

ಪ್ರಾಚೀನ ಕಾಲದಲ್ಲಿ, ರತ್ನಾಕರ ಎಂಬ ಹೆಸರಿನ ಒಬ್ಬ ಕ್ರೂರ ಬೇಡರ ನಾಯಕನಿದ್ದ. ಕಾಡಿನ ಮಾರ್ಗವಾಗಿ ಹೋಗುವ ಪ್ರಯಾಣಿಕರನ್ನು, ಋಷಿಗಳನ್ನು ಅಡ್ಡಗಟ್ಟಿ ದೋಚಿ, ಕೊಲೆ ಮಾಡುತ್ತಾ ತನ್ನ ಕುಟುಂಬವನ್ನು ಸಾಕುತ್ತಿದ್ದ. ಒಂದು ದಿನ, ಅದೇ ದಾರಿಯಲ್ಲಿ ನಾರದ ಮಹರ್ಷಿಗಳು ಬರುತ್ತಿದ್ದರು. ರತ್ನಾಕರನು ನಾರದರನ್ನು ಅಡ್ಡಗಟ್ಟಿ, ಅವರಲ್ಲಿದ್ದ ವೀಣೆ ಮತ್ತು ವಸ್ತ್ರಗಳನ್ನು ಕಸಿದುಕೊಳ್ಳಲು ಮುಂದಾದ. ಆಗ ನಾರದರು ನಗುಮುಖದಿಂದ, ‘ಏಕೆ ನೀನು ಈ ಪಾಪದ ಕೆಲಸ ಮಾಡುತ್ತಿರುವೆ?’ ಎಂದು ಕೇಳಿದರು. ಆಗ ರತ್ನಾಕರ ‘ನನ್ನ ಹೆಂಡತಿ ಮಕ್ಕಳನ್ನು ಸಲಹಲು, ಅವರಿಗೆ ಊಟ ಒದಗಿಸಲು ಈ ಕೆಲಸ ಮಾಡುತ್ತಿದ್ದೇನೆ’ ಎಂದ. ನಾರದರು ‘ಸರಿ, ನಿನ್ನ ಕಷ್ಟದ ಸಂಪಾದನೆಯಲ್ಲಿ ಪಾಲು ಪಡೆಯುವ ನಿನ್ನ ಕುಟುಂಬದವರು, ನೀನು ಮಾಡುವ ಈ ಪಾಪದ ಭಾರದಲ್ಲಿಯೂ ಪಾಲುದಾರರಾಗುತ್ತಾರೆಯೇ? ಹೋಗಿ ಕೇಳಿ ಬಾ, ನೀನು ಬರುವವರೆಗೆ ನಾನು ಇಲ್ಲೇ ಇರುತ್ತೇನೆ’ ಎಂದರು.
ನಾರದರ ಮಾತಿನಿಂದ ಗೊಂದಲಕ್ಕೊಳಗಾದ ರತ್ನಾಕರ ಮನೆಗೆ ಓಡಿದ. ತನ್ನ ಹೆಂಡತಿ, ಮಕ್ಕಳು ಮತ್ತು ತಾಯಿಯನ್ನು ‘ನಿಮಗಾಗಿ ನಾನು ಮಾಡುತ್ತಿರುವ ದರೋಡೆ ಮತ್ತು ಪಾಪದ ಕೆಲಸದಲ್ಲಿ ನೀವೂ ಪಾಲುದಾರರೇ?’ ಎಂದು ಕೇಳಿದ. ಅವರೆಲ್ಲರೂ ತಲೆಬಾಗಿಸಿ, ‘ಇಲ್ಲ! ನಿಮ್ಮ ಸಂಪಾದನೆಯಲ್ಲಿ ನಾವು ಪಾಲುದಾರರು, ಆದರೆ ನಿಮ್ಮ ಪಾಪ ನಿಮ್ಮದೇ. ಅದನ್ನು ನೀವೊಬ್ಬರೇ ಭರಿಸಬೇಕು’ ಎಂದು ಉತ್ತರಿಸಿದರು.
ಈ ಉತ್ತರ ಕೇಳಿ ರತ್ನಾಕರನಿಗೆ ಆಘಾತವಾಯಿತು. ತಾನು ಇಷ್ಟು ವರ್ಷ ಯಾರ ಪ್ರೀತಿಗಾಗಿ ಪಾಪದ ಕೆಲಸ ಮಾಡಿದೆನೋ, ಅವರೇ ನನ್ನ ಪಾಪದಲ್ಲಿ ಸಹಭಾಗಿಗಳಲ್ಲ ಎಂದು ತಿಳಿದು ಅವನ ಮನಸ್ಸು ಪರಿವರ್ತನೆಗೊಂಡಿತು. ತಕ್ಷಣ ನಾರದರ ಬಳಿಗೆ ಹಿಂದಿರುಗಿದ. ‘ಸ್ವಾಮಿ, ನನಗೆ ಪಾಪದಿಂದ ಮುಕ್ತಿ ಪಡೆಯುವ ಮಾರ್ಗ ಹೇಳಿ’ ಎಂದು ಅವರ ಕಾಲಿಗೆ ಬಿದ್ದು ಬೇಡಿಕೊಂಡ.
ನಾರದರು ರತ್ನಾಕರನಿಗೆ ಜ್ಞಾನೋಪದೇಶ ಮಾಡಿ, ರಾಮ ನಾಮ ಜಪಿಸಲು ಹೇಳಿದರು. ರತ್ನಾಕರ ತಪಸ್ಸಿಗೆ ಕುಳಿತು, ಸತತವಾಗಿ ರಾಮ ಮಂತ್ರ ಜಪಿಸಿದ. ವರ್ಷಗಳು ಉರುಳಿದವು. ಬಿಸಿಲು, ಮಳೆ, ಚಳಿ ಲೆಕ್ಕಿಸದೆ ತಪಸ್ಸಿನಲ್ಲಿ ಮಗ್ನನಾಗಿದ್ದ ಅವನ ದೇಹದ ಸುತ್ತಲೂ ದೊಡ್ಡ ಹುತ್ತ (ಸಂಸ್ಕೃತದಲ್ಲಿ ವಲ್ಮೀಕ) ಬೆಳೆಯಿತು. ತಪಸ್ಸು ಮುಗಿದ ನಂತರ ಆ ಹುತ್ತವನ್ನು ಭೇದಿಸಿಕೊಂಡು ಹೊರಗೆ ಬಂದ ಕಾರಣಕ್ಕೆ ರತ್ನಾಕರನಿಗೆ ಅಂದಿನಿಂದ ವಾಲ್ಮೀಕಿ ಎಂಬ ಹೆಸರು ಬಂತು.
ಕವಿತ್ವದ ಉಗಮ: ವಾಲ್ಮೀಕಿ ಮಹರ್ಷಿಗಳು ಜ್ಞಾನೋದಯ ಪಡೆದ ನಂತರ, ಲೋಕದಲ್ಲಿ ಅತ್ಯಂತ ಆದರ್ಶ ಮತ್ತು ಧರ್ಮನಿಷ್ಠ ವ್ಯಕ್ತಿ ಯಾರು ಎಂದು ತಿಳಿಯಲು ನಾರದ ಮಹರ್ಷಿಗಳನ್ನು ಕೇಳಿದರು. ನಾರದರು ಅವರಿಗೆ ಶ್ರೀರಾಮನ ಕಥೆಯನ್ನು ಸಂಕ್ಷಿಪ್ತವಾಗಿ ಹೇಳಿದರು. ನಂತರ, ಒಂದು ದಿನ ವಾಲ್ಮೀಕಿ ಮಹರ್ಷಿಗಳು ತಮ್ಮ ಶಿಷ್ಯ ಭಾರದ್ವಾಜರೊಂದಿಗೆ ತಮಸಾ ನದಿಗೆ ಸ್ನಾನಕ್ಕೆ ಹೋದರು. ನದಿಯ ತೀರದ ಪ್ರಕೃತಿ ಸೌಂದರ್ಯವನ್ನು ಆಸ್ವಾದಿಸುತ್ತಿದ್ದಾಗ, ಒಂದು ಮರದ ಮೇಲೆ ಕ್ರೌಂಚ ಪಕ್ಷಿಗಳ ಸುಂದರ ಜೋಡಿ ಪ್ರಣಯದಲ್ಲಿ ತೊಡಗಿರುವುದನ್ನು ಕಂಡರು. ಆ ದೃಶ್ಯವು ಮಹರ್ಷಿಗಳಿಗೆ ಆನಂದ ತಂದಿತು.
ಅದೇ ಕ್ಷಣದಲ್ಲಿ, ಪೊದೆಯಿಂದ ಹೊರಬಂದ ಬೇಡನೊಬ್ಬನು ಗುರಿಯಿಟ್ಟು ಬಾಣ ಹೂಡಿ ಗಂಡು ಕ್ರೌಂಚ ಪಕ್ಷಿಯನ್ನು ಕೊಂದ. ಬಾಣ ತಗುಲಿ ರಕ್ತ ಸುರಿಸಿ ಗಂಡು ಪಕ್ಷಿ ನೆಲಕ್ಕುರುಳಿತು. ಇದನ್ನು ನೋಡಿ ಹೆಣ್ಣು ಪಕ್ಷಿಯು ತಡೆಯಲಾರದ ದುಃಖದಿಂದ ಕರುಣಾಜನಕವಾಗಿ ಕೂಗಿತು. ಈ ದೃಶ್ಯವನ್ನು ನೋಡಿದ ವಾಲ್ಮೀಕಿಯವರ ಕರುಣಾಪೂರಿತ ಹೃದಯ ಕರಗಿಹೋಯಿತು. ಅವರ ಬಾಯಿಂದ ತಕ್ಷಣವೇ ಒಂದು ಶಾಪ ಹೊರಬಂದಿತು.
ಮಾನಿಷಾದ ಪ್ರತಿಷ್ಠಾಂ ತ್ವಮಗಮಃ ಶಾಶ್ವತೀಸ್ಸಮಾ |
ಯತ್ಕ್ರೌಂಚಮಿಥುನಾದೇಕಮವಧೀ ಕಾಮಮೋಹಿತಂ ||
ಓ ಬೇಡನೇ! ನೀನು ಶಾಶ್ವತವಾದ ಪ್ರತಿಷ್ಠೆಯನ್ನು ಎಂದಿಗೂ ಪಡೆಯಲಾರೆ. ಏಕೆಂದರೆ ಪ್ರಣಯದಲ್ಲಿ ಮಗ್ನವಾಗಿದ್ದ ಈ ಕ್ರೌಂಚ ಪಕ್ಷಿಗಳ ಜೋಡಿಯಲ್ಲಿ ಒಂದನ್ನು ಕೊಂದಿದ್ದೀಯೆ ಎಂಬುದು ಇದರ ಅರ್ಥ.
ತಕ್ಷಣವೇ ವಾಲ್ಮೀಕಿಗೆ ಆಶ್ಚರ್ಯವಾಯಿತು. ತಾನು ತಪಸ್ವಿ, ಶಾಪ ಕೊಡಬಾರದಿತ್ತು ಎನ್ನಿಸಿತು. ಆದರೆ ಈ ಶಾಪವು ಒಂದು ನಿರ್ದಿಷ್ಟ ಲಯ ಮತ್ತು ಛಂದಸ್ಸಿನಲ್ಲಿ ಬಂದಿರುವುದು ಅವರಿಗೆ ಅರಿವಾಯಿತು. ಶೋಕದಿಂದ ಹೊರಬಂದ ಈ ಛಂದಸ್ಸಿಗೆ ಅವರು ಶ್ಲೋಕ ಎಂದು ಹೆಸರಿಸಿದರು.
ಅದೇ ಸಮಯದಲ್ಲಿ ಅಲ್ಲಿಗೆ ಬ್ರಹ್ಮದೇವರು ಆಗಮಿಸಿ, ‘ಮಹರ್ಷಿಯೇ, ನಿಮ್ಮ ಶೋಕವೇ ಈ ಶ್ಲೋಕದ ರೂಪದಲ್ಲಿ ಬಂದಿದೆ. ನೀವು ಈ ಹೊಸ ಛಂದಸ್ಸಿನಲ್ಲಿಯೇ ಶ್ರೀರಾಮನ ಸಂಪೂರ್ಣ ಕಥೆಯನ್ನು (ರಾಮಾಯಣ) ಮಹಾಕಾವ್ಯವಾಗಿ ರಚಿಸಿ, ಲೋಕಕ್ಕೆ ಅರ್ಪಿಸಬೇಕು. ನಿಮ್ಮ ಕಾವ್ಯವು ಚಂದ್ರ-ಸೂರ್ಯ ಇರುವವರೆಗೆ ಇರುತ್ತದೆ’ ಎಂದು ಆಶೀರ್ವದಿಸಿದರು. ಬ್ರಹ್ಮದೇವರ ಅನುಗ್ರಹದಿಂದ ವಾಲ್ಮೀಕಿ ಮಹರ್ಷಿಗಳು 24000 ಶ್ಲೋಕಗಳನ್ನೊಳಗೊಂಡ ರಾಮಾಯಣವನ್ನು ರಚಿಸಿದರು.
ಜೀವನದ ವಿಶೇಷ ಸಂದರ್ಭಗಳು: ಮಹರ್ಷಿ ವಾಲ್ಮೀಕಿಯವರ ಜೀವನದ ಪ್ರಮುಖ ಮತ್ತು ವಿಶೇಷ ಸಂದರ್ಭಗಳು ಮುಖ್ಯವಾಗಿ ರಾಮಾಯಣದೊಂದಿಗೆ ಮತ್ತು ಅವರ ಕವಿತ್ವದ ಉಗಮದ ಜೊತೆಗೆ ಸಂಬಂಧ ಹೊಂದಿವೆ. ಅವರ ಜೀವನದಲ್ಲಿ ಪ್ರಮುಖವಾಗಿ ಗುರುತಿಸಬಹುದಾದ ಸಂದರ್ಭಗಳು ಇವು.
್ಞಾಲ್ಮೀಕಿ ಭೃಗುವಂಶ ವಂಶಜರು ್ಞಾಲ್ಮೀಕಿಯ ತಂದೆ ಪ್ರಚೇತಸ ಮಹರ್ಷಿ ್ಞತ್ನಾಕರನು ಮಹರ್ಷಿಯಾದ ಸಂದರ್ಭ ್ಞಂಸ್ಕೃತದಲ್ಲಿ ವಲ್ಮೀಕ ಎಂದರೆ ಹುತ್ತ ್ಞ್ರೌಂಚ ಪಕ್ಷಿಯ ಘಟನೆ ್ಞ್ಲೋಕ ಹಾಗೂ ಛಂದಸ್ಸಿನ ಸೃಷ್ಟಿಕರ್ತ ್ಞ್ರ್ಮದೇವರ ಅನುಗ್ರಹ ಮತ್ತು ರಾಮಾಯಣ ರಚನೆ ್ಞೕತೆ ಮತ್ತು ಲವ-ಕುಶರ ಪೋಷಣೆ ್ಞವ-ಕುಶರ ಗುರುಗಳು ್ಞಾಮಾಯಣ 24000 ಶ್ಲೋಕಗಳನ್ನೊಳಗೊಂಡಿದೆ ್ಞಾಮಾಯಣದಲ್ಲಿ ಒಟ್ಟು 8 ಕಾಂಡಗಳಿವೆ. ಬಾಲಕಾಂಡ, ಅಯೋಧ್ಯಾಕಾಂಡ, ಅರಣ್ಯ ಕಾಂಡ, ಕಿಷ್ಕಿಂಧಾ ಕಾಂಡ, ಸುಂದರ ಕಾಂಡ, ಲಂಕಾ ಕಾಂಡ, ಉತ್ತರ ಕಾಂಡ, ಲವ-ಕುಶ ಕಾಂಡ.
ವಾಲ್ಮೀಕಿಯ ಇತರ ಕೃತಿಗಳು: ರಾಮಾಯಣದ ಜೊತೆಗೆ, ಕೆಲವು ವಿದ್ವಾಂಸರು ವಾಲ್ಮೀಕಿಯನ್ನು ‘ಯೋಗ ವಾಸಿಷ್ಠ’ ಎಂಬ ಮತ್ತೊಂದು ಪ್ರಮುಖ ಗ್ರಂಥದ ಕರ್ತೃ ಎಂದು ಪರಿಗಣಿಸುತ್ತಾರೆ. ಇದು ರಾಮನಿಗೆ ಲೋಕದ ಬಗ್ಗೆ ವೈರಾಗ್ಯ ಬಂದಾಗ, ವಸಿಷ್ಠ ಮಹರ್ಷಿಯು ಜ್ಞಾನೋಪದೇಶ ಮಾಡುವ ಸಂದರ್ಭಗಳನ್ನು ಒಳಗೊಂಡಿದೆ. ಅದ್ವೈತ ವೇದಾಂತದ ತತ್ವಗಳನ್ನು ಒಳಗೊಂಡಿದೆ.