

| ಶಿವು ಹುಣಸೂರು
ಸಮಗ್ರ ಕೃಷಿಯೊಂದಿಗೆ ಔಷಧೀಯ ಸಸ್ಯಗಳ ತಾಣವನ್ನು ಸ್ಥಾಪಿಸುವ ಮೂಲಕ ರೈತರೊಬ್ಬರು ಮಾದರಿಯಾಗಿದ್ದಾರೆ. ಮೈಸೂರು ಜಿಲ್ಲೆ ಹುಣಸೂರು ತಾಲೂಕಿನ ಗಾವಗಡೆರೆ ಹೋಬಳಿ ಮನುಗನಹಳ್ಳಿಯ ಬಿ.ವೀರಭದ್ರಪ್ಪ ತಮ್ಮ ವೀರೂ ಫಾಮರ್್ನಲ್ಲಿ ಇಂತಹ ಸಾಧನೆ ಮಾಡಿದ್ದಾರೆ. ಕೃಷಿ ಕ್ಷೇತ್ರದ ಸಾಧನೆಗಾಗಿ ರಾಜ್ಯ ಸರ್ಕಾರದ 2021- 22ನೇ ಸಾಲಿನ ರಾಜ್ಯ ಮಟ್ಟದ ಕೃಷಿ ಪಂಡಿತ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ವೀರಭದ್ರಪ್ಪ ಪುತ್ರ ಹರ್ಷ ಗುಜರಾತಿನ ಗೀರ್ ತಳಿಯ ಜಾನುವಾರು ಸಾಕಣೆಯೊಂದಿಗೆ ಹೈನುಗಾರಿಕೆಯ ಮೂಲಕ ಮೌಲ್ಯವರ್ಧಿತ ಸೇವೆಗಳ ಉತ್ಪಾದನೆ ಮಾಡುತ್ತಿದ್ದಾರೆ.
ಹಣ್ಣುಗಳು, ಔಷಧೀಯ ಸಸ್ಯಗಳ ಹಬ್: ಔಷಧೀಯ ಸಸ್ಯಗಳ ಸಂರಕ್ಷಣೆ ಮತ್ತು ಸಾವಯವ ಕೃಷಿಗೆ ಆದ್ಯತೆ ನೀಡಿದ್ದು, ತೋಟದಲ್ಲಿ 120ಕ್ಕೂ ಹೆಚ್ಚು ತೆಂಗು, 1000 ಬಾಳೆ, 1000 ಅಡಕೆ, 20 ನೇರಳೆ, 20 ನಲ್ಲಿಕಾಯಿ, 10 ಹಲಸು, 15 ಮಾವಿನ ಮರದೊಂದಿಗೆ ಹತ್ತಾರು ರೀತಿಯ ಔಷಧೀಯ ಸಸ್ಯಗಳನ್ನು ಬೆಳೆಸಿದ್ದಾರೆ. ಔಷಧೀಯ ಸಸ್ಯಗಳ ಸ್ಥಳೀಯ ಹೆಸರು, ವೈಜ್ಞಾನಿಕ ಹೆಸರು, ಅವುಗಳ ಉಪಯೋಗ ಎಲ್ಲವನ್ನೂ ತಿಳಿಸುತ್ತಾರೆ.
ಗೀರ್ ತಳಿ ಹಸು ಸಾಕಣೆ: 6-7 ವರ್ಷಗಳ ಹಿಂದೆ ವೀರಭದ್ರಪ್ಪ ಅವರ ಪುತ್ರ ಹರ್ಷ ಶಿವಮೊಗ್ಗದ ಕಸಾಯಿಖಾನೆಯಲ್ಲಿ ಗೀರ್ ತಳಿಯ ಹಸುವನ್ನು ನೋಡಿ ಅದನ್ನು ಸಾಕುವ ಮನಸ್ಸು ಮಾಡಿದರು. ಕಸಾಯಿಖಾನೆಯ ಮಾಲೀಕ ಮಾರಾಟ ಮಾಡಲು ಒಪ್ಪದ ಕಾರಣ ಗುಜರಾತಿನ ಭಾವನಗರಕ್ಕೆ ತೆರಳಿ 2017ರಲ್ಲಿ 12 ಗಿರ್ ಜಾನುವಾರುಗಳನ್ನು ಖರೀದಿಸಿ ತಂದರು. ಹಾಲಿನಿಂದ ಮೌಲ್ಯವರ್ಧಿತ ಉತ್ಪನ್ನಗಳನ್ನು ತಯಾರಿಸಿ ತಾವೇ ಬ್ರ್ಯಾಂಡ್ ಸ್ಥಾಪಿಸಿಕೊಂಡು ಮಾರಾಟ ಮಾಡುತ್ತಿದ್ದಾರೆ. ಗೀರ್ ಹಸುವಿನ ಹಾಲಿಗೆ ಅತ್ಯುತ್ತಮ ಬೆಲೆ ಇದೆ. ಜೀವಾಮೃತ, ಸಗಣಿ ಧೂಪ, ಬೆರಣಿ, ಹಲ್ಲುಪುಡಿ, ಗಂಧದಪುಡಿ, ಪಂಚಾಮೃತ, ಬೀಜಾಮೃತ, ಮೀಮಾಸ್ತ್ರಿ (ಕೀಟನಾಶಕ), ಪಂಚಗವ್ಯ, ಗೊಬ್ಬರ... ಹೀಗೆ ಗೋಮಾತೆಯ ಪ್ರತಿಯೊಂದು ತ್ಯಾಜ್ಯದಿಂದಲೂ ಧನಲಕ್ಷ್ಮಿಯನ್ನು ಕಾಣುತ್ತಿದ್ದಾರೆ.
ಕೃಷಿ ಕ್ಷೇತ್ರದಲ್ಲಿ ಕಾರ್ವಿುಕರ ಸಮಸ್ಯೆ ಉಲ್ಬಣಗೊಳ್ಳುತ್ತಿದ್ದು, ಕೂಲಿಗಳ ಸಮಸ್ಯೆ ನೀಗಿಸಿಕೊಳ್ಳಲು ಆರಂಭವಾದ ಚಿಂತನೆ ಹೊಸ ಅವಿಷ್ಕಾರಕ್ಕೆ ಕಾರಣವಾಗಿದೆ. ಜಿಲ್ಲೆಯ ಮುಧೋಳ ತಾಲೂಕಿನ ಲೋಕಾಪುರ ಗ್ರಾಮದ ಎಸ್ಎಸ್ಎಲ್ಸಿ ಕಲಿತಿರುವ ಯುವಕ ಸಿದ್ದು ಚೌಧರಿ ಸಿದ್ಧಪಡಿಸಿರುವ ಕಬ್ಬು ಕಟಾವು ಯಂತ್ರ ವಿನೂತನವಾಗಿದ್ದು, ರೈತರು ಮತ್ತು ಸಕ್ಕರೆ ಕಾರ್ಖಾನೆಗಳ ಮೆಚ್ಚುಗೆಗೆ ಪಾತ್ರವಾಗಿದೆ. ಕಡಿಮೆ ಖರ್ಚು ಹಾಗೂ ಕೂಲಿಗಳ ಸಮಸ್ಯೆಗೆ ಪರ್ಯಾಯವಾಗಿದ್ದು, ಸದ್ಯ ಗುಳೇದಗುಡ್ಡ ತಾಲೂಕಿನ ಹಳದೂರ ಗ್ರಾಮದ ರೈತರ ಜಮೀನಿನಲ್ಲಿ ಕಬ್ಬು ಕಟಾವು ಮಾಡಲಾಗುತ್ತಿದೆ. ಸಿದ್ದು ಚೌಧರಿ ಅವರು ಸಿದ್ಧಪಡಿಸಿರುವ ನೂತನ ಯಂತ್ರ ಕಬ್ಬನ್ನು ತಳಸಮೇತವಾಗಿ ತುಂಡರಿಸುತ್ತದೆ. ಅಂದರೆ ಕೂಲಿ ಕಾರ್ವಿುಕರು ಕಟಾವು ಮಾಡುವ ರೀತಿ ಇರುತ್ತದೆ. ಇದರಿಂದ ಕಾರ್ಖಾನೆಗಳು ಶೇ. 10 (ಕಾರ್ಖಾನೆಯವರು ತೆಗೆಯುವ ಸೂಟ್ ) ನಷ್ಟ ತೆಗೆಯಲ್ಲ. ಇದರಿಂದ ಕಬ್ಬು ಬೆಳೆಗಾರರಿಗೆ ನಷ್ಟ ಆಗಲ್ಲ. ಟ್ರ್ಯಾಕ್ಟರ್ನಲ್ಲಿ ಇರುವ ತೂಕವನ್ನೇ ಪರಿಗಣಿಸಲಾಗುತ್ತದೆ. ಖಾಸಗಿ ಕಂಪನಿಗಳ ಕಬ್ಬು ಕಟಾವು ಯಂತ್ರಗಳಿಗೆ 1 ರಿಂದ 1.50 ಕೋಟಿ ರೂ. ಬೆಲೆ ಇದೆ. ಆದರೆ, ಸಿದ್ದು ಚೌಧರಿ ಸಿದ್ಧಪಡಿಸಿರುವ ಈ ಯಂತ್ರ 50 ಲಕ್ಷ ರೂ.ಗಳಲ್ಲಿ ಸಿದ್ಧವಾಗಿದೆ. ಈ ಯಂತ್ರ ಪ್ರತಿ ದಿನ 50 ಮೆಟ್ರಿಕ್ ಟನ್ನಷ್ಟು ಕಬ್ಬು ಕಟಾವು ಮಾಡುವ ಸಾಮರ್ಥ್ಯ ಹೊಂದಿದೆ.