ವಿವಾಹಕ್ಕೆ ವಯಸಿನ ಹಂಗೇಕೆ?

lalitha jan 20 2020
Published on

ಸಂಗಾತಿಯನ್ನು ಕಳೆದುಕೊಂಡು ಬದುಕಿನ ಸಂಜೆಯಲ್ಲಿ ಒಂಟಿಯಾಗುವ ಜೀವ ತನ್ನ ಅಂತಿಮ ದಿನಗಳಲ್ಲಿ ಜತೆಯಾಗಲು ಮದುವೆಯಾದರೆ ಕುಟುಂಬ ಸೇರಿದಂತೆ ‘ಸಮಾಜ’ ಮುಸುಮುಸು ನಗುವುದು ಸಾಮಾನ್ಯ. ಅದರಲ್ಲಿಯೂ ವೃದ್ಧೆಯೊಬ್ಬಳ ಮದುವೆ ಎಂದರೆ ಅದು ನುಂಗಲಾರದ ತುತ್ತೇ. ಆದರೆ ಕೇರಳದ ವೃದ್ಧಾಶ್ರಮದಲ್ಲಿ ಪರಿಚಯವಾಗಿ ವಿವಾಹವಾದ ವೃದ್ಧ ಜೋಡಿಯ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಮೆಚ್ಚುಗೆ ವ್ಯಕ್ತವಾಗಿರುವುದು ಬದಲಾಗುತ್ತಿರುವ ಸಮಾಜಕ್ಕೆ ಹಿಡಿದ ಕನ್ನಡಿ. ವಯಸ್ಸಿಗೂ, ಮದುವೆಗೂ ಸಂಬಂಧ ಕಲ್ಪಿಸುವುದು ಸರಿಯಲ್ಲ ಎಂಬ ಸಂದೇಶವನ್ನು ಈ ಘಟನೆ ಎತ್ತಿ ತೋರಿಸಿದೆ.

ಅರವತ್ತೆರಡು ವರ್ಷದ ವ್ಯಕ್ತಿ ನನ್ನ ಮುಂದೆ ಮ್ಲಾನವದನರಾಗಿ ಕುಳಿತಿದ್ದರು. ಅವರ ವಯಸ್ಸು ಅಷ್ಟು ಎಂದು ನನಗೆ ನಂಬಲಾಗಲಿಲ್ಲ. ಕಪ್ಪು ಕ್ರಾಪು, ಕಣ್ಣಿಗೆ ಕನ್ನಡಕವಿಲ್ಲ, ಹೆಚ್ಚು ದಪ್ಪವಲ್ಲದ, ಸಣಕಲೂ ಅಲ್ಲದ ಎತ್ತರದ ಆಸಾಮಿ. ‘ನಾನು ಮಾಡಬಾರದ ತಪ್ಪು ಮಾಡಿದ್ದೀನೆಂದು ನನ್ನ ಮಕ್ಕಳು ನನ್ನನ್ನು ತಿರಸ್ಕರಿಸುತ್ತಿದ್ದಾರೆ ...’ ನಿಟ್ಟುಸಿರಿನೊಂದಿಗೆ ಹೇಳಿದರು! ಅವರ ಕಥೆ ಹೀಗಿದೆ.

ಚಿಕ್ಕಮಗಳೂರಿನ ಹತ್ತಿರದ ಹಳ್ಳಿಯಲ್ಲಿರುವವರು. ತೋಟ ಮನೆ ಎಲ್ಲವೂ ಭವ್ಯವಾಗಿದೆ. ಇಬ್ಬರು ಮಕ್ಕಳು. ಮಗ ಬೆಂಗಳೂರಿನ ಎಂಎನ್​ಸಿಯಲ್ಲಿ ಉದ್ಯೋಗಿ. ಸ್ವಂತ ಮನೆಯನ್ನೂ ಮಾಡಿದ್ದಾನೆ. ಅವನಿಗೆ ಎರಡು ವರ್ಷಗಳಿಂದ ಯಾವ ಹೆಣ್ಣೂ ಸೆಟ್ ಆಗುತ್ತಿಲ್ಲ. ಮಗಳು ಮದುವೆಯಾಗಿ ಮುಂಬೈಯಲ್ಲಿ ಇದ್ದಾಳೆ. ಒಂದು ವರ್ಷದ ಹಿಂದೆ ಇವರ ಹೆಂಡತಿ ಬಚ್ಚಲಮನೆಯಲ್ಲಿ ಜಾರಿ ಬಿದ್ದು ಮರಣ ಹೊಂದಿದರು. ಇವರು ಏಕಾಂಗಿಯಾದರು. ಮಗಳ ಮನೆಯಲ್ಲಿರಲು ಸಂಕೋಚ. ಮಗ ಬೆಂಗಳೂರಿಗೆ ಕರೆಯುತ್ತಾನೆ. ನಿಶ್ಚಿಂತೆಯೇ ಹಾಸುಹೊಕ್ಕಾಗಿರುವ ತಮ್ಮೂರಿನಿಂದ ಕುದಿಯುತ್ತಿರುವ ಬೆಂಗಳೂರಿಗೆ ಬಂದರೆ ಇವರಿಗೆ ಉಸಿರುಕಟ್ಟುತ್ತದೆ.

ಆರು ತಿಂಗಳು ಅಳೆದೂ ಸುರಿದೂ ಚಿಂತಿಸಿ, ಕಡೆಗೆ ಮಕ್ಕಳಿಗೆ ವಿಷಯ ತಿಳಿಸಿ, ಬಡಹುಡುಗಿಯೊಬ್ಬರನ್ನು ಮದುವೆಯಾದರು. ನಿರೀಕ್ಷೆಯಂತೆ ಮಕ್ಕಳು ಮದುವೆಗೆ ಬರಲಿಲ್ಲ. ಮಗನಿಗೆ ಮದುವೆ ಮಾಡುವುದನ್ನು ಬಿಟ್ಟು ಇವನೇ ಮದುವೆಯಾದ ಎಂದು ನೆಂಟರು, ಊರವರು ಆಡಿಕೊಂಡರು. ಮಕ್ಕಳಂತೂ ಇವರಿಗೆ ಫೋನ್ ಮಾಡುವುದನ್ನೂ ಬಿಟ್ಟಿದ್ದಾರೆ. ಇವರೀಗ ಕಂಗಾಲಾಗಿದ್ದಾರೆ. ನೊಂದು ನುಡಿಯುತ್ತಾರೆ ‘ಮಕ್ಕಳಿಗೆ ನನ್ನ ಕಷ್ಟ ಅರ್ಥವೇ ಆಗುವುದಿಲ್ಲ. ಹಳೆಕಾಲದ ದೊಡ್ದ ತೊಟ್ಟಿ ಮನೆಯಲ್ಲಿ ನಾನೊಬ್ಬನೇ ಪಿಶಾಚಿಯಂತೆ ಹೇಗಿರಲಿ? ಇವರೇನೋ ಅಲ್ಲಿಗೆ ಬಾ, ಇಲ್ಲಿಗೆ ಬಾ ಅನ್ನುತ್ತಾರೆ. ಹುಟ್ಟಿದಾಗಿನಿಂದ ಹಳ್ಳಿಯಲ್ಲಿ ಬದುಕಿದವನಿಗೆ ಪಟ್ಟಣ ಒಗ್ಗುತ್ತದೆಯೇ? ನೆಂಟರೇನೋ ಕೊಂಕು ನುಡಿಯುತ್ತಾರೆ, ನಾನದಕ್ಕೆ ಕೇರ್ ಮಾಡುವುದಿಲ್ಲ. ಆದರೆ ಮಕ್ಕಳೂ ಹೀಗಾಡುತ್ತಾರಲ್ಲ? ಇದು ಮಾಡಬಾರದ ತಪ್ಪೇ...’?

ಅವರು ಹೇಳಿದ್ದು ನಿಜ. ಅವರು ಯಾವ ತಪ್ಪೂ ಮಾಡಿಲ್ಲ. ಆದರೆ ಮಕ್ಕಳನ್ನೂ ಸೇರಿಸಿದಂತೆ ಸಮಾಜ ಹೀಗೇಕೆ ಪ್ರತಿಕ್ರಿಯೆಯನ್ನು ತೋರುತ್ತದೆ? ಇದಕ್ಕೆ ನಮ್ಮ ಮೈಂಡ್ ಸೆಟ್​ಗಳನ್ನು ಒಮ್ಮೆ ವಿಶ್ಲೇಷಣೆಗೆ ಒಡ್ಡಿಕೊಳ್ಳಬೇಕಾಗುತ್ತದೆ. ಪಾಶ್ಚಾತ್ಯರಲ್ಲಿ ಮದುವೆ ಎನ್ನುವುದು ತೀರಾ ವೈಯುಕ್ತಿಕವಾದ ವ್ಯವಹಾರ. ಹಿಂದೆಲ್ಲಾ ಪತ್ರಿಕೆಗಳಲ್ಲಿ ಸುದ್ದಿಗಳು ಬರುತ್ತಿದ್ದವು ‘ಅಮೆರಿಕದ ಯಾವುದೋ ಒಂದು ನಗರದಲ್ಲಿ 82 ವಯಸ್ಸಿನ ಪುರುಷ 67ವಯಸ್ಸಿನ ಮಹಿಳೆ ಮದುವೆಯಾದರು’ ಎಂದು. ಆಗೆಲ್ಲಾ ನಾವು ಓದಿ ಓದಿ ನಕ್ಕಿದ್ದಿದೆ. ಏಕೆಂದರೆ ಮದುವೆ ಮತ್ತು ಮದುಮಕ್ಕಳು ಎಂದರೆ ನಮ್ಮ ಕಣ್ಣಮುಂದೊಂದು ಮಾದರಿ ಬರುತ್ತದೆ. ಆ ಮಾದರಿಯ ಚಿತ್ರದಲ್ಲಿ 20ರಿಂದ 25ರ ಒಳಗಿನ ತರುಣಿ, 25ರಿಂದ 30ರ ಒಳಗಿನ ಯುವಕ, ಮದುಮಕ್ಕಳ ವೇಷದಲ್ಲಿರುತ್ತಾರೆ. ಆ ಜಾಗದಲ್ಲಿ ವೃದ್ಧ ವೃದ್ಧೆಯರನ್ನು ಕಲ್ಪಿಸಿಕೊಂಡರೆ ನಗುವೇ ತಾನೆ? ಜತೆಗೆ, ನಮ್ಮ ಸಮಾಜದಲ್ಲಿ ಮದುವೆಯೆನ್ನುವುದು ಕೇವಲ ಗಂಡು ಹೆಣ್ಣಿನ ನಡುವೆ ನಡೆಯುವುದಲ್ಲ. ಎರಡು ಕುಟುಂಬಗಳ ನಡುವೆ ಮತ್ತು ಆ ಕುಟುಂಬಗಳ ಸಕಲ ಬಂಧು ವರ್ಗದವರ ಮುಂದೆ ನಡೆಯುವ ಸಮಾರಂಭ. ಮದುವೆಯೆನ್ನುವುದು ವೈಯುಕ್ತಿಕವೂ ಹೌದು, ಕೌಟುಂಬಿಕವೂ ಹೌದು, ಸಾಮಾಜಿಕವೂ ಹೌದು. ಇಂದಿನ ಜೀವನ ಶೈಲಿ ಎಷ್ಟೇ ವೇಗವಾಗಿ ಬದಲಾಗುತ್ತಿದ್ದರೂ ಈ ಮದುವೆಯೆನ್ನುವ ವಿಚಾರದಲ್ಲಿ ಮಾತ್ರ ನಮ್ಮ ನಂಬಿಕೆಗಳು, ಆಸಕ್ತಿಗಳು, ಮತ್ತು ತಿಳಿವಳಿಕೆಗಳು ಅಕ್ಷರಶಃ ಇನ್ನೂ ಹಿಂದಿನಂತೆಯೇ ಇದೆ. ಪ್ರೇಮ ವಿವಾಹಗಳು ಸಹ ಎಲ್ಲೋ ಒಂದೆರಡು ಅಪವಾದಗಳನ್ನು ಬಿಟ್ಟರೆ, ಹೀಗೆಯೇ ಹಿರಿಯರ ಸಮ್ಮುಖದಲ್ಲೇ ನಡೆಯುತ್ತವೆ. ಪ್ರೇಮಿಸಲು ಹುಡುಗ ಹುಡುಗಿಗೆ ಸ್ವಾತಂತ್ರ್ಯವಿದೆ. ಆದರೆ ಅವರ ಮದುವೆಯನ್ನು ಮಾಡುವುದು ಮಾತ್ರ ಎರಡು ಕುಟುಂಬಗಳ ಹಿರಿಯರೇ. ಕುಟುಂಬದವರಿಲ್ಲದೇ, ಬಂಧುಬಳಗದವರಿಲ್ಲದೇ ಹೀಗೆ ವೃದ್ಧರಿಬ್ಬರೇ ದೇವಾಲಯದಲ್ಲಿ ಮದುವೆಯಾದರು ಎಂದರೆ ನಗುವೇ ತಾನೆ? ಈ ಎಲ್ಲ ಹಿನ್ನೆಲೆಯಲ್ಲಿ ವಯಸ್ಸಾದವರ ಮದುವೆ ಅಪಶಬ್ದದ ಹಾಗೆ ಕೇಳಿಸುತ್ತದೆ. ಆದರೂ ಅಲ್ಲೊಂದು ಇಲ್ಲೊಂದು ಮದುವೆ ನಡೆದ ಸುದ್ದಿಗಳು ಕಿವಿಗೆ ಬೀಳುತ್ತಿರುತ್ತದೆ. ವಿವಾಹಕ್ಕೆ ವಯಸ್ಸಿನ ಹಂಗು ಬೇಕೇ? ಎನ್ನುವ ಪ್ರಶ್ನೆಯನ್ನು ಇಂದಿನ ವಾಸ್ತವಿಕ ನೆಲೆಯಲ್ಲಿ ಚಿಂತಿಸುವುದಾದರೆ ‘ಬೇಡ’ ಎಂದೇ ತೀರ್ವನಿಸಬೇಕಾಗುತ್ತದೆ. ನಿಧಾನಕ್ಕೆ ನಮ್ಮ ಸಮಾಜ ಒಂದು ವಿಚಿತ್ರ ತಿರುಗಣಿಗೆ ಬಂದು ನಿಲ್ಲುತ್ತಿರುವುದರ ಸುಳಿವು ಕೆಲವರಿಗಾದರೂ ಸಿಕ್ಕುತ್ತಿದೆ. ಮುಂದೆ ಒಂದು ಕಾಲಘಟ್ಟದಲ್ಲಿ ಎಲ್ಲರೂ ಆ ವಿಚಿತ್ರ ತಿರುಗಣಿಯಲ್ಲಿ ಬೀಳುವ ಸಾಧ್ಯತೆ ಇಲ್ಲದೇ ಇಲ್ಲ.

ಇದಕ್ಕೆರಡು ಉದಾಹರಣೆಗಳನ್ನು ಕೊಡುತ್ತೇನೆ. ಇದೇ ಪತ್ರಿಕೆಯಲ್ಲಿ ನಾನು ಬರೆಯುವ ‘ನನ್ನದೊಂದು ಕಥೆ’ ಅಂಕಣದಲ್ಲಿ ಒಂದು ಪತ್ರಕ್ಕೆ ಉತ್ತರಿಸಿದ್ದೆ. ಆ ಪತ್ರದ ವಿಷಯ - ಆಕೆಗೆ 35 ವರ್ಷ. ತಂದೆ ತಾಯಿ ಇಲ್ಲ. ಅಣ್ಣ, ಅತ್ತಿಗೆ ಮತ್ತು ಮಕ್ಕಳ ಜತೆ ಇದ್ದಾಳೆ. ತಕ್ಕಮಟ್ಟಿಗಿನ ಉದ್ಯೋಗ ಮತ್ತು ಸಂಪಾದನೆ ಅವಳಿಗಿದೆ.

ಇವಳಿಗೆ ಮದುವೆ ಮಾಡಿದರೆ ಆ ಸಂಪಾದನೆ ತನ್ನ ಕೈಬಿಡುತ್ತದೆ ಎನ್ನುವ ಕಾರಣಕ್ಕೆ ಅಣ್ಣ ಮಹಾಶಯ ಬಂದ ಗಂಡುಗಳಿಗೆಲ್ಲಾ ಒಂದೊಂದು ಹೆಸರಿಟ್ಟು ಮದುವೆ ತಪ್ಪಿಸುತ್ತಿದ್ದಾನೆ... ನಾನು ಆಕೆಯೇ ತನಗೆ ಗಂಡು ಹುಡುಕಿಕೊಳ್ಳಬಹುದಾದ ಸಾಧ್ಯತೆಗಳ ಬಗ್ಗೆ ಉತ್ತರಿಸಿದ್ದೆ. ಇದು ಪ್ರಕಟವಾದ ಒಂದೇ ವಾರದೊಳಗೆ ನನ್ನ ಇ-ಮೇಲ್​ಗೆ 40 ಪತ್ರಗಳು ಬಂದವು. ಎಲ್ಲವೂ ಪುರುಷರು ಬರೆದದ್ದು.

ಅವುಗಳ ಒಕ್ಕಣೆ - ತಮಗೆ 40, 42, 43, 44 ಹೀಗೆ ವಯಸ್ಸಾಗಿದೆಯೆಂದೂ ತಮಗೆ ಸರಿಯಾದ ಕನ್ಯೆ ಇನ್ನೂ ದೊರೆತಿಲ್ಲವೆಂದೂ, ಈ 35ರ ಮಹಿಳೆ ಒಪ್ಪುವುದಾದರೆ ತಾವು ಅವಳನ್ನು ವಿವಾಹವಾಗುವುದಾಗಿಯೂ - ಬರೆದಿದ್ದರು! ಮತ್ತೊಂದು ನನ್ನ ಅನುಭವ ಹೀಗಿದೆ - ಇದೇ ಅಂಕಣದ ಮತ್ತೊಂದು ಉತ್ತರವಾಗಿ 40 ವರ್ಷದ ವಿಧವೆಯ ಬಗ್ಗೆ ಬರೆದದ್ದನ್ನು ಓದಿ, ಒಂದು ಕುಟುಂಬ ನಮ್ಮ ಕೌನ್ಸಿಲಿಂಗ್ ಸೆಂಟರ್ ಹುಡುಕಿಕೊಂಡು ಬಂದಿದ್ದರು. ಸಾಕಷ್ಟು ಸಿರಿವಂತರು ಎಂದು ನೋಡಿದರೇ ತಿಳಿಯುತ್ತಿತ್ತು. ಗಂಡ, ಹೆಂಡತಿ, ಮಗ ಮತ್ತು ಅವನ ಚಿಕ್ಕದೊಂದು ಮಗು ಇಷ್ಟೂ ಜನ ನನ್ನ ಛೇಂಬರಿಗೆ ಬಂದು ಮೇಜಿನ ಮೇಲೆ ಹಣ್ಣು, ಹೂವುಗಳನ್ನು ಇಟ್ಟು, ‘ಕಳೆದ ವಾರ ನೀವು ಬರೆದಿದ್ದರಲ್ಲ, ಆ ಹುಡುಗಿಯನ್ನು ನೀವು ಫೋನ್ ಮಾಡಿ ಕರೆಸಿದರೆ, ನಮ್ಮ ಈ ಹುಡುಗನಿಗೆ ಇಲ್ಲೇ ವೀಳ್ಯದೆಲೆ ಶಾಸ್ತ್ರ ಮಾಡಿಕೊಂಡು, ಮುಂದಿನವಾರವೇ ನಾವೇ ಖರ್ಚುಹಾಕಿ ಮದುವೆ ಮಾಡಿಕೊಳ್ಳುತ್ತೇವೆ. ನಮ್ಮ ಸೊಸೆ ಆತ್ಮಹತ್ಯೆ ಮಾಡಿಕೊಂಡು ಸತ್ತು ಹೋದಳು, ಪಾಪ ಮಗು ತಾಯಿಯಿಲ್ಲದ ತಬ್ಬಲಿಯಾಗಿದೆ ನೀವು ಮನಸ್ಸು ಮಾಡಿ ಈ ಮದುವೆ ಮಾಡಿಸಿ...’ ಎಂದಾಗ ಕಣ್ಣುಕಣ್ಣು ಬಿಡುವ ಸರದಿ ನನ್ನದಾಯಿತು. ಆಕೆ ಯಾವ ಊರಿನವಳೋ ನನಗೆ ಗೊತ್ತಿಲ್ಲವೆಂದೂ, ಉತ್ತರ ಬರೆದ ಮೇಲೆ ನಾನು ಆ ಪತ್ರವನ್ನು ಹರಿದುಹಾಕಿಬಿಡುತ್ತೇನೆಂದೂ ಸತ್ಯ ತಿಳಿಸಿ ಅವರನ್ನು ಕಳಿಸುವ ಹೊತ್ತಿಗೆ ನನಗೆ ಸಾಕುಸಾಕಾಯಿತು.

ಇವೆಲ್ಲಾ ಘಟನೆಗಳು ಏನನ್ನು ಸಾಂಕೇತಿಸುತ್ತಿವೆ ಎನ್ನುವುದು ಸ್ಪಷ್ಟವಾಗಿ ತಿಳಿಯುತ್ತದೆ. ಸಮಾಜದಲ್ಲಿ ಹೆಣ್ಣುಗಳ ಸಂಖ್ಯೆ ಇಳಿಮುಖವಾಗುತ್ತಿದೆ. ಮತ್ತು ಹೆಣ್ಣು ಮಕ್ಕಳು ಬಡ, ಮಧ್ಯಮ ಮತ್ತು ಶ್ರೀಮಂತರೆನ್ನದೇ ಒಳ್ಳೆಯ ವಿದ್ಯಾವಂತರಾಗಿಯೂ ಉದ್ಯೋಗಸ್ಥರಾಗಿಯೂ ರೂಪುಗೊಳ್ಳುತ್ತಿದ್ದಾರೆ. ಇದು ಮಹಿಳೆಯರ ದೃಷ್ಟಿಯಿಂದ ತುಂಬಾ ಆರೋಗ್ಯಕರ ಬೆಳವಣಿಗೆಯೇ! ಆದರೆ ಇದರ ಜತೆಜತೆಯಲ್ಲಿಯೇ ತರುಣಿಯರಿಗೂ ಸಂಗಾತಿಯ ವಿಷಯದಲ್ಲಿ ಆಯ್ಕೆಯ ಸ್ವಾತಂತ್ರ್ಯ ಬೇಕೆನ್ನುವ ಇಚ್ಛೆ ಬಲವಾಗುತ್ತಿದೆ. ಇದೂ ಸಹ ಸಹಜವೇ. ಮೊನ್ನೆ ಒಬ್ಬರು ವರನ ಪಿತರು ನನ್ನೊಡನೆ ಇದೇ ವಿಷಯಕ್ಕಾಗಿ ವಾದವನ್ನೇ ನಡೆಸಿಬಿಟ್ಟರು. ‘ನೀವು ಏನೇ ಹೇಳಿ, ಈಗಿನ ತಂದೆತಾಯಿಗಳಿಗೆ ತಮ್ಮ ಹೆಣ್ಣು ಮಕ್ಕಳಿಗೆ ಮದುವೆ ಮಾಡಬೇಕೆನ್ನುವ ಜವಾಬ್ದಾರಿಯೇ ಇರುವುದಿಲ್ಲ. ನನ್ನ ಮಗನಿಗೆ 42 ವರ್ಷ ಇದುವರೆವಿಗೆ ನೂರು ಹುಡುಗಿಯರನ್ನು ನೋಡಿದ್ದೇವೆ. ಕೆಲವರು ಹುಡುಗಿ ಒಪ್ಪಿದರೂ ತಂದೆತಾಯಿಯರೇ ಬೇಡವೆನ್ನುತ್ತಾರೆ’! ಯಾಕೆ ಬೇಡ ಎನ್ನಬಾರದು? ನೂರು ಹುಡುಗಿಯರನ್ನು ನೋಡುವ ಆಯ್ಕೆ ನಿಮಗಿದ್ದರೆ, ನೂರು ಹುಡುಗರನ್ನು ನೋಡುವ ಆಯ್ಕೆ ಅವರಿಗೂ ಇರಬಹುದಲ್ಲ? ಈ ವಿಚಾರದಲ್ಲಿ ಪುರುಷ ಪ್ರಧಾನ ಸಮಾಜ ಮರುಚಿಂತಿಸಬೇಕಾದ ಅಗತ್ಯ ಇಂದಿನ ಕಾಲಘಟ್ಟಕ್ಕೆ ತುಂಬಾ ಇದೆ. ಈಗ ನನ್ನಲ್ಲಿಗೆ ಬಂದ ವಯೋವೃದ್ಧರ ವಿಚಾರಕ್ಕೆ ಬರುತ್ತೇನೆ. 62ನೇ ವಯಸ್ಸಿಗೆ ಮದುವೆಯಾದದ್ದು ಅವರ ತಪ್ಪೆ? ಉತ್ತರ ನಿಮಗೆ ಬಿಟ್ಟದ್ದು...

ಆದ್ಯತೆಗಳು ಬೇರೆ ಬೇರೆ

ಮದುವೆಗೆ ಸಂಬಂಧಿಸಿದಂತೆ ಮನೋವಿಜ್ಞಾನ ಬಹಳ ವರ್ಷ ನಡೆಸಿದ ಅಧ್ಯಯದ ಸಾರಾಂಶ ಈ ರೀತಿಯಿದೆ. ಮದುವೆಯ ಆದ್ಯತೆ ಹೆಣ್ಣಿಗೆ ಬೇರೆ ಮತ್ತು ಗಂಡಿಗೆ ಬೇರೆ ಬೇರೆಯಾಗಿವೆ. ಗಂಡಿಗೆ ತನ್ನ ಎಲ್ಲಾ ಅನುಕೂಲಗಳಿಗೆ ಒದಗುವ ಸಂಗಾತಿ ಮುಖ್ಯವಾಗುತ್ತದೆ. ಹೆಣ್ಣಿಗೆ ತನಗೆ ಸಾಮಾಜಿಕವಾಗಿ ಭದ್ರತೆಯನ್ನು ಒದಗಿಸುವ ಸಂಗಾತಿ ಮುಖ್ಯವಾಗುತ್ತದೆ. ಇಲ್ಲಿ ವಯಸ್ಸೂ ಮುಖ್ಯವಲ್ಲ, ವಯಸ್ಸಿನ ಅಂತರವೂ ಮುಖ್ಯವಲ್ಲ. ಹೊಂದಾಣಿಕೆ ಮೊಟ್ಟಮೊದಲ ಮುಖ್ಯವಾದ ವಿಷಯ. ಪರಸ್ಪರರಲ್ಲಿ ನಿರೀಕ್ಷೆಯ ಮಟ್ಟ ಹದದಲ್ಲಿರಬೇಕು. ಪರಸ್ಪರರು ಅವರು ಹೇಗಿದ್ದಾರೋ ಹಾಗೆಯೇ ಸಂಪೂರ್ಣ ಒಪ್ಪಿತರಾಗಬೇಕು. ನಂಬಿಕೆ ಮತ್ತು ಅನ್​ಕಂಡೀಷನಲ್ ಲವ್ ಎನ್ನುವುದು ದಾಂಪತ್ಯದ ತಳಹದಿಯಾಗಬೇಕು. ಮದುವೆಯೆನ್ನುವುದು ಬರೀ ಸೆಕ್ಸ್ನ ಅಗತ್ಯಕ್ಕಾಗಿಯೇ ಅಲ್ಲ, ಅದಕ್ಕಿಂತ ಮುಂದುವರೆದ ಭಾಗವಾಗಿ ಪರಸ್ಪರರಲ್ಲಿ ಹದವಾದ ಬಾಂಧವ್ಯ ಬೆಳೆಯಬೇಕು. ಇಂಥ ದಾಂಪತ್ಯ ಬಹುಕಾಲ ಬಾಳಿಕೆ ಬರುತ್ತವೆ. ಅದರಲ್ಲಿಯೂ ಇಳಿ ವಯಸ್ಸಿನಲ್ಲಿ ಗಂಡು-ಹೆಣ್ಣಿನ ಆದ್ಯತೆ ಸಂಪೂರ್ಣ ಭಿನ್ನವಾಗಿರುತ್ತದೆ.

ಬದಲಾದ ‘ಅನ್ವೇಷಣೆ’ ಕಾಲಂ

ನೀವೊಮ್ಮೆ 20 - 30 ವರ್ಷದ ಹಿಂದಿನ ಪತ್ರಿಕೆಗಳಲ್ಲಿ ಬರುತ್ತಿದ್ದ ವಧುವರಾನ್ವೇಷಣೆಯ ಕಾಲಂ ನೆನಪು ಮಾಡಿಕೊಳ್ಳಿ. ವಿದ್ಯಾವಂತನಾದ ಮತ್ತು ಒಳ್ಳೆಯ ಉದ್ಯೋಗದಲ್ಲಿರುವ ಇಂಥಾ ವರನಿಗೆ ಸುಂದರ, ಸುಶಿಕ್ಷಿತಮನೆತನದ ಕನ್ಯೆ ಬೇಕಾಗಿದ್ದಾಳೆ ಎಂದೇ ಇರುತ್ತಿತ್ತು. ಇಲ್ಲಿಯ ಆಶಯವನ್ನು ಗಮನಿಸಿ, ಹುಡುಗನಿಗೆ ವಿದ್ಯೆ ಮತ್ತು ಉದ್ಯೋಗ ಮುಖ್ಯ. ಆದರೆ ಹುಡುಗಿಗೆ ಸೌಂದರ್ಯ ಮತ್ತು ಸುಶಿಕ್ಷಿತ ಮನೆತನ ಎರಡು ಮುಖ್ಯವಾಗುತ್ತಿತ್ತು. ಅಂದರೆ ಏನರ್ಥ? ಹುಡುಗನಿಗೆ ಸೌಂದರ್ಯ ಮತ್ತು ಸುಶಿಕ್ಷಿತ ಮನೆತನ ಮುಖ್ಯವಲ್ಲ, ಹುಡುಗಿಗೆ ವಿದ್ಯೆ ಮತ್ತು ಉದ್ಯೋಗ ಇರಲೇ ಬೇಕೆಂದಿಲ್ಲ. ಇವತ್ತು ಈ ಆಶಯಗಳೇ ಬದಲಾಗಿಹೋಗಿವೆ. ಇವತ್ತಿನ ಈ ಕಾಲಂ ಗಮನಿಸಿ 40 ವರ್ಷದ ಪುರುಷನಿಗೆ ವಧು ಬೇಕಾಗಿದ್ದಾಳೆ. ಮಕ್ಕಳಿಲ್ಲದ ವಿಧವೆಯರು, ವಿಚ್ಛೇದಿತ ಮಹಿಳೆಯರೂ ನೇರವಾಗಿ ಸಂರ್ಪಸಬಹುದು. ಇದು ಬದಲಾಗುತ್ತಿರುವ ಸಮಾಜವನ್ನು ಪ್ರತಿನಿಧಿಸುತ್ತದೆ. ಹುಡುಗನಿಗಿಂತ ಹುಡುಗಿ 5-6 ವರ್ಷ ಚಿಕ್ಕವಳಿರಬೇಕು, ಅವನಿಗಿಂತ ಕಡಿಮೆ ಕಲಿತಿರಬೇಕು, ಅವನಿಗಿಂತ ಕಡಿಮೆ ಆದಾಯ ಬರುತ್ತಿರಬೇಕು ಇತ್ಯಾದಿ ಮನಸ್ಥಿತಿ ನಿಧಾನವಾಗಿ ಬದಲಾಗುತ್ತಿವೆ. ಎಂಥದೋ ಒಂದಾದರೂ ಪರವಾಗಿಲ್ಲ, ಒಬ್ಬರಿಗೊಬ್ಬರು ಹೊಂದಿಕೊಂಡು ಬಾಳಿದರೆ ಸಾಕು ಎಂದು ತಂದೆತಾಯಿಯರು ಚಿಂತಿಸುವ ಹಾಗಾಗಿದೆ. ಹಾಗಿದ್ದ ಮೇಲೆ ಇಳಿ ವಯಸ್ಸಿನಲ್ಲಿ ಮದುವೆಯಾಗುವುದು ತಪ್ಪಲ್ಲವಲ್ಲ!

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net