ಆಧ್ಯಾತ್ಮಿಕ ಸಾಧನೆಯ ವೀರವನಿತೆ ಅಹಲ್ಯಾಬಾಯಿ ಹೋಳ್ಕರ್

ahaya
Published on
ವಿಶ್ವನಾಥ ಚಕ್ರವರ್ತಿ, ಶ್ರೀಕ್ಷೇತ್ರ ಆನಂದವನ, ಅಗಡಿ ಮನುಷ್ಯ ಜನ್ಮವನ್ನು ಸಾರ್ಥಕ ಮಾಡಿಕೊಂಡ ಸಾಧಕರಲ್ಲಿ ಅಹಲ್ಯಾ ಬಾಯಿ ಹೋಳ್ಕರ್ ಕೂಡ ಒಬ್ಬರು.

ಇವರು ಜನಿಸಿದ್ದು 1725ರಲ್ಲಿ, ಮಹಾ ರಾಷ್ಟ್ರದ ಚವಂಡಿ ಎಂಬ ಗ್ರಾಮದಲ್ಲಿ. ತಂದೆ ಮಾನಕೋಜಿ ಸಿಂಧೇ, ತಾಯಿ ಸುಶೀಲಾಬಾಯಿ. ಬಾಲ್ಯದಲ್ಲಿಯೇ ಪಕ್ಕದ ಗ್ರಾಮವಾದ ಹೋಳ್ ಎಂಬಲ್ಲಿಯ ಶಿವ ಮಂದಿರದಲ್ಲಿ ಆಧ್ಯಾತ್ಮಿಕ ಸಾಧನೆ ಮಾಡುತ್ತಿದ್ದರು. ಮಲ್ಲಾರಾವ್ ಎಂಬ ಪೇಶ್ವೆಯ ಮಾಂಡಲೀಕರ ಕೋರಿಕೆಯಂತೆ ಅವರ ಮಗ ಖಂಡೇರಾಯನೊಂದಿಗೆ ಇವರ ವಿವಾಹ ನಡೆಯಿತು. ಆದರೆ ಖಂಡೆರಾಯನು ವಿಲಾಸಿ ಜೀವನದಲ್ಲಿಯೇ ಕಾಲ ಕಳೆಯುತ್ತಿದ್ದನು. ಎಷ್ಟೇ ವಿನಂತಿಸಿದರೂ ಯಾವುದೇ ಬದಲಾವಣೆ ಕಾಣಲಿಲ್ಲ. ಕೊನೆಗೊಮ್ಮೆ ಅಹಲ್ಯಾಬಾಯಿಯೇ ರಾಜ್ಯಭಾರ ವಹಿಸಿಕೊಳ್ಳಬೇಕಾಯಿತು. ಅಹಲ್ಯಾಬಾಯಿ ಸ್ವತಃ ಶಸ್ತ› ವಿದ್ಯೆಯನ್ನು ಕಲಿತಿದ್ದಳು. ಬರತ್ಪುರ ಎಂಬ ಸಾಮ್ರಾಜ್ಯದ ಮೇಲೆ ಯುದ್ಧಕ್ಕೆ ಹೋದಾಗ ಖಂಡೇರಾಯನ ಮರಣವಾಯಿತು. ಆಗ ಅಹಲ್ಯಾಬಾಯಿಗೆ ಕೇವಲ 29 ವರ್ಷ. ನಂತರ ಆಕೆ ಜೀವನವನ್ನು ಸನಾತನ ಹಿಂದೂ ಧರ್ಮದ ರಕ್ಷಣೆ ಮತ್ತು ಆಧ್ಯಾತ್ಮಿಕ ಸಾಧನೆಯತ್ತ ಹೊರಳಿಸಿದಳು.

ಆದರೆ ಈಕೆಯ ಮಾವನಾದ ಮಲ್ಲಾರಾವ್ ಉತ್ತಮವಾದ ವ್ಯಕ್ತಿಯಾಗಿದ್ದರು. ಇವರು ಸೊಸೆಯೊಂದಿಗೆ ಪ್ರಜೆಗಳ ಸಂರಕ್ಷಣೆ, ರಾಜ್ಯರಕ್ಷಣೆ ಮತ್ತು ಧಾರ್ವಿುಕ ವಿಷಯವನ್ನು ರ್ಚಚಿಸುತ್ತಿದ್ದರು. ವ್ಯವಹಾರ ಜಾಣ್ಮಯನ್ನು ಕಲಿಸಿದ್ದರು. ಮುಂದೆ ಮಲ್ಲಾರಾವ್​ರ ಕಾಲಾ ನಂತರ ರಾಜ್ಯದ ಸಂರಕ್ಷಣೆಯ ಸಂಪೂರ್ಣ ಭಾರವು ಅಹಲ್ಯಾಬಾಯಿಯ ಮೇಲೆ ಬಿತ್ತು. ಆಗ ಆಕೆಯ ಮಕ್ಕಳಾದ ಮಾಲೆರಾವ್ ಮತ್ತು ಮುಕ್ತಾಬಾಯಿ ಚಿಕ್ಕವರಾಗಿದ್ದರು. ದುರ್ದೈವವೆಂದರೆ ಅಹಲ್ಯಬಾಯಿಯ ಒಬ್ಬನೇ ಮಗನಾದ ಮಾಲೆರಾವ್ ಕೂಡ ತಂದೆಯಂತೆ ದುರಾಚಾರಿ ಯಾದನು. ತಾಯಿಯ ಹಿತನುಡಿಗಳು ಅವನಿಗೆ ಸೇರದಾದವು.

ಅಜ್ಜ ಮಲ್ಲಾರಾವ್ ಮರಣದ ನಂತರ ಮಾಲೆರಾವ್​ನಿಗೆ ನಿಯಮದಂತೆ ಪಟ್ಟ ಕಟ್ಟಲಾಯಿತು. ಆತನಿಗೆ ಅಧಿಕಾರದ ಮದ ಅತಿಯಾಯಿತು. ದುರಾಚಾರ ಮಿತಿಮೀರಿತು. ಎಷ್ಟೆಂದರೆ ರಾಜರು ಸದಾ ಪೂಜ್ಯ ಬಾವದಿಂದ ನೋಡುವ ಪುರೋಹಿತರ ಜೋಳಿಗೆಗೆ ಚೇಳನ್ನು ಹಾಕಿ ಕುಚೇಷ್ಟೆ ಮಾಡುವಷ್ಟು. ಆಧ್ಯಾತ್ಮಿಕ ಸಾಧಕರಾದ ಅಹಲ್ಯಾಬಾಯಿಯ ಮನಸ್ಸನ್ನು ಮಗನ ವರ್ತನೆಯು ಕುಗ್ಗಿಸಿತು. ಈ ನಡುವೆ ಒಂದು ದಿನ ಮಾಲೆರಾವ್​ನು ಅತ್ಯಂತ ಸಭ್ಯ ವ್ಯಕ್ತಿಗೆ ಮರಣದಂಡನೆ ವಿಧಿಸಿದನು. ಇನ್ನು ಇವನಿಂದ ಧರ್ಮ ಕಾರ್ಯ ನಡೆಯುವುದಿಲ್ಲ ಎಂದು ಅಹಲ್ಯಾಬಾಯಿಗೆ ಸ್ಪಷ್ಟವಾಯಿತು. ಸ್ವತಃ ಮಗನೆಂದೂ ನೋಡದೇ ಆತನನ್ನು ಒಂದು ಬಯಲು ಪ್ರದೇಶದಲ್ಲಿ ನಿಲ್ಲಿಸಿ ಆನೆಯಿಂದ ತುಳಿಸಿ ಸಾಯಿಸಿದಳು.

ಅಹಲ್ಯಾಬಾಯಿ ಧರ್ಮ ಪ್ರವೃತ್ತಿ ಎಷ್ಟು ಎಂಬುದಕ್ಕೆ ಇನ್ನೊಂದು ಪುರಾವೆ ಇದೆ: ಯಾತ್ರಾರ್ಥಿಗಳಿಗೆ ದರೋಡೆಕೋರರು ತೊಂದರೆ ಕೊಡುತ್ತಿದ್ದರು. ಸಮಸ್ಯೆ ಬಗೆಹರಿಯದಿದ್ದಾಗ ಧರ್ಮ ಮಾರ್ಗದಲ್ಲಿ ನಡೆಯುವವರಿಗೆ ತೊಂದರೆ ಕೊಡುವ ದರೋಡೆಕೋರರನ್ನು ನಾಶಮಾಡುವವರಿಗೆ ಅಪಾರ ಧನ ಕನಕದೊಂದಿಗೆ ತನ್ನ ಪುತ್ರಿ ಮುಕ್ತಾಬಾಯಿಯನ್ನು ವಿವಾಹ ಮಾಡಿಕೊಡುವುದಾಗಿ ಸಾರಿದಳು. ಆಗ ಯಶವಂತರಾವ್ ಹಣಸಿ ಎಂಬ ಶೂರ ಯುವಕ ಮುಂದೆ ಬಂದು ಎಲ್ಲ ದರೋಡೆಕೋರರನ್ನು ಕೊಂದು ಹಾಕಿದನು. ಮಾತಿನಂತೆ ಅಹಲ್ಯಾಬಾಯಿಯು ನಡೆದುಕೊಂಡಳು.

ಅಹಲ್ಯಾಬಾಯಿಯ ಅವಧಿಯಲ್ಲಿ ರಾಜ್ಯದ ಸಂಪತ್ತು 15 ಕೋಟಿ ರೂ. ಗಳಷ್ಟು ಸಂಗ್ರಹವಾಗಿತ್ತು. ಅದರಿಂದ ಕೆರೆ, ಬಾವಿಗಳ ನಿರ್ವಣಕ್ಕೆ, ವಿದ್ಯಾ ಮಂದಿರ, ಗುರುಕುಲಗಳಿಗೆ ಯಥೇಚ್ಛವಾಗಿ ಧನ ಸಹಾಯ ಮಾಡಿದಳು. ಆಧ್ಯಾತ್ಮಿಕ ಸಾಧನೆ ಮಾಡುವವರಿಗೆ ಜಮೀನು ನೀಡಿದಳು, ಮನೆಗಳನ್ನು ನಿರ್ವಿುಸಿ ಕೊಟ್ಟಳು. ಪಾರ್ಥಿವೇಶ್ವರ ಪೂಜೆ ಮಾಡುವವರಿಗೆ ಸಾಮಗ್ರಿಗಳನ್ನು ಕೊಟ್ಟು ಪ್ರತಿ ದಿವಸ ಆಗಿನ ಕಾಲದಲ್ಲಿ ಅವರಿಗೆ ಒಂದು ರೂಪಾಯಿ ದಕ್ಷಿಣೆಯನ್ನು ಬರುವಂತೆ ನೋಡಿಕೊಂಡಳು. ಪುರಾತನ ಮಂದಿರಗಳ ಜೀಣೋದ್ಧಾರವನ್ನು ಶ್ರದ್ಧೆಯಿಂದ ಮಾಡಿದಳು. ಕಾಶಿಯ ವಿಶ್ವನಾಥ ಮಂದಿರವು ಔರಂಗಜೇಬನಿಂದ ನಾಶವಾದ ವಿಷಯ ತಿಳಿದು ಮುಂದೆ ಸ್ವತಃ ಆ ಮಂದಿರವನ್ನು ಸುಂದರವಾಗಿ ಕಲ್ಲಿನಿಂದ ನಿರ್ವಿುಸಿ ಅಲ್ಲೇ ಯಾತ್ರಾರ್ಥಿಗಳಿಗೆ ವಸತಿಗೆ ಮತ್ತು ಮಧ್ಯಾಹ್ನದ ಪ್ರಸಾದಕ್ಕೆ ವ್ಯವಸ್ಥೆ ಕಲ್ಪಿಸಿದಳು. ಕಾಶಿಯಲ್ಲಿ ವೇದ ಮತ್ತು ಸಂಸ್ಕೃತದ ರಕ್ಷಣೆಗಾಗಿ ವಿದ್ಯಾಲಯಗಳನ್ನು ನಿರ್ವಿುಸಿಕೊಟ್ಟಳು, ಕಾಶಿ, ಕುರುಕ್ಷೇತ್ರ, ಹೈದರಾಬಾದ್, ಕೊಲ್ಲಾಪುರ, ಗಂಗೋತ್ರಿ, ಗಯಾ ಹೀಗೆ ನೂರಾರು ಕ್ಷೇತ್ರಗಳಲ್ಲಿ ಮಂದಿರಗಳನ್ನು ನಿರ್ವಿುಸಿದಳು.

ಅಹಲ್ಯಾಬಾಯಿಯ ಜೀವನವು ಪವಿತ್ರ ಮತ್ತು ಶ್ರೇಷ್ಠವಾಗಿತ್ತು. ಅದಕ್ಕೆ ಅವಳ ಅವಳ ಮುಕ್ತಿಯೇ ಸಾಕ್ಷಿ. 1795 ಡಿ.3ರಂದು 12,000 ವೈದಿಕರಿಗೆ ಬ್ರಾಹ್ಮಣ ಭೋಜನ ವ್ಯವಸ್ಥೆ ಮಾಡಿದ್ದರು. ಅಷ್ಟೂ ಮಂದಿಯನ್ನು ಉತ್ತಮವಾದ ಸಿಂಹಾಸನದಲ್ಲಿ ಕೂಡಿಸಿ ರಜತ ಪಾತ್ರೆಯಲ್ಲಿ ಅವರ ಕಾಲನ್ನು ತೊಳೆದು, ಉತ್ತಮವಾದ ವಸ್ತ›, ಯಥೇಚ್ಛವಾದ ದಕ್ಷಿಣೆ ಕೊಟ್ಟು ಪೂಜಿಸಿದಳು. ಆ ಸಹಸ್ರ ಭೋಜನ ಮುಗಿದ ನಂತರ ಆ ಸ್ಥಳದಲ್ಲಿಯೇ ಅಹಲ್ಯಾಬಾಯಿ ಸಾಷ್ಟಾಂಗ ನಮಸ್ಕಾರ ಮಾಡುತ್ತಲೇ ಧರ್ಮ ಮರಣ ಹೊಂದಿದಳು!.ಇಂತಹ ಪುಣ್ಯಜೀವಿ, ವೀರ ವನಿತೆಯನ್ನು ಪಡೆದ ಭಾರತಮಾತೆ ಧನ್ಯಳು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net