

| ಅರವಿಂದ ಅಕ್ಲಾಪುರ ಶಿವಮೊಗ್ಗ
ವನಚ ಸಾಹಿತ್ಯ ಸೃಷ್ಟಿಸಿದ ಶರಣರ ಶ್ರೀಮಂತ ಪರಂಪರೆಗೂ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿಗೂ ಅವಿನಾಭಾವ ಸಂಬಂಧ. ಈ ಶರಣ ಪರಂಪರೆಯಲ್ಲಿ ಗಮನ ಸೆಳೆದಾಕೆ ಅಕ್ಕಮಹಾದೇವಿ. ಅಕ್ಕನ ವೈರಾಗ್ಯ ಜೀವನ, ವೈಚಾರಿಕತೆ, ಆಕೆಯ ಧಾರ್ವಿುಕ ಶ್ರದ್ಧೆ ಅನುಕರಣೀಯ. ಇಂತಹ ಅಕ್ಕಮಹಾದೇವಿಯ ಜನ್ಮಸ್ಥಳಕ್ಕೆ ಈಗ ಹೊಸ ರೂಪ ಬಂದಿದೆ.
ಕ್ರಿ.ಶ. 1130ರಲ್ಲಿ ಶಿಕಾರಿಪುರ ತಾಲೂಕಿನ ಉಡುತಡಿಯಲ್ಲಿ ಅಕ್ಕಮಹಾದೇವಿ ಜನನವಾಯಿತು. ಅರಮನೆಯ ಶ್ರೀಮಂತ ಬದುಕನ್ನು ತ್ಯಜಿಸಿ ಅನುಭವ ಮಂಟಪ ಸೇರಿದಾಕೆ. ಮುಂದೆ ಆಕೆ ವಚನ ಸಾಹಿತ್ಯಕ್ಕೆ ನೀಡಿದ ಕೊಡುಗೆ, ಆಕೆಯ ವೈಚಾರಿಕ ನಿಲುವುಗಳು ಎಂದಿಗೂ ಅಮರ.
ಸತತ ಎರಡು ವರ್ಷಗಳ ಕಾಮಗಾರಿಯ ನಂತರ ಅಕ್ಕಮಹಾದೇವಿ ಜನ್ಮಸ್ಥಳ ಉಡುತಡಿಗೆ ನಾವೀನ್ಯ ಸ್ಪರ್ಶ ಸಿಕ್ಕಿದೆ. 29 ಎಕರೆ ಪ್ರದೇಶದಲ್ಲಿ ದೆಹಲಿಯ ಅಕ್ಷರಧಾಮ ಮಾದರಿಯಲ್ಲಿ ಉಡುತಡಿ ಅಭಿವೃದ್ಧಿಯಾಗಿದೆ. ಕೆಲವೊಂದು ಸಣ್ಣಪುಟ್ಟ ಕಾಮಗಾರಿಗಳು ಪ್ರಗತಿಯಲ್ಲಿದ್ದು, ಇನ್ನು ಮೂರ್ನಾಲ್ಕು ತಿಂಗಳಲ್ಲಿ ಇದೊಂದು ಧಾರ್ವಿುಕ ಮತ್ತು ಪ್ರವಾಸಿ ತಾಣವಾಗಿ ದರ್ಶನಕ್ಕೆ ಲಭ್ಯವಾಗಲಿದೆ. ಕಳೆದ ತಿಂಗಳಷ್ಟೇ ಸಿಎಂ ಬಸವರಾಜ ಬೊಮ್ಮಾಯಿ ನವೀಕೃತ ಉಡುತಡಿ ಲೋಕಾರ್ಪಣೆ ಮಾಡಿದ್ದಾರೆ.
ಅಕ್ಕನ ಭವ್ಯ ಪ್ರತಿಮೆ: ಉಡುತಡಿ ಕ್ಷೇತ್ರವನ್ನು ಆಧುನಿಕವಾಗಿ ಸಜ್ಜುಗೊಳಿಸಲಾಗಿದೆ. ಒಂದಿಡೀ ದಿನ ಅಲ್ಲಿ ಕಾಲ ಕಳೆದು ವಿಶೇಷ ಅನುಭೂತಿ ಪಡೆಯಲು ಸಹಾಯವಾಗುವಂತೆ ಹಲವು ಅಭಿವೃದ್ಧಿ ಕಾಮಗಾರಿಗಳನ್ನು ಮಾಡಲಾಗಿದೆ. ಇದಕ್ಕಾಗಿ ಸುಮಾರು 70 ಕೋಟಿ ರೂ. ಖರ್ಚಾಗಿದೆ. 65 ಅಡಿ ಎತ್ತರದ ಅಕ್ಕಮಹಾದೇವಿ ಕಂಚಿನ ಪ್ರತಿಮೆಯನ್ನು ನಿರ್ವಿುಸಲಾಗಿದೆ. ಇದಕ್ಕಾಗಿ 20 ಕೋಟಿ ರೂ. ಭರಿಸಲಾಗಿದೆ. ಈಗಾಗಲೆ ಇದು ಉಡುತಡಿಯ ಪ್ರಮುಖ ಆಕರ್ಷಣೆಯಾಗಿ ಗುರುತಿಸಿಕೊಂಡಿದೆ.
ಒಂದು ತಾಣ-ಹಲವು ವಿಶೇಷತೆ: ಉಡುತಡಿಯಲ್ಲಿ ಅಕ್ಕಮಹಾದೇವಿಯ ಬೃಹತ್ ಪ್ರತಿಮೆ ನಿರ್ವಿುಸಿರುವುದು ಶಿವಮೊಗ್ಗದ ಶ್ರೀಧರಮೂರ್ತಿ. ಅಕ್ಕಮಹಾದೇವಿ ಪ್ರತಿಮೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಈ ಮೂರ್ತಿಯ ಪೀಠದ ಒಳಗೆ ಅನುಭವ ಮಂಟಪದ ಮಾದರಿ ಚಿತ್ರಿಸಲಾಗಿದೆ. ಅದಕ್ಕೆ ಪೂರಕವಾಗಿ 600 ಅಡಿ ಉದ್ದದ ಗುಹೆಯನ್ನೂ ನಿರ್ವಿುಸಲಾಗಿದೆ. ಈ ಗುಹೆಯಲ್ಲಿ ಅಕ್ಕಮಹಾದೇವಿ ಜೀವನದ ಪ್ರಮುಖ ಘಟ್ಟಗಳನ್ನು ವಿವರಿಸುವ ಮೂರ್ತಿಗಳನ್ನು ನಿರ್ವಿುಸಲಾಗುತ್ತಿದೆ. ದೋಣಿ ವಿಹಾರಕ್ಕೂ ಅವಕಾಶ: ಉಡುತಡಿ ಅಕ್ಕನ ಜನ್ಮಸ್ಥಳದ ಸುತ್ತಲೂ ಕೋಟೆಯನ್ನು ಹೋಲುವಂತೆ ಜಂಬಿಟ್ಟಿಗೆಯಿಂದ ಪ್ರಾಕಾರ ನಿರ್ವಿುಸಲಾಗುತ್ತಿದೆ. ಒಂದು ಕಿಮೀ ಸುತ್ತಳತೆಯ ನಾಲೆ ನಿರ್ವಿುಸಿ ಅದರಲ್ಲಿ ವರ್ಷವಿಡೀ ನೀರು ಹರಿಯುವಂತೆ ನೋಡಿಕೊಳ್ಳಲಾಗುತ್ತದೆ. ಅಲ್ಲಿ ದೋಣಿ ವಿಹಾರಕ್ಕೂ ಅವಕಾಶವಿದೆ. ಅಕ್ಕನ ಕಿರುಚಿತ್ರ: ಅಕ್ಕಮಹಾದೇವಿ ಜೀವನ ವಿವರಿಸುವ ಕಿರುಚಿತ್ರವನ್ನು ಈಗಾಗಲೆ ನಿರ್ಮಾಣ ಮಾಡಲಾಗಿದೆ. ಅದನ್ನು ಪ್ರದರ್ಶಿಸಲು ಮಿನಿ ಥಿಯೇಟರ್ ಕಟ್ಟಲಾಗಿದೆ. ಶರಣರ ಜೀವನ ಹಾಗೂ ಸಂದೇಶವನ್ನು ಮುಂದಿನ ಪೀಳಿಗೆಗೆ ತಲುಪಿಸುವ ಉದ್ದೇಶದಿಂದ ಇದೊಂದು ಶಾಶ್ವತ ಕಾರ್ಯವಾಗಿದೆ. ಇದಕ್ಕೆ ದೆಹಲಿಯ ಅಕ್ಷರಧಾಮವೇ ಪ್ರೇರಣೆ ಎಂಬುದು ವಿಶೇಷ.
ವಿ-ಐ ಟೆಕ್ನಾಲಜೀಸ್ ನೀಲಿನಕ್ಷೆ: ಉಡುತಡಿಯ ಸಮಗ್ರ ಅಭಿವೃದ್ಧಿ ಹಿಂದೆ ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ಹೆಬ್ಬಯಕೆ ಇದೆ. ಅದನ್ನು ಕಾರ್ಯಗತಗೊಳಿಸುವಲ್ಲಿ ಹೆಚ್ಚಿನ ಆಸಕ್ತಿ ತೋರಿದ್ದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ. ಉಡುತಡಿಯ ಸಮಗ್ರ ಅಭಿವೃದ್ಧಿಗೆ ನೀಲಿನಕ್ಷೆ ಸಿದ್ಧ ಮಾಡಿದ್ದು ಬೆಂಗಳೂರಿನ ವಿ-ಐ ಟೆಕ್ನಾಲಜೀಸ್ನ ರಂಗನಾಥ್. ಸಮಗ್ರ ಅಭಿವೃದ್ಧಿ ಕಾರ್ಯ ಕೈಗೊಳ್ಳುವ ಮುನ್ನ ಅನೇಕ ಇತಿಹಾಸಕಾರರು, ಮಠಾಧೀಶರನ್ನು ಭೇಟಿಯಾಗಿ ಅಕ್ಕಮಹಾದೇವಿ ಹಾಗೂ ಶಿವಶರಣರ ಬಗ್ಗೆ ಸಮಗ್ರ ಮಾಹಿತಿ ಕಲೆಹಾಕಿ ಕಾಮಗಾರಿ ನಡೆಸಿದ್ದರಿಂದ ಎಲ್ಲಿಯೂ ಉತ್ಪ್ರೇಕ್ಷೆ ಎನಿಸದಂತೆ ಉಡುತಡಿ ಹೊಸ ರೂಪ ಪಡೆದುಕೊಂಡಿದೆ.
ಮೂಲಸ್ವರೂಪಕ್ಕಿಲ್ಲ ಆತಂಕ: ಉಡುತಡಿಯ ಅಕ್ಕಮಹಾದೇವಿ ಜನ್ಮಸ್ಥಳದಲ್ಲಿರುವ ಮೂಲ ಸ್ವರೂಪಕ್ಕೆ ಯಾವುದೇ ಧಕ್ಕೆ ಉಂಟಾಗದಂತೆ ಯೋಜನೆ ರೂಪಿಸಲಾಗಿದೆ. ಆಧುನಿಕತೆ ಭರಾಟೆಯ ಪೌರಾಣಿಕತೆಯನ್ನು ಮರೆಮಾಚುವ, ಇಲ್ಲವೆ ಅದಕ್ಕೆ ಕುಂದುಂಟುಮಾಡುವ ಕೆಲಸವಾಗಿಲ್ಲ ಎಂಬುದು ಸಮಾಧಾನದ ಸಂಗತಿ. ಉಡುತಡಿ ಅಕ್ಕನ ಜನ್ಮಸ್ಥಳ ಎಂಬ ಸಂಗತಿ ಅನೇಕರಿಗೆ ತಿಳಿದಿದ್ದರೂ ಅಲ್ಲಿ ಪ್ರವಾಸಿಗರನ್ನು ಸೆಳೆಯುವ ಯಾವುದೇ ಆಕರ್ಷಣೆಗಳಿಲ್ಲದ ಕಾರಣ ಹೆಚ್ಚಿನ ಮಂದಿ ಭೇಟಿ ನೀಡುತ್ತಿರಲಿಲ್ಲ. ಇದೇ ಕಾರಣಕ್ಕೆ ಅಕ್ಕಮಹಾದೇವಿ ಥೀಮ್ಾರ್ಕ್ ಪರಿಕಲ್ಪನೆ ಸೃಷ್ಟಿಯಾಗಿತ್ತು. ಆ ಮೂಲಕ ಹೆಚ್ಚಿನ ಪ್ರವಾಸಿಗರನ್ನು ಸೆಳೆಯುವ ಜತೆಗೆ ಶರಣ ಸಾಹಿತ್ಯ, ಶರಣ ಪರಂಪರೆಯನ್ನು ಜನಮಾನಸದಲ್ಲಿ ಅಜರಾಮರಗೊಳಿಸುವ ಕಾರ್ಯ ಅಂತಿಮ ಹಂತದಲ್ಲಿದೆ.