ಹಿಮ್ಮುಖ ಚಲನೆಯಲ್ಲಿ ಅಫ್ಘಾನಿಸ್ತಾನ; ಪ್ರೇಮಶೇಖರ ಅಂಕಣ..

Premshekhar Column
Published on
ಅಫ್ಘಾನಿಸ್ತಾನದ ತಾಲಿಬಾನ್ ಸರ್ಕಾರದ ಸಹಕಾರದಿಂದ ಅಲ್-ಖಯೀದಾ ಅಮೆರಿಕ ಮೇಲೆ ದಾಳಿ ಎಸಗಿದ್ದರಿಂದಾಗಿ ಅವೆರಡೂ ಸಂಘಟನೆಗಳನ್ನು ಶಿಕ್ಷಿಸಲು ಉದ್ದೇಶಿಸಿದ ಅಧ್ಯಕ್ಷ ಜಾರ್ಜ್ ಬುಷ್ ಆ ನಿಟ್ಟಿನಲ್ಲಿ ತಾವು ಆರಂಭಿಸಲಿರುವುದು ‘ಕ್ರೂಸೇಡ್’ ಎಂದು ಘೊಷಿಸಿದರು. ಆದರೆ ತಮ್ಮ ತಪ್ಪಿನ ಅರಿವು ಅವರಿಗೆ ತಕ್ಷಣವೇ ಆಯಿತು. ‘ಕ್ರೂಸೇಡ್’ ಎನ್ನುವುದು ಇಸ್ರೇಲ್​ನಲ್ಲಿನ ಕ್ರಿಶ್ಚಿಯನ್ ಪವಿತ್ರ ಸ್ಥಳಗಳನ್ನು ಮುಸ್ಲಿಂ ಹಿಡಿತದಿಂದ ತೆರವುಗೊಳಿಸಲು ಮಧ್ಯಯುಗದಲ್ಲಿ ಯುರೋಪಿನ ಕ್ರಿಶ್ಚಿಯನ್ ರಾಷ್ಟ್ರಗಳು ಒಟ್ಟುಗೂಡಿ ನಡೆಸಿದ್ದ ಯುದ್ಧಗಳ ಸರಣಿ. ಅಂದರೆ ಅದು ಕ್ರಿಶ್ಚಿಯಾನಿಟಿ ಮತ್ತು ಇಸ್ಲಾಂಗಳ ನಡುವಿನ ಸಶಸ್ತ್ರ ಸಂಘರ್ಷ. ಈಗ ಅಲ್-ಖಯೀದಾ ವಿರುದ್ಧ ನಡೆಸಹೊರಟಿರುವ ಕಾರ್ಯಾಚರಣೆಗಳನ್ನೂ ‘ಕ್ರೂಸೇಡ್’ ಎಂದು ಬಣ್ಣಿಸಿದರೆ ಅದು ಸೌದಿ ಅರೇಬಿಯಾದಂತಹ ಅಮೆರಿಕದ ಮುಸ್ಲಿಂ ಸಹಯೋಗಿಗಳಿಗೆ ತಪು್ಪ ಸಂದೇಶ ನೀಡಬಹುದು, ಮುಸ್ಲಿಮರ ವಿರುದ್ಧ ಕ್ರಿಶ್ಚಿಯನ್ನರು ಸಶಸ್ತ್ರ ಸಂಘರ್ಷಕ್ಕೆ ಹೊರಟಿದ್ದಾರೆಂದು ಜಾಗತಿಕವಾಗಿ ಮುಸ್ಲಿಂ ಜನಾಂಗ ಭಾವಿಸಬಹುದು, ಅದು ತಮ್ಮ ಮುಂದಿನ ಕಾರ್ಯಯೋಜನೆಗಳಿಗೆ ಮಿತ್ರ ಮುಸ್ಲಿಂ ದೇಶಗಳಿಂದ ಸಹಯೋಗ ದೊರೆಯದಂತೆ ಮಾಡಬಹುದು ಎಂದರಿತ ಅಧ್ಯಕ್ಷ ಬುಷ್ ಹೇಳಿಕೆಯನ್ನು ಬದಲಾಯಿಸಿ, ತಾವು ‘ಭಯೋತ್ಪಾದನೆಯ ವಿರುದ್ಧ ಸಮರ’ ಆರಂಭಿಸಹೊರಟಿರುವುದಾಗಿ ಹೇಳಿದರು.

ತಾಲಿಬಾನ್ ಅನ್ನು ಸೃಷ್ಟಿಸಿದ್ದು, ಅದರ ಬೆನ್ನಿಗಿದ್ದದ್ದು ಪಾಕಿಸ್ತಾನ ಎಂದು ಗೊತ್ತಿದ್ದರೂ ತಾಲಿಬಾನ್ ವಿರುದ್ಧ ಕಾರ್ಯಾಚರಣೆಗಾಗಿ ಅದೇ ಪಾಕಿಸ್ತಾನದ ಮೇಲೇ ಅವಲಂಬಿತವಾಗುವ ಒತ್ತಡಕ್ಕೆ ಅಮೆರಿಕ ಒಳಗಾಯಿತು. ಅದಕ್ಕೆ ಕಾರಣ ಪಾಕಿಸ್ತಾನದ ಭೌಗೋಳಿಕ ಸ್ಥಾನ. ಅಫ್ಘಾನಿಸ್ತಾನಕ್ಕೆ ಇರಾನ್ ಮೂಲಕ ಹೋಗುವ ದಾರಿ ಅಮೆರಿಕಕ್ಕೆ 1979ರ ಇಸ್ಲಾಮಿಕ್ ಕ್ರಾಂತಿಯೊಂದಿಗೆ ಬಂದ್ ಆಗಿಹೋಗಿತ್ತು. ಮಧ್ಯ ಏಷ್ಯಾದ ಮೂಲಕ ಹೋಗಬೇಕಾದರೆ ರಷ್ಯಾದ ಸಹಾಯ ಬೇಕಾಗಿತ್ತು. ಅದಂತೂ ಸಿಗುವ ಸಾಧ್ಯತೆಯೇ ಇರಲಿಲ್ಲ. ಹೀಗಾಗಿ ಅಮೆರಿಕಕ್ಕೆ ಪಾಕಿಸ್ತಾನದ ಹೊರತಾಗಿ ಬೇರೆ ದಾರಿಯಿರಲಿಲ್ಲ. ‘ನಮಗೆ ಸಹಕಾರ ನೀಡದೇಹೋದರೆ ಅದರ ದುಷ್ಪರಿಣಾಮ ಅನುಭವಿಸಬೇಕಾಗುತ್ತದೆ’ ಎಂದು ಅಮೆರಿಕ ಎಚ್ಚರಿಸಿದ್ದೇ ಪರ್ವೆಜ್ ಮುಷರ್ರಫ್ ಸೇನಾಸರ್ಕಾರಕ್ಕೆ ಇಕ್ಕಟ್ಟಿನ ಸ್ಥಿತಿ ಉಂಟಾಯಿತು. ಚಾಣಾಕ್ಷ ಮುಷರ್ರಫ್ ಅಮೆರಿಕಕ್ಕೆ ಸಹಕರಿಸುತ್ತಲೇ, ಪಾಕ್ ನೆಲದ ಮೂಲಕ ಅಮೆರಿಕ ನೇತೃತ್ವದ ನ್ಯಾಟೋ ಸೇನೆ ಮತ್ತು ಶಸ್ತ್ರಾಸ್ತ್ರಗಳು ಅಫ್ಘಾನಿಸ್ತಾನದತ್ತ ಸಾಗಲು ಅವಕಾಶ ಮಾಡಿಕೊಡುತ್ತಲೇ ಗುಟ್ಟಾಗಿ ತಾಲಿಬಾನ್ ಅನ್ನು ರಕ್ಷಿಸುವ ಯೋಜನೆಯನ್ನೂ ರೂಪಿಸಿದರು. ಅದರಂತೆ ಮುಂದಿನ ಒಂದೇ ತಿಂಗಳಲ್ಲಿ ಅಫ್ಘಾನಿಸ್ತಾನದ ಮೇಲೆ ಅಮೆರಿಕದ ದಾಳಿ ಆರಂಭವಾಗಿ, ತಾಲಿಬಾನ್ ಸರ್ಕಾರ ಉರುಳಿಹೋಗಿ, ಅದರ ಹಾಗೂ ಅಲ್-ಖಯೀದಾ ನಾಯಕರು ಮತ್ತು ಕಾರ್ಯಕರ್ತರು ನೆಲೆ ಕಳೆದುಕೊಂಡಾಗ ಅವರಿಗೆ ಗಡಿನಾಡು ಪ್ರಾಂತ್ಯದಲ್ಲಿ ಅಮೆರಿಕನ್ ಸೇನೆಯ ಮೂಗಿನ ಕೆಳಗೇ ಗುಪ್ತನೆಲೆಗಳನ್ನು ಮುಷರ್ರಫ್ ಸರ್ಕಾರ ಒದಗಿಸಿತು. ಒಸಾಮಾ ಬಿನ್ ಲಾಡೆನ್ ಅಂತೂ ಪಾಕ್ ರಾಜಧಾನಿಗೆ ಹತ್ತಿರದ ಅಬ್ಬೊಟಾಬಾದ್​ನಲ್ಲಿ ಪಾಕ್ ಸೇನೆಯ ರಕ್ಷಣೆಯಲ್ಲೇ ಆರಾಮವಾಗಿದ್ದದ್ದು ನಿಮಗೆ ಗೊತ್ತೇ ಇದೆ.

ಅಫ್ಘಾನಿಸ್ತಾನದ ವಿರುದ್ಧವಲ್ಲದೆ ಅತ್ತ ಇರಾಕ್ ವಿರುದ್ಧವೂ ಅಮೆರಿಕ ‘ಭಯೋತ್ಪಾದನೆಯ ವಿರುದ್ಧದ ಸಮರ’ವನ್ನು ವಿಸ್ತರಿಸಿತಷ್ಟೇ. ಅದೂ ಒಂದು ದೊಡ್ಡ ಕಥೆಯೇ. ಪಾಕಿಸ್ತಾನದ ಗಡಿಗೆ ದೂರದಲ್ಲಿದ್ದು ಅಮೆರಿಕನ್ ಸೇನೆಯ ಕಣ್ಣುತಪ್ಪಿಸಿ ಆ ದೇಶಕ್ಕೆ ನುಸುಳಲಾಗದ ತಾಲಿಬಾನಿಗಳು ಮತ್ತು ಅಲ್-ಖಯೀದಾ ಭಯೋತ್ಪಾದಕರು ಸದ್ದಿಲ್ಲದೆ ಅಫ್ಘಾನಿಸ್ತಾನದ ಪಶ್ಚಿಮ ಗಡಿ ದಾಟಿ ಇರಾನ್ ಸೇರಿದರು. ತನ್ನ ನೆಲದಲ್ಲಿ ಅವರಿಗೆ ನಿಲ್ಲಲು ನೆಲೆ ನೀಡದ ಇರಾನ್ ಅವರು ತನ್ನ ಗಡಿ ದಾಟಿ ಇರಾಕ್ ಸೇರಿಕೊಳ್ಳಲು ಅವಕಾಶ ಮಾಡಿಕೊಟ್ಟಿತು. ಇರಾಕ್​ನ ಸದ್ದಾಂ ಹುಸೇನ್ ಅದಾಗಲೇ ಅಮೆರಿಕದ ಕಟ್ಟಾ ವಿರೋಧಿಯಾಗಿ ಬದಲಾಗಿದ್ದನಷ್ಟೇ. ಇರಾನ್ ಕ್ರಮದಿಂದಾಗಿ ಕಟ್ಟಾ ಅಮೆರಿಕನ್-ವಿರೋಧಿ ಭಯೋತ್ಪಾದಕರು ಕಟ್ಟಾ ಅಮೆರಿಕನ್-ವಿರೋಧಿ ಸದ್ದಾಂ ಹುಸೇನ್​ನ ನಾಡಿನಲ್ಲಿ ನೆಲೆ ನಿಂತರು.

1980-88ರ ಇರಾನ್-ಇರಾಕ್ ಸಮರದ ಕಾಲದಲ್ಲಿ ಸದ್ದಾಂಗೆ ಅಮೆರಿಕದಿಂದಲೇ ರಾಸಾಯನಿಕ ಅಸ್ತ್ರಗಳ ಪೂರೈಕೆಯಾಗಿತ್ತು. ಅದನ್ನವನು ಇರಾನ್​ನ ವಿರುದ್ಧವಲ್ಲದೆ ತನ್ನದೇ ಕುರ್ದ್ ಜನರ ಮೇಲೂ ಪ್ರಯೋಗಿಸಿ ಸಹಸ್ರಾರು ಜನರನ್ನು ಕೊಂದಿದ್ದ. ಅವನ ಅಣ್ವಸ್ತ್ರದ ಬಯಕೆಯನ್ನು ಇಸ್ರೇಲ್ 1981ರ ಜೂನ್​ನಲ್ಲೇ ಹೊಸಕಿಹಾಕಿತ್ತು. ಸೋವಿಯತ್ ವಿರುದ್ಧದ ಅಫ್ಘನ್ ಸಮರದಲ್ಲಿ ಪಾಕಿಸ್ತಾನವನ್ನು ತನ್ನ ಕಡೆಯೇ ಇರಿಸಿಕೊಳ್ಳುವ ಏಕೈಕ ಉದ್ದೇಶದಿಂದ ಆ ದೇಶದ ಅಣ್ವಸ್ತ್ರ ಕಾರ್ಯಕ್ರಮಗಳ ಬಗ್ಗೆ ಅಮೆರಿಕ ನಿರ್ಲಕ್ಷ್ಯ ತೋರಿ, ಅದು ಅಣ್ವಸ್ತ್ರಗಳನ್ನು ಗಳಿಸಿಕೊಳ್ಳಲು ಪರೋಕ್ಷವಾಗಿ ಕಾರಣವಾದ ಉದಾಹರಣೆ ನಮ್ಮ ಮುಂದೇ ಇದೆ.

ಪ್ರಯಾಣಿಕರ ವಿಮಾನಗಳನ್ನೇ ಅಸ್ತ್ರಗಳನ್ನಾಗಿ ಬಳಸಿ ಹಿಂದಿನ ಯಾವುದೇ ಶತ್ರುಗಳು ಎಸಗಲಾಗದಿದ್ದಷ್ಟು ಹಾನಿಯನ್ನು ಅಮೆರಿಕಕ್ಕೆ ಎಸಗಿ ಅದರ ಅಧ್ಯಕ್ಷ ಹಲವಾರು ಗಂಟೆಗಳ ಕಾಲ ಅಡಗಿಕೊಳ್ಳುವಂತೆ ಮಾಡಿದ ಅಲ್-ಖಯೀದಾ ಮತ್ತು ತಾಲಿಬಾನ್​ಗೆ ಇರಾಕ್​ನಲ್ಲಿರುವ ರಾಸಾಯನಿಕ ಅಸ್ತ್ರಗಳು ಹಾಗೂ ಬಹುಶಃ ಅಣ್ವಸ್ತ್ರಗಳು ಅಥವಾ ಅದರ ತಂತ್ರಜ್ಞಾನ ಸಿಕ್ಕಿಬಿಟ್ಟರೆ ಅವುಗಳ ವಿಧ್ವಂಸಕ ಸಾಮರ್ಥ್ಯ ಅದೆಷ್ಟು ಉಗ್ರವಾಗಬಹುದು? ಇರಾಕ್​ನಲ್ಲಿ ಯಾವುದೇ ಸಮೂಹ ವಿನಾಶಕ ಅಸ್ತ್ರಗಳಿಲ್ಲ ಎಂದು ವಿಶ್ವಸಂಸ್ಥೆಯ ಪರಿಶೀಲನಾ ಆಯೋಗವೇ ಹೇಳಿದರೂ ಅಮೆರಿಕ ಆ ದೇಶದ ಮೇಲೆ ಎರಗಲು ಇದು ಕಾರಣ. ಇರಾಕ್ ಅನ್ನು ಜಾಲಾಡಿ ತನ್ನ ವಿರುದ್ಧದ ಬಹುತೇಕ ಎಲ್ಲರನ್ನೂ, ಎಲ್ಲವನ್ನೂ ನಿಮೂಲಗೊಳಿಸುವುದರಲ್ಲಿ ಅಮೆರಿಕ ಯಶಸ್ವಿಯಾಯಿತು. ಆದರೆ ಅದೇ ಕೆಲಸ ಅಫ್ಘಾನಿಸ್ತಾನದಲ್ಲೇ ಆಗಲಿಲ್ಲ.

ಬಹಿರಂಗವಾಗಿ ಅಮೆರಿಕ ಜತೆ ಕೈಜೋಡಿಸುವ ನಾಟಕವಾಡುತ್ತಲೇ ಅದರ ವಿರೋಧಿಗಳಿಗೆ ರಹಸ್ಯ ನೆಲೆ, ಸಹಕಾರ ಎಲ್ಲವನ್ನೂ ಒದಗಿಸಿದ ಪಾಕಿಸ್ತಾನ, ಅಮೆರಿಕ ಆರಂಭಿಸಿದ ಭಯೋತ್ಪಾದನೆಯ ವಿರುದ್ಧದ ಸಮರವನ್ನು ವಿಫಲಗೊಳಿಸಿದ್ದು ಈಗ ಸರ್ವವಿದಿತ. ಇದು ಅಮೆರಿಕಕ್ಕೆ ತಿಳಿಯಲಿಲ್ಲವೆಂದಲ್ಲ. ರಿಪಬ್ಲಿಕನ್ ಅಧ್ಯಕ್ಷ ಜಾರ್ಜ್ ಬುಷ್ ಇರುವವರೆಗೆ ಹೇಗೋ ನಡೆದುಕೊಂಡು ಹೋಗುತ್ತಿತ್ತು. ಪರಿಸ್ಥಿತಿ ಹದಗೆಟ್ಟುಹೋದದ್ದು ಡೆಮೋಕ್ರಾಟಿಕ್ ಅಧ್ಯಕ್ಷ ಬರಾಕ್ ಹುಸೇನ್ ಒಬಾಮ ಶ್ವೇತಭವನ ಪ್ರವೇಶಿಸಿದ ಮೇಲೆ.

ಒಬಾಮ ಜಾಗತಿಕವಾಗಿ ಅಮೆರಿಕದ ರಕ್ಷಣಾ ಹಿತಾಸಕ್ತಿಗಳ ಬಗ್ಗೆ ಹಲವಾರು ಋಣಾತ್ಮಕ ನಡೆಗಳನ್ನು ಪ್ರದರ್ಶಿಸಿದರೆ ಉಪಾಧ್ಯಕ್ಷ ಜೋ ಬೈಡೆನ್ ಅವರದು ಇನ್ನೂ ಅಧ್ವಾನ. ಸೆನೇಟರ್ ಆಗಿದ್ದಾಗಲೇ ಮುಷರ್ರಫ್​ಗೆ ಸಲಹೆಗಳನ್ನು ಕೊಡುವ ಮೂಲಕ ಪಾಕಿಸ್ತಾನದ ಆಂತರಿಕ ರಾಜಕಾರಣದಲ್ಲಿ ಸಕ್ರಿಯ ಪಾತ್ರ ವಹಿಸುತ್ತಿದ್ದ ಬೈಡೆನ್ ರಿಪಬ್ಲಿಕನ್ ಸೆನೇಟರ್ ರಿಚರ್ಡ್ ಲ್ಯೂಗರ್ ಜತೆಗೂಡಿ, ಪಾಕಿಸ್ತಾನಕ್ಕೆ ಅಮೆರಿಕ ಅದಾಗಲೇ ನೀಡುತ್ತಿದ್ದ ಬೃಹತ್ ಮೊತ್ತದ ಸೇನಾ ಸಹಾಯಧನದ ಜತೆಗೆ ವರ್ಷಕ್ಕೆ 1.5 ಬಿಲಿಯನ್ ಡಾಲರ್​ಗಳ ಆರ್ಥಿಕ ಸಹಾಯಧನವನ್ನೂ ನೀಡುವ ವ್ಯವಸ್ಥೆ ಮಾಡಿದ್ದರು. ಅದಕ್ಕಾಗಿಯೇ ಅವರಿಬ್ಬರಿಗೂ ಪಾಕಿಸ್ತಾನ ತನ್ನ ಎರಡನೆಯ ಅತ್ಯುನ್ನತ ನಾಗರಿಕ ಗೌರವ ‘ಹಿಲಾಲ್-ಎ-ಪಾಕಿಸ್ತಾನ್’ (ಪಾಕಿಸ್ತಾನದ ಚಂದ್ರಮ) ನೀಡಿತ್ತು! ಬೈಡೆನ್​ರ ಅವಾಂತರಗಳು ಇಷ್ಟಕ್ಕೇ ನಿಲ್ಲುವುದಿಲ್ಲ. ಸತತ ಹತ್ತು ವರ್ಷಗಳವರೆಗೆ ಒಸಾಮಾ ಬಿನ್ ಲಾಡೆನ್​ಗಾಗಿ ಅಫ್ಘಾನಿಸ್ತಾನವನ್ನು ಜಾಲಾಡಿದ ಅಮೆರಿಕನ್ ಸೇನೆ ಕೊನೆಗೆ ಅವನನ್ನು 2011ರಲ್ಲಿ ಪಾಕಿಸ್ತಾನದ ರಾಜಧಾನಿಗೆ ಹತ್ತಿರದ ಅಬ್ಬೊಟಾಬಾದ್​ನಲ್ಲೇ, ಪಾಕ್ ಸೇನೆಯ ರಕ್ಷಣೆಯಲ್ಲೇ, ಪತ್ತೆಹಚ್ಚಿ; ಕೊಂದೂಹಾಕಿತು. ಇದು ‘ಹಿಲಾಲ್-ಎ-ಪಾಕಿಸ್ತಾನ್’ ಅಲಂಕೃತ ಅಮೆರಿಕನ್ ಉಪಾಧ್ಯಕ್ಷರಿಗೆ ಸಮ್ಮತವಾಗಲಿಲ್ಲ. ತಮ್ಮ ಸೇನೆಯ ಕಾರ್ಯಾಚರಣೆಯನ್ನು ಅವರು ಖಂಡಿಸಿದರು! ಅಮೆರಿಕದಿಂದ ಬಿಲಿಯನ್​ಗಟ್ಟಲೆ ಹಣವನ್ನು ಕೊಳ್ಳೆಹೊಡೆದು, ಅಮೆರಿಕದ ಪರಮವೈರಿಯನ್ನು ತನ್ನಲ್ಲಿಯೇ ಇಟ್ಟುಕೊಂಡು ಸಾಕುತ್ತಿದ್ದ ಪಾಕಿಸ್ತಾನಕ್ಕೆ ಬುದ್ಧಿ ಕಲಿಸುವ ಯಾವುದೇ ಕ್ರಮಕ್ಕೆ ಒಬಾಮ ಆಡಳಿತ ಮುಂದಾಗದಿದ್ದುದಕ್ಕೆ ಬೈಡೆನ್​ರ ವಿರೋಧವೂ ಬಹುಪಾಲು ಕಾರಣ. ಇದರ ಜತೆಗೆ, ಕರಾಚಿ ಬಂದರಿನಿಂದ ಪಾಕ್ ನೆಲದ ಮೂಲಕ ನ್ಯಾಟೋ ಸೇನೆ ಮತ್ತು ಶಸ್ತ್ರಾಸ್ತ್ರಗಳು ಅಫ್ಘಾನಿಸ್ತಾನ ತಲುಪದಂತೆ ಪಾಕಿಸ್ತಾನ ತಡೆಯೊಡ್ಡಿದಾಗ ಅದರ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗದ ನಿರ್ವೀರ್ಯತೆಯನ್ನೂ ಒಬಾಮ ಸರ್ಕಾರ ಪ್ರದರ್ಶಿಸಿತು. ಇದೆಲ್ಲವೂ ತಾಲಿಬಾನ್ ಬಲಗೊಳ್ಳಲು ಸಹಕಾರಿಯಾಯಿತು. ಪರಿಣಾಮವಾಗಿ ಒಬಾಮ ಅಧಿಕಾರ ತ್ಯಜಿಸುವ ಹೊತ್ತಿಗೆ ಅಫ್ಘಾನಿಸ್ತಾನದಲ್ಲಿ ಅಮೆರಿಕ ಮಾಡಿದ್ದೆಲ್ಲವೂ ಹೊಳೆಯಲ್ಲಿ ಹುಣಿಸೆಹಣ್ಣು ತೇಯ್ದಂತಾಗಿ ಅಫ್ಘನ್ ರಾಜಕಾರಣದಲ್ಲಿ ನಿರ್ಣಾಯಕ ಪಾತ್ರ ವಹಿಸುವ ಮಟ್ಟಕ್ಕೆ ತಾಲಿಬಾನ್ ಬೆಳೆದುನಿಂತಿತ್ತು.

ಒಂದು ನಿರರ್ಥಕ ಸಂಗ್ರಾಮದಲ್ಲಿ ಅಮೆರಿಕನ್ ಸೈನಿಕರನ್ನು ಬಲಿಗೊಡಲಾಗುತ್ತಿದ್ದುದನ್ನು ನಿಲ್ಲಿಸುವ ನಿರ್ಧಾರ ಮಾಡಿದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಾಲಿಬಾನನ್ನು ಮಾತುಕತೆಗೆ ಕರೆದು, ಅಫ್ಘನ್ ಸರ್ಕಾರದೊಂದಿಗೆ ಶಾಂತಿಯುತವಾಗಿ ಅಧಿಕಾರ ಹಂಚಿಕೊಳ್ಳಲು ಸಲಹೆ ನೀಡಿದರು. ತಾನು ವಿಜಯ ಸಾಧಿಸಿದೆ ಎಂದು ತಾಲಿಬಾನ್ ಬೀಗಿದ ಗಳಿಗೆ ಅದು. ಅದನ್ನು ತಾಲಿಬಾನ್ ನಾಯಕರಲ್ಲೊಬ್ಬನಾದ ಹಿಬಾತುಲ್ಲಾ ಅಖುಂದ್​ಜಾದಾ 2018ರ ಆಗಸ್ಟ್ 18ರಂದು ವ್ಯಕ್ತಪಡಿಸಿದ್ದು ಹೀಗೆ- ‘ಆಕ್ರಮಣಕಾರಿ ಕಾಫಿರ್ ಸೇನೆಗಳು ತಮ್ಮೆಲ್ಲ ಹೋರಾಡುವ ಸ್ಥೈರ್ಯವನ್ನು ಕಳೆದುಕೊಂಡಿವೆ, ಅವರ ರಣತಂತ್ರಗಳು ವಿಫಲಗೊಂಡಿವೆ, ಆಧುನಿಕ ತಂತ್ರಜ್ಞಾನ ಮತ್ತು ಶಸ್ತ್ರಾಸ್ತ್ರಗಳು ನಿರುಪಯುಕ್ತವಾಗಿವೆ, ದುರಹಂಕಾರಿ ಅಮೆರಿಕನ್ ಸೇನಾಧಿಪತಿಗಳು ಅಫ್ಘನ್ ರಾಷ್ಟ್ರದ ಹಿರಿಮೆಗೆ ತಲೆಬಾಗುವ ಒತ್ತಡಕ್ಕೊಳಗಾಗಿದ್ದಾರೆ.’

ಎರಡು ವರ್ಷಗಳ ಮಾತುಕತೆಗಳ ಪರಿಣಾಮವಾಗಿ ಕಳೆದ ವರ್ಷ ಅಮೆರಿಕ ಮತ್ತು ತಾಲಿಬಾನ್​ಗಳ ನಡುವೆ ಆದ ಒಪ್ಪಂದದ ಪ್ರಕಾರ 2021 ಮೇ 1ರಂದು ಅಮೆರಿಕನ್ ಸೇನೆ ಅಫ್ಘಾನಿಸ್ತಾನದಿಂದ ಹೊರನಡೆಯುವಂತೆಯೂ, ತಾಲಿಬಾನ್ ಹಿಂಸಾಮಾರ್ಗವನ್ನು ತೊರೆದು, ಅಶ್ರಫ್ ಘನಿ ನೇತೃತ್ವದ ಅಫ್ಘನ್ ಸರ್ಕಾರದೊಂದಿಗೆ ಶಾಂತಿಯುತವಾಗಿ ಅಧಿಕಾರ ಹಂಚಿಕೊಳ್ಳಬೇಕೆಂದೂ ತೀರ್ವನವಾಯಿತು. ನಂತರ ಶ್ವೇತಭವನ ಪ್ರವೇಶಿಸಿದ ಜೋ ಬೈಡೆನ್ ಸೇನಾವಾಪಸಾತಿಯ ದಿನಾಂಕವನ್ನು ಸೆಪ್ಟೆಂಬರ್ 11ಕ್ಕೆ ಮುಂದೂಡಿದರು. ಇದಂತೂ ಮೂರ್ಖತನದ ನಿರ್ಧಾರ. ಅಮೆರಿಕ ಮೇಲೆ ದಾಳಿಯೆಸಗಿದ ವಾರ್ಷಿಕೋತ್ಸವದ ಜತೆಗೆ ಅಮೆರಿಕನ್ ಸೇನೆ ಓಡಿಹೋದದ್ದರ ವಾರ್ಷಿಕೋತ್ಸವವನ್ನೂ ಮುಂದೆ ಆಚರಿಸಬಹುದಾದ ಡಬಲ್ ಸಂಭ್ರಮದ ಅವಕಾಶ ತಾಲಿಬಾನ್ ಮತ್ತು ಅಲ್-ಖಯೀದಾಗೆ! ಸದ್ಯ, ತಮ್ಮ ತಪ್ಪನ್ನು ಅರಿತುಕೊಂಡ ಬೈಡೆನ್, ಏಪ್ರಿಲ್​ನಲ್ಲಿ ಆರಂಭವಾಗಿರುವ ಸೇನಾವಾಪಸಾತಿಯನ್ನು ಆಗಸ್ಟ್ 31ಕ್ಕೆ ಪೂರ್ಣಗೊಳಿಸುವುದಾಗಿ ಘೊಷಿಸಿದರು.

ಅಮೆರಿಕವೇನೋ ಒಪ್ಪಂದದ ಪ್ರಕಾರ ಸೇನೆಯನ್ನು ಹಿಂತೆಗೆದುಕೊಳ್ಳುತ್ತಿದೆ, ತನ್ನ ಸೇನಾನೆಲೆಗಳನ್ನು ಅಫ್ಘನ್ ಸರ್ಕಾರದ ವಶಕ್ಕೆ ಬಿಟ್ಟುಕೊಟ್ಟಿದೆ. ಆದರೆ ತಾಲಿಬಾನ್ ತಾನು ಒಪ್ಪಂದಕ್ಕೆ ಬದ್ಧವಾಗಿಲ್ಲದುದರ ಸೂಚನೆಗಳನ್ನು ಎಗ್ಗಿಲ್ಲದೆ ನೀಡುತ್ತಿದೆ. ಮೂರು ತಿಂಗಳ ಹಿಂದೆ ಅಮೆರಿಕನ್ ಸೇನೆಯ ವಾಪಸಾತಿ ಆರಂಭವಾದಂದಿನಿಂದ ಸೇನಾಕಾರ್ಯಾಚರಣೆಗಳನ್ನು ಎಲ್ಲೆಡೆ ವಿಸ್ತರಿಸಿದ ಅದು ಇಂದು ದೇಶದ ಶೇಕಡ 85 ಪ್ರದೇಶದ ಮೇಲೆ ತನ್ನ ಹಿಡಿತ ಸಾಧಿಸಿದ ವರದಿಯಿದೆ. ಶರಣಾದ ಅಫ್ಘನ್ ಸೇನೆಯ 22 ಕಮಾಂಡೋಗಳು ಸೇರಿದಂತೆ ಸಾವಿರಾರು ಜನರನ್ನು ಕೊಂದಿದೆ, ಅಧ್ಯಕ್ಷ ಘನಿ ಮತ್ತವರ ಸರ್ಕಾರೀ ಪ್ರಮುಖರು ಬಕ್ರೀದ್ ನಮಾಜ್ ಸಲ್ಲಿಸುತ್ತಿದ್ದಾಗಲೇ ಅಧ್ಯಕ್ಷರ ನಿವಾಸದ ಮೇಲೆ ರಾಕೆಟ್ ದಾಳಿ ನಡೆಸಿದೆ. ತನ್ನ ಹಿಡಿತದ ಪ್ರದೇಶಗಳಲ್ಲಿರುವ ಹದಿನೈದು ದಾಟಿದ ಯುವತಿಯರು ಮತ್ತು ನಲವತೆôದರೊಳಗಿರುವ ವಿಧವೆಯರ ವಿವರಗಳನ್ನು ನೀಡುವಂತೆ ಸಾರ್ವಜನಿಕರಿಗೆ ಕಟ್ಟಾಜ್ಞೆ ಹೊರಡಿಸಿದೆ. ಅಂದರೆ ಆ ಮಹಿಳೆಯರ ಸ್ವಾತಂತ್ರ್ಯವನ್ನು ಮೊಟಕುಗೊಳಿಸಿ ಅವರ ದೈನಂದಿನ ಬದುಕನ್ನು ನಿಯಂತ್ರಿಸುವ ಯೋಜನೆಯ ಮೊದಲ ಹಂತ ಇದು. ಹಲವೆಡೆ ಮಹಿಳೆಯರ ಮೇಲೆ ತಾಲಿಬಾನಿಗಳು ದೌರ್ಜನ್ಯವೆಸಗುತ್ತಿರುವ ವರದಿಗಳೂ ಬರುತ್ತಿವೆ. ಅಂದರೆ ಅಫ್ಘಾನಿಸ್ತಾನ ಇತಿಹಾಸದಲ್ಲಿ ಹಿಮ್ಮುಖವಾಗಿ ಚಲಿಸತೊಡಗಿದೆ ಮತ್ತು ಆ ಚಲನೆ ಗಾಬರಿ ಹುಟ್ಟಿಸುವಷ್ಟು ವೇಗವಾಗಿದೆ. ನಾಗರಿಕ ಜಗತ್ತು ಗಂಭೀರವಾಗಿ ಪರಿಗಣಿಸಬೇಕಾದ ಬೆಳವಣಿಗೆಯಿದು.

(ಲೇಖಕರು ರಾಜಕೀಯ ವಿಶ್ಲೇಷಕರು, ಕನ್ನಡ ಕತೆಗಾರರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net