ಅಂತರಂಗ- ಬಹಿರಂಗ ಶುದ್ಧಿಗೆ ಅಗ್ನಿಹೋತ್ರ ಹೋಮ

IMG-20210527-WA0000
Published on

ಅಗ್ನಿಹೋತ್ರ ಹೋಮ ಮಾಡುವುದರಿಂದ ವಾತಾವರಣದ ಶುದ್ಧಿ, ಸುತ್ತಲಿನ ಪರಿಸರದಲ್ಲಿ ರೋಗಾಣುಗಳ ನಾಶ, ಅನಾರೋಗ್ಯ ಸೃಷ್ಟಿಸುವ ಸೂಕ್ಷ್ಮಜೀವಿಗಳ ನಾಶ, ಮನಸ್ಸಿನಲ್ಲಿ ಸಕಾರಾತ್ಮಕ ಚಿಂತನೆಗಳ ಸ್ಪುರಣ, ಒತ್ತಡ ನಿವಾರಣೆ, ನರಮಂಡಲಕ್ಕೆ ನವಚೈತನ್ಯ, ರೋಗನಿರೋಧಕ ಶಕ್ತಿಯ ಹೆಚ್ಚಳ ಮುಂತಾಗಿ ಅನೇಕ ಪ್ರಯೋಜನಗಳಿವೆ.

| ಪೊ›. ವಿದ್ವಾನ್ ನವೀನಶಾಸ್ತ್ರಿ ರಾ. ಪುರಾಣಿಕ, ಧಾರವಾಡ

ಭಾರತದಲ್ಲಿ ಅನಾದಿ ಕಾಲದಿಂದಲೂ ಹೋಮ, ಹವನ, ಯಜ್ಞ, ಯಾಗಗಳನ್ನು ನಡೆಸಿಕೊಂಡು ಬರಲಾಗಿದೆ. ಸನಾತನ ಸಂಸ್ಕೃತಿಯ ಅಡಿಪಾಯವಿರುವುದೇ ಇವುಗಳಲ್ಲಿ. ‘ತತ್ ತತ್ ದೇವತಾ ಪ್ರಿಣಾತಿ’ ಅಂದರೆ ಇದು ಸಂಪೂರ್ಣ ಭಗವಂತನಿಗೆ ಅರ್ಪಿತ ಎಂಬ ಭಾವನೆಯಿಂದ ನಡೆಯುವ ಕ್ರಿಯೆಗಳು ಇವು. ನಮ್ಮೆಲ್ಲರ ಅಸ್ತಿತ್ವ ಇರುವುದೇ ಇವುಗಳಲ್ಲಿ. ದಿನಗಟ್ಟಲೆ ನಡೆಯುವ ಹೋಮಗಳೂ ಇವೆ, ಕಡಿಮೆ ಅವಧಿಯಲ್ಲಿ ಮುಗಿಸಬಹುದಾದವೂ ಇವೆ. ಅಗ್ನಿಹೋತ್ರ ಹೋಮವು ಹಾಗೆ ಅತ್ಯಂತ ಕಡಿಮೆ ಸಮಯದಲ್ಲಿ ಮಾಡಬಹುದಾದಂಥದ್ದು. ಅಲ್ಲದೆ ಅದಕ್ಕೆ ಬೇಕಿರುವ ಮಂತ್ರಗಳೂ ಕ್ಲಿಷ್ಟಕರವಲ್ಲ. ಇದರಿಂದ ಕ್ರಮೇಣ ಉತ್ತಮ ಪರಿಣಾಮಗಳನ್ನು ಕಂಡುಕೊಳ್ಳಬಹುದು. ಈ ಹೋಮದಿಂದ ಧನಾತ್ಮಕ ತರಂಗಗಳು ಸೃಷ್ಟಿಯಾಗಿ, ಮನುಷ್ಯನ ಮನಸ್ಸು ಧನಾತ್ಮಕ ಚಿಂತನೆಯತ್ತ ಸಾಗುತ್ತದೆ ಎಂಬುದನ್ನು ಸಾವಿರಾರು ವರ್ಷಗಳ ಹಿಂದಿನ ನಮ್ಮ ಪೂರ್ವಜರು ಅರಿತುಕೊಂಡಿದ್ದರು. ‘ಹೀಲ್ ದ ಅಟ್ಮಾಸ್ಪಿಯರ್ ಆಂಡ್ ಅಟ್ಮಾಸ್ಪಿಯರ್ ವಿಲ್ ಹೀಲ್ ಯು’ (ವಾತಾವರಣವನ್ನು ಶುದ್ಧಗೊಳಿಸಿದರೆ, ವಾತಾವರಣವು ನಿಮ್ಮನ್ನು ಗುಣಪಡಿಸುತ್ತದೆ) ಎಂಬ ಮೂಲ ತತ್ತ್ವವನ್ನು ಆಧರಿಸಿದ ಹೋಮ ಇದು.

ಬೇಕಾಗುವ ಸಾಮಗ್ರಿ: ತಾಮ್ರದ ಹೋಮಕುಂಡ, ಬೆರಣಿ, ಅಕ್ಕಿ (ತುಂಡಾಗಿರಬಾರದು ಮತ್ತು ಪಾಲಿಶ್ ಮಾಡಿರಬಾರದು), ಶುದ್ಧ ದೇಶಿ ಹಸುವಿನ ತುಪ್ಪ.

ಮಾಡುವ ವಿಧಾನ: ಮೊದಲಿಗೆ ಬೆರಣಿಯನ್ನು ತ್ರಿಕೋನಾಕೃತಿಯಲ್ಲಿ ತುಂಡರಿಸಿಕೊಳ್ಳಿ. ನಂತರ ಬೆರಣಿಯ ತುಂಡುಗಳಿಗೆ ತುಪ್ಪವನ್ನು ಸವರಿ ತ್ರಿಕೋನಾಕೃತಿಯಲ್ಲಿ ಕುಂಡದಲ್ಲಿಡಿ. ಒಂದು ಬೆರಣಿಯ ತುಂಡಿಗೆ ತುಪ್ಪವನ್ನು ಸವರಿ ಅದಕ್ಕೆ ಅಗ್ನಿಯನ್ನು ಹಚ್ಚಿ ಕುಂಡದಲ್ಲಿನ ಎಲ್ಲಾ ಬೆರಣಿಯು ಉರಿಯುವಂತೆ ಮಾಡಿ. ಅಕ್ಕಿಗೆ ಸ್ವಲ್ಪ ತುಪ್ಪ ಬೆರೆಸಿ ಅಭಿಗಾರ್ಯ ಮಾಡಿ. ನಂತರ ನಿಮ್ಮ ಹೆಬ್ಬೆರಳು, ತೋರುಬೆರಳು ಮತ್ತು ಉಂಗುರ ಬೆರಳನ್ನು ಸೇರಿಸಿ. ಗೋಮುಖ ಮುದ್ರೆಯ ಸಹಾಯದಿಂದ ತುಪ್ಪ ಬೆರೆಸಿದ ಅಕ್ಕಿಯನ್ನು ತೆಗೆದುಕೊಂಡು ಅಗ್ನಿಗೆ ಅಥವಾ ಹೋಮಕುಂಡಕ್ಕೆ ಹಾಕಬೇಕು. ಅಕ್ಕಿಯನ್ನು ಅಗ್ನಿ ಕುಂಡಕ್ಕೆ ಹಾಕುವಾಗ ಈ ಮುಂದಿನ ಮಂತ್ರಗಳನ್ನು ತಪ್ಪದೇ ಪಠಿಸಬೇಕು. ಸೂರ್ಯೋದಯ ಸಮಯದ ಮಂತ್ರಗಳು- ಸೂರ್ಯಾಯ ಸ್ವಾಹಾಃ ಸೂರ್ಯಾಯ ಇದಂ ನ ಮಮ; ಪ್ರಜಾಪತಯೇ ಸ್ವಾಹಾಃ ಪ್ರಜಾಪತಯೇ ಇದಂ ನ ಮಮ. ಸೂರ್ಯಾಸ್ತದ ವೇಳೆಯ ಮಂತ್ರಗಳು- ಅಗ್ನಿಯೇ ಸ್ವಾಹಾಃ ಅಗ್ನಿಯೇ ಇದಂ ನ ಮಮ; ಪ್ರಜಾಪತಯೇ ಸ್ವಾಹಾಃ ಪ್ರಜಾಪತಯೇ ಇದಂ ನ ಮಮ. ಈ ಮಂತ್ರಗಳನ್ನು ಪಠಿಸಿದ ನಂತರ ಭಕ್ತಿಯಿಂದ ಅಗ್ನಿ ಕುಂಡಕ್ಕೆ ನಮಸ್ಕರಿಸಿ. ನಿಮಗಿಷ್ಟವಾದ ಮಂತ್ರವನ್ನು ಅದರಲ್ಲೂ ಸೂರ್ಯದೇವನಿಗೆ ಸಮರ್ಪಿತವಾದ ಮಂತ್ರವನ್ನು ಪಠಿಸಿದ ನಂತರ ಹೋಮವನ್ನು ಮುಕ್ತಾಯಗೊಳಿಸಬಹುದು.

* ಅಗ್ನಿಹೋತ್ರ ಹೋಮದ ಪ್ರಯೋಜನ

- ಮನಸ್ಸು ಶಾಂತವಾಗುತ್ತದೆ. ? ಒತ್ತಡದಿಂದ ನಿವಾರಣೆ ನೀಡುತ್ತದೆ. ? ನರಮಂಡಲವು ಹೊಸ ಚೈತನ್ಯ ಪಡೆದು ದೇಹ-ಮನಸ್ಸು ಲವಲವಿಕೆಯಿಂದ ಇರುತ್ತವೆ. ? ಪರಿಸರ ಮಾಲಿನ್ಯ ಕಡಿಮೆಯಾಗುತ್ತದೆ.

- ಈ ಹೋಮದ ಭಸ್ಮದಿಂದ ಅನೇಕ ಕಾಯಿಲೆಗಳು ಗುಣವಾಗುತ್ತವೆ. ? ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ. ? ಮನೆಯಲ್ಲಿದ್ದ ನಕಾರಾತ್ಮಕ ಶಕ್ತಿಗಳು ನಾಶವಾಗಿ ಸಕಾರಾತ್ಮಕ ಶಕ್ತಿ ನೆಲೆಸುತ್ತದೆ. ? ದುಷ್ಟ ಶಕ್ತಿಗಳು ಮನೆಯನ್ನು ಪ್ರವೇಶಿಸದಂತೆ ರಕ್ಷಿಸುತ್ತದೆ. ? ಸುತ್ತಲಿನ ಪರಿಸರದಲ್ಲಿ ರೋಗಾಣು, ನಂಜುಕಾರಕ ಜಂತುಗಳು, ಅನಾರೋಗ್ಯ ಸೃಷ್ಟಿಸುವ ಸೂಕ್ಷ್ಮ ಜೀವಿಗಳ ನಾಶ ಆಗುತ್ತದೆ.

- ಮನುಷ್ಯನಲ್ಲಿನ ಸಕಾರಾತ್ಮಕ ಭಾವನೆ ಹೆಚ್ಚಾಗುತ್ತದೆ. ? ಪರಿಸರದಲ್ಲಿ ಹೆಚ್ಚು ಸತ್ವಯುತ ಮತ್ತು ಸ್ವಾದಿಷ್ಟ ಆಹಾರಧಾನ್ಯ ಬೆಳೆಯುತ್ತವೆ. ? ಮಕ್ಕಳಲ್ಲಿನ ಕೋಪ ಕಡಿಮೆಯಾಗಿ, ಶಾಂತ ಪ್ರವೃತ್ತಿ ಬೆಳೆಯುತ್ತದೆ. ಏಕಾಗ್ರತೆ ಹೆಚ್ಚುತ್ತದೆ. ? ಹೋಮದಿಂದ ಹೊಮ್ಮುವ ಧೂಮವು ಮೆದುಳು, ನರವ್ಯೂಹಗಳ ಮೇಲೆ ಉತ್ತಮ ಪ್ರಭಾವ ಬೀರುತ್ತದೆ. ಇಚ್ಛಾಶಕ್ತಿ, ಮಾನಸಿಕ ಸ್ಥಿರತೆ ಬಲಗೊಳ್ಳುತ್ತದೆ.

(ಲೇಖಕರು ಜ್ಯೋತಿಷಿ ಹಾಗೂ ಸಂಸ್ಕೃತ ಉಪನ್ಯಾಸಕ)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net