

ಇಂದಿನ ಮಕ್ಕಳು ಬರೀ ಮದ್ಯಪಾನ, ಧೂಮಪಾನ, ಗಾಂಜಾ, ಮತ್ತಿತರ ವ್ಯಸನಗಳಿಗೆ ತುತ್ತಾಗುತ್ತಿದ್ದಾರೆ ಎಂದು ಭಾವಿಸಿದ್ದರೆ ಅದು ತಪ್ಪು. ಜಗತ್ತಿನಾದ್ಯಂತ ‘ವೈಟನರ್ ವ್ಯಸನ’ ತೀವ್ರವಾಗಿ ಹಬ್ಬಿದೆ. ಈ ಬಿಳಿ ವಿಷವನ್ನು ಮಾದಕ ವಸ್ತುವಿನ ರೀತಿಯಲ್ಲಿ ಬಳಸುತ್ತಿದ್ದು, ತಡೆಯುವುದು ಹೇಗೆ ಎಂದು ಪೊಲೀಸರಿಗೂ ತಲೆನೋವಾಗಿದೆ.
| ಡಾ.ಶ್ರೀಶೈಲ ಬದಾಮಿ
ಮಕ್ಕಳು ಹೊಸ ಬಗೆಯ ವ್ಯಸನಗಳಿಗೆ ತುತ್ತಾಗುತ್ತಿರುವುದು ಪಾಲಕರ, ಶಿಕ್ಷಕರ ಚಿಂತೆಯನ್ನು ಹೆಚ್ಚಿಸಿದೆ. ಅಮೆರಿಕದ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಡ್ರಗ್ ಅಬ್ಯುಸ್ 2019ರಲ್ಲಿ ನಡೆಸಿದ ಸಮೀಕ್ಷೆಯ ಪ್ರಕಾರ ಎಂಟನೇ ತರಗತಿಯಲ್ಲಿ ಓದುವ 5% ಅಮೆರಿಕನ್ ಮಕ್ಕಳು ಮತ್ತು ಹತ್ತನೇ ತರಗತಿಯಲ್ಲಿ ಓದುವ 3.5% ಮಕ್ಕಳು ವೈಟನರ್ ಚಟಕ್ಕೆ ತುತ್ತಾಗಿದ್ದಾರೆ ಎಂದು ತಿಳಿಸಿದೆ. ಭಾರತದಲ್ಲಿ ಕೂಡ 60ರಿಂದ 70% ಬೀದಿಮಕ್ಕಳು ಈ ಚಟಕ್ಕೆ ತುತ್ತಾಗಿದ್ದಾರೆ. ಉತ್ತರಪ್ರದೇಶ, ಮಧ್ಯಪ್ರದೇಶ, ಮಹಾರಾಷ್ಟ್ರ, ದೆಹಲಿ, ಕೇರಳ ಮತ್ತು ಹರ್ಯಾಣಗಳ ಮಕ್ಕಳಲ್ಲಿ ಈ ವ್ಯಸನ ವ್ಯಾಪಕವಾಗಿ ಕಂಡುಬಂದಿದೆ. ಬೆಂಗಳೂರು ಕೂಡ ಬಳಲುತ್ತಿದೆ. ಸಂಶೋಧನೆಗಳ ಪ್ರಕಾರ ಐದು ವರ್ಷ ವಯಸ್ಸಿನ ಮಕ್ಕಳು ಕೂಡ ಈ ವ್ಯಸನಕ್ಕೆ ದಾಸರಾಗಿದ್ದಾರೆ.
ದೆಹಲಿಯಲ್ಲಿ ನಿಷೇಧ: 18 ವರ್ಷದೊಳಗಿನವರಿಗೆ ವೈಟನರ್, ಡೈಲುಟರ್ ಮತ್ತು ಅಂಟುಗಳನ್ನು ಮಾರಬಾರದೆಂದು ದೆಹಲಿಯ ಜುವೆನೈಲ್ ಜಸ್ಟೀಸ್ ಬೋರ್ಡ್ ಅಲ್ಲಿನ ಸರ್ಕಾರಕ್ಕೆ ತಿಳಿಸಿದೆ. ಅದರಂತೆ ದೆಹಲಿ ಸರ್ಕಾರ ಈ ವಸ್ತುಗಳನ್ನು ತಂದೆ-ತಾಯಿ ಜೊತೆಗೆ ಬಂದರೆ ಮಾತ್ರ ಅಥವಾ ಶಾಲೆಯಿಂದ ಪತ್ರ ತಂದರೆ ಮಾತ್ರ ಮಾರಾಟ ಮಾಡುವಂತೆ ಅಲ್ಲಿನ ಸ್ಟೇಷನರಿ ವರ್ತಕರಿಗೆ ಸೂಚನೆ ನೀಡಿದೆ.
ರಾಜ್ಯದಲ್ಲಿ ಕಳೆದ ಮೂರು ವರ್ಷಗಳಿಂದ ವೈಟ್ನರ್, ಸಲ್ಯೂಷನ್ ಸೇರಿದಂತೆ ಮಾದಕ ದ್ರವ್ಯ (ಡ್ರಗ್ಸ್) ಸಂಬಂಧಿತ ಪ್ರಕರಣಗಳು ಗಣನೀಯ ಸಂಖ್ಯೆಯಲ್ಲಿ ಏರಿಕೆಯಾಗಿವೆ. ಅಪ್ರಾಪ್ತರು, ಹುಡುಗರು, ಕಾಲೇಜು ವಿದ್ಯಾರ್ಥಿಗಳ ವಿರುದ್ಧ ವಿವಿಧ ಜಿಲ್ಲೆಗಳಲ್ಲಿ ನಿತ್ಯ ನೂರಾರು ಪ್ರಕರಣಗಳು ದಾಖಲಾಗುತ್ತಿವೆ. 2022ನೇ ಸಾಲಿನಲ್ಲಿ ಮಾದಕ ದ್ರವ್ಯಗಳು ಮತ್ತು ಮನೋವಿಕೃತ ವಸ್ತುಗಳ (ಘಈಕಖ) ಕಾಯ್ದೆಯಡಿಯಲ್ಲಿ 6,406 ಪ್ರಕರಣಗಳು ದಾಖಲಾಗಿವೆ, ಬೆಂಗಳೂರಿನಲ್ಲಿ 62% ಪ್ರಕರಣಗಳು (4,027), ನಂತರ ಮಂಗಳೂರು (398 ಪ್ರಕರಣಗಳು) ದಾಖಲಾಗಿವೆ. 2023ರಲ್ಲಿ 6,764 ಪ್ರಕರಣಗಳು ದಾಖಲಾಗಿವೆ, ಬೆಂಗಳೂರು ನಗರದಲ್ಲಿ 50% ಕ್ಕಿಂತ ಹೆಚ್ಚು ಪ್ರಕರಣಗಳು (3,443), ನಂತರ ಮಂಗಳೂರು (713 ಪ್ರಕರಣಗಳು). 2024ರಲ್ಲಿ 4,188 ಪ್ರಕರಣಗಳು ದಾಖಲಾಗಿವೆ. ಬೆಂಗಳೂರು ನಗರದಲ್ಲಿ 1,791 ಪ್ರಕರಣಗಳು, ಮಂಗಳೂರಿನಲ್ಲಿ 521 ಪ್ರಕರಣಗಳು ದಾಖಲಾಗಿವೆ. 2025ನೇ ಸಾಲಿನ ಐದು ತಿಂಗಳಲ್ಲಿ 2,168 ಪ್ರಕರಣಗಳು ದಾಖಲಾಗಿವೆ.
ಎರ್ನಾಕುಲಂನ ನಾಕೋಟಿಕ್ ಸೆಲ್ ವಿಭಾಗ ವೈಟನರ್ ಮಾರಾಟ ನಿಷೇಧಿಸುವಂತೆ ಸಬ್ ಡಿವಿಜನಲ್ ಮ್ಯಾಜಿಸ್ಟ್ರೇಟ್ ಎದುರು ಕೋರಿದೆ. ಈ ಚಟವು ಸಾಮಾನ್ಯವಾಗಿ 10-18 ವಯಸ್ಸಿನವರಲ್ಲಿ ಹೆಚ್ಚಾಗಿದೆ. ವ್ಯಸನ ತರುವ ರಾಸಾಯನಿಕಗಳ ಪಟ್ಟಿಯಲ್ಲಿ ವೈಟನರ್ಗಳು ಬಾರದಿರುವುದರಿಂದ ಅವುಗಳ ಮಾರಾಟ ಅಬಾಧಿತವಾಗಿದೆ. ಹೀಗಾಗಿ ಮಕ್ಕಳಲ್ಲಿ ಈ ವ್ಯಸನವೂ ಜೋರಾಗಿದೆ. ವೈಟನರ್ಗಳ ಮಾರಾಟ ನಿಷೇಧವೊಂದೇ ಈ ಮಕ್ಕಳ ಭವಿಷ್ಯವನ್ನು ಉಳಿಸಲು ದಾರಿ. ಪೊಲೀಸರ ವತಿಯಿಂದ ಸೆಮಿನಾರ್ಗಳನ್ನು ನಡೆಸಲಾಗುತ್ತಿದೆ. ವ್ಯಸನಕ್ಕೆ ತುತ್ತಾದ ಮಕ್ಕಳಿಗೆ ಸೂಕ್ತ ಸಲಹಾ ವ್ಯವಸ್ಥೆ ಏರ್ಪಡಿಸಲಾಗಿದೆ. ವೈಟನರ್ಗಳಲ್ಲಿ ಪೆಟ್ರೋಲಿಯಂ ಹೈಡ್ರೋಕಾರ್ಬನ್ಗಳು ಇರುವುದನ್ನು ಕೇರಳ ಸರ್ಕಾರದ ಪ್ರಯೋಗಾಲಯವು ಖಚಿತಪಡಿಸಿದೆ.
ಈ ವ್ಯಸನದ ತೊಂದರೆಗೆ ಮಕ್ಕಳು ತುತ್ತಾಗಿದ್ದರೆ ಕೂಡಲೇ ಎಚ್ಚೆತ್ತುಕೊಳ್ಳಬೇಕು. ತಂದೆ-ತಾಯಿಗಳ ಕರ್ತವ್ಯ ಇಲ್ಲಿ ಪ್ರಮುಖವಾದದ್ದು. ಮನೆಯಿಂದ ಈಗಲೇ ವೈಟನರ್ ಹೊರಗಟ್ಟಿ. ಮತ್ತೆ ತರಲು ಹೋಗಬೇಡಿ. ಈ ವ್ಯಸನಕ್ಕೆ ಪ್ರಾಥಮಿಕ ಚಿಕಿತ್ಸೆಯಾಗಿ ವೈದ್ಯರೊಂದಿಗೆ ಸಮಾಲೋಚನೆ ಅತ್ಯುತ್ತಮ ಪರಿಹಾರವಾಗಿದೆ. ಆದರೆ ಬಹುಕಾಲದವರೆಗಿನ ಈ ವ್ಯಸನದಿಂದಾಗಿ ಅದರ ಸೇವನೆಯನ್ನು ಬಿಟ್ಟ ನಂತರ ಬರುವ ದುಷ್ಪರಿಣಾಮಗಳ ಚಿಕಿತ್ಸೆಗಾಗಿ ಕೆಲವೊಮ್ಮೆ ಆಸ್ಪತ್ರೆಗಳಲ್ಲಿ ಸೇರಿಕೊಂಡು ಚಿಕಿತ್ಸೆ ಪಡೆಯುವುದು ಅನಿವಾರ್ಯವಾಗಿದೆ. ಶಾಲೆಗಳು ಮತ್ತು ಕಾಲೇಜುಗಳು ವೈಟನರ್ ಬಳಕೆಯನ್ನು ನಿಷೇಧಿಸುವುದು ಕೂಡ ಅವಶ್ಯವಾಗಿದೆ. ಒಟ್ಟಿನಲ್ಲಿ ಹಳೆಯ ಕಾಲದ ಸ್ಲೇಟು ಮತ್ತು ಬಿಳಿ ಪೆನ್ಸಿಲ್ಗಳು ಪರಿಸರಸ್ನೇಹಿ ಮತ್ತು ವಿದ್ಯಾರ್ಥಿಸ್ನೇಹಿ ಆಗಿದ್ದವು. ಮತ್ತೆ ಅವುಗಳನ್ನೇ ರೂಢಿಗೆ ತರುವುದು ಅವಶ್ಯವಿದೆ ಎಂದು ಅನಿಸುತ್ತಿದೆ ಅಲ್ಲವೇ?
ವೈಟನರ್ ಬರಿ ತಪ್ಪು ಬರೆದದ್ದನ್ನು ಪೇಪರ್ ಮೇಲೆ ಅಳಿಸುವುದಷ್ಟೇ ಅಲ್ಲ, ನಮ್ಮ ಮಿದುಳಿನಿಂದ ನೆನಪಿನ ಶಕ್ತಿಯನ್ನು ಕೂಡ ಅಳಿಸುತ್ತದೆ. ವೈಟನರ್ನಲ್ಲಿ ಟೋಲ್ಯೂನ್, ಟ್ರೖೆ ಕ್ಲೋರೋ ಇಥೇನ್, ಜೈಲಿನ್, ಅಸಿಟೋನ್, ಇಥೈಲ್ ಮಿಥೈಲ್ ಕಿಟೋನ್ ಮತ್ತಿತರ ಸಾಲ್ವೆಂಟ್ಗಳು ಇರುತ್ತವೆ. ಜೊತೆಗೆ ಅಂಟುವ ಸಾಮರ್ಥ್ಯಕ್ಕಾಗಿ ಆಕ್ರೖೆಲಿಕ್ ಮತ್ತು ವಿನೈಲ್ ರೆಜಿನ್ಗಳು ಮತ್ತು ಟೈಟಾನಿಯಂ ಆಕ್ಸೈಡ್ ಎಂಬ ವಿಷವನ್ನು ಬಿಳಿ ಬಣ್ಣಕ್ಕಾಗಿ ಹಾಕುತ್ತಾರೆ. ಈ ಸಾಲ್ವೆಂಟ್ಗಳು ಮಕ್ಕಳಿಗೆ ಐದರಿಂದ ಎಂಟು ಗಂಟೆಯವರೆಗೆ ಕಿಕ್ ಕೊಡುತ್ತವೆ. ಮಕ್ಕಳಲ್ಲಿನ ನಿದ್ರಾಹೀನತೆ ಮತ್ತು ಕೆಟ್ಟ ಸ್ವಭಾವಗಳಿಗೆ ಕೂಡ ಈ ವ್ಯಸನ ಕಾರಣ. ವರ್ತನೆಯಲ್ಲಿ ಬದಲಾವಣೆ, ಕೆಲಸಗಳಲ್ಲಿ ಅನಾಸಕ್ತಿ, ಹಸಿವಿನ ತೊಂದರೆ, ತೂಕ ಇಳಿಕೆ, ಅವರ ಗೆಳೆಯರು ಮತ್ತು ಆಟಪಾಠಗಳಲ್ಲಿ ಬದಲಾವಣೆ, ಶಾಲೆಯಲ್ಲಿ ಅನುತ್ತೀರ್ಣರಾಗುವುದು, ಮಾತನಾಡುವಾಗ ತೊದಲುವುದು, ಸುಸ್ತು, ಬಾಯಿ ಮತ್ತು ಮೂಗಿನಲ್ಲಿ ತುರಿಕೆ ಅಥವಾ ಗುಳ್ಳೆಗಳಾಗುವುದು, ಮೂಗು ಸೋರುವುದು, ಇವು ಮೂಗಿನ ಮುಖಾಂತರ ಸೇವಿಸುವ ವಸ್ತುಗಳ ವ್ಯಸನಗಳ ಲಕ್ಷಣಗಳಾಗಿವೆ.
ಸಿಗರೇಟ್ಗಳು, ಆಲ್ಕೋಹಾಲ್ ಹಾಗೂ ಮತ್ತುಬರಿಸುವ ಔಷಧಗಳ ವ್ಯಸನಕ್ಕೆ ತುತ್ತಾಗುವ ಮೊದಲು ಮಕ್ಕಳು ಈ ವ್ಯಸನಕ್ಕೆ ತುತ್ತಾಗುತ್ತಾರೆ ಎಂದು ಅಧ್ಯಯನಗಳು ತಿಳಿಸಿವೆ. ಮುಂದಿನ ಪರಿಣಾಮವಾಗಿ ಮೂತ್ರಕೋಶ, ಪಿತ್ತಕೋಶ ಮತ್ತು ಶ್ವಾಸಕೋಶಗಳನ್ನು ಈ ಸಾಲ್ವೆಂಟ್ಗಳು ಹಾಳು ಮಾಡುತ್ತವೆ. ವಿಷಕಾರಿ ಸಾಲ್ವೆಂಟ್ಗಳು ಬ್ಲಡ್ ಬ್ರೖೆನ್ ಬ್ಯಾರಿಯರ್ ದಾಟಿ ಮಿದುಳಿನ ನರಗಳಿಗೆ ತೊಂದರೆ ಉಂಟು ಮಾಡಿ ಮಾನಸಿಕ ಕಾಯಿಲೆಗಳಿಗೆ ತುತ್ತಾಗುವಂತೆ ಮಾಡುತ್ತವೆ. ಈ ವ್ಯಸನದಿಂದ ಆರೋಗ್ಯ ಹದಗೆಟ್ಟು ಟಿಬಿ, ಎಚ್ಐವಿ, ಅಸ್ತಮಾ, ಬ್ರಾಂಕೈಟಿಸ್, ನೆಗಡಿ, ಖಿನ್ನತೆ, ನರರೋಗಗಳಿಗೆ ತುತ್ತಾಗುವ ಸಾಧ್ಯತೆ ಇದೆ. ಪದೇಪದೆ ಈ ಸಾಲ್ವೆಂಟ್ಗಳನ್ನು ಉಸಿರಾಟದ ಮೂಲಕ ತೆಗೆದುಕೊಳ್ಳುವುದರಿಂದ ದೇಹದಲ್ಲಿ ಆಕ್ಸಿಜನ್ ಕೊರತೆ ಉಂಟಾಗಿ ಮಗು ಎಚ್ಚರ ತಪ್ಪಿ ಎಪಿಲೆಪ್ಸಿ ಮತ್ತು ಸಾವಿಗೆ ಕೂಡ ತುತ್ತಾಗುವ ಸಂಭವವಿದೆ ಎಂದು ವೈದ್ಯರು ತಿಳಿಸುತ್ತಾರೆ. (ಲೇಖಕರು ಧಾರವಾಡ ಎಸ್ಡಿಎಂ ಫಾರ್ಮಸಿ ಕಾಲೇಜಿನ ಪ್ರಾಂಶುಪಾಲರು)
ಸುಲಭ ಲಭ್ಯತೆ ಮತ್ತು ಅತಿ ಕಡಿಮೆ ಬೆಲೆಯೇ ಮಕ್ಕಳು ಈ ಚಟಕ್ಕೆ ಬೀಳಲು ಪ್ರಮುಖ ಕಾರಣ. ಹೀಗಾಗಿ, ನವ ಯುವಕ-ಯುವತಿಯರು ‘ಕಡಿಮೆ ಬೆಲೆಯ ಕಿಕ್’ಗೆ ಮಾರುಹೋಗಿದ್ದಾರೆ. ಕೆಲವರು ವೈಟನರ್ ಬಾಟಲಿನಿಂದ ನೇರವಾಗಿ ಅದರಲ್ಲಿನ ಸಾಲ್ವೆಂಟ್ನ್ನು ಉಸಿರಿಗೆ ತೆಗೆದುಕೊಳ್ಳುತ್ತಾರೆ. ಇನ್ನೂ ಕೆಲವರು ಅದನ್ನು ಕರವಸ್ತ್ರಕ್ಕೆ ಸುರಿದುಕೊಂಡು, ಆಗಾಗ ಉಸಿರಾಟದ ಮೂಲಕ ಸೇವಿಸುತ್ತಾರೆ.
ಮಕ್ಕಳು ಸೊಳ್ಳೆ ಓಡಿಸುವ ರಾಸಾಯನಿಕಗಳು, ಉಗುರಿನ ಬಣ್ಣವನ್ನು ತೆಗೆಯುವ ಸಾಲ್ವೆಂಟ್ಗಳು ಮತ್ತು ಪೇಂಟಿಗೆ ಬಳಸುವ ಥಿನ್ನರ್ ಇವುಗಳನ್ನು ಉಪಯೋಗಿಸುತ್ತಿರುವುದು ಕಂಡುಬಂದಿದೆ. ಇವುಗಳು ಕೂಡ ಆರೋಗ್ಯದ ಮೇಲೆ ಅಷ್ಟೇ ಹಾನಿಕಾರಕವಾಗಿವೆ.
ಮಕ್ಕಳು ಸಾಮಾನ್ಯವಾಗಿ ಎರೇಸರ್, ವೈಟ್ನರ್, ನೈಲ್ಪಾಲಿಷ್, ಸೀಮೆಎಣ್ಣೆ, ಪೆಟ್ರೋಲ್ ಇತ್ಯಾದಿಗಳಿಂದ ಹೊರಸೂಸುವ ವಾಸನೆಗಳಿಗೆ ವ್ಯಸನಿಗಳಾಗಿರುತ್ತಾರೆ. ಇಂತಹ ಮಕ್ಕಳಲ್ಲಿ ಮಾನಸಿಕ ದೌರ್ಬಲ್ಯ ಕಾರಣವಾಗಿರುತ್ತದೆ. ಇನ್ನೂ ಕೆಲ ಮಕ್ಕಳು ಇತರರಿಂದ ಪ್ರಚೋದಿತರಾಗಿ ಇವುಗಳ ಅಭ್ಯಾಸ ಮಾಡಿಕೊಳ್ಳುತ್ತಾರೆ. ಆದರೆ ಇದನ್ನು ನಿರ್ಲಕ್ಷಿಸದೆ ವೈದ್ಯರಲ್ಲಿ ಕೌನ್ಸೆಲಿಂಗ್ ಮಾಡಿಸಬೇಕು. ಆಗ ಮಕ್ಕಳ ಈ ವ್ಯಸನಕ್ಕೆ ಕಾರಣ ತಿಳಿಯಲು ಸಾಧ್ಯವಾಗುತ್ತದೆ. ಆರಂಭದಲ್ಲೇ ಗಮನಿಸಿದರೆ ಪರಿಹಾರ ಕಂಡುಕೊಳ್ಳಲು ಸಾಧ್ಯ. | ವೈದ್ಯರು ಸೆಂಟರ್ ಫಾರ್ ಅಡಿಕ್ಷನ್ ಮೆಡಿಸಿನ್, ನಿಮ್ಹಾನ್ಸ್