ಅಜವಾನ ಬೆಳೆಗಾರರಿಗೆ ಬೇಕಿದೆ ಮಾರುಕಟ್ಟೆ!

Ajavana
Published on

| ಪರಶುರಾಮ ಭಾಸಗಿ ವಿಜಯಪುರ

ರಾಜ್ಯದಲ್ಲಿ ಕಡಲೆ ಮತ್ತು ತೊಗರಿಗೆ ಪರ್ಯಾಯವಾಗಿ ಅಜವಾನ ಬೆಳೆಯುತ್ತಿರುವ ರೈತರ ಸಂಖ್ಯೆ ದಿನೇದಿನೆ ಹೆಚ್ಚಾಗುತ್ತಿದೆ. ಆದರೆ, ಸೂಕ್ತ ಮಾರುಕಟ್ಟೆ ಇಲ್ಲದೆ ಬೆಳೆಗಾರರು ಕಂಗಾಲಾಗಿದ್ದಾರೆ.

ರಾಜ್ಯದಲ್ಲೆ ಅತೀ ಹೆಚ್ಚು ಅಜವಾನ ಬೆಳೆಯುವ ಪ್ರದೇಶ ವಿಜಯಪುರ. ಇನ್ನುಳಿದಂತೆ ರಾಯಚೂರು, ಯಾದಗಿರಿ, ಕಲಬುರಗಿ, ಬಳ್ಳಾರಿ, ಬಾಗಲಕೋಟೆ, ಚಿತ್ರದುರ್ಗ ಮತ್ತು ಮೈಸೂರು ಜಿಲ್ಲೆಗಳಲ್ಲೂ ಅಜವಾನ ಬೆಳೆಯಲಾಗುತ್ತಿದೆ. ಒಟ್ಟಾರೆ ರಾಜ್ಯದಲ್ಲಿ 3144 ಹೆಕ್ಟೇರ್​ ಪ್ರದೇಶದಲ್ಲಿ ಅಜವಾನ ಬೆಳೆಯಲಾಗುತ್ತಿದ್ದು, 2358.24 ಮೆಟ್ರಿಕ್​ ಟನ್​ ಉತ್ಪಾದನೆ ಮಾಡಲಾಗುತ್ತಿದೆ. ಆದರೆ, ಈ ಬೆಳೆಗೆ ಪ್ರತ್ಯೇಕ ಮಾರುಕಟ್ಟೆ ಇಲ್ಲ. ಆಯಾ ಜಿಲ್ಲೆಗಳ ಸ್ಥಳಿಯ ಮಾರುಕಟ್ಟೆಗಳಲ್ಲಿ ಹಾಗೂ ಕೃಷಿ ಉತ್ಪನ್ನ ಮಾರುಕಟ್ಟೆಗಳಲ್ಲಿ ಮಾರಾಟ ಮಾಡಲಾಗುತ್ತಿದೆ. ಹೀಗಾಗಿ ವಿಜಯಪುರ ಮತ್ತು ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಬೆಳೆಯುತ್ತಿರುವ ಅಜವಾನವನ್ನು ಆಂಧ್ರ ಪ್ರದೇಶದ ಕರ್ನೂಲ ಮತ್ತು ಗುಂಟೂರ ಜಿಲ್ಲೆಯಲ್ಲಿ ಮಾರಾಟ ಮಾಡಲಾಗುತ್ತಿದೆ.

ಉತ್ತಮ ದರ: ಸದ್ಯ ಕ್ವಿಂಟಾಲ್​ ಅಜವಾನಗೆ 10 ರಿಂದ 20 ಸಾವಿರ ರೂ. ದರ ಇದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ದರ ಕಡಿಮೆಯಾದರೂ ಕಡಲೆಗೆ ಹೋಲಿಸಿದರೆ ಉತ್ತಮ ದರ ಸಿಗುತ್ತಿದೆ. ಕಡಿಮೆ ನೀರಿನಲ್ಲೂ ತೇವಾಂಶದ ಮೇಲೆ ಅಜವಾನ ಬೆಳೆಯಬಹುದಾಗಿದ್ದು, ಉತ್ತರ ಕರ್ನಾಟಕ ಭಾಗದ ರೈತರಿಗೆ ಅನುಕೂಲ. ರಾಜ್ಯದಲ್ಲಿಯೇ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಿದರೆ ಖರ್ಚು ತೆಗೆದು ಹೆಚ್ಚಿನ ಆದಾಯ ಪಡೆಯಬಹುದು ಎನ್ನುತ್ತಾರೆ ಕೃಷಿ ವಿಸ್ತೀರ್ಣಾಧಿಕಾರಿ ಡಾ. ಆರ್​.ಬಿ. ಬೆಳ್ಳಿ ಹಾಗೂ ರೈತ ವಿರುಪಾಕ್ಷಿ ಮುತ್ತತ್ತಿ.

ರಾಜ್ಯದಲ್ಲೇ ಹೆಚ್ಚು ಅಜವಾನ ಬೆಳೆಯುವ ಜಿಲ್ಲೆಗಳ ಪೈಕಿ ವಿಜಯಪುರ ಮುಂಚೂಣಿಯಲ್ಲಿದೆ. ಆದರೆ ಇಲ್ಲಿ ಮಾರುಕಟ್ಟೆ ವ್ಯವಸ್ಥೆ ಇಲ್ಲದ ಕಾರಣ ರೈತರು ಆಂಧ್ರದ ಕರ್ನೂಲ್​ ಮಾರುಕಟ್ಟೆಗೆ ಹೆಚ್ಚಾಗಿ ಮಾರಾಟ ಮಾಡುತ್ತಾರೆ. ಮಾರುಕಟ್ಟೆ ವ್ಯವಸ್ಥೆ ಬೇಕು. | ಎಂ.ಡಿ. ಚಬನೂರ ಸಹಾಯಕ ನಿರ್ದೇಶಕ, ಕೃಷಿ ಮಾರಾಟ ಇಲಾಖೆ ವಿಜಯಪುರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net