲಿ, ಮಲ್ಲಿಗೆಯ ಪೊದರಿನಲ್ಲಿ, ತಿಂಗಳು ಇರುತ್ತಿದ್ದ. ನದಿಯಲ್ಲಿ ನೂರುವರ್ಷ ಇರುತ್ತಿದ್ದ. ಅವನು ಶಿವನನ್ನು ನೋಡುವಂತೆ ಎಲ್ಲವನ್ನೂ ನೋಡು ತ್ತಿದ್ದ. ಅವನು ಎಲ್ಲಿದ್ದನೋ ಅವೆಲ್ಲವೂ ದಿವ್ಯೇತ್ರವೇ ಆಗಿತ್ತು. ಇದು ಅಲ್ಲಮನ ವಿಗಡತನ!

(ಲೇಖಕರು ಕರ್ನಾಟಕ ಸಂಸತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಗಳು. ಕನ್ನಡ ಹಾಗೂ ಸಂಸತ ವಿದ್ವಾಂಸರು)

(ಪ್ರತಿಕ್ರಿಯಿಸಿ: vvsudina@gmail.com, mallepuram@gmail.com)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net