

ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆರಂಭಿಸಿರುವ ತೆರಿಗೆ ಸಮರವು ದೊಡ್ಡ ಕೋಲಾಹಲ ಸೃಷ್ಟಿಸಿರುವುದು ಮಾತ್ರವಲ್ಲ ವಾಣಿಜ್ಯ ಹಾಗೂ ರಾಜತಾಂತ್ರಿಕ ಸಂಬಂಧಗಳಿಗೆ ಧಕ್ಕೆಯಾಗುತ್ತಿದೆ. ಬದಲಾದ ಜಾಗತೀಕ ರಾಜಕೀಯ ಸಮೀಕರಣದಲ್ಲಿ ಮತ್ತೆ ಭಾರತ- ಚೀನಾ ನಡುವೆ ಸ್ನೇಹ ವೃದ್ಧಿಸುವ ಎಲ್ಲ ಲಕ್ಷಣಗಳು ಗೋಚರಿಸುತ್ತಿವೆ. 7 ವರ್ಷಗಳ ನಂತರ ಇದೇ ತಿಂಗಳ ಕೊನೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಚೀನಾ ಪ್ರವಾಸಕ್ಕೆ ತೆರಳಲಿದ್ದಾರೆ ಎಂದಿವೆ ಮೂಲಗಳು. ವಾಣಿಜ್ಯ ಕ್ಷೇತ್ರದಲ್ಲಿ ಉಭಯ ದೇಶಗಳ ಪರಸ್ಪರ ಕೊಡು ಕೊಳ್ಳುವಿಕೆ ದೊಡ್ಡಪ್ರಮಾಣದಲ್ಲೇ ಇದೆ. ಆದರೆ, ಗಡಿ ವಿವಾದ ಮತ್ತು ಚೀನಾ ಪಾಕಿಸ್ತಾನಕ್ಕೆ ನೀಡುತ್ತಿರುವ ಬೆಂಬಲದಂಥ ಗಂಭೀರ ಅಂಶಗಳು ಈ ಬಾಂಧವ್ಯವೃದ್ಧಿ ಹಾದಿಯಲ್ಲಿ ಪ್ರಮುಖ ತಡೆಗಳಾಗಿವೆ. ಹಾಗಾದರೆ, ಮುಂದಿನ ದಿನಗಳಲ್ಲಿ ಈ ಎರಡೂ ರಾಷ್ಟ್ರಗಳ ನಡುವಿನ ಬಾಂಧವ್ಯ ಹೊಸ ಸ್ವರೂಪದಲ್ಲಿ ಇರಲಿದೆಯೇ? ಈ ಕುರಿತಾದ ವಿವರ ಇಲ್ಲಿದೆ.
ದೀರ್ಘ ಅವಧಿಯ ಬಳಿಕ ಭಾರತ ಮತ್ತು ಚೀನಾ ಎರಡೂ ರಾಷ್ಟ್ರಗಳು ಸ್ನೇಹ ವರ್ಧನೆಯ ಬಗ್ಗೆ ಸಕಾರಾತ್ಮಕ ಹೆಜ್ಜೆ ಇರಿಸಿದ್ದು, ಈ ಬೆಳವಣಿಗೆಯನ್ನು ಜಾಗತಿಕ ವಲಯ ಕೂಡ ಕುತೂಹಲದಿಂದ ಗಮನಿಸುತ್ತಿದೆ. ಚೀನಾ-ಭಾರತ ಸ್ನೇಹ ಮತ್ತು ವಿವಾದ ಎರಡೂ ಹೊಸದಲ್ಲ. ಉಭಯ ರಾಷ್ಟ್ರಗಳ ನಡುವಿನ ಸಂಬಂಧ ಯಾವಾಗಲೂ ಸ್ವಲ್ಪ ಸಿಹಿ, ಸ್ವಲ್ಪ ಕಹಿ. ಲಡಾಖ್ನಲ್ಲಿ ಚೀನಾದೊಂದಿಗೆ ಗಡಿ ವಿವಾದ ತೀವ್ರಗೊಂಡಾಗ ಡ್ಯ್ರಾಗನ್ ರಾಷ್ಟ್ರದ ವಿರುದ್ಧ ಭಾರತ ಹಲವು ಕ್ರಮ ಕೈಗೊಂಡಿತಲ್ಲದೆ, ಚೀನಿ ಸರಕುಗಳ ಆಮದಿಗೆ ಕಡಿವಾಣ ಹಾಕಿತ್ತು. ಆದರೆ, ಕಾಲಚಕ್ರ ಬದಲಾಗುತ್ತಲೇ ಇರುತ್ತದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತವನ್ನು ‘ಆಪ್ತಮಿತ್ರ’ ಎಂದು ಸಂಬೋಧಿಸುತ್ತಲೇ ಮತ್ತೊಂದೆಡೆ ಭಾರತದ ಮೇಲೆ ಸುಂಕಭಾರವನ್ನು ಹೆಚ್ಚಿಸುತ್ತಿದ್ದಾರೆ. ಚೀನಾದ ಮೇಲಂತೂ ಟ್ರಂಪ್ ಅಧಿಕ ಸುಂಕವನ್ನು ಹೇರಿದ್ದಾರೆ. ಹೀಗಾಗಿ ಅಮೆರಿಕದ ಸುಂಕ ಉಪಟಳವನ್ನು ನಿಯಂತ್ರಿಸಲು ಮತ್ತು ಟ್ರಂಪ್ರ ವಿವೇಚನಾರಹಿತ ನಿರ್ಧಾರಗಳಿಗೆ ತಕ್ಕ ಉತ್ತರ ಕೊಡಲು ‘ಭಾರತ-ಚೀನಿ ಭಾಯಿ-ಭಾಯಿ’ ಎಂಬ ಘೋಷಣೆ ಮತ್ತೆ ಮೊಳಗಿದರೂ ಆಶ್ಚರ್ಯವಿಲ್ಲ. ಏಷ್ಯಾದ ಎರಡು ಮಹಾನ್ ಶಕ್ತಿಗಳಾದ ಭಾರತ ಮತ್ತು ಚೀನಾ ಸ್ನೇಹವರ್ಧನೆಗೆ ಹೊಸ ಸ್ವರೂಪ ಸಿಗುವ ಸಾಧ್ಯತೆ ಇದೆ. ‘ಭಾರತ ಮತ್ತು ಚೀನಾ ಒಟ್ಟಾಗಿ ಕೆಲಸ ಮಾಡಬೇಕು’ ಎಂದು ಚೀನಾ ವಿದೇಶಾಂಗ ಸಚಿವರು ಒಂದಕ್ಕಿಂತ ಹೆಚ್ಚು ಬಾರಿ ಹೇಳಿದ್ದಾರೆ.
ಭಾರತ ಮತ್ತು ಚೀನಾ ನಡುವಿನ ಸ್ನೇಹಕ್ಕೆ ಸುದೀರ್ಘ ಇತಿಹಾಸವಿದೆ. ಇತ್ತೀಚಿನ ವರ್ಷಗಳಲ್ಲಿ ವ್ಯಾಪಾರ ಸಂಬಂಧವೂ ಗಣನೀಯವಾಗಿ ಹೆಚ್ಚಿದೆ. ಜಾಗತಿಕವಾಗಿ ಚೀನಾ ಮತ್ತು ಭಾರತ ದೊಡ್ಡ ಶಕ್ತಿಗಳಾಗಿ ಬೆಳೆದಿವೆ. ಹಾಗಾಗಿ, ಗಡಿ ವಿವಾದದಂಥ ಸೂಕ್ಷ್ಮ ವಿಷಯಗಳನ್ನು ಸೌಹಾರ್ದಯುತವಾಗಿ ಬಗೆಹರಿಸಿಕೊಂಡು, ಇತರ ಕ್ಷೇತ್ರಗಳಲ್ಲಿ ಪರಸ್ಪರ ಸಹಕಾರದಿಂದ ಸಾಗಿದರೆ ಅದರಿಂದ ಎರಡೂ ದೇಶಗಳಿಗೆ ಹಿತ ಎಂಬುದರಲ್ಲಿ ಅನುಮಾನವಿಲ್ಲ. ಜಾಗತಿಕ ರಾಜಕೀಯದ ಸಮೀಕರಣಗಳು ವೇಗವಾಗಿ ಬದಲಾಗುತ್ತಿರುವ ಈ ಕಾಲಘಟ್ಟದಲ್ಲಿ ಭಾರತ ಮತ್ತು ಚೀನಾದ ನಡುವೆ ಬಾಂಧವ್ಯದ ಹೊಸ ಅಧ್ಯಾಯ ಆರಂಭವಾದರೆ ಅಭಿವೃದ್ಧಿ ಪ್ರಕ್ರಿಯೆಗೆ ಖಂಡಿತ ವೇಗ ಸಿಗಲಿದೆ.
ಇದೇ ವರ್ಷದ ಮಾರ್ಚ್ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅಮೆರಿಕದ ಪಾಡ್ಕಾಸ್ಟರ್ ಲೆಕ್ಸ್ ಫ್ರಿಡ್ವುನ್ರಿಗೆ ನೀಡಿದ ಸುದೀರ್ಘ ಸಂದರ್ಶನದಲ್ಲಿ ಹಲವು ಮಹತ್ವದ ಅಂಶಗಳನ್ನು ಪ್ರಸ್ತಾಪಿಸಿದ್ದರು. ಇದೇ ವೇಳೆ, ‘ಭಾರತ ಮತ್ತು ಚೀನಾದ ನಡುವೆ ಆರೋಗ್ಯಕರ ಸ್ಪರ್ಧೆ ಇರಲಿ. ಸಂಘರ್ಷ ಬೇಡ’ ಎಂಬ ಮೋದಿಯವರ ಹೇಳಿಕೆಯನ್ನು ಚೀನಾ ಶ್ಲಾಘಿಸಿತು. ಮೋದಿ ಮಾತನಾಡುತ್ತ, ‘ಲಡಾಖ್ನಲ್ಲಿ 2020ರ ಘರ್ಷಣೆ ಬಳಿಕ ಭಾರತ ಮತ್ತು ಚೀನಾ ಗಡಿ ಸಮಸ್ಯೆ ಪರಿಹಾರಕ್ಕಾಗಿ ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಅವರೊಂದಿಗೆ ಇತ್ತೀಚೆಗೆ ಮಾತುಕತೆ ನಡೆಸಿದ್ದೆ. ಆ ಬಳಿಕ ಗಡಿಯಲ್ಲಿನ ಸ್ಥಿತಿ ಸಹಜತೆಗೆ ಮರಳಿದೆ’ ಎಂದು ತಿಳಿಸಿದ್ದರು. ಮೋದಿಯವರ ಈ ಹೇಳಿಕೆಯನ್ನು ಶ್ಲಾಘಿಸಿದ ಚೀನಾ ವಿದೇಶಾಂಗ ಇಲಾಖೆಯ ವಕ್ತಾರ ಮಾವೋ ನಿಂಗ್, ‘2000 ವರ್ಷಗಳಿಗೂ ಹೆಚ್ಚಿನ ಇತಿಹಾಸದಲ್ಲಿ ಎರಡೂ ದೇಶಗಳು ಸ್ನೇಹವನ್ನು ಕಾಯ್ದುಕೊಂಡಿವೆ. ಎರಡು ದೊಡ್ಡ ಅಭಿವೃದ್ಧಿಶೀಲ ರಾಷ್ಟ್ರಗಳಾದ ಭಾರತ ಮತ್ತು ಚೀನಾ ತಮ್ಮ ಅಭಿವೃದ್ಧಿಗೆ ವೇಗ ನೀಡಲು ಪರಸ್ಪರರನ್ನು ಬೆಂಬಲಿಸುತ್ತಿವೆ. ಇದು 280 ಕೋಟಿಗೂ ಹೆಚ್ಚಿನ ಜನರ ಮೂಲಭೂತ ಹಿತಾಸಕ್ತಿಗಳನ್ನು ಪೂರೈಸುತ್ತಿದೆ’ ಎಂದಿದ್ದರು. ಅಲ್ಲದೆ, ‘ಚೀನಾ ಮತ್ತು ಭಾರತ ನಡುವಿನ ರಾಜತಾಂತ್ರಿಕ ಸಂಬಂಧಗಳ 75ನೇ ವಾರ್ಷಿಕೋತ್ಸವದ ಸಂದರ್ಭವನ್ನು ಅವಕಾಶವಾಗಿ ಬಳಸಿಕೊಂಡು ಸ್ಥಿರ ಮತ್ತು ಸುಭದ್ರ ಹಾದಿಯಲ್ಲಿ ದ್ವಿಪಕ್ಷೀಯ ಸಂಬಂಧಗಳನ್ನು ಮುನ್ನಡೆಸಲು ಚೀನಾ ಭಾರತದೊಂದಿಗೆ ಕೆಲಸ ಮಾಡಲು ಸಿದ್ಧವಾಗಿದೆ’ ಎಂಬ ಆಶ್ವಾಸನೆಯನ್ನೂ ನೀಡಿರುವುದು ಆಶಾವಾದ ಹುಟ್ಟಿಸಿದೆ.
ಭಾರತದ ಎದುರು ಚೀನಾ ಯಾವಾಗಲೂ ಒಂದು ಸಾಮರಿಕ ಸವಾಲಾಗಿ ನಿಲ್ಲುತ್ತದೆ. ಗಡಿ ವಿವಾದ ಇದರ ಭಾಗವೇ ಆಗಿದೆ. ಲಡಾಖ್ ಗಡಿ ವಿವಾದ ಸದ್ಯಕ್ಕೆ ಶಮನಗೊಂಡಿದ್ದರೂ, ಪೂರ್ಣವಾಗಿ ಪರಿಹಾರ ಕಂಡಿಲ್ಲ.
ಬಿಆರ್ಐ ಯೋಜನೆ: ಚೀನಾ ಕೈಗೊಂಡಿರುವ ಬೆಲ್ಟ್ ಆಂಡ್ ರೋಡ್ ಇನಿಶಿಯೇಟಿವ್ (ಬಿಆರ್ಐ) ಯೋಜನೆ ಭಾರತದ ಹಿತಕ್ಕೆ ಮಾರಕ. ಭಾರತದ ನಾಲ್ಕೂ ದಿಕ್ಕುಗಳಲ್ಲಿ ಮೂಲಸೌಕರ್ಯದ ಜಾಲವನ್ನು ಚೀನಾ ವಿಸ್ತರಿಸುತ್ತಿದ್ದು, ಇದರಿಂದ ಆ ದೇಶದ ಸಾಮರಿಕ ಶಕ್ತಿ ಹೆಚ್ಚಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.
ಪಾಕಿಸ್ತಾನಕ್ಕೆ ನೆರವು: ಭಾರತ ಭಯೋತ್ಪಾದನೆಯ ಸಂತ್ರಸ್ತ ರಾಷ್ಟ್ರವಾಗಿದ್ದರೂ ಚೀನಾ ಬಹಿರಂಗವಾಗಿ ಪಾಕ್ ಬೆಂಬಲಕ್ಕೆ ನಿಂತಿರುವುದು ಸಮಸ್ಯೆಯಾಗಿ ಪರಿಣಮಿಸಿದೆ. ಅಷ್ಟೇ ಅಲ್ಲ ದಕ್ಷಿಣ ಏಷ್ಯಾದಲ್ಲಿ ಪಾಕಿಸ್ತಾನವನ್ನು ಚೀನಾ ಭಾರತಕ್ಕೆ ಸಮಾನವಾಗಿ ನೋಡುವ ಧಾಷ್ಟರ್್ಯ ಪ್ರದರ್ಶಿಸಿದೆ. ಪಾಕಿಸ್ತಾನದಲ್ಲಿ ಭಾರಿ ಹೂಡಿಕೆಯನ್ನು ಮಾಡಿದ್ದು, ಅದರೊಂದಿಗೆ ಗಾಢ ಸ್ನೇಹ ಹೊಂದಿದೆ.
ಅಡ್ಡಗಾಲು: ಭಾರತ ಜಾಗತಿಕ ಶಕ್ತಿಯಾಗುವುದನ್ನು ಚೀನಾ ಸಹಿಸುವುದಿಲ್ಲ. ಹೀಗಾಗಿ ದಕ್ಷಿಣ ಏಷ್ಯಾ ಮಟ್ಟದಲ್ಲೇ ಭಾರತವನ್ನು ಕಟ್ಟಿ ಹಾಕಲು ‘ಡ್ರಾ್ಯಗನ್’ ಒಂದಿಲ್ಲ ಒಂದು ತಂತ್ರ ರೂಪಿಸುತ್ತಿರುತ್ತದೆ. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತ ಕಾಯಂ ಸ್ಥಾನ ಪಡೆಯಲು ಕೂಡ ಚೀನಾ ಅಡ್ಡಿಯಾಗಿದೆ.
ಅವಿಶ್ವಾಸ: ಸ್ನೇಹಹಸ್ತ ಚಾಚಬೇಕಿದ್ದರೂ ಎರಡೂ ರಾಷ್ಟ್ರಗಳ ನಡುವಿನ ಅವಿಶ್ವಾಸ ಇದಕ್ಕೆ ತಡೆಯೊಡ್ಡುತ್ತಿದೆ. ಪರಸ್ಪರ ವಿಶ್ವಾಸದ ಸ್ಥಿತಿ ನಿರ್ವಣವಾಗುವಂಥ ರಾಜತಾಂತ್ರಿಕ ವಾತಾವರಣ ಸೃಷ್ಟಿಸಬೇಕಿದ್ದು, ಇದು ಮಾತುಕತೆ ಮೂಲಕವೇ ಸಾಧ್ಯವಾಗಬಹುದು.
ಚೀನಾ ವಿಶ್ವದ ಎರಡನೇ ಅತಿ ದೊಡ್ಡ ಆರ್ಥಿಕ ಶಕ್ತಿ. ಜಿಡಿಪಿ 20 ಟ್ರಿಲಿಯನ್ ಡಾಲರ್. ಜಾಗತಿಕ ಉತ್ಪಾದನೆ ರಂಗದಲ್ಲಿ (ಮ್ಯಾನುಫ್ಯಾಕ್ಚರಿಂಗ್) 30% ಪಾಲುದಾರಿಕೆ ಹೊಂದಿದೆ. ? ಭಾರತ ಜಗತ್ತಿನ ನಾಲ್ಕನೇ ಅತಿ ದೊಡ್ಡ ಆರ್ಥಿಕ ಶಕ್ತಿ. ಜಿಡಿಪಿ 4.1 ಟ್ರಿಲಿಯನ್ ಡಾಲರ್. ಅಲ್ಲದೆ, 6.5% ಬೆಳವಣಿಗೆ ದರದೊಂದಿಗೆ ಜಗತ್ತಿನಲ್ಲೇ ಅತಿ ವೇಗವಾಗಿ ಏರಿಕೆ ಕಾಣುತ್ತಿರುವ ಆರ್ಥಿಕತೆ. ವಿಶ್ವದಲ್ಲೇ ಅತಿ ಹೆಚ್ಚು ಯುವ ಜನಸಂಖ್ಯೆಯನ್ನು ಹೊಂದಿದೆ.
ಪರಿಣಾಮ: ಅರ್ಥವ್ಯವಸ್ಥೆಯ ಗಾತ್ರದಲ್ಲಿ ಚೀನಾ ಮುಂದಿದ್ದರೂ, ಆರ್ಥಿಕ ವಿಕಾಸ ದರ, ಯುವಸಮೂಹ ಮತ್ತು ಭವಿಷ್ಯದ ಹೊಸ ಸಾಧ್ಯತೆಗಳ ವಿಷಯದಲ್ಲಿ ಭಾರತ ಮುಂಚೂಣಿಯಲ್ಲಿದೆ. ಅಂದರೆ, ಸ್ನೇಹ ಎರಡೂ ರಾಷ್ಟ್ರಗಳಿಗೂ ಲಾಭಕಾರಿಯೇ.
‘ನೆರೆರಾಷ್ಟ್ರಗಳು ಭೌಗೋಳಿಕ ಸೃಷ್ಟಿ. ಆದರೆ, ಅವುಗಳೊಂದಿಗಿನ ಸಂಬಂಧ ಸುಧಾರಣೆಯ ಮೂಲಕ ಮಾನವೀಯತೆ, ಸುಧಾರಣೆಯ ಹಾದಿಯಲ್ಲಿ ದೃಢವಾದ ಹೆಜ್ಜೆಯನ್ನು ಇರಿಸಬಹುದು’ ಎಂದು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಹೇಳಿದ್ದರು. ಇದು ವಾಸ್ತವ ಕೂಡ ಹೌದು. ನೆರೆರಾಷ್ಟ್ರಗಳೊಂದಿಗೆ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ. ಆದರೆ, ಇವು ಸಂಘರ್ಷಕ್ಕೆ ದಾರಿ ಮಾಡಿಕೊಡಬಾರದು, ದ್ವಿಪಕ್ಷೀಯ ಸಂಬಂಧವನ್ನು ಬಲಿ ಪಡೆಯಬಾರದು. ಚೀನಾದ ಮಟ್ಟಿಗೆ ಹೇಳುವುದಾದರೆ, ಡ್ರಾ್ಯಗನ್ ರಾಷ್ಟ್ರವು ಭಾರತದ ಹೆಚ್ಚುತ್ತಿರುವ ವರ್ಚಸ್ಸು, ಶಕ್ತಿ ಮತ್ತು ಅಂತಾರಾಷ್ಟ್ರೀಯ ವೇದಿಕೆಯಲ್ಲಿನ ಪ್ರಾಮುಖ್ಯವನ್ನು ಗಮನಿಸುತ್ತಿದೆ. ಹಾಗಾಗಿ, ಸಂಬಂಧ ಬಲವರ್ಧನೆಯ ಮಾರ್ಗವನ್ನು ಮತ್ತಷ್ಟು ವಿಶಾಲಗೊಳಿಸಿದೆ. ಇದು ಉತ್ತಮ ನಡೆಯೂ ಹೌದು.
ವ್ಯಾಪಾರ
ವರ್ಷದಿಂದ ವರ್ಷಕ್ಕೆ ಭಾರತ ಮತ್ತು ಚೀನಾ ನಡುವಿನ ಟ್ರೇಡ್ ಹೆಚ್ಚುತ್ತಲೇ ಇದೆ. 2020ರ ಗಲ್ವಾನ್ ವಿವಾದದ ನಂತರವೂ ವ್ಯಾಪಾರ ಕಡಿಮೆಯಾಗಿಲ್ಲ. ಏಕೆಂದರೆ ಇದು ಎರಡೂ ರಾಷ್ಟ್ರಗಳ ಹಿತವನ್ನು ಒಳಗೊಂಡಿದೆ. ಕಚ್ಚಾ ವಸ್ತುಗಳಿಗಾಗಿ (ಇಂಟರ್ವಿುಡಿಯೇಟ್ ಗೂಡ್ಸ್) ಭಾರತ ಚೀನಾದ ಮೇಲೆ ಅವಲಂಬಿತವಾಗಿದೆ. ಹಾಗಾಗಿ, ಚೀನಾದಿಂದಾಗುತ್ತಿರುವ ಆಮದನ್ನು ನಿರ್ಲಕ್ಷಿಸುವ ಸ್ಥಿತಿಯಲ್ಲಿ ಭಾರತ ಇಲ್ಲ. ಚೀನಾಕ್ಕೂ ಭಾರತ ದೊಡ್ಡ ಮಾರುಕಟ್ಟೆ. ಯಾವುದೇ ವಿವಾದದ ಹಿನ್ನೆಲೆಯಲ್ಲಿ ಇದನ್ನು ಕಳೆದುಕೊಳ್ಳಲು ಆ ರಾಷ್ಟ್ರ ಕೂಡ ಬಯಸುವುದಿಲ್ಲ.
ತಂತ್ರಜ್ಞಾನ
ತಂತ್ರಜ್ಞಾನ ಕ್ಷೇತ್ರದಲ್ಲಿ ಚೀನಾ ಹೊಸ ಮೈಲಿಗಲ್ಲುಗಳನ್ನು ಸೃಷ್ಟಿಸಿದೆ ಎಂಬುದು ನಿರ್ವಿವಾದ. ಇದರಲ್ಲಿ ಕೃತಕ ಬುದ್ಧಿಮತ್ತೆಯೂ (ಆರ್ಟಿಫಿಶಿಯಲ್ ಇಂಟಲಿಜೆನ್ಸ್) ಒಳಗೊಂಡಿದೆ. ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತಕ್ಕೆ ಚೀನಾ ಸಹಕಾರ ನೀಡುವುದಿಲ್ಲ ಎಂಬುದು ಅಪ್ರಿಯ ವಾಸ್ತವವೇ ಆದರೂ, ಭಾರತ ತನ್ನ ಬಲದಲ್ಲಿ ತಂತ್ರಜ್ಞಾನ ಕ್ಷೇತ್ರದಲ್ಲಿ ಸಾಧಿಸುತ್ತಿರುವ ಬೆಳವಣಿಗೆ ಕಡಿಮೆಯೇನಲ್ಲ. ಹಾಗಾಗಿ, ತಂತ್ರಜ್ಞಾನ ರಂಗದಲ್ಲೂ ಈ ಎರಡು ದೇಶಗಳು ಮಹತ್ವದ ಶಕ್ತಿಗಳಾಗುತ್ತಿರುವುದರಿಂದ, ಭವಿಷ್ಯದಲ್ಲಿ ಪರಸ್ಪರ ಸಹಕಾರ ಅನಿವಾರ್ಯವಾಗಬಹುದು.
ಹಸಿರು ಇಂಧನ
ಹಸಿರು ಇಂಧನ ಕ್ಷೇತ್ರದ ಅಭಿವೃದ್ಧಿಗೆ ಭಾರತ ಮತ್ತು ಚೀನಾ ಎರಡೂ ತಮ್ಮದೇ ಆದ ನಿಟ್ಟಿನಲ್ಲಿ ಪ್ರಯತ್ನ ನಡೆಸುತ್ತಿವೆ. ಈ ರಂಗದಲ್ಲಿ ಜತೆಯಾಗಿ ಕೆಲಸ ಮಾಡುವ ಉತ್ಸಾಹ ತೋರಿದ್ದು, ಇದು ಹಸಿರು ಇಂಧನ ಕ್ಷೇತ್ರದಲ್ಲಿ ನವಕ್ರಾಂತಿಯನ್ನೇ ಸೃಷ್ಟಿಸಬಲ್ಲದು. ಹವಾಮಾನ ಬದಲಾವಣೆಯ ವ್ಯತಿರಿಕ್ತ ಪರಿಣಾಮಗಳನ್ನೂ ಉಭಯ ದೇಶಗಳು ಅನುಭವಿಸುತ್ತಿವೆ. ಹೀಗಾಗಿ ಹಸಿರು ಇಂಧನ, ಸುಸ್ಥಿರ ಅಭಿವೃದ್ಧಿ ನಿಟ್ಟಿನಲ್ಲಿ ಭಾರತ-ಚೀನಾ ಒಟ್ಟಾಗಿ ಕೆಲಸ ಮಾಡುವ ಸನ್ನಿವೇಶಗಳು ಸೃಷ್ಟಿಯಾಗಿವೆ.
ಶಿಕ್ಷಣ-ಸಂಸ್ಕೃತಿ
ಲಡಾಖ್ ಗಡಿ ವಿವಾದದ ಬಳಿಕ ಈ ಕ್ಷೇತ್ರದಲ್ಲಿನ ಸಹಕಾರ ಪೂರ್ಣವಾಗಿ ನಿಂತುಹೋಗಿತ್ತು. ಗಡಿ ವಿಷಯದಲ್ಲಿ ಚೀನಾ ಮತ್ತೆ ಯಾವುದೇ ಪ್ರಮಾದ ಮಾಡದಿದ್ದರೆ ಶಿಕ್ಷಣ ಮತ್ತು ಸಂಸ್ಕೃತಿ ಕ್ಷೇತ್ರದಲ್ಲಿ ಪರಸ್ಪರ ಕೆಲಸ ಮಾಡಲು ಸಾಕಷ್ಟು ಅವಕಾಶಗಳಿವೆ. ಶಿಕ್ಷಣ, ಸಾಂಸ್ಕೃತಿಕ ಕೊಡುಕೊಳ್ಳುವಿಕೆ ಹೆಚ್ಚಾದಷ್ಟು ಎರಡೂ ರಾಷ್ಟ್ರಗಳ ನಡುವಿನ ತಪು್ಪ ಅಭಿಪ್ರಾಯ ದೂರವಾಗಿ, ಸದ್ಭಾವನೆ ಬೆಳೆಯಲು ಸಾಧ್ಯವಾಗುತ್ತದೆ.