ಗುರಿ ಉನ್ನತವಾಗಿರಬೇಕು, ಅಸಾಧ್ಯವಾಗಿರಬಾರದು..

Heggade Column
Published on
ಇಂದಿನ ಯುವಕರಿಗೆ ಅವಕಾಶಗಳು ಇವೆ. ಪ್ರಜಾಪ್ರಭುತ್ವ ದೇಶಗಳಲ್ಲಿ ಎಲ್ಲ ವರ್ಗದ ಜನರಿಗೂ ಸಮಾನ ಅವಕಾಶಗಳು ದೊರೆಯುತ್ತಿವೆ. ಉದ್ಯೋಗ, ವೃತ್ತಿ, ಪ್ರವೃತ್ತಿಯನ್ನು ಬೆಳೆಸಿಕೊಳ್ಳಲು ಸಾಧ್ಯವಿದೆ. ಸರ್ಕಾರಿ ರಂಗದಲ್ಲಿರುವ ವಿಶ್ವವಿದ್ಯಾಲಯಗಳು ಮತ್ತು ಶ್ರೇಷ್ಠ ವಿದ್ಯಾ ಸಂಸ್ಥೆಗಳು ಕಡಿಮೆ ಮೊತ್ತದ ಶುಲ್ಕದಲ್ಲಿ ಶಿಕ್ಷಣ ನೀಡುತ್ತಿವೆ.

ಇದು ಇಂದಿನ ಯುವ ಸಮಾಜಕ್ಕೆ ತಿಳಿಯಲೇ ಬೇಕಾಗಿರುವ ದೊಡ್ಡಸಂದೇಶ. ಹಿಂದೆ ಅವಕಾಶಗಳ ಕೊರತೆಯಿಂದಾಗಿ ಗುರಿ ಅಥವಾ ಸಾಧನೆ ಮಾರ್ಗವು ಬಿಸಿಲುಕುದುರೆಯಾಗಿತ್ತು. ಹಾಗಾಗಿ ಗುರಿಯನ್ನು ಹೊಂದುವ ಬಗ್ಗೆ ಯೋಚಿಸುವುದೇ ಅಸಾಧ್ಯವಾಗಿತ್ತು. ಸಮಾಜದಲ್ಲಿ ಆರ್ಥಿಕವಾಗಿ, ಸಾಮಾಜಿಕ ಮತ್ತು ಪ್ರಾದೇಶಿಕವಾಗಿ ಹಿಂದುಳಿದವರು ಕನಸು ಕಟ್ಟಿಕೊಳ್ಳಲು ಅವಕಾಶ ಇರಲಿಲ್ಲ. ಹಾಗಾಗಿ ಕನಸುಗಳೇ ಇಲ್ಲದ ಸ್ಥಿತಿಯಲ್ಲಿ ದೇಶ ಮತ್ತು ಸಮಾಜವು ಇತ್ತು.

ಏಕಲವ್ಯ ಬಹಳ ದೊಡ್ಡ ಕನಸುಗಾರ. ಆತನಿಗೆ ತಾನು ಶ್ರೇಷ್ಠ ಧನುರ್ಧಾರಿಯಾಗಬೇಕು ಎಂಬ ಆಸೆ ಇತ್ತು. ಆ ಆಸೆಯನ್ನು ಸಾಧಿಸಲು ಅವನಿಗೆ ಸರಿಯಾದ ಗುರು ಇರಲಿಲ್ಲ. ಗುರು ಇಲ್ಲದೆ ಯಾವುದೇ ಗುರಿ ಸಾಧಿಸಲು ಸಾಧ್ಯವಿಲ್ಲ. ಏಕಲವ್ಯ ಗುರುಗಳ ಬಳಿ ಹೋಗಿ ತನ್ನ ಶಸ್ತ್ರಾಭ್ಯಾಸಕ್ಕೆ ಆಶೀರ್ವಾದ ಕೇಳಿದಾಗ ಆತನ ಜಾತಿ ಮತ್ತು ವರ್ಣ ಜೀವನವನ್ನು ಗಮನಿಸಿ ಶಿಕ್ಷಣ ನಿರಾಕರಿಸಲಾಯಿತು. ಆದರೆ ದೊಡ್ಡ ಗುರಿಯನ್ನು ಹೊಂದಿದ್ದ ಏಕಲವ್ಯ ತನ್ನ ಸಾಧನೆಯನ್ನು ಪ್ರಾರಂಭಿಸಿದ. ಮುಂದೊಂದು ದಿನ ಗುರು ದ್ರೋಣಾಚಾರ್ಯರು ಅರ್ಜುನನ ಜೊತೆಗೆ ಪ್ರವಾಸ ಮಾಡುವಾಗ ಏಕಲವ್ಯನ ಬಿಲ್ಚಾತುರ್ಯವನ್ನು ಕಂಡು ಬೆರಗಾಗಿ ‘ನಿನ್ನ ಗುರುಗಳು ಯಾರು?’ ಎಂದು ಕೇಳಿದರು. ಏಕಲವ್ಯನು ‘ನೀವೇ’ ಎಂದು ಹೇಳಿದಾಗ ದ್ರೋಣಾಚಾರ್ಯರಿಗೆ ಆಶ್ಚರ್ಯ. ‘ನಾನು ಎಂದೂ ನಿನಗೆ ಶಿಕ್ಷಣ ಕೊಟ್ಟಿಲ್ಲ. ನಾನು ನಿನಗೆ ಗುರುವಾಗಲು ಹೇಗೆ ಸಾಧ್ಯ?’ ಎಂದು ಕೇಳಿದರು. ಅರ್ಜುನನಿಗೆ ಒಳಗೊಳಗೆ ಸಂಕಟವಾಗುತ್ತಿತ್ತು. ಅಂದರೆ ‘ಗುರುಗಳು ನನಗೆ ಕೊಟ್ಟಷ್ಟೇ ಶಿಕ್ಷಣ, ಜ್ಞಾನ ಮತ್ತು ಜಾಣ್ಮೆಯನ್ನು ಇನ್ನೊಬ್ಬರಿಗೂ ಧಾರೆಯೆರೆದಿದ್ದಾರೆ. ನಾನು ತಿಳಿದುಕೊಂಡಂತೆ ನಾನು ಒಬ್ಬನೇ ಅಪ್ರತಿಮ ಬಿಲ್ಲುಗಾರನಲ್ಲ ಅಥವಾ ಗುರುಗಳ ಅನುಗ್ರಹಕ್ಕೆ ಪಾತ್ರನಾದವನಲ್ಲ’ ಎಂಬ ಭಾವ. ಇದೆಲ್ಲ ಗಮನಿಸಿದ ಆಚಾರ್ಯರು ಏಕಲವ್ಯನಲ್ಲಿ ಆತನ ಬಿಲ್ಚಾತುರ್ಯದ ಯಶಸ್ಸಿನ ಕಾರಣ ಕೇಳಿದಾಗ ಆತ, ‘ನಾನು ನಿಮ್ಮ ಮೂರ್ತಿಯನ್ನು ನಿರ್ವಿುಸಿಕೊಂಡು, ದಿನವೂ ಅದಕ್ಕೆ ನಮಸ್ಕರಿಸುತ್ತ, ಧ್ಯಾನಿಸುತ್ತ, ನಿಮ್ಮ ಆಶೀರ್ವಾದವನ್ನು ಬೇಡುತ್ತ ನಿತ್ಯವೂ ನಾನು ಅಭ್ಯಾಸ ಮಾಡಿದೆ. ತಕ್ಕ ಮಟ್ಟಿಗೆ ಜ್ಞಾನವನ್ನೂ ಸಂಪಾದಿಸಿದೆ’ ಎಂದ. ನಮಗೆಲ್ಲ ಕಥೆ ತಿಳಿದಿರುವಂತೆ ಏಕಲವ್ಯನ ಭವಿಷ್ಯವನ್ನು ಇಲ್ಲೇ ಮೊಟಕುಗೊಳಿಸದಿದ್ದರೆ ಮುಂದೆ ಆತ ಪ್ರಸಿದ್ಧ ಬಿಲ್ಲುಗಾರನಾಗಬಹುದು, ಅರ್ಜುನನನ್ನು ಮೀರಿಸಬಹುದು ಎನ್ನುವ ಕಾರಣಕ್ಕಾಗಿ ಏಕಲವ್ಯನ ಹೆಬ್ಬೆರಳನ್ನೇ ಗುರುದಕ್ಷಿಣೆಯಾಗಿ ದ್ರೋಣಾಚಾರ್ಯರು ಕೇಳಿದರು. ಏಕಲವ್ಯ ಕೊಂಚವೂ ಯೋಚನೆ ಮಾಡದೆ ಗುರುದಕ್ಷಿಣೆ ರೂಪದಲ್ಲಿ ತನ್ನ ಹೆಬ್ಬೆರಳನ್ನು ಒಪ್ಪಿಸಿದ. ಅಲ್ಲಿಗೆ ಆತನ ಭವಿಷ್ಯ ಮೊಟಕಾಯಿತು. ಈ ಸಂದರ್ಭವನ್ನು ಇಲ್ಲಿ ಉಲ್ಲೇಖಿಸಿದ್ದು ಯಾಕೆ ಎಂದರೆ ಉನ್ನತ ಗುರಿ ಇದ್ದಲ್ಲಿ ಅದನ್ನು ಸಾಧಿಸಲು ಬಹಳ ಪ್ರಯತ್ನ ಪಡಬೇಕಾಗುತ್ತದೆ. ಅಚಲವಾದ ಶ್ರದ್ಧೆ, ನಂಬಿಕೆ ಮತ್ತು ಸಾಧನೆ ಬೇಕಾಗುತ್ತದೆ. ಅದರೊಂದಿಗೆ ಗುರುವಿನ ಪ್ರಾಂಜಲ ಮಾರ್ಗದರ್ಶನವೂ ಅತಿಮುಖ್ಯವಾಗುತ್ತದೆ.

ಇಂದಿನ ಯುವಕರಿಗೆ ಅವಕಾಶಗಳು ಇವೆ. ಪ್ರಜಾಪ್ರಭುತ್ವ ದೇಶಗಳಲ್ಲಿ ಎಲ್ಲ ವರ್ಗದ ಜನರಿಗೂ ಸಮಾನ ಅವಕಾಶಗಳು ದೊರೆಯುತ್ತಿವೆ. ಉದ್ಯೋಗ, ವೃತ್ತಿ, ಪ್ರವೃತ್ತಿಯನ್ನು ಬೆಳೆಸಿಕೊಳ್ಳಲು ಸಾಧ್ಯವಿದೆ. ಸರ್ಕಾರಿ ರಂಗದಲ್ಲಿರುವ ವಿಶ್ವವಿದ್ಯಾಲಯಗಳು ಮತ್ತು ಶ್ರೇಷ್ಠ ವಿದ್ಯಾ ಸಂಸ್ಥೆಗಳು ಕಡಿಮೆ ಮೊತ್ತದ ಶುಲ್ಕದಲ್ಲಿ ಶಿಕ್ಷಣ ನೀಡುತ್ತಿವೆ. ಮತ್ತು ಅರ್ಹತೆ ಮೇಲೆ ಅವರು ಉನ್ನತ ಶಿಕ್ಷಣ ಪಡೆಯಲು ಕೂಡ ಅವಕಾಶವಿದೆ. ಮಾಜಿ ರಾಷ್ಟ್ರಪತಿ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅವರ ಹಿನ್ನೆಲೆಯನ್ನು ಗಮನಿಸಿದರೆ ಅವರು ದೊರೆತ ಅವಕಾಶಗಳನ್ನು ಬಳಸಿ ಜಾತಿ, ಮತ, ಪಂಥದ ಭೇದವಿಲ್ಲದೆ ಜ್ಞಾನ ಸಂಪಾದಿಸಿ ಕಠಿಣ ಪರಿಶ್ರಮದ ಬಲದ ಮೇಲೆ ವಿಜ್ಞಾನಿಯಾದರು. ಅಂದರೆ ಇವತ್ತಿನ ಯುವ ಜನರಿಗೆ ದೊಡ್ಡ ಗುರಿ ಹೊಂದಬೇಕು ಎಂಬ ಆಸೆ ಇದೆ. ಆದರೆ ಅದನ್ನು ಸಾಧಿಸುವ ಮಾರ್ಗ ಅವರಿಗೆ ತಿಳಿದಿಲ್ಲ.

ಶ್ರೀ ಕ್ಷೇತ್ರಕ್ಕೆ ಅನೇಕ ಮಂದಿ ಭೇಟಿಕೊಟ್ಟು ಮಕ್ಕಳನ್ನು ಪರಿಚಯ ಮಾಡುವಾಗ, ‘ಈತ ಓದುವುದಿಲ್ಲ ಅಥವಾ ಈ ವಿದ್ಯಾರ್ಥಿನಿಗೆ ಏಕಾಗ್ರತೆ ಇಲ್ಲ’ ಎಂದಾಗ ಸ್ವಾಭಾವಿಕವಾಗಿ ‘ಮುಂದಿನ ಭವಿಷ್ಯದ ಬಗ್ಗೆ ನಿನಗೇನು ಕಲ್ಪನೆ ಇದೆ?’ ಎಂದು ಕೇಳಬೇಕಾಗುತ್ತದೆ. ಹಾಗಾಗಿ ಅಂತಹ ಮಕ್ಕಳಲ್ಲಿ ನಾನು ಸದಾ ಕೇಳುವುದಿದೆ, ‘ನೀನು ವಿದ್ಯಾಭ್ಯಾಸ ಮಾಡಿ ಆ ಮೇಲೆ ಏನು ಆಗಬೇಕು ಎಂದಿದ್ದಿ’. ತಕ್ಷಣ 100ರಲ್ಲಿ 80 ಜನರ ಉತ್ತರ ‘ನಾನು ಡಾಕ್ಟರ್ ಆಗಬೇಕು’ ಎನ್ನುವಂತಹದ್ದು. ನಾನು ಅದಕ್ಕೆ ಹೇಳುವುದಿದೆ. ‘ನಿನಗೆ 8, 9ನೇ ಕ್ಲಾಸ್​ನಲ್ಲೇ ಏಕಾಗ್ರತೆ ಇಲ್ಲ, ಓದುವ ಆಸಕ್ತಿ ಇಲ್ಲ, ನಿನ್ನ ಅನೇಕ ಅಭ್ಯಾಸಗಳು ನಿನ್ನ ಮನಸ್ಸನ್ನು ಚಂಚಲ ಮಾಡುತ್ತಿವೆ. ಒಂದುಕಡೆಯಿಂದ ಮೊಬೈಲ್ ಫೋನ್, ಟ್ಯಾಬ್ ಅಥವಾ ಬೇರೆ ಬೇರೆ ಮಾಧ್ಯಮಗಳು ಅಥವಾ ಅತಿಯಾಗಿ ಟಿವಿ ನೋಡುವಂಥದ್ದು, ಸ್ನೇಹಿತರೊಂದಿಗೆ ಕಾಲಹರಣ, ಹೀಗಿರುವಾಗ ವೈದ್ಯಕೀಯ ಶಿಕ್ಷಣ ಕಲಿಯಲು ಹೇಗೆ ಸಾಧ್ಯ? ಅದು ಅಷ್ಟು ಸುಲಭ ಎಂದು ಅಂದುಕೊಂಡೆಯಾ? ಎಂದು ಕೇಳಿದರೆ, ‘ಹೌದು ಸ್ವಾಮಿ ನಾನು ಮುಂದೆ ಓದುತ್ತೇನೆ’ ಅನ್ನುತ್ತಾನೆ. ಇದರ ಅರ್ಥ ಇಷ್ಟೇ. ಗುರಿ ಇಲ್ಲದೆ ಸಾಧಿಸುವ ಹುಚ್ಚು.

ಇತ್ತೀಚೆಗೆ ಒಂದು ಕುಟುಂಬದವರು ಶ್ರೀಕ್ಷೇತ್ರಕ್ಕೆ ಬಂದಿದ್ದರು. ಅವರಿಗೆ ಇಬ್ಬರು ಹೆಣ್ಣುಮಕ್ಕಳು. ಒಬ್ಬಾಕೆ ಪಿಯುಸಿ ಮುಗಿಸಿ ಎರಡು ವರ್ಷ ಆಗಿದೆ. ಪಿಯುಸಿ ಮುಗಿಸಿದ ಬಳಿಕ ಸರ್ಕಾರದ ಸ್ಪರ್ಧಾತ್ಮಕ ವೈದ್ಯಕೀಯ ಪರೀಕ್ಷೆಯನ್ನು ಕಟ್ಟಿದ್ದಾಳೆ. ಎರಡು ವರ್ಷ ಸತತವಾಗಿ ಅವಳು ಪರೀಕ್ಷೆಯಲ್ಲಿ ವಿಫಲವಾದ ಮೇಲೆ ತಾಯಿ ಕಣ್ಣೀರು ಹಾಕುತ್ತ, ‘ಸ್ವಾಮಿ ಅವಳು ವೈದ್ಯಕೀಯ ಕೋರ್ಸಿಗೆ ಹೋಗುವಂತೆ ಆಶೀರ್ವದಿಸಿ’ ಎಂದರು. ನಾನು ಸ್ವಾಭಾವಿಕವಾಗಿ ಸ್ವಲ್ಪ ವಿಮರ್ಶೆ ಮಾಡುವುದು ಅನಿವಾರ್ಯವಾಯಿತು. ನಾನು ಆಕೆಯಲ್ಲಿ ಕೇಳಿದೆ, ‘ನೀನು ಎರಡು ಸಲ ಪರೀಕ್ಷೆಯನ್ನು ಬರೆದು ವಿಫಲವಾದೆ. ನಿನಗೆ ಯಾಕೆ ಈ ಸಾಧನೆಯನ್ನು ಮಾಡಲು ಆಗಲಿಲ್ಲ?’ ತಕ್ಷಣ ಆಕೆಯ ತಾಯಿ ಮಧ್ಯೆ ಬಾಯಿ ಹಾಕಿ ‘ನಾನು ಮಗಳನ್ನು ಉತ್ತರಭಾರತದ ಒಂದು ಕೋರ್ಸಿಗೆ ಕಳುಹಿಸಿದ್ದೆ. ಏಳು ಲಕ್ಷ ರೂಪಾಯಿ ಫೀಸ್ ಕಟ್ಟಿದ್ದೆ. ಅಲ್ಲಿ ಕೂಡ ಅವಳು ಯಶಸ್ವಿಯಾಗಲಿಲ್ಲ’ ಎಂದಳು. ಅವಳ ಮನಸ್ಸಿನ ಚಂಚಲತೆ, ಏಕಾಗ್ರತೆ ಕೊರತೆ ಬಗ್ಗೆ ದುಃಖಪಟ್ಟಿದ್ದಳು. ಬಳಿಕ ಆ ಹೆಣ್ಣುಮಗಳೊಂದಿಗೆ ಮಾತನಾಡಿ ‘ಹೇಳು ನಿನ್ನ ಸಮಸ್ಯೆ ಏನು’ ಎಂದು ಕೇಳಿದೆ. ‘ಇಲ್ಲ ಈ ಬಾರಿ ಪಾಸಾಗುತ್ತೇನೆ’ ಎಂದು ಉತ್ತರಿಸಿದಳು. ‘ನೋಡು ನಿನ್ನಲ್ಲಿ ಎತ್ತರವಾದ ಗುರಿ ಇದೆ. ಆದರೆ ಗುರಿ ಸಾಧಿಸುವ ಛಲ ಇಲ್ಲ. ನೀನು ವೈದ್ಯೆ ಆಗಬೇಕೆಂದು ಬಯಸುತ್ತಿ. ಆದರೆ ಯಾರೋ ನಿನಗೆ ಸಹಾಯ ಮಾಡಬೇಕು ಎಂದು ಅಪೇಕ್ಷಿಸುತ್ತಿ. ನೀನು ಮಾಡಬೇಕಾದ ಪರಿಶ್ರಮದ ಬಗ್ಗೆ ನಿನಗೆ ಕಲ್ಪನೆ ಇಲ್ಲ. ಕಲ್ಪನೆ ಇದ್ದರೂ ಉದಾಸೀನತೆ ಇದೆ. ನಿನಗಾಗಿ ತಂದೆ-ತಾಯಿ ಎಷ್ಟು ತ್ಯಾಗ ಮಾಡಿದ್ದಾರೆ ಎಂಬ ಅರಿವಿಲ್ಲ. ಹೀಗಾಗಿ ಸರಿಯಾಗಿ ಯೋಚಿಸು. ವೈದ್ಯಕೀಯ ವ್ಯಾಸಂಗ ನಿನಗೆ ಸಮರ್ಪಕವಾಗದಿದ್ದರೆ ಅದಕ್ಕೆ ಸಂಬಂಧಿಸಿದ ಇನ್ನಿತರ ಕೋರ್ಸ್​ಗಳ ಬಗ್ಗೆ ಯೋಚಿಸು. ಅಥವಾ ಬದುಕಿನಲ್ಲಿ ಕೋರ್ಸ್ ಒಂದೇ ಅಲ್ಲ. ನೂರಾರು ಅವಕಾಶಗಳಿವೆ. ಅಂತಹ ಅವಕಾಶಗಳ ಬಗ್ಗೆ ಚಿಂತನೆ ಮಾಡು. ಹೆತ್ತವರ ಆರೋಗ್ಯದ ಕುರಿತು ಗಮನಹರಿಸು. ನೀನು ನಿನ್ನ ಗುರಿ ಸಾಧಿಸಲು ಸಾಧ್ಯವಾಗಿಲ್ಲವಲ್ಲ ಎಂದು ನೊಂದಿದ್ದಾರೆ. ಶ್ರೀಕ್ಷೇತ್ರದಲ್ಲಿ ಹರಕೆ ಹಾಕಿದ್ದಾರೆ, ಪೂಜೆ ಮಾಡಿಸಿದ್ದಾರೆ ಮತ್ತು ‘ನನ್ನ ಮಗು ಸಾಧನೆ ಮಾಡಲಿ’ ಎಂದು ದೇವರಲ್ಲಿ ಪ್ರಾರ್ಥಿಸಿದ್ದಾರೆ. ಆದರೆ ಇದು ಪೂಜೆ, ಪ್ರಾರ್ಥನೆ, ಹರಿಕೆಗಿಂತ ಹೆಚ್ಚಾಗಿ ನಿನ್ನ ಸಂಕಲ್ಪಶಕ್ತಿಯ ಮೇಲೆ ಭವಿಷ್ಯ ಇದೆ’ ಎಂದು ಹೇಳಿದೆ. ಆಕೆ ಮರು ಮಾತನಾಡಲಿಲ್ಲ. ಹೆತ್ತವರ ಬಳಿ ‘ಆಕೆಯ ಗುರಿ ದೃಢವಾಗಿರದಿದ್ದರೆ ನಿಮ್ಮ ತ್ಯಾಗಕ್ಕೆ ಫಲ ದೊರೆಯುವುದಿಲ್ಲ. ವಿಫಲವಾಗುತ್ತೆ’ ಎನ್ನುವ ಮಾತನ್ನು ಹೇಳಿದೆ.

ಇಂತಹ ನೂರಾರು ಉದಾಹರಣೆ ನಮ್ಮ ಸಮಾಜದಲ್ಲಿವೆ. ಇಂದಿನ ಯುವಕ-ಯುವತಿಯರಲ್ಲಿ ಆಕಾಂಕ್ಷೆಗಳು ದೊಡ್ಡದಿವೆ. ಆದರೆ ಅದನ್ನು ಸಾಧಿಸಲು ಬೇಕಾದ ಚಾಕಚಕ್ಯತೆ ಇಲ್ಲ. ಪರಿಶ್ರಮ ಪಡುವ ಮನಸ್ಸಿಲ್ಲ. ಅವಕಾಶಗಳು ಸಾಕಷ್ಟು ದೊರೆಯುತ್ತವೆ. ಆದರೆ ಅವುಗಳನ್ನು ಬಳಸಿಕೊಳ್ಳುವಲ್ಲಿ ಬೇಕಾದ ಸಂಕಲ್ಪಶಕ್ತಿಯಾಗಲಿ, ಹಠವಾಗಲಿ ಇಲ್ಲ. ಯುವಜನತೆ ಸಾಧ್ಯವಾಗುವಂಥ ಗುರಿಯನ್ನೇ ಇಟ್ಟುಕೊಳ್ಳಬೇಕು. ಅಸಾಧ್ಯವಾದಂತಹ ಗುರಿಯನ್ನು ಇಟ್ಟುಕೊಳ್ಳುವುದು ಸರಿಯಲ್ಲ. ಕ್ಷಮತೆ ಹಾಗೂ ಜ್ಞಾನದ ಇತಿಮಿತಿಗೆ ಅನುಗುಣವಾಗಿ ಕೋರ್ಸಗಳನ್ನು ಆಯ್ಕೆ ಮಾಡಬೇಕು. ಹೆತ್ತವರ ಆರ್ಥಿಕ ಸ್ಥಿತಿ, ಮನೋಸ್ಥಿತಿಯನ್ನು ಗುರುತಿಸಿಕೊಂಡು ಅದರಂತೆ ಅವರನ್ನು ನೋಯಿಸದೆ, ಸ್ಪಷ್ಟ ಗುರಿ ಜೊತೆಗೆ ಸಾಧಿಸುವ ಸಂಕಲ್ಪದೊಂದಿಗೆ ಅಧ್ಯಯನ ಮಾಡಬೇಕು. ಕಳೆದ ಎರಡು ವರ್ಷ ಕರೊನಾ ಬಾಧಿತ ಸಮಯವಾಗಿದೆ. ಹೆಚ್ಚಿನ ಮನೆಗಳಲ್ಲಿ ಮಕ್ಕಳಿಗೆ ಶಿಕ್ಷಣ ಕೊಡುವುದು ಕಠಿಣ ಹಾಗೂ ಸವಾಲಾಗಿ ಪರಿಣಮಿಸಿದೆ. ಸ್ಪರ್ಧಾತ್ಮಕ ಯುಗದಲ್ಲಿ ಅತ್ಯುತ್ತಮ ಖಾಸಗಿ ಶಾಲೆಯಲ್ಲಿ ಮಕ್ಕಳಿಗೆ ಉತ್ಕೃಷ್ಟ ಶಿಕ್ಷಣ ದೊರೆಯಬೇಕು ಎಂಬ ನಿಟ್ಟಿನಲ್ಲಿ ಕೆಲವೊಮ್ಮೆ ದುಬಾರಿ ಫೀಸ್ ಭರಿಸಬೇಕು. ವೈದ್ಯಕೀಯ ಶಿಕ್ಷಣ ಕ್ಷೇತ್ರದಲ್ಲಿ ವೆಚ್ಚಗಳು ಅಧಿಕವಾಗಿದ್ದರೂ ಹೆತ್ತವರು ತ್ಯಾಗ ಮಾಡಿ ಮಕ್ಕಳಿಗೆ ಶಿಕ್ಷಣ ಒದಗಿಸುತ್ತಾರೆ. ಹಾಗಾಗಿ ಮಕ್ಕಳು ಸ್ಪಷ್ಟವಾದ ಗುರಿಯನ್ನು ಇಟ್ಟುಕೊಳ್ಳಬೇಕು. ಅಸಾಧ್ಯವಾದ ಗುರಿ ಇಟ್ಟುಕೊಳ್ಳದೆ ವ್ಯಕ್ತಿತ್ವ, ಭೌತಿಕಮಟ್ಟ ಅರಿತು ವಿಷಯಗಳನ್ನು ಆಯ್ಕೆ ಮಾಡಿ ಗುರಿ ಸಾಧನೆಯತ್ತ ದೃಢಹೆಜ್ಜೆಗಳೊಂದಿಗೆ ಮುನ್ನಡೆಯಬೇಕು ಹಾಗೂ ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು.

(ಲೇಖಕರು ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net